ಅರಾಜಕತೆಗೆ ಇನ್ನೊಂದು ಹೆಸರು ಸುವರ್ಣ ಕರ್ನಾಟಕ

ನಮ್ಮ ರಾಜಕೀಯ ಪಕ್ಷಗಳ ಅಧೋಗತಿ ಕಂಡಾಗಲೆಲ್ಲ ರಾಷ್ಟ್ರಪತಿ ಆಡಳಿತವೇ ಲೇಸು ಎನಿಸುತ್ತದೆ. ರಾಷ್ಟ್ರಪತಿ ಆಡಳಿತದಲ್ಲಿ ಪ್ರಜಾಸ್ಪರ್ಶವೇ ಇಲ್ಲದ ಅಧಿಕಾರಶಾಯಿ ಮೆರೆಯುವಾಗ ಜನಪ್ರತಿನಿಧಿಗಳಿದ್ದಿದ್ದರೆ ಎಷ್ಟೋ ಚೆನ್ನಾಗಿರ್ತಿತ್ತು ಅನಿಸುತ್ತದೆ. ಎರಡೂ ಅಸಹ್ಯವಾದಾಗ " ರೀ ನಮ್ಮ ದೇಶಕ್ಕೆ ಮಿಲ್ಟ್ರಿ ಆಡಳಿತನೇ ಸರೀ ಕಣ್ರೀ " ಅನ್ನಿಸಿಬಿಡುತ್ತದೆ. ಅತ್ತ ಬೇತಾಳ ಇತ್ತ ಪಾತಾಳ ಎನ್ನುವಂಥ ಸ್ಥಿತಿಯಲ್ಲಿ ಸಿಕ್ಕಿಕೊಂಡಿರುವ ರಾಜ್ಯದ ಪ್ರಜೆಗಳಿಗೆ ಹಾಗಾದರೆ ಮೋಕ್ಷವೇ ಇಲ್ಲವಾ ?

  • ವಿಶ್ವೇಶ್ವರ ಭಟ್
ಅರಾಜಕತೆಗೆ ಇನ್ನೊಂದು ಹೆಸರು ಸುವರ್ಣ ಕರ್ನಾಟಕನಮ್ಮ ರಾಜ್ಯದ ರಾಜಕೀಯ ನೇತಾರರನ್ನೆಲ್ಲ ನೋಡಿದರೆ, ಭಾರತ ಕ್ರಿಕೆಟ್ ಟೀಮಿನಲ್ಲಿ ಫಾರ್ಮ್ ಕಳಕೊಂಡ ಬ್ಯಾಟ್ಸ್‌ಮನ್‌ನಂತೆ, ಸ್ಥಾನ ಕಳಕೊಂಡ ಆಟಗಾರರಂತೆ ಕಾಣುತ್ತಿದ್ದಾರೆ. ಯಾರ ಮುಖದಲ್ಲೂ ಗೆಲುವಿನ ಗೆರೆಗಳಿಲ್ಲ. ಗೆಲ್ಲುತ್ತೇನೆಂಬ ವಿಶ್ವಾಸವೂ ಇಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಒಡೆದ ಮನೆಗಳೇ. ಯಾವುದೇ ಪಕ್ಷವನ್ನು ಸೋಲಿಸಲು ಪ್ರತಿಪಕ್ಷಗಳು ಬೇಡವೇ ಬೇಡ. ಅವರವರ ಪಕ್ಷದಲ್ಲಿರುವ ನಾಯಕರೇ ಸಾಕು. ಶತ್ರುಗಳನ್ನು ಹುಡುಕಿ ಹೋಗಬೇಕಿಲ್ಲ. ಎಲ್ಲ ಪಕ್ಷಗಳಲ್ಲೂ ಹಿತಶತ್ರುಗಳಿದ್ದಾರೆ. ಯಾವ ಪಕ್ಷವೂ ಏಕಾಂಗಿಯಾಗಿ ಸೆಣಸಿ ಸ್ವತಂತ್ರವಾಗಿ ಗೆದ್ದು ಬಂದು ಸರಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಯಾವ ರಾಜಕಾರಣಿಯನ್ನೇ ಎಡತಾಕಿ, ಅವರಿಂದ ಉತ್ಸಾಹದಾಯಕ ಮಾತುಗಳೇ ಹೊಮ್ಮುವುದಿಲ್ಲ. ಒಬ್ಬರಿಗೂ ಒಂದು ನಿರ್ದಿಷ್ಟ ನಿಲುವು ಎಂಬುದೇ ಇಲ್ಲ. ರಾಜಕೀಯ ಪಕ್ಷಗಳು ಸೂತಕದ ಮನೆಯ ಜಗುಲಿಯಂತಾಗಿವೆ.

