• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೆನಪಿನ ಕೋಶದಿಂದ ಎದ್ದು ಬಂದ ಕೊಟ್ನಿಸ್

By * ವಿಶ್ವೇಶ್ವರ ಭಟ್
|

ಡಾ.ದ್ವಾರಕಾನಾಥ ಶಾಂತಾರಾಮ ಕೊಟ್ನಿಸ್! ಭಾರತದ ಯಾವುದೇ ನಾಯಕರು ಚೀನಾಕ್ಕೆ ಬಂದಾಗ, ಈ ಹೆಸರನ್ನು ನೆನಪಿಸಿಕೊಳ್ಳಲೇಬೇಕು. ಒಂದು ವೇಳೆ ನೆನಪಿಸಿಕೊಳ್ಳದಿದ್ದರೆ ಚೀನಾದ ನಾಯಕರು ನೆನಪಿಸಿಕೊಡುತ್ತಾರೆ. ಅಷ್ಟರಮಟ್ಟಿಗೆ ಈ ಹೆಸರು ಭಾರತ ಹಾಗೂ ಚೀನಾದ ನಡುವೆ ಬೆಸೆದುಕೊಂಡಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಎಂ. ಕೃಷ್ಣ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತಾಡಿದ ಎಲ್ಲ ವೇದಿಕೆಗಳಲ್ಲೂ ಡಾ. ದ್ವಾರಕಾನಾಥ ಕೊಟ್ನಿಸ್ ಅವರನ್ನು ನೆನಪಿಸಿಕೊಂಡರು. ಚೀನಾದ ವಿದೇಶಾಂಗ ಸಚಿವ ಯಾಂಗ್ ಜೀಚಿ ಹಾಗೂ ಪ್ರಧಾನಿ ವೆನ್ ಜಿಯಾಬಾವೊ ಕೂಡ ಕೃಷ್ಣ ಅವರನ್ನು ಭೇಟಿಯಾದಾಗ ಡಾ. ಕೊಟ್ನಿಸ್ ಅವರನ್ನು ಅಂತಃಕರಣಪೂರ್ವಕವಾಗಿ ಸ್ಮರಿಸಿಕೊಂಡರು. ಕಳೆದ ನೂರು ವರ್ಷಗಳಲ್ಲಿ ಚೀನಾಕ್ಕೆ ಅಸಾಧಾರಣ ಕೊಡುಗೆ ನೀಡಿದ ಹತ್ತು ಮಂದಿ ವಿದೇಶಿಯರ ಸಾಲಿಗೆ ಡಾ. ಕೊಟ್ನಿಸ್ ಕೂಡ ಸೇರುತ್ತಾರೆ. ಭಾರತ-ಚೀನಾ ಸಂಬಂಧಕ್ಕೆ ಮಧುರ ನೆನಪು ಬರೆದಿರುವ ಈ ಡಾ. ಕೊಟ್ನಿಸ್ ಕುರಿತು ಹಿಂದೊಮ್ಮೆ ಬರೆದಿದ್ದೆ. ಆದರೆ ಎಸ್.ಎಂ. ಕೃಷ್ಣ ಅವರ ಜತೆ ಈಗ ಚೀನಾದಲ್ಲಿ ಪ್ರವಾಸ ಮಾಡುವ ಹೊತ್ತಿಗೆ ಡಾ. ಕೊಟ್ನಿಸ್ ನೆನಪಿನಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಆ ಪುಣ್ಯಾತ್ಮ ಚೀನಾದಲ್ಲಿ ಒಂದು ದಂತಕತೆಯಾದ ಬಗೆ ಇದೆಯಲ್ಲಾ, ಅದು ಅದ್ಭುತ!

