ಮಂತ್ರಪುಷ್ಪದ ಕೊನೆಯ ದಳ

ನೀರಿನ ಬಗ್ಗೆ ವಿಚಾರಲಹರಿ- 5

‘ಶತರುದ್ರೀಯ’ದಲ್ಲಿ ನೀರು

  • ಎಸ್‌.ಕೆ.ಹರಿಹರೇಶ್ವರ, ಸ್ಟಾಕ್‌ಟನ್‌, ಕ್ಯಾಲಿಫೋರ್ನಿಯಾ
ದೇವರನ್ನು ವಿಶಿಷ್ಟವಾದ ಆಕಾರ ಮತ್ತು ಹೆಸರುಗಳಿಂದ ನಮ ನಮಗೆ ಸರಿಕಂಡ ರೀತಿ ಕಲ್ಪಿಸಿಕೊಳ್ಳುತ್ತಾ ‘ಕಾಣುತ್ತಾ’, ಅರ್ಚನೆ ಮತ್ತು ಪೂಜೆ ಮಾಡುವುದು- ಸಗುಣೋಪಾಸನೆ. ನಾಮ ಮತ್ತು ರೂಪಗಳಿಗೆ ಹೊರತಾದವ(ಳೆ)ನೆಂದು ಬಗೆದು, ‘ಅದ’ರ ಮನನ, ಚಿಂತನ, ಆರಾಧನೆಯೇ- ನಿರ್ಗುಣೋಪಾಸನೆ.

‘ಪರಾಪೂಜೆ’ ಎಂಬ ಹೆಸರಿನ ಸೊಗಸಾದ ಪಂಚಕವೊಂದು ಸಂಸ್ಕೃತದಲ್ಲಿದೆ. ‘ದೇವರು, ನಿರಾಕಾರ, ನಿರ್ಗುಣ ; ಅವನು/ ಅವಳು ಸರ್ವಾಂತರ್ಯಾಮಿಯೂ ಆಗಿರುವಾಗ ದೇವರಿಗೆ, ಧ್ಯಾನ, ಆವಾಹನದಿಂದ ಮೊದಲುಗೊಂಡು ನಮಸ್ಕಾರ ಪ್ರಾರ್ಥನೆ ವಿಸರ್ಜನೆಯಲ್ಲಿ ಕೊನೆಗೊಳ್ಳುವ, ಈ ಸಾಂಪ್ರದಾಯಿಕ ರೀತಿಯ ಷೋಡಶ-ಉಪಚಾರ ಪೂಜೆಯನ್ನು ಮಾಡುವುದಾದರೂ ಹೇಗೆ?’- ಎಂದು ಪ್ರಶ್ನಿಸುವ, ಜಿಜ್ಞಾಸುಗಳ ಸಗುಣ- ನಿರ್ಗುಣೋಪಾಸನೆಯ ದ್ವಂದ್ವವನ್ನು ಈ ‘ಪರಾಪೂಜೆ’ ಪ್ರತಿಬಿಂಬಿಸುತ್ತದೆ. ಈಗ ಆ ಹದಿನಾರು ಹಂತಗಳ ಆರಾಧನೆಯಲ್ಲಿ ಮಧ್ಯದಲ್ಲಿ ಒಂದನ್ನು ಗಮನಿಸೋಣ : ಅದೇ ‘ಅಭಿಷೇಕ’.

ಸ್ಥಿತಿಕರ್ತನಿಗೆ ಅಲಂಕಾರ, ಲಯಕರ್ತನಿಗೆ ಅಭಿಷೇಕ

‘ಅಲಂಕಾರ ಪ್ರಿಯೋ ವಿಷ್ಣು :, ಅಭಿಷೇಕ ಪ್ರಿಯೋ ಶಿವ’- ಎಂಬ ನಾಣ್ಣುಡಿಯಾಂದಿದೆ. ವಿಷ್ಣುವಿನ ಅವತಾರ ಮೂರ್ತಿಗಳನ್ನು ಬಗೆ ಬಗೆಯ ವೇಷ ಭೂಷಣ ಆಭರಣಗಳಿಂದ ಅಲಂಕರಿಸಿ, ಮನದಣಿಯೆ ನೋಡುವ ಕೊಂಡಾಡುವ ಪರಿಪಾಠ ನಮ್ಮದು. ಲಿಂಗ ಆಕಾರದ ಪರಶಿವನಿಗೆಲ್ಲಿಂದ ಬರಬೇಕು ಈ ಭಾಗ್ಯ! ತಪಸ್ಸಿಗೆ ಕುಳಿತ ಸಮಾಧಿಸ್ಥ ಭಂಗಿಯ ಶಿವನ ಮೂರ್ತಿಯನ್ನು ಮುಂದಿರಿಸಿಕೊಂಡವರಿಗೂ ಇದೇ ತಾಪತ್ರಯ- ಅರೆ ಬೆತ್ತಲೆಯ, ಉಡುಗಣವೇಷ್ಟಿತ ಚಂದ್ರಸುಶೋಭಿತ, ಭಸ್ಮವಿಲೇಪಿತ, ಗಜಚರ್ಮಾಂಬರಧಾರೀ, ಜಟಾಜೂಟಧರ, ಮುಕ್ಕಣ್ಣನಿಗೆ ಏನಿದ್ದರೂ ಒಂದೇ, ಎಲ್ಲವಿದ್ದರೂ ಒಂದೇ, ಏನಿಲ್ಲದಿದ್ದರೂ ಒಂದೇ- ಹಾಗಾಗಿ, ಬರಿಯ ಜಳಕದಿಂದಲೇ ನಮ್ಮ ಗಂಗಾಧರ ತೃಪ್ತ, ಅದೇ ಅಭಿಷೇಕ!

