• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಾಟಕ ಕಲಾವತಂಸ’ ಪ್ರಶಸ್ತಿ ಪುರಸ್ಕೃತ ಅಲಮೇಲು ಅಯ್ಯಂಗಾರ್‌

By ಶಿಕಾರಿಪುರ ಹರಿಹರೇಶ್ವರ
|

ನಾವು ಓದುತ್ತಿದ್ದ ಶಾಲಾ-ಕಾಲೇಜಿನ ದಿನಗಳಲ್ಲಿ ‘ಕಾವ್ಯೇಷು ನಾಟಕಂ ರಮ್ಯಮ್‌’ (ಕಾವ್ಯಗಳಲ್ಲಿ ಸೊಗಸಾದುದೆಂದರೆ ನಾಟಕವೇ!)- ಎಂಬ ಮಾತನ್ನು ನಿಜವಾಗಿಸಿದ, ಹಲವಾರು ಖ್ಯಾತನಾಮರ ಕೃತಿಗಳನ್ನ ನಾವು ವ್ಯಾಸಂಗಕ್ಕೆ ವಸ್ತುವಾಗಿ ಇರಿಸಿಕೊಂಡು ಅವನ್ನು ಮೆಚ್ಚಿದ್ದೆವು. ಏಕೆ ಬೇರೆಲ್ಲ ಕಲೆಗಳಿಗಿಂತ ಈ ಪ್ರದರ್ಶಕ ಕಲೆಗೇ ಹೆಚ್ಚು ಒಜ್ಜೆ ಎಂಬುದನ್ನ ನಾವು ನೋಡಿ, ಆನಂದಿಸಿದ ಯಶಸ್ವೀ ನಾಟಕ ಪ್ರಯೋಗಗಳಿಂದ ಮನಗಂಡಿದ್ದೆವು.

ಪ್ರೇಕ್ಷಕರ ಅಭಿರುಚಿಯೋ ಅವರವರ ಸಂಸ್ಕಾರ, ಪರಿಶ್ರಮ, ಅನುಭವ, ಮನೋವೃತ್ತಿಯನ್ನ ಅವಲಂಬಿಸಿ ಬೇರೆ ಬೇರೆ ರೀತಿಯಲ್ಲಿ, ಬೇರೆ ಬೇರೆ ಪ್ರಮಾಣದಲ್ಲಿ ಇದ್ದೀತು; ಅವರೆಲ್ಲರೂ ಒಂದೆಡೆ ಸೇರಿರುವಾಗ, ಎಲ್ಲರಿಗೂ ಒಂದೇ ತಟ್ಟೆಯಲ್ಲಿ ಉಣಬಡಿಸಿ, ಒಂದೇ ಆಹಾರದಿಂದ ಮನ ತಣಿಸಬಲ್ಲ ಒಂದು ವಿಶೇಷ ಭೂರಿ ಭೋಜನ ಇದು- ಎಂಬ ಅರ್ಥದಲ್ಲಿ ನಾಟಕದ ಬಗ್ಗೆ ಹೇಳುತ್ತಾರೆ: ‘ಲೋಕೋ ಭಿನ್ನರುಚಿಃ, ಬಹುಧಾಪಿ ಏಕಂ ಸಮಾರಾಧನಮ್‌’- ಎಂದು. ಇದನ್ನು ಸಾರ್ಥಕ ಪಡಿಸಿದ ನಾಟಕಕಾರರ ಪಂಕ್ತಿಗೆ ಸೇರಿ, ಅಮೆರಿಕನ್ನಡಿಗರ ಮನೆ ಮಾತಾಗಿರುವ ನಮ್ಮ ಅಲಮೇಲು ಐಯಂಗಾರರಿಗೆ ‘ನಾಟಕ ಕಲಾವತಂಸ’ ಪ್ರಶಸ್ತಿಯನ್ನು ಕೊಟ್ಟು , ಜನವರಿ 26, 2002 ರಂದು ನಡೆಯುತ್ತಿರುವ ‘ಚಿತ್ರ ಸಂಕ್ರಾಂತಿ’ಯಂದು ಅವರನ್ನು ಗೌರವಿಸಲು ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಯಾರಿವರು ಅಲಮೇಲು?

