• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಹಾರ ಮತ್ತು ಆರೋಗ್ಯ:ಊಟ ಬಲ್ಲವನಿಗೆ ರೋಗವಿಲ್ಲ-4

By Staff
|
"ಮಧುಮೇಹಿಗಳಿಗೆ ಆರೋಗ್ಯಕರ ಆಹಾರ" ಎಂಬ ಪ್ರಬಂಧವನ್ನು ಡಾ.ಸುನೀತಾ ಜಗನ್ನಾಥ್ ಬರೆದಿದ್ದಾರೆ. ಮಧುಮೇಹ ಅರ್ಥಾತ್ ಸಕ್ಕರೆ ಕಾಯಿಲೆ ಸಾವಿರಾರು ವರ್ಷಗಳಿಂದ ಮನುಷ್ಯನನ್ನು ಬಾಧಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ರೋಗದಿಂದ ಬಳಲುವವರ ಸಂಖ್ಯೆ ಹೆಚ್ಚಾಗಲು ಕಾರಣ- ಬದಲಾಗುತ್ತಿರುವ ನಮ್ಮ ಜೀವನಶೈಲಿ, ಮಾನಸಿಕ ಒತ್ತಡ, ದೇಹಕ್ಕೆ ಅವಶ್ಯಕವಾಗಿರುವುದಕ್ಕಿಂತ ಹೆಚ್ಚಾಗಿ ಆಹಾರ ಸೇವಿಸುವುದು, ಪರಿಶ್ರಮವಿಲ್ಲದ ಕೆಲಸ, ಬಾಯಿಚಪಲ (ಫಾಸ್ಟ್‌ಫುಡ್, ಜಂಕ್‌ಫುಡ್) ಎನ್ನುತ್ತಾರೆ.

ಮಧುಮೇಹ ರೋಗಕ್ಕೆ ಮುಖ್ಯ ಕಾರಣಗಳನ್ನು ಪಟ್ಟಿಮಾಡುತ್ತಾರೆ: (1) ಆನುವಂಶೀಯತೆ (ತಂದೆ-ತಾಯಿಯಲ್ಲಿ ಯಾರಾದರೂ ಒಬ್ಬರಿಗೆ ಈ ಕಾಯಿಲೆ ಇದ್ದರೆ ಅದು ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚು.) (2) ಬೊಜ್ಜು (ವ್ಯಾಯಾಮರಹಿತ ಜೀವನ, ಸೋಮಾರಿತನದ ಫಲ) (3) ಒತ್ತಡ (ಮಾನಸಿಕ ಒತ್ತಡ, ಕ್ರೋಧ, ಚಿಂತೆ, ದ್ವೇಷ, ದುಃಖ ಇವುಗಳಿಂದ ಅಡ್ರಿನಾಲ್ ಗ್ರಂಥಿ ಉತ್ತೇಜಿತವಾಗಿ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುವ ಸಾಧ್ಯತೆ ಇದೆ.) (4) ದ್ವಿತೀಯ ವಿಧದ ಮಧುಮೇಹ (ಬೇರೆ ರೋಗಗಳ ಕಾರಣದಿಂದ ಮಧುಮೇಹ ಕಾಣಿಸಿಕೊಳ್ಳುತ್ತದೆ.)

ರೋಗ ಲಕ್ಷಣಗಳು: ಅತಿಯಾದ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ, ಹೆಚ್ಚಾದ ಹಸಿವು, ಕಾರಣವಿಲ್ಲದೆ ತೂಕ ಕಡಿಮೆಯಾಗುವುದು, ದೌರ್ಬಲ್ಯ, ಸುಸ್ತು. (ಎಚ್ಚರಿಕೆ: ಅನುವಂಶೀಯ ಸಾಧ್ಯತೆ ಇರುವವರು, 45-45 ವರ್ಷ ಆದವರು, ವರ್ಷಕ್ಕೆ ಒಂದು ಸಾರಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ಬೇಗ ಗುರುತಿಸಿದರೆ ವಾಸಿಮಾಡುವುದು ಸುಲಭ.)

