• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಂಬೆಳಕ ಹೊನಲಿನಲ್ಲಿ ಹರವಿಕೊಂಡ ಕೃತಜ್ಞತೆ

By Staff
|

img courtesy :www.exoticindiaart.com/product/BB74/ಕೃತಜ್ಞತೆ : ಎರಡೆರಡು ಒತ್ತಕ್ಷರಗಳ ಈ ಪದವನ್ನು ಉಚ್ಛರಿಸುವಾಗ ಉಸಿರೆಳೆದುಕೊಂಡು, ಗಂಟಲನ್ನು ಸ್ವಲ್ಪ ಬಿಗಿಹಿಡಿದು ಹೇಳಬೇಕಾಗುತ್ತದೆ. ಆಯಾಸವಾಗುತ್ತೆ. ಅದಕ್ಕೆ ಇರಬೇಕು, ಅನೇಕರು ಈ ಪದದ ಅಥವಾ ಪದಾರ್ಥದ ಗೊಡವೆಗೇ ಹೋಗುವುದಿಲ್ಲ !

ಶಿಕಾರಿಪುರ ಹರಿಹರೇಶ್ವರ, ಸರಸ್ವತೀಪುರಂ, ಮೈಸೂರು

ವ್ಯಾಸರು ಮಹಾಭಾರತವನ್ನು ಬರೆಸುತ್ತಿದ್ದಾಗ ಕೆಲವೊಮ್ಮೆಯಾದರೂ ಲಿಪಿಕಾರ ಗಣೇಶನ ಮುಖ ನೋಡಿ, “ಏನಯ್ಯಾ ಈ ಶ್ಲೋಕ ನಿನಗೆ ಹಿಡಿಸಿತಾ?"- ಎಂದು ಕೇಳಿರಬೇಕು.

“ಸ್ವಾಮೀ, ನಾನು ನಿಮ್ಮ ಲಿಪಿಕಾರನಾಗಬೇಕಾದರೆ, ನಾನು ಕೇಳಿಕೊಳ್ಳುವವರೆಗೆ, ನೀವು ಹೇಳುತ್ತಾ ಹೋಗುವುದನ್ನ ನಿಲ್ಲಿಸಬಾರದು"- ಎ೦ದು ವ್ಯಾಸರಿಗೆ ಗಣೇಶ ಷರತ್ತು ಹಾಕಿದ್ದ ಅಂತಲೂ, “ನಿನಗೆ ಅರ್ಥವಾಗದ ಪದ್ಯಗಳನ್ನ ನೀನು ಬರೆಯಲೇ ಬಾರದು, ಅರ್ಥ ಮಾಡಿಕೊಂಡೇ ಒಂದೊಂದು ಪದವನ್ನೂ ಬರೆಯಬೇಕು, ಅರ್ಥವಾಗದಿದ್ದಾಗ, 'ಇರಿ, ಒಂದು ನಿಮಿಷ"- ಅಂತ ತಡೆಯುತ್ತ, ತಲೆ ಕೆರೆದುಕೊಳ್ಳುತ್ತಲೋ ಏನೋ ಒಂದು ಸಂಕೇತ ಸೂಚನೆ ಕೊಡಬೇಕು, ಆಮೇಲೆ ಮುಂದುವರಿಯಬೇಕು"-ಎಂದು ಗಣೇಶನಿಗೆ ವ್ಯಾಸರು ಪ್ರತಿಷರತ್ತು ಹಾಕಿದ್ದರು- ಎಂದೂ ಹರಿಕಥೆದಾಸರು ಹೇಳಿದ್ದನ್ನು ನೀವು ನೆನಪಿಸಿಕೊಳ್ಳಬಹುದು.

ಹರಿಕಥೆ ಎಂದೆನೇ, ಹೌದು, ಏಕೆಂದರೆ, ಈ ನಿಬಂಧನೆಗಳಿಗೆ ಸಂಬಂಧಿಸಿದ ಭಾಗ ಒಂದು ಪ್ರಕ್ಷಿಪ್ತಪಾಠ; ಇದು ಮೂಲಭಾರತದಲ್ಲಿ ಎಲ್ಲೂ ಇಲ್ಲ. ಹೀಗೊಂದು ಒಪ್ಪಂದದ ಮಾತುಕತೆ ನಡೆದಿರಬಹುದು ಎಂಬ ಈ ಭಾವನೆ ಬೇರೂರುವುದಕ್ಕೆ ಕಾರಣ ಏನಿರಬಹುದು?

