ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ನಾಡರ ಆತ್ಮಕಥೆ : ಯಯಾತಿ ಹೊಗಳಿಕೆ ತೆಗಳಿಕೆ

By Prasad
|
Google Oneindia Kannada News

Girish Karnad's autobiography part 10
ಮುಂಬಯಿಯಿಂದ ಇಂಗ್ಲೆಂಡ್ ಪ್ರಯಾಣ ಮೂರು ವಾರದ್ದಾಗಿತ್ತು. ಅತ್ಯಂತ ಅಗ್ಗದ ಟಿಕೀಟು ಕೊಂಡದಿದ್ದರಿಂದ ಹಡಗದ ಒಡಲಲ್ಲಿ ಜೈಲುಖಾನೆಯಂತಿದ್ದ ಇಕ್ಕಟ್ಟಾದ ಕ್ಯಾಬಿನ್‌ನಲ್ಲಿ ನಾಲ್ಕು ಬರ್ಥ್‌ಗಳಲ್ಲಿ ಇವರ ಪಾಲಿಗೆ ಒಂದು ಬಂದಿತ್ತು. ಮಲಗುವಾಗ ಮಾತ್ರ ಸ್ಥಳಸಂಕೋಚದ ಅನುಭವವಾಗುತ್ತಿತ್ತು, ಆದರೆ ದಿನವಿಡೀ ಹಡಗದ ಡೆಕ್‌ನಲ್ಲಿ ಓಡಾಡಬಹುದಾಗಿತ್ತು.

ನಾಲ್ಕು ದಿನಗಳಾದ ಮೇಲೆ ಏಡನ್ ಬಂದರು ತಲುಪಿದರು. ಅದು ಮುಕ್ತ ಬಂದರು. ಅಲ್ಲಿ ವಸ್ತುಗಳು ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದವು. ತಮ್ಮ ಬರವಣಿಗೆ ಸಹಾಯಕವಾಗಬಹುದೆಂದು ಒಂದು ಓಲಿವೆಟಿ ಪೋರ್ಟೆಬಲ್ ಟೈಪ್‌ರೈಟರ್ ಕೊಂಡರು. ಟಂಕನವನ್ನು ಕಲಿಯದಿದ್ದುದರಿಂದ ಮೂರು ವರ್ಷ ಕಪಾಟಿನಲ್ಲಿಟ್ಟು ಹಾಗೆಯೇ ಮರಳಿ ತಂದರು. ಮರಳಿ ಬಂದಾಗ ವಸಂತ ದಾದಾನಿಗೆ ಅದು ಕೊಡುಗೆಯಾಯ್ತು. ಹಡಗದಲ್ಲಿ ಆಸ್ಟ್ರೇಲಿಯ ಮತ್ತು ನ್ಯೂಝಿಲಂಡ್‌ದಿಂದ ಬಂದ ರ‍್ಹೊಡ್ಸ್ ಸ್ಕಾಲರಗಳ ಭೆಟ್ಟಿಯಾಯಿತು. ಆಕ್ಸಫರ್ಡ್‌ನಲ್ಲಿ ಏನೇನು ಮಾಡಬೇಕೆಂಬ ಯೋಜನೆ ಹಾಕಿದರು. ನಂತರ ಅವರು ಒಮ್ಮೆ ಕೂಡ ಕಾಲೇಜಿನಲ್ಲಿ ಭೆಟ್ಟಿಯಾಗಲಿಲ್ಲವಂತೆ.

(ಗೋಕಾಕರು ತಮ್ಮ ಹಡಗದ ಪ್ರಯಾಣವನ್ನು ಬಹಳ ವಿವರವಾಗಿ ಬರೆದಿದ್ದಾರೆ ಎಂಬುದು ನನಗೆ ನೆನಪಾಗುತ್ತದೆ. ಹಡಗದ ಪ್ರವಾಸದಲ್ಲಿಯೇ ಅವರ ನವ್ಯ ಮಾದರಿಯ ಸಮುದ್ರಗೀತಗಳು ಜನ್ಮತಾಳಿದವು. ಅವರು ಬಳಸಿದ್ದು ಸ್ವಚ್ಛಂದ ಛಂದ. ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು ಎಂದು ಬರೆದಿದ್ದಾರೆ. ಗಿರೀಶ ಮರಳಿ ಬಂದಾಗ ಇಂಗ್ಲೆಂಡದ ಅನುಭವಗಳ ಬಗ್ಗೆ ಒಂದು ಪುಸ್ತಕ ಬರೆ ಎಂದು ನಾನು ಕೇಳಿದ್ದೆ. ಗೋಕಾಕರ ಪುಸ್ತಕ ಓದಿದ ಮೇಲೆ ಬರೆಯಬೇಕೆನಿಸುವುದಿಲ್ಲ ಎಂದಿದ್ದರು. ಗೋಕಾಕರು ತಮ್ಮ ಮಡದಿಗೆ ಬರೆದ ಪತ್ರಗಳ ರಾಶಿಯನ್ನು ಜಿ.ಬಿ.ಜೋಶಿಯವರು ಸಂಪಾದಿಸಿ ಮನೋಹರ ಗ್ರಂಥಮಾಲೆಯಿಂದ ಸಮುದ್ರದಾಚೆಯಿಂದ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದರು.)

