• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರ್ಜಿಗೆ ಬೀಳದವ ನಾಯಕ, ಉಳಿದವ ಹಿಂಬಾಲಕ

By * ವಿಶ್ವೇಶ್ವರ ಭಟ್
|
Abraham Lincoln
ಕೆಲವರಿರುತ್ತಾರೆ ಅವರಿಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಪರಿಣಾಮದ ಬಗ್ಗೆ ಭಯ. ಹೀಗಾಗಿ ಅವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವರಿಗೆ ತಾವು ತೆಗೆದುಕೊಳ್ಳುವ ನಿರ್ಧಾರದಿಂದ ಬೇರೆಯವರಿಗೆ ಬೇಸರವಾಗುವುದೆಂಬ ದಾಕ್ಷಿಣ್ಯ. ಹೀಗಾಗಿ ಅವರೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮತ್ತೆ ಕೆಲವರಿಗೆ ತಾವು ತೆಗೆದುಕೊಳ್ಳುವ ನಿರ್ಧಾರ ತಮಗೇ ಮುಳುವಾದರೇನು ಗತಿ ಎಂಬ ದುಗುಡ. ಹೀಗಾಗಿ ಅವರೂ ಸಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ.

ಇನ್ನೊಂದು ರೀತಿಯ ಜನರಿರುತ್ತಾರೆ. ಅವರು ಪರಿಣಾಮದ ಬಗ್ಗೆ ಯೋಚನೆಯನ್ನೇ ಮಾಡುವುದಿಲ್ಲ. ತಮ್ಮ ನಿರ್ಧಾರದಿಂದ ತೊಂದರೆ ಬರುವುದು ಗ್ಯಾರಂಟಿಯೆಂಬುದು ಗೊತ್ತಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗನಿಸಿದ್ದನ್ನು ಹೇಳಲು, ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಯಾರು ಏನೇ ಹೇಳಲಿ, ಹಳಿಯಲಿ ಅವರು ದರಕರಿಸುವುದಿಲ್ಲ. ಮನಸ್ಸಿನಲ್ಲಿದ್ದುದನ್ನು ಕಾಣಾಕಾಣಾ ಬಿಚ್ಚಿಡಲು ಅವರು ಯಾರ ಮರ್ಜಿ ಕಾಯುವುದಿಲ್ಲ. ಇನ್ನು ಕೆಲವರಿರುತ್ತಾರೆ. ಅವರಿಗೆ ನಿರ್ಧಾರ ತೆಗೆದುಕೊಳ್ಳುವುದೆಂದರೆ ಅದು ಬೇರೆಯವರನ್ನು ಮೆಚ್ಚಿಸಲಿಕ್ಕೆ ಮಾತ್ರ ಎಂದು ಭಾವಿಸಿರುತ್ತಾರೆ. ಬೇರೆಯವರನ್ನು ಎದುರು ಹಾಕಿಕೊಂಡು ನಿರ್ಧಾರ ತೆಗೆದುಕೊಳ್ಳುವ ಛಾತಿ ಅವರಲ್ಲಿ ಇರುವುದಿಲ್ಲ. ಪರಿಣಾಮದ ಬಗ್ಗೆ ಯೋಚಿಸದೇ ಕಠಿಣ ನಿರ್ಧಾರ ತೆಗೆದುಕೊಳ್ಳುವವರು ಸಿಗುವುದು ಅಪರೂಪ. ಬೇರೆಯವರನ್ನು ಸಂಪ್ರೀತಗೊಳಿಸುವುದಕ್ಕೆ ಕಾರ್ಯತತ್ಪರರಾಗುವವರು ಎಲ್ಲೆಡೆಯೂ ಸಿಗುತ್ತಾರೆ. ಮೊದಲ ವರ್ಗಕ್ಕೆ ಸೇರಿದವರು ನಾಯಕರೆಂದು ಅನಿಸಿಕೊಳ್ಳುತ್ತಾರೆ. ಎರಡನೆಯವರು ಬಾಲ ಬಡುಕರು.

