• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಣಪತಿ ಬರೆದ ಮಹಾಪ್ರಬಂಧ

By * ಆನಂದರಾಮ ಶಾಸ್ತ್ರೀ
|
ಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ. ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ "ಹಾಯ್" ಹೇಳಿ ಮುಂದುವರಿಯಬೇಕು. ಒಂದು ಸಲ "ಹಾಯ್" ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.

ಹರಿಕಥೆಯ ಪೇಳ್ವೆನು ಭಕ್ತರಿಗಿಂದು

ಹರಸುತನೆ ಹರಸುತನೆ ಓದು

ನೀನೂ ಚತುರ್ಥಿಯಂದು

ಇಲ್ಲಿಗೆ ಬಂದು.

ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ ಆರಂಭವಾಗಬೇಕು. ಎಂದೇ ಈ ಹರಿಕಥೆಯ ಆರಂಭದಲ್ಲಿ ಗಣಪತಿ ಕುರಿತ ಈ ಪದ್ಯ. ಆದರೆ ಈ ಪದ್ಯವು ಸ್ತುತಿಯಲ್ಲ, ವಸ್ತುಸ್ಥಿತಿ. ಬರಲಿರುವ ಚತುರ್ಥಿಯಂದು ಗಣಪ ನಮ್ಮ ಬಳಿಗೆ ಬರುತ್ತಾನಷ್ಟೆ. ಆಗ ಅವನೂ ಓದಲಿ ಈ ಹರಿಕಥೆ.

ಅಂದಹಾಗೆ, ಮೇಲಿನ ಪದ್ಯದಲ್ಲಿ ನಾನು ಎರಡು ಸಲ "ಹರಸುತನೆ" ಎಂದದ್ದರ ಅರ್ಥ ಇಂತಿದೆ. ಮೊದಲನೆಯದರ ಅರ್ಥ "ಹರನ ಮಗನೆ" ಎಂದು. ಎರಡನೆಯದರ ಅರ್ಥ "ಹರಸುತ್ತಲೇ" ಎಂದು. ಹರಿಕಥೆ ದಾಸರ ಶಬ್ದಚಮತ್ಕಾರ ಇದು. ಇಷ್ಟಕ್ಕೂ, ಹರಿಕಥೆಯೆಂದರೆ ಹಾರ್‍ಮೋನಿಯಂ ತಬಲಾ ಮತ್ತು ಹರಿದಾಸರ ಕೈಯಲ್ಲಿನ ಚಿಟಿಕೆ ಇವುಗಳ ಜೊತೆಗೆ ಅವರ ಬಾಯಿಂದಲೂ ಹೊರಡುವ ನಾನಾ ಬಗೆಯ ಶಬ್ದಗಳ ಅರ್ಥಾತ್ ಸೌಂಡ್‌ಗಳ ಚಮತ್ಕಾರವೇ ತಾನೆ!

ನನ್ನ ಈ ಹರಿಕಥೆ ಹರಿಕಥೆಯಲ್ಲ, ಹರಕಥೆ. ಹರಸುತನ ಕಥೆ. ಹರಿ ಹರ ಒಂದೇ. ಅದು ದಾವಣಗೆರೆಯ ಪಕ್ಕದಲ್ಲಿದೆ. ವಿಶ್ವ ಭೂಪಟದಲ್ಲಿ ಇನ್ನೊಂದು ಹರಿಹರ ನನಗಂತೂ ಕಂಡಿಲ್ಲ. ಇಷ್ಟಕ್ಕೂ ನನ್ನ ಈ ಹರಿಕಥೆ ಹರಿಕಥಾ ದಾಸರು ಮಾಡುವಂಥ ಆ ಟೈಪ್ ಹರಿಕಥೆ ಅಲ್ಲ. "ಸುಮ್ನೆ ಹರಿಕಥೆ ಹಚ್ಬೇಡ. ಷಾರ್ಟಾಗಿ ಹೇಳ್ಬಿಡು", ಅಂತಾರಲ್ಲಾ ಆ ಟೈಪ್ ಹರಿಕಥೆ ಇದು.