ಪ್ರಜಾಪ್ರಭುತ್ವದಲ್ಲಿ ಜನರಿಂದ ನೇರವಾಗಿ ಆಯ್ಕೆಯಾದ ಸರಕಾರವೆಂಬುದು ಇರದಿದ್ದರೆ, ಜನರ ಭಾವನೆಗಳು, ಆಶೋತ್ತರಗಳನ್ನು ಕಳೆದುಕೊಳ್ಳುತ್ತವೆ. ಅದು ಪ್ರಜಾಸತ್ತೆಗೇ ಅವಮಾನ. ರಾಷ್ಟ್ರಪತಿ ಆಡಳಿತವೆಂಬುದು ಸಂವಿಧಾನಾತ್ಮಕ ಅನಿವಾರ್ಯವಿರಬಹುದು. ಅದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಅನಿವಾರ್ಯ ಅಗತ್ಯವಿರಬಹುದು. ಆದರೆ ಅದು ಜನರಿಗೆ ಬಗೆದ ದ್ರೋಹ ಎಂದು ಪರಿಗಣಿಸದೇ ಬೇರೆ ದಾರಿಯಿಲ್ಲ. ಯಾಕೆಂದರೆ ಇದು ಜನರಿಂದ ಚುನಾಯಿತ ಸರಕಾರ ಅಲ್ಲವೇ ಅಲ್ಲ. ರಾಜ್ಯಪಾಲರು ಜನಪ್ರತಿನಿಧಿಯಲ್ಲ. ಇಂಥ ವ್ಯವಸ್ಥೆ ಹೇಗೆ ಜನಪರವಾಗಿದ್ದಿರಬಹುದು? ಸಾಧ್ಯವೇ ಇಲ್ಲ. ಇದರ ಅನುಭವ ಈಗ ಜನರಿಗಾಗುತ್ತಿದೆ. ಜನ ಯಾರ ಮುಂದೆ ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಬೇಕು? ಅಭಿವೃದ್ಧಿ ಯೋಜನೆಗಳ ಕತೆಯೇನು? ಈಗಾಗಲೇ ಕೈಗೆತ್ತಿಕೊಂಡ ಯೋಜನೆಗಳ ಗತಿಯೇನು?

ಖ್ಯಾತ ನ್ಯಾಯವಾದಿ ವಿ.ಎಂ. ತಾರ್ಕುಂಡೆ ರಾಷ್ಟ್ರಪತಿ ಆಡಳಿತದ ಬಗ್ಗೆ ಹೇಳುತ್ತಿದ್ದರು “ಯಾವುದೇ ರಾಜ್ಯ ರಾಷ್ಟ್ರಪತಿ ಆಡಳಿತಕ್ಕೆ ಒಳಗಾದರೆ ಕನಿಷ್ಠ ಐದು ವರ್ಷ ಹಿಂದಕ್ಕೆ ಹೋಗುತ್ತದೆ. ಅಧಿಕಾರಶಾಹಿ ತಲೆಯೆತ್ತುತ್ತದೆ. ಜನರ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತದೆ. ಉತ್ತರದಾಯಿಯಲ್ಲದ ರಾಜ್ಯಪಾಲರಿಂದ ಹೇಗೆ ಜನಪರ ಸರಕಾರ, ಆಡಳಿತ ನಿರೀಕ್ಷಿಸಬಹುದು? ರಾಷ್ಟ್ರಪತಿ ಆಡಳಿತವೆಂದರೆ ರಾಜ್ಯಕ್ಕೆ ಬಡಿದ ಶಾಪ."

ಸದ್ಯದ ಕರ್ನಾಟಕದ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ನಾವೆಲ್ಲ ಏನೂ ತಪ್ಪು ಮಾಡದೇ ಶಾಪಗ್ರಸ್ತರಾಗಿದ್ದೇವೆ. ನಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇವೆ. ಯಾರೋ ಪರಕೀಯರು ಬಂದು ನಮ್ಮನ್ನು ಆಳುತ್ತಿರುವಂತೆ ಭಾಸವಾಗುತ್ತಿದೆ. ಜನಪ್ರಿಯ ಸರಕಾರವಿದ್ದಾಗಲೇ ಜನಸಾಮಾನ್ಯರನ್ನು ಹೇಳುವವರು, ಕೇಳುವವರು ಇಲ್ಲದಾಗ, ಈಗ ಅವರು ಎಲ್ಲಿಗೆ ಹೋಗಬೇಕು? ಯಾರಲ್ಲಿ ಮೊರೆ ಇಡಬೇಕು? ರಾಜ್ಯದ ಪರಿಸ್ಥಿತಿ ನೋಡಿದರೆ ಅತೀವ ಬೇಸರವಾಗುತ್ತದೆ. ರಾಷ್ಟ್ರಪತಿ ಆಡಳಿತವಿದೆಯಲ್ಲ ಅದು ತೀರಾ ಅವೈಜ್ಞಾನಿಕವಾದುದು. ಒಬ್ಬ ರಾಜ್ಯಪಾಲ, ಅವರ ಕೆಲವು ಸಲಹೆಗಾರರು ಸೇರಿಕೊಂಡು ಒಂದು ರಾಜ್ಯವನ್ನು ನಡೆಸುವುದಿದೆಯಲ್ಲ, ಅದು ಸಾಧ್ಯವಾಗದ ಕೆಲಸ. ಪೂರ್ಣ ಮಂತ್ರಿಮಂಡಲವಿದ್ದಾಗ ಆಗದ ಕೆಲಸ ಈಗ ಹೇಗೆ ಆದೀತು? ಇಂದಿನ ಸ್ಪರ್ಧಾತ್ಮಕ, ಪೈಪೋಟಿ ಹಾಗೂ ಅಭಿವೃದ್ಧಿಮಂತ್ರ ಜಪಿಸುವ ಜಮಾನದಲ್ಲಿ ಆರು ತಿಂಗಳು ರಾಷ್ಟ್ರಪತಿ ಆಡಳಿತ ಕಳೆಯುವುದೆಂದರೆ ಹನ್ನೆರಡು ವರ್ಷ ವನವಾಸ ಮುಗಿಸಿದಂತೆ.

ಆದರೆ ನಮ್ಮ ವ್ಯವಸ್ಥೆಯೇ ಹಾಗಿದೆ. ಯಾರೂ ಏನೂ ಮಾಡುವಂತಿಲ್ಲ. ಹಾಗೆಂದು ಆರು ತಿಂಗಳ ರಾಷ್ಟ್ರಪತಿ ಆಡಳಿತ ಕೊನೆಗೊಂಡ ಬಳಿಕ ಪುನಃ ಸ್ಥಿರ ಸರಕಾರ ಅಸ್ತಿತ್ವಕ್ಕೆ ಬರುತ್ತದೆಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಬಿಜೆಪಿಗೆ ಸರಳ ಬಹುಮತ ಸಿಗದಿದ್ದರೆ, ಗಾಡಿ ಏದುಸಿರು ಬಿಡುತ್ತಾ ತೊಂಬತ್ತಕ್ಕೋ, ನೂರಕ್ಕೋ ಬಂದು ನಿಂತುಬಿಟ್ಟರೆ? ಕಾಂಗ್ರೆಸ್ ಸಹ ಅರವತ್ತೋ, ಎಪ್ಪತ್ತೋ ಎಂದು ರಾಗ ಎಳೆದರೆ? ಪುನಃ ಎರಡೂ ಪಕ್ಷಗಳು ಇಪ್ಪತ್ತೋ, ಮೂವತ್ತೋ ಸೀಟು ಗಳಿಸುವ ಜೆಡಿ(ಎಸ್) ಎಂಬ ಹಳೇ ಗಂಡನ ಪಾದಕ್ಕೇ ಬೀಳಬೇಕು. ಈ ಹಳೇಗಂಡ ಸಾಮಾನ್ಯನಲ್ಲ, ಈ ಸಲ ಫಿಫ್ಟಿ-ಫಿಫ್ಟಿ ಪಂದ್ಯಕ್ಕೆ ಆತ ಒಪ್ಪುವುದಿಲ್ಲ. ಕಾಂಗ್ರೆಸ್ ಮುಂದೆ ಹೋಗಿ, “ಬಿಜೆಪಿಯವರು ನಮಗೇ ಬೆಂಬಲ ನೀಡುವಂತೆ ವರಾತ ಮಾಡುತ್ತಿದ್ದಾರೆ. ನಮಗೆ ಮುಖ್ಯಮಂತ್ರಿ,ಗಣಿ, ಗೃಹ, ನಗರಾಭಿವೃದ್ಧಿ, ಬಿಡಿಎ, ಬಿಎಂಆರ್‌ಡಿಎ, ಬೃಹತ್ ಕೈಗಾರಿಕೆ ಕೊಟ್ಟರೆ ನಿಮ್ಮ ಬೆಂಬಲದೊಂದಿಗೆ ಸರಕಾರ ಮಾಡೋಣ" ಅಂತಾರೆ. ಬಿಜೆಪಿ ಮುಂದೆ ಹೋಗಿ ಪುನಃ ಅದೇ ಪ್ಲೇಟು ಹಾಕುತ್ತಾರೆ.

