• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತಃಶಕ್ತಿಯ ಅಕ್ಷಯ ಆಗರವೇ ಪ್ರಾರ್ಥನೆಯಲ್ಲಿದೆ

By Staff
|

The power of worshipವ್ಯಾವಹಾರಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಗುದ್ದು ಜಾಸ್ತಿಯಾದರೆ, ಅಧ್ಯಾತ್ಮಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಮದ್ದು ಜಾಸ್ತಿ, ಅಂದರೆ ದೇವರ ವಿಶೇಷ ಕೃಪೆ ಲಭ್ಯ. ನಾನು"ವಿನ ನಾಶಕ್ಕೆ ಪ್ರಾರ್ಥನೆಯೇ ಪ್ರಬಲವಾದ ಅಸ್ತ್ರ. ನನ್ನನಳಿಸು, ನಿನ್ನ ಮೆರೆಸು! ಬಂದು ನೆಲೆಸು, ಹೃದಯಪದ್ಮದಲದಲಿ!" ಎಂಬುದೇ ಸಾಧಕನ ತಾರಕಮಂತ್ರ, ಅದೇ ಪ್ರಾರ್ಥನೆಯ ಪರಾಕಾಷ್ಠೆ.

ಸಾರಸಂಗ್ರಹ: ಡಾ| 'ಜೀವಿ' ಕುಲಕರ್ಣಿ

ಅಧ್ಯಾಯ ಏಳು : ಪ್ರಾರ್ಥನೆಯಿಂದ ಪರಿವರ್ತನೆ

ದೇವರಲ್ಲಿ ಅಚಲ ಶ್ರದ್ಧೆ ನಿಜವಾಗಿಯೂ ಅದ್ಭುತಗಳನ್ನೇ ಮಾಡಬಲ್ಲದು. ಅಂಥಾ ಶ್ರದ್ಧಾವಂತನೇ ಸರ್ವಶಕ್ತನು. ಆ ಶ್ರದ್ಧೆ ಇಲ್ಲದಾತನೇ ನಿಶ್ಶಕ್ತನು. ಖಂಡಿತವಾಗಿಯೂ ಶ್ರದ್ಧೆಯೇ ಜೀವನ; ಅಶ್ರದ್ಧೆಯೇ ಮರಣ.'' - ಶ್ರೀ ರಾಮಕೃಷ್ಣ ಪರಮಹಂಸ

ನಮ್ಮ ಹೃದಯಾಂತರಾಳದ ದೈವತ್ವವನ್ನು ಜಾಗ್ರತಗೊಳಿಸುವುದೇ ಪ್ರಾರ್ಥನೆಯ ಉದ್ದೇಶ. ಪ್ರಾರ್ಥನೆಯ ಅದ್ಭುತ ಪ್ರಭಾವವನ್ನು ಉಂಡವರು ಅನ್ನವಿಲ್ಲದೆ ಅನೇಕ ದಿನ ಬದುಕಬಹುದು. ಆದರೆ ಪ್ರಾರ್ಥನೆ ಇಲ್ಲದೆ ಅರೆಗಳಿಗೆಯೂ ಬದುಕಿರಲಾರ. ಪ್ರಾರ್ಥನೆಯೇ ಆತನ ಬಾಳಿನ ಉಸಿರು.""-ಮಹಾತ್ಮಾ ಗಾಂಧಿ

ದೇವರಲ್ಲಿ ಮೊರೆ, ಇದುವೇ ಪ್ರಾರ್ಥನೆಯ ನಿಜವಾದ ಅಂತರಾರ್ಥ. ದೇವರು ದಯಾಮಯ. ಕರುಣಾಕರ. ಸರ್ವಕರ್ತ, ಸರ್ವಹರ್ತ. ನಮ್ಮ ಹೃದಯದಲ್ಲಿಯ ರಕ್ತವನ್ನು ಪಂಪ್ ಮಾಡುವವನು ದೇವರು. ಅವನಿಗೆ ಆಸ್ತಿಕ ನಾಸ್ತಿಕ ಎಂಬ ಭೇದಭಾವವಿಲ್ಲ. ದೇವರು ಶಾಂತಿ ಸಮಾಧಾನಗಳ ಬೀಡು, ಆನಂದದ ತವರು, ಸಂತೋಷದ ಸಾಗರ. ಆತನ ಕೃಪೆಗೆ ಇತಿಮಿತಿ ಇದೆಯೇ. ಆತನೊಲಿದರೆ ಕೊರಡು ಕೊನರುವುದು, ಬರಡು ಹಯನವಾಗುವುದು.

