ಉಡುಪಿಯಲ್ಲಿ ಗಾಂಧಿ, ನೆಹರು, ರಾಜಾಜಿ ಜೊತೆ ಒಡನಾಟ

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಮಾಧವ ಕಾಮತ್‌ರ ತಂದೆ ಉಡುಪಿಗೆ ಪ್ರಮುಖರಾಗಿದ್ದರಿಂದ ಅವರೇ ರಾಷ್ಟ್ರನಾಯಕರಿಗೆ ವೇದಿಕೆ ಕಲ್ಪಿಸಿಕೊಡುತ್ತಿದ್ದರು. ಆಗ ಗಾಂಧಿ, ನೆಹರು, ರಾಜಗೋಪಾಲಾಚಾರಿ ಅವರನ್ನು ಭೇಟಿಯಾದ ಸಂದರ್ಭವನ್ನು ಕಾಮತ್ ಅವರು ಮೆಲುಕುಹಾಕಿದ್ದಾರೆ. ಎಂ.ವಿ.ಕಾಮತ್‌ರ ಆತ್ಮಚರಿತ್ರೆ 'ಎ ರಿಪೋರ್ಟರ್ ಎಟ್ ಲಾರ್ಜ್' ಪುಸ್ತಕದ ತುಣುಕುಗಳು ಭಾಗ 6ರಲ್ಲಿ.

ಸಂಗ್ರಹಾನುವಾದ : ಡಾ| 'ಜೀವಿ' ಕುಲಕರ್ಣಿ, ಮುಂಬೈ

ಅಸಹಕಾರ ಚಳವಳಿಯ ಎರಡನೆಯ ಹಂತದ ತರುವಾಯ ರಾಜಕೀಯ ಚಟುವಟಿಕೆಯಲ್ಲಿ ಒಂದು ರೀತಿಯ ಸ್ತಬ್ಧತೆ ಆವರಿಸಿತ್ತು. ಆಗ ಗಾಂಧೀಜಿಯವರು ಭಾರತ ಪ್ರವಾಸ ಕೈಕೊಂಡರು. ಅವರು ಮೊದಲ ಸಲ ಉಡಿಪಿಗೆ ಬಂದರು. ಅದರ ಸವಿವರ ಚಿತ್ರಣ ಕಾಮತರು ನೀಡುತ್ತಾರೆ.

ಸ್ಕಿಂಡಿಯಾ ಸ್ಟೀಮ್‌ಶಿಪ್ ಸವಾರರಾಗಿ ಗಾಂಧೀಜಿ ಪ್ರಥಮ ಸಲ ಉಡುಪಿಗೆ ಬಂದರು. ಇದು ಅವರ ಕೊನೆಯ ಪ್ರವಾಸವೂ ಆಗಿತ್ತು. ಗಾಂಧೀಜಿ ಬಂದ ಸ್ಟೀಮರ್ ಕೆಲ ಮೈಲು ದೂರದಲ್ಲಿ ಸಮುದ್ರದಲ್ಲಿ ನಿಂತಿತ್ತು. ಜನರಲ್ಲಿ ಅವರನ್ನು ಕಾಣುವ ಕೌತುಕ ಎಷ್ಟು ಇತ್ತೆಂದರೆ ಸಹಸ್ರಾರು ಜನರು ಸ್ಥಳೀಯ ಬೋಟ್ ಏರಿ ಗಾಂಧೀಜಿಯವರನ್ನು ಕಾಣಲು ಹೋದರು. ಗಾಂಧೀಜಿಯವರು ಹರಿಜನ್ ಫಂಡ್' ಸಂಗ್ರಹಿಸುವ ಉದ್ದೇಶದಿಂದ ಪ್ರವಾಸ ಕೈಕೊಂಡಿದ್ದರು. ಸಭೆಯಲ್ಲಿ ಜನರು ಗಾಂಧೀಜಿಯವರೆಡೆಗೆ ಬಂದು, ಅವರ ಪಾದಸ್ಪರ್ಶ ಮಾಡಿ, ವಿವಿಧ ಬಗೆಯ ಕಾಣಿಕೆ ಸಲ್ಲಿಸುತ್ತಿದ್ದರು. ಗಾಂಧೀಜಿ ಕೇಳಿದ್ದನ್ನೆಲ್ಲ ಕೊಡಲು ಜನರು ಸಿದ್ಧರಾಗಿದ್ದರು. ಅವರನ್ನು ಗೌರವಿಸಲು ಮುಂದೆ ಬರುವವರೆಲ್ಲ ಮದ್ಯಪಾನ ಬಿಡಬೇಕು ಎಂಬುದು ಕಡ್ಡಾಯವಾಗಿತ್ತು. ಜನರು ಇದಕ್ಕೆ ಸಿದ್ಧರಾಗಿದ್ದರು. ಕಾಮತರ ತಂದೆ ಊರಿನ ಪ್ರಮುಖರಾಗಿದ್ದರಿಂದ ಗಾಂಧೀಜಿಯವರ ಸಭೆಯನ್ನು ಅವರೇ ಸಂಯೋಜಿಸಿದ್ದರು, ಅವರೂ ವ್ಯಾಸಪೀಠದ ಮೇಲೆ ಇದ್ದರು. ಜನರು ಸಾಲಾಗಿ ಬಂದು ಗಾಂಧೀಜಿಯವರ ಪಾದಸ್ಪರ್ಶಮಾಡಿ, ಕಾಣಿಕೆ ಸಲ್ಲಿಸಿ ತೆರಳುತ್ತಿದ್ದರು.