ಜಿ.ಬಿ. ಅವರಿಂದ ಒಂದು ಭಾರತೀಯ ಏರ್-ಲೆಟರ್ ಬಂದಾಗ ಗಿರೀಶರಿಗೆ ಬಹಳ ಆನಂದವಾಯ್ತು. ಗೋಕಾಕರಂತೆ ಗಿರೀಶರೂ ಪತ್ರಗಳನ್ನು ಬರೆದರೆ ತಾವು ಅವುಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಬಹುದು ಎಂದು ಆಗ್ರಹಿಸಿದ್ದರು. (ಗಿರೀಶ ಆಗ ಬರೆಯಲಿಲ್ಲ. ಅವರ ಮದುವೆಯಾಗಿರಲಿಲ್ಲ. ಮದುವೆಯಾಗಿದ್ದರೆ ಬಯಯುತ್ತಿದ್ದರೇನೋ!). ಗೋಕಾಕರು ತಮ್ಮ ಪತ್ನಿ ಶಾರದಾ ಅವರಿಗೆ ಬರೆದ ಪತ್ರಗಳ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಬಳಿಯಲ್ಲಿದೆ. ಇದು ಅಪೂರ್ವ ಸಂಗ್ರಹ.

ಕಾಲೇಜು ಹಾಸ್ಟೆಲಿನಲ್ಲಿ ಗಿರೀಶರಿಗೆ ದೊರೆತ ಕೋಣೆ ವಿಶಾಲವಾಗಿತ್ತು. ಅಲ್ಲಿ ಒಬ್ಬ ಚಾರಕ (ಸ್ಕೌಟ್) ಇದ್ದ. ಬೆಳಿಗ್ಗೆ ಇವರು ಇನ್ನೂ ಗಾಢ ನಿದ್ರೆಯಲ್ಲಿರುವಾಗ ಎಬ್ಬಿಸಿದ. ಶುಭಪ್ರಭಾತ! ನಿಮ್ಮನ್ನು ಸಕ್ಕರೆ ನಿದ್ದೆಯಿಂದ ಎಚ್ಚರಿಸಿದ್ದಕ್ಕೆ ಕ್ಷಮೆ ಇರಲಿ ಎಂದ. ಇನ್ನು ಇಪ್ಪತ್ತು ನಿಮಿಷಗಳಲ್ಲಿ ಡೈನಿಂಗ್ ಹಾಲ್‌ನಲ್ಲಿರುವ ಬ್ರೆಕ್‌ಫಾಸ್ಟ್ ಮುಗಿಯುತ್ತದೆ ಎಂದು ಹೇಳಲು ಬಂದಿದ್ದ. ತನ್ನ ಹೆಸರು ಎಡ್ವರ್ಡ್ ಎಂದು ಹೇಳಿದ. ಪರಿಚಿತ ವ್ಯಕ್ತಿಯಂತೆ ಅವನು ಮಾತಾಡಿದ್ದರಿಂದ ಇಂಗ್ಲಡಿನಲ್ಲಿ ಏಕಾಕಿಯಾಗಿರುವ ಇವರಿಗೆ ಅದು ಒಂದು ಭರವಸೆ ನೀಡಿತ್ತು.