‘ಇಳಿದು ಬಾ ತಾಯಿ..’- ಎಂದು ನಾವು ಭಾಗೀರಥಿಯನ್ನು ಕೇಳಿಕೊಳ್ಳುವಾಗ, ಈ ನಮ್ಮ ಶಿವನ ಜಡೆಯಿಂದ ನೀನು ಧುಮ್ಮಿಕ್ಕಿ ಬಾ- ಎಂದೇ ಪ್ರಾರಂಭಿಸುತ್ತೇವೆ. ಆಮೇಲೆ, ನಮ್ಮ ಭಕ್ತಿಯ ಆಳ ಶಿರದುದ್ದ, ಕೊರಳುದ್ದ, ಎದೆಯುದ್ದ, ನಡು ಉದ್ದ, ಇದ್ದಷ್ಟು ನಡೆದುಕೊಳ್ಳುತ್ತೇವೆ; ಪ್ರತಿದಿನ ಮುಂಜಾನೆಯೋ, ಪ್ರತಿ ಸೋಮವಾರವೋ, ತಿಂಗಳಿಗೊಮ್ಮೆ ಕೃಷ್ಣಪಕ್ಷ ತ್ರಯೋದಶಿಯಂದೋ, ವರ್ಷಕ್ಕೊಮ್ಮೆ ಮಹಾ ಶಿವರಾತ್ರಿಯ ದಿನವೋ ಅಂತೂ ‘ಶಿವ’ನನ್ನು ತಪ್ಪದೇ ಬರ ಮಾಡಿಕೊಳ್ಳುತ್ತೇವೆ; ಬತ್ತಿ ಹೋಗದ ಒರತೆಯ ನೀರಿನ ಈ ಸೆಲೆಯನ್ನು ಹೊತ್ತವನ ‘ತಲೆ’ಯ ಮೇಲೇ ಮತ್ತೆ ಮತ್ತೆ ನೀರನ್ನು ಸಿಂಪಡಿಸಿ, ಚಿಮುಕಿಸಿ, ಸುರಿದು ನೆನೆಸುತ್ತಾ ಅವನ ಗುಣಗಳನ್ನು ನೆನೆಯುತ್ತೇವೆ, ಅದು ‘ಅಭಿಷೇಕ’.

ಭೂಗೋಳವೂ ಅದರ ಮುಕ್ಕಾಲು ಪಾಲು ಜಲವೂ

ಭೂಗೋಳಶಾಸ್ತ್ರದಲ್ಲಿ ನಾವು ಓದಿದ್ದೇವೆ: ನಮ್ಮ ಭೂಮಿಯ ಮೇಲ್ಮೈಯ ಸುಮಾರು ಶೇಕಡಾ ಎಪ್ಪತ್ತೆರಡು ಭಾಗದಷ್ಟನ್ನು ಸಮುದ್ರ ಆವರಿಸಿಕೊಂಡಿದೆಯಂತೆ. ಸುಮಾರು ಶೇಕಡಾ ಅರವತ್ತೊಂದು ಭಾಗ ಉತ್ತರಾರ್ಧ ಗೋಳವನ್ನೂ, ಸುಮಾರು ಶೇಕಡಾ ಎಂಭತ್ತೊಂದು ಭಾಗ ದಕ್ಷಿಣಾರ್ಧ ಗೋಳವನ್ನೂ ಹೀಗೆ ನೀರು ಆಕ್ರಮಿಸಿಕೊಂಡಿದೆ ಎನ್ನುತ್ತಾರೆ. ಭೂಮಿಯ ಮೇಲೆ ಸಸ್ಯ ಮತ್ತು ಪ್ರಾಣಿಗಳು ಗೋಚರಿಸುವುದಕ್ಕೆ ಬಹು ಕಾಲದ (ಮಿಲಿಯನ್‌ ಗಟ್ಟಲೆ ವರುಷಗಳ) ಮುನ್ನ ಸಮುದ್ರದಲ್ಲಿ , ನೀರಿನಲ್ಲಿ, ಮೊದಲು ‘ಜೀವರಾಶಿ’ ಕಾಣಿಸಿಕೊಂಡಿತು ಎನ್ನುತ್ತದೆ ವಿಜ್ಞಾನ. ಇದಕ್ಕೇ ಅಲ್ಲವೇ, ನಮ್ಮ ಮತ್ತು ಇನ್ನಿತರ ಸೌರವ್ಯೂಹದ ಗ್ರಹಗಳಲ್ಲಿ ಜೀವಿಗಳು ಇವೆಯೇ ಇಲ್ಲವೇ ಎಂಬುದಕ್ಕೆ ಅಲ್ಲಿ ನೀರು ಇದೆಯೇ ಇಲ್ಲವೇ- ಎಂಬುದೇ ಸ್ಥೂಲ ಮಾನದಂಡವಾಗಿ ಪರಿಗಣಿತವಾಗಿರುವುದು?

‘ಸಮುದ್ರದ ನೀರು ಉಷ್ಣದ ಬಹು ದೊಡ್ಡ ಆಕರ’ ಎಂಬ ಮಾತು ಎಷ್ಟು ಸೋಜಿಗದ್ದು. ಆಮ್ಲಜನಕ, ಇಂಗಾಲದ ಡೈ ಆಕ್ಸೈಡ್‌, ಇತರ ಅನಿಲಗಳೂ ಅಲ್ಲದೆ ಬೇರೆ ಬೇರೆ ಲವಣಗಳು ಸಮುದ್ರದ ನೀರಿನ ಒಟ್ಟು ತೂಕದ ಶೇಕಡಾ ಮೂರೂವರೆಯಷ್ಟು ಕರಗಿ ಅದರಲ್ಲಿವೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+