ಲಗೂ ಬಂದ ಪಿಂಡಕ್ಕ ನಮಸ್ಕಾರ ಮಾಡಲಿಕ್ಕೆ ಏನ ಧಾಡಿ?

By: ಟಿ.ಪಿ. ವ್ಯಾಸಮುದ್ರಿ, ಕ್ಯಾಲಿಫೋರ್ನಿಯಾ, ಯು.ಎಸ್.ಎ.
Subscribe to Oneindia Kannada

ನನ್ನ ಗೆಳೆಯ ಅವರ ಅವ್ವನ ಶ್ರಾದ್ಧಕ್ಕ ಯಾವಾಗಲೂ ಕರೀತಾನೇ ಇದ್ದ. ಕೆಲಸದ ವ್ಯಾಳ್ಯಾದಾಗ ಆಗೂದಿಲ್ಲ ಸೂಟಿ ಇದ್ದ ದಿವಸ ಇದ್ರ ಹೇಳು ಬರ್ತೀನಿ ಅಂದಿದ್ದೆ. ಒಮ್ಮೆ ಅದು ರವಿವಾರನೇ ಬಂತು. ಹಿಂಗಾಗಿ ಹೋದೆ. ಧಾರವಾಡದ ಮಾಳಮಡ್ಡಿಯ ರಾಮದೇವರ ಗುಡಿಯೊಳಗ ಮಾಡಿದ್ದ. ಇವರ ಜೋಡಿ ಇನ್ನೊಂದೆರಡು ಇದ್ದವು.

ನಾನು ಹೋಗುವ ಹೊತ್ತಿಗೆ ಪಿಂಡಪ್ರದಾನ ಮುಗಿದಿತ್ತು. ಇನ್ನೇನು ಊಟಕ್ಕ ಎಲಿ ಹಾಕೂ ತಯಾರಿ ನಡದಿತ್ತು. ನಾ ಹೋಗಿ 5 ಮಿನಿಟಿಗೆ ನನ್ನ ಗೆಳೆಯನ ಹಾಗೂ ಅವನ ತಮ್ಮನ ಹೆಂಡ್ರು ಬಂದ್ರು. ಆಗ ಅವನ ತಮ್ಮ ತನ್ನ ಹೆಂಡತಿಗೆ "ಈಗ ಬರೂದs" ಅಂತ ಸಿಟ್ಟ ಮಾಡ್ಲಿಕ್ಕೆ ಸುರು ಮಾಡಿದ್ದಕ್ಕ... ನನ್ನ ಗೆಳ್ಯಾ, ಇರ್ಲಿ ಸುಮ್ಮನಿರು ಜನಾ ಇದ್ದಾರ ಅಂತ ಸೋನ್ನಿ ಮಾಡಿ ಅವನನ್ನ ಸುಮ್ನಿರಿಸಿದ. ಮುಂದ ಯಥಾ ಪ್ರಕಾರ ಊಟ ಶುರು ಆತು. 'ನೀ ಬಂದಿ ಭಾಳ ಛಲೋ ಆತು' ಅಂತ ಜುಲಿಮಿ ಮಾಡಿ ಹಾಕ್ಸಿದ. ನಾನೂ ಗಡದ್ದ ತಗೊಂಡೆ.

ಬಾಜು ಖೋಲ್ಯಾಗ ಜಮಖಾನಿ ಹಾಸಿ ಎಲಿ ಅಡಿಕಿ ಇಟ್ಟಿದ್ದರು. ಬಾಕಿ ಎಲ್ಲಾರೂ ಹೊರಟು ಹೋಗಿದ್ದರು. ನನ್ನ ಗೆಳ್ಯಾನ ಪರಿವಾರ ಮಾತ್ರ ಅಲ್ಲಿ ಕೂತು ಎಲಿ ಅಡಿಕಿ ಹಾಕೋತ ಕೂತಾಗ, ಮತ್ತ ಅವನ ತಮ್ಮ ತನ್ನ ಹೆಂಡತಿಗೆ "ಲಗೂ ಬರಲಿಕ್ಕೆ ಏನ ಧಾಡಿ. ಪಿಂಡಕ್ಕ ನಮಸ್ಕಾರ ಮಾಡ್ಲಿಕ್ಕೆರೆ ಬರಬೇಕೋ ಬ್ಯಾಡೋ? ಎಲ್ಲಾ ಮುಗದ ಮ್ಯಾಲೆ ಅತಿಥಿಗತೆ ಊಟಕ್ಕ ಮಾತ್ರ ಬರೋದs" ಅಂತ ಜೋರ್ ಮಾಡ್ಲಿಕ್ಕೆ ಸುರು ಮಾಡಿದ. [ಅವಿಧವಾನವಮೀ ಶ್ರಾದ್ಧ ಯಾರಿಗೆ? ಮಹತ್ವವೇನು?]