ಕಥೆ

ತಿಪ್ಪೇಶಿ ಎಮ್ಮೆ ಕಟ್ಟಿದ. ಪಾಸಾದ. ಎಂ.ಎ. ಪಾಸಾದಮೇಲೆ ಏನು ಮಾಡಬೇಕು? ಪಿ.ಎಚ್.ಡಿ. ಮಾಡಬೇಕು. ಭಾರತದ ಎಲ್ಲ ತಂದೆತಾಯಂದಿರಂತೆಯೇ ತಿಪ್ಪೇಶಿಯ ಮಾತಾಪಿತೃರೂ ತಮ್ಮ ಮಗ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸಿದ್ದರು. ಆದರೆ ತಿಪ್ಪೇಶಿ ಎಮ್ಮೆ ಆದ. ಪಿ.ಎಚ್.ಡಿ. ಮಾಡಿ ಡಾಕ್ಟರ್ ಆಗಿ ತೋರಿಸ್ತೀನಿ ಅಂದುಕೊಂಡು ಪಿ.ಎಚ್.ಡಿ. ಮಾಡಲು ನಿರ್ಧರಿಸಿದ. ಯಾವ ವಿಷಯದಮೇಲೆ ಪಿ.ಎಚ್.ಡಿ. ಮಾಡೋದು? ದಿನಪತ್ರಿಕೆಯಮೇಲೆ ಕಣ್ಣಾಡಿಸಿದ. ಆ ದಿನ ಮೂವರು ಪಿ.ಎಚ್.ಡಿ. ಗಳಿಸಿದ ಸುದ್ದಿಗಳಿದ್ದವು. ಅವರು ಆಯ್ದುಕೊಂಡಿದ್ದ ವಿಷಯಗಳು:

(1) ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಭಾರತದಮೇಲೆ ಹಂದಿಜ್ವರದ ಪರಿಣಾಮ.

(2) ದರೋಡೆಕೋರರ ಮನಃಸ್ಥಿತಿ: ಒಂದು ಮನೋ ಅರ್ಥೋ ಸಮಾಜೋ ವೈಜ್ಞಾನಿಕ ವಿಶ್ಲೇಷಣೆ.

(3) ನೊಣ ಹೊಡೆಯುವುದಕ್ಕೂ ಸೊಳ್ಳೆ ಹೊಡೆಯುವುದಕ್ಕೂ ಇರುವ ಸಾಮ್ಯ ಹಾಗೂ ವ್ಯತ್ಯಾಸ: ಒಂದು ಕ್ಷ ಕಿರಣ.

ಊಹ್ಞೂ. ಇಂಥ ಕ್ಲಿಷ್ಟ ದುಷ್ಟ ನಿಕೃಷ್ಟ ವಿಷಯಗಳನ್ನು ಪಿ.ಎಚ್.ಡಿ.ಗೆ ಆಯ್ದುಕೊಳ್ಳಲು ತಿಪ್ಪೇಶಿಯ ಮನಸ್ಸು ಒಪ್ಪಲಿಲ್ಲ. ಯಾವುದಾದರೂ ಸರಳ ಸುಂದರ ಆಕರ್ಷಕ ವಿಷಯ ಆಗಬೇಕು. ಯಾವುದು?

"ಈ ಸಲ ಗಣಪ್ಪಂಗೆ ಸರ್ವಜ್ಞನ ಡ್ರೆಸ್ ಹಾಕಣ್ವಾ ಅಣ್ಣಾ?" ಅಂತ ತಮ್ಮರಾಯ ಕೇಳಿದ್ದೇ ತಡ ತಿಪ್ಪೇಶಿಯ ತಲೆಯಲ್ಲಿ ವಿದ್ಯುತ್ ಸಂಚಾರವಾಯಿತು! (ಈಶ್ವರಪ್ಪನವರಿಗೆ ಹೇಳ್ಬೇಡಿ, ಹರಿಸಿ ಇತ್ಲಾಗೆ ಅಂತಾರೆ.)

"ಗಣಪತಿಯನ್ನು ಬಿಟ್ಟು ಬೇರಾವ ದೇವರನ್ನೂ ನಾವು ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕಿಡುವುದಿಲ್ಲ. ಬೇರಾವ ದೇವರಿಗೂ ಸಲ್ಲದ ಈ ಗೌರವ (ಅಥವಾ ಹಿಂಸೆ) ಗಣಪತಿಗೆ ಮಾತ್ರ ಯಾಕೆ?" ತಿಪ್ಪೇಶಿಯ ಪಿ.ಎಚ್.ಡಿ. ಸಂಶೋಧನೆಗೆ ವಿಷಯ ಸಿಕ್ಕಿಬಿಟ್ಟಿತು.