ಸ್ಥಳೀಯ ಕಾಂಗ್ರೆಸ್ ಮುಖಂಡರ ಬಾಲಿಕೆಯೊಬ್ಬಳು ಬಿಳಿಯ ಫ್ರಾಕ್ ಧರಿಸಿ ಮುಂದೆ ಬಂದಳು. ಗಾಂಧೀಜಿಯವರ ಪಾದಸ್ಪರ್ಶಮಾಡಿ ಅವಳು ತನ್ನ ಕೈಯಲ್ಲಿರುವ ಬಂಗಾರದ ಬಳೆಗಳನ್ನು ತೆಗೆದು ಗಾಂಧೀಜಿಯವರಿಗೆ ನೀಡಿದಳು. ಗಾಂಧೀಜಿಯವರು ಅವಳೆಡೆಗೆ ನೋಡಿ ತುಂಟ ನಗೆ ಬೀರುತ್ತ, ಮಗಳೇ, ನಿನ್ನ ಕೊರಳಲ್ಲಿ ಚಿನ್ನದ ಸರ ಇದೆಯಲ್ಲಿ ಅದನ್ನು ನೀನು ಕೊಡುವುದಿಲ್ಲವೇ?'' ಎಂದು ಕೇಳಿದರು. ಅವಳು ಎರಡನೆಯ ವಿಚಾರ ಮಾಡದೆಯೇ, ಕೊರಳ ಸರವನ್ನು ತೆಗೆದು ಗಾಂಧೀಜಿಯವರಿಗೆ ಕೊಟ್ಟಳು. ಗಾಂಧೀಜಿಯವರ ದೃಷ್ಟಿ ಅವಳ ಕಿವಿಗಳೆಡೆ ಹರಿಯಿತು. ನಿನ್ನ ಕಿವಿಯಲ್ಲಿ ಸುಂದರವಾದ ಓಲೆಗಳಿವೆ. ಅವನ್ನು ಕೊಡುವದಿಲ್ಲವೇ?'' ಎಂದರು. ಆ ಹುಡುಗಿ ಅವನ್ನೂ ಬಿಚ್ಚಿ ಕೊಟ್ಟುಬಿಟ್ಟಳು. ಗಾಂಧೀಜಿ ಕೇಳಿದರು, ನಿನ್ನ ಒಡವೆಗಳನ್ನೆಲ್ಲಾ ಕೊಡಲು ನಿನ್ನ ತಂದೆತಾಯಿ ಹೇಳಿದ್ದಾರೆಯೇ?'' ಎಂದು. ಆ ಹುಡುಗಿ ಉತ್ತರಿಸಿದಳು, ಇಲ್ಲ, ಬರಿ ಕೈಬಳೆ ಕೊಡಲು ಹೇಳಿದ್ದರು.'' ಎಂದು. ಅಗ ಗಾಂಧೀಜಿ, ನಿನ್ನ ಹಾರ ಮತ್ತು ಕಿವಿಯೋಲೆ ನಿನಗೆ ಮರಳಿ ಕೊಡುವೆ. ಆದರೆ ನೀನು ನನಗೆ ಒಂದು ವಚನ ಕೊಡಬೇಕು. ಭಾರತ ಬಡ ದೇಶ. ಇಲ್ಲಿಯ ಅಸಂಖ್ಯ ಜನರಿಗೆ ಒಂದು ಹೊತ್ತು ಊಟಮಾಡಲೂ ಸಾಧ್ಯವಾಗುತ್ತಿಲ್ಲ. ಅದರ ನೆನಪು ನಿನಗೆ ಇರಬೇಕು. ಅದಕ್ಕಾಗಿ ನೀನು ಜೀವನದಲ್ಲಿ ಎಂದೂ ಆಭರಣ ತೊಡುವುದಿಲ್ಲ ಎಂದು ನನಗೆ ವಚನ ಕೊಡಬೇಕು. '' ಆ ಹುಡುಗಿ ಧೈರ್ಯದಿಂದ ಸರಿ' ಎಂದು ಉತ್ತರಿಸಿದಳು. ಅವಳೇ ಮುಂದೆ ಸ್ತ್ರೀರೋಗತಜ್ಞ ಡಾಕ್ಟರಳಾದಳು. ಪಾಂಡೀಚೇರಿಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಕೂಡ ಆದಳು.