ದೇವರೆಡೆಗಿನ ಯಾತ್ರೆಯನ್ನೇ ಸಾಧನೆ ಎನ್ನುವುದು. ಒಂದೇ ಗುರಿಯೆಡೆಗೆ ಸಾಗುವ ವಿವಿಧ ಮಾರ್ಗಗಳಂತೆ ಈ ಸಾಧನೆಯಲ್ಲೂ ವೈವಿಧ್ಯಗಳಿವೆ. ಪ್ರಾರ್ಥನೆ ಅವುಗಳಲ್ಲೊಂದಷ್ಟೆ. ಇದು ಆಂತರ್ಯದ ಪರಿಶುದ್ಧತೆಗೆ ಸುಲಭವಾದ ಮಾರ್ಗ. ಜಪ, ಧ್ಯಾನ, ಭಜನೆ, ಸಾಷ್ಟಾಂಗನಮನ, ಸ್ತೋತ್ರಪಾರಾಯಣ, ವ್ರತ ನಿಯಮ ಪರಿಪಾಲನೆ, ಪೂಜೆ ಪುನಸ್ಕಾರಗಳೆಲ್ಲವೂ ಈ ಮಾರ್ಗದ ಕವಲುಗಳಷ್ಟೆ.

ಪರಿಶುದ್ಧತೆಗಾಗಿ ಪ್ರಾರ್ಥನೆಯ ಕ್ರಮ ಇಂದು ನಿನ್ನೆಯದಲ್ಲ. ವೈದಿಕಯುಗದಿಂದಲೂ ಪ್ರಚಲಿತವಾದದ್ದೆ. ಸರ್ವೇ ಜನಾಃ ಸುಖಿನೋ ಭವಂತು", ಬೃಹದಾರಣ್ಯಕೋಪನಿಷತ್ತಿನ ಅಧ್ಯಾರೋಹ ಮಂತ್ರ ಅಸತೋ ಮಾ ಸದ್ಗಮಯ, ತಮಸೋ ಮಾ ಜ್ಯೋತಿರ್ಗಮಯ, ಮೃತ್ಯೋರ್ಮಾ ಅಮೃತಂ ಗಮಯ", ಅಷ್ಟೇ ಏಕೆ ಧೀಶಕ್ತಿ ಬೆಳಗುವ ಗಾಯತ್ರಿ ಮಂತ್ರ ಇವೆಲ್ಲ ಇದಕ್ಕೆ ನಿದರ್ಶನಗಳು. ಆದರೆ ವಿಚಾರವಾದದ ಅಲೆ ಎದ್ದು ಪ್ರಾರ್ಥನಾಧರ್ಮಕ್ಕೆ ಗ್ರಹಣ ಹಿಡಿದಂತಾಯಿತು.

ಶ್ರೀ ರಾಮಕೃಷ್ಣ ಪರಮಹಂಸರ ಪದತಲದಲ್ಲಿ ಕುಳಿತು ಶ್ರದ್ಧೆಯಿಂದ ಅವರ ವಚನಾಮೃತವನ್ನು ಆಲಿಸಿ, ಅತಃಕರಣಪೂರ್ವಕವಾಗಿ ಅವರ ಸೇವೆಯನ್ನು ಮಾಡಿದ ಸ್ವಾಮಿ ಅದ್ಭುತಾನಂದರ ಜೀವನದಲ್ಲಿಯ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ.

ವಿಭೂತಿಬಾಬು ಒಂದು ದಿನ ಕಾಶಿಯಲ್ಲಿ ತಮ್ಮ ಹಿರಿಯರೊಡನೆ ಮಾತನಾಡುತ್ತ ಕಾಶಿಯ ವಿಶ್ವನಾಥ ದೇವಾಲಯದಲ್ಲಿ ಶಿವನ ಸಾನಿಧ್ಯವೆ, ಮತ್ತೇನು? ಎಲ್ಲ ಬರಿ ನಂಬಿಕೆಯ ಭ್ರಾಂತಿ!' ಎಂದು ಗೇಲಿ ಮಾಡಿದರು. ಸಂಜೆ ಅವರು ಅದ್ಭುತಾನಂದರನ್ನು ನೋಡಲು ಬರುತ್ತಿರುವಾಗಲೇ ಅದ್ಭುತಾನಂದರ ಧ್ವನಿ ಮೊಳಗಿತು, ಎಂಥ ಮೂರ್ಖತೆ! ವಿಶ್ವನಾಥನ ಸಾನ್ನಿಧ್ಯವನ್ನು ತಿಳಿಯಲು ನೀನು ಏನು ತಪಸ್ಸು, ಸಾಧನೆಗಳನ್ನು ಮಾಡಿರುವೆ? ಅದಕ್ಕೆ ಬೇಕಾದ ಪವಿತ್ರತೆ ವ್ಯಾಕುಲತೆಗಳು ನಿನ್ನಲ್ಲಿವೆಯೇ?'' ಎಂದು ದೃಢಸ್ವರದಲ್ಲಿ ಹೇಳಿದರಂತೆ. ವಿಭೂತಿಬಾಬುಗಳು ಚಕಿತರಾಗಿ ತಮ್ಮ ಸಂಶಯದ ಮಾತುಗಳಿಗಾಗಿ ಪಶ್ಚಾತ್ತಾಪಪಟ್ಟು ವಿನಮ್ರಭಾವದಿಂದ ಅದ್ಭುತಾನಂದರಿಗೆ ಪ್ರಣಾಮ ಮಾಡಿದಾಗ ಅವರು ಏನೂ ತಿಳಿಯದಂತೆ ನಕ್ಕು, ವಿಶ್ವನಾಥ ಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಿ ತೀರ್ಥಪ್ರಸಾದಗಳನ್ನು ತೆಗೆದುಕೊಂಡು ಬಾ' ಎಂದು ಹೇಳಿದರಂತೆ.