“ಇದರಲ್ಲಿ ನಿಮಗೇನು ಬೇಕೋ ಅದೆಲ್ಲವೂ ಇದೆ; ಇಲ್ಲಿ ಇಲ್ಲದುದು ಬೇರೇನೂ, ಬೇರೆಲ್ಲೂ ಇಲ್ಲ"- ಎಂಬ ಹೆಗ್ಗಳಿಕೆ ಹೊತ್ತಿದೆ, ಈ ವಿಶ್ವಕೋಶದ ಮಾದರಿಯ, ಇತಿಹಾಸದ ಹಣೆಪಟ್ಟಿ ಕೊಂಡ ಗ್ರಂಥ ಮಹಾಭಾರತ. ಇದರ ಮೊದಲ ಹೆಸರು 'ಜಯ" ಅಂತ, ಅದು 'ಭಾರತ"ವಾಗಿ, ಕೊನೆಗೆ 'ಮಹಾಭಾರತ"ವೆನಿಸಿಕೊಳ್ಳುವಷ್ಟು ಬೆಳೆದುದು ಇನ್ನೊಂದು ಕತೆ. ಇದರಲ್ಲಿ, ತುಂಬ ತಿಳಿದವರಿಗೂ ಬೇಗ ಅರ್ಥವಾಗದ, ನಿಧಾನವಾಗಿ ಕುಳಿತು ಯೋಚಿಸಿ ಕವಿಯ ಇಂಗಿತವನ್ನು ಊಹಿಸಿಬೇಕಾದ ಕೆಲವು ಗೂಡಾರ್ಥದ ಬೆಡಗಿನ ಶ್ಲೋಕಗಳು ಇವೆ.

ಆ 'ಕೂಟಶ್ಲೋಕ"ಗಳನ್ನು ಅರ್ಥೈಸುವ ವ್ಯಾಖ್ಯಾನಕಾರರ ಜಟಾಪಟಿಯನ್ನು ನೀವು ಕೇಳಿದರೆ, ಹೊಟ್ಟೆ ಹುಣ್ಣಾಗುವಷ್ಟು ನಕ್ಕೀರಿ. ಅಂತೂ ಇಂಥ ಗುಳಿಗೆಗಳನ್ನು ವ್ಯಾಸರು ಅಲ್ಲೊಂದು ಇಲ್ಲೊಂದು ಹರಿಬಿಟ್ಟಿದ್ದಾರೆಂಬುದು ನಿಜ; ಚೆ೦ಡು ಬೌಂಡರಿಗೇ ನೇರ ತಲುಪುವಂತೆ ಸಿಕ್ಸರ್ ಹೊಡೆದು, ಸ್ವಲ್ಪ ಸುಧಾರಿಸಿಕೊಳ್ಳುವ 'ದಾಂಡಿಗ" ಬ್ಯಾಟ್ಸ್‌ಮನ್ ರೀತಿಯಲ್ಲಿ, ಮುಂದಿನ ಭರ್ಜರೀ ಆಟಕ್ಕೆ ಅಣಿಯಾಗುತ್ತಿದ್ದ ವ್ಯಾಸ ಮಹರ್ಷಿಗಳನ್ನು ಊಹಿಸಿಕೊಳ್ಳಬಹುದೇನೋ.

ಇರಲಿ, ಈಗ ನಾನು ಮೊದಲು ಹೇಳಿದ್ದನ್ನ ಗಮನಿಸಿ: “ಏನಯ್ಯಾ ಈ ಶ್ಲೋಕ ನಿನಗೆ ಹಿಡಿಸಿತಾ?"- ಎಂಬ ಪ್ರಶ್ನೆ. ಅಷ್ಟು ಸಲಿಗೆ ಇದ್ದಿಲ್ಲದಿದ್ದರೆ, ಷರತ್ತು-ಪ್ರತಿಷರತ್ತುಗಳ ಕತೆಗೆ ರೆಕ್ಕೆ ಪುಕ್ಕ ಗರಿಗೆದರುತ್ತಿರಲಿಲ್ಲ. ಆಪ್ತ ಶಿಷ್ಯನಿಗೆ ಗುರು ಕೇಳುವುದೂ ಇದೇ ಧಾಟಿಯಲ್ಲಿ ಎಂದುಕೊಂಡರೆ ತಪ್ಪಿಲ್ಲ.

