ಮನೆ ತುಂಬಾ ಜಿರಳೆಗಳು ಓಡಾಡುತ್ತಿವೆಯೇ? ಅಡುಗೆ ಮನೆಯಲ್ಲಿಯೇ ಇರುವ ಈ ವಸ್ತು ಬಳಸಿದರೆ ಸಿಗುವುದು ಶಾಶ್ವತ ಮುಕ್ತಿ
ಜಿರಳೆಗಳು ಅತ್ಯಂತ ಹಠಮಾರಿ ಕೀಟಗಳಲ್ಲಿ ಒಂದಾಗಿದೆ. ಅವು ಸಾಮಾನ್ಯವಾಗಿ ಅಡುಗೆಮನೆ ಮತ್ತು ಬಚ್ಚಲು ಮನೆಯಂತಹ ತೇವ ಮತ್ತು ಕತ್ತಲೆಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜಿರಳೆಗಳು ರೋಗಗಳನ್ನು ಹರಡುವ ಮತ್ತು ಆಹಾರವನ್ನು ಕಲುಷಿತಗೊಳಿಸುವ ಗುಣವನ್ನು ಹೊಂದಿದೆ. ಈ ಕಾರಣದಿಂದಾಗಿಯೇ ಜಿರಳೆಗಳನ್ನು ಯಾರೂ ಇಷ್ಟಪಡುವುದಿಲ್ಲ.
ಜಿರಳೆಗಳನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುವ ಅಂಶಗಳು:
ಜಿರಳೆಗಳು ಕೊಳಕು ಹರಡುವುದಲ್ಲದೆ, ಅನೇಕ ರೋಗಗಳಿಗೂ ಕಾರಣವಾಗಬಹುದು. ಇವುಗಳು ಅಡುಗೆಕೋಣೆಯಲ್ಲಿಯೇ ಹೆಚ್ಚಾಗಿ ಓಡಾಡುತ್ತಿರುತ್ತವೆ. ಅಡುಗೆ ಮನೆಯಲ್ಲಿ ನಮ್ಮ ನಿತ್ಯದ ಆಹಾರ ಪದಾರ್ಥಗಳು ಸಿದ್ದವಾಗುತ್ತವೆ. ಹಾಗಾಗಿ ಈ ಜಿರಳೆಗಳು ಆಹಾರವನ್ನು ಕಲುಷಿತ ಮಾಡುವ ಭಯವೂ ಹೆಚ್ಚಾಗಿರುತ್ತದೆ. ಈ ಜಿರಳೆಗಳಿಂದ ಶಾಶ್ವತ ಮುಕ್ತಿ ಪಡೆಯುವ ಮಾರ್ಗವೊಂದಿದೆ. ಇದಕ್ಕಾಗಿ ಒಂದು ಪೈಸೆಯನ್ನೂ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಮನೆಯ ವಸ್ತುಗಳನ್ನು ಬಳಸಿಕೊಂಡೇ ಜಿರಳೆಗಳನ್ನು ತೊಡೆದುಹಾಕಬಹುದು. ಈ ಪರಿಹಾರ ಕ್ರಮಗಳನ್ನು ಬಹಳ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದು, ಇವು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಸ್ವಚ್ಛ ಮತ್ತು ಸುರಕ್ಷಿತ ಮನೆ ನಿಮ್ಮದಾಗಬೇಕಾದರೆ ನೀವು ಕೂಡಾ ಈ ಪರಿಹಾರ ಕ್ರಮಗಳನ್ನು ಪ್ರಯತ್ನಿಸಬಹುದು.