ಅಂದ ಹಾಗೆ ಯಾರು ಈ ಡಾ. ಕೊಟ್ನಿಸ್? ಯಾರು ಈ ಡಾ. ದ್ವಾರಕಾನಾಥ ಶಾಂತಾರಾಮ ಕೊಟ್ನಿಸ್? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ನಾವು ಒಂದು ಅಮರಕಥೆಯ ಮುಂದೆ ಹೋಗಿ ನಿಂತಿರುತ್ತೇವೆ. ಅದೊಂದು ದೊಡ್ಡ ಕತೆ ಎಂದೇ ಈ ಕತೆ ಆರಂಭಿಸಬಹುದು. ಇದು ಸಾಮಾನ್ಯ ಕತೆಯಲ್ಲ, ಭಾರತ-ಚೀನಾ ನಡುವಿನ ಮಧುರ ಬಾಂಧವ್ಯಕ್ಕೆ, ಉಭಯ ದೇಶಗಳ ನಡುವೆ ಹೊಸ ಸಂಬಂಧಕ್ಕೆ ಭಾಷ್ಯ ಬರೆದ ಕತೆಯೂ ಹೌದು. ಈ ಎರಡೂ ದೇಶಗಳ ನಾಯಕರು ಪರಸ್ಪರ ಎದುರಾದರೆ ಡಾ. ಕೊಟ್ನಿಸ್ ಅವರನ್ನು ಸ್ಮರಿಸದೇ ಹೋಗುವುದಿಲ್ಲ. ಚೀನಾ ನಾಯಕರು ಭಾರತಕ್ಕೆ ಬಂದಾಗ ಡಾ. ಕೊಟ್ನಿಸ್ ಕುಟುಂಬದವರನ್ನು ಭೇಟಿಯಾಗದೇ ಹೋಗುವುದಿಲ್ಲ. ಭಾರತದ ನಾಯಕರು ಚೀನಾಕ್ಕೆ ಹೋದರೆ ಡಾ. ಕೊಟ್ನಿಸ್ ಪ್ರತಿಮೆಗೆ ಗೌರವ ಸಲ್ಲಿಸದೇ ವಾಪಸು ಬರುವುದಿಲ್ಲ. ಡಾ. ಕೊಟ್ನಿಸ್ ಪತ್ನಿಯನ್ನು ಮಾತನಾಡಿಸದೇ ಬರುವುದಿಲ್ಲ.

ಬಹಳ ಅಚ್ಚರಿಯಾಗಬಹುದು, ಇಡೀ ಚೀನಾದಲ್ಲಿ ಇಬ್ಬರೇ ಇಬ್ಬರು ಭಾರತೀಯರ ಪ್ರತಿಮೆಗಳಿವೆ. ಒಂದನೆಯದು ಬುದ್ಧನದು ಹಾಗೂ ಎರಡನೆಯದು ಡಾ. ಕೊಟ್ನಿಸ್ ಅವರದು! ಪ್ರತಿವರ್ಷ ಚೀನಿಯರು ಕ್ವಿಂಗ್‌ಮಿಂಗ್‌ಎಂಬ ಉತ್ಸವ ಆಚರಿಸುತ್ತಾರೆ. ಅಂದರೆ ತಮ್ಮ ಪೂರ್ವಜರನ್ನು ಸ್ಮರಿಸುವ ದಿನವದು. ಅಂದು ಡಾ. ಕೊಟ್ನಿಸ್ ಅವರ ಪ್ರತಿಮೆ ಹಾಗೂ ಸ್ಮಾರಕವನ್ನು ಹೂವಿನಿಂದ ಅಲಂಕರಿಸಿ ಗೌರವ ಸಲ್ಲಿಸುತ್ತಾರೆ. ಡಾ. ಕೊಟ್ನಿಸ್ ಸ್ಮಾರಕ ಅಲಂಕಾರಕ್ಕೆಂದು ದೇಶವಾಸಿಗಳೆಲ್ಲ ಹೂವುಗಳನ್ನು ಕಳಿಸುತ್ತಾರೆ. ಡಾ. ಕೊಟ್ನಿಸ್ ಅಂದ್ರೆ ಚೀನಾದಲ್ಲಿ ಚಿರಪರಿಚಿತ ಹೆಸರು! ಡಾ. ದ್ವಾರಕಾನಾಥ ಶಾಂತರಾಮ ಕೊಟ್ನಿಸ್!