ಏಕೆಂದರೆ, ಎಷ್ಟೊಂದು ರಸವತ್ತಾದ ಅಭಿಪ್ರಾಯಗಳನ್ನ, ಎಷ್ಟು ಅಡಕವಾಗಿ, ಬಹುಕಾಲ ನೆನಪಿಟ್ಟುಕೊಳ್ಳುವ ರೀತಿಯಲ್ಲಿ, ಉಪಮೆ ರೂಪಕ ಉತ್ಪ್ರೇಕ್ಷೆ ಇತ್ಯಾದಿ ಸಹಜ ಅಲಂಕಾರಗಳ ಮೆರುಗಿನಲ್ಲಿ, ಪ್ರಾಸ ಗಣ ಯತಿಗಳನ್ನ ಸಮಯೋಚಿತವಾಗಿ ಎಡೆಬಿಡದೆ ಪೇರಿಸುತ್ತ ವ್ಯಾಸರು ಹೆಣೆದಿರುವ ಆ ನವಿರು ರೇಷ್ಮೆಯ ಶ್ಲೋಕಗಳು ಎಷ್ಟೊಂದು ಮನೋಹರ. ತಾನಾಗಿ ಒಲಿದು ಬಂದ ಹೆಣ್ಣಿನಂತೆ, ಕಾವ್ಯಕನ್ನಿಕೆ. ಆ ಲಾವಣ್ಯವತಿಯೊಡನೆಯೇ ಕವಿ ಸರಸವಾಡುವುದು. ಸ್ಫುರಿಸಿದ ಹೊಸ ಹೊಸ ಚಿಂತನೆಗಳನ್ನು ಅಕ್ಷರಿಸುವುದು, ಸಾರ್ವಕಾಲಿಕವಾಗಿಸುವುದು.

ಉದಾಹರಣೆಗಳು ನೂರಾರು, ಸಹಸ್ರಾರು. ಅವರವರ ಅಭಿರುಚಿಗೆ ತಕ್ಕಂತೆ ಹೆಕ್ಕಿಕೊಳ್ಳಬೇಕಾದ, ಆಳವರಿಯದ ಕಡಲ ಮಡಿಲಿನ ಗಣಿಗಳಲ್ಲಡಗಿದ ಮುತ್ತು ಮಾಣಿಕ್ಯ ವಜ್ರ ವೈಡೂರ್ಯ ಗೋಮೇದ ವಿದ್ರುಮ ಪದ್ಮರಾಗ ಮರಕತ ನೀಲ-ನವರತ್ನಗಳು. ಇದೊಂದನ್ನ ನೋಡಿ:

ಕೋಟಿಗ್ರಂಥಗಳಲ್ಲಿ ಹೇಳಿರುವುದೆಲ್ಲವನೂ

ಒಂದರ್ಧ ಪದ್ಯದಲಿ ಹೇಳುವೆನು,ಕೇಳಿ;

ಪರರಿಗೆಸಗುವ ಉಪಕಾರ, ಅದೆ ಪುಣ್ಯ, ಬೇರಿಲ್ಲ;

ಪರರ ಪೀಡಿಸುವುದಂತೂ ಪಾಪ, ಹೊಲ್ಲ||

('ಶ್ಲೋಕಾರ್ಧೇನ ಪ್ರವಕ್ಷ್ಯಾಮಿ, ಯದ್ ಉಕ್ತಂ ಗ್ರಂಥಕೋಟಿಭಿ: |

ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಮ್||")