ಸೀಮೋಲ್ಲಂಘನಕ್ಕೆ ಮುನ್ನ ಪುತ್ಥಳಿಗೆ ಕಲಾತ್ಮಕ ರೂಪ ಕಾಣಿಸಿದ, ಅಭಿವ್ಯಕ್ತಿಯ ಉಸಿರೂಡಿದ ಚಟುವಟಿಕೆಗಳೇನು? ಕಡಲಾಚೆ ವಿದೇಶದ ಪರಿಸರದಲ್ಲಿ ಏನಿವರ ಸಾಧನೆ? ಎಂಥ ಅಗ್ಗಳಿಕೆಯನ್ನ ಇವರ ಕೃತಿಗಳಲ್ಲಿ ಪ್ರಯೋಗಗಳಲ್ಲಿ ಸಹೃದಯರು ಕಂಡು ಕೊಂಡಾಡುತ್ತಾರೆ?- ಇದನ್ನೆಲ್ಲ ಈಗ ನೋಡೋಣ.

ನಾಟಕಕಾರರಾಗಿ ಹೆಸರು ಮಾಡಿರುವುದರಿಂದ ಈ ಬಹುಮುಖ ಪ್ರತಿಭೆಯ ಪರಿಚಯ ಪ್ರಯತ್ನದಲ್ಲಿ ಮೊದಲು ನಾಟಕದ ಬಗ್ಗೆಯೇ ತೆರೆ ಎಳೆಯೋಣ, ‘ನಾಂದ್ಯನ್ತೇ ಪ್ರವಿಶತು ಸೂತ್ರಧಾರ: ’- ಎನ್ನೋಣ: ಮೊದಲಿನಿಂದಲೂ ನಾಟಕದಲ್ಲಿ ಅಪಾರ ಆಸಕ್ತಿ ಇದ್ದು, ಅದು ಬೆಳೆದು, ಸಮಾಜದ ಓರೆಕೋರೆಗಳನ್ನು ಕನ್ನಡಿ ಹಿಡಿದು ನೋಡುವ, ಕಾಣಿಸುವ ಪ್ರವೃತ್ತಿ ಅಲಮೇಲು ಅವರ ಲೇಖನಿಯಲ್ಲಿ ಪ್ರಹಸನಗಳಾಗಿ ಮೂಡಿದವು. ಉತ್ತರ ಅಮೆರಿಕಾದ ಹಲವಾರು ಕನ್ನಡ ಕೂಟಗಳ ವೇದಿಕೆಗಳ ಮೇಲೆ ಮತ್ತೆ ಮತ್ತೆ ಪ್ರದರ್ಶಿತವಾದ, ವಿಶ್ವಕನ್ನಡ ಸಮ್ಮೇಳನ-2000 ರಲ್ಲಿ ಅಭಿನಯಿಸಲ್ಪಟ್ಟ ನಾಟಕಗಳ ಪಟ್ಟಿ ಚಿಕ್ಕದಲ್ಲ . ‘ಅಪ್‌ ಟು ಡೇಟ್‌ ಅಂಬುಜಮ್ಮ’ (ರಚನೆ 1986), ‘ಮದುವೇ ರೀ ಮದುವೆ’ (1990), ‘ನಳಪಾಕ’ (1991), ‘ಹೈ ಟೆಕ್‌ ಹಯವದನಾಚಾರ್‌’ (1994), ‘ಆನ್ತ್ರಪೆನೂರ್‌ ಆಂಡಾಳಮ್ಮ’ (1998), ‘ಸಾಮರಸ್ಯಕ್ಕೆ ಒಂದು ಸಲಹೆ’(1999) - ಮೊದಲಾದ ನಗೆ ನಾಟಕಗಳ ರಚನಕಾರರಾಗಿ, ಅಭಿನೇತೃವಾಗಿ, ನಿರ್ದೇಶಕರಾಗಿ, ಅಲಮೇಲು ವಿದೇಶದ ಕನ್ನಡ ರಂಗಮಂಟಪವನ್ನು ಬೆಳಗಿದರು.

