• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಕ್ಷ್ಮಿ ಎಲ್ಲಿದ್ದಾಳು : ಪುಟ-3

By Super
|

ಕೇಳಿದ್ದ ಕೊಡುವವಳೆ ಎಲ್ಲಿಯೂ ಹೋಗದಿರೆ

ಲಕ್ಷ್ಮಿ ಚಂಚಲಳು ಎಂಬ ಮಾತು ಹೊಸದೇನಲ್ಲ. ಈಗ ಇದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ಇಲ್ಲವಾಗುವ ನೀರ ಅಲೆಯಂತೆ (‘ ಲಕ್ಷ್ಮೀಸ್‌ ತೋಯ-ತರಂಗ- ಭಂಗ ಚಪಲಾ’) ಅಸ್ಥಿರ ಸ್ವಭಾವದವಳು ಎಂಬ ಎಚ್ಚರಿಕೆ ಎಲ್ಲರೂ ಕೊಡುತ್ತಾರೆ. ‘ ತಾಯಿ, ಈ ಮಾತನ್ನು ಸುಳ್ಳಾಗಿಸು’, ಎಂದು ಚಮತ್ಕಾರವಾಗಿ ಹೇಳುವ ಶ್ರೀ ಪ್ರಸನ್ನ ತೀರ್ಥರ ಲಕ್ಷ್ಮೀಸ್ತುತಿಯಾಂದು ಸಹ ಇದೆ :

‘‘ ಕೇಳಿದ್ದ ಕೊಡುವವಳೆ, ಚಂಚಲಳು ನೀನೆಂದು

ಕೊಂಚ ಭಯ ಪಡುವವರು ತಿಳಿಯದವರು ;

ಇರಲಿ, ನೀ ಬಂದೆನ್ನ ಹೃದಯಲಿ ಮನೆ ಮಾಡು,

ನಿಶ್ಚಂಚಲೆಯೆ ಆಗಿ ನೆಲಸು, ಸತತ ಹರಸು!

(‘‘ ವಾಂಛಿತದಾಯಿನಿ, ಚಂಚಲಾ ತ್ವಂ ಇತಿ ಕಿಂಚಿದ್‌ ಅಸ್ತಿ ಭಯಂ ಅಜ್ಞ-ಜನಾನಾಮ್‌। ತ್ವಂ ಚ ಮದೀಯೇ ಗೃಹೇ ಸತತಂ ನಿಶ್ಚಂಚಲಾ ಭವ ಪ್ರಸನ್ನಮುಖೀ ।। ತ್ವಾಂ ವನ್ದೇ ಮಾತರಮ್‌ ।।’’)

ಇಂಥ ಪರಿವಾರದ- ಸಮೃದ್ಧಳಾದ ಲಕ್ಷ್ಮೀ ಎಲ್ಲಿ ಎಲ್ಲಿ ನೆಲಸಿ ಇದ್ದಾಳು ? ಪುರಾಣಗಳಲ್ಲಿ ಹಲವೆಡೆ ಇಂದ್ರ, ಬೃಹಸ್ಪತಿ, ಪ್ರಹ್ಲಾದ ಮುಂತಾದವರು ಕೇಳಿದ ಪ್ರಶ್ನೆಯೇ ಇದು. ಸಿಗುವ ಸಾಮಾನ್ಯ ಉತ್ತರ : ‘‘ಪುಣ್ಯ, ಧರ್ಮ ಮತ್ತು ಸತ್ಯ ಇದ್ದ ಕಡೆ ಲಕ್ಷ್ಮಿ ಸದಾ ಇರುತ್ತಾಳೆ- ಎಂದು.

‘ ಸುಮನಸ ವಂದಿತ ಪದ ಯುಗಳೆ, ಮನಸಿಜ- ಜನಕನ ಕೋಮಲತಮ ಹೃತ್ಕಮಲದೊಳು ನೆಲಸಿದ ಈ ಶುಭಗೆ ’ ಲಕ್ಷ್ಮಿ ಬೇರೆ ಬೇರೆಯವರಿಗೆ ಬೇರೆ ಬೇರೆ ರೂಪದಲ್ಲಿ ಇದ್ದು ಕಾಣಿಸಿಕೊಂಡಾಳು- ಎಂಬ ಭಾವವನ್ನು ಮಾರ್ಕಂಡೇಯ ಪುರಾಣದ, ದೇವೀ ಮಹಾತ್ಮ್ಯ ಭಾಗದಲ್ಲಿ ನೋಡುತ್ತೇವೆ :

ಪುಣ್ಯ ಕಾರ್ಯಗಳ ಎಸಗುವರ ನೆಲೆಯಲ್ಲಿ ಸಿರಿ, ಸಂಪತ್ತು ;

ಪಾಪಿಗಳ ಸೆರೆಯಲ್ಲಿ ದಾರಿದ್ರ್ಯದಾಪತ್ತು, ದೈನ್ಯ ವಿಪತ್ತು ;

ಸುಮನಸರ ಹೃದಯದಲಿ ಬೆಳಗುವ ಬುದ್ಧಿಯ ಮಹತ್ತು ;

ಸಜ್ಜನರ ಶ್ರದ್ಧೆಯ ಸೊತ್ತು,

ಕುಲೀನ ನಾರಿಯ ಸಹಜ ಲಜ್ಜೆಯ ಒತ್ತು

- ಹೀಗೆ ಬಗೆಬಗೆ ರೂಪದಲಿರುವೆ ;

ಲಕ್ಷ್ಮಿ, ಜಗವ ಕಾಪಾಡು, ಹೊತ್ತು !

(ಯಾ ಶ್ರೀಃ: ಸ್ವಯಂ ಸುಕೃತೀನಾಂ ಭವನೇಷು,

ಅಲಕ್ಷ್ಮೀ: ಪಾಪಾತ್ಮನಾಂ,

ಕೃತಧಿಯಾ ಹೃದಯೇಷು ಬುದ್ಧಿ :,

ಶ್ರದ್ಧಾಂ ಸತಾಂ, ಕುಲಜನ-ಪ್ರಭವಸ್ಯ ಲಜ್ಜಾ,

ತಾಂ ತ್ವಾಂ ನತಾ : ಸ್ಮ, ಪರಿಪಾಲಯ, ದೇವಿ, ವಿಶ್ವಮ್‌ ।। )

ವ್ಯಾಸ ಭಾರತದಲ್ಲೂ ಈ ಪ್ರಶ್ನೆ ಮರುಕಳಿಸುತ್ತದೆ. ಲಕ್ಷ್ಮಿಯನ್ನೇ ನೇರವಾಗಿ ಕೇಳುವ ಪ್ರಸಂಗ ಅದು. ಕೇಳಿದವರು ಬೇರೆ ಯಾರೂ ಅಲ್ಲ, ಅವಳ ಪ್ರತಿಬಿಂಬವಾದ ರುಕ್ಮಿಣಿಯೇ:

ಯಾರು ಯಾರುಗೆ ಒಲಿದು ನೀ ನಲಿವೆ, ಸಿರಿಯೆ?

ಯಾರು ಯಾರಲ್ಲಿರುವೆ? ನಿಲ್ಲುವೆಯೆ ನೆಲಸಿ?

ಜೀವ-ಜಡ-ಜಗ-ರಕ್ಷಣೆಯ ಪೂರಕದ ಓ ತತ್ತ್ವವೇ,

ಲಕ್ಷ್ಮಿಯೆ, ನಿನ್ನ ಮನದಿಂಗಿತವ ತಿಳಿಯ ಹೇಳೆ!

(ಕಾನಿ ಇಹ ಭೂತಾನಿ ಉಪಸೇವಸೇ ತ್ವಂ? ಸಂ-ತಿಷ್ಠಸೇ ಕಾನ್‌ ಇವ, ಸೇವಸೇ ತ್ವಂ? ಕಾನಿ ತ್ರಿಲೋಕೇಶ್ವರ-ಭೂತಕಾನ್ತೇ, ತ್ತತ್ತ್ವೇನ ಮೇ ಬ್ರೂಹಿ, ಮಹರ್ಷಿ-ಕನ್ಯೇ।। - ಮಹಾಭಾರತ, ಅನುಶಾಸನ ಪರ್ವ 11.4)

ಲಕುಮಿಯ ನೆಲೆಯ ನೀವ ಬಲ್ಲಿರಾ.. ನೀವು ಬಲ್ಲಿರಾ..

ತಾನು ಎಲ್ಲಿರುತ್ತಾಳೆ, ಇರಬಹುದು, ಇರಬಯಸಳು- ಎಂಬುದನ್ನ ಲಕ್ಷ್ಮಿ ಪಟ್ಟಿ ಮಾಡಿ ಹೇಳುತ್ತಾಳೆ. ಸಾರಾಂಶಿಸಿ ಹೇಳುವುದಾದರೆ,

ಆತ್ಮವಿಶ್ವಾಸಿಗಳಲ್ಲಿ, ದಕ್ಷರಲ್ಲಿ, ಸಾಹಸಿಗಳಲಿ,

ಕಾರ್ಯಕುಶಲರಲಿ, ಜಿತೇಂದ್ರಿಯರಲಿ, ಕೃತಜ್ಞರಲಿ,

ಕ್ರೋಧ- ರಹಿತರಲಿ, ಮೋಹ-ಮರೆತವರಲ್ಲಿ,

ಮದವ ತುಳಿದವರಲ್ಲಿ,

ಸೌಂದರ್ಯದ ನೆಲೆವೀಡಾದವರಲ್ಲಿ, ಶುಚಿ ಇದ್ದ ಕಡೆಯಲ್ಲಿ,

ಗುಣದ ಖಣಿಯಾದವರಲ್ಲಿ-

ಲಕ್ಷ್ಮಿ ಇರಲು ಸಂತೋಷಿಸುವಳು.

ಇದಕ್ಕೆ ವ್ಯತಿರಿಕ್ತ ಗುಣ (ದೋಷ?) ವುಳ್ಳವರನ್ನು ಅವಳು ಬೇಗ ತೊರೆದು ಹೋಗಿ ಬಿಡುತ್ತಾಳಂತೆ!

ಸದ್ಗುಣ, ಸಚ್ಚಾರಿತ್ರ್ಯ, ಸದುದ್ದೇಶಗಳನ್ನೇ ಬಾಳ ದೀವಿಗೆಯಾಗಿ ಉಳ್ಳವರ ಎದೆಯಲ್ಲಂತೂ ನೆಮ್ಮದಿಯಿಂದ ಇರುತ್ತಾಳೆ; ಕೇಳಿದರೆ ಹೇಳಿಯಾಳು:

ನಂಬಿ ಮೊರೆ ಹೊಕ್ಕವರ, ತುಂಬಿ ಭಕ್ತಿಯನೊಂದೆ

ಬೇರೆಲ್ಲದಕೆ ಬರಿದಾಗಿಸಿಕೊಂಡವರ ಹೃದಯದಲ್ಲಿ,

ಭಾವಪರವಶರಾಗಿ ಕರೆದವರ ಎದುರಿನಲಿ,

ನೆನೆದವರ ಮನದಲ್ಲಿ ಬೇಕೆಂದ ರೂಪದಲಿ ಮೈದೋರುವೆ !

English summary
Everything you wanted to know about divine God of Mundane Money. An article by Shikaripura Harihareshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X