1910ರಲ್ಲಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಶಾಂತಾರಾಮ ಕೊಟ್ನಿಸ್ ಅವರ ಪುತ್ರನಾಗಿ ದ್ವಾರಕಾನಾಥ ಜನಿಸಿದ್ದು. ಮೂವರು ಗಂಡು ಹಾಗೂ ಐವರು ಹೆಣ್ಣು ಮಕ್ಕಳ ತುಂಬು ಸಂಸಾರ. ಮನೆಯಲ್ಲಿ ಬಡತನ. ಸಂಸಾರ ಸಾಗಿಸಿಕೊಂಡು ಹೋಗುವುದೇ ಕಷ್ಟದ ಕೆಲಸ. ಹಾಗೆಂದು ಶಾಂತಾರಾಮ ಕೊಟ್ನಿಸ್ ತಮ್ಮ ಮಕ್ಕಳನ್ನು ಅವರ ಪಾಡಿಗೆ ಬಿಟ್ಟವರಲ್ಲ. ಒಳ್ಳೆಯ ಸಂಸ್ಕಾರ, ಜೀವನಶೈಲಿಯನ್ನು ಕಲಿಸಿದವರು. ಮನೆಯಲ್ಲಿ ಎಲ್ಲರಿಗೂ ಖಾದಿ, ಸರಳಜೀವನ. ತಂದೆ ನೀಡಿದ ಸಂಸ್ಕಾರವೇ ಮಗ ದ್ವಾರಕನಾಥನಿಗೆ ಜೀವನಪಥ. ಕಷ್ಟಪಟ್ಟು ಓದಿ, ಹೈಸ್ಕೂಲ್ ಮುಗಿಸಿದ್ದಾಯಿತು. ಮುಂಬೈನ ಜಿ.ಎಸ್. ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ಆ ದಿನಗಳಲ್ಲಿ ಮೆಡಿಕಲ್ ಶಿಕ್ಷಣಕ್ಕೆ ಯಾರೂ ಹಾತೊರೆಯುತ್ತಿರಲಿಲ್ಲ. ಆದರೆ ದ್ವಾರಕಾನಾಥ್‌ಗೆ ಡಾಕ್ಟರ್ ಆಗಬೇಕೆಂಬ ಹಠ. ದುಡ್ಡಿರಲಿಲ್ಲ. ಆದರೆ ಸಂಬಂಧಿಕರು, ಸ್ನೇಹಿತರಿಂದ ಸಾಲ ಮಾಡಿ ಮೆಡಿಕಲ್ ಸೇರಿದ್ದಾಯಿತು. ಕೋರ್ಸ್ ಮುಗಿದು ಟ್ರೇನಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಗ ಅನಿರೀಕ್ಷಿತ ಕರೆ ಬಂದಿತು.

1937. ಜಪಾನ್ ದಾಳಿಯಿಂದ ಚೀನಾ ವಿಪರೀತ ಘಾಸಿಗೊಳಗಾಗಿತ್ತು. ಸಾವಿರಾರು ಸೈನಿಕರು ಯುದ್ಧದಲ್ಲಿ ತೀವ್ರ ಗಾಯಗೊಂಡಿದ್ದರು. ಅವರನ್ನು ಆರೈಕೆ ಮಾಡುವ, ಚಿಕಿತ್ಸೆ ನೀಡುವ ವೈದ್ಯರ ಕೊರತೆಯಿಂದ ಸೈನಿಕ ಶಿಬಿರದಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ. ಇಂಥ ಸಂದರ್ಭದಲ್ಲಿ ಕಮ್ಯುನಿಸ್ಟ್ ಜನರಲ್ ಝ ಡೆ, ಜವಾಹರಲಾಲ್ ನೆಹರುಗೆ ವೈದ್ಯರ ತಂಡವೊಂದನ್ನು ಕಳಿಸಿಕೊಡುವಂತೆ ಮನವಿ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ದೇಶಕ್ಕೆ ಮನವಿ. ನೆಹರು ತಕ್ಷಣ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಡಾ. ಎಂ.ಅಟಲ್, ಡಾ. ಚೋಳ್ಕರ್, ಡಾ. ಬಿ.ಕೆ. ಬಸು, ಡಾ. ಡಿ. ಮುಖರ್ಜಿ ಹಾಗೂ ಡಾ. ದ್ವಾರಕಾನಾಥ್ ಕೊಟ್ನಿಸ್ ಅವರನ್ನೊಳಗೊಂಡ ವೈದ್ಯರ ತಂಡ ೧೯೩೮ರ ಆರಂಭದಲ್ಲಿ ಚೀನಾಕ್ಕೆ ತೆರಳುತ್ತದೆ. ಮರುವರ್ಷವೇ ಸ್ವತಃ ನೆಹರು ಚೀನಾಕ್ಕೆ ತೆರಳಿ ತಮ್ಮ ಬೆಂಬಲ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಭಾರತೀಯ ವೈದ್ಯರ ತಂಡ ನಿರ್ವಹಿಸಿದ ಕಾರ್ಯದ ಬಗ್ಗೆ ತೀವ್ರ ಪ್ರಶಂಸೆ ವ್ಯಕ್ತವಾಗುತ್ತದೆ. ಚೀನಾಕ್ಕೆ ಹೊರಟಾಗ ಡಾ. ಕೊಟ್ನಿಸ್‌ಗೆ ಕೇವಲ ಇಪ್ಪತ್ತೆಂಟು ವರ್ಷ. ಹೊರಡುವ ಮುನ್ನ ಸೊಲ್ಲಾಪುರದಲ್ಲಿನ ಮನೆಗೆ ಹೋಗಿ ತಂದೆ-ತಾಯಿಗೆ ನಮಸ್ಕರಿಸಿ, ಸಹೋದರಿಯರೊಂದಿಗೆ ಒಂದೆರಡು ದಿನ ಕಳೆದಿದ್ದೇ ಕೊನೆ. ಡಾ. ಕೊಟ್ನಿಸ್ ತಿರುಗಿ ಬರಲೇ ಇಲ್ಲ.