ರಾಜ್ಯದ ಎಲ್ಲ ರೈತರಿಗೆ ನಾಳೆಯಿಂದ ಪುಕ್ಕಟೆ ವಿದ್ಯುತ್ ಕೊಡಲಾಗುವುದು" ಎಂದು ಯಾವ ಮುಖ್ಯಮಂತ್ರಿ ಬೇಕಾದರೂ ಘೋಷಿಸಬಹುದು. ಈ ನಿರ್ಧಾರ ತೆಗೆದುಕೊಳ್ಳಲು ಯಾವ ಎದೆಗಾರಿಕೆಯೂ ಬೇಕಾಗಿಲ್ಲ. ಇನ್ನು ಮೂರು ವರ್ಷ ಸರಕಾರಿ ನೌಕರರಿಗೆ ತುಟ್ಟಿಭತ್ತೆ ನೀಡಲಾಗುವುದಿಲ್ಲ, ನಾನು ಅಧಿಕಾರದಲ್ಲಿರುವಷ್ಟು ದಿನ ರೈತರಿಗೆ ಪುಕ್ಕಟೆ ವಿದ್ಯುತ್ ನೀಡಲಾಗುವುದಿಲ್ಲ, ಸಾಲಮನ್ನಾ ಮಾಡುವುದಿಲ್ಲ ಎಂದು ಯಾವನಾದರೂ ಘೋಷಿಸಿದರೆ ಆ ಮುಖ್ಯಮಂತ್ರಿಯ ಎದೆಗಾರಿಕೆಯನ್ನು ಮುಟ್ಟಿ ನೋಡಬೇಕಾಗುತ್ತದೆ. ಇಂಥ ನಿರ್ಧಾರ ತೆಗೆದುಕೊಳ್ಳಲು ಗುಂಡಿಗೆ ಗಟ್ಟಿಯಿರಬೇಕು. ಇಂಥ ನಿರ್ಧಾರಕ್ಕೆ ಯಾವನು ಮುಂದಾಗುತ್ತಾನೋ ಅವನು ಕೇವಲ ಮುಖ್ಯಮಂತ್ರಿ ಅಂತ ಕರೆಯಿಸಿಕೊಳ್ಳುವುದಿಲ್ಲ. ಮಹಾನ್ ನಾಯಕನೆನಿಸಿಕೊಳ್ಳುತ್ತಾನೆ. ಯಾರು ಬೇಕಾದರೂ ಮುಖ್ಯಮಂತ್ರಿಯಾಗುತ್ತಾರೆ. ಕೆಲವರು ಮಾತ್ರ ಮಹಾನ್ ನಾಯಕರಾಗುತ್ತಾರೆ. ಅದಕ್ಕಾಗಿಯೇ ಈ ದೇಶದಲ್ಲಿ ಹುಡುಕಿದರೆ ನೂರು ಮಾಜಿ ಮುಖ್ಯಮಂತ್ರಿಗಳು ಸಿಕ್ಕಾರು. ಆದರೆ ಒಬ್ಬ ಮಹಾನ್ ನಾಯಕನಿಗೆ ನಾವು ಈಗಲೂ ಹುಡುಕಬೇಕಾದ ಪರಿಸ್ಥಿತಿಯಿದೆ.