ಮಧುಮೇಹ ಪೀಡಿತರು ಸೇವಿಸಬೇಕಾದ ಆಹಾರದ ವಿವರಗಳು ಲೇಖನದಲ್ಲಿವೆ: (ಪಥ್ಯಾಹಾರ ಸೇವಿಸಬೇಕು, ಅಪಥ್ಯ ಆಹಾರ ಬಿಡಬೇಕು, ತಾಜಾ ಹಣ್ಣು ತರಕಾರಿ ತಿನ್ನಬೇಕು, ನಾರಿನ ಅಂಶವುಳ್ಳ ಆಹಾರ ಸಕ್ಕರೆ ನಿಯಂತ್ರಿಸುವಲ್ಲಿ ಸಹಕಾರಿ.)

"ರೋಗಿಗಳಿಗೆ ಪಥ್ಯದ ಆಹಾರ" ಎಂಬ ಪ್ರಬಂಧವನ್ನು ಡಾ.ಸುಚಿತ್ರಾ ಆರ್ ಅವರು ಬರೆದಿದ್ದಾರೆ. ಪಥ್ಯ ಎಂದೊಡನೆ ಜನಸಾಮಾನ್ಯರಲ್ಲಿ ಕಾಯಿಲೆ ಬಂದಿರುವುದಕ್ಕಿಂತ ಹೆಚ್ಚು ವ್ಯಥೆ ಹಾಗೂ ಬೇಸರ ಉಂಟಾಗುತ್ತದೆ. ಆಯುರ್ವೇದ ವೈದ್ಯರೆಂದರೆ ಹೆಚ್ಚಿನ ಭಯ. ಏಕೆಂದರೆ ಅವರು ಪಥ್ಯವನ್ನು ಹೇಳುತ್ತಾರೆ. ಪಥ್ಯವೆಂದರೆ ನಮಗೆ ಇಷ್ಟವಾದ ಆಹಾರ ನಿಷಿದ್ಧ ಎಂದು ಅರ್ಥವಲ್ಲ, ಆರ್ಯುವೇದದ ದೃಷ್ಟಿಯಲ್ಲಿ ಪಥ್ಯಾಹಾರವೆಂದರೆ “ಕಾಯಿಲೆಗೆ ತಕ್ಕಂತೆ, ಯಾವ ಯಾವ ಪದಾರ್ಥಗಳನ್ನು ಬಳಸಲು ಸೂಚಿಸಲಾಗುತ್ತದೋ ಅವುಗಳನ್ನು ಉಪಯೋಗಿಸಿ ರುಚಿಕರವಾದ ಆಹಾರ ವ್ಯಂಜನಗಳನ್ನು ತಯಾರಿಸಿ ರೋಗಿಗಳು ಸೇವಿಸಬೇಕು" ಎಂದರ್ಥ. ಪಥ್ಯಾಹಾರ ಹೇಗೆ ರುಚಿಕರಮಾಡಿ ಸೇವಿಸಬೇಕು ಎಂಬ ವಿಧಾನ ಹಾಗೂ ವಿವರಗಳು ಇಲ್ಲಿವೆ.

"ಆರೋಗ್ಯಕರ ಅಡುಗೆ" ಎಂಬ ಪ್ರಬಂಧವನ್ನು ಶ್ರೀಮತಿ ವನಜಾಕ್ಷಿ ಶರಣಪ್ಪ ಅವರು ಬರೆದಿದ್ದಾರೆ. ಹೆಸರುಬೇಳೆ ಇಡ್ಲಿ, ಗೋದಿ ಕಡುಬು, ರಾಗಿ, ಮೆಂಥ್ಯ ರೊಟ್ಟಿ, ಗೋದಿ ಪಾಯಸ, ಮಾವಿನ ಹಣ್ಣಿನ ಶಿರಾ, ರಾಗಿ ಮತ್ತು ಆಲೂಗಡ್ಡೆ ದೋಸೆ, ಅಣಬೆ ಪಲಾವ್, ಮಿಶ್ರ ಹಣ್ಣುಗಳ ಸಲಾಡ್ ಮೊದಲಾದವುಗಳನ್ನು ತಯಾರಿಸುವ ವಿಧಾನದ ಬಗ್ಗೆ ಬರೆದಿದ್ದಾರೆ.