ಪರಿಣಾಮ, ಎರಡೂವರೆ ವರ್ಷ ಕುಮಾರಸ್ವಾಮಿ ಹಾಗೂ ಇನ್ನುಳಿದ ಎರಡೂವರೆ ವರ್ಷ ಎಚ್.ಡಿ. ರೇವಣ್ಣ ಮುಖ್ಯಮಂತ್ರಿಯಾಗುತ್ತಾರೆ!ಕಾಂಗ್ರೆಸ್ ಈ ಷರತ್ತಿಗೆ ಒಪ್ಪದಿದ್ದರೆ, ಗೌಡರು ಬಿಜೆಪಿಯ ಕಡೆ ಹೋಗುತ್ತಾರೆ. ಬಿಜೆಪಿಯವರು ಗೌಡರನ್ನು ಎಲ್ಲಿ ಸೆಳೆದುಬಿಟ್ಟಾರೋ ಎಂಬ ಭಯದಲ್ಲಿ ಕಾಂಗ್ರೆಸ್ ಎಲ್ಲ ಷರತ್ತುಗಳಿಗೆ ಒಪ್ಪುವುದು ಅನಿವಾರ್ಯ. ಬಿಜೆಪಿಯವರೂ ಹಾಗೇ ಯೋಚಿಸುತ್ತಾರೆ. ಕಾಂಗ್ರೆಸ್‌ನವರು ಗೌಡರನ್ನು ಬಿಡಲಿಕ್ಕಿಲ್ಲವೆಂದು ಗೌಡರ ಷರತ್ತುಗಳಿಗೆ ಬಿಜೆಪಿ ಒಪ್ಪುತ್ತದೆ. ಕೇವಲ 25-30 ಸೀಟುಗಳನ್ನು ಇಟ್ಟುಕೊಂಡೇ ಗೌಡರು ಐದು ವರ್ಷ ತಮ್ಮ ಮಕ್ಕಳಿಂದ ಸರಕಾರ ನಡೆಸುತ್ತಾರೆ. ಅವರಿಗೆ ಅಷ್ಟು ಸೀಟು ಸಿಕ್ಕರೆ ಸಾಕು. ಅವರೆಂಥವರೆಂದರೆ ಕೇವಲ ಹದಿನಾರು ಸಂಸದರನ್ನು ಬಗಲಲ್ಲಿಟ್ಟುಕೊಂಡು ಪ್ರಧಾನಿಯಾದವರು! ಮೂವತ್ತು ಮಂದಿಯನ್ನಿಟ್ಟುಕೊಂಡು ಮಗನನ್ನು ಮುಖ್ಯಮಂತ್ರಿ ಮಾಡುವುದು ಅವರಿಗೆ ಯಾವ ಮರದ ತೊಪ್ಪಲು?

ಬಿಜೆಪಿಗಾಗಲಿ, ಕಾಂಗ್ರೆಸ್‌ಗಾಗಲಿ ನಿಚ್ಚಳ ಬಹುಮತ ಬರದಿದ್ದರೆ ಇದೇ ಪರಿಸ್ಥಿತಿ ಉದ್ಭವವಾಗುತ್ತದೆ. ಆಗ ಹೊಸ ಚುನಾವಣೆ ಮಾಡಿ ಏನು ಸಾಧಿಸಿದಂತಾಯಿತು? ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಗೌಡರು ಹೇಳುವ ಷರತ್ತುಗಳಿಗೆ ಮಣಿಯಲೇಬೇಕಾಗುತ್ತದೆ. ವಚನಭ್ರಷ್ಟರ ಜತೆ ಪುನಃ ಸಂಸಾರ ಹೂಡುವುದು ಅನಿವಾರ್ಯವಾಗುತ್ತದೆ. “ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ವೈರಿಗಳೂ ಇಲ್ಲ. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಐದೂವರೆ ಕೋಟಿ ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ" ಎಂದು ಕಾಂಗ್ರೆಸ್ ಅಥವಾ ಬಿಜೆಪಿಯವರು ಹೇಳಿದರೆ ಏನು ಮಾಡುತ್ತೀರಿ? ಏನೂ ಮಾಡಲಾಗುವುದಿಲ್ಲ. ಯಾಕೆಂದರೆ ಹಿಂದೆಯೂ ಹೀಗೇ ಹೇಳಿಲ್ಲವಾ? ಆಗ ನಾವೇನು ಮಾಡಿದ್ದೇವೆ? ಏನೂ ಮಾಡಿಲ್ಲ ತಾನೆ? ಈಗಲೂ ಹಾಗೇ ಆಗುತ್ತದೆ.