ದೇವರ ಕೃಪೆಯ ಬಗ್ಗೆ ಹಲಾವಾರು ಕತೆಗಳನ್ನು ಹೇಳುತ್ತಾರೆ. ಒಂದು ಹೀಗಿದೆ.

ಚಿತ್ತರಂಜನ ಮೊಹಂತಿ ಬಿ.ಎ.ಪದವೀಧರ. ವಾಸುದೇವಪುರ ಎಂಬಲ್ಲಿ ಅಧ್ಯಾಪಕ. 1968ರಲ್ಲಿ ಅವರಿಗೆ ಸನ್ನಿಪಾತ ಜ್ವರ ಬಂತು. ಕಣ್ಣು ಹೋದವು, ಕುರುಡರಾದರು. ಅಧ್ಯಾಪಕ ವೃತ್ತಿ ಬಿಡಬೇಕಾಗಿ ಬಂತು. ಚಿಕಿತ್ಸೆಗಾಗಿ, ಕುಟುಂಬ ರಕ್ಷಣೆಗಾಗಿ ಇದ್ದ ಸ್ವಲ್ಪ ಆಸ್ತಿ ಮಾರಿದರು. ದೂರದ ಓರಿಸ್ಸಾದ ಬಲನೋರ ಜಿಲ್ಲೆಯ ಒಂದು ಗ್ರಾಮ ಸೇರಿದರು. 1969ರಲ್ಲಿ, ಶ್ರಾವಣ ಮಾಸದಲ್ಲಿ, ಬಲಸೋರಿನ ಶ್ರೀ ಚಂದನೇಶ್ವರ ದೇವಾಲಯದಲ್ಲಿ ಆರು ದಿನ ಎಡೆಬಿಡದೆ ದೇವರನ್ನು ಪ್ರಾರ್ಥಿಸಿದರಂತೆ. ಕೊನೆಯ ದಿನ ರಾತ್ರಿ ಶಿವನು ಸ್ವಪ್ನದಲ್ಲಿ ಕಾಣಿಸಿಕೊಂಡು ಹೇಳಿದನಂತೆ, ನೀನು ಹಿಂದಿನ ಜನ್ಮದಲ್ಲಿ ತಂದೆತಾಯಿಗಳ ಏಕಮಾತ್ರ ಪುತ್ರನಾಗಿದ್ದೆ. ಒಂದು ದಿನ ನಿನ್ನ ತಾಯಿ ಹರಗೌರೀ ಹೂವು ಆರತಿ, ನೈವೇದ್ಯ ಸಿದ್ಧಮಾಡಿ ಇಡುತ್ತಿದ್ದಾಗ ನೀನು ಎಲ್ಲೋ ನೋಡುತ್ತ ಅವನ್ನು ತುಳಿದುಬಿಟ್ಟೆ. ನಿನ್ನ ತಾಯಿ ಕುಪಿತರಾಗಿ ಇಷ್ಟು ಬೆಳಕಿರುವಲ್ಲಿ ಇವನ್ನು ಕಾಣಲಾರದವ ನೀನು ಕುರುಡನಾಗು' ಎಂದಳು. ನಿನ್ನ ಪೂರ್ವಜನ್ಮದ ತಂದೆತಾಯಿ ಈಗ ಬಲಸೋರ ಜಿಲ್ಲೆಯ ಬಂಪದಾ ಎಂಬಲ್ಲಿ ಗಣನಾಥ ಬೇಹಾರ ಮತ್ತು ಲಕ್ಷ್ಮೀದೇವಿ ಎಂಬ ಹೆಸರಿನಿಂದ ಇದ್ದಾರೆ. ನೀನು ಶಿವರಾತ್ರಿಯ ದಿನ ಬಂಪದಾಕ್ಕೆ ಸಮೀಪದಲ್ಲಿರುವ ಜಾರೀಶ್ವರ ದೇವಸ್ಥಾನದ ಕೆರೆಯಲ್ಲಿ ಮಿಂದು, ಆ ಕೆರೆಯ ನೀರನ್ನೇ ತೆಗೆದುಕೊಂಡು ಗಣನಾಥ ಬೇಹಾರ ಮನೆಯಲ್ಲಿ ಹರಗೌರೀ ಪೂಜೆ ನಡೆಸು. ನಂತರ ಗಣನಾಥ ಬೇಹಾರ ಮತ್ತು ಲಕ್ಶ್ಮೀದೇವಿ ನಿನ್ನನ್ನು ಮುಟ್ಟಲಿ. ಒಡನೆಯೇ ನಿನ್ನ ದೃಷ್ಟಿ ಬರುವುದು.''