ಗಜಾನನ, ಏಕದಂತ, ಮಹೋದರ, ವಕ್ರತುಂಡ, ಲಂಬೋದರ, ವಿಘ್ನೇಶ್ವರ, ವಿಘ್ನರಾಜ, ವಿಘ್ನನಾಶಕ, ಸುಮುಖ, ಗಜಕರ್ಣ, ಧೂಮ್ರಜ, ಧೂಮ್ರಕೇತು, ಗಣಾಧಿಪ, ಗಣಾಧ್ಯಕ್ಷ, ಗಣಪತಿ, ಗಣನಾಥ, ಗಣನಾಯಕ, ಗಣೇಶ, ಗೌರೀತನಯ, ಗಜಮುಖ, ಗೌರೀಸುತ, ಹೇರಂಬ, ಭಾಲಚಂದ್ರ, ವಿಕಟ, ಮೂಷಿಕವಾಹನ, ಮೋದಕಹಸ್ತ, ಗಜವದನ, ಸಿದ್ಧಿದಾತ, ವಿಘ್ನಹರ, ವಿನಾಯಕ ಮುಂತಾದ ಗಣಪತಿಯ ವಿವಿಧ ಹೆಸರುಗಳನ್ನು ಒಂದೇ ಉಸುರಿಗೆ ಒದರಬಲ್ಲ ಪ್ರೊ. ಶಿವಪುತ್ರಪ್ಪಾ ಬಸವರಾಜಪ್ಪಾ ಕಂಚಿನಮನಿ ಇವರು ತಿಪ್ಪೇಶಿಯ ಪ್ರಸ್ತುತ ಸಂಶೋಧನೆಗೆ ಗೈಡ್ ಆದರು.

"ಅವರು ಕಂಚಿನಮನಿ ಇರಲಿಕ್ಕಿಲ್ಲ, ಹಂಚಿನಮನಿ ಇದ್ದಾರು. ಅಥವಾ ಅದು ಇಂಗ್ಲಿಷ್ ಮನಿಯೇ?" ಹೀಗೊಂದು ಸಂಶಯ ತಿಪ್ಪೇಶಿಗೆ ಬಂದು ಈ ಸಂಶಯಭರಿತ ವಿಷಯವೇ ಸಂಶೋಧನೆಗೆ ಯೋಗ್ಯ ಎಂದು ಅವನಿಗನ್ನಿಸಿತಾದರೂ ಈ ವಿಷಯದ ಸಾರ್ವತ್ರಿಕತೆಯ ಕೊರತೆಯಿಂದಾಗಿ ಇದರ ಸುದ್ದಿಗೆ ಹೋಗದೆ ಗಣಪತಿಗೇ ಅಂಟಿಕೊಂಡ. ಲೈಬ್ರೆರಿಗಳಿಗೆ ಹೋಗಿ ಪುಸ್ತಕಗಳನ್ನು ತಿರುವಿಹಾಕತೊಡಗಿದ ತಿಪ್ಪೇಶಿ. ಎಲ್ಲ ಪುಸ್ತಕಗಳಲ್ಲಿದ್ದುದೂ ಒಂದೇ ಮಾಹಿತಿ: "ಭಾರತೀಯರಲ್ಲಿ ರಾಷ್ಟ್ರೀಯತೆಯನ್ನು ಹುರಿದುಂಬಿಸಿ ವಿದೇಶಿ ದಬ್ಬಾಳಿಕೆಯ ವಿರುದ್ಧ ಭಾರತೀಯರನ್ನು ಒಗ್ಗೂಡಿಸುವ ಮಹಾನ್ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚತುರ್ಥಿಗೆ ಸಾರ್ವಜನಿಕ ಉತ್ಸವದ ಮತ್ತು ಸಾರ್ವತ್ರಿಕ ಆಚರಣೆಯ ರೂಪು ನೀಡಿದರು."