ಈ ಸನ್ನಿವೇಶವನ್ನು ಊಹಿಸಿಯೇ ಕುಮಾರಸ್ವಾಮಿ, ದೇವೇಗೌಡರು, “ಯಾರು ಬೇಕಾದರೂ ನಮ್ಮ ಪಕ್ಷ ಬಿಡಬಹುದು. (ಅಂಥವರೇ ನಮಗೆ ಬೇಕಾಗಿದ್ದಾರೆ) ಯಾರಿಂದಲೂ ನಮ್ಮ ಪಕ್ಷ ಮುಗಿಸಲು ಸಾಧ್ಯವಿಲ್ಲ. ನಾವು ಜಗತ್ತೇ ಅಚ್ಚರಿಪಡುವ ರೀತಿಯ ಸಾಧನೆ ಮಾಡಲಿದ್ದೇವೆ" ಎಂದು ಹೇಳುತ್ತಿದ್ದಾರೆ. ದೇವೇಗೌಡರಿಗೆ ಮೂವತ್ತು ಸೀಟು ಬಂದರೆ ಸಾಕು. ಅಷ್ಟು ಗಿಟ್ಟಿಸುವುದು ಕಷ್ಟವಲ್ಲ ಎಂಬುದು ಅವರ ಲೆಕ್ಕಾಚಾರ. ಬಿಜೆಪಿಯವರೇನೋ ಕನಸು ಕಾಣುತ್ತಿದ್ದಾರೆ. ತಾವೇ ಮುಂದಿನ ಸರಕಾರವನ್ನು ಏಕಾಂಗಿಯಾಗಿ ರಚಿಸುತ್ತೇವೆಂದು ಹೇಳಿಕೊಳ್ಳುತ್ತಿದ್ದಾರೆ. ಈ ಸಲದ ಗಾಳಿಯಲ್ಲಿ ಬಿಜೆಪಿ ಕಣಗಳಿರುವುದೇನೋ ನಿಜ. ಆದರೆ ಆ ಗಾಳಿ ಸರಕಾರ ರಚಿಸುವಷ್ಟು ಎತ್ತರಕ್ಕೆ ಆ ಪಕ್ಷವನ್ನು ಕೊಂಡೊಯ್ಯಬಹುದಾ ಎಂಬುದೇ ಅನುಮಾನ.

ಕಾಂಗ್ರೆಸ್ಸಿನದೂ ಇದೇ ಕತೆ. ಬಿಜೆಪಿ ಹಾಗೂ ಜೆಡಿ(ಎಸ್) ಆಡಳಿತ ವಿರೋಧಿ ಅಲೆಯನ್ನು ಸಂಪೂರ್ಣ ತನ್ನತ್ತ ಸೆಳೆದುಕೊಳ್ಳಬೇಕು. ಆದರೆ ಅಂಥ ನಾಯಕತ್ವ ರಾಜ್ಯ ಕಾಂಗ್ರೆಸ್‌ಗೆ ಸದ್ಯ ಇಲ್ಲದಿರುವುದು ದೊಡ್ಡ ಕೊರತೆ. ಹೀಗಾಗಿ ಆ ಪಕ್ಷವೂ ತಾನೇ ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇನೆಂದು ಎದೆತಟ್ಟಿ ಹೇಳಿಕೊಳ್ಳುವಂಥ ಸ್ಥಿತಿಯಲ್ಲಿ ಇಲ್ಲ. ಹಾಗೆ ನೋಡಿದರೆ ಕಾಂಗ್ರೆಸ್‌ಗೆ ನಾಯಕರೇ ತಲೆನೋವು. ಅಲ್ಲಿ ಎಲ್ಲರೂ ನಾಯಕರೇ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ 'ಕೈ" ಕೊಡುವವರೇ. ಕಾಲು ಹಿಡಿದು ಎಳೆಯುವವರೇ.

ಅಂದರೆ ಮುಂದಿನ ಚುನಾವಣೆಯಲ್ಲಿ ಏನೋ ಪವಾಡ ಸಂಭವಿಸಿ ಅದ್ಭುತ ಸರಕಾರ ಬಂದುಬಿಡಬಹುದೆಂಬ ಭ್ರಮೆ ಬೇಡ. ಅಷ್ಟಕ್ಕೂ ನಮಗಿರುವ ಆಯ್ಕೆ ಅವೇ. ಅವೇ ರಾಜಕೀಯ ಪಕ್ಷಗಳು. ಅವೇ ರಾಜಕಾರಣಿಗಳು. ಇಂದು ಕಾಂಗ್ರೆಸ್-ಬಿಜೆಪಿ-ಜೆಡಿ(ಎಸ್) ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಇದ್ದ ತೆಳು ಗೆರೆ ಸಹ ಮಾಯವಾಗಿಬಿಟ್ಟಿವೆ. ಯಾವುದೇ ರಾಜಕಾರಣಿ ಯಾವ ರಾಜಕೀಯ ಪಕ್ಷಗಳಿಗೂ ಸಲ್ಲುತ್ತಾನೆ. ರಾಜಕೀಯ ಸಿದ್ಧಾಂತ, ತತ್ತ್ವ ಯಾರಿಗೂ ಅಡ್ಡವಾಗುವುದಿಲ್ಲ. ಇಂದು ಎಂ.ಪಿ. ಪ್ರಕಾಶ್ ಅವರಂಥ ತತ್ತ್ವನಿಷ್ಠ ರಾಜಕಾರಣಿ ಸಹ ಕಾಂಗ್ರೆಸ್, ಬಿಜೆಪಿ ಅಥವಾ ಕೊನೆಗೆ ಯಾವುದಾದರೂ ಆದೀತು ಎಂಬ ಸ್ಥಿತಿ ತಲುಪಿದ್ದಾರೆ. ರಾಜಕೀಯ ಸೈದ್ಧಾಂತಿಕ ದಿವಾಳಿತನ ಅದೆಂಥ ರಸಾತಳ ತಲುಪಿದೆಯೆಂದರೆ, ತನಗೆ, ತನ್ನ ಬೆಂಬಲಿಗರಿಗೆ ಟಿಕೆಟ್, ಪಕ್ಷದಲ್ಲಿ ಸ್ಥಾನಮಾನ ಹಾಗೂ ಮಂತ್ರಿ ಪದವಿ ಖಾತ್ರಿಪಡಿಸುವ ಯಾವ ಪಕ್ಷವನ್ನಾದರೂ ಸೇರುವ ಲೆಕ್ಕಾಚಾರದಲ್ಲಿ ಎಲ್ಲರೂ ಮುಳುಗಿದ್ದಾರೆ. ಹೀಗಾಗಿ ಎಲ್ಲರ ಮುಂದೆ ಮೂರ್ನಾಲ್ಕು ಆಯ್ಕೆಗಳು!

ಇತ್ತೀಚೆಗೆ ಸರಕಾರಿ ಅಧಿಕಾರಿಯೊಬ್ಬರು ಸಿಕ್ಕಿದ್ದರು. ಅವರು ತಮ್ಮ ಕೆಲಸಕ್ಕೆ ಸ್ವಯಂ ನಿವೃತ್ತಿ ಘೋಷಿಸಿ ಚುನಾವಣೆಗೆ ಸ್ಪರ್ಧಿಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕುತೂಹಲದಿಂದ ಕೇಳಿದೆ-“ಯಾವ ಪಕ್ಷ ಸೇರುತ್ತಿದ್ದೀರಿ?" ಅವರು ನೇರವಾಗಿ ಹೇಳಿದರು-“ಬಿಜೆಪಿಯವರು ಟಿಕೆಟ್ ಕೊಟ್ಟರೆ ಬಸವನಗುಡಿಯಿಂದ. ಕಾಂಗ್ರೆಸ್‌ನವರು ಕೊಟ್ಟರೆ ಚಿಕ್ಕಬಳ್ಳಾಪುರದಿಂದ. ಜೆಡಿಎಸ್‌ನವರು ಕೊಟ್ಟರೆ ಶಿಗ್ಗಾಂವದಿಂದ. ಬಹುಜನ ಸಮಾಜಪಕ್ಷದಿಂದಾದರೆ ಕುಂದಗೊಳದಿಂದ." ನಾನು ಕೇಳಿದೆ - “ಬಂಗಾರಪ್ಪನವರ ಸಮಾಜವಾದಿ ಪಕ್ಷವನ್ನು ಯಾಕೆ ಬಿಟ್ಟಿರಿ?" ಅದಕ್ಕೆ ಅವರೆಂದರು- “ಅಷ್ಟೂ ನಿಯತ್ತು ಇಲ್ಲದಿದ್ದರೆ ಹೇಗೆ?"

ಇದು ಕೇವಲ ಅವರದೊಬ್ಬರದೇ ಮನಸ್ಥಿತಿಯಲ್ಲ. ಎಲ್ಲರೂ ಹೀಗೇ ಯೋಚಿಸುತ್ತಾರೆ. ಈ ಸಲ ಟಿಕೆಟ್ ಸಿಗಲಿಕ್ಕಿಲ್ಲ ಎಂಬ ಸಣ್ಣ ಸುಳಿವು ಸಿಕ್ಕವರೂ, ತಮ್ಮ ಸ್ಥಾನ ಖಾಯಂ ಮಾಡಿಕೊಳ್ಳಲು ಪಕ್ಕದ ಪಕ್ಷದತ್ತ ಚೌಕಾಶಿ ಮಾಡುತ್ತಿದ್ದಾರೆ. ತನ್ನ ಪಕ್ಷ ಟಿಕೆಟ್ ಕೊಡದಿದ್ದರೂ ಪರವಾಗಿಲ್ಲ, ತಾನು ಬೇರೆ ಪಕ್ಷದಿಂದ ಟಿಕೆಟ್ ಗಿಟ್ಟಿಸಬಲ್ಲೆ. ಆ ಪಕ್ಷವಾದರೂ ಆದೀತು, ಈ ಪಕ್ಷವಾದರೂ ಆದೀತು ಎಂಬ ಒಳ ಒಪ್ಪಂದ, ಮಾತುಕತೆ ಚಾಲ್ತಿಯಲ್ಲಿವೆ. ಒಟ್ಟಾರೆ ಈ ಸಲದ ಚುನಾವಣೆಯಲ್ಲಿ ಪಾತ್ರ ಹಾಗೂ ಪಕ್ಷ ಬದಲಾಗಬಹುದು. ಆದರೆ ಪಾತ್ರಧಾರಿಗಳು ಮಾತ್ರ ಅವರೇ! ಪುನಃ ಅವೇ ಮುಖಗಳು ! ಮುಖವಾಡಗಳು ಮಾತ್ರ ಬೇರೆ ಬೇರೆ ! ಚುನಾವಣೆ ನಂತರ ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಏನೋ ಅದ್ಭುತ ಸಂಭವಿಸಿಬಿಡಬಹುದೆಂಬುದೆಲ್ಲ ಬರೀ ಭ್ರಮೆ.