ಸುತ್ತಿದ್ದು ಸಾಕು, ಈಗ ಮರೆಯದೆ ವಿಷಯ ಪ್ರವೇಶ ಮಾಡುತ್ತೇನೆ. ಅದೇ, “ಏನಯ್ಯಾ ಈ ಶ್ಲೋಕ ನಿನಗೆ ಹಿಡಿಸಿತಾ?"- ಎಂಬ ಪ್ರಶ್ನೆ. ಹಾಗೆಲ್ಲ ಕೇಳಿದಾಗ, “ಗುರುಗಳೇ, ಸ್ವಲ್ಪ ಹೀಗೆ ತಿದ್ದಿ ಹೇಳಿದ್ದರೆ, ಇನ್ನೂ ಚೆನ್ನಾಗಿರುತ್ತಿತ್ತು, ಅರ್ಥವ್ಯಾಪ್ತಿ ಇನ್ನೂ ಹೆಚ್ಚುತ್ತಿತ್ತು, ಧ್ವನಿ ಮೊಳಗುತ್ತಿತ್ತು, ಮು೦ಬರುವ ಪೀಳಿಗೆಯ ಜನ ತಮ್ಮ ತಮ್ಮ ಮೂಗಿನ ನೇರಕ್ಕೆ ಏನೇನೋ ಅರ್ಥಮಾಡಿಕೊಳ್ಳಲಿಕ್ಕೆ ಅನುವಾಗುತ್ತಿತ್ತು"- ಎಂದು ಗಣೇಶ ವಿನಮ್ರನಾಗಿ ಅಂಜುತ್ತಲೇ, ಸಲಹೆ ಕೊಟ್ಟಿರಲಿಕ್ಕೆ ಸಾಕು. ಅಂಥ ಒಂದು ಶ್ಲೋಕ ಮಹಿಷಾಸುರ ನಗರದ ಓಲೆಗರಿಗಳ ಭಂಡಾರದಲ್ಲಿ ಧೂಳು ಹೊಡೆಯುತ್ತಿದ್ದ ಒಂದು ಸಂಪುಟದ ತ್ರುಟಿತ ತಾಳೆಹಾಳೆಯಲ್ಲಿ ನಮ್ಮ ಸಂಶೋಧಕರೊಬ್ಬರಿಗೆ ಮೊನ್ನೆ ಸಿಕ್ಕಿತಂತೆ:

ಅದೇನೆಂದರೆ: “ಪರೋಪಕಾರೇಷು ಅಧಿಕಾರಸ್ ತೇ, ಮಾ ಕೃತಜ್ಞತಾಸು ತು ಕದಾಚನ|

ಮಾ ಕರ್ಮಫಲಹೇತುರ್ ಭೂ: ಮಾ ಸಂಗೋಸ್ತು ಅಕರ್ಮಣಿ||"

ಅರ್ಜುನನಿಗೆ ಉಪದೇಶ ಮಾಡುವ ನೆಪದಲ್ಲಿ ಇದನ್ನ ಕೃಷ್ಣನ ಬಾಯಲ್ಲಿ ವ್ಯಾಸರು ಹೇಳಿಸಿದ್ದರು. ವ್ಯಾಸರೂ ಯಾರು ಯಾರಿಗೋ ಏನೇನೋ, ಅಕಾಲದಲ್ಲಿ ಸಕಾಲದಲ್ಲಿ, ಸಹಾಯ ಮಾಡಿದ್ದರು; ಯಾರಾದರೂ ಒಬ್ಬರು ಹಿಂತಿರುಗಿ ಬಂದು, ನಮಸ್ಕರಿಸಿಯೋ, ಕೈಕುಲುಕಿಯೋ, ಅಥವಾ ನಮ್ಮಲ್ಲಿ ಕೆಲವರಿಗೆ ಇರುವ ಆಭಾಸದ ಅಭ್ಯಾಸದಂತೆ ಅಪ್ಪಿಕೊಂಡೋ- 'ಥ್ಯಾಂಕ್ಸ್" ಹೇಳಿದ್ದು ದಾಖಲಾಗಿದೆಯಾ? ಉಹೂಂ.