1458ರಲ್ಲಿ ಪ್ರಾರಂಭವಾದ ಮೊಡ್ಲಿನ್ ಕಾಲೇಜಿನ ಬಗ್ಗೆ ಬರೆಯುತ್ತಾರೆ. ಅದು ಆಕ್ಸಫರ್ಡಿನ ಶ್ರೀಮಂತ ಕಾಲೇಜುಗಳಲ್ಲಿ ಒಂದು ಆಗಿತ್ತಂತೆ. ಅಲ್ಲಿ ಇವರು ಪಾಲಕ-ಶಿಕ್ಷಕರಾಗಿರುವ(ಟ್ಯೂಟರ್) ಡೇವಿಡ್ ವರ್ಸ್‌ವಿಕ್ ಅವರನ್ನು ಕಂಡಾಗ ಅವರು ಹೇಳಿದ್ದರು. ಒಂದು ವಿಷಯ ತೆಗೆದುಕೊಂಡು ಎಮ್.ಫಿಲ್. ಮಾಡಿದರೆ ಇಲ್ಲಿ ಪ್ರಾಧ್ಯಾಪಕನಾಗಬಹುದು. ಆದರೆ ಎರಡು ವರ್ಷ ಲೈಬ್ರರಿಯಲ್ಲಿ ಪುಸ್ತಕದ ಹುಳುವಾಗಿ ಓದಬೇಕು. ಅದರ ಬದಲು ಪಿಪಿಇ(ಫಿಲಾಸಫಿ, ಪೊಲಿಟಿಕ್ಸ್, ಎಕಾನೊಮಿಕ್ಸ್) ಆರಿಸಿದರೆ ಎರಡು ವರ್ಷಗಳಲ್ಲಿ ಬಿ.ಎ. ಮುಗಿಸಬಹುದು. ಮೂರನೆಯ ವರ್ಷಕೂಡ ಸ್ಕಾಲರಶಿಪ್ ಇರುವುದರಿಂದ ಆಟ-ಪಾಟ, ಚರ್ಚೆ, ನಾಟಕ, ರಾಜಕೀಯ ಸಭೆ- ಅವುಗಳಲ್ಲಿ ಭಾಗವಹಿಸಬಹುದು ಎಂದು. ಗಿರೀಶ ಪಿಪಿಇ-ಗ್ರೂಪ್ ಆರಿಸಿದರು. ಅಲ್ಲಿಯ ಅಭ್ಯಾಸ ಕ್ರಮ ವಿಶಿಷ್ಟವಾಗಿತ್ತು. ವಿದ್ಯಾದಾನ ಮುಖ್ಯತಃ ಟ್ಯುಟೋರಿಯಲ್ ಮೂಲಕ ನಡೆಯುತ್ತದೆ. ಪ್ರತಿವಾರ ವಿದ್ಯಾರ್ಥಿ ಎರಡು ಪ್ರಬಂಧಗಳನ್ನು ಬರೆಯಬೇಕು. ಟ್ಯೂಟರನ ಜೊತೆ ಆ ಪ್ರಬಂಧಗಳನ್ನು ಚರ್ಚಿಸಬೇಕು. ಮುಂದಿನ ವಾರದ ಪ್ರಬಂಧ ನಿರ್ಧರಿಸಿ, ಟ್ಯೂಟರ್ ಸಂಬಧಪಟ್ಟ ಪುಸ್ತಕಗಳ ಪಟ್ಟಿಕೊಡುತ್ತಾನೆ. ಅವನ್ನು ಓದಿ ಮುಂದಿನ ಪ್ರಬಂಧ ತಯಾರಿಸಬೇಕು. ಇದು ಆಕ್ಸಫರ್ಡ್-ಕೆಂಬ್ರಿಜ್ ಅಭ್ಯಾಸ ಪದ್ಧತಿ.