ಆ ಹುಡುಗಿಯೊಡನೆ ಮಾತಾಡಿದ ಮೇಲೆ ಗಾಂಧೀಜಿಯವರು ಆ ಬಂಗಾರದ ಬಳೆಗಳನ್ನು ಹರಾಜುಮಾಡಲು ಕಾಮತರ ತಂದೆಯವರಿಗೆ ಹೇಳುವುದರ ಬದಲಾಗಿ ತಾವೇ ಹರಾಜು ಮಾಡಲು ಎದ್ದು ನಿಂತರಂತೆ. ಸಭಿಕರಲ್ಲಿ ರೋಮಾಂಚದ ವಿದ್ಯುತ್ ಸಂಚಾರವೇ ಆಯಿತು. ಆ ಹುಡುಗಿಯ ಜೊತೆ ಗಾಂಧೀಜಿಯವರು ನಡೆಸಿದ ಸಂಭಾಷಣೆ ಸಭಿಕರಿಗೆ ಕೇಳಿಸಿರಲಿಲ್ಲ. ಅತಿ ಹೆಚ್ಚು ಹಣ ಬಿಡ್' ಮಾಡಿದವರಿಗೆ ಬಳೆಗಳನ್ನು ಕೊಡಬೇಕಾಗಿತ್ತು. ಗಾಂಧೀಜಿಯವರಿಗೆ ಅಸಮಾಧಾನ. ನಾನು ಇಷ್ಟು ಕಷ್ಟಪಟ್ಟು ಹರಾಜು ಮಾಡಿದ್ದಕ್ಕೆ ನೀವು ಕೊಡುವ ಬೆಲೆ ಇಷ್ಟೇನಾ?'' ಎಂದರು ಗಾಂಧೀಜಿ. ಈ ಮಾತು ಕಾಮತರ ತಂದೆಯವರಿಗೆ ಸಹಿಸಲು ಆಗಲಿಲ್ಲ. ಗಾಂಧೀಜಿಯವರ ಕೈಯಿಂದ ಬಳೆಗಳನ್ನು ತೆಗೆದುಕೊಂಡು ಅವರೇ ಹರಾಜು ಮಾಡಲು ಮುಂದಾದರು. ಉಡುಪಿವಾಸಿ ಬಂಧುಗಳೇ, ಮಹಾತ್ಮಾಜಿಯವರು ಕೇಳಿದ್ದಕ್ಕೆ ನೀವು ಇಷ್ಟು ಅಲ್ಪ ಬೆಲೆ ಕೊಡುತ್ತೀರಾ? ಎಂದು ಕೇಳುತ್ತಿದ್ದಾರೆ. ಯಾರಾದರೂ ಮುಂದೆ ಬಂದು ಹೆಚ್ಚಿನ ಹಣ ಕೊಡಬಾರದೇ?'' ಕಾಮತರ ತಂದೆಯವರ ಅಭಿಮಾನಿಗಳು ಬಹಳ ಇದ್ದರು. ಒಬ್ಬರು ಮುಂದೆ ಬಂದರು. ಇದಕ್ಕಿಂತ ಹೆಚ್ಚಿನ ಬೆಲೆ ಯಾರೂ ಯಾವ ಕಾಲಕ್ಕೂ ಕೊಡಲು ಸಾಧ್ಯವಿಲ್ಲದಷ್ಟು ಬೆಲೆ ಕೊಟ್ಟಿದ್ದರು. ಕಾಮತರ ತಂದೆ ಗಾಂಧೀಜಿಯವರಿಗೆ ನುಡಿದರು, ನೋಡಿ ಮಹಾತ್ಮಾಜೀ, ನಿಮಗೆ ಹೆಚ್ಚಿನ ಬೆಲೆ ದೊರೆಯಿತಲ್ಲವೇ?'' ಆಗ ಮಹಾತ್ಮಾಜಿ, ನಾನೊಬ್ಬ ದೊಡ್ಡ ಬನಿಯಾ ಎಂದು ತಿಳಿದಿದ್ದೆ. ನೀನು ನನಗಿಂತ ದೊಡ್ಡ ಬನಿಯಾ ಆಗಿರುವೆಯಲ್ಲ!'' ಎಂಬ ಉದ್ಗಾರ ತೆಗೆದರಂತೆ.

ಜವಾಹರಲಾಲ ನೆಹರು ಅವರ ತಂದೆ ಮೋತೀಲಾಲರನ್ನು ಕಾಮತರು ನೆನೆಯುತ್ತಾರೆ. 1931ರಲ್ಲಿ ಮೋತೀಲಾಲರು ನಿಧನರಾದಾಗ ಉಡುಪಿಯಲ್ಲಿ ಒಂದು ಶಾಂತಯುತ ಮೆರವಣಿಗೆಯನ್ನು ಹೊರಡಿಸಲಾಗಿತ್ತಂತೆ. ಮುಂದೆ ಒಂದು ಆನೆಯಿತ್ತು. ಅದರ ಮೇಲೆ ಅಂಬಾರಿ. ಅದರಲ್ಲಿ ಮೋತೀಲಾಲರ ಪೋಟೋ ಹಿಡಿದುಕೊಂಡು ಒಬ್ಬ ಬಾಲಕ ಕುಳಿತಿದ್ದ. ಆ ಬಾಲಕ ಬೇರೆಯಾರಲ್ಲ ಮಾಧವ ಕಾಮತ. ಇವರು ಬೀಳಬಾರದೆಂದು ಮಾವುತ ಇವರ ಸೊಂಟಕ್ಕೆ ಕೈಹಾಕಿ ಹಿಡಿದುಕೊಂಡಿದ್ದನಂತೆ. ಇನ್ನೊಮ್ಮೆ ಅಂತಹ ಸಾಹಸ ಮಾಡಬಾರದೆಂದು ಕಾಮತರು ತೀರ್ಮಾನಿಸಿದರಂತೆ. ಕಾಮತರು ಪ್ಯಾರಿಸಿನಲ್ಲಿ ಟೈಮ್ಸ್ ಪತ್ರಿಕೆಯ ಪ್ರತಿನಿಧಿಯಾಗಿದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕಾಮತರ ಪ್ಯಾರಿಸ್‌ಗೆ ಭೇಟಿ ಕೊಟ್ಟಾಗ ಹಳೆಯ ಘಟನೆಯನ್ನು ಇಂದಿರಾಜಿಯವರಿಗೆ ಹೇಳಿದ್ದರಂತೆ.

