ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಅಂದ್ರೆ ಏನು? ವಿಶ್ವಕ್ಕೆ ಅದರ ಕೊಡುಗೆಯೇನು?

By Staff
|
Google Oneindia Kannada News


ಇತರೇ ದೇಶಗಳಿಗೆ ಹೋಲಿಸಿ ಭಾರತವನ್ನು ಗೇಲಿ ಮಾಡುತ್ತಾ, ಕೆಲವರು ಟೈಂಪಾಸ್‌ ಮಾಡುತ್ತಾರೆ. ಆದರೆ ಅವರಿಗೆ ಭಾರತದ ಉದ್ದ ಅಗಲಗಳು ಗೊತ್ತೇ ವಿನಃ ಅಂತರ್‌ ಸತ್ವ ಗೊತ್ತಿಲ್ಲ. ಭಾರತದ ನಿಜವಾದ ತಾಕತ್ತನ್ನು ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಮತ್ತು ರಜನೀಶ್‌ ಬಣ್ಣಿಸಿದ್ದಾರೆ. ಆ ಬಗ್ಗೆ ನೂರೆಂಟು ಮಾತು.

  • ವಿಶ್ವೇಶ್ವರ ಭಟ್‌
  • ಸುಮಾರು ಎರಡು ವರ್ಷಗಳ ಹಿಂದಿನ ಕತೆ. ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಜತೆ ಹದಿನಾಲ್ಕು ದಿನಗಳ ಕಾಲ ನಾಲ್ಕು ದೇಶಗಳಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಉತ್ತರಧ್ರುವಕ್ಕೆ ಹತ್ತಿರವಿರುವ ಐಸ್‌ಲ್ಯಾಂಡಿನಲ್ಲಿ ನಡೆದ ಪ್ರಸಂಗ. ಅಲ್ಲಿನ ಕಾಲೇಜು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡಾ.ಕಲಾಂ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ರಾಷ್ಟ್ರಪತಿಗಳು ಸಲೀಸಾಗಿ ಉತ್ತರಿಸುತ್ತಿದ್ದರು.

    ವಿದ್ಯಾರ್ಥಿನಿಯಾಬ್ಬಳು ಎದ್ದು ನಿಂತು, ‘ಡಾ. ಕಲಾಂ ಅವರೇ, ಈ ವಿಶ್ವಕ್ಕೆ ಭಾರತದ ಅತಿದೊಡ್ಡ ಕೊಡುಗೆ ಯಾವುದು?’ ಎಂದು ಕೇಳಿದಳು. ಒಂದು ಕ್ಷಣ ಇಡೀ ಸಭಾಂಗಣದಲ್ಲಿ ಮೌನ. ಪಟಪಟನೆ ಉತ್ತರಿಸುತ್ತಿದ್ದ ಡಾ.ಕಲಾಂ ಸಹ ಅರೆಕ್ಷಣ ಗಕ್ಕನೆ ನಿಂತರು. ಪ್ರಶ್ನೆ ಚಿಕ್ಕದಾಗಿರಬಹುದು, ಆದರೆ ತೀಕ್ಷ್ಣವಾಗಿತ್ತು, ಮಾರ್ಮಿಕವಾಗಿತ್ತು, ಸುಲಭಕ್ಕೆ ಉತ್ತರ ಹೇಳುವಷ್ಟು ಸುಲಭದ್ದಾಗಿರಲಿಲ್ಲ. ಯಾವುದೇ ಉತ್ತರ ಹೇಳಿದರೂ ಇದೇನಾ ಕೊಡುಗೆ, ಇಷ್ಟೇನಾ ಕೊಡುಗೆ ಎಂದು ಕೇಳಿಬಿಡಬಹುದಾದ್ದರಿಂದ, ಬಾಯಿಗೆ ಬಂದದ್ದನ್ನು ಹೇಳಿ ಬಚಾವ್‌ ಆಗುವಂತಿರಲಿಲ್ಲ. ಅದೂ ಅಲ್ಲದೆ