ಇದಿಷ್ಟಕ್ಕೇ ತಿಪ್ಪೇಶಿಗೆ ಸಮಾಧಾನವಾಗಲಿಲ್ಲ. ಇನ್ನೂ ಡೀಟೈಲ್‌ಗಳಿಗಾಗಿ ತಡಕಾಡಿದ. ತಾಳೆಗರಿ ಗ್ರಂಥಗಳನ್ನು ತಿರುವಿಹಾಕಿದ. ಶಿಲಾಶಾಸನಗಳನ್ನು ಓದಿದ. ಪ್ರಯೋಜನವಾಗಲಿಲ್ಲ. ಕೊನೆಗೊಂದು ದಿನ, "ಗಜಮುಖನೇ ಗಣಪತಿಯೇ ನಿನಗೆ ವಂದನೆ. ನಂಬಿದವರ ಪಾಲಿನಾ ಕಲ್ಪತರು ನೀನೇ" ಹಾಡನ್ನು ಇಪ್ಪತ್ತೊಂದು ಸಲ ಹಾಡಿ ಮಲಗಿದ. ಕರೆದರೆ ಓ ಎನ್ನನೇ ಶಿವ(ಸೂ)ನು?

ಆ ರಾತ್ರಿ ತಿಪ್ಪೇಶಿಯ ಕನಸಿನಲ್ಲಿ ಸಾಕ್ಷಾತ್ ಗಣಪತಿಯೇ ಪ್ರತ್ಯಕ್ಷನಾದ! ತನ್ನ ಪಿ.ಎಚ್.ಡಿ. ವಿಷಯವನ್ನು ಡೀಟೈಲ್ ಆಗಿ ಗಣಪತಿಗೆ ತಿಳಿಸಿದ ತಿಪ್ಪೇಶಿ. ವಿಧವಿಧ ಮಾಡರ್ನ್ ವೇಷಭೂಷಣಗಳಲ್ಲಿ ಮತ್ತು ವಿವಿಧ ಪಾತ್ರಗಳಲ್ಲಿ ಪ್ರದರ್ಶನಕ್ಕೊಳಗಾಗಿರುವುದೇಕೆಂದು ಗಣಪತಿಯನ್ನು ಪ್ರಶ್ನಿಸಿದ. "ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಅವರವರಿಗೆ ಬೇಕಾದ ವೇಷಭೂಷಣಗಳಲ್ಲಿ ಮತ್ತು ಪಾತ್ರಗಳಲ್ಲಿ ನಾನು ಅವತರಿಸುತ್ತೇನೆ ವತ್ಸಾ", ಎಂದ ಗಣಪತಿ.

"ಭಕ್ತರಿಗೆ ಬೇಕಾದ ರೀತಿಯಲ್ಲಿ ಅವತರಿಸುವ ಕೆಲಸವನ್ನು ನೀನು ಮಾತ್ರ ಯಾಕೆ ಮಾಡುತ್ತೀ, ಇನ್ನಾವ ದೇವರೂ ಯಾಕೆ ಮಾಡುವುದಿಲ್ಲ? ಅಥವಾ, ಭಕ್ತರು ಯಾಕೆ ನಿನ್ನನ್ನು ಮಾತ್ರ ತಮಗೆ ಬೇಕಾದ ರೀತಿಗಳಲ್ಲಿ ಅವತರಿಸಿಸುತ್ತಾರೆ, ಬೇರಾವ ದೇವರನ್ನೂ ಆ ರೀತಿಯೆಲ್ಲ ಅವತರಿಸಿಸುವುದಿಲ್ಲ ಯಾಕೆ?" ಎಂದು ಮರುಪ್ರಶ್ನೆ ಹಾಕಿದ ತಿಪ್ಪೇಶಿ. ಆಗ ಗಣಪತಿ ಹೇಳಿದ,