ವಿನೆಗರ್:
ನಿಮ್ಮ ಮನೆ ಮತ್ತು ಅಡುಗೆಮನೆಯಿಂದ ಜಿರಳೆಗಳನ್ನು ಓಡಿಸಲು ವಿನೆಗರ್ ಅನ್ನು ಬಳಸಬಹುದು. ವಿನೆಗರ್ ಘಾಟಿಗೆ ಜಿರಳೆ ಮಾತ್ರವಲ್ಲ ಇರುವೆಗಳು ಕೂಡಾ ಸ್ಥಳದಲ್ಲಿ ನಿಲ್ಲುವುದೇ ಇಲ್ಲ. ಬಿಸಿ ನೀರಿಗೆ ವಿನೆಗರ್ ಸೇರಿಸಿ ಆ ಮಿಶ್ರಣವನ್ನು ಜಿರಳೆ ಓಡಾಡುವ ಜಾಗದಲ್ಲಿ ಸಿಂಪಡಿಸಬೇಕು. ಹೀಗೆ ಮಾಡಿದರೆ ಮತ್ತೆಂದೂ ಜಿರಳೆ ನಿಮ್ಮ ಅಡುಗೆ ಮನೆಯಲ್ಲಿ ಕಾಣಿಸುವುದೇ ಇಲ್ಲ. ಈ ಮಿಶ್ರಣ ಜಿರಳೆ ಮಾತ್ರವಲ್ಲ ಎಲ್ಲಾ ರೀತಿಯ ಕೀಟಗಳ ವಿರುದ್ದ ಪರಿಣಾಮಾತ್ಮಕವಾಗಿ ಕೆಲಸ ಮಾಡುತ್ತದೆ.
ಸೀಮೆಎಣ್ಣೆ:
ಜಿರಳೆಗಳನ್ನು ಓಡಿಸಲು ಸೀಮೆಎಣ್ಣೆ ಕೂಡಾ ಪರಿಣಾಮಕಾರಿ ಪರಿಹಾರವಾಗಿದೆ. ಸಿಂಕ್, ಡ್ರೈನ್ ಮತ್ತು ಅಡುಗೆ ಮನೆ ಕಪಾಟುಗಳ ಸಂಧುಗಳಿಗೆ, ಇದನ್ನು ಸ್ವಲ್ಪವೇ ಸ್ವಲ್ಪ ಸಿಂಪಡಿಸಿದರೂ ಸಾಕು ಜಿರಳೆಗಳು ಆ ಜಾಗ ಬಿಟ್ಟು ಓಡುತ್ತವೆ. ಸೀಮೆಎಣ್ಣೆಯ ವಾಸನೆಯು ಎಲ್ಲಾ ರೀತಿಯ ಕೀಟಗಳನ್ನು ಓಡಿಸುತ್ತದೆ.
ಮನೆ ಶುಚಿಗೊಳಿಸುವ ನೀರಿಗೆ ನಿಂಬೆ ರಸ:
ನಿಂಬೆಯಂತಹ ಸಿಟ್ರಸ್ ಹಣ್ಣುಗಳು ಜಿರಳೆಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ನಿಂಬೆ ರಸ ಮತ್ತು ನೀರಿನ ಮಿಶ್ರಣದಿಂದ ನೆಲ ಮತ್ತು ಇತರ ಮೇಲ್ಮೈಗಳನ್ನು ಸ್ವಚ್ಛಗೊಳಿಸುವುದರಿಂದ ಜಿರಳೆಗಳನ್ನು ದೂರವಿಡುವುದು ಸಾಧ್ಯವಾಗುತ್ತದೆ. ಈ ಪರಿಹಾರವು ಜಿರಳೆಗಳನ್ನು ತೊಡೆದುಹಾಕುವುದಲ್ಲದೆ, ಮನೆಯನ್ನು ಸ್ವಚ್ಛ ಮತ್ತು ತಾಜಾವಾಗಿರಿಸುತ್ತದೆ.