ಭಾರತೀಯ ವೈದ್ಯರ ತಂಡ ಚೀನಾದಲ್ಲಿ ಮಾಡಿದ ಕೆಲಸ ಅಸಾಧಾರಣ. ಐವರು ವೈದ್ಯರು ಸೇರಿ ಸುಮಾರು ಏಳು ತಿಂಗಳುಗಳ ಕಾಲ ಆರು ಸಾವಿರಕ್ಕೂ ಹೆಚ್ಚು ಸೈನಿಕರ ಶುಶ್ರೂಷೆ ಮಾಡಿದರು. ಮನೆ, ಮಠ, ಮರೆತು ಊಟ, ನಿದ್ದೆಯಿಲ್ಲದೇ ಸೈನಿಕ ಶಿಬಿರಗಳಲ್ಲಿ ಮಾರಣಾಂತಿಕವಾಗಿ ಗಾಯಗೊಂಡ ಸೈನಿಕರಿಗೆ ಪುನರ್ಜನ್ಮ ನೀಡಿದರು. ಈ ಪೈಕಿ ಅನೇಕರು ಚೇತರಿಸಿಕೊಂಡರು. ಆದರೆ ನೂರಾರು ಸೈನಿಕರಿಗೆ ಇನ್ನೂ ವೈದ್ಯಕೀಯ ನೆರವಿನ ಅಗತ್ಯವಿತ್ತು. ಈ ಮಧ್ಯೆ ಸಾಂಸಾರಿಕ ತಾಪತ್ರಯಗಳಿಂದ ಭಾರತೀಯ ವೈದ್ಯರು ತಾಯ್ನಾಡಿಗೆ ಮರಳಲು ಚಡಪಡಿಸುತ್ತಿದ್ದರು. ಅವರೆಲ್ಲರನ್ನು ಡಾ. ಕೊಟ್ನಿಸ್ ಒತ್ತಾಯ ಮಾಡಿ ಉಳಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸೈನಿಕರನ್ನು ಹೀಗೆ ಬಿಟ್ಟು ಹೋಗುವುದು ಸರಿಯಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಅವರ ಒತ್ತಾಯ ಬಹುದಿನಗಳ ಕಾಲ ನಿಲ್ಲಲಿಲ್ಲ. ಅವರೆಲ್ಲ ಭಾರತಕ್ಕೆ ಹೊರಟು ನಿಂತರು. ಆದರೆ ದ್ವಾರಕಾನಾಥ ಕೊಟ್ನಿಸ್ ಅಲ್ಲಿಯೇ ಉಳಿಯಲು ನಿರ್ಧರಿಸಿದರು!

ಸಾವು-ಬದುಕಿನ ಜತೆ ಹೋರಾಡುವ ಸೈನಿಕರನ್ನು ಬಿಟ್ಟು ಬರಲು ಅವರಿಗೆ ಸಾಧ್ಯವಾಗಲಿಲ್ಲ. ಡಾ. ಕೊಟ್ನಿಸ್ ಆರಂಭಿಸಿದ ಮೊಬೈಲ್ ಕ್ಲಿನಿಕ್ ಸೇವೆ ಬಹಳ ಯಶಸ್ವಿಯಾಯಿತು. ಗಾಯಗೊಂಡ ಸೈನಿಕರನ್ನು ಅವರವರು ಇದ್ದ ಶಿಬಿರಗಳಲ್ಲೇ ನೋಡಲು ಡಾ. ಕೊಟ್ನಿಸ್ ವ್ಯಾನಿನಲ್ಲಿಯೇ ಆಸ್ಪತ್ರೆ ಸಿದ್ಧಪಡಿಸಿದರು. ಇದು ನೂರಾರು ಸೈನಿಕರ ಪ್ರಾಣಗಳನ್ನು ಉಳಿಸಿತು. ಸ್ವತಃ ಕೊಟ್ನಿಸ್ ಗಾಯಗೊಂಡ ಸೈನಿಕರನ್ನು ಅನಾಮತ್ತಾಗಿ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿ ಅಲ್ಲಿ ಅವರ ಆರೈಕೆ ಮಾಡಿದರು. ಕೊಳೆತ ಶವಗಳನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದರು. ಕ್ರಮೇಣ ಅವರ ಬಗ್ಗೆ ಸೇನಾ ಡೇರೆಗಳಲ್ಲಿ ಅದೆಂಥ ಪ್ರೀತಿ, ಅಭಿಮಾನ ಮೂಡಿತೆಂದರೆ, ಕೊಟ್ನಿಸ್ ತಮ್ಮೊಂದಿಗಿದ್ದರೆ ಪ್ರಾಣಕ್ಕೇನೂ ತೊಂದರೆಯಿಲ್ಲ ಎಂದು ಸೈನಿಕರು ಹೇಳುತ್ತಿದ್ದರು. ಡಾ. ಕೊಟ್ನಿಸ್ ತಮ್ಮ ಸರ್ವಸ್ವವನ್ನೂ ಸೈನಿಕರಿಗಾಗಿಯೇ ಅರ್ಪಿಸಿಬಿಟ್ಟಿದ್ದರು. ಅವರಿಗಾಗಿ ಪ್ರತ್ಯೇಕ ಮನೆಯನ್ನು ನೀಡಲಾಗಿತ್ತು. ಆದರೆ ಅವರು ಸೇನಾ ಡೇರೆಗಳಲ್ಲೇ ಮಲಗುತ್ತಿದ್ದರು. ಕೊನೆಕೊನೆಗೆ ಡಾ.