"ವತ್ಸಾ, ಇದಕ್ಕೆ ಉತ್ತರವನ್ನು ನಾನು ಡೀಟೈಲ್ ಆಗಿ ತಿಳಿಸುತ್ತೇನೆ. ಈಗ ಹೇಳತೊಡಗಿ ನಿನ್ನ ಸವಿನಿದ್ದೆಗೆ ಭಂಗ ತರಲಿಚ್ಛಿಸುವುದಿಲ್ಲ. ಹೇಗೂ ನಿನಗೆ ಪಿ.ಎಚ್.ಡಿ.ಗಾಗಿ ಈ ವಿಷಯದಲ್ಲಿ ಮಹಾಪ್ರಬಂಧವೇ ಬೇಕಷ್ಟೆ. ಮಹಾಪ್ರಬಂಧವನ್ನು ನಾನೇ ರಚಿಸಿ ನಿನಗೆ ಈಮೈಲ್ ಮಾಡುತ್ತೇನೆ. ವ್ಯಾಸೋಕ್ತ ಮಹಾಭಾರತವನ್ನು ಸರಸರನೆ ಲೀಲಾಜಾಲವಾಗಿ ಬರೆದು ಮುಗಿಸಿರುವ ನನಗೆ ಈ ನಿನ್ನ ಮಹಾಪ್ರಬಂಧವೇನು ಮಹಾ? ಇದೀಗಲೇ ಬರೆದು ಮುಗಿಸಿ ಈಮೈಲ್ ಮಾಡುತ್ತೇನೆ. ಬೆಳಗ್ಗೆ ಎದ್ದವನು ನೀನು ಕಂಪ್ಯೂಟರ್‌ನಲ್ಲಿ ಮೈಲ್‌ಬಾಕ್ಸ್ ಓಪನ್ ಮಾಡು. ನನ್ನ, ಊಹ್ಞೂ, ನಿನ್ನ ಮಹಾಪ್ರಬಂಧ ಅಲ್ಲಿ ರೆಡಿ ಇರುತ್ತದೆ."

ಇಷ್ಟು ಹೇಳಿದವನೇ ಗಣಪತಿಯು ತಿಪ್ಪೇಶಿಯ ಪ್ರತಿಕ್ರಿಯೆಗೂ ಕಾಯದೆ ಅಂತರ್ಧಾನವಾಗಿಬಿಟ್ಟ. ಮರುದಿನ ಎದ್ದವನೇ ತಿಪ್ಪೇಶಿಯು ತನ್ನ ಕಂಪ್ಯೂಟರ್ ಬಳಿಗೋಡಿದ. ಗಜಾನನನ ವಾಹನನಾದ ಮೂಷಿಕಪ್ರಭುವಿನ ನೆರವಿನಿಂದ ಈಮೈಲ್ ಬಾಕ್ಸ್ ಓಪನ್ ಮಾಡಿದ. ವಾಹ್! ಗಣಪತಿ ಕಳಿಸಿದ ಮಹಾಪ್ರಬಂಧದ ಕಡತ ಅಲ್ಲಿತ್ತು! ಮೂಷಿಕದ ನೆರವಿಂದ ಆ ಕಡತದಮೇಲೆ ಕೈಬಾಣ ಹಾಯಿಸಿ ಮೂಷಿಕದ ಬೆನ್ನನ್ನು ತನ್ನ ಬೆರಳಿಂದ ಒಮ್ಮೆ ಮೃದುವಾಗಿ ಒತ್ತಿದ. ಕಡತ ತೆರೆದುಕೊಂಡಿತು.

ಓಹ್! ಇದೇನಿದು?! ಅಂಕಿಗಳನ್ನು ಹೋಲುವ ಗಜಿಬಿಜಿ ಸನ್ನೆಗಳು, ಅರ್ಥವಾಗದ ಭಾಷೆಯ ಹುಚ್ಚಾಪಟ್ಟೆ ಆಕೃತಿಯ ಅಕ್ಷರಗಳು, ಬಗೆಬಗೆಯ ಗೀಟುಗಳು, ನಕ್ಷತ್ರಗಳು ಮತ್ತು ಇನ್ನೂ ಏನೇನೋ ಚಿತ್ರ-ವಿಚಿತ್ರಗಳು! ಇದೆಂಥ ಮಹಾಪ್ರಬಂಧ? ಇದನ್ನು ಓದುವುದಾದರೂ ಹೇಗೆ? ಕಂಪ್ಯೂಟರ್ ಎಕ್ಸ್‌ಪರ್ಟ್ ಮಿತ್ರನೋರ್ವನನ್ನು ಕರೆಸಿದ ತಿಪ್ಪೇಶಿ. ಆ ಮಿತ್ರ, "ಇದೇನ್ ಮಹಾ. ಒಂದ್ನಿಮಿಷದಲ್ಲಿ ಇದನ್ನ ಸರಿಮಾಡಿಕೊಡ್ತೀನಿ, ಆಗ ಓದ್ಬಹುದು", ಎಂದು ನುಡಿದು ಸರಿಮಾಡಲು ಕುಳಿತ.