1930ರಲ್ಲಿ ಇವರು ವಿದ್ಯಾರ್ಥಿಯಾಗಿದ್ದ ಮಂಗಳೂರಿನ ಸೇಂಟ್ ಎಲೋಶಿಯಸ್ ಕಾಲೇಜಿಗೆ ಮದ್ರಾಸ್ ಗವರ್ನರ್ ಭೇಟಿ ನೀಡಿದಾಗ, ಕಾಲೇಜಿನ ಆಡಳಿತಗಾರರು ಗಾಂಧಿ ಟೋಪಿ ಹಾಕದಿರಲು ವಿದ್ಯಾರ್ಥಿಗಳಿಗೆ ತಾಕೀತು ಮಾಡಿದ್ದರಂತೆ. ಅದು ಅಸಹಕಾರ ಚಳವಳಿ'ಯ (ಸಿವಿಲ್ ಡಿಸ್‌ಒಬೀಡಿಯನ್ಸ್) ಕಾಲ. ಈ ಆಂದೋಲನದಲ್ಲಿ ಹಿಂದು ಮಕ್ಕಳು ಭಾಗವಹಿಸುತ್ತಿದ್ದರು ಆದರೆ ಪ್ರೊಟೆಸ್ಟಂಟ್ ಕ್ರಿಶ್ಚನ್ ಮಕ್ಕಳು ಅದರಿಂದ ದೂರ ಇರುತ್ತಿದ್ದರಂತೆ. ದಿ ಕ್ರಿಶ್ಚನ್ ಇಂಪ್ಯಾಕ್ಟ್ ಇನ್ ಸೌಥ್ ಕೆನರಾ'' ಎಂಬ ಪುಸ್ತಕದಲ್ಲಿ ಕ್ರಾಂತಿ ಫಾರಿಯಾಸ್ ಎಂಬವಳು ಈ ವಿಷಯ ವಿವರವಾಗಿ ಬರೆದಿರುವಳೆಂದು ಕಾಮತರು ಬರೆಯುತ್ತಾರೆ. ಆದರೆ ಕೆಥೊಲಿಕ್ ಕ್ರಿಶ್ಚನ್ನರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುತ್ತಿದ್ದರಂತೆ. ಮಾರ್ಸೆಲ್ ಎ. ಎಂ. ಡಿಸೋಜಾ ಎಂಬ ಸೇಂಟ್ ಜೇವಿಯರ್ಸ್ ಶಾಲೆಯ ಹೆಡ್ ಮಾಸ್ಟರರು ಧೈರ್ಯದಿಂದ ಖಾದಿ ಬಟ್ಟೆ ತೊಡುತ್ತಿದ್ದರಂತೆ. ಅಷ್ಟೇ ಅಲ್ಲ ಚರಖಾದಿಂದ ನೂಲು ತೆಗೆಯುತ್ತಿದ್ದರಂತೆ. ಗಾಂಧೀ ಟೋಪಿ ಧರಿಸಿದ ಪ್ರಥಮ ಕೆಥೊಲಿಕ್ ಇವರಾಗಿದ್ದರಂತೆ. ಉಡುಪಿಯ ಜೋಕಿಂ ಆಳ್ವಾ ಅವರ ಪೂರ್ವಜರು ಬ್ರಾಹ್ಮಣರು (ಭಟ್ಟರು) ಆಗಿದ್ದರಂತೆ. ಇವರ ಸೊಸೆಯೇ ಮಾರ್ಗರೆಟ್ ಆಳ್ವಾ. ಜೋಕಿಂ ಆಳ್ವಾ ಉಡುಪಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ, ನಂತರ ಮುಂಬೈಯ ಸೇಂಟ್ ಜೇವಿಯರ್‍ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ರೆಬೆಲ್' (ಕ್ರಾಂತಿಕಾರಿ) ಎಂದೇ ಪ್ರಸಿದ್ಧರಾಗಿದ್ದರು. ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 1929ರಲ್ಲಿ ಇವರಿಗೆ ಎರಡು ವರ್ಷ ಕಾಲ ಕಠಿಣ ಜೈಲು ಶಿಕ್ಷೆಯೂ, ರೂ.300 ದಂಡವೂ ಆಗಿತ್ತು. ಉಡುಪಿಯಲ್ಲಿ ಅವರೊಬ್ಬ ಹಿರೋ' ಆಗಿದ್ದರು. ಉಡುಪಿಯಲ್ಲಿ ಕಾಮತರ ಹೆಡ್ ಮಾಸ್ಟರ್ ಆಗಿದ್ದ ರೂಕ್ ಫರ್ನಾಂಡಿಸ್ ಅವರ ಹೆಂಡತಿ ಲಿಯೋನಿಸ್ಸಾ ಮೇರಿ ಫರ್ನಾಂಡಿಸ್ ಗೌರವ ನ್ಯಾಯಾಧೀಶಳಾಗಿ 14 ವರ್ಷ ಕೆಲಸ ಮಾಡಿದಳಂತೆ. ಅವರ ಸುಪುತ್ರನೇ ಕಾಂಗ್ರೆಸ್ ಪುಢಾರಿ ಆಸ್ಕರ್ ಫರ್ನಾಂಡಿಸ್.