ಶಿವನ ಆದೇಶದಂತೆ ಮೋಹಂತಿ ನಡೆದುಕೊಂಡ. ಸ್ವಪ್ನದ ವಿಚಾರ ಇತರರಿಗೆ ತಿಳಿಸಿ ಅವರ ಸಹಾಯದಿಂದ ಶಿವರಾತ್ರಿಯ ದಿನ ಭಕ್ತಿಯಿಂದ ಪೂಜೆ ಮಾಡಿದ. ಆ ಪೂಜೆ ನೋಡಲು ಸಾವಿರಾರು ಜನ ಸೇರಿದ್ದರಂತೆ. ಪೂಜೆಯ ನಂತರ ಬೇಹಾರ ದಂಪತಿಗಳು ಮೋಹಂತಿಯನ್ನು ಮುಟ್ಟಿ ಹರಸಿದರು. ಎಲ್ಲರ ಸಮ್ಮುಖದಲ್ಲಿ ಅವನ ದೃಷ್ಟಿ ಮರಳಿ ಬಂತು. ನಂತರ ಅವರು ಅಲ್ಲಿ ಹರದೇವಿ ದೇವಾಲಯ ಕಟ್ಟಿಸಲು ನಿಶ್ಚಯಿಸಿದರು. ಅಲ್ಲಿ ಜನಜಾತ್ರೆ ನೆರೆಯಿತು. ಈ ಕತೆ ರಾಷ್ಟ್ರದೀಪ' ಎಂಬ ಓರಿಯಾ ಪತ್ರಿಕೆಯಲ್ಲಿ ಪ್ರಕಟವಾಯಿತು (21-3-1970).

ಕರ್ನಾಟಕದ ಸಂತಶ್ರೇಷ್ಠರಲ್ಲಿ ಒಬ್ಬರಾದ ಜಗನ್ನಾಥದಾಸರು ಮೊದಲು ಘನ ವಿದ್ವಾಂಸರಾಗಿದ್ದರು. ನಂತರ ಅವರು ವಿನಮ್ರ ಭಕ್ತರಾಗಿ ಪರಿವರ್ತನೆಗೊಂಡ ಕತೆ ರೋಚಕವಾಗಿದೆ. ಅವರು ಮೊದಲು ಶ್ರೀನಿವಾಸ ಪಂಡಿತರಾಗಿದ್ದರು. ಆ ಕಾಲದ ಭಾಗವತಾಗ್ರೇಸರರಾಗಿದ್ದ ಸಂತ ವಿಜಯದಾಸರನ್ನು ಅಲ್ಪರಾಗಿಕಂಡರು. ಅದರಿಂದ ಅವರಿಗೆ ರೋಗಬಾಧೆಯಾಯಿತು. ತಮ್ಮ ಹೀನ ಸ್ಥಿತಿಗೆ ಕಾರಣ ಅರಿತು ಸಂತರಲ್ಲಿ ಶರಣಾಗತರಾದರು. ವಿಜಯದಾಸರು ಅವರ ಮೊರೆ ಕೇಳಿ ಉಪಾಯಕ್ಕೆ ತಮ್ಮ ಶಿಷ್ಯ ಗೋಪಾಲದಾಸರ ಕಡೆಗೆ ಕಳಿಸಿದರು. ಗೋಪಾಲದಾಸರಿಂದ ದೀಕ್ಷೆ ಪಡೆದರು. ಅವರು ಕೊಟ್ಟ ಮಂತ್ರಿಸಿದ ರೊಟ್ಟಿಯನ್ನು ಸೇವಿಸಿ ತಮ್ಮ ರೋಗ ಕಳೆದುಕೊಂಡರು. ಗುರುವಿಗೆ ಶರಣರಾದರು. ಗುರುವಿನ ಅಪ್ಪಣೆಯಂತೆ ಪಂಢರಪುರಕ್ಕೆ ಹೋಗಿ ಪಾಂಡುರಮಗ ದರ್ಶನ ಪಡೆದರು. ಚಂದ್ರಭಾಗಾನದಿಯಲ್ಲಿ ಸ್ನಾನಮಾಡಿದಾಗ ಜಗನ್ನಾಥವಿಟ್ಠಲ" ಅಂಕಿತವುಳ್ಳ ಶಿಲೆಯನ್ನು ಪಡೆದರು. ಮುಂದೆ ಅದೇ ಅವರ ಅಂಕಿತವಾಯಿತು. (ಅವರಿಗೆ ಅಲ್ಪಾಯುಷ್ಯವಿತ್ತು. ಗುರು ಗೋಪಾಲದಾಸರು ಅವರಿಗೆ 40 ವರ್ಷ ತಮ್ಮ ಆಯುಷ್ಯ ನೀಡಿದರು. ಅದರಿಂದಾಗಿ ಹರಿಕಥಾಮೃತಸಾರ"ದಂತಹ ಮಹತ್ಕೃತಿಯನ್ನು ರಚಿಸಲು ಜಗನ್ನಾಥದಾಸರಿಗೆ ಸಾಧ್ಯವಾಯಿತು.)

