• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ್ಮಿ ಎಲ್ಲಿದ್ದಾಳು : ಪುಟ-4

By Super
|

ಲಕ್ಷ್ಮಿಗೂ ತಬ್ಬಿಬ್ಬಾ?

ಇಷ್ಟೆಲ್ಲಾ ಹೇಳಿಕೊಳ್ಳುವ ಜಾಣೆ, ನಮ್ಮ ಲಕ್ಷ್ಮಿ ಯಾವಾಗಲಾದರೂ ತಬ್ಬಿಬ್ಬಾದುದು ಉಂಟಾ? ‘‘ಅತ್ತ ಹುಲಿ, ಇತ್ತ ದರಿ’’ ಎಂಬ ಜನಪ್ರಿಯ ಕನ್ನಡ ಗಾದೆಗೂ, ಲಕ್ಷ್ಮಿಗೂ ಏನಾದರೂ ಸಂಬಂಧ ಇದೆಯಾ? ಇದೆ. ಮುಂದೆ ಓದಿ:

ಲಕ್ಷ್ಮಿಯನ್ನು ತನ್ನ ಕಾವ್ಯದಲ್ಲಿ ಬರುವ ಒಂದು ಪಾತ್ರವನ್ನಾಗಿಸಿಕೊಂಡು, ಅವಳೊಡನೆ ಕವಿ ಪರೋಕ್ಷವಾಗಿ ಮಾತನಾಡುವ ಒಂದು ಕಥಾನಕವನ್ನು ಈ ಪ್ರಬಂಧದ ಪರಿಶಿಷ್ಟವಾಗಿ ಇರಿಸಿಕೊಂಡಿದ್ದೇನೆ. ಪಂಪ-ಭಾರತ (ಹಳೆಗನ್ನಡ, ಸುಮಾರು ಕ್ರಿಸ್ತ ಶಕ 940ರ ರಚನೆ)ದಲ್ಲಿ ಕನ್ನಡದ ಮಹಾಕವಿ ಪಂಪ ನಾಲ್ಕಾರು ಪದ್ಯಗಳಲ್ಲಿ ಈ ಸನ್ನಿವೇಶವನ್ನು ಕಲ್ಪಿಸಿದ್ದಾನೆ. ಇದನ್ನೇ, ಅನಂತರ ಬಂದ ಕ್ರಿ.ಶ.990ರ ಸುಮಾರಿನ ಕವಿ ರನ್ನ, ಹಳೆಗನ್ನಡದಲ್ಲಿ ಇನ್ನೂ ಸ್ವಾರಸ್ಯ ತುಂಬಿ, ವಿವರಿಸುತ್ತಾನೆ. (ಸುಮಾರು ಇದೇ ಕಾಲದ ಕವಿ, ನಾಗವರ್ಮನು ಬಾಣಭಟ್ಟನ ಸಂಸ್ಕೃತ ‘ಕಾದಂಬರಿ’ಯನ್ನು ಕನ್ನಡಿಸಿದ್ದಾನೆ; ಅದರಲ್ಲಿ ಸಹ ಲಕ್ಷ್ಮಿಯ ರೀತಿಯನ್ನು ನಾಗವರ್ಮ ವಿಡಂಬನೆ ಮಾಡುತ್ತಾನೆ!)

ರನ್ನನ ಗದಾಯುದ್ಧದ 9ನೇ ಆಶ್ವಾಸ, 3ರಿಂದ 17ನೇ ಪದ್ಯದವರೆಗೆ ಇರುವ ಈ ಲಕ್ಷ್ಮೀ ಪ್ರಸಂಗವನ್ನು ಆರಿಸಿ ಕೊಂಡಿದ್ದೇನೆ; ಹೊಸಗನ್ನಡದಲ್ಲಿ ಕಾವ್ಯರೂಪದಲ್ಲಿಯೇ, ನಿಮಗೆ ಆ ಕತೆಯನ್ನ ಮರುಹೇಳುತ್ತೇನೆ. ಅರ್ಥವಾಗದ ಕಡೆ ಒಂದೆರಡು ನನ್ನ ಮಾತನ್ನ ಮೂಲಕ್ಕೆ ಸ್ವಲ್ಪ ಸೇರಿಸಿ:

ಲಕ್ಷ್ಮೀ ಪ್ರಸಂಗ
(ರನ್ನನ ‘ಗದಾಯುದ್ಧ’ದಲ್ಲಿ)

(ಹಿನ್ನೆಲೆ : ಗದಾಯುದ್ಧ ಮುಗಿದಿದೆ ; ದುರ್ಯೋಧನ ತೊಡೆ ಮುರಿದುಕೊಂಡು ವೈಶಂಪಾಯನ ಸರೋವರದ ದಂಡೆಯ ಮೇಲೆ ಕೊನೆಯುಸಿರು ಎಳೆಯುತ್ತಾ ಬಿದ್ದಿದ್ದಾನೆ. ತಡವಾಗಿ ಬಂದ ಅಶ್ವತ್ಥಾಮ ತನ್ನ ಪ್ರಿಯಶಿಷ್ಯನ ಈ ದುರವಸ್ಥೆಯನ್ನ ಕಂಡು ದುಃಖ, ಕೋಪದಿಂದ ಬುಸುಗುಟ್ಟುತ್ತಿದ್ದಾನೆ- ಇದು ಸನ್ನಿವೇಶ. ಅಲ್ಲಿಗೆ ಲಕ್ಷ್ಮಿ ಬರುತ್ತಾಳೆ.)

ಹೊಳೆ ಹೊಳೆವ ಕೆಂದಾವರೆಯ ಒಂದು ಕರದಲಿ ಹಿಡಿದು,
ಎಡದ ಕೈಯಲಿ ಬೆಳ್ಳಿಗೂದಲ ಚಾಮರವನು;
ಕಳೆ ಕಳೆದು ತಲೆಗೂದಲು ಹರಡಿದೆ ಮಾಸಿ, ಒಣಗಿ ಕೆದರಿ;
ಸೊಬಗು ಕುಂದಿದ ಮ್ಲಾನ ಮುಖವ ತಾ ಹೊತ್ತು-
ತಾವರೆಗಣ್ಣಿನ ಲಕ್ಷ್ಮಿ ಬರುವುದ ಕಂಡನವನು.

‘‘ತಾಯೆ, ನೀನಾರು? ಹೆಸರೇನು? ಯಾರವಳು?
ಬಂದೆ ಎಲ್ಲಿಂದಲೆ? ನೀನು ಹೋಗುವುದಾದರು ಎತ್ತ?’’-
ಎಂದು ಕೇಳಿದ ಅಶ್ವತ್ಥಾಮ, ಕೈಯ ಮುಗಿದು.

‘‘ಭೇದ-ಭಾವವ ಮರೆತು, ಹೆಗಲ ಹೆಗಲೆಣೆಯಾಗಿ,
ಶಕ್ತಿ-ಪ್ರತಿಶಕ್ತಿಗಳು ಸೇರಿ ಕಡೆದರು ಗೊತ್ತ?
ಆಗ ಹುಟ್ಟಿದೆ ನಾನು ಕಡಲಲಿ, ಕಮಲೆ, ಲಕ್ಷ್ಮಿ;
ನೀರಲಿದ್ದೂ ಅದಕೆ ಅಂಟದಿಹ ತಾವರೆಯಾಡನಾಡುವೆನು ;
ಭಗವಂತನೆದೆಯೇನೆ ಎಂದೆಂದಿಗೂ ನನ್ನ ಮನೆ;
ಇದ್ದು ಬರುವೆನು ಹೀಗೇ ಈಗೊಮ್ಮೆ ಆಗೊಮ್ಮೆ,
ಶ್ರೇಷ್ಠರಲಿ, ಶೂರರಲಿ, ಸಾಹಸಿಯ ಮನದಲ್ಲಿ;
ನೆನ್ನೆ ಮೊನ್ನೆಯವರೆಗೆ ಇದ್ದೆ ಆ ಕುರು-ಭೂಪನಲಿ;
ಈಗ ಹೊರಟಿಹೆ, ಸ್ವಾಮಿ ಪುರುಷೋತ್ತಮನಾಜ್ಞೆಯ ಹೊತ್ತು,
ಪಾಂಡವರ ಬಿಡಾರದಲಿ ನೆಲಸಲೆಂದು’’.