Humorous incident during Shraddha function

ಆವಾಗ ನನ್ನ ಗೆಳ್ಯಾ "ಇರ್ಲಿ ಸುಮ್ಮ ಕೂಡೋ ಮಾರಾಯಾ. ಅವರು ಲಗೂ ಬರ್ದೇ ಇದ್ದದ್ದs ಛಲೋ ಆತು. ಖರೆ ಅಂದ್ರ ನಾವು ಅವರಿಬ್ಬರಿಗೂ ಧನ್ಯವಾದ (thanks) ಹೇಳಬೇಕು" ಅಂದಾ. ಆಗ ಅಲ್ಲಿದ್ದ ನಾವೆಲ್ಲಾ (ಅವರ ಅಕ್ಕ, ಅಕ್ಕನ ಗಂಡ ಸಹಿತ) ಅವನ ಕಡೇನ ಕುತೂಹಲದಿಂದ ಹಿಂಗ್ಯಾಕ್ ಅಂತಾನ ಇವ ಅಂತ ನೋಡ್ಲಿಕ್ಕೆ ಹತ್ತಿದೆವು.

ಆಗ ಅವಾ, "ಅವರು ಪಿಂಡಕ್ಕ ನಮಸ್ಕಾರ ಮಾಡೂ ಹೊತ್ತಿಗೆ ಜರ ಬಂದಿದ್ರಂದ್ರ ನಮ್ಮ ಅವ್ವನ ಪಿಂಡ (ಮೊದಲನೇದು) ಗುಡು ಗುಡು ಉರುಳಲಿಕ್ಕೆ ಶುರು ಮಾಡ್ತಿತ್ತು. ಯಾಕಂದ್ರ ಆಗ ನಮ್ಮ ಅವ್ವಾ ಘಾಬರಿ ಆಗಿ, 'ಅಯ್ಯ ಸುಡ್ಲಿ, ಇವರ ಕೈಯ್ಯಾಗಿಂದ ನೀಗಿ (ಪಾರಾಗಿ) ಬ್ಯಾರೆ ಲೋಕಕ್ಕ ಹೋದರೂ ಬಿಡವಲ್ಲರಲ್ಲs. ಮತ್ತ ಬಂದರೋ ಇವರ ಹೆಣಾ ಎತ್ತಲಿ' ಅಂತ ಹಿಂದ ನೋಡೂದು ಮುಂದ ಓಡೋದು ಮಾಡ್ತಿದ್ಲು. ಆಗ ನಾವಿಬ್ಬರೂ, ಆಕಳಾ ಹುಡುಕೋದ ಬಿಟ್ಟು, ಬಿಸ್ಲಾಗ ಪಿಂಡಾ ಹಿಡಕೊಂಡು ಬರಲಿಕ್ಕೆ ಓಡಬೇಕಾಗಿತ್ತು" ಅಂತ ಹೇಳಿ ಬಿರ್ಸಿನ ವಾತಾವರಣವನ್ನ ತಿಳಿಗೊಳಿಸಿ ಎಲ್ಲರನ್ನೂ ನಗೆಗಡಲಿನಲ್ಲಿ ಮುಳುಗಿಸಿದ.

ಎಂಥಾ ಮಾತು. ಮುತ್ತಿನಂಥಾ ಮಾತು. ನಗಿಸುವ ವಿಷಯ ಅಂತ ಅನಿಸಿ ಕಂಡಾಪಟ್ಟೆ ನಕ್ಕರೂ ಇದರೊಳಗ ಭಾಳ ವಿಚಾರ ಮಾಡೂ ಸಂಗತಿ ಅದ. ಹೊಟ್ಟೆ ತುಂಬಾ ನಗೆ ತಲೆ ತುಂಬಾ ವಿಚಾರ ಅಂತಾರಲ್ಲ ಹಂಗ. ಭಾಳ ಸಮಂಜಸ ಅಷ್ಟೇ ಪ್ರಸ್ತುತ. [ಮಹಾಲಯದಲ್ಲಿ ಯಾವಾಗ ಶ್ರಾದ್ಧ ಮಾಡಬಾರದು? ಯಾವಾಗ ಮಾಡಬೇಕು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Humorous incident during Shraddha function in Dharwad Malamaddi. A husband lambastes his wife why she did not offer salutation to departed mother-in-law.
Please Wait while comments are loading...