ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಳಿವಿನಂಚಿನಲ್ಲಿ ಹಾರ್ನ್‌ಬಿಲ್ ಪಕ್ಷಿಸಂಕುಲ

By * ವಿಶ್ವೇಶ್ವರ ಭಟ್
|
Google Oneindia Kannada News

Pilai Poonswad
(ಹಿಂದಿನ ಪುಟದಿಂದ...)

1995ರಲ್ಲಿ ಥಾಯ್ ಗುಡ್ಡಗಾಡು ಜನ ಹಾಗೂ ಹಳ್ಳಿಗರು ಬಡತನದ ಬೇಗೆಯಿಂದ ಅಗಾಧ ಪ್ರಮಾಣದಲ್ಲಿ ಕಾಡನ್ನು ಕಡಿಯಲಾರಂಭಿಸಿದಾಗ, ಹಾರ್ನ್‌ಬಿಲ್ ಸಂಕುಲಕ್ಕೆ ಕುತ್ತು ಬರಬಹುದೆಂದು ಡಾ. ಪಿಲೈ ಜಾಗೃತಿ ಆಂದೋಲನ ಆರಂಭಿಸಿದಳು. ಅದರಿಂದ ಪ್ರಯೋಜನವಾಗದಾಗ, ಯುವಕರ ಪಡೆ ಕಟ್ಟಿ, ರೈತರ ವಿರುದ್ಧ ಹೋರಾಟಕ್ಕಿಳಿದಳು. ಹಾರ್ನ್‌ಬಿಲ್ ಸಂರಕ್ಷಣೆಗಾಗಿ ಆರಂಭವಾದ ಆ ಹೋರಾಟ ರಾಷ್ಟ್ರೀಯ ಮಹತ್ವ ಪಡೆದುಕೊಂಡಿತು. ಸರಕಾರ ಹಾರ್ನ್‌ಬಿಲ್ ಅನ್ನು ಉಳಿಸಲು ನಿರ್ಧರಿಸಿತು. ಆನಂತರ ಆಕೆ ಥಾಯ್ಲೆಂಡ್‌ನಲ್ಲಿರುವ ಎಲ್ಲ ಹಾರ್ನ್ ಬಿಲ್‌ಗಳಿಗೆ ಕಾಲರ್ ಅಳವಡಿಸಿ, ಗಣತಿ ಆರಂಭಿಸಿದಳು. ಪ್ರತಿ ಹಾರ್ನ್‌ಬಿಲ್‌ನ ವೈಯಕ್ತಿಕ ವಿವರ ತಯಾರಿಸಿದಳು. ಈ ಸಂದರ್ಭದಲ್ಲಿ ಆಕೆಯ ಅನುಭವಕ್ಕೆ ಬಂದಿದ್ದೇನೆಂದರೆ ಹಾರ್ನ್ ಬಿಲ್ ಅತ್ಯಂತ ವೇಗದಲ್ಲಿ ಕಣ್ಮರೆಯಾಗುತ್ತಿರುವುದರಿಂದ, ಇನ್ನು ಎರಡು-ಮೂರು ದಶಕಗಳಲ್ಲಿ ಇಡೀ ಸಂಕುಲವೇ ವಿನಾಶವಾಗಬಹುದು ಎಂದು.