ಬೇವಿನ ಎಣ್ಣೆ ಅಥವಾ ಪುದೀನಾ ಎಣ್ಣೆ:
ಬೇವಿನ ಎಣ್ಣೆ ಕೂಡಾ ಅತ್ಯುತ್ತಮ ಮತ್ತು ನೈಸರ್ಗಿಕ ಕೀಟನಾಶಕವಾಗಿದ್ದು ಅದು ಜಿರಳೆಗಳನ್ನು ಹೊಡೆದೋಡಿಸುತ್ತದೆ. ನಿಂಬೆಯಂತೆ, ಪುದೀನದ ವಾಸನೆಯನ್ನು ಕೂಡಾ ಜಿರಳೆಗಳು ಸಹಿಸುವುದಿಲ್ಲ. ನೀರಿನೊಂದಿಗೆ ಕೆಲವು ಹನಿ ಬೇವಿನ ಅಥವಾ ಪುದೀನಾ ಎಣ್ಣೆಯನ್ನು ಸಿಂಪಡಿಸುವುದರಿಂದ ಜಿರಳೆಗಳನ್ನು ದೂರವಿಡಬಹುದು. ಬೇವಿನ ಎಣ್ಣೆ ಕೀಟಗಳ ಸಂತಾನೋತ್ಪತ್ತಿಯನ್ನು ತಡೆಯುತ್ತದೆ. ಈ ಮೂಲಕ ಅವುಗಳ ಸಂಖ್ಯೆಯನ್ನು ತ್ವರಿತವಾಗಿ ಕಡಿಮೆ ಮಾಡಬಹುದು. ಇದಲ್ಲದೆ, ಈ ಪರಿಹಾರವು ಮನೆಯಲ್ಲಿ ಆಹ್ಲಾದಕರವಾದ ಸುವಾಸನೆಯನ್ನು ಸಹ ಹರಡುತ್ತದೆ.
ಲವಂಗದ ಎಣ್ಣೆ:
ಜಿರಳೆಗಳನ್ನು ದೂರವಿಡುವಲ್ಲಿ ಲವಂಗದ ಎಣ್ಣೆ ಅಥವಾ ಸಂಪೂರ್ಣ ಲವಂಗಗಳು ಕೂಡಾ ಬಹಳ ಪರಿಣಾಮಕಾರಿ. ಯಾಕೆಂದರೆ ಇವುಗಳ ಸುವಾಸನೆಗೆ ಜಿರಳೆಗಳು ಅಡುಗೆ ಮನೆಯ ಹತ್ತಿರವೂ ಸುಳಿಯುವುದಿಲ್ಲ. ಸಂಪೂರ್ಣ ಲವಂಗ ಅಥವಾ ಲವಂಗದ ಎಣ್ಣೆಯ ಮಿಶ್ರಣವನ್ನು ನೀರಿನೊಂದಿಗೆ ಸಿಂಪಡಿಸುವುದರಿಂದ ಜಿರಳೆಗಳ ಕಾಟವನ್ನು ತಡೆಯಬಹುದು.
ನಿಂಬೆ ಮತ್ತು ಸೋಡಾ:
ನಿಂಬೆ ಮತ್ತು ಸೋಡಾವನ್ನು ಒಟ್ಟಿಗೆ ಬೆರೆಸಿ ದ್ರಾವಣವನ್ನು ತಯಾರಿಸಿ ಜಿರಳೆಗಳು ಇರುವ ಸ್ಥಳಗಳ ಮೇಲೆ ಸಿಂಪಡಿಸಬೇಕು. ಈ ದ್ರಾವಣ ಕೂಡಾ ಜಿರಳೆಗಳ ವಿರುದ್ಧ ಸರಿಯಾಗಿ ಕೆಲಸ ಮಾಡುತ್ತದೆ.
ಮನೆಯ ಶುಚಿತ್ವ:
ಜಿರಳೆಗಳನ್ನು ತೊಡೆದುಹಾಕಲು ಅಡುಗೆಮನೆಯನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಈ ಕೀಟಗಳು ತೇವಾಂಶ ಮತ್ತು ಕೊಳಕಿನಿಂದಾಗಿ ಅಡುಗೆಮನೆಗೆ ಪ್ರವೇಶಿಸುತ್ತವೆ. ಆದ್ದರಿಂದ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅಡುಗೆಮನೆಯನ್ನು ಸ್ವಚ್ಛಗೊಳಿಸುವುದರಿಂದ ಜಿರಳೆಗಳು ಮತ್ತು ಜಿರಳೆಗಳ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬಾಗಿಲುಗಳು, ಕಿಟಕಿಗಳು ಮತ್ತು ಸಣ್ಣ ಬಿರುಕುಗಳಂತಹ ಎಲ್ಲಾ ಎಂಟ್ರಿ ಪಾಯಿಂಟ್ ಗಳನ್ನು ಮುಚ್ಚಬೇಕು. ಅಲ್ಲದೆ, ಪ್ರತಿದಿನ ಕಸವನ್ನು ವಿಲೇವಾರಿ ಮಾಡಬೇಕು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications