ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಸಭ್ಯಸಾಚಿ'ಗಳಾಗುವುದು ಯಾವಾಗ?

By * ವಿಶ್ವೇಶ್ವರ ಭಟ್
|
Google Oneindia Kannada News

Why are we like this?
(ಈ ಪ್ರಶ್ನೆಗಳಿಗೆ ಉತ್ತರವಿದೆಯೆ? : ಮುಂದಿನ ಭಾಗ...)

ವಿಷಯ ಚಿಕ್ಕದಿರಬಹುದು, ಟಾಯ್ಲೆಟ್‌ಗೆ ಹೋದಾಗ ನಾವು ನೀರನ್ನೇಕೆ ಹಾಕುವುದಿಲ್ಲ? ಸರಿಯಾಗಿ ಏಕೆ flush ಮಾಡುವುದಿಲ್ಲ? ನನ್ನ ಹೊಲಸನ್ನು ಬೇರೆಯವರು ಸ್ವಚ್ಛಗೊಳಿಸಲಿ ಎಂಬ ಆಸೆಯಾ? ದೇವಾಲಯದಂತೆ ಶೌಚಾಲಯ ಎಂದು ನಾವು ಪರಿಗಣಿಸುವುದು ಯಾವಾಗ? ಸಾರ್ವಜನಿಕ ಶೌಚಾಲಯವನ್ನು ನಾವು ಕಾಲಿಡಲೂ ಆಗದಂತೆ ಗಬ್ಬೆಬ್ಬಿಸಿರುತ್ತೇವೆ ಏಕೆ? ರಸ್ತೆ, ಕಟ್ಟಡದ ಗೋಡೆ, ಕಾಂಪೌಂಡ್ ವಾಲ್‌ಗಳನ್ನೆಲ್ಲ ಶೌಚಾಲಯದಂತೆ ಉಪಯೋಗಿಸುವುದನ್ನು ಯಾವಾಗ ನಿಲ್ಲಿಸುತ್ತೇವೆ? ಸಾರ್ವಜನಿಕ ಶೌಚಾಲಯ ಸ್ವಚ್ಛವಾಗಿದ್ದರೆ ಮಾತ್ರ ದೇಶ ಸ್ವಚ್ಛವಾಗಿದ್ದೀತು ಎಂಬುದೇಕೆ ನಮಗಿನ್ನೂ ಮನವರಿಕೆಯಾಗಿಲ್ಲ? ಟಾಯ್ಲೆಟ್, ರೆಸ್ಟ್‌ರೂಮ್ ಬಿಟ್ಟು ಬೇರೆಡೆ ಮಲಮೂತ್ರ ವಿಸರ್ಜಿಸುವುದು ಅನಾಗರಿಕ ಸಂಸ್ಕೃತಿ ಎಂಬುದು ನಮಗೆ ಗೊತ್ತಾಗುವುದು ಯಾವಾಗ?

ನಮ್ಮ ಪ್ರದೇಶದ ಉದ್ಯಾನ ನಿರ್ವಹಣೆ ಬರೀ ಪಾಲಿಕೆಯ ಕೆಲಸವಾ? ವರ್ಷದಲ್ಲಿ ಒಂದು ದಿನವಾದರೂ ನಾನೇಕೆ ನಾಲ್ಕು ಗಿಡಕ್ಕಾದರೂ ನೀರು ಹಾಕುವುದಿಲ್ಲ? ವರ್ಷದಲ್ಲಿ ಒಂದು ಗಿಡವನ್ನಾದರೂ ನಾನೇಕೆ ನೆಡುವುದಿಲ್ಲ? ರಸ್ತೆಯ ತುಂಬಾ ಹೊಂಡ ತುಂಬಿದ್ದರೂ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೇಕೆ ತರುವುದಿಲ್ಲ? ಅಷ್ಟಾಗಿಯೂ ಸಮಸ್ಯೆ ಬಗೆಹರಿಯದಿದ್ದರೆ ನಾನೇಕೆ ನನ್ನ ಸಾತ್ವಿಕ ಸಿಟ್ಟನ್ನು ಪ್ರದರ್ಶಿಸುವುದಿಲ್ಲ? ಹೋಗಲಿ, ಪತ್ರಿಕೆಗಾದರೂ ಬರೆದು ಸಂಬಂಧಿಸಿದವರ ಕಣ್ಸೆಳೆಯುವುದಿಲ್ಲವೇಕೆ? ನಮಗಾಗಿ ಬೇರೆಯವರು ಹೋರಾಡಲಿ, ತಲೆಕೆಡಿಸಿಕೊಳ್ಳಲಿ ಎಂಬ ಧೋರಣೆಯೇಕೆ?

ಇಡೀ ಊರಲ್ಲಿ ಕುಡಿಯುವ ನೀರಿಗೆ ತತ್ವಾರವಿದೆಯೆಂಬುದು ಗೊತ್ತಿದ್ದೂ, ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಪೈಪ್‌ನಲ್ಲಿ ನೀರು ಹಾರಿಸಿ ಕಾರು, ಬೈಕ್ ತೊಳೆಯುವುದೇಕೆ? ಇಡೀ ನಲ್ಲಿ ತುಂಬಾ ನೀರು ಬಿಟ್ಟುಕೊಂಡು ಶೇವ್ ಮಾಡಿಕೊಳ್ಳುವುದೇಕೆ? ಟಬ್‌ನಲ್ಲಿ ಸ್ನಾನ ಮಾಡುವುದೇಕೆ? ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯೇ ಕೆರೆಯಾದರೂ, ಕಾರಂಜಿ ಜಿನುಗುತ್ತಿದ್ದರೂ ಜಲಮಂಡಳಿಗೆ ಫೋನ್ ಮಾಡಿ ತಿಳಿಸುವುದಿಲ್ಲವೇಕೆ? ವಿದ್ಯುತ್ ಕೊರತೆಯಿದೆಯೆಂಬುದು ಗೊತ್ತಿದ್ದರೂ ಬೀದಿ ಇಕ್ಕೆಲಗಳಲ್ಲಿ ದೀಪದ ತೋರಣ ಕಟ್ಟಿ ಸಂಭ್ರಮಿಸುವುದೇಕೆ?

ಕಾರನ್ನೇರಿ ಸ್ಟಿಯರಿಂಗ್ ಹಿಡಿದರೆ ರಸ್ತೆಯೆಂಬುದು ನನ್ನಪ್ಪನ ಆಸ್ತಿ, ನನಗೆ ಕೊಟ್ಟ ಬಳುವಳಿ ಎಂದೇಕೆ ನಾವು ತೀರ್ಮಾನಿಸುತ್ತೇವೆ? ಡ್ರೈವಿಂಗ್ ಲೈಸೆನ್ಸ್ ಅಂದ್ರೆ ಪಾದಚಾರಿಗಳನ್ನು ಕೊಲ್ಲಲು ಸರಕಾರ ಕೊಟ್ಟ ಪರ್ಮಿಶನ್ ಎಂದೇಕೆ ಭಾವಿಸಬೇಕು? ವೃದ್ಧರು, ವಿಕಲಚೇತನರು, ಮಕ್ಕಳು ರಸ್ತೆ ದಾಟುವಾಗ ನಾನೇಕೆ ನನ್ನ ವಾಹನವನ್ನು ನಿಲ್ಲಿಸಿ ಅವರಿಗೆ ರಸ್ತೆ ದಾಟಲು ಸಹಕರಿಸುವುದಿಲ್ಲ? ಹಾರ್ನ್ ಹೊಡೆದು, ಜೋರಾಗಿ ಕಾರು ಓಡಿಸಿಕೊಂಡು ಬಂದು, ಗಕ್ಕನೆ ನಿಲ್ಲಿಸಿ ಅವರನ್ನೇಕೆ ಹೆದರಿಸುತ್ತೇವೆ? ಬೆಳಗ್ಗೆ ಎರಡು-ಮೂರು ಗಂಟೆಗೆ ರಸ್ತೆಯಲ್ಲಿ ಯಾರೂ ಇರುವುದಿಲ್ಲ. ಆದರೂ ಜೋರಾಗಿ ಹಾರ್ನ್ ಮಾಡುವುದೇಕೆ? ರೇಸಿಗೆ ಹೊರಟವರಂತೆ ಬೈಕ್, ಕಾರನ್ನು ಒದರಿಸಿಕೊಂಡು ವೇಗವಾಗಿ ಓಡಿಸುವುದೇಕೆ? ಪಾದಚಾರಿಗಳ ಮೇಲೇಕೆ ನಮಗೆ ನಿಕೃಷ್ಟಭಾವ? ಜಗತ್ತಿನ ಎಲ್ಲ ದೇಶಗಳಲ್ಲೂ ರಸ್ತೆಯಲ್ಲಿ ಮೊದಲ ಪ್ರಾಶಸ್ತ್ಯ ಪಾದಚಾರಿಗಳಿಗಿದೆ ಎಂಬ ಸರಳ ಸತ್ಯ ನಮಗೇಕೆ ಅರಿವಿಗೆ ಬಂದಿಲ್ಲ? ಸಿಗ್ನಲ್ ದೀಪದ ಮುಂದೆ ನಿಂತಾಗಲೂ ಹಾರ್ನ್ ಹೊಡೆಯುವುದೇಕೆ? ಸ್ಕೂಲ್, ಹಾಸ್ಪಿಟಲ್ ಮುಂದೆಯೂ ಇದೇ ಚಾಳಿ ಪ್ರದರ್ಶಿಸುವುದೇಕೆ?

ಲಂಚ ಕೊಡುವುದು, ತೆಗೆದುಕೊಳ್ಳುವುದು ಅಪರಾಧವೆಂಬುದು ಗೊತ್ತಿದ್ದರೂ ಲಂಚವಿಲ್ಲದೇ ಏನೂ ಆಗೊಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವಲ್ಲ, ಇದರ ವಿರುದ್ಧ ನಾವು ಇನ್ನೂ ಏನೂ ಮಾಡಿಲ್ಲವಲ್ಲ, ಏಕೆ? ಹೋರಾಡುವುದು ಬೇಡ, ಪತ್ರಿಕೆಯ ಸಂಪಾದಕರಿಗಾದರೂ ಒಂದು ಪತ್ರ ಬರೆದು ನನ್ನ ಸಿಟ್ಟನ್ನೇಕೆ ಹೊರಹಾಕಿಲ್ಲ? ನಾನು ಬಡತನರೇಖೆಗಿಂತ ಮೇಲಿದ್ದೇನೆಂಬುದು ಗೊತ್ತಿದ್ದರೂ, ಸರಕಾರಿ ಯೋಜನೆಯ ಫಲಾನುಭವಿಯಾಗಲು ಹಪಹಪಿಸುವುದೇಕೆ? ಇದೇ ಕಾರಣಕ್ಕೆ ಪಡಿತರ ಚೀಟಿ ಮಾಡಿಸುವುದೇಕೆ? ನಮಗೇಕೆ ಇನ್ನೂ ಕ್ಯೂದಲ್ಲಿ ನಿಲ್ಲಲು ಬರುವುದಿಲ್ಲ? ಬಸ್ ನಿಲ್ದಾಣ, ಹೋಟೆಲ್, ಥಿಯೇಟರ್, ವಿಮಾನ ನಿಲ್ದಾಣದಲ್ಲಿದ್ದಾಗ ಎಲ್ಲರಿಗೂ ಕೇಳಿಸುವಂತೆ ಜೋರಾಗಿ ಮೊಬೈಲ್ ಫೋನಿನಲ್ಲಿ ಮಾತಾಡುತ್ತೇವೆ ಏಕೆ? ನಮಗೆ ಕಾಲ್ ಬಂದರೆ ಎಲ್ಲರಿಗೂ ಗೊತ್ತಾಗುವಷ್ಟು ಜೋರಾಗಿ ರಿಂಗ್‌ಟೋನ್ ಇಟ್ಟುಕೊಳ್ಳುವುದೇಕೆ?

ತೆರಿಗೆ ಹಣದಿಂದಲೇ ಸರಕಾರ, ವ್ಯವಸ್ಥೆ ಸಾಗಬೇಕೆಂಬ ಸಂಗತಿ ಗೊತ್ತಿದ್ದರೂ, ತೆರಿಗೆ ಕೊಡಲು ಹಿಂದೇಟು ಹಾಕುವುದೇಕೆ? ಕಡಿಮೆ ತೆರಿಗೆ ಕಟ್ಟಲು, ತೆರಿಗೆ ತಪ್ಪಿಸಲು ನಾನೇಕೆ ಅಷ್ಟೆಲ್ಲ ಹರಸಾಹಸ ಮಾಡುತ್ತೇನೆ? ಹತ್ತು ರೂ. ಜಾಸ್ತಿ ಕೊಟ್ಟರೆ, ಬೇರಾರಿಗೂ ಅಲ್ಲವಲ್ಲ ನನ್ನ ದೇಶಕ್ಕೇ ಕೊಟ್ಟಿರುವುದು ಎಂದೇಕೆ ನನಗನಿಸುವುದಿಲ್ಲ? ಪ್ರತಿಸಲವೂ ತಡವಾಗಿಯೇ ತೆರಿಗೆಯನ್ನು ಕಟ್ಟುತ್ತೇನೆ, ಏಕೆ? ಸರಕಾರದ ಸಹಾಯಧನ, ಬಿಟ್ಟಿ ಹಣ ನಮಗೆ ಬೇಡ ಎಂದು ಯಾರೂ ಹೇಳುವುದಿಲ್ಲ ಏಕೆ? ನಮ್ಮನ್ನು ಹಿಂದುಳಿದವರ, ದುರ್ಬಲ ವರ್ಗದವರ ಪಟ್ಟಿಗೆ ಸೇರಿಸಬೇಡಿ ಅದು ನಮಗೆ ಅವಮಾನ ಮಾಡಿದಂತೆ ಎಂದೇಕೆ ಹೇಳುವುದಿಲ್ಲ? ಆ ವರ್ಗಕ್ಕೇ ಸೇರಿಸಿ ಅಂದ್ರೆ ಜನರೇನು ಅಂದುಕೊಳ್ಳಬಹುದು ಎಂದು ನಾವೇಕೆ ಯೋಚಿಸುವುದಿಲ್ಲ? ಆತ ಮಹಾಭ್ರಷ್ಟ ಎಂಬುದು ಗೊತ್ತಿದ್ದರೂ, ನಮ್ಮ ನೇರಾನೇರ ಲಂಚ ಕೇಳಿದರೂ ನಾವೇಕೆ ಅವನ ಕೊರಳಪಟ್ಟಿ ಹಿಡಿದು ಕೇಳುವುದಿಲ್ಲ? ಮನೆ ನಾಯಿ ಗುರ್ರ್' ಅಂದ್ರೆ ಅದಕ್ಕೆ ಅನ್ನ ಕೊಡದೇ ಉಪವಾಸ ಕೆಡಗುವ ನಾವು, ಲಂಚ ಕೇಳಿದ ಅಧಿಕಾರಿಗೇಕೆ ಗುರ್ರ್' ಎನ್ನುವುದಿಲ್ಲ?

ಚುನಾವಣೆ ಬಂದಾಗ ನಾನೇಕೆ ವೋಟ್ ಮಾಡುವುದಿಲ್ಲ? ಆ ದಿನ ಮನೆಮಂದಿ ಜತೆ ಸಿನಿಮಾಕ್ಕೋ, ಪ್ರವಾಸಕ್ಕೋ ಹೋಗುವುದೇಕೆ? ಐದು ವರ್ಷಕ್ಕೊಮ್ಮೆ ನಮಗಿರುವ ಈ ಹಕ್ಕನ್ನು ನಾವೇಕೆ ಚಲಾಯಿಸುವುದಿಲ್ಲ? ಚುನಾವಣೆಯಲ್ಲಿ ಹಣ ನೀಡುವ ಅಭ್ಯರ್ಥಿ ಆರಿಸಿ ಬಂದು ನಮ್ಮ ಹಣವನ್ನೇ ಕೊಳ್ಳೆ ಹೊಡೆಯುತ್ತಾನೆ ಎಂಬುದು ಗೊತ್ತಿದ್ದರೂ ಅವನಿಗೇ ವೋಟ್ ಮಾಡುವುದೇಕೆ? ಹಿಂದಿನ ಚುನಾವಣೆಯಲ್ಲಿ ಗೆದ್ದು ಐದು ವರ್ಷ ಮುಖ ತೋರಿಸದ, ಕೆಲಸ ಮಾಡದ ಅಭ್ಯರ್ಥಿ ಪುನಃ ವೋಟ್ ಕೇಳಲು ಬಂದಾಗ ನಾವೇಕೆ ಅವನನ್ನು ಪ್ರಶ್ನಿಸುವುದಿಲ್ಲ? ನಮ್ಮ ಕೈ ಹಿಡಿದು ಜಗ್ಗುವ ಶಕ್ತಿ ಯಾವುದು? ದೇಶಕ್ಕಾಗಿ ಸಾಯುವ ಶಿವಾಜಿ ಪಕ್ಕದ ಮನೆಯಲ್ಲೇ ಹುಟ್ಟಲಿ, ನಮ್ಮ ಮನೆಯಲ್ಲಿ ಅಲ್ಲ ಎಂದು ಪ್ರತಿಸಲವೂ ನಾವು ಯೋಚಿಸುವುದೇಕೆ? ಪ್ರತಿಸಲ ಇಂಥ ಲೇಖನ ಬರೆದಾಗಲೂ ಓದಿ ಸುಮ್ಮನಾಗುವುದು ಏಕೆ? ಹೇಳಿ ಏಕೆ, ಏಕೆ ಹಾಗೂ ಏಕೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X