ಡಾ. ಪಿಲೈ ತನ್ನ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಿದಳು. ಥಾಯ್ಲೆಂಡಿನಲ್ಲಿರುವ ಎಲ್ಲ ಶಾಲೆ, ಹೈಸ್ಕೂಲುಗಳಿಗೆ ಭೇಟಿ ನೀಡಿ, ಈ ಪಕ್ಷಿಯ ಕುರಿತು ಸಿನಿಮಾ ತೋರಿಸಿ, ನೋಡಿ, ಮಕ್ಕಳೇ, ಹಾರ್ನ್ ಬಿಲ್ ಅನ್ನು ಸಂರಕ್ಷಿಸುವ ಜವಾಬ್ದಾರಿ ನಿಮ್ಮದು. ನೀವು ಅಲಕ್ಷ್ಯ ತೋರಿದರೆ, ನೀವು ದೊಡ್ಡವರಾಗುವ ಹೊತ್ತಿಗೆ ಈ ಪಕ್ಷಿಯೇ ಇರುವುದಿಲ್ಲ. ಇದನ್ನು ಉಳಿಸಲು ಪಣ ತೊಡಿ" ಎಂದು ಕರೆಕೊಟ್ಟಳು. ಅದೇ ಸಂದರ್ಭದಲ್ಲಿ ಆಕೆ ಹಾರ್ನ್‌ಬಿಲ್ ಸಂರಕ್ಷಣೆಗಾಗಿ ಎಲ್ಲ ರಾಷ್ಟ್ರಗಳ ಅಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಿದಳು.

ಡಾ. ಪಿಲೈ ಕೇವಲ ಅಧ್ಯಯನದಲ್ಲಿ ಮೈಮರೆತವಳಲ್ಲ. ಸಂಶೋಧನೆಯ ಜತೆಜತೆಗೆ ಹೋರಾಟವನ್ನೂ ಬೆನ್ನಿಗೆ ಕಟ್ಟಿಕೊಂಡಳು. ಹಾರ್ನ್ ಬಿಲ್‌ಗಾಗಿ ಬದುಕನ್ನೇ ಸಮರ್ಪಿಸಿಕೊಂಡಳು. ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಹುದ್ದೆಗೆ ರಾಜೀನಾಮೆ ನೀಡಿ, ಹಾರ್ನ್‌ಬಿಲ್ ಸಂರಕ್ಷಣೆಗಾಗಿ ಪೂರ್ಣಾವಧಿ ತೊಡಗಿಸಿಕೊಂಡಳು. 2006ರಲ್ಲಿ ಶೆವ್ರಾನ್ ಪ್ರಶಸ್ತಿ ಹಾಗೂ ಅದೇ ವರ್ಷ ರೊಲೆಕ್ಸ್ ವಾಚ್ ಕಂಪನಿ ಪಕ್ಷಿ ಸಂರಕ್ಷಣೆಗಾಗಿ ಮುಡಿಪಾಗಿಟ್ಟ ಪ್ರಶಸ್ತಿ ಬಂದವು. ಡಾ. ಪಿಲೈ ಬಹುಮಾನದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳದೇ ಹಾರ್ನ್‌ಬಿಲ್ ಪ್ರತಿಷ್ಠಾನಕ್ಕೆ ನೀಡಿಬಿಟ್ಟಳು.