ಕೊಟ್ನಿಸ್ ಸೈನಿಕರೊಂದಿಗೆ ಅದೆಂಥ ಗಾಢ ಸಂಬಂಧ ಹೊಂದಿದರೆಂದರೆ ತಾವು ಬಂದ ಕೆಲಸ ಮುಗಿದ ನಂತರ ಅವರಿಗೆ ವಾಪಸು ಹೋಗಲು ಮನಸ್ಸಾಗಲಿಲ್ಲ. ಸೈನಿಕರಿಗೂ ಅವರನ್ನು ಕಳಿಸಲು ಇಷ್ಟವಿರಲಿಲ್ಲ. ಚೀನಾದಲ್ಲಿಯೇ ಶಾಶ್ವತವಾಗಿ ನೆಲೆಸಲು ತೀರ್ಮಾನಿಸಿದರು.

ಈ ಮಧ್ಯೆ ತಮ್ಮೊಂದಿಗಿದ್ದ ನರ್ಸ್ ಗೋ ಕ್ವಿಂಗ್ಲಾನ್ ಜತೆ ಪ್ರೇಮಾಂಕುರವಾಯಿತು. ಆಕೆಯನ್ನು ಸೊಲ್ಲಾಪುರಕ್ಕೆ ಕರೆತಂದು ತಂದೆ-ತಾಯಿ ಸಮ್ಮುಖದಲ್ಲಿ ಮದುವೆಯಾಗಬೇಕೆಂದು ಯೋಚಿಸಿದ್ದರು. ಆದರೆ ಮನೆಯಲ್ಲಿ ಒಪ್ಪಲಿಕ್ಕಿಲ್ಲವೆಂದು ಅನಿಸಿರಬೇಕು. ಅಲ್ಲಿಯೇ ಮದುವೆಯಾದರು. ಡಾ.ಕೊಟ್ನಿಸ್ ಸೇವೆಯನ್ನು ಪರಿಗಣಿಸಿ ಚೀನಾ ಸರಕಾರ ಡಾ. ಬೆಥುನೆ ಇಂಟರ್‌ನ್ಯಾಷನಲ್ ಶಾಂತಿ ಆಸ್ಪತ್ರೆಯ ನಿರ್ದೇಶಕರನ್ನಾಗಿ ನೇಮಿಸಿತು. ಅನಂತರ ಅವರು ಮಾವೋ ಜೆಡಾಂಗ್ ನೇತೃತ್ವದ ಸೇನೆಯನ್ನು ಸೇರಿದರು. ವುಟೈ ಪರ್ವತಶ್ರೇಣಿ ಪ್ರದೇಶದಲ್ಲಿನ ಸೇನಾ ನೆಲೆಯಲ್ಲಿ ವೈದ್ಯರನ್ನಾಗಿ ಅವರನ್ನು ಕಳಿಸಲಾಯಿತು. ಅಲ್ಲೋ ವಿಪರೀತ ಕೆಲಸ. ಕೆಲ ಸಂದರ್ಭಗಳಲ್ಲಿ 72 ತಾಸು ನಿರಂತರ ಕೆಲಸ ಮಾಡಬೇಕಾದ ಪರಿಸ್ಥಿತಿ. ಇದು ಒಂದೆರಡು ಸಲವಾದರೆ ಪರವಾಗಿಲ್ಲ. ಆರೇಳು ತಿಂಗಳು ಊಟ, ನಿದ್ದೆಗೆಟ್ಟು ಮೂರ್‍ನಾಲ್ಕು ದಿನ ಕೆಲಸ ಮಾಡುತ್ತಿದ್ದರು. ಪರಿಣಾಮ, ಡಾ. ಕೊಟ್ನಿಸ್ ಕಾಯಿಲೆ ಬಿದ್ದರು. ಪದೇ ಪದೆ ಮೂರ್ಛೆ ಬೀಳತೊಡಗಿದರು. ಇದೇ ಕಾಯಿಲೆಯಾಗಿ ಕಾಡ ತೊಡಗಿತು. ಅದು ಹಠಾತ್ತನೆ ಅವರ ಜೀವಕ್ಕೆ ಎರವಾಗಬಹುದೆಂದು ನಿರೀಕ್ಷಿಸಿರಲಿಲ್ಲ. 1942ರ ಡಿಸೆಂಬರ್ 9ರಂದು ಡಾ. ಕೊಟ್ನಿಸ್ ನಿಧನರಾದರು. ಆಗ ಅವರಿಗೆ ಬರೀ ಮೂವತ್ತೆರಡು ವರ್ಷ! ಚೀನಾದಲ್ಲಿ ಇದ್ದದ್ದು ಕೇವಲ ಐದು ವರ್ಷ! ಆದರೆ ಮಾಡಿದ್ದು ಜೀವಮಾನದ ಸಾಧನೆ.