ಗೊಂದಾವಳಿ ಕ್ಷೇತ್ರದಲ್ಲಿ ವಾಸವಾಗಿದ್ದ ಶ್ರೀ ಬ್ರಹ್ಮಚೈತನ್ಯ ಮಹಾರಾಜರಿಗೆ ಒಂದು ದಿನ ಸಂಸಾರಿಗಳಾದ ಭಕ್ತರು ಕೇಳಿದರು, ನಾವು ಸಂಸಾರಿಗಳು. ನಮಗೆ ಹೆಂಡತಿ, ಮಕ್ಕಳು, ಹೊಲಮನೆ, ದನಕರು- ಮುಂತಾದ ಅನೇಕ ಉಪಾಧಿಗಳಿವೆ. ತಾವು ಹೇಳುವಂತೆ ಶ್ರೀರಾಮನಾಮ ಸ್ಮರಣೆಯನ್ನು ಸತತವಾಗಿ ಮಾಡುವುದಾಗಲೀ, ಶ್ರೀರಾಮನನ್ನು ಏಕಾಗ್ರತೆಯಿಂದ ಧ್ಯಾನಿಸುವುದಾಗಲೀ, ಕೊನೆಗೆ ಸ್ವಲ್ಪಕಾಲ ಒಂದೇಚಿತ್ತದಿಂದ ಜಪಮಾಡುವುದಾಗಲೀ ನಮಗೆ ಸಾಧ್ಯವಿಲ್ಲವಾಗಿದೆ." ಎಂದು ಕೇಳುತ್ತ, ನಮಗೆ ಪರಮಾರ್ಥ ಪ್ರಾಪ್ತಿಗೆ ದಾರಿಯಾವುದು?" ಎಂದು ಕೇಳಿದಾಗ ಬ್ರಹ್ಮಚೈತನ್ಯರು ಉತ್ತರಿಸಿದರು. ನೀವು ಹೆಂಡತಿ ಮಕ್ಕಳನ್ನು ಕಂಡಾಗ, ಶ್ರೀ ರಾಮನು ಈ ಹೆಂಡತಿಮಕ್ಕಳನ್ನು ನನಗೆ ಪಾಲನೆ ಮಾಡುವುದಕ್ಕಾಗಿ ಕೊಟ್ಟಿದ್ದಾನೆ. ನಾನು ಅವರ ಬಗ್ಗೆ ಏನೇನು ಮಾಡಬೇಕಾದ ಕರ್ತವ್ಯವಿದೆಯೋ ಅದೆಲ್ಲವನ್ನು ಮಾಡಿ ಶ್ರೀರಾಮನಿಗೆ ಒಪ್ಪಿಸಬೇಕು ಎಂಬುದನ್ನು ಮನಸ್ಸಿಗೆ ತಂದುಕೊಳ್ಳಿ. ಇದರಿಂದ ನಿಮಗೆ ನಿಮ್ಮ ಸಂಸಾರದ ಯಾವುದೇ ವಸ್ತುವನ್ನು ನೋಡಿದಾಗ, ಇದು ಶ್ರೀರಾಮನದು. ನನಗೆ ಅವನು ಇದನ್ನು ನೋಡಿಕೊಳ್ಳಲು ಕೊಟ್ಟಿದ್ದಾನೆ. ನಾನು ನನ್ನ ಕರ್ತವ್ಯವನ್ನು ಆ ಬಗ್ಗೆ ಮಾಡಿ ಅವನಿಗೆ ಒಪ್ಪಿಸಬೇಕು." ಎಂಬ ಭಾವ ಹುಟ್ಟುವುದು. ಕೆಲವು ದಿನ ಪ್ರಯತ್ನಪೂರ್ವಕವಾಗಿ ಈ ಭಾವನೆಯನ್ನು ರೂಢಿಸಿಕೊಂಡರೆ ಕಾಲಾಂತರದಲ್ಲಿ ಅದು ರೂಢಿಯಾಗಿ, ನನ್ನದು" ಎಂಬ ಅಭಿಮಾನವು ಹೊರಟುಹೋಗುತ್ತದೆ. ಒಳಗೂ ಹೊರಗೂ ಶ್ರೀರಾಮ ಭಾವನೆ ವ್ಯಾಪಿಸಿಬಿಡುತ್ತದೆ. ಈ ಸಾಧನೆಯನ್ನು ಬಿಡದೆ ಆರು ತಿಂಗಳು ಮಾಡಿ ನೋಡಿರಿ. ಶ್ರೀರಾಮನ ಸಾಕ್ಷಾತ್ಕಾರವಾಗದಿದ್ದರೆ ಆಗ ನನ್ನಲ್ಲಿ ಬಂದು ಕೇಳಿರಿ." ಎಂದರಂತೆ.