ಕೃಷ್ಣನನ್ನೇ ತೆಗೆದುಕೊಳ್ಳಿ, ಅವನಿಂದ ಉಪಕೃತರಾಗಿಲ್ಲದವರೇ ಇರಲಿಲ್ಲ- ಎನ್ನುವಷ್ಟರ ಮಟ್ಟಿಗೆ ಇತ್ತು ಅವನ ಸ್ನೇಹ ಸಂಪತ್ತು. ಭಕ್ತಸ್ತೋಮ. ಉಪಟಳ ಕೊಡುತ್ತಿದ್ದವರನ್ನೆಲ್ಲ ಸದೆ ಬಡಿದ, ಇಲ್ಲವೇ ಬಡಿದು ಕೊಂದ. ಸೆರೆಯಲ್ಲಿ ಸಿಕ್ಕಿದ್ದ ಅನಾಥರನ್ನ ಬಿಡಿಸಿದ. ಕೆಟ್ಟ ಹುಲಿಗಳು ಹಸುಮನಸ್ಸಿನ ಮೇಲೆರಗದಂತೆ ಕಣ್ಣಿಟ್ಟು ಕಾಯ್ದ. ಬಿನ್ನಹಕೆ ಬಾಯಿಲ್ಲದವರನ್ನೂ ಮನ್ನಿಸಿ ಕೃಪೆದೋರಿದ. ಸುಫಲ ಸುಮಭರಿತ ಪಾದಪದ ವೋಲ್ ಎಲ್ಲರಿಗೆ ಬೇಕಾದವನಾಗಿ ಇದ್ದ. ಹೀಗಿದ್ದವನಿಗೆ ಕೃತಜ್ಞತೆ ಸಲ್ಲಿಸಿದವರೆಷ್ಟು ಮಂದಿ? ಮಹಾಭಾರತವನ್ನೆಲ್ಲ ಜಾಲಾಡಿದರೂ, ಭಾಗವತವನ್ನೆಲ್ಲ ಆಮೂಲಾಗ್ರವಾಗಿ ಹುಡುಕಾಡಿದರೂ ನಮಗೆ ಕಾದಿರುವುದು ನಿರಾಶೆಯೇ.

ಈ ಕೃತಜ್ಞತೆ, ವಂದನೆ- ಪದಗಳು ನಮಗೆ ಒಂದು ತರಹಾ ಅನ್ಯದೇಶೀಯ ಎರವಲು ಪದಗಳ ಗುಂಪಿಗೆ ಸೇರಿದ ಹಾಗೆ ಭಾಸವಾಗುತ್ತವೆ, ಅಲ್ಲವೇ? ತುಂಬಾ ಉಪಕಾರವಾಯಿತು- ಎಂದು ಹಳ್ಳಿಗರು ಇಂದೂ ಪರಸ್ಪರ ನೆನಕೆಯ ಮಾತುಗಳನ್ನ ಹೇಳಿಕೊಳ್ಳುವ ಪರಿಪಾಠವಿದೆ. ಅದನ್ನ ಬಿಟ್ಟರೆ ಬೇರೇನಿದೆ ನಮ್ಮ ಬತ್ತಳಿಕೆಯಲ್ಲಿ?