ಹಾರ್ನ್‌ಬಿಲ್ ರೂಪ, ಗುಣವೈಶಿಷ್ಟ್ಯ, ಜೀವನವಿಧಾನ ಹಾಗೂ ಡಾ. ಪಿಲೈ ಜೀವನ, ಸಾಧನೆ, ಒಂದು ಪಕ್ಷಿಗಾಗಿ ಆಕೆಯ ಹೋರಾಟ, ಕಳಕಳಿ, ಕಾಳಜಿಯಿಂದ ನನಗೆ ಗೊತ್ತಿಲ್ಲದಂತೆ ಹಾರ್ನ್‌ಬಿಲ್ ನನ್ನ ದೇಹವೆಂಬ ಪೊಟರೆಯೊಳಗೆ ಕನ್ನ ಕೊರೆಯಲಾರಂಭಿಸಿತ್ತು. ಮನಸ್ಸು ದಾಂಡೇಲಿಯತ್ತ ಮುಖ ಮಾಡಿತ್ತು. ಹಾರ್ನ್‌ಬಿಲ್ ರೆಸಾರ್ಟ್‌ನಲ್ಲಿ ತಂಬುಹೂಡಿದೆ. ಆ ರೆಸಾರ್ಟ್‌ನ ಉಮೇಶ ಹಾರ್ನ್‌ಬಿಲ್ ಬಗ್ಗೆ ಸ್ವಾರಸ್ಯಕರ ಕತೆಗಳನ್ನು ಹೇಳಿ ಹುಚ್ಚು ಹತ್ತಿಸಿದರು. ಈಗ ಶಿರಸಿಯಲ್ಲಿ ಡೆಪ್ಯುಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ ಆಗಿರುವ ಮನೋಜ್‌ಕಮಾರ್, ಹಾರ್ನ್‌ಬಿಲ್ ಬಗ್ಗೆ ಕುತೂಹಲದ ತಿದಿಯೂದಿದರು. ಅಂದು ದಾಂಡೇಲಿಯ ಹಾರ್ನ್ ಬಿಲ್ ರೆಸಾರ್ಟ್‌ನಲ್ಲಿ ಬೆಳಗಾಗುತ್ತಲೇ, ಹಾರ್ನ್‌ಬಿಲ್‌ಗಳ ಸಾಲು ಸುಗ್ಗಿಕುಣಿತ ಆರಂಭವಾಗಿತ್ತು. ಆ ಪಕ್ಷಿಗಳ ಮೊರೆತ, ಕೇಕೆ ಸಂತೆಯ ಗೌಜನ್ನು ಹಿತವಾಗಿ ಸೃಷ್ಟಿಸಿತ್ತು. ಪಕ್ಷಿಗಳಲ್ಲೇ ತನ್ನ ದೊಡ್ಡದಾದ, ಬಣ್ಣದ ಕೊಕ್ಕಿನಿಂದ ಆಕರ್ಷಿಸುವ ಹಾರ್ನ್‌ಬಿಲ್ ಕೂಗು, ಚೇಷ್ಟೆ, ಜಗಳ, ಹಾರಾಟ, ಲಲ್ಲೆಗರೆಯುವಿಕೆಯನ್ನು ನೋಡಿಯೇ ಆನಂದಿಸಬೇಕು. ಅದು ಏನೇ ಮಾಡಿದರೂ ಚೆಂದ.

ಮನೋಜ್‌ಕುಮಾರ್ ಹೇಳುತ್ತಿದ್ದರು- ಈ ಪಕ್ಷಿಯ ಲೈಫ್‌ಸ್ಟೈಲ್ ಬಹಳ ಕುತೂಹಲ. ಒಮ್ಮೆ ಗಂಡು ಹಾರ್ನ್‌ಬಿಲ್, ತನಗೆ ಇಷ್ಟವಾದ ಹೆಣ್ಣನ್ನು ಬಯಸಿದರೆ ಮುಗಿಯಿತು, ಅಂದೇ ಅವರು ಸತಿ-ಪತಿಗಳಾದಂತೆ. ಜೀವನದ ಕೊನೆತನಕ ಒಟ್ಟಿಗೇ ಇರುತ್ತವೆ. ಒಂದು ವೇಳೆ ಆ ಪೈಕಿ ಯಾವುದೋ ಒಂದು ಸತ್ತು ಹೋದರೆ, ಸಂಗಾತಿಯ ಕೊರಗಿನಲ್ಲಿ ಮತ್ತೊಂದು ಸಹ ಸತ್ತುಹೋಗುತ್ತದೆ. ಒಂದಕ್ಕೊಂದು ಅಂಥ ಅಟ್ಯಾಚ್‌ಮೆಂಟ್'!