ತೈಲಧಾರೆಯಂತೆ ಮನಸ್ಸು ಏಕಮುಖವಾಗಿ ದೇವರೆಡೆಗೆ ಹರಿಯುವುದೇ ಧ್ಯಾನ. ಜಪದಲ್ಲಿ ಏಕನಿಷ್ಠೆ, ಏಕಾಗ್ರತೆಗಳು ಏಕೀಭವಿಸಿದಾಗ ಅದು ಧ್ಯಾನದ ಮಟ್ಟಕ್ಕೇರುತ್ತದೆ. ಹೃದಯವು ಧ್ಯಾನಕ್ಕೆ ಪ್ರಶಸ್ಥವಾದ ಸ್ಥಾನ ಎಂಬುದು ಧ್ಯಾನಸಿದ್ಧರ ಅಭಿಮತ. ಆದರೆ ಈ ಹೃದಯ ಯಾವುದು? ನಮಗೆ ತ್ರಿವಿಧ ಹೃದಯಗಳಿವೆ. ಶರೀರದಾದ್ಯಂತ ರಕ್ತವನ್ನು ಪಂಪಿಸುವ ಕೆಲಸ ಮಾಡುತ್ತಿರುವ ಲಬ್, ಡಬ್" ಎನ್ನುವ ಹೃದಯ ಎಲ್ಲರಿಗೂ ಗೊತ್ತು. ಎರಡನೆಯ ಹೃದಯದ ಬಗ್ಗೆ ಮಾತಾಡುತ್ತೇವೆ. ಆತನ ಹೃದಯ ಶುದ್ಧವಾಗಿದೆ." ಅವನ ಮಾತು ಹೃದಯಾಂತರಾಳದಿಂದ ಬರುತ್ತದೆ, ಬುದ್ಧಿಯ ಕಸರತ್ತಿನಿಂದ ಅಲ್ಲ." ಪ್ರೀತಿ, ಭಕ್ತಿ, ನಿಃಸ್ವಾರ್ಥತೆ, ಸೇವಾಮನೋಭಾವ, ನಿರಹಂಕಾರ ಇವೆಲ್ಲ ಈ ಹೃದಯದ ಲಕ್ಷಣಗಳು. ಮೂರನೆಯ ಹೃದಯವೇ ಅಧ್ಯಾತ್ಮಿಕ ಹೃದಯ. ಇದನ್ನು ಅನಾಹತ ಚಕ್ರ ಎಂದೂ ಕರೆಯುತ್ತಾರೆ. (ಸ್ಥೂಲ, ಸೂಕ್ಷ್ಮ, ಕಾರಣ – ಈ ಮೂರು ಶರೀರಗಳ ಸಂಧಿಸ್ಥಾನವನ್ನು ತಂತ್ರಶಾಸ್ತ್ರದಲ್ಲಿ ಚಕ್ರ ಎಂದು ಕರೆಯುತ್ತಾರೆ.) ಹೃದಯದಲ್ಲಿ ಧ್ಯಾನ ಮಾಡಿ ಎಂದಾಗ ಈ ಅಧ್ಯಾತ್ಮಿಕ ಹೃದಯದಲ್ಲಿ ಮನಸ್ಸನ್ನು ನಿಲ್ಲಿಸಿ ಎಂದರ್ಥ. ನಮ್ಮಲ್ಲಿ ಹೆಚ್ಚಿನವರ ಮಾನಸಿಕ ಶಕ್ತಿಯೆಲ್ಲ ದೈಹಿಕ, ಜೈವಿಕ ಬಯಕೆಗಳ ತೃಪ್ತಿಗಾಗಿ ಮತ್ತು ಅಹಂ"ನ ರಕ್ಷಣೆಗಾಗಿಯೇ ವ್ಯಯವಾಗುತ್ತದೆ. ರಮಣ ಮಹರ್ಷಿಗಳು ಅನ್ನುವಂತೆ ನಾನು"ವಿನ ಮೂಲವನ್ನು ಶೋಧಿಸುತ್ತಾ ಹೋದರೆ ಈ ಚಕ್ರವನ್ನು ಅಥವಾ ಅಧ್ಯಾತ್ಮಿಕ ಹೃದಯವನ್ನು ತಲುಪಬಹುದು.