ಈ ಮಾತನ್ನು ಹೇಳುವಾಗ ಅಬ್ರಹಾಂ ಲಿಂಕನ್ ನೆನಪಾಗುತ್ತಾನೆ. ಕೇವಲ ಅಮೆರಿಕದಲ್ಲಿ ಮಾತ್ರ ಅಲ್ಲ ಇಡೀ ವಿಶ್ವವೇ ಮಹಾನ್ ಎಂದು ಒಪ್ಪಿಕೊಂಡ ನಾಯಕನೀತ. 1861ರಲ್ಲಿ ಲಿಂಕನ್ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾಗಿ ನಾಲ್ಕೈದು ತಿಂಗಳಿಗೆ ಆತ ತೀವ್ರ ಬಿಕ್ಕಟ್ಟನ್ನು ಎದುರಿಸಿದ. ಗುಲಾಮಗಿರಿಗೆ ಸಂಬಂಧಿಸಿದಂತೆ ದಕ್ಷಿಣ ಭಾಗದ ರಾಜ್ಯಗಳು ಪ್ರತ್ಯೇಕತೆಯ ಕೂಗನ್ನೆಬ್ಬಿಸಿದವು. ಪ್ರತ್ಯೇಕ ದೇಶದ ಬೇಡಿಕೆ ದಿನದಿಂದ ದಿನಕ್ಕೆ ಕಾವು ಪಡೆಯಲಾರಂಭಿಸಿತು. ಲಿಂಕನ್‌ಗೆ ಈ ವಿವಾದ ಪಡೆದುಕೊಳ್ಳಬಹುದಾದ ಸ್ವರೂಪದ ಬಗ್ಗೆ ಸ್ಪಷ್ಟ ಅರಿವಿತ್ತು. ಪ್ರತ್ಯೇಕತೆಯ ಹೋರಾಟದಲ್ಲಿರುವವರ ಜತೆ ಶಾಮೀಲಾದರೆ ತನ್ನ ಅಧಿಕಾರವನ್ನು ಬೆಚ್ಚಗೆ ಇಟ್ಟುಕೊಳ್ಳಬಹುದೆಂಬ ರಾಜಕೀಯ ಲೆಕ್ಕಾಚಾರವನ್ನು ಅವನಿಗೆ ಯಾರೂ ಕಲಿಸಿಕೊಡಬೇಕಾಗಿರಲಿಲ್ಲ. ಆದರೆ ಲಿಂಕನ್ ಹಾಗೆ ಮಾಡಲಿಲ್ಲ. ಪ್ರತ್ಯೇಕ ದೇಶದ ಬೇಡಿಕೆ ಮುಂದಿಟ್ಟವರ ಮೇಲೆ ಯುದ್ಧ ಘೋಷಿಸಿಬಿಟ್ಟ!

ಲಿಂಕನ್ ಇಂಥ ನಿರ್ಧಾರ ತೆಗೆದುಕೊಳ್ಳಬಹುದೆಂದು ಯಾರೂ ಊಹಿಸಿರಲಿಲ್ಲ. ಅಮೆರಿಕದ ಸೈನಿಕರು ಅಮೆರಿಕನ್ನರ ವಿರುದ್ಧವೇ ಯುದ್ಧಕ್ಕೆ ನಿಂತರು. ಅಲ್ಲಿನ ಸೈನಿಕರು ತಾಯ್ನಾಡಿನವರನ್ನೇ ಬಂದೂಕಿನ ಬಾಯಿಗೆ ಇಟ್ಟು ಇರಿದರು, ಸುಟ್ಟರು. ಯುದ್ಧ ನಾಲ್ಕು ವರ್ಷಗಳವರೆಗೆ ನಡೆಯಿತು. ಯುದ್ಧದ ಬಿಸಿ ಲಿಂಕನ್‌ನ ಕುರ್ಚಿಯಡಿಯಲ್ಲಿ ನಿಗಿನಿಗಿಯಾಗಿತ್ತು. ಯಾಕಾದರೂ ಯುದ್ಧ ಸಾರಿದೆನೋ ಎಂದು ಅವನಿಗೆ ಅನಿಸಲಾರಂಭಿಸಿತ್ತು. ಆದರೆ ಲಿಂಕನ್ ಛಲ ಹಾಗಿತ್ತು. ಹಿಂದೆ ಹೆಜ್ಜೆ ಹಾಕಲಿಲ್ಲ. ಈ ಯುದಟಛಿದಲ್ಲಿ ಸುಮಾರು ಎರಡು ಲಕ್ಷ ಜನ ಹತರಾದರು. ಎರಡು ಮಹಾಯುದ್ಧಗಳಲ್ಲಿ ಅಮೆರಿಕದ ಇಷ್ಟೊಂದು ಮಂದಿ ಸತ್ತಿರಲಿಲ್ಲ. ಯುದ್ಧ ಮುಗಿಯುವ ಹೊತ್ತಿಗೆ ತನ್ನ ಜೀವಕ್ಕೆ ಸಂಚಕಾರ ವಿದೆಯೆಂಬುದು ಲಿಂಕನ್‌ಗೆ ಗೊತ್ತಾಗಿತ್ತು. ಗೂಢಚರ್ಯೆ ವಿಭಾಗ ದವರು ಈ ಕುರಿತು ಲಿಂಕನ್‌ನನ್ನು ಎಚ್ಚರಿಸಿದ್ದರು. ಯುದ್ಧ ಮುಗಿದ ಆರನೆ ದಿನಕ್ಕೆ ಲಿಂಕನ್ ಹತ್ಯೆಗೊಳಗಾದ. ಆದರೆ ಅಮೆರಿಕ ಬಚಾವ್ ಆಯಿತು!