ಇಪ್ಪತ್ತೊಂದು ದಿನ ಆಯಿತು, ಇನ್ನೂ ಸರಿಮಾಡುತ್ತಲೇ ಇದ್ದಾನೆ ಆ ಕಂ.ಎ.ಮಿತ್ರ! ಅದು ದೇವರ ಭಾಷೆಯೋ ಅಥವಾ ಕಂಪ್ಯೂಟರ್ ದೋಷವೋ ಅವನಿಗೆ ಗೊತ್ತಾಗುತ್ತಿಲ್ಲ. ಈ ಮಧ್ಯೆ ಏನಾಯಿತೆಂದರೆ ಗಣಪತಿಯು ತಿಪ್ಪೇಶಿಗೆ ಮಹಾಪ್ರಬಂಧ ಕಳಿಸಿರುವ ಸುದ್ದಿಯು ಅವನ ತಮ್ಮನ ಮುಖೇನ ಜಗತ್ತಿಗೆಲ್ಲ ಟಾಂಟಾಂ ಆಯಿತು. ಪರಿಣಾಮ, ಭಾರತದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಪ್ರಪಂಚದ ಅನೇಕ ವಿಶ್ವವಿದ್ಯಾಲಯಗಳು ಸದರಿ ಮಹಾಪ್ರಬಂಧವನ್ನು ತೆಕ್ಕೆಗೆ ಹಾಕಿಕೊಳ್ಳಲು ಕ್ಯೂ ಹಚ್ಚಿವೆ! ಈಗಿರುವ ಪೊಸಿಷನ್‌ನಲ್ಲಿಯೇ ಅದನ್ನು ಸ್ವೀಕರಿಸಿ ತಿಪ್ಪೇಶಿಗೆ ಡಾಕ್ಟರೇಟ್ ದಯಪಾಲಿಸಲು ಅವೆಲ್ಲ ತುದಿಗಾಲಲ್ಲಿ ನಿಂತಿವೆ! ಕಾಲಾಂತರದಲ್ಲಿ ಅದು ತಿಳಿಯಾದರೆ ವಿಶ್ವವಿದ್ಯಾಲಯಕ್ಕೆ ಭಗವಾನ್ ಪ್ರಣೀತ ವಿಷಯವೊಂದರ ಸ್ವಾಮ್ಯ ದೊರೆತಂತಾಯಿತು. ಒಂದುವೇಳೆ ಆಗದೇನೇ ಇದ್ದರೂ ನೋ ಪ್ರಾಬ್ಲಮ್, ಭಗವಂತನೇ ಬರೆದು ಕಳಿಸಿದ ಮಹಾಪ್ರಬಂಧವೊಂದರ ಒಡೆತನವೆಂದರೇನು ಸಾಮಾನ್ಯವೇ? ಡಾಕ್ಟರೇಟ್ ಸ್ವೀಕರಿಸಲು ತಿಪ್ಪೇಶಿ ಕೇಳಿದ ರೇಟ್ ಕೊಡಲು ವಿ.ವಿ.ಗಳು ತಯಾರಾಗಿವೆ.

ಉಪಸಂಹಾರ : ಈಗ ತಾನೇ ಬಂದ ಸುದ್ದಿ: ತಿಪ್ಪೇಶಿಯ ಕಂ.ಎ.ಮಿತ್ರನು ಸದರಿ ಪ್ರಬಂಧಭಾಷೆಯನ್ನು ತಿಳಿಗೊಳಿಸುವ ಯತ್ನದಲ್ಲಿ ಆ ಕಡತವನ್ನೇ ಹೊಲಬುಗೆಡಿಸಿಬಿಟ್ಟನಂತೆ! ಪರಿಣಾಮ, ಅದರಲ್ಲಿದ್ದದ್ದೆಲ್ಲ ಅಳಿಸಿಹೋಗಿಬಿಟ್ಟಿದೆಯಂತೆ! ಎಲ್ಲ ದೈವೇಚ್ಛೆ! ದೇವರ ವಿಷಯವನ್ನೇ ಕೆದಕಲು ಹೊರಟರೆ ಇನ್ನೇನಾಗುತ್ತದೆ! ಓಂ ಶ್ರೀ ವಿಘ್ನರಾಜಾಯ ನಮಃ.

(ಕೃಪೆ : ಗುಳಿಗೆ ಬ್ಲಾಗ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more