ಪ್ರಾರ್ಥನೆಯು ಧ್ಯಾನಕ್ಕೆ ಪ್ರೇರಕವೂ ಹೌದು, ಪೋಷಕವೂ ಹೌದು. ಪ್ರಾರ್ಥನೆಯ ಅಭ್ಯಾಸದಿಂದ ಧ್ಯಾನ ಶಕ್ತಿಶಾಲಿಯಾಗುತ್ತದೆ. ಧ್ಯಾನಕ್ಕೆ ಕುಳಿತುಕೊಳ್ಳುವದಕ್ಕೆ ಮೊದಲು ಹತ್ತು, ಹದಿನೈದು ನಿಮಿಷಗಳ ಕಾಲ ಒಂದೇ ಮನಸ್ಸಿನಿಂದ ಪ್ರಾರ್ಥಿಸಬೇಕು. ಕಾರ್ಮೋಡಗಳು ದಟ್ಟೈಸಿದಾಗ ಹನಿಯೊಡೆದು ಮಳೆಸುರಿವಂತೆ, ಪ್ರಾರ್ಥನೆ ತೀವ್ರವಾದಾಗ ಮನಸ್ಸು ಮೇಲೇರಿ ಭಾವನಾತ್ಮಕ ಹೃದಯವನ್ನು ದಾಟಿ, ಅಧ್ಯಾತ್ಮಿಕ ಹೃದಯವನ್ನು ತಲುಪುವಾಗ ಕಣ್ತುಂಬಿ ಬಂದು ಕಂಬನಿ ಹರಿಯತೊಡಗುತ್ತದೆ. ಅದೇ ವ್ಯಾಕುಲತೆಯ ಉಗಮ. ಅದರಿಂದಲೇ ಧ್ಯಾನದ ಸಿದ್ಧಿ.

ಪರಿವರ್ತನೆಯ ಪ್ರವರ್ತಕವಾಗಬಲ್ಲ ಅಂತಃಶಕ್ತಿಯ ಅಕ್ಷಯ ಆಗರವೇ ಪ್ರಾರ್ಥನೆಯಲ್ಲಿದೆ. ಗುಂಡಿ ಒತ್ತಿದೊಡನೆ ಚಿಮ್ಮುವ ಚಿಲುಮೆಯಂತೆ, ಪ್ರಾರ್ಥನೆಯ ಪರಿಪಾಠದಿಮದ ಆ ಶಕ್ತಿಯ ಮೂಲ ಕರಗತವಾಗುತ್ತದೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ, ವೈದ್ಯ ಅಲೆಕ್ಸಿಸ್ ಕೆರೆಲ್ ಹೇಳುತ್ತಾನೆ:

ಅತಿ ಹೆಚ್ಚಿನ ಪ್ರಭಾವಶಾಲಿಯಾದ ಶಕ್ತಿಯನ್ನು ಪ್ರಾರ್ಥನೆಯಿಂದ ವ್ಯಕ್ತಿಯೊಬ್ಬ ಸೃಜಿಸಬಲ್ಲ. ಭೂಮ್ಯಾಕರ್ಷಣ ಶಕ್ತಿ ಎಷ್ಟು ಸತ್ಯವೋ, ಪ್ರಾರ್ಥನೆಯಿಂದ ಬಲಸಂವರ್ಧನೆ ಸಾಧ್ಯ ಎಂಬುದೂ ಅಷ್ಟೇ ಸತ್ಯ. ಇತರ ಎಲ್ಲ ತೆರನಾದ ಚಿಕಿತ್ಸಾವಿಧಾನಗಳು ಫಲಪ್ರದವಾಗದಿದ್ದಾಗ ಕೇವಲ ಶ್ರದ್ಧಾನ್ವಿತ ಹೃತ್ಪೂರ್ವಕ ಪ್ರಾರ್ಥನೆಯಿಂದ ರೋಗಕ್ಲೇಶಗಳಿಂದ ಮುಕ್ತರಾದ ವ್ಯಕ್ತಿಗಳನ್ನು ವೈದ್ಯನಾದ ನಾನು ಕಂಡುಕೊಂಡಿದ್ದೇನೆ. ಈ ಪ್ರಾರ್ಥನಾ ವಿಧಾನ ರೇಡಿಯಂನಂತೆ ಅದ್ಭುತ ಶಕ್ತಿ ವಿಕರಣಶೀಲದ್ದು. ತಾನೇತಾನಾಗಿ ಶಕ್ತಿಯನ್ನು ಜಾಗ್ರತಗೊಳಿಸಿ ವೃದ್ಧಿಸುವಂಥದ್ದು. ನಾವು ಪ್ರಾರ್ಥಿಸುವಾಗಲೆಲ್ಲ ಈ ವಿಶ್ವಬ್ರಹ್ಮಾಂಡವನ್ನು ನಡೆಯಿಸುವ, ಎಂದೆಂದಿಗೂ ಬತ್ತಿಬರಿದಾಗದ ದಿವ್ಯ ಶಕ್ತಿಯ ಸಂಪರ್ಕ ಲಭ್ಯವಾಗುತ್ತದೆ. ನಮ್ಮ ಕಳಕಳಿಯ ಬೇಡಿಕೆಯು ಎಷ್ಟೋ ವಿಧದ ನಮ್ಮ ದೌರ್ಬಲ್ಯಗಳನ್ನು ದೂರ ಮಾಡುತ್ತದೆ; ತನ್ಮೂಲಕ ನಾವು ಬಲಿಷ್ಠರಾಗಿ ತಲೆ ಎತ್ತುತ್ತೇವೆ. ಭಗವಂತನನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಿದಾಗಲೆಲ್ಲ ನಿಮ್ಮ ತನುಮನಗಳಲ್ಲಿ ಶುಭ ಪರಿಣಾಮ ಆಗಿಯೇ ತೀರುತ್ತದೆ.""

ವ್ಯಾವಹಾರಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಗುದ್ದು ಜಾಸ್ತಿಯಾದರೆ, ಅಧ್ಯಾತ್ಮಿಕ ಜಗತ್ತಿನಲ್ಲಿ ಬಗ್ಗಿದವನಿಗೆ ಮದ್ದು ಜಾಸ್ತಿ, ಅಂದರೆ ದೇವರ ವಿಶೇಷ ಕೃಪೆ ಲಭ್ಯ. ನಾನು"ವಿನ ನಾಶಕ್ಕೆ ಪ್ರಾರ್ಥನೆಯೇ ಪ್ರಬಲವಾದ ಅಸ್ತ್ರ. ನನ್ನನಳಿಸು, ನಿನ್ನ ಮೆರೆಸು! ಬಂದು ನೆಲೆಸು, ಹೃದಯಪದ್ಮದಲದಲಿ!" ಎಂಬುದೇ ಸಾಧಕನ ತಾರಕಮಂತ್ರ, ಅದೇ ಪ್ರಾರ್ಥನೆಯ ಪರಾಕಾಷ್ಠೆ.

ದೇವರು ಒಲಿದರೆ ಕೊರಡು ಕೊನರುವುದು, ಬರಡು ಹಯನಾಗುವುದು.

ದೇವರೇ ಸರ್ವಶಕ್ತ, ಸರ್ವಕರ್ತ, ಸರ್ವಹರ್ತ, ಅವನೆ ದಯಾಸಾಗರ.

ದೇವರನ್ನು ಒಲಿಸುವ ಹಲವಾರು ಮಾರ್ಗಗಳಲ್ಲಿ ಪ್ರಾರ್ಥನೆಯೂ ಒಂದು.

ನಮ್ಮ ಮೊರೆ ಅವನನ್ನು ತಲುಪಬೇಕು, ಅವನ ಕೃಪಾಧಾರೆ ಸುರಿಯಬೇಕು.

ದೇವರನ್ನು ಒಲಿಸುವ ನೂರು ದಾರಿಗಳಲ್ಲಿ, ಅತ್ಯಂತ ಸುಲಭ ದಾರಿ ಪ್ರಾರ್ಥನೆ.

(ಜೀವಿ" ವಚನ-59-1)

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-6

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-5

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-4

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-3

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-2

ಸ್ವಾಮಿ ಜಗದಾತ್ಮಾನಂದರ 'ಬದುಕಲು ಕಲಿಯಿರಿ' ಭಾಗ-1

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more