ಅಂದು ಲಿಂಕನ್ ಈ ಪರಿ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಇಂದಿದ್ದ ಅಮೆರಿಕ ಮೂರ್ನಾಲ್ಕು ದೇಶಗಳಾಗಿ ವಿಭಜನೆಯಾಗಿ ಭೂಪಟದ ಮೇಲೆ ಕಂಗೊಳಿಸುತ್ತಿತ್ತು. ಲಿಂಕನ್‌ಗೆ ತನ್ನ ನಿರ್ಧಾರ ಜೀವಕ್ಕೆ ಮುಳುವಾಗಬಹುದೆಂಬ ಸಂಗತಿಯೂ ಗೊತ್ತಿತ್ತು. ಆದರೆ ಅವನು ತನ್ನ ನಿರ್ಧಾರದಿಂದ ಸ್ವಲ್ಪವೂ ವಿಮುಖನಾಗಲಿಲ್ಲ. ಲಿಂಕನ್ ರೀತಿ ನಮ್ಮ ರಾಜಕಾರಣಿಗಳೇನಾದರೂ ಯೋಚಿಸಿದ್ದರೆ ನಮ್ಮ ಉತ್ತರ ಕರ್ನಾಟಕ, ಕೊಡಗು ಮುಂತಾದೆಡೆಯೆದ್ದ ಪ್ರತ್ಯೇಕತೆಯಬೇಡಿಕೆಗೆ ಉತ್ತರ ಸಿಗುತ್ತಿತ್ತು.

ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಸಣ್ಣ ಮಾತಲ್ಲ. ಅದಕ್ಕೆ ಎದೆಯಲ್ಲಿ ಜಗಜಟ್ಟಿ ಮಲಗಿರಬೇಕಾಗುತ್ತದೆ. ಜನರು ಹೇಳುವ ಕೊಂಕು ಮಾತಿಗೆ, ಚುಚ್ಚು ನುಡಿಗೆ ಶಟಗೊಳ್ಳುವವ ಒಂದು ಸಣ್ಣ ನಿರ್ಧಾರಕ್ಕೆ ಬರಲಾರ. ಸಿಖ್ ಉಗ್ರಗಾಮಿಗಳು ಅಮೃತಸರದ ಸ್ವರ್ಣ ಮಂದಿರವನ್ನು ಸುತ್ತುವರಿದ ಸಂದರ್ಭ. ಇಂದಿರಾ ಗಾಂಧಿಯೇ ಸಾಕಿದ ಭಿಂದ್ರನ್ ವಾಲೆಯ ಮಂದಿಯೇ ಆಕೆಯ ವಿರುದ್ಧ ತಿರುಗಿ ಬಿದ್ದಿದ್ದರು. ಸ್ವರ್ಣಮಂದಿರದೊಳಗಿನ ಅಕಾಲ್‌ತಖ್ತ್ ಅನ್ನು ಸ್ವಾಧೀನಪಡಿಸಿಕೊಂಡಿದ್ದರು. ಯಾವುದೇ ಗುಂಡಿನ ಚಕಮಕಿಗೆ ಅವಕಾಶವಿರಲಿಲ್ಲ. ಇನ್ನು ಸ್ವಲ್ಪ ಕಾಲಾವಕಾಶವನ್ನು ನೀಡಿದ್ದರೆ ಅವರು ಇಡೀ ಸ್ವರ್ಣ ಮಂದಿರವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರು. ಉಗ್ರಗಾಮಿಗಳ ಮೇಲೆ ಗುಂಡು ಹಾರಿಸಿದರೆ ಸಿಖ್ಖರ ಪವಿತ್ರಕ್ಷೇತ್ರ ಹತ್ಯೆಯಿಂದ ಅಪವಿತ್ರವಾಗಿ ಧಾರ್ಮಿಕ ಭಾವನೆ ಮೇಲೆ ಹೊಡೆತ ಬೀಳಬಹುದೆಂದು ಭಾವಿಸಿದ ಅಂದಿನ ಸೇನಾ ಮುಖ್ಯಸ್ಥ ಜನರಲ್ ವೈದ್ಯ, ಇಂದಿರಾ ಗಾಂಧಿ ಆದೇಶಕ್ಕಾಗಿ ಪರಿಸ್ಥಿತಿಯ ಸೂಕ್ಷ್ಮವನ್ನು ವಿವರಿಸಿದ. ಸೈನಿಕರಿಗೆ ಉಗ್ರಗಾಮಿಗಳನ್ನು ಹೊಡೆದುರುಳಿಸುವುದು ದೊಡ್ಡ ಮಾತಾಗಿರಲಿಲ್ಲ. ಆದರೆ ಗುಂಡು ಹಾರಿಸುವ ತಾಣ ಅದಾಗಿರಲಿಲ್ಲ. ಅಲ್ಲದೇ ಸಿಖ್ಖರ ಪರಮ ಪವಿತ್ರ ಗ್ರಂಥ ಗುರುಗ್ರಂಥ ಸಾಹಿಬ್' ಅನ್ನು ಇಟ್ಟ ತಾಣ ಬೇರೆ. ಈ ಎಲ್ಲ ಸಂಗತಿಗಳನ್ನು ಅರಿತೇ ಜನರಲ್ ವೈದ್ಯ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇಂದಿರಾಗಾಂಧಿಯೆಡೆಗೆ ಮುಖ ಮಾಡಿದ್ದ.

ಇಂದಿರಾ ಜಾಗದಲ್ಲಿ ಬೇರೆ ಯಾರೇ ಆಗಿದ್ದರೂ ಅಂಥ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ಯಾವಾಗ ಜನರಲ್ ವೈದ್ಯ ಪರಿಸ್ಥಿತಿಯನ್ನು ವಿವರಿಸಿದನೋ ಕಾದು ನೋಡಲು ಸಮಯವೇ ಇರಲಿಲ್ಲ. ಇಂದಿರಾ ತಟ್ಟನೆ ಹೇಳಿದರು - Tank them. ಉಗ್ರಗಾಮಿಗಳನ್ನು ಮುಗಿಸಿಬಿಡಿ. ಅಕಾಲ್ ತಖ್ತ್‌ನೊಳಗೆ ಸೈನಿಕರನ್ನು ನುಗ್ಗಿಸಿ ಉಗ್ರರೆಲ್ಲರನ್ನೂ ಖತಮ್ ಮಾಡಿಬಿಡಿ." ಇದಾಗಿ ಅರ್ಧಗಂಟೆಯೊಳಗೆ ಮುನ್ನೂರಕ್ಕೂ ಹೆಚ್ಚು ಉಗ್ರರು ಹೆಣವಾಗಿ ಬಿದ್ದಿದ್ದರು! ಸ್ವರ್ಣಮಂದಿರದ ಪ್ರಾಂಗಣ ರಕ್ತ ರಕ್ತ! ಇಂದಿರಾಗೆ ತಾನೆಂಥ ಕಠಿಣ ನಿರ್ಧಾರಕ್ಕೆ ಮುಂದಡಿಯಿಡುತ್ತಿದ್ದೇನೆಂಬ ಕಲ್ಪನೆಯಿತ್ತು. ಸಿಖ್ ಉಗ್ರರು ಅವಳನ್ನು ಹಿಂಬಾಲಿಸುವ ಸಣ್ಣ ವಾಸನೆ ಸಹ ಹೊಡೆದಿತ್ತು. ಕೊನೆಗೆ ಅವರಿಂದಲೇ ಹತ್ಯೆಯೂ ಆಯಿತು. ಒಂದು ವೇಳೆ ಆ ದಿನ ಆ ನಿರ್ಧಾರ ತೆಗೆದುಕೊಳ್ಳದಿದ್ದರೆ ಇಡೀ ಸ್ವರ್ಣಮಂದಿರ ಉಗ್ರರ ಅಡಗುತಾಣವಾಗುತ್ತಿತ್ತು. ಅವರು ಅಲ್ಲಿಯೇ ತಂಬು ಹೂಡಿ ಅಟಕಾಯಿಸುತ್ತಿದ್ದರು.

ಜನತಾ ಸರಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನರಾಮ್ ಮಗ ಸುರೇಶರಾಮ್ ಲೈಂಗಿಕ ಹಗರಣವೊಂದರಲ್ಲಿ ಸಿಕ್ಕಿಬಿದ್ದಿದ್ದ. ಸುಷ್ಮಾ ಚೌಧುರಿಯೆಂಬ ಕಾಲೇಜು ಹುಡುಗಿಯೊಂದಿಗೆ ಲೈಂಗಿಕಕ್ರಿಯೆಯಲ್ಲಿ ತೊಡಗಿರುವ ಇಪ್ಪತ್ತು ಚಿತ್ರಗಳು ಇಂದಿರಾಗಾಂಧಿ ಒಡೆತನದಲ್ಲಿದ್ದ ಖುಷವಂತ್ ಸಿಂಗ್ ಸಂಪಾದಕತ್ವದ ನ್ಯಾಷನಲ್ ಹೆರಾಲ್ಡ್' ಪತ್ರಿಕೆಯನ್ನು ಸೇರಿದ್ದವು. ಈ ಸಂಗತಿ ಜಗಜೀವನರಾಮ್‌ಗೆ ತಿಳಿಯಿತು. ಆತ ಪ್ರಧಾನಿ ಮೊರಾರ್ಜಿಯನ್ನು ಸಂಪರ್ಕಿಸಿ, ಹೇಗಾದರೂ ಮಾಡಿ ನನ್ನ ಮಾನ ಉಳಿಸಿ. ಸಂಪಾದಕರಿಗೆ ಫೋನ್ ಮಾಡಿ ಫೋಟೊ ಪ್ರಕಟವಾಗದಂತೆ ಮಾಡಿ. ಇಲ್ಲದಿದ್ದರೆ ನಾನು ಇಂದಿರಾಗಾಂಧಿ ಜತೆ ಸೇರುವ ವಾಗ್ದಾನದೊಂದಿಗೆ ಫೋಟೊಗಳು ಪ್ರಕಟವಾಗದಂತೆ ತಡೆಹಿಡಿಯಬೇಕಾಗುತ್ತದೆ" ಎಂದು ಒತ್ತಡ ಹೇರಿದ. ಮೊರಾರ್ಜಿ ಒಂದೇ ಮಾತು ಹೇಳಿದ- ಈ ಕಾರಣಕ್ಕಾಗಿ ಸರಕಾರ ಬಿದ್ದು ಹೋಗುವುದಿದ್ದರೆ ಹೋಗಲಿ." ಆ ಎಲ್ಲ ಚಿತ್ರಗಳು ಪ್ರಕಟವಾದವು! ಮೊರಾರ್ಜಿಯೇನಾದರೂ ಅಂದು ಜಗಜೀವನರಾಮ್ ಒತ್ತಡಕ್ಕೆ ಮಣಿದಿದ್ದರೆ, ಪ್ರಧಾನಿಯನ್ನು ಹರಾಜು ಹಾಕುತ್ತಿದ್ದೆ ಎಂದು ಖುಷವಂತ್ ಸಿಂಗ್ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಅಂದು ಮೊರಾರ್ಜಿಗೆ ಸರಕಾರದ ಮುಖ್ಯಸ್ಥನಾಗಿ ತನ್ನ ಮಾನ, ಘನತೆ ಕಾಪಾಡಿಕೊಳ್ಳುವದರ್ದು ಇತ್ತು. ಸಂಪುಟ ಸಹೋದ್ಯೋಗಿಯ ಮಗನ ಮರ್‍ಯಾದೆ ಉಳಿಸುವುದು ಮುಖ್ಯವಾಗಿರಲಿಲ್ಲ. ಮೊರಾರ್ಜಿ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಪ್ರಧಾನಿ ಕಾರ್ಯಾಲಯದಿಂದ ಸಂಪಾದಕರಿಗೊಂದು ಫೋನ್ ಕರೆ ಹೋಗುತ್ತಿತ್ತು.