ನಕ್ಕರದೇ ಸ್ವರ್ಗ!

‘ಅಪ್‌ ಟು ಡೇಟ್‌ ಅಂಬುಜಮ್ಮ’ ನವರಲ್ಲಿ ಹೊಟ್ಟೆ ಹುಣ್ಣಾಗಿಸುವ ನಗೆ ಚಟಾಕಿಗಳ ಜೊತೆಗೆ ಸತ್ಯಕ್ಕೆ ಇರುವ ಚಿನ್ನದ ಮುಚ್ಚಳ (‘ ಹಿರಣ್ಮಯೇನ ಪಾತ್ರೇಣ ಸತ್ಯಸ್ಯ ಅಪಿಹಿತಂ ಮುಖಮ್‌’ ) ತೆರೆಸುವ ಪ್ರಯತ್ನವಿದೆ; ‘ಮದುವೇ ರೀ ಮದುವೆ’ಯಲ್ಲಿ ಇಲ್ಲಿಗೆ ವಲಸೆ ಬಂದ ಆಗಮಿಕನ, ಇಮಿಗ್ರೆಂಟ್‌ ಒಬ್ಬನ ಬವಣೆ, ತಾನು ಕೆಲಸ ಕಳೆದುಕೊಂಡಾಗ ಮದುವೆ ದಳ್ಳಾಳಿ (‘ ಮ್ಯಾಚ್‌ ಮೇಕಿಂಗ್‌’)ಧಂದೆಯಲ್ಲಿ ತೊಡಗಿದ್ದುದರ ವಿಡಂಬನೆ ಇದೆ. ‘ ನಳಪಾಕ’ದಲ್ಲಾದರೋ ಸೋಗು ಹಾಕುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಬೇಳೆ ಬೇಯದು; ‘ಹೈ ಟೆಕ್‌ ಹಯವದನಾಚಾರ್‌’ ಊರಿಂದ ಬಂದವರು ವಿದೇಶದ ಎಲ್ಲ ಆಧುನಿಕ ಉಪರಣಗಳ ಸೌಲಭ್ಯವನ್ನು ಅಳವಡಿಸಿಕೊಂಡು, ಹಳೆಯ ನೀರನ್ನು ಹೊಸ ಬಾಟಲಿಗೆ ಆತುರಾತುರವಾಗಿ ತುಂಬಿಸುವವರತ್ತ ಬೊಟ್ಟು ಮಾಡಿ ತೋರಿಸುವುದಿದೆ; ‘ಆನ್ತ್ರಪೆನೂರ್‌ ಆಂಡಾಳಮ್ಮ’ ನವರಲ್ಲಿ ಹೆಸರೇ ಸೂಚಿಸುವಂತೆ, ಹೊಸ ಹೊಸ ದಿಗಂತಗಳನ್ನು ಕಾಣಲು ಹೊರಟ ಸಾಹಸದ ಹೆಜ್ಜೆ ಗುರುತುಗಳಿವೆ, ಎಷ್ಟಾದರೂ ತಲೆಗೆ ಬೆಲೆ, ತಲೆಗೇ ಬೆಲೆ ಎಂಬ ಮಾತನ್ನು ನಗೆ ಬುಗ್ಗೆಯ ನೆರಳಲ್ಲಿ ಮನಗಾಣಿಸುವ ವಸ್ತುವಿದೆ; ‘ಸಾಮರಸ್ಯಕ್ಕೆ ಒಂದು ಸಲಹೆ’ ಹಿಂದೆ ಯಾರು ಯಾರೋ ಕೊಟ್ಟಿರಬಹುದು, ಇಲ್ಲಿರುವುದು ಬೇರೆ.