ಭಾರತದಲ್ಲಿ ಒಂಬತ್ತು ರೀತಿಯ ಹಾರ್ನ್‌ಬಿಲ್‌ಗಳಿವೆ. ಪೂರ್ವಾಂಚಲದಲ್ಲಿ ಐದು ಹಾಗೂ ಪಶ್ಚಿಮಘಟ್ಟದ ಕಾಡುಗಳಲ್ಲಿ ನಾಲ್ಕು ರೀತಿಯ ಹಾರ್ನ್‌ಬಿಲ್‌ಗಳಿವೆ. ಆ ಪೈಕಿ ನಾಲ್ಕೂ (ಮಲಬಾರ್ ಗ್ರೇ, ಗ್ರೇಟ್ ಪೈಡ್, ಕಾಮನ್ ಗ್ರೇ, ಮಲಬಾರ್ ಪೈಡ್) ಹಾರ್ನ್‌ಬಿಲ್‌ಗಳು ದಾಂಡೇಲಿ ಕಾಡಿನಲ್ಲಿವೆ. ಈ ಪಕ್ಷಿಗಳು ಹುಳು ಹಪ್ಪಟೆಗಳನ್ನು ಸೇವಿಸುವುದಾದರೂ, ಮುಖ್ಯವಾಗಿ ಇವುಗಳಿಗೆ ಹಣ್ಣು-ಹಂಪಲವೇ ಇಷ್ಟ. ಮುನ್ನೂರ ಅರವತ್ತೈದು ದಿನವೂ ಹಣ್ಣುಗಳು ಸಿಗುವ ಕಾಡುಗಳಲ್ಲೇ ಇವು ಕಾಣಿಸಿಕೊಳ್ಳುತ್ತವೆ. ಹಾರ್ನ್‌ಬಿಲ್ ಎಲ್ಲಿರುತ್ತವೆಯೋ ಆ ಕಾಡು ಜೀವವೈವಿಧ್ಯದಲ್ಲಿ ಶ್ರೀಮಂತವಾಗಿದೆ ಎಂದೇ ಅರ್ಥ.

ಹಾರ್ನ್‌ಬಿಲ್‌ನ ಒಂದು ಸೋಜಿಗದ ಬಗ್ಗೆ ಹೇಳಬೇಕು. ಹೆಣ್ಣು ಹಾರ್ನ್‌ಬಿಲ್ ಮರಿಹಾಕಲು ಇನ್ನೂ 30-40 ದಿನಗಳಿವೆ ಎಂದಾಗ ಮರದ ದೊಡ್ಡ ಪೊಟರೆ ಮಾಡುತ್ತದೆ ಅಥವಾ ಪೊಟರೆಯಿರುವ ಮರವನ್ನು ಸೇರಿಕೊಳ್ಳುತ್ತದೆ. ಕಸ, ಮಣ್ಣನ್ನು ತನ್ನ ಜೊಲ್ಲಿನಿಂದ ಕಲೆಸಿ ತನ್ನ ಚುಂಚವನ್ನು ಹೊರಚಾಚುವಷ್ಟು ಸಣ್ಣ ರಂಧ್ರವನ್ನು ಬಿಟ್ಟು ಇಡೀ ಪೊಟರೆಯ ಬಾಯನ್ನು ಮುಚ್ಚಿಬಿಡುತ್ತದೆ. ಪೊಟರೆಯ ಒಳಗಡೆ ತನ್ನ ಗರಿಗಳನ್ನು ಹಾಸಿ ಅದರ ಮೇಲೆ ಮೊಟ್ಟೆ ಹಾಕಿ ಕಾವು ಕೊಡುತ್ತದೆ. ಮರಿಗೆ ಮೆತ್ತನೆಯ ಅನುಭವ ನೀಡಲು ತನ್ನೆಲ್ಲ ಗರಿಗಳನ್ನು ಉದುರುಸಿಬಿಡುತ್ತದೆ. ಹೊರಜಗತ್ತಿನೆಡೆಗೆ ಅದಕ್ಕೆ ಸಂಪರ್ಕವೇ ಇಲ್ಲ. ಗಂಡು ಹಕ್ಕಿಯೇ ಹೆಂಡತಿ, ಮಗುವಿಗೆ ಆಹಾರ ತಂದು ಕೊಡಬೇಕು.