ಭಾರತದ ವಿವಿಧ ಪ್ರಾಂತಗಳಲ್ಲಿ ಇಲೆಕ್ಷನ್ ನಡೆಸಲು ಬ್ರಿಟಿಷ್ ಸರಕಾರ 1935ರಲ್ಲಿ ಒಂದು ಕಾಯಿದೆ ಪಾಸುಮಾಡಿತು. ಆಗ ಕಾಂಗ್ರೆಸ್‌ಗೆ ಗೆಲವು ತಂದವರೇ ನೆಹರು. ನೆಹರು ಅವರಿಗೆ ಆಗ 47ರ ಪ್ರಾಯ. ಅದಮ್ಯ ಉತ್ಸಾಹ ಅವರಲ್ಲಿತ್ತು. 130 ದಿನಗಳಲ್ಲಿ ಅವರು 50,000 ಮೈಲುಗಳ ಪ್ರವಾಸ ಮಾಡಿದ್ದರು. ಆಗ ಅವರು ಉಡುಪಿಗೆ ಬಂದಿದ್ದರು. ಅವರ ಭಾಷಣ ಕೇಳಲು ಎರಡು ಲಕ್ಷ ಜನರು ನೆರೆದಿದ್ದರಂತೆ. ನೆಹರು ಬಂದಾಗ ಅವರ ಸಭೆಯನ್ನು ಕಾಮತರ ತಂದೆ ಆಯೋಜಿಸಿದ್ದರಂತೆ. ನೆಹರು ಅವರು ಕಾಮತರ ಕಕ್ಕನ ಮನೆಯಲ್ಲಿ ತಂಗಿದ್ದರಂತೆ. ಕಾಮತ ಪರಿವಾರದವರೆಲ್ಲಾ ನೆಹರು ಅವರ ಸುತ್ತಲೂ ನೆರೆದರು. ಅವರೊಂದಿಗೆ ಮಾತನಾಡಿದರು. ಈ ಘಟನೆ ಆದ ಹತ್ತು ವರ್ಷಗಳ ನಂತರ ಕಾಮತರು ಕಲ್ಯಾಣದಿಂದ ಬಾಂಬೇ ವಿ.ಟಿ.ವರೆಗೆ ರೈಲಿನಲ್ಲಿ ನೆಹರು ಅವರೊಂದಿಗೆ ಪ್ರಯಾಣ ಮಾಡಿ ಅವರ ಸಂದರ್ಶನ ಪಡೆದು ಪತ್ರಿಕೆಯಲ್ಲಿ ಬರೆದಿದ್ದರಂತೆ. ಮಹಾಕವಿ ರವೀಂದ್ರನಾಥರು ನೆಹರು ಅವರನ್ನು ಋತುರಾಜ' ಎಂದು ಕರೆದಿದ್ದರಂತೆ. ಅವರು ಸ್ವಾಭಾವಿಕವಾಗಿ ಹೀರೋ' ಆಗಿದ್ದರಂತೆ. ಆ ಕಾಲದಲ್ಲಿ ಅವರಿಗೆ ಸಮಾನರು ಬೇರೆ ಯಾರೂ ಇರಲಿಲ್ಲ, ಇದ್ದರೆ ಸುಭಾಸಚಂದ್ರ ಒಬ್ಬರು ಅವರ ಎತ್ತರಕ್ಕೆ ಬರುತ್ತಿದ್ದರು ಎಂದು ಕಾಮತರು ಬರೆಯುತ್ತಾರೆ.

ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಆ ಕಾಲದಲ್ಲಿ ಉಡುಪಿ ಸಂದರ್ಶಿಸಿದ್ದರಂತೆ. ಆಗ ಉಡುಪಿ ಮದ್ರಾಸ್ ಪ್ರಾಂತ್ಯದಲ್ಲಿತ್ತು. ರಾಜಗೋಪಾಲಾಚಾರಿ ಮದ್ರಾಸ್‌ದ ಮುಖ್ಯಮಂತ್ರಿ ಆಗಲಿದ್ದರು. ಅವರು ಕಾಂಗ್ರೆಸ್ ಪುಢಾರಿಯಾಗಿ ಉಡುಪಿ ಸಂದರ್ಶಿಸುತ್ತಿದ್ದರು. ಕಾಂಗ್ರೆಸ್ ಕಾರ್ಯಕರ್ತರು ರಾಜಗೋಪಾಲಾಚಾರಿ ಅವರ ಗೌರವಾರ್ಥ ಒಂದು ಸಂತೋಷಕೂಟವನ್ನು ಆಯೋಜಿಸಿದ್ದರಂತೆ. ಆ ಸಭೆಯಲ್ಲಿ ತರುಣ ಕಾಮತರು ಕಾಂಗ್ರೆಸ್ ಸ್ವಯಂಸೇವಕರಾಗಿದ್ದರು. ಉಡುಪಿಯಲ್ಲಿದ್ದಾಗ ಅದು ಸಣ್ಣ ಊರಾದುದರಿಂದ ಹಿರಿಯ ವ್ಯಕ್ತಿಗಳನ್ನು ಸಮೀಪದಿಂದ ನೋಡುವ ಭಾಗ್ಯ ಲಭಿಸುತ್ತಿತ್ತು. ಕೆಲವು ವರ್ಷಗಳ ನಂತರ ರಾಜಾಜಿಯವರನ್ನು ಮುಂಬೈಯಲ್ಲಿ ಸಂದರ್ಶಿಸುವ ಭಾಗ್ಯ ಲಭಿಸಿತ್ತಂತೆ. ಆಗ ಮಾಟುಂಗಾದ ನಪೂ ಗಾರ್ಡನ್‌ನಲ್ಲಿ ಅವರ ಭಾಷಣವಿತ್ತಂತೆ. ಗುಜರಾತಿ ಪತ್ರಕರ್ತ ಹಾಗೂ ಮಿತ್ರ ಹರೀಂದ್ರ ದವೆ (ಜನ್ಮಭೂಮಿ ಪ್ರವಾಸಿ ಪತ್ರಿಕೆಯ ಸಂಪಾದಕ) ಅವರ ಬಗ್ಗೆ ಬರೆಯುತ್ತಾರೆ. ದವೆ ಗುಜರಾತಿನಲ್ಲಿ ಹುಟ್ಟಿಬೆಳೆದಿದ್ದರೂ ಮಹಾತ್ಮಾ ಗಾಂಧಿಯವರನ್ನು ಕಾಣ್ಣಾರೆ ನೋಡುವ ಭಾಗ್ಯ ಪಡೆದಿರಲಿಲ್ಲವಂತೆ. 1935ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಾಕ್ಷರಾಗಿ ಆಯ್ಕೆಗೊಂಡ ಡಾ| ಬಾಬು ರಾಜೇಂದ್ರ ಪ್ರಸಾದ ಅವರು ಉಡುಪಿಗೆ, ಅಂದರೆ ಮಣಿಪಾಲಕ್ಕೆ ಬಂದಿದ್ದರಂತೆ. ಅವರಿಗೆ ಅಸ್ತಮಾದ ಬಾಧೆಯಿತ್ತು. ಮಣಿಪಾಲದ ಸ್ಯಾನಿಟೋರಿಯಮ್‌ನಲ್ಲಿ ಕೆಲಕಾಲ ತಂಗಿದ್ದರಂತೆ. ಬೇಸಿಗೆಯ ಒಣ ಹವೆ ಅವರ ಚಿಕಿತ್ಸೆಗೆ ಹೆಚ್ಚಿನ ಅನುಕೂಲತೆ ಒದಗಿಸಿತ್ತಂತೆ.

ತಮ್ಮ ವಿಶಾಲವಾದ ಹತ್ತು ಕೋಣೆಗಳಿರುವ ಮನೆಯ ಸ್ಮೃತಿಗಳನ್ನು ದಾಖಲಿಸುತ್ತಾರೆ. ಪ್ರತಿಯೊಂದು ಕೋಣೆ ನೆನಪಿನ ಖಜಾನೆಯನ್ನೇ ತೆರೆಯುತ್ತಿತ್ತಂತೆ. ಜನನ, ಮರಣ, ಸಂತೋಷ ಕೂಟ, ಶೋಕ ಸಭೆ, ಉತ್ಸವಗಳು, ಕೆಲಸಲ ಸಂಗೀತ ಕಚೇರಿಗಳಿಗೂ ಅವರ ಮನೆ ತಾಣವಾಗಿತ್ತು ಎಂದು ನೆನೆಯುತ್ತಾರೆ. ಅಲ್ಲಿ ನಡೆದ ಮದುವೆ-ಮುಂಜಿಗಳಿಗೆ ನಿಶ್ಚಿತ ದಿನ ಗೊತ್ತಾಗಿರುತ್ತಿತ್ತು ಆದರೆ ಜನನ ಮರಣಗಳು ತಮ್ಮದೇ ಆದ ದಿನ ಗೊತ್ತುಮಾಡಿಕೊಂಡು ಬರುತ್ತಿದ್ದವು' ಎನ್ನುತ್ತಾರೆ. ಇವರಿಗೆ ನಾಲ್ಕುಜನ ಅಕ್ಕಂದಿರು. ಎಲ್ಲರೂ ಮದುವೆ ಇಲ್ಲೇ ಆಯಿತು. ಎಲ್ಲರು ಮಕ್ಕಳನ್ನು ಇಲ್ಲೇ ಹೆತ್ತರು ಆದ್ದರಿಂದ ಬಾಣಂತನ ಇಲ್ಲೇ ಜರುಗಿತು. ನಾಲ್ಕನೆಯೆ ಮಗಳ ಮದುವೆ ಬಹಳ ಭರ್ಜರಿಯಿಂದ ಆಯಿತಂತೆ.