ಇನ್ನೊಂದಿದೆ : ‘ವೆಂಕಜ್ಜಿ Vs. James Bond’. (ಸುಧಾದಲ್ಲಿ , 1970 ರಲ್ಲಿ ಪ್ರಕಟಿತ). ಇದರಲ್ಲಿ ಆಧುನಿಕ ಮಾರಕಾಸ್ತ್ರಗಳನ್ನು ನಮ್ಮ ಪೌರಾಣಿಕ ಕನ್ನಡಕದ ಮೂಲಕ ನೋಡಿದಾಗ ಆಗುವ ಆಭಾಸಗಳ ಚಕಮಕಿ ಇದೆ. ಮತ್ತೊಂದಿದೆ : ‘ಸಂಪದ್ಗಿರಿರಾಯನ ಸಂಪಾದಕಗಿರಿ’ (ಸುಧಾ, 1971) ಅದು ಪತ್ರಿಕೋದ್ಯಮ ನಿರತರ ನಗೆಪಾಟಲು ಸನ್ನಿವೇಶಗಳ ಒಂದು ಚಿತ್ರಣ. ಮೇರಿಲ್ಯಾಂಡ್‌ನ ಹೆಸರಾಂತ ನಾಟಕಕಾರ ಡಾ.ಮೈ.ಶ್ರೀ.ನಟರಾಜ ಹೇಳುತ್ತಾರೆ :‘ಅಲಮೇಲು ಅವರ ನಾಟಕಗಳೆಂದರೆ ಥಟ್ಟನೆ ಮನಸ್ಸಿಗೆ ಬರುವ ಪ್ರತಿಕ್ರಿಯೆ ‘ನಗು’. ತಿಳಿಹಾಸ್ಯದ ಕಡಲಿನಲ್ಲಿ ಪ್ರೇಕ್ಷಕರನ್ನು ತೇಲಿಸುವ ಮೋಡಿ ಅವರ ನಾಟಕಗಳಲ್ಲಿದೆ. ಅವರ ‘ಹೈ ಟೆಕ್‌ ಹಯವದನಾಚಾರ್ಯ’ರನ್ನು ‘ಕಾವೇರಿ’ಯ ಕಲಾವಿದರು ಪ್ರದರ್ಶಿಸಿದ್ದನ್ನೂ , ಅದನ್ನೇ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದವರು ಹ್ಯೂಸ್ಟನ್‌ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶಿಸಿದ್ದನ್ನೂ ಕಂಡು ನಕ್ಕು ನಲಿದಿದ್ದೇನೆ. ಇತ್ತೀಚೆಗೆ ಡಿಸೆಂಬರ್‌ನಲ್ಲಿ ‘ತ್ರಿವೇಣಿ’ಯ ರಜತೋತ್ಸವದಲ್ಲಿ ನ್ಯೂಜೆರ್ಸಿಯಲ್ಲಿ ಅವರ ಇನ್ನೊಂದು ನಾಟಕ ‘ಸಾಮರಸ್ಯಕ್ಕೊಂದು ಸಲಹೆ’ಯನ್ನು ನೋಡುವ, ಸವಿಯುವ ಅವಕಾಶ ಸಿಕ್ಕಿತು. ಈ ಪ್ರಹಸನದಲ್ಲಿಯೂ ಸಹ ಅಲಮೇಲು ಅವರ ಹಾಸ್ಯಪ್ರವೃತ್ತಿಯನ್ನೂ ಕುಶಲ ಸಂಭಾಷಣೆಯ ಚುರುಕನ್ನೂ ಕಾಣುತ್ತೇವೆ!’

English summary
Meet : Kalaa Vatamse Alamelu Iyengar, multi facet talent spreading kannada and its rich culture in US. An article by Shikaripura Harihareshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X