ಸಾಮಾನ್ಯವಾಗಿ ಹಾರ್ನ್‌ಬಿಲ್ ಮೊಟ್ಟೆ ಹಾಕಿ ಮರಿ ಮಾಡುವುದು ಮಾರ್ಚ್-ಏಪ್ರಿಲ್‌ನಲ್ಲಿ. ಅಂದರೆ ದಟ್ಟ ಬೇಸಿಗೆ ಕಾಲ. ಕಾಡೆಲ್ಲ ಬರಿದಾಗಿರುವ ಸಮಯ. ಆಗ ತನ್ನ ಹೆಂಡತಿ, ಮಗುವಿಗಾಗಿ ಗಂಡು ಪಕ್ಷಿ ಹಣ್ಣಿಗಾಗಿ ಕಾಡೆಲ್ಲ ಅಲೆಯುತ್ತದೆ. ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಸಿಗುವುದಿಲ್ಲ. ದಾಂಡೇಲಿಯಲ್ಲಿನ ಹಾರ್ನ್‌ಬಿಲ್ ಹೊನ್ನಾವರದ ತನಕ ಹಾರಿಹೋಗಿ ಹಣ್ಣುಗಳನ್ನು ಸಂಪಾದಿಸಿ ಹೆಂಡತಿ, ಮಗುವಿಗೆ ಉಣಿಸುತ್ತದೆ. ಈ ಬೇಸಿಗೆ ಕಾಲ ಬೇಟೆಯ ಕಾಲವೂ ಹೌದು. ಗಂಡು ಹಾರ್ನ್‌ಬಿಲ್ ಎಲ್ಲಿದ್ದರೂ ಢಾಳಾಗಿ ಕಣ್ಣಿಗೆ ಬೀಳುವುದರಿಂದ ಬೇಟೆಗಾರನಿಗೆ ಬಲಿಯಾದರೆ, ಇತ್ತ ಪೊಟರೆಯೊಳಗಿನ ತಾಯಿ-ಮಗು ಹೊರಬರಲಾಗದೇ ಉಪವಾಸ ಬಿದ್ದು ಸತ್ತುಹೋಗುತ್ತವೆ. ತಾಯಿ ಹಾರ್ನ್‌ಬಿಲ್ ಕಷ್ಟಪಟ್ಟು ಪೊಟರೆಯಿಂದ ಹೊರಬಂದಿತೆನ್ನಿ, ಮರಿಗೆ ಮೆತ್ತನೆ ಅನುಭವ ನೀಡಲು ಗರಿಗಳನ್ನೆಲ್ಲ ಉದುರಿಸಿದ್ದರಿಂದ, ಅದು ಹಾರಲಾಗದೇ ಸತ್ತು ಹೋಗುತ್ತದೆ. ಹೀಗಾಗಿ ಪೊಟರೆಯಲ್ಲಿ ಹೆಂಡತಿ-ಮಗು ಇದ್ದಷ್ಟು ದಿನ ಗಂಡು ಹಾರ್ನ್‌ಬಿಲ್ ಸದಾ ಕರ್ತವ್ಯ ಹಾಗೂ ಸೇವಾನಿರತ! ತಾನು ಉಪವಾಸಬಿದ್ದು ಸಂಸಾರವನ್ನು ಸಲಹುತ್ತದೆ.

ನಾನು ಈ ಹಾರ್ನ್‌ಬಿಲ್ ಬಗ್ಗೆ ನಿಮಗೆ ಹೇಳೋದು ಸಾಕಷ್ಟಿದೆ. ಅವುಗಳಿಂದ ಕಲಿಯೋದು ಇನ್ನೂ ಬೇಕಾದಷ್ಟಿದೆ.

ದಾಂಡೇಲಿ ಕಾಡಲ್ಲಿ ಹಾರ್ನ್‌ಬಿಲ್ ಎಂಬ ಸುಂದರಿ!ದಾಂಡೇಲಿ ಕಾಡಲ್ಲಿ ಹಾರ್ನ್‌ಬಿಲ್ ಎಂಬ ಸುಂದರಿ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X