ಮೊನ್ನೆ, ಒಂದು ಸಂಗತಿ ನಡೆಯಿತು: ಬೇರೆ ಬೇರೆ ಧರ್ಮಗಳವರು ಒಂದುಗೂಡಿ, ಆಗಾಗ್ಗೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಸಂದರ್ಭ. ನಮ್ಮ ನಮ್ಮ ಧರ್ಮಗಳಲ್ಲಿ 'ದೇವರಿಗೆ ಕೃತಜ್ಞತೆ ಸಮರ್ಪಿಸುವ ಪ್ರಾರ್ಥನಾ ಪದ್ಯಗಳ" ಒಂದು ಕಾರ್ಯಕ್ರಮ ಏರ್ಪಡಿಸೋಣ ಎಂಬ ವಿಚಾರ ಬಂತು. ನನ್ನ ಸರದಿ ಬಂದಾಗ, ನಾನು ಹುಡುಕಿದೆ, ಹುಡುಕಿದೆ, ಹುಡುಕಿದೆ. ನಾನು ಬಾಯಿಪಾಠ ಮಾಡಿಕೊಂಡ ಯಾವ ಸ್ತೋತ್ರಸಾಹಿತ್ಯದಲ್ಲೂ ಈ ಬಗೆಯ ಕೃತಜ್ಞತೆಯ ಮಾತೇ ಇಲ್ಲವಲ್ಲ! ಎಲ್ಲೆಲ್ಲೂ ಪ್ರಪದ್ಯೇ (=ನಿನ್ನ ಕುರಿತು ಹಾಡುವೆ), ಭಜಾಮಿ, ಉಪಾಸ್ಮಹೇ (=ಆರಾಧಿಸುತ್ತೇನೆ), ಪ್ರಸೀದ (=ಪ್ರಸನ್ನಳಾಗು, ಕೃಪೆದೋರು), ಜಯತು (=ನಿನಗೆ ಜಯವಾಗಲಿ), ವನ್ದೇ, ನಮ:, ನಮಾಮಿ (=ನಮಸ್ಕರಿಸುವೆ), ಅವತು, ಪಾತು (=ಕಾಪಾಡಲಿ), ಪಾಹಿ, ತ್ರಾಹಿ, ರಕ್ಷ (=ಕಾಪಾಡು), ದೇಹಿ (=ಕೊಡು), ಇತ್ಯಾದಿ ಬಿನ್ನಪಗಳು. ಸ್ಮರಾಮಿ (=ನೆನಪಿಸಿಕೊಳ್ಳುತ್ತೇನೆ)- ಎನ್ನುವುದುಂಟು, ಆದರೆ ಅದು ಮತ್ತೆ ದಯೆ ತೋರಲೆಂದು ಮತ್ತೆ ಅವನ/ಳನ್ನೇ ಬೇಡಲು ನೆನಸಿಕೊಳ್ಳುವುದರ ಸೂಚನೆ ಅಷ್ಟೆ.

ಒಳ್ಳೆಯದೇ ಕಣ್ಣನ್ನ ತುಂಬಲಿ, ಕಿವಿಯಲ್ಲಿ ಮೊಳಗಲಿ, ನಾಲಗೆಯ ಮೇಲಿರಲಿ- ಇವು ಒಳ್ಳೆಯ ಹಾರೈಕೆಗಳೇ. ಎಲ್ಲೆಲ್ಲೂ ಜೇನು ಹಬ್ಬಲಿ, ಶಾಂತಿ ನೆಲಸಲಿ, ನೆಮ್ಮದಿಯ ಮಳೆಗರೆಯಲಿ- ಎಂಬುದು ವಂದನೆಗೆ ಸಮಾನವಲ್ಲ. ಜಗತ್ತಿನ ಎಲ್ಲೆಡೆಯಿಂದ ಒಳ್ಳೆಯ ಯೋಚನೆಗಳು ಇತ್ತ ಬೆಳಕಿನ ಕಿರಣಗಳಾಗಿ ಬರಲಿ- ಎ೦ಬ ಆಶಯಗಳು ಅದನ್ನು ಆಗಗೊಳಿಸುವವನಿಗೆ ಆಭಾರಮನ್ನಣೆ ಏನಲ್ಲ.

“ನಾನು ಕೇಳಿದ್ದನ್ನೆಲ್ಲ ಕೊಟ್ಟ ದೇವರೆ, ನನ್ನ ಯೋಗ್ಯತೆಗೆ ಮೀರಿ ನನಗೆ ಅನುಗ್ರಹಿಸಿದ ಓ ನನ್ನ ಭಗವಂತ, ತಲೆ ಹೋಗುವ ಕಡೆ ಪೇಟ ಮಾತ್ರ ಕಳಚಿ ಬಿದ್ದು ಹೋಗುವಂತೆ ನೋಡಿಕೊಂಡ ನನ್ನೊಡೆಯಾ, ನಾನು ಪ್ರಯತ್ನಪಟ್ಟು ಗಳಿಸಿದ್ದು ಮೂರಾದರೆ, ಕೇಳದೆ ನೀ ಕೊಟ್ಟದ್ದು ಆರು ಮತ್ತೊಂದಲ್ಲವೇ ದೊರೆಯೇ"- ಎ೦ದೆಲ್ಲ ಅವನೆದುರಿಗೆ ಹೇಳಿ, ನಮ್ಮ ನಮ್ಮ ನೆನಕೆಗಳನ್ನ ತಿಳಿಸೊಪ್ಪಿಸಲು ನಮಗೇನು ಅಂಜಿಕೆ, ನಾಚಿಕೆ, ಸಂಕೋಚ?