"ವೃದ್ಧಾಪ್ಯದ ಆಹಾರ" ಎಂಬ ಪ್ರಬಂಧವನ್ನು ಡಾ. ಪುಷ್ಪಾ ಬಸವರಾಜು ಬರೆದಿದ್ದಾರೆ. ಸಾಮಾನ್ಯವಾಗಿ ರಕ್ತದ ಏರೊತ್ತಡ (ಹೈಬಿಪಿ), ಸಕ್ಕರೆ ಕಾಯಿಲೆ, ಹೃದಯರೋಗ, ಕೀಲುನೋವು, ಬೊಜ್ಜು, ಖಿನ್ನತೆ (ಡಿಪ್ರೆಶನ್), ನ್ಯೂನಪೋಷಣೆ, ಶ್ವಾಸಕೋಶದ ಸೋಂಕು, ಕಣ್ಣಿನ ಪೊರೆ ಮುಂತಾದವುಗಳನ್ನು ವೃದ್ಧರಲ್ಲಿ ಕಾಣುತ್ತೇವೆ. ಕಾಯಿಲೆ ನಮ್ಮ ಕೈಯಲ್ಲಿ ಇರಲಿಕ್ಕಿಲ್ಲ, ಆದರೆ ಆಹಾರ ಸೇವನೆ ನಮ್ಮ ಕೈಯಲ್ಲಿದೆ. "ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬ ಗಾದೆ ಇದೆ.

ಊಟ ಹಾಗು ಮಾತಿನ ಮೇಲೆ ನಮ್ಮ ನಿಯಂತ್ರಣ ಸಾಧ್ಯ ಎಂಬ ಪರಿಜ್ಞಾನ ಹೆಚ್ಚಿನ ಜನರಿಗೆ ಇರುವುದಿಲ್ಲ. ವೃದ್ಧರು ನಿಯಮಿತ ವೇಳೆಗೆ ಆಹಾರ ಸೇವಿಸಬೇಕು. ಹಳಸಿದ, ತಂಗಳ ಪದಾರ್ಥಗಳನ್ನು ತಿನ್ನಬಾರದು. ಬಾಯಿಚಪಲಕ್ಕಾಗಿ ಎಣ್ಣೆಯ ತಿಂಡಿ, ಮಸಾಲೆ ಪದಾರ್ಥ ತಿನ್ನಬಾರದು. ಊಟದ ಮಧ್ಯೆ ನೀರು ಕುಡಿಯಬೇಕು. ಉಪ್ಪಿನ ಅಂಶ ಕಡಿಮೆಮಾಡಬೇಕು. ದಿನಕ್ಕೆ 6-8 ಲೋಟ ನೀರು ಕುಡಿಯಬೇಕು. ಮುಪ್ಪನ್ನು ಕೊಂಚಮಟ್ಟಿಗೆ ಮುಂದೂಡುವ ವಿಟಮಿನ್ "ಸಿ" ಇರುವ ಹುಳಿಹಣ್ಣು, ಸೊಪ್ಪು, ವಿಟಮಿನ್ "ಇ" ಇರುವ ಎಣ್ಣೆಕಾಳು, ಮೊಳಕೆಬಂದ ಕಾಳು, ಬಿಟಾ ಕೆರೋಟಿನ್ ಇರುವ ಹಸಿರು ಸೊಪ್ಪು, ತರಕಾರಿ, ಹಳದಿ ಬಣ್ಣದ ಹಣ್ಣುಗಳು (ಪಪ್ಪಾಯ, ಮಾವು, ಕಿತ್ತಳೆ), ಕ್ಯಾರೆಟ್ ಸೇವಿಸಬೇಕು. ಪಪ್ಪಾಯಿಯನ್ನು ಜೇನುಸೇರಿಸಿ ತಿಂದು ಹಾಲು ಕುಡಿದರೆ ವಯಸ್ಸನ್ನು ಮುಂದೂಡಬಹುದು. ಗೋಡಂಬಿ, ಒಣದ್ರಾಕ್ಷಿ, ಖರ್ಜೂರ, ಅಂಜೂರವನ್ನು ಜೀರ್ಣಶಕ್ತಿಗನುಗುಣವಾಗಿ ಬೆಳಿಗ್ಗೆ ತಿನ್ನಬೇಕು.