ಮದುವೆ ಅಂದರೆ ಮನೆ ತುಂಬಿಬಿಡುತ್ತಿತ್ತು. ಅತಿಥಿಗಳು ಆ ಕಾಲದಲ್ಲಿ ಹೊಟೇಲಿನಲ್ಲಿ ಇಳಿಯುತ್ತಿದ್ದಿಲ್ಲ. ಮನೆಯ ಮುಂದೆ ದೊಡ್ಡ ಹಂದರ ಹಾಕುತ್ತಿದ್ದರು. ಮದುವೆ ಅಂದರೆ ಒಂದು ವಾರದ ಮದುವೆ. ಅತಿಥಿಗಳೆಲ್ಲ ಒಂದು ವಾರ ಮೊದಲೇ ಬಂದು ಬಿಡುತ್ತಿದ್ದರು. ಅತಿಥಿಗಳೆಲ್ಲ ಮನೆಗೆಲಸಗಳಲ್ಲಿ ಸಹಭಾಗಿಯಾಗುತ್ತಿದ್ದರು. ಅದು ಕಸಗೂಡಿಸುವುದಿರಲಿ, ಬಾವಿಯಿಂದ ನೀರು ಸೇದುವುದಿರಲಿ ಇಲ್ಲವೆ ತರಕಾರಿ ಹೆಚ್ಚುವುದಿರಲಿ - ಎಲ್ಲರೂ ಸ್ವಯಂಸ್ಫೂರ್ತಿಯಿಂದ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಕತೆ, ಉಪಕತೆ, ಜೋಕು. ನಲಿವು, ಗೆಲವು. ಅಲ್ಲಿ ಹಾಸ್ಯಕ್ಕೆ ಪ್ರಧಾನ ಪಾತ್ರ. ಒಂದೇ ಸಲ 50-60 ಜನ ಟೀ-ಖಾಫಿ, ತಿಂಡಿ, ಊಟಮಾಡಲು ಕೂಡುತ್ತಿದ್ದರು. ಇದೂ ಒಂದು ಸಂಭ್ರಮವೇ ಆಗಿತ್ತು. ಇಸ್ವಿ ಸನ್ 2000ದಲ್ಲಿ ಕಾಮತ ಮನೆತನದ ಒಬ್ಬ ಮೊಮ್ಮಗಳ ಮದುವೆಯಾಯಿತಂತೆ. ಮದುವೆ ಒಂದೇ ದಿನದಲ್ಲಿ ಮುಗಿದಿತ್ತು. ಸಂಬಂಧಿಕರು ಸಾವಿರಾರು ರೂಪಾಯಿ ವೆಚ್ಚ ಮಾಡಿ ವಿಮಾನದಿಂದ ಕೂಡ ಬಂದರು. ಹೆಚ್ಚಿನವರು ಕಾಣಿಕೆಯನ್ನು ಹಣದ ರೂಪದಲ್ಲಿ ಕೊಟ್ಟರು. 1920ರಿಂದ ಇಂದಿನವರೆಗೆ ನಡೆದ ಮದುವೆಗಳನ್ನು ನೆನೆಯುತ್ತಾರೆ. ಇಂದಿನ ಮದುವೆಗಳಲ್ಲಿ ನೋ ಪ್ರೆಸೆಂಟ್ಸ್ ಪ್ಲೀಜ್' ಎಂದು ಆಮಂತ್ರಣ ಪತ್ರಿಕೆಯ ಕೆಳಗೆ ಬರೆಯಲಾಗಿರುತ್ತದೆ. ಒಂದೇ ದಿನದಲ್ಲಿ ಮದುವೆ ಮುಗಿದು ಹೋಗುತ್ತದೆ. ಹಳೆಯ ಕಾಲದ ಮದುವೆಯ ವೈಭವ ಈಗ ಇಲ್ಲ ಎಂದು ಹಳೆಯ ದಿನಗಳನ್ನು ನೆನೆಯುತ್ತಾರೆ.

ಮನೆಯಲ್ಲಿ ಮೊದಲ ಸಾವಿನ ಘಟನೆಯನ್ನು ನೆನೆಯುತ್ತಾರೆ. ಆಗ ಇವರಿಗೆ 12 ವಯಸ್ಸು. ಅಕ್ಕನ ಮಗು ತೀರಿತ್ತು. ಇವರು ಶಾಲೆಯ ಬಯಲಲ್ಲಿ ಕ್ರಿಕೆಟ್ ಆಡುತ್ತಿದ್ದರು. ಮನೆಯ ಜವಾನ ಬಂದು ಅರ್ಜೆಂಟಾಗಿ ಮನೆಗೆ ಬರಲು ಕರೆದ. ಇವರು ಆಟ ಮುಗಿಸಿ ಬರುತ್ತೇನೆಂದರು. ಈಗಲೇ ಬರಬೇಕೆಂದು ಹೇಳಿದ. ಅವನ ಆಜ್ಞೆಯನ್ನು ಪಾಲಿಸಿ ಮನೆಗೆ ಬಂದರು. ಅಲ್ಲಿ ಎಲ್ಲ ಹೆಂಗಳೆಯರು ಅಳುತ್ತಿದ್ದರು. ಬಿಳಿಯ ಬಟ್ಟೆಯಲ್ಲಿ ಮಗುವನ್ನು ಸುತ್ತಿದ್ದರು. ಮಕ್ಕಳಿಗೆ ಅಗ್ನಿಸಂಸ್ಕಾರವಿರಲಿಲ್ಲ. ನೆಲದಲ್ಲಿ ಕುಣಿತೆಗೆದು ಹೂಳಲಾಗುತ್ತಿತ್ತು.