ರಾಜಕೀಯವೆಂಬುದು ನಮ್ಮಂಥವರಿಗೆ ಹೇಳಿ ಮಾಡಿಸಿದ ಕ್ಷೇತ್ರವಲ್ಲ ಎಂದು ಸಭ್ಯರು, ಸಂಭಾವಿತರು, ಪರಿಣತರು, ಪ್ರಾಮಾಣಿಕರು, ದಕ್ಷರು, ಸಮರ್ಥರು, ಯೋಗ್ಯರು ನಿರ್ಧರಿಸಿಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ರಾಜಕೀಯ ಕೆಟ್ಟು ಕಿಲುಬು ಹಿಡಿದಿದೆ. ಯಾರು ಬೇಕಾದರೂ ಎಮ್ಮೆಲ್ಲೆ ಆಗಬಹುದು, ಮಂತ್ರಿಯಾಗಬಹುದು. ಯಾವ ದೇಶದಲ್ಲೂ ಇಂಥ ಸ್ಥಿತಿ ಇಲ್ಲ. ಅತ್ತ ಅಮೆರಿಕದಲ್ಲಿ ಅಧ್ಯಕ್ಷ ಚುನಾವಣೆಯ ಪ್ರಥಮ ಹಂತ ನಡೆಯುತ್ತಿದೆ. ಅಭ್ಯರ್ಥಿಗಳನ್ನು ಅಲ್ಲಿನ ಪ್ರಜೆಗಳು ಅಡ್ಡಡ್ಡ, ಉದ್ದುದ್ದ ಸೀಳಿ ಓರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತಿದ್ದಾರೆ. ಅಭ್ಯರ್ಥಿಗಳ ಚಾರಿತ್ರ್ಯ, ಸಾಮರ್ಥ್ಯಗಳ ಬಗ್ಗೆ ತುರುಸಿನ ಚರ್ಚೆಯಾಗುತ್ತಿದೆ. ನೂರೆಂಟು ಅಡೆತಡೆ ದಾಟಿಯೇ ಗೆದ್ದು ಬರಬೇಕು. ಬ್ರಿಟನ್‌ನಲ್ಲಿ ಪಾರ್ಲಿಮೆಂಟ್‌ಗೆ ಸ್ಪರ್ಧಿಸಬೇಕೆಂದರೆ ಕನಿಷ್ಠ ಎಂಟು ವರ್ಷ ಪಾರ್ಟಿ ಕೆಲಸ ಮಾಡಿರಬೇಕು. ಲೇಬರ್ ಪಾರ್ಟಿ ತನ್ನ ಅಭ್ಯರ್ಥಿಗಳಿಗೆ ಡಿಪ್ಲೊಮಾ ಕೋರ್ಸ್‌ನ್ನು ಏರ್ಪಡಿಸುತ್ತದೆ. ಅದರಲ್ಲಿ ತೇರ್ಗಡೆಯಾದವರಿಗೇ ಟಿಕೆಟ್. ಈ ಕೋರ್ಸಿಗೆ ಸೇರಿಸಿಕೊಳ್ಳುವಾಗ ಪಾರ್ಟಿಯ ಹಿರಿಯ ನಾಯಕರು ಸಂದರ್ಶನ ಮಾಡುತ್ತಾರೆ. ಯಾವನೋ ದುಡ್ಡು ಚೆಲ್ಲಿ ಡಿಪ್ಲೊಮಾ ಕೋರ್ಸಿಗೆ ಸೀಟು ಗಿಟ್ಟಿಸಲು ಸಾಧ್ಯವಿಲ್ಲ. ಅದಿಲ್ಲದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಸ್ವಾಮಿ, ನಾವು ಇನ್ನೂ ಇಲ್ಲಿದ್ದೇವೆ? ನಮ್ಮಲ್ಲಿ ಅಭ್ಯರ್ಥಿಗಳನ್ನು ಸ್ಕ್ರೀನ್ ಮಾಡುವ ಯಾವ ವ್ಯವಸ್ಥೆಯಿದೆ? ಯಾವ ಪಕ್ಷ ಈ ವಿಷಯದಲ್ಲಿ ಎದೆ ತಟ್ಟಿ ಹೇಳಿಕೊಳ್ಳುತ್ತದೆ? ಉಹುಂ.. ಸಾಧ್ಯವೇ ಇಲ್ಲ. ಕೆಟ್ಟ ಸೇಬು, ಬುಟ್ಟಿಯಲ್ಲಿನ ಎಲ್ಲ ಹಣ್ಣುಗಳನ್ನು ಕೆಡಿಸುತ್ತದೆ. ನಮ್ಮ ರಾಜಕೀಯ ಪಕ್ಷಗಳ ಸ್ಥಿತಿಯೂ ಹಾಗೇ. ಬಾಂಬ್ ನಾಗ, ಪಟ್ಟೆ ಮಂಜ, ಮಾರಿಮುತ್ತು ಅಂಥವರೇ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೆ.. ಅವರೇ ಆರಿಸಿ ಬರುತ್ತಾರೆ. ಮಂತ್ರಿಯಾಗುವವರೂ ಅಂಥವರೇ. ಹೀಗಾದರೆ ಏನು ಮಾಡೋದು? ಊದುವುದು ಹೋಗಿ ಬಾರಿಸುವುದು ಬಂತು, ಮುಂದೆ ಬಾಯಿ ಬಾಯಿ ಬಡ್ಕೊಳ್ಳೋದು ಬರುತ್ತದೆ ಅಂದಂತಾಯಿತು.

ಈ ವಿಷಯದಲ್ಲಿ ತಾವು ಉಳಿದವರಿಗಿಂತ ಭಿನ್ನ ಎಂದು ಯಾವ ಪಕ್ಷ ಅಥವಾ ನಾಯಕರು ಧೈರ್ಯವಿದ್ದರೆ ಎದೆ ತಟ್ಟಿ ಹೇಳಿಕೊಳ್ಳಲಿ ನೋಡೋಣ. ಪ್ರಾಯಶಃ ಇವನ್ನೆಲ್ಲ ಅವರಿಂದ ನಿರೀಕ್ಷಿಸುವುದೂ ತಪ್ಪೇನೋ?

( ಸ್ನೇಹ ಸೇತು : ವಿಜಯ ಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+