"ಮಾರಕ ಆಹಾರ ಪದಾರ್ಥಗಳು" - ಎಂಬ ಪ್ರಬಂಧವನ್ನು ಡಾ. ಸುಮಿತ್ರಾ ಆರ್ ಅವರು ಬರೆದಿದ್ದಾರೆ. ಬಿಳಿಸಕ್ಕರೆ ಎಲ್ಲರಿಗೂ ಇಷ್ಟ. ಇದು ಪಿಷ್ಠ (ಕಾರ್ಬೊಹೈಡ್ರೇಟ್) ಗುಂಪಿಗೆ ಸೇರುವ ಆಹಾರ. ಶಕ್ತಿಗೆ, ದೇಹದ ಎಲ್ಲ ಚಟುವಟಿಕೆಗಳಿಗೆ ಅವಶ್ಯವಾಗಿರುವುದು ಸಕ್ಕರೆ. ಇದಕ್ಕೆ ಬಿಳಿಯ ರೂಪುಕೊಡುವ ರಿಫೈನಿಂಗ್ ಕ್ರಿಯೆಯಿಂದ ಇದರಲ್ಲಿ ಲಾಭವಿರುವ ವಿಟಮಿನ್, ಖನಿಜ ಹಾಗೂ ನಾರಿನ ಅಂಶಗಳು ನಶಿಶಿ ಕೇವಲ ಕ್ಯಾಲೊರಿ ಮಾತ್ರ ನೀಡುವ ಸ್ಥಿತಿಯನ್ನು ತಲುಪುತ್ತದೆ. ಸಾಮಾನ್ಯವಾಗಿ ಆರೋಗ್ಯವಂತರು ದಿನಕ್ಕೆ 20 ಗ್ರಾಮಿನಷ್ಟು ಸಕ್ಕರೆ ಸೇವಿಸಬೇಕು. ವಿಟಮಿನ್ ಬಿ, ಸಿ ಹಾಗೂ ಖನಿಯುಕ್ತ ಕಬ್ಬಿನಹಾಲು ಒಳ್ಳೆಯದು. ಗ್ಲೂಕೋಸ್ ಹೆಚ್ಚಾಗಿರುವ ದ್ರಾಕ್ಷಿ ಒಳ್ಳೆಯದು. ಜೇನುತುಪ್ಪ ರಕ್ತವನ್ನು ಶುದ್ಧಗೊಳಿಸುತ್ತದೆ.