ಇವರ ಪ್ರೀತಿಯ ತಾಯಿಯು ತೀರಿಕೊಂಡ ಘಟನೆಯನ್ನು ಚಿತ್ತವೇದಕವಾಗಿ ಬಣ್ಣಿಸುತ್ತಾರೆ. ಈ ಘಟನೆ ನಡೆದದ್ದು 1980ರಲ್ಲಿ. ಆಗ ಇವರು ಟೈಮ್ಸ್ ಆಫ್ ಇಂಡಿಯಾ ಗ್ರುಪ್‌ನ ಇಲಸ್ಟ್ರೇಟೆಡ್ ವೀಕ್ಲಿ'ಯ ಸಂಪಾದಕರಾಗಿದ್ದರು. ತಾಯಿಗೆ ಸೀರಿಯಸ್ ಕಾಯಿಲೆ ಎಂದು ತಿಳಿದೊಡನೆ ಇವರು ಲಭ್ಯವಾದ ವಿಮಾನ ಹಿಡಿದು ಉಡುಪಿಗೆ ಬಂದರು. ಮನೆ ತಲುಪಿದಾಗ ಸಂಜೆಯಾಗಿತ್ತು. ತಾಯಿಯ ಬದಿಯಲ್ಲಿ ಅಕ್ಕಂದಿರು, ಅಣ್ಣಂದಿರು ಕೂತಿದ್ದರು. ತಾಯಿಯ ಪ್ರಜ್ಞೆ ತಪ್ಪಿತ್ತು. ಒಂದು ತಾಸಿನ ನಂತರ ಅವರು ಕಣ್ಣು ತೆರೆದರು. ಮಾಧವ ಅವರ ಕಿರಿಯ ಮಗ. ಅವರ ಮುದ್ದು ಮಗ ಕೂಡ. ಮಗನನ್ನು ನೋಡಿ ಕಣ್ಣರಳಿಸಿದರು. ಅವರ ಬಾಯಿಯಿಂದ ಒಂದು ಮಾತು ಬಂತು. ಮಗು ಊಟ ಮಾಡಿದೆಯಾ?' ಅವರು ಮರಣ ಶೈಯ್ಯೆಯ ಮೇಲೆ ಒರಗಿದಾಗ ಕೂಡ ಅವರ ಮಮತೆ ಉಕ್ಕಿ ಹರಿಯುತ್ತಿತ್ತು. ತಾಯಿಯ ಸ್ಥಿತಿ ಕಂಡು ಕಾಮತರಿಗೆ ಅತ್ತುಬಿಡಬೇಕೆನಿಸಿತು. ತಡೆದುಕೊಂಡರು. ತಾಯಿಯ ಕೈ ಹಿಡಿದು ಪಕ್ಕದಲ್ಲೇ ಕುಳಿತುಕೊಂಡರು. ತಾಯಿಯವರ ಎಚ್ಚರ ಮತ್ತೆ ತಪ್ಪಿತು. ಮರುದಿನ ಮುಂಜಾನೆ 9.30ಕ್ಕೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಕಾಮತರು ತಾಯಿಯ ಹಣೆಯನ್ನು ಚುಂಬಿಸಿದರು. ಅದೇ ವೇಳೆಗೆ ವೀಕ್ಲಿ' ಆಫೀಸಿನಿಂದ ಒಂದು ಫೋನ್ ಬಂತು. ಈಗ ನಿಮ್ಮ ತಾಯಿ ಹೇಗಿದ್ದಾರೆ?'' ಎಂದು ಇವರ ಸಹೋದ್ಯೋಗಿ ಕೇಳಿದರು. ಈಗ ತಾನೇ ಮೃತಳಾದಳು. ನೀವು ಫೋನ್ ಮಾಡಿದ್ದಕ್ಕೆ ಥ್ಯಾಂಕ್ಸ್.'' ಎನ್ನುತ್ತ ಫೋನ್ ಕೆಳಗಿಟ್ಟರು. ಕಾಮತರು ಮುಂಬೈಗೆ ಮರಳಿದಾಗ ಸಹೋದ್ಯೋಗಿಗಳು ಸಾಂತ್ವನಪರ ಮಾತಾಡಲು ಇವರ ಸುತ್ತು ನೆರೆದರು. ಆಗ ನಾನು ಪ್ರಥಮ ಸಲ ಅತ್ತುಬಿಟ್ಟೆ. ನಾನು ಅಗಲಿದ ತಾಯಿಗಾಗಿ ಅತ್ತೆ, ಮಿತ್ರರು ತೋರಿದ ಪ್ರೀತಿಗಾಗಿಯೂ ಅತ್ತೆ.'' ಎಂದು ಬರೆಯುತ್ತಾರೆ.

ಕಾಮತ್ ಸರಣಿಯ ಹಿಂದಿನ ಪುಟಗಳು

(ವಿ.ಸೂ.: ಶನಿವಾರ ಪ್ರಕಟವಾಗಬೇಕಿದ್ದ ಈ ಅಂಕಣ ಅನಿವಾರ್ಯ ಕಾರಣದಿಂದ ಸೋಮವಾರ ಪ್ರಕಟವಾಗುತ್ತಿದೆ - ಸಂಪಾದಕ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+