ಮುಗುಳ್ನಗುತ ಮೂದಲಿಸಿ ಅಣಗಿಸುವ ದನಿಯಲ್ಲಿ
ಜರಿಯ ತೊಡಗಿದ ಆಗ ಲಕ್ಷ್ಮಿಯ ಅಶ್ವತ್ಥಾಮ:

‘‘ಎಲೆ ಲಕ್ಷ್ಮಿ, ಛೆ ಬಿಡು, ನಿನ್ನ ಹುಟ್ಟೇ ಹೇಳೀತಲ್ಲ-
ಈಗೆದ್ದು ಈಗಡಗಿ ಎದ್ದು ಬೀಳುವ ಅಲೆಯ
ಮಡಿಲಲ್ಲಿ ಹುಟ್ಟಿದ ಚಂಚಲಳೆ, ನೀನು ಚಪಲೆ!
ಕಮಲ ಪರಾಗದ ಧೂಳಿ ತಲೆಗೇರಿ ರಾಜಸಿಯಾದೆ
ನೀನು ವರಿಸುವುದಾರನ್ನ? ಗೋವುಗಳ ಕಾಯುವನ!
ನೀ ಮೂಢೆ, ಅವಿವೇಕಿ; ಸರಿ-ತಪ್ಪನರಿಯದ ಅಜ್ಞೆ’

ನಿನಗೇನು ಗೊತ್ತೆ ನರ-ನರರ ಶೌರ್ಯದ ತಾರತಮ್ಯ?
ಸಾಹಸಿಯೋ ಕಪಟಿ ಹೇಡಿಯೋ, ನಿನಗೇನು ಪರಿಯೇ?
ಕುಲಟನೋ ಸತ್ಕುಲ- ಪ್ರಸೂತನೋ ಚಿಂತೆಯಿನಿತೂ ಇಲ್ಲ-
ಯಾರಲ್ಲೂ ಹೊಗಿ ನೆಲಸುವೆ ನೀಚೆ, ನಾಚಿಕೆಯೆ ಇಲ್ಲದವಳೆ!

ಒಂದಾಗಿ ಇರುವಂಥ ತಂದೆ ಮಕ್ಕಳ ಒಡೆವೆ;
ಹೊಂದಿ ಬಾಳುವ ಅಣ್ಣ- ತಮ್ಮದಿರ ಕಾದಾಡಿಸುವೆ;
ಶಿಷ್ಯನನೇ ಗುರುಗಳಿಗೆ ಎದುರಾಗಿಸಿ ಬಿಡುವೆ-
ನಿನಗಿಂತ ನಿಕೃಷ್ಟರೀ ಜಗದಿ ಇರುವರೆ ಹೇಳೆ!