ಕೆಲವರ ನಿರ್ಧಾರವೇ ಹಾಗಿರುತ್ತದೆ. ಅಲ್ಲಿ ತರ್ಕ, ದಯೆ, ಕರುಣೆ, ಸಹಾನುಭೂತಿಗೆ ಅವಕಾಶವೇ ಇರುವುದಿಲ್ಲ. ಯಾಕಪ್ಪ ಈ ಯಪ್ಪ ಈ ರೀತಿ ಕಠಿಣ, ಕಠೋರ ಎಂದು ಎದುರಿಗಿದ್ದವನಿಗೆ ಅನಿಸುತ್ತದೆ. ಆದರೆ ಅವರ ನಿರ್ಧಾರವನ್ನು ಮಾತ್ರ ಕದಲಿಸಲಿಕ್ಕೆ ಆಗುವುದಿಲ್ಲ. ಸೇಠ್ ರತನ್‌ಭಯ್ಯಾ ಸಿಂಗ್ ಎಂಬ ಲೇವಾದೇವಿಗಾರ ಮುಂಬಯಿಯಲ್ಲಿದ್ದ. ಆತನ ಮುಂದೆ ಏನನ್ನಾದರೂ ಗಿರವಿಗೆ ಇಡಹುಬದಾಗಿತ್ತು, ಹೆಂಡತಿಯನ್ನು ಸಹ. ಸಾವಿರಾರು ಕೋಟಿ ರೂ. ಸಂಪಾದಿಸಿದ ಶ್ರೀಮಂತ. ಆತನಿಗೆ ದುಡ್ಡೆಂದರೆ ಮುಗೀತು. ಆತ ಮನೆಯಲ್ಲಿ ನಾಲ್ಕು ನಾಯಿಗಳನ್ನು ಸಾಕಿದ್ದ. ಅವುಗಳೆಂದರೆ ಅವನಿಗೆ ಪಂಚಪ್ರಾಣ. ಬರಬರುತ್ತಾ ಎರಡು ನಾಯಿಗಳು ತಿಂದುಂಡು ಹಾಯಾಗಿದ್ದವೇ ಹೊರತು ಕೂಗುತ್ತಿರಲಿಲ್ಲ. ಸೇಠ್ ಇದನ್ನು ಗಮನಿಸಿದ. ದಾರಿ ಹೋಕರು ಸುಳಿದಾಡಿದರೂ ಅವು ಕೂಗುತ್ತಿರಲಿಲ್ಲ. ಒಳಗಡೆ ಹೋಗಿ ಬಂದೂಕು ತಂದು ಎರಡೂ ನಾಯಿಗಳನ್ನು ಢಂ ಢಂ ಎಂದು ಸುಟ್ಟುಬಿಟ್ಟ. ಯೇ ಸಬ್ ಕ್ಯಾ ಸೇಠ್?" ಎಂದು ಅವನ ಗೆಳೆಯ ಕೇಳಿದ. ಅದಕ್ಕೆ ಸೇಠ್ ಹೇಳಿದ - ಕೂಗದಿದ್ದರೆ ಈ ನಾಯಿಗಳೇಕೆ ಬೇಕು? ಪ್ರೀತಿ ಮಾಡಲು ನನಗೆ ನೂರಾರು ನಾಯಿಗಳಿವೆ." ಕೇವಲ ಕೂಗಲಿಲ್ಲವೆನ್ನುವ ಕಾರಣಕ್ಕೆ ಸಾಕಿದ ನಾಯಿಯನ್ನು ಗುಂಡಿಕ್ಕಿ ಸಾಯಿಸುವುದಕ್ಕೆ ನಿರ್ದಯಿ ಹೃದಯಬೇಕು. ಇದೇನು ಸಣ್ಣ ಮಾತಲ್ಲ. ನಾಯಿ ಸಾಕಿದವರಿಗೆ ಗೊತ್ತು ಅದೆಂಥ ಕಠಿಣ ನಿರ್ಧಾರ ಎಂದು.