ಮತ್ತೆ ಒಂದು ದಿನ ಕೀರ್ತಿನಾಥ ಕುರ್ತಕೋಟಿಯವರಿಂದ ಒಂದು ಏರ್-ಲೆಟರ್ ಬಂತು. 'ನಿನ್ನೆ ಜಿ.ಬಿ.ಜೋಶಿಯವರು ನೀನು ಬರೆದಿರುವ ಯಯಾತಿ ನಾಟಕದ ಬಗ್ಗೆ ಹೇಳಿದರು. ಅದು ನನ್ನ ಕುತೂಹಲ ಕೆರಳಿಸಿದೆ. ಅದನ್ನು ತರಿಸಿಕೊಡು, ಓದಿ ನೋಡುತ್ತೇನೆ' ಎಂದು ಬರೆದಿದ್ದರು. ಅವರು ಜೊತೆಗೆ ಬರೆದ ಟಿಪ್ಪಣಿ ಇವರನ್ನು ಗಾಬರಿಗೊಳಿಸಿತು. 'ಪುರಾಣ ಕತೆಗಳನ್ನು ತೆಗೆದುಕೊಂಡು ಅದರಲ್ಲಿ ಆಧುನಿಕವಾದ ಫ್ರಾಯಿಡನ ಮಾನಸಶಾಸ್ತ್ರದ ಮಸಾಲೆಯನ್ನು ತುರುಕುವ ಯುಜೀನ್ ಓನೀಲ್‌ನಂಥ ನಾಟಕಕಾರರ ಪ್ರಯತ್ನ ಅರ್ಥಹೀನವಾದದ್ದು' ಎಂದಿದ್ದರು. ಗಿರೀಶರು ಓನೀಲ್‌ನ ಮೌರ‍್ನಿಂಗ ಬಿಕಮ್ಸ್ ಎಲೆಕ್ಟ್ರಾ (Mourning Becomes Electra) ಎಂಬ ನಾಟಕವನ್ನು ನೋಡಿದ್ದರು. ಚೆನ್ನಾಗಿತ್ತು, ಅದು ಇವರನ್ನು ದಿಗ್‌ಭ್ರಾಂತಗೊಳಿಸಿತ್ತು. ಗಿರೀಶರು ಕೀರ್ತಿಯವರ ಎಚ್ಚರವನ್ನು ಲಕ್ಷ್ಯದಲ್ಲಿಟ್ಟುಕೊಂಡು ಯಯಾತಿ ನಾಟಕವನ್ನು ತಿದ್ದಿ ಬರೆದು ಧಾರವಾಡಕ್ಕೆ ಕಳಿಸಿದರು. ಕೀರ್ತಿ ಇಡಿಯ ನಾಟಕವನ್ನು ಓದಿ ಸಮಗ್ರವಾಗಿ ತಿದ್ದಿ ಮರಳಿ ಕಳಿಸಿದರು. ಜಿ.ಬಿ.ಅದನ್ನು ಮನೋಹರ ಗ್ರಂಥ ಮಾಲೆಯಲ್ಲಿ ಯಯಾತಿಯನ್ನು ಪ್ರಕಟಿಸಿದರು. ಅದಕ್ಕೆ ತುಂಬುಹೃದಯದ ಸ್ವಾಗತ ಬಂತು.

ಸಿ.ಹೆಚ್.ಪ್ರಹ್ಲಾದರಾಯರು ಮೈಸಿಂಡಿಯಾದಲ್ಲಿ(Mysidia) ಯಯಾತಿ ಕನ್ನಡದ ಶ್ರೇಷ್ಠ ಸಾಲಿನಲ್ಲಿ ನಿಲ್ಲುತ್ತದೆ ಎಂದು ಬರೆದರು. ಅಹೋಬಲ ಶಂಕರರು ಭಾರತಜ್ಯೋತಿಯಲ್ಲಿ ಬರೆಯುತ್ತ ಯಯಾತಿಯನ್ನು ಗ್ರೀಕ್ ದುರಂತ ನಾಟಕಗಳನ್ನು ನೆನಪಿಗೆ ತರುತ್ತದೆ ಎಂದು ಬರೆದರು. ಪ್ರಜಾವಾಣಿಯಲ್ಲಿ ಶ್ರೀರಂಗರು ಬರೆಯುತ್ತ, ಹೊಸ ದೃಷ್ಟಿ ಇದೆ ಎಂದರೂ ಅದರ ಜೊತೆಗೆ ನಾಟಕವೂ ಇದೆ ಎಂದು ಹೇಳಲಾಗದು ಎಂದು ಬೈದು ಬರೆದರು ಎಂಬುದನ್ನು ನೆನೆಯುತ್ತಾರೆ. (ನಂತರ ಶ್ರೀರಂಗರ ಕತ್ತಲೆ ಬೆಳಕು ನಾಟಕದ ಬಗ್ಗೆ ಗಿರೀಶರು ಅತ್ಯುತ್ತಮ ಲೇಖನವನ್ನು ಮನ್ವಂತರ ನಾಟಕ ವಿಶೇಷಾಂಕಕ್ಕೆ ಬರೆದರು. ಅವರ ಬಗ್ಗೆ ಗೌರವ ಕಡಿಮೆಯಾಗಿದ್ದಿಲ್ಲ ಎಂಬುದಕ್ಕೆ ಅವರ ಪ್ರಬಂಧ ಸಾಕ್ಷಿ-ಲೇ). ಯಯಾತಿಗೆ ಬಂದ ಪ್ರತಿಕ್ರಿಯೆಯ ತೀವ್ರತೆ ಅನಪೇಕ್ಷಿತವಾಗಿತ್ತು. ನನ್ನ ನಾಟಕ ಓದಿ ಉತ್ತೇಜಿತರಾಗುವ, ಕೋಪಿಸಿಕೊಳ್ಳುವ, ಬಯ್ಯುವ, ಹೊಗಳುವ ಜನರು ಕನ್ನಡದಲ್ಲಿ ಇದ್ದಾಗ, ನಾನು ಏಕೆ ಪರಭಾಷೆಯ ಮಣ್ಣಲ್ಲಿ ಬೇರು ಬಿಡಲು ಹವಣಿಸಬೇಕು? ಎಂದೆ. ಯಯಾತಿಯ ಪ್ರಕಟನೆಯಿಂದಾಗಿ ಭಾರತ ಬಿಟ್ಟು ವಿದೇಶದಲ್ಲಿ ನೆಲಸಬೇಕು ಎಂಬ ಯೋಚನೆ ನಿರರ್ಥಕ ಮಾತ್ರವಲ್ಲ ಆತ್ಮಘಾತುಕ ವಿಚಾರವೆಂದು ಮನದಟ್ಟಾಗಿ, ಅಭ್ಯಾಸ ಮುಗಿದೊಡನೆ ಭಾರತಕ್ಕೆ ಮರಳಲು ಗಿರೀಶ ನಿರ್ಧರಿಸಿದರು.