ಮೈದಾ ಹಿಟ್ಟಿನಲ್ಲಿ ವಿಟಮಿನ್, ಖನಿಜ ಹಾಗೂ ನಾರಿನ ಅಂಶ ನಶಿಸಿಹೋಗಿರುವುದರಿಂದ ಅವುಗಳಿಂದ ತಯಾರಾದ ಭಕ್ಷ್ಯಗಳಿಂದ ಮಲಬದ್ಧತೆ ಉಂಟಾಗುತ್ತದೆ. ಅತಿ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಅಂಶ ಹೆಚ್ಚಾಗುತ್ತದೆ. ಕರಿದ ಪದಾರ್ಥ ಸೇವಿಸುವುದರಿಂದ, ನಿಯಮಿತ ವ್ಯಾಯಾಮದ ಅಭಾವದಿಂದ ಕೊಬ್ಬಿನ ಅಂಶ ಹೃದಯಕ್ಕೆ ತೊಂದರೆಯನ್ನುಂಟು ಮಾಡುತ್ತದೆ. ಕಾಫಿಯ ಅಧಿಕ ಸೇವನೆ ಒಳ್ಳೆಯದಲ್ಲ. ಮೂತ್ರದ ಪ್ರಮಾಣ ಹೆಚ್ಚಿಸುತ್ತದೆ. ಹೊಟ್ಟೆಯಲ್ಲಿ ಉರಿ ಉಂಟುಮಾಡುತ್ತದೆ. ಅಲ್ಸರ್ ಕೆರಳಿಸುತ್ತದೆ. ಕಾಫಿಗೆ ಬದಲಾಗಿ ಕೊತ್ತಂಬರಿ ಕಾಫಿಯ ಬಳಕೆ ಒಳ್ಳೆಯದು. ಉಪ್ಪು ಇಲ್ಲದ ಆಹಾರ ಯಾರಿಗೂ ಸೇರುವುದಿಲ್ಲ. ಅತಿ ಸೇವನೆ ಒಳಿತಲ್ಲ. ಇದು ಬಿ.ಪಿ ಹೆಚ್ಚಿಸುತ್ತದೆ, ದೇಹದ ತೂಕ ಹೆಚ್ಚಿಸುತ್ತದೆ.

ಕೊಲೆಸ್ಟ್ರಾಲ್ ಎಂದರೇನು? ಎಲ್ಲರನ್ನೂ ಕಾಡುವ ಪ್ರಶ್ನೆ. ಇದು ಕೊಬ್ಬಿನ ಅಂಶವಲ್ಲ. ಮೃದುವಾದ, ಮೇಣದ ಹಾಗಿರುವ ಪದಾರ್ಥ. ಸ್ವಾಭಾವಿಕವಾಗಿ ಯಕೃತ್ ಇದನ್ನು ಬೇಕಾಗುವ ಪ್ರಮಾಣದಲ್ಲಿ ತಯಾರಿಸುತ್ತದೆ. ದೇಹದಲ್ಲಾಗುವ ಕೆಲವು ಕ್ರಿಯೆಗಳಿಗೆ ಇದು ಅವಶ್ಯಕ. ಇದರ ಅಂಶ ಹೆಚ್ಚಾದರೆ ತೊಂದರೆಯುಂಟಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳಲು: (1) ನಿಯಮಿತ ವ್ಯಾಯಾಮ (2) ವನಸ್ಪತಿ ತುಪ್ಪದ ಕಡಿಮೆ ಬಳಕೆ (3) ಟೀ, ಕಾಫಿ, ಚಾಕಲೇಟ್ ಸೇವನೆ ಕಡಿಮೆ ಮಾಡುವುದು (4) ಅಡಿಗೆಗೆ ಉಪಯೋಗಿಸುವ ಎಣ್ಣೆಯ ಬಗ್ಗೆ ಕಾಳಜಿ ಹಾಗೂ ಎಚ್ಚರ.

"ಆಹಾರ ಮತ್ತು ಆರೋಗ್ಯ" ಒಂಭತ್ತು ಡಾಕ್ಟರರು ಕಷ್ಟಪಟ್ಟು ತಯಾರಿಸಿದ ಉದ್ಬೋಧಕವಾದ, ಉಪಯುಕ್ತವಾದ ಪುಸ್ತಕ. ಇದನ್ನು ಸಂಪಾದಿಸಿದ, ಸಹಲೇಖಕಿಯರಿಂದ ಲೇಖನ ಬರೆಯಿಸಿದ ಶ್ರೇಯ ಡಾ. ವಸುಂಧರಾ ಭೂಪತಿಯವರಿಗೆ ಸಲ್ಲುತ್ತದೆ. ಈ ಉಪಯುಕ್ತ ಪುಸ್ತಕದ ಪ್ರತಿಗಳು ಮುಗಿದಿವೆ. ಪುಸ್ತಕ ಪ್ರಾಧಿಕಾರ ಇದರ ಮರುಮುದ್ರಣ ಮಾಡಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more