ಹ್ಯಾರಿ ಟ್ರೂಮನ್ ಅಮೆರಿಕ ಅಧ್ಯಕ್ಷನಾಗಿದ್ದಾಗ ಜನರಲ್ ಡಗ್ಲಾಸ್ ಮ್ಯಾಕಾರ್ಥರ್ ಸೇನಾ ಮುಖ್ಯಸ್ಥನಾಗಿದ್ದ. ಜೀವನವಿಡೀ ಸೇನೆಯಲ್ಲಿದ್ದವ. ಆತ ಅದೆಷ್ಟು ಜನಪ್ರಿಯನಾಗಿದ್ದನೆಂದರೆ, ಆತ ಅಧ್ಯಕ್ಷನಾಗುವುದಕ್ಕೆ ಲಾಯಕ್ಕಾದವ' ಎಂದೇ ಪರಿಗಣಿತನಾಗಿದ್ದ. ಕೊರಿಯಾ ಯುದ್ಧ ನಂತರ ಅವನ ಜನಪ್ರಿಯತೆ ಉತ್ತುಂಗಕ್ಕೇರಿತ್ತು. ಒಮ್ಮೆ ಮ್ಯಾಕಾರ್ಥರ್, ಟ್ರೂಮನ್‌ನ ನಿರ್ಧಾರಕ್ಕೆ ಬಹಿರಂಗವಾಗಿ ಅಸಮ್ಮತಿ ಸೂಚಿಸಿದ. ಟ್ರೂಮನ್ ಮ್ಯಾಕ್ ಅರ್ಥರ್‌ನನ್ನು ಕರೆದು ಎಚ್ಚರಿಕೆ ಕೊಟ್ಟಿದ್ದರೆ ಅಲ್ಲಿಗೆ ಕತೆ ಮುಗಿಯುತ್ತಿತ್ತು. ಆದರೆ ಟ್ರೂಮನ್ ಮ್ಯಾಕ್‌ಅರ್ಥರ್‌ನನ್ನು ಸೇವೆಯಿಂದ ವಜಾಗೊಳಿಸಿಬಿಟ್ಟ! ದೇಶಾದ್ಯಂತ ಕೋಲಾಹಲವೆದ್ದಿತು. ಕಾಂಗ್ರೆಸ್ ಸದಸ್ಯರು ಟ್ರೂಮನ್ ವಾಗ್ದಂಡನೆಗೆ ಒತ್ತಾಯಿಸಿದರು. ಟ್ರೂಮನ್ ಕ್ಯಾರೇ ಎನ್ನಲಿಲ್ಲ. ಅಮೆರಿಕದ ಅಧ್ಯಕ್ಷನೊಬ್ಬನ ಅತಿ ಧೀರೋದಾತ್ತ, ಕಠಿಣ ನಿಲುವು ಎಂದು ಈಗಲೂ ಟ್ರೂಮನ್‌ನ ಈ ಕ್ರಮವನ್ನು ಪ್ರಶಂಸಿಸಲಾಗುತ್ತದೆ. ಈ ಕಾರಣಕ್ಕೇ ಆತ ಮಹಾನ್ ಅಧ್ಯಕ್ಷ'ನಾಗಿದ್ದಾನೆ.

ಕೆಲವರು ತಮ್ಮ ನೌಕರಿ, ಸಂಪತ್ತು, ಸುಖ, ನೆಮ್ಮದಿ, ಜೀವನ ಎಲ್ಲವನ್ನೂ ಪಕ್ಕಕ್ಕಿಟ್ಟು ಕಠಿಣ ನಿರ್ಧಾರಕ್ಕೆ ನಿಲ್ಲುತ್ತಾರೆ. ತಾವು ನಂಬಿದ ನಂಬಿಕೆಗಾಗಿ ಸರಕಾರದ ವಿರುದ್ಧವೇ ಅಂಗಿತೋಳನ್ನು ಮೇಲಕ್ಕೇರಿಸಿರುತ್ತಾರೆ. ಎದುರು ಹಾಕಿಕೊಂಡವರ ಎದುರು ಕೈಜೋಡಿಸಿದರೆ ಎಲ್ಲ ಸಲೀಸು. ಉಹುಂ.. ಅದು ಅವರಿಗೆ ಬೇಡ. ಇಂಥವರನ್ನು ಜನ ಸ್ಮರಿಸುತ್ತಾರೆ. ಕಾರಣ ಇಂಥವರು ನಾಯಕರಾಗುತ್ತಾರೆ. ಉಳಿದವರು ಹಿಂಬಾಲಕರಾಗುತ್ತಾರೆ ಅಷ್ಟೆ. ಇಲ್ಲ'ವೆಂಬುದನ್ನು ಇಲ್ಲ' ಎಂದು ಹೇಳಲು ಸಹ ಧೈರ್ಯಬೇಕು ಕಣ್ರೀ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more