ಅದಕ್ಕೆ ವ್ಯಾಸರ ಹೇಳಿಕೆ ಮೊದಲು ಹಾಗಿತ್ತು ಅಂತ ಕಾಣುತ್ತೆ; ಆಗ ಗಣೇಶ ಅದನ್ನು ತಿದ್ದಿ, “ಸ್ವಾಮಿ, ಶ್ಲೋಕದ ಛಂದಸ್ಸಿಗೆ ಇದು ಸರಿ ಹೋಗುವ ಹಾಗೆ ಕಾಣದು; ಕೇವಲ ಪರೋಪಕಾರಕ್ಕೇ ಮೀಸಲಿಡಬೇಡಿ, ಎಲ್ಲ ಕೆಲಸಗಳಿಗೂ ಇದನ್ನ ಅನ್ವಯಿಸಿದರೆ ಇನ್ನೂ ಸೊಗಸಾಗಿರುತ್ತೆ, ನೋಡಿ"- ಎಂದಿರಬೇಕು. ಅದಕ್ಕೆ, ಭಗವದ್‌ಗೀತೆಯ ಅಧ್ಯಾಯ 2, ಶ್ಲೋಕ 47 ರ ಪೂರ್ವಾರ್ಧವನ್ನ ಈಗಿರುವಂತೆ ಹೀಗೆ ತಿದ್ದಿ ಬರೆಸಿರಬೇಕು:

“ಕರ್ಮಣಿ ಏವ ಅಧಿಕಾರಸ್ ತೇ, ಮಾ ಫಲೇಷು ಕದಾಚನ|

ಮಾ ಕರ್ಮ ಫಲ ಹೇತುರ್ ಭೂ: ಮಾ ಸಂಗೋಸ್ತು ಅಕರ್ಮಣಿ||"" - ಅಂತ.

ಮಾಡಬೇಕಾದುದ ಮಾಡು, ಮನಸಾರೆಯೇ ಮಾಡು,

ಅದ ಕುರಿತು ಎಲ್ಲ ಬಗೆ ಆಸ್ಥೆ, ಶ್ರದ್ಧೆ ತಾಳು;

ಏನು ಆದೀತೆಂಬ ಫಲಾಫಲಗಳ ಚಿಂತೆ ಬೇಡ ಬಿಡು,

ಮಾಡದೇ ಇರುವವನಾಗದೇ ನೀನು ಬಾಳು!

ನೀನು ಮಾಡಬೇಕಾದುದನ್ನು ಕುರಿತು, ಮಾಡುವುದರ ಬಗ್ಗೆ ಮಾತ್ರ ಯೋಚನೆ ಮಾಡು, ಏನು ಮಾಡಿದರೂ ಚೆನ್ನಾಗಿ ಅಕ್ಕರೆಯಿಂದ, ಶ್ರದ್ಧೆಯಿಂದ ಮಾಡು, ಪರಿಣಾಮ ನಿನ್ನಿಷ್ಟದಂತೇ ಅದೀತು. ಅದು ಬಿಟ್ಟು ಮಾಡುವ ವಿಧಾನದ ಕಡೆ ಉದಾಸೀನನಿದ್ದು, ಪರಿಣಾಮದ ಕಡೆಯೇ ಒಲವು ತೋರಿದರೆ, ಎಷ್ಟೋ ಬಾರಿ ಸುಲಭ ಸಾಧ್ಯವಾದದ್ದೂ ಕೈತಪ್ಪಿ ಹೋದೀತು. ಆದ್ದರಿಂದ ಫಲಾಫಲಗಳ ನಿರೀಕ್ಷೆ ಬೇಡ, ನಿರಾಶೆಯಿಂದ ದುಃಖಭಾಜನನೂ ಆಗಬೇಡ- ಎನ್ನುತ್ತಾರೆ ವ್ಯಾಸರು; ಗಣೇಶನೂ ಒಪ್ಪಿ ತಲೆದೂಗುತ್ತಾನೆ. ಹೀಗೇ ಅಗಿರಬೇಕೆಂದು ನನ್ನ ಊಹೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more