ಇಂಗ್ಲೆಂಡಿನ ಸಮಾಜ ವ್ಯವಸ್ಥೆಯ ಬಗ್ಗೆ ಬರೆಯುತ್ತಾರೆ. ಕಾರ್ಮಿಕ ವರ್ಗ, ಮೇಲು ವರ್ಗ, ಮಧ್ಯಮ ವರ್ಗಗಳ ಬಗ್ಗೆ ಬರೆಯುತ್ತಾರೆ. ಅವರು ಬಳಸುವ ಭಾಷೆಯ ಬಗ್ಗೆ ಬರೆಯುತ್ತಾರೆ. ಕೆಳವರ್ಗದವರು ಮಕ್ಕಳನ್ನು ಪಬ್ಲಿಕ್ ಸ್ಕೂಲುಗಳಿಗೆ ಸೇರಿಸಿದರೆ, ಸಿರಿವಂತರು ದುಬಾರಿಯಾದ ಪ್ರೈವೇಟ್ ಸ್ಕೂಲುಗಳಿಗೆ ಕಳಿಸುತ್ತಾರೆ ಎಂದೂ ಬರೆಯುತ್ತಾರೆ. ಬ್ರಿಟಿಷ್ ಪಬ್‌ಗಳ ಬಗ್ಗೆ ಬರೆಯುತ್ತಾರೆ. ಅಲ್ಲಿ ಬರುವ ಜನರ ಬಗ್ಗೆ, ಅಲ್ಲಿ ನಡೆವ ಚರ್ಚೆಗಳ ಬಗ್ಗೆ ಬರೆಯುತ್ತಾರೆ. ಮಾದಕ ಪೇಯ ಪಬ್‌ನ ಆಕರ್ಷಣೆ. ಆ ಕಾಲದಲ್ಲಿ ಸ್ವಾದಿಷ್ಟ ಆಹಾರ ರೆಸ್ಟಾರೆಂಟ್‌ಗಳಲ್ಲಿ ದೊರೆಯುತ್ತಿರಲಿಲ್ಲವೆಂದು ದೂರದ ಪಬ್‌ಗೆ ಹೋಗಬೇಕಾಗುತ್ತಿತ್ತಂತೆ. ಎರಡು ದಶಕಗಳ ನಂತರ 1984ರಲ್ಲಿ ಇವರು ಬ್ರಿಟನ್ ಸಂದರ್ಶಿಸಿದಾಗ, ಭಾರತೀಯ ಆಹಾರದ ಜೊತೆಗೆ ಸಮೋಸಾ, ಹಪ್ಪಳ ಕೂಡ ದೊರೆತದ್ದನ್ನು ಕಂಡರು.

English summary
Kannada laureate Dr. G.V. Kulkarni writes about Jnanpith awardee, Kannada playwrite Dr. Girish Karnad's autobiography 'Adadata Aayushya' in his column Jeevana Mattu Sahitya. Here is part 10. In this episode Karnad writes about his stay in England and appreciation for his drama Yayati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X