ಡಾ. ಕೊಟ್ನಿಸ್ ನಿಧನರಾದಾಗ ಚೀನಾದ ನಾಯಕ ಮಾವೊ ಜೆಡಾಂಗ್ ಚೀನಾದ ಸೇನೆ ಒಬ್ಬ ಅದ್ಭುತ ವ್ಯಕ್ತಿಯನ್ನು ಹಾಗೂ ನಮ್ಮ ದೇಶ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದೆ. ಡಾ. ಕೊಟ್ನಿಸ್ ಅವರ ಅಂತಾರಾಷ್ಟ್ರೀಯ ಕಾಳಜಿ, ಸ್ಫೂರ್ತಿ ನಮಗೆ ಸದಾ ಪ್ರೇರಣೆಯಾಗಬೇಕು' ಎಂದು ಹೇಳಿದ್ದರು. ಡಾ. ಕೊಟ್ನಿಸ್ ಅವರಿಗೆ ಸಕಲ ಸರಕಾರಿ ಗೌರವ, ಮರ್ಯಾದೆಗಳೊಂದಿಗೆ ಧೀಮಂತ ನಾಯಕರಿಗೆ ಕಲ್ಪಿಸಲಾಗುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಡಾ. ಕೊಟ್ನಿಸ್ ನಿಧನರಾದಾಗ ಅವರ ಪತ್ನಿಯ ಮಡಿಲಲ್ಲಿ ಒಂಬತ್ತು ತಿಂಗಳ ಗಂಡು ಮಗು ಮಲಗಿತ್ತು. ದಂಪತಿಗಳಿಬ್ಬರೂ ಮಗುವಿಗೆ ಯಿನ್‌ಹುವಾ (ಯಿನ್-ಭಾರತ, ಹುವಾ-ಚೀನಾ) ಎಂದು ಪ್ರೀತಿಯಿಂದ ಹೆಸರಿಟ್ಟಿದ್ದರು. ಪತಿಯ ಅಕಾಲಿಕ ನಿಧನದ ಬಳಿಕ ಗೊ ಕ್ವಿಂಗ್ಲಾನ್ ದಿಕ್ಕೆಟ್ಟಳು. ಮುಂದೇನೆಂಬುದು ಆಕೆಗೆ ತೋಚದಾಯಿತು. ಚೀನಾ ಗಡಿಭಾಗದಲ್ಲಿದ್ದ ಅವರ ಮನೆಯಲ್ಲಿ ಜೀವಿಸುವುದು ಸಾಧ್ಯವೇ ಇರಲಿಲ್ಲ. ಮಗುವಾದ ನಂತರ ಉದ್ಯೋಗ ಬಿಟ್ಟಿದ್ದರಿಂದ ಕೆಲಸವಿಲ್ಲದ ಬದುಕು ದುರ್ಭರವಾಯಿತು. ಡಾ. ಕೊಟ್ನಿಸ್ ಅನುಕಂಪದಿಂದಾಗಿ ಯೆನನ್‌ನಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಕೇಂದ್ರ ಕಚೇರಿಯಲ್ಲಿ ಕೆಲಸ ಸಿಕ್ಕಿತು. ಪತಿಯ ನೆನಪು ಆಕೆಯನ್ನು ಕಿತ್ತು ತಿನ್ನುತ್ತಿತ್ತು. ಮತ್ತೊಂದು ಮದುವೆಯಾಗಲು ಇಷ್ಟವಿರಲಿಲ್ಲ. ಹಾಗೆಂದು ಏಕಾಂಗಿ ಜೀವನ ಸಾಗಿಸುವುದು ಸುಲಭವೂ ಆಗಿರಲಿಲ್ಲ. ಕೊನೆಗೆ ಕಮ್ಯುನಿಸ್ಟ್ ನಾಯಕರ ಒತ್ತಾಯದಿಂದ ಪತಿ ನಿಧನದ ಎರಡು ವರ್ಷಗಳ ನಂತರ ಮರು ಮದುವೆಯಾದಳು. ಈ ದಾಂಪತ್ಯದಿಂದ ಒಂದು ಗಂಡು ಹಾಗೂ ಹೆಣ್ಣು ಮಕ್ಕಳಾದರೂ, ಈ ಮಗುವನ್ನು ಚೆನ್ನಾಗಿಯೇ ಬೆಳೆಸಿದರು. ಆತನನ್ನು ತಂದೆಯಂತೆ ಡಾಕ್ಟರನನ್ನಾಗಿ ಮಾಡಬೇಕೆಂದು ಗೋ ಕ್ವಿಂಗ್ಲಾನ್ ಬಹಳ ಆಸೆಪಟ್ಟಳು. ಆತನ ತಲೆಯೊಳಗೆ ಅದೇ ವಿಚಾರ ತುಂಬಿದಳು. ವೈದ್ಯನಾಗಿ ತಂದೆ ಕೆಲಸ ಮುಂದುವರಿಸುವಂತೆ ಮಗನನ್ನು ಪ್ರೇರೇಪಿಸಿದಳು. ಪುಣ್ಯವಶಾತ್ ಚೀನಾದ ಪ್ರತಿಷ್ಠಿತ ಕ್ಸಿಯಾನ್ ವಿಶ್ವವಿದ್ಯಾಲಯದಲ್ಲಿ ಸೀಟು ಸಿಕ್ಕಿತು. ಆತ ಮೆಡಿಕಲ್ ಮುಗಿಸಿದ. ಆದರೆ ವಿಧಿ ಆಟವೇ ಬೇರೆಯದಿತ್ತು. ತನ್ನ ಇಪ್ಪತ್ತಾರನೇ ವಯಸ್ಸಿಗೆ ಯಿನ್‌ಹುವಾ ತೀರಿಕೊಂಡ.

ಡಾ.ಕೊಟ್ನಿಸ್ ನಿಧನರಾಗಿ ಹದಿನಾರು ವರ್ಷಗಳ ನಂತರ ಗೊ ಕ್ವಿಂಗ್ಲಾನ್ ಮಗನನ್ನು ಕರೆದುಕೊಂಡು ಸೊಲ್ಲಾಪುರಕ್ಕೆ ಬಂದಿದ್ದಳು. ಅದೊಂದು ಮನಕಲಕುವ ದೃಶ್ಯ. ಸ್ವತಃ ಮಗನ ಹೆಂಡತಿ ಹಾಗೂ ಮೊಮ್ಮಗನನ್ನು ಡಾ.ಕೊಟ್ನಿಸ್ ತಾಯಿ ಬರಮಾಡಿ ಕೊಂಡಿದ್ದಳು. ಅತ್ತೆ- ಸೊಸೆ ಆಲಿಂಗಿಸಿಕೊಂಡು ಡಾ.ಕೊಟ್ನಿಸ್‌ರನ್ನು ನೆನಪಿಸಿಕೊಂಡು ಅಳುತ್ತಿದ್ದರೆ, ಸುತ್ತಲಿದ್ದವರು ಮುಖ ಕೆಳಹಾಕಿ ಕಣ್ಣೀರು ಒರೆಸಿಕೊಳ್ಳುತ್ತಿದ್ದರು. ಅತ್ತೆ- ಸೊಸೆಗೆ ಪರಸ್ಪರರ ಭಾಷೆ ಗೊತ್ತಿಲ್ಲದಿದ್ದರೂ, ಡಾ.ಕೊಟ್ನಿಸ್ ಎಂಬ ಬಂಧ ಅವರಿಬ್ಬರನ್ನೂ ಬೆಸೆದಿತ್ತು. ಗಂಡನ ನೆನಪಿನಲ್ಲಿ ಸೊಲ್ಲಾಪುರದ ಡಾ.ಕೊಟ್ನಿಸ್ ಮನೆಯ ಎದುರು ಗೋ ಕ್ವಿಂಗ್ಲಾನ್ ಒಂದು ಗಿಡನೆಟ್ಟಳು. ಮಗ ಯಿನ್‌ಹುವಾ ನೀರೆರೆದ. ಸೊಸೆ, ಮೊಮ್ಮಗ ಚೀನಾಕ್ಕೆ ಹೊರಟುನಿಂತಾಗ ಆ ವೃದ್ಧಮಾತೆ ಗೋಳೋ ಅಂತ ಅತ್ತು ಬೀಳ್ಕೊಟ್ಟಿದ್ದಳು.