ಕಡಲ ಮಡಲಲಿ ನಿನ್ನ ಒಡಹುಟ್ಟಿದವರಿಂದ
ನೀನು ಕಲಿತುದು ಏನು? ನಾ ಹೇಳಲೇನು?
ಚಂದ್ರನಿಂದ ಕಳಂಕ, ಐರಾವತದಹಂಕಾರ,
ಕೌಸ್ತುಭದ ಕಠಿಣತ್ವ, ವಾಗ್ದೇವಿಯ ಬೆಣ್ಣೆಯ ಮಾತು,
ಧನ್ವಂತರಿಯಿಂದ? ಇದ ನಂಬು, ವೈದ್ಯನಿದ್ದಾನೆಂದು
ತಿನ್ನಬಾರದ ತಿಂದು ಬಂದದ್ದೇನು ಬರಿ ಉದರ- ಶೂಲೆ!
ಒಳ್ಳೆಯದೆ ಮಾಡಲು ಹೋಗಿ ತರುವ ನಾರದನ ಜಗಳ,
ಹೆಂಡದ ಅಮಲು, ಅಪ್ಸರೆಯರ ಬೆಲೆವೆಣ್ಣುತನ,
ಕಾಲಕೂಟವೋ ನಿನಗಾಗಿ ಕೊಲೆಗೈವ ದುರ್ಬುದ್ಧಿ-
ನಿನಗಿವೆಲ್ಲವೂ ಸಹಜ, ನೀನಿದ್ದೆಡೆಯೂ ಇದೆ ಸುದ್ದಿ !

ನಮಿಸದರೂ ಪ್ರತಿ- ನಮಸ್ಕರಿಸದ, ಹರಸದ ಜಂಭ,
ಬೇಡಿದರೂ ಕಿವಿಗದು ತಾಗದ ಧೋರಣೆಯ ಔದಾಸೀನ್ಯ,
ನೇರ ಎದುರಿನಲಿ ನಿಂತರೂ ಗಮನಿಸದ ತಾತ್ಸಾರ,
ಉತ್ತಮರ ಕಂಡರೂ ಕಾಣದೊಲು ಕಡೆಗಣಿಸುವಲಕ್ಷ್ಯ-
ಇವು ತಾನೆ, ಓ ಲಕ್ಷ್ಮಿ, ನೀ ಒಲಿದ ಜನಗಳಿಗೆ
ಅಧಿಕಾರ-ಮದವೇರಿ ತಲೆ ತಿರುಗಿ ಹೋದವಗೆ?
ಗುಣವಂತರೇ ಬೇಕಿಲ್ಲ, ನಿರ್ಗುಣರನಾಶ್ರಯಿಸಿ,
ದುಷ್ಟರನೂ, ಶಿಷ್ಟರನೂ ದೃಷ್ಟಿಯಾಂದರಲೆ ನೋಡಿ,
ನೀನಿರುವೆ, ನೀನೊಲಿದ ಜನರನೂ ಹಾಗೆ ಇರಿಸಿ!

ಮಲಿನರೇ ನಿರ್ಮಲರಿಗಿಂತ ಲೇಸೆನುವ ಕೆಸರಿನ ಕಮಲೆ,
ಲಕ್ಷ್ಯವೆಂದರೆ ಗೊತ್ತೆ , ಕಳಂಕ; ಲಕ್ಮಿ ನಿನಗದು ಮೂಲ ;
ಹೊಳೆವ ಕಂಚು ಕನ್ನಡಿಯಲ್ಲಿ ತೇವ ಸೇರಿದ ಜಾಗ
ಕಿಲುಬು ಕಿಲುಬಾದಂತೆ ಕೊಳೆಯ ನೀ ಹುಟ್ಟಿಸುವೆ!

ಹೊಗಳದಿರು ಹೊನ್ನ ಕೈ- ಹಿಡಿಯ ಚಾಮರವ, ಬಿಳಿಯ ಕೊಡೆಯ;
ಬೆಳ್ಳಿ ಬಿಳಿ ಕೊಡೆಯಿರಬಹುದು, ತಲೆಗಡ್ಡ ಅದು ಆಗಿ,
ಬೆಳಕು ತಿಳಿವೇ ಒಳಬರದಂತೆ ತಡೆ ಒಡ್ಡ ಬಹುದು;
ಇರುವ ಗುಣಗಳೂ ಎಲ್ಲ ದೂರ ಹಾರುವ ಹಾಗೆ
ಬೆಳ್ಳಿಗೂದಲು ಬೀಸೀತು ಚಾಮರದ ಚಿನ್ನದ ಗಾಳಿ!

ನೀರ ಮೇಲಣ ಗುಳ್ಳೆ, ಅತಿ ಚಂಚಲದ ಮಿಂಚಿನ ಕಾಂತಿ,
ಈಗಿದ್ದು ಈಗಿಲ್ಲವಾಗುವ ಅಚಿರ ಕ್ಷಣ-ಭಂಗುರತೆಯನ್ನ
ನಿನಗೆ ಕಲಿಸಿದುವೇನು? ಇಲ್ಲ, ಅವು ನಿನ್ನ ನೋಡಿ ಕಲಿತವೋ?
ಯಾರು ಬಲ್ಲರು? ನಿನ್ನನೂ ಅವರನೂ ಮೆಚ್ಚುವರೇ ಬಲ್ಲರೋ!

ಬಿಡು, ಬಿಡು ಧರ್ಮಜ ಭೀಮಾರ್ಜುನ ಯಮಳರ ಮಾತು;
ಎಲ್ಲಿಗೆಲ್ಲಿಯ ಸಾಟಿ? ಈ ಅಶ್ವತ್ಥಾಮನಿಗವರೆಣೆಯೆ?

ಎಲೆಗೇ, ಎಲೆ ಹೆಣ್ಣೆ, ನೀನೀಗ ನೀನೇ ನೋಡುವಿಯಂತೆ-
ಆ ಕೃಷ್ಣ, ಅವನೆದುರೇನೆ ನನ್ನ ಸಾಮರ್ಥ್ಯವನು;
ನಮ್ಮ ಕುರು- ಭೂಪತಿಯಿಂದ ನಿನ್ನ ಅಗಲಿಸಲವನು
ಆ ಕಪಟ ಗೋವಳನೇನು ನಿನ್ನ ಆಳುವ ದೊರೆಯೆ?

ಎಲೆ ಮರುಳೆ, ಕೃಷ್ಣ ಹೇಳಿದನೆಂದು ಸಿಕ್ಕಿ ನೀ ಬೀಳದಿರು;
ಬರಿ ಮೋಸ, ಹೋಗದಿರು, ಬೆಂಡಾಗದಿರು, ಹಿಂದಕೆ ಮರಳು;
ಸಕಲ ಭೂಮಂಡಲಕೊಡೆಯ, ರಾಜರ ರಾಜ, ಸಾಹಸಾಂಕ,
ಇನ್ನೂ ಬದುಕಿರುವಂಥ ಸುಯೋಧನನತ್ತ ಹೊಗು ಬೇಗ!

(ಈಗ, ಅಶ್ವತ್ಥಾಮನ ಮಾತನ್ನು ಕೇಳದೆ, ಹಿಂತಿರುಗದೆ, ಲಕ್ಷ್ಮಿ ಮುಂದೆ ಮುಂದೆ ಹೆಜ್ಜೆ ಇಡತೊಡಗುತ್ತಾಳೆ, ಎಂದುಕೊಳ್ಳೋಣ.)

ಹೋಗುವೆಲ್ಲಿಗೆ, ಎಲ್ಲಿಗೆಯೆ? ಕೇಳದಿರೆ ನೀ ನನ್ನ ಮಾತುಗಳ;
ಲಕ್ಷ್ಮೀ, ನನ್ನ ಕೈ ಮೀರೀತು, ನಿನಗವಮಾನ ಆದೀತು;
ನಿನ್ನ ಕಾಯುವವರು ಯಾರಿದ್ದಾರಿಲ್ಲಿ , ಜೋಕೆ ಹಿಂತಿರುಗು
- ಎಂದು ತಡೆಗಟ್ಟಿದ ಲಕ್ಷ್ಮಿಯನು ಆ ಅಶ್ವತ್ಥಾಮ!
ಗಂಟು ಕಟ್ಟಿದ ಉಬ್ಬು, ಮುಖವೆಲ್ಲ ಉರಿಗೆಂಪು, ಕಣ್ಣಿಂದ
ಬೆಂಕಿ ಉಂಡೆಗಳನ್ನ ಕಾರುತ್ತಲೇ ನುಡಿದು, ತಡೆದ!!

ಆ ಕಡೆಯೋ ಕೃಷ್ಣನಾದೇಶ, ಇತ್ತ ರುದ್ರ- ಭಯಂಕರನಾಜ್ಞೆ
ಹಿಂದಿರುಗು, ಹಿಂದಿರುಗೀಗ, ಇಲ್ಲ ? ಎಳೆದೊಯ್ವೆ!- ಎಚ್ಚರಿಕೆ;
ಏನೂ ಮಾಡಲು ತಿಳಿಯದಾದದಳು ಲಕ್ಷ್ಮಿ, ಬೆರಗಾಗಿ ನಿಂತು;
ಆಗವಳ ಪರಿಸ್ಥಿತಿಯೋ
ಅತ್ತ ಹುಲಿ, ಇತ್ತ ದರಿ ಯೇ ಆಗಿ ಹೋಯ್ತು !

ಸದ್ಯಕ್ಕೆ ಈ ಕಥಾನಕವನ್ನು ಇಲ್ಲಿಗೆ ನಿಲ್ಲಿಸೋಣ. ನಮ್ಮ ಲಕ್ಷ್ಮಿಗೆ ಆಗ ಬಂದೊದಗಿದ ಪರಿಸ್ಥಿತಿಯನ್ನ , ಕ್ರಿಸ್ತ ಶಕ 990 ರ ಸುಮಾರಿನ ಕವಿ ರನ್ನ ಅತ್ತ ಪುಲಿ, ಇತ್ತ ದರಿ(=ಪ್ರಪಾತ, ಕಡಿದಾದ ಬೆಟ್ಟದ ಕಣಿವೆ) ಎಂಬ ಗಾದೆಯ ಮೂಲಕ ಚಿತ್ರಿಸುತ್ತಾನೆ.

ಶ್ರೀಸೂಕ್ತದಲ್ಲಿ ಆಹ್ವಾನಿಸುವಂತೆ, ಓ ಎಲ್ಲ ಬಲ್ಲ ಜಾತವೇದನೆ, ದೇವರೆ, ನೀನು, ನನಗಾಗಿ ಬರಮಾಡು ಲಕ್ಷ್ಮಿಯನು, ಚಿನ್ನ ಬೆಳ್ಳಿಯ ಹೂವ ಮುಡಿದವಳನು; ಹೊಂಬಣ್ಣದವಳನ್ನು , ಹೊನ್ನೆ ತಾನಾದವಳನ್ನು, ಜಿಂಕೆಗಣ್ಣಿನ ಸೌಂದರ್ಯ ದೇವತೆಯನು- ಎಂದು ಕರೆಯೋಣ. ಬೇರೆಲ್ಲದಕೆ ಬರಿದಾಗಿಸಿಕೊಂಡ ಹೃದಯ ಮಾಡಿಕೊಂಡು, ಬಾ ಎನ್ನೋಣ. ಎಲ್ಲಿದ್ದರೂ ಬಂದಾಳು. ಅಗೋ ನೋಡಿ, ಬಂದಳು ಅಂತ ಕಾಣುತ್ತೆ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Everything you wanted to know about divine God of Mundane Money. An article by Shikaripura Harihareshwara.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+1353354
CONG+09090
OTH09898

Arunachal Pradesh

PartyLWT
BJP23436
JDU077
OTH11112

Sikkim

PartyWT
SKM1717
SDF1515
OTH00

Odisha

PartyWT
BJD112112
BJP2323
OTH1111

Andhra Pradesh

PartyLWT
YSRCP0151151
TDP02323
OTH011

WON

Gorantla Madhav - YSRCP
Hindupur
WON
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more