• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಾಟಕ ಕಲಾವತಂಸ’ ಅಲಮೇಲು ಐಯಂಗಾರ್‌- ಭಾಗ2

By ಶಿಕಾರಿಪುರ ಹರಿಹರೇಶ್ವರ
|

ತುಂಬಾ ಒಳ್ಳೆಯವರು ಅವರು ನಿಜ; ಆದರೆ ನಿಮಗೆ ಗೊತ್ತಿರಲಿ : ಅಲಮೇಲು ಅವರು ‘ಹುಟ್ಟು ಹೋರಾಟಗಾರರು’. ಸರಿಯೆಂದು ಕಾಣಿಸದಿದ್ದರೆ, ಮೊದಲು ನಯವಾಗಿ ತಿಳಿಯಪಡಿಸಿ, ಬಗ್ಗದಿದ್ದರೆ ಆಮೇಲೆ ಸಂಬಂಧಪಟ್ಟವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡು ತಪ್ಪನ್ನು ಸರಿಪಡಿಸುವ ದಿಟ್ಟಗಾತಿ ಅವರು. ಹೈಸ್ಕೂಲಿನಲ್ಲಿ ಕನ್ನಡಮಾಧ್ಯಮದಲ್ಲಿ ಓದಿದ್ದು, ಚರ್ಚಾ ಕೂಟ ಮತ್ತು ನಾಟಕಗಳಲ್ಲಿ ಯಾವಾಗಲೂ ಭಾಗವಹಿಸುತ್ತಿದ್ದರು.

ಕ್ರೀಡಾ ಚಟುವಟಿಕೆಗಳಲ್ಲೂ ಹಿಂದೆ ಬಿದ್ದವಳಲ್ಲ ಈ ಹುಡುಗಿ. ಥ್ರೋ ಬಾಲ್‌, ಬ್ಯಾಸ್ಕೆಟ್‌ ಬಾಲ್‌, ಷಟ್ಲ್‌, ಬ್ಯಾಡ್‌ಮಿಂಟನ್‌ ಮುಂತಾದವುಗಳಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದುಂಟು. ಈಜುವುದರಲ್ಲೋ ಮುಂದಾಳು, ಛಾಂಪಿಯನ್‌; ಹಲವಾರು ಅಂತರ್‌ ಕಾಲೇಜು ಈಜು ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು. ಕಂಚು ಮತ್ತು ಬೆಳ್ಳಿ ಢಾಲುಗಳನ್ನು, ಪದಕಗಳನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದವರು. ಈಜುವುದರಲ್ಲಿ ಆತ್ಮ ವಿಶ್ವಾಸ ಹೆಚ್ಚು . 1969 ರಲ್ಲಿ ನಡೆದದ್ದು : ‘ಹರಿಯುವ ನೀರೆಂದರೆ ನನಗೆ ಭಯ, ನಾನಿಳಿಯಲಾರೆ ನದಿಗೆ’ ಇತ್ಯಾದಿ ಬಿಳಿ ಸುಳ್ಳು ಮೊದಲು ಹೇಳಿ, ಆಮೇಲೆ ಧಡಾರನೇ ನೀರಿಗೆ ಬಿದ್ದು , ದಡದಲ್ಲಿದ್ದವರ ಗಾಭರಿ ಕಿರುಚಾಟಕ್ಕೆ ಕಾರಣರಾಗಿ, ತುಂಟು ಚೇಷ್ಟೆ ಮಾಡಿದ ಈ ಹುಡುಗಿ, ಶೃಂಗೇರಿಯ ತುಂಗೆಯ ಹೊಳೆಯ ಮಡುವಿನಲ್ಲಿ ಸಲೀಸಾಗಿ ಈಜಿದ ಪ್ರಸಂಗವನ್ನ ಕನ್ನಡ ಗಣಕ ಪರಿಷತ್ತಿನ ಶ್ರೀನಾಥಶಾಸ್ತ್ರಿಗಳು ‘ವಿಶ್ವಕನ್ನಡ’ (ಸಂಪುಟ 3, ಸಂಚಿಕೆ 1)ದಲ್ಲಿ ಸೊಗಸಾಗಿ ಕತೆ ಹೇಳಿದ್ದಾರೆ.

ಆಟಗಾರರ ಮಾತಾಯ್ತು, ಇನ್ನು ಹೋರಾಟಗಾರರನ್ನು ಗುರುತಿಸೋಣ! ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡಿದ್ದರೂ, ಕರ್ನಾಟಕದಲ್ಲೇ ದೊಡ್ಡ ಸಂಸ್ಥೆಯಾದ ಮಹಾರಾಣಿ ಕಾಲೇಜಿನಲ್ಲಿ ಕನ್ನಡವನ್ನು ಮುಖ್ಯ ವಿಷಯ (ಮೇಜರ್‌ ಸಬ್ಜೆಕ್ಟ್‌) ಆಗಿ ಹೇಳಿಕೊಡಲು ಅವಕಾಶವಿರದಿದ್ದನ್ನು ಕಂಡು ನೊಂದಿದ್ದ ಶ್ರೀಮತಿ ಕಮಲಾ ಹಂಪನಾ ಮತ್ತು ಇತರ ಕನ್ನಡ ಅಧ್ಯಾಪಕರ ಪರವಾಗಿ ಸರ್ಕಾರ ಮತ್ತು ವಿಶ್ವ ವಿದ್ಯಾಲಯದ ಸಿಬ್ಬಂದಿಯಾಡನೆ ಪೂಜ್ಯ ತೀನಂಶ್ರೀ ಅವರ ಬೆಂಬಲದಿಂದ ಹೋರಾಡಿ, ಮೊಟ್ಟ ಮೊದಲ ಬಾರಿಗೆ ಕನ್ನಡವನ್ನು ಮುಖ್ಯ (ಮೇಜರ್‌) ವಿಷಯವಾಗಿ ಅಭ್ಯಸಿಸಿ ಅವಕಾಶ ದೊರಕುವಂತೆ ಮಾಡಿದ ಸಾಧನೆಯಿಂದ ಅನೇಕರ ಮೆಚ್ಚುಗೆಗೆ ಪಾತ್ರಳಾದವರು- ಅಲಮೇಲು ಅವರು.

‘ವಿಜ್ಞಾನದಿಂದ ಸಾಹಿತ್ಯದತ್ತ ನನ್ನ ಒಲವನ್ನು ತಿರುಗಿಸಿದ ಮುಖ್ಯ ಘಟನೆ ಇದು. ಅಂದು ಕನ್ನಡದ ದೆಸೆಯಲ್ಲಿ ಇಟ್ಟ ದಿಟ್ಟ ಹೆಜ್ಜೆ , ಮಹಾರಾಣಿ ಕಾಲೇಜಿನಿಂದ ಮಾನಸಗಂಗೋತ್ರಿಯವರೆಗೂ ನನ್ನನ್ನು ನಡೆಸಿಕೊಂಡು ಬಂದಿತು.’- ಎನ್ನುತ್ತಾರೆ, ಅಲಮೇಲು ಅವರು.

ಕನ್ನಡ ಎಂ.ಎ. ಪದವೀಧರಳಾದ (1969) ನಂತರ ‘ಜ್ಞಾನ ಗಂಗೋತ್ರಿ’ ಮಕ್ಕಳ ವಿಶ್ವಕೋಶದಲ್ಲಿ ಶ್ರೀ ನಿರಂಜನ ಮತ್ತು ಪ್ರೊಫೆಸರ್‌ ಎಲ್‌.ಎಸ್‌.ಶೇಷಗಿರಿರಾವ್‌ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ (1969-71) ಉಪಸಂಪಾದಕರಾಗಿದ್ದರು. ಆಮೇಲೆ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. (1971-72). ಈ ದಿನಗಳಲ್ಲಿ, (ಅಂದರೆ, 1956-66) ಬೆಂಗಳೂರಿನಲ್ಲಿದ್ದು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ, ವನಿತಾವಿಹಾರ, ರೇಡಿಯೋ ನಾಟಕ, ಮಾತಿನ ಚಾವಡಿಗಳಲ್ಲಿ ಭಾಗವಹಿಸುತ್ತಿದ್ದರು.

ಹೈದರಾಬಾದ್‌ನಲ್ಲಿ ಕನ್ನಡ ಚಟುವಟಿಕೆ

1971 ರಿಂದ 1979ರವರೆಗೆ ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ವಾಸ. ಅಲ್ಲಿದ್ದಾಗ ಹೈದರಾಬಾದಿನಲ್ಲೊಂದು ಕನ್ನಡ ಕೂಟ ಆರಂಭಿಸಿ, ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಅಲ್ಲಿನ ಆಕಾಶವಾಣಿ ಕೇಂದ್ರದಲ್ಲಿ ಕನ್ನಡ ನಾಟಕ, ಭಾವಗೀತೆಗಳ ಕಾರ್ಯಕ್ರಮಗಳನ್ನು ಬಿತ್ತರಿಸಿದ್ದೇ ಅಲ್ಲದೆ ಕನ್ನಡ ಜಾನಪದ ಸಾಹಿತ್ಯದ ಮೇಲೆ ಆರು ಭಾಷಣಗಳನ್ನು ಬಿತ್ತರಿಸಿದರು. ಅವುಗಳಲ್ಲಿ ಅಲಮೇಲು ಆಗಾಗ್ಗೆ ನೆನಪಿಸಿಕೊಳ್ಳುವುದು ಈ ನಾಲ್ಕನ್ನು : ‘ ಜನಪದ ಸಾಹಿತ್ಯದಲ್ಲಿ ತಾಯಿ ’, ‘ ಜನಪದ ಸಾಹಿತ್ಯದಲ್ಲಿ ತಾಯಿ ಮಗಳ ಬಾಂಧವ್ಯ’, ‘ ಜನಪದ ಸಾಹಿತ್ಯದಲ್ಲಿ ಸೊಸೆ’ ಮತ್ತು ‘ ಜನಪದ ಸಾಹಿತ್ಯದಲ್ಲಿ ಶಿಶು’.

ಈ ಮಧ್ಯೆ ಸುಧಾ, ಪ್ರಜಾಮತ (ಜನಪದ ಸಾಹಿತ್ಯದಲ್ಲಿ ಶಿವ ಶಿವೆಯರ ಸರಸ ಸಲ್ಲಾಪ, 1971, ಯದುಗಿರಿಯಲ್ಲಿ ವೈರಮುಡಿ, 1971 - ಹೆಸರಿಸಬಹುದು) ಮತ್ತಿತರ ಪತ್ರಿಕೆಗಳಿಗೆ ಆಗೊಂದು ಈಗೊಂದು ಲೇಖನ ಬರೆಯುತ್ತಿದ್ದರು. ಉಪಕುಲಪತಿ ದೇಜಗೌ ಅಭಿನಂದನಾ ಗ್ರಂಥಕ್ಕೆ ‘ ಗುರುವರೇಣ್ಯ’ ಬರೆದದ್ದು 1980ರಲ್ಲಿ.

ಆಮೇಲೆ ಅಲಮೇಲು ಅಮೆರಿಕಾಕ್ಕೆ ಬಂದರು ; ಕ್ಯಾಲಿಫೋರ್ನಿಯಾದ ಸಾಂಸ್ಕೃತಿಕ ಪ್ರಪಂಚಕ್ಕೆ ಧುಮ್ಮಿಕ್ಕಿ ‘ ಭೋಂಕನೆ ನಿಖಿಳ ಜನಾಂತರಂಗಮಂ ರಂಗಮುವಂ’ (ಪಂಪನ ಆದಿಪುರಾಣದ ನೀಳಾಂಜನೆಯಂತೆ) ಹೊಕ್ಕರು, ಅದೃಶ್ಯವಾಗದೆ ದೃಶ್ಯಕಾವ್ಯಗಳಲ್ಲಿ ನಿಂತರು. ನಾಟಕಗಳನ್ನು ಬರೆದರು, ಆಡಿದರು,ಆಡಿಸಿದರು, ಆಡಿಸುತ್ತಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಮನರಂಜನಾ ಕಾರ್ಯದರ್ಶಿಗಳಾಗಿ , ಅಧ್ಯಕ್ಷರಾಗಿ (1986-87) ಒಳ್ಳೊಳ್ಳೆಯ ಕಾರ್ಯಕ್ರಮಗಳಿಗೆ ಕಾರಣರಾದರು: ವರಕವಿ ಡಾ. ಪುತಿನ ಅವರ ಶ್ರೀರಾಮ ಪಟ್ಟಾಭಿಷೇಕ (1986-87), ಹರಿಣಾಬಿಸರಣ (1986,1997), ದೀಪಲಕ್ಷ್ಮಿ (1987) ಗೀತನಾಟಕಗಳನ್ನು ಯಶಸ್ವಿಯಾಗಿ ತಮ್ಮದೇ ಸಂಗೀತ ನಿರ್ದೇಶನ, ರಂಗ ನಿರ್ದೇಶನಗಳೊಂದಿಗೆ ಪ್ರದರ್ಶಿಸಿದರು. ಇಲ್ಲಿನ ದಕ್ಷಿಣ ಭಾರತೀಯ ಲಲಿತ ಕಲೆಗಳ ಸಂಸ್ಥೆ (ಸೌತ್‌ ಇಂಡಿಯಾ ಫೈನ್‌ ಆರ್ಟ್ಸ್‌ )ಗೆ ಉಪಾಧ್ಯಕ್ಷರಾಗಿ, ಲಿ ವರ್‌ ಮೋರ್‌ನ ಶಿವ ವಿಷ್ಣು ದೇವಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಹಲವಾರು ಸಾಂಸ್ಕೃತಿಕ ಸಂಸ್ಥೆಗಳ ಸಲಹಾ ಮಂಡಳಿಗಳಲ್ಲಿದ್ದು ನೃತ್ಯ, ಸಂಗೀತ, ಚಿತ್ರಕಲೆಗಳ ಚಟುವಟಿಕೆಗಳ ಪೋಷಣೆಗೆ ಸಹಾಯಕರಾಗಿದ್ದಾರೆ. ಇಂಥವುಗಳ ಮತ್ತು ವಿಶ್ವವಿದ್ಯಾಲಯಗಳ ವೇದಿಕೆಯ ಮೇಲೆ ನಿಂತು ಭಾರತದ ಬಗ್ಗೆ, ಕರ್ನಾಟಕದ ಬಗ್ಗೆ ಸೊಗಸಾಗಿ ಮಾತನಾಡುತ್ತಾರೆ, ಸ್ಥಳೀಯ ಬಾನುಲಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಉಪನ್ಯಾಸ ಮತ್ತು ಸಮಾವೇಶ (ಸಿಂಪೋಜಿಯಮ್‌)ಗಳಲ್ಲಿ ಭಾಗವಹಿಸುತ್ತಾರೆ. ಕವನಗಳನ್ನು ಬರೆಯುತ್ತಾರೆ ; ಹಾಡುತ್ತಾರೆ. ಕರ್ನಾಟಕ ಸಂಗೀತದಲ್ಲಿ ವಿಶೇಷ ಆಸಕ್ತಿ. ಚಿಕ್ಕಂದಿನಲ್ಲೇ ಸಂಗೀತ ಅಭ್ಯಾಸ ಮಾಡಿದವರು, ಜೂನಿಯರ್‌ ಮತ್ತು ಸೀನಿಯರ್‌ ಪರೀಕ್ಷೆಗಳಲ್ಲಿ ಗಮನಾರ್ಹ ವರಿಷ್ಠ ಮಟ್ಟದಲ್ಲಿ (ಡಿಸ್ಟಿಂಕ್ಷನ್‌) ಉತ್ತೀರ್ಣರು.

ಜಂಜಡದ ಸಂತೆಯಲೊಂದು ನಿರಾಳದ ಅಲೆ

ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ದಶವಾರ್ಷಿಕ ಸಂಚಿಕೆ (1983) ‘ ಸಹೃದಯ’ದ ಮುಖ್ಯ ಸಂಪಾದಕಿ ಆಗಿದ್ದರು ಅಲಮೇಲು. ಈ ಸಂಚಿಕೆಯೇ ಕೂಟದ ಮುಂದಿನ ವಾರ್ಷಿಕ ಸಂಚಿಕೆಗಳನ್ನು ತರಲು ಸ್ಫೂರ್ತಿ ಮತ್ತು ಮಾದರಿ ಆಯಿತು - ಎನ್ನುತ್ತಾರೆ, ಕ್ಯಾಲಿಫೋರ್ನಿಯಾದ ಇನ್ನೊಬ್ಬ ನಾಟಕಕಾರರು, ಸಂಧ್ಯಾ ರವೀಂದ್ರನಾಥ್‌ ಅವರು. ನಾಗತಿಹಳ್ಳಿ ಚಂದ್ರಶೇಖರರ ‘ ಅಮೇರಿಕ ಅಮೇರಿಕ’ ಚಿತ್ರದ (1996) ಕಥಾ ರಚನೆಯ ಮಂಡಳಿಯಲ್ಲಿ, ಅವರದೇ ಆದ ‘ ನನ್ನ ಪ್ರೀತಿಯ ಹುಡುಗಿ’(2000) ಚಿತ್ರಕಥೆಗೆ ಮೂಲ ಹಂದರದ ಕೊಡುಗೆಯಲ್ಲಿ ಅಲಮೇಲು ಅವರ ಪಾತ್ರವಿದೆ.

ಎಲ್ಲಕ್ಕೂ ಮಿಗಿಲಾಗಿ ಅಲಮೇಲು ಅವರ ನಾಟಕವಿದೆಯೆಂದರೆ ಕಿಕ್ಕಿರಿದು ನೆರೆಯುವ ಜನಸ್ತೋಮಕ್ಕೆ ನಗೆಪಾಯಸ ಕಟ್ಟಿಟ್ಟ ಬುತ್ತಿ. ಈ ಸೆಳೆತ -ಒತ್ತಡ-ಎಳೆತಗಳ ಜಂಜಾಟದ ಇಲಿ- ಪಂದ್ಯದ ಜೀವನರಂಗದಿಂದ ದೂರ ಕರೆದೊಯ್ದು ಅವರು ನೋಡುಗರನ್ನು ಭ್ರಾಮಕ ಪ್ರಂಪಂಚವೊಂದರಲ್ಲಿ ಕ್ಷಣ ಕಾಲ ಮೈಮರೆಸುತ್ತಾರೆ.

‘ ನಗುನಗುತಾ ನಲೀ, ನಲಿ; ಏನೇ ಆಗಲೀ’ - ಹಾಡುತ್ತಾ ಹೋಗುವ ಬಂಗಾರದ ಮನುಷ್ಯ ನೆನಪಾಗುತ್ತಾನೆ ; ‘ ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದು ಅತಿಶಯದ ಧರ್ಮ; ನಗುವ, ನಗಿಸುವ, ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೋ ’ -ಎಂದಿಲ್ಲವೇ ಮಂಕುತಿಮ್ಮನ ಕಗ್ಗ ? ಆ ವರ ಇಲ್ಲಿ ಇವರಿಗೆ ದಕ್ಕಿದೆ.

ಕೊನೆಯಲ್ಲಿ ಹೇಳಲು ಉಳಿಸಿಕೊಂಡಿದ್ದೇನೆ: ಅಲಮೇಲು ಅವರು ಕನ್ನಡದ ಹೆಸರಾಂತ ಕವಿ, ಗೀತರೂಪಕಕಾರ ಪು.ತಿ.ನ ಅವರ ಮಗಳು. ಅಲಮೇಲು ಅವರ ಪತಿ ತಿರುನಾರಾಯಣ ಅವರು ಟೆಲಿಕಮ್ಯೂನಿಕೇಷನ್‌ ಇಂಜಿನಿಯರ್‌. ಕನ್ನಡ, ಸಂಸ್ಕೃತ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ತಿರುನಾರಾಯಣರಿಗೆ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು : ವಿಜಯ್‌ ಮತ್ತು ಜಯಂತ್‌. ಸುಚರಿತಾ ಅವರ ಅಚ್ಚುಮೆಚ್ಚಿನ ಸೊಸೆ. ಉತ್ತರ ಕ್ಯಾಲಿಫೋರ್ನಿಯಾದ ಸರಟೋಗಾ ನಗರದಲ್ಲಿ ಅಲಮೇಲು ದಂಪತಿಗಳ ವಾಸ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Meet : Kalaa Vatamse Alamelu Iyengar, multi facet talent spreading kannada and its rich culture in US. An article by Shikaripura Harihareshwara.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more