ಈ ಎಲ್ಲ ಪ್ರಸಂಗಳನ್ನು ಹೆಕ್ಕಿ ಹೆಕ್ಕಿ ವಿ.ಶಾಂತಾರಾಮ ಡಾ.ಕೊಟ್ನಿಸ್ ಕಿ ಅಮರ್ ಕಹಾನಿ' ಎಂಬ ಸಿನಿಮಾ ಮಾಡಿದ್ದರು. ಆ ದಿನಗಳಲ್ಲಿ ತುಂಬಾ ದಿನ ಓಡಿದ ಸಿನಿಮಾ. ಚೀನಿ ಭಾಷೆಯಲ್ಲೂ ಡಾ.ಡಿ.ಎಸ್. ಕೊಟ್ನಿಸ್' ಎಂಬ ಸಿನಿಮಾ ಸಹ ಬಂದಿದೆ. ಎರಡೂ ದೇಶಗಳು ಅಂಚೆ ಚೀಟಿ ಹೊರಡಿಸಿ ಗೌರವಿಸಿವೆ. ಚೀನಿ ಭಾಷೆಯಲ್ಲಿ ಡಾ.ಕೊಟ್ನಿಸ್ ಕುರಿತು ಏನಿಲ್ಲವೆಂದರೂ 20೦ ಪುಸ್ತಕಗಳು ಪ್ರಕಟವಾಗಿವೆ. ಚೀನಾದ ಪಠ್ಯ-ಪುಸ್ತಕದಲ್ಲಿ ದೇಶಕ್ಕಾಗಿ ದುಡಿದವರ ಪಟ್ಟಿಯಲ್ಲಿ ಡಾ.ಕೊಟ್ನಿಸ್ ಹೆಸರೂ ಇದೆ. ಅಲ್ಲಿನ ಮಕ್ಕಳಿಗೆ ಅವರ ತ್ಯಾಗದ ಕತೆಯನ್ನು ಇಂದಿಗೂ ಹೇಳುತ್ತಾರೆ. ಪ್ರತಿವರ್ಷ ಡಿಸೆಂಬರ್ 9 ಬಂದರೆ, ಚೀನಾ ಸರಕಾರ ಡಾ.ಕೊಟ್ನಿಸ್ ಪುಣ್ಯತಿಥಿಯನ್ನು ಆಚರಿಸುತ್ತದೆ. 1996ರಲ್ಲಿ ಚೀನಾ ಅಧ್ಯಕ್ಷ ಜಿಯಾಂಗ್ ಜೆಮಿನ್ ಭಾರತಕ್ಕೆ ಬಂದಾಗ ಕೊಟ್ನಿಸ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ ವಿಶೇಷ ಪ್ರತಿನಿಧಿಗಳ ಮೂಲಕ ಹೂಗುಚ್ಛ ಕಳಿಸಲು ಮರೆಯಲಿಲ್ಲ. ಅನಂತರ ಯಾರೇ ಬರಲಿ, ಅವರೆಲ್ಲ ಕೊಟ್ನಿಸ್ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಹುತಾತ್ಮರ ಸಂಸ್ಮರಣಾ ಪಾರ್ಕ್‌ನಲ್ಲಿ ಚೀನಾ ಸರಕಾರ ಡಾ.ಕೊಟ್ನಿಸ್ ನೆನಪಿನಲ್ಲಿ ಸುಂದರ ಸ್ಮಾರಕ ನಿರ್ಮಿಸಿದೆ. ಅಷ್ಟೇ ಅಲ್ಲ ಅವರ ಹೆಸರಿನಲ್ಲಿ ಒಂದು ಮ್ಯೂಜಿಯಂ ಸಹ ಚೀನಾದಲ್ಲಿ ಇದೆ. ಡಾ.ಕೊಟ್ನಿಸ್ ಸಹೋದರಿಯರು ಐದಾರು ಸಲ ಚೀನಾಕ್ಕೆ ಭೇಟಿ ಕೊಟ್ಟು ಬಂದಿದ್ದಾರೆ. ರಾಷ್ಟ್ರ ಪತಿಯಾಗಿದ್ದಾಗ ಕೆ.ಆರ್.ನಾರಾಯಣನ್, ಪ್ರಧಾನಿಯಾಗಿದ್ದಾಗ ವಾಜಪೇಯಿ ಸಹ ಡಾ.ಕೊಟ್ನಿಸ್ ಪತ್ನಿಯನ್ನು ಭೇಟಿ ಮಾಡಿದ್ದಾರೆ. ಪ್ರಸ್ತುತ ಚೀನಾ ಪ್ರವಾಸದಲ್ಲಿರುವ ನನಗೆ ಇದೆಲ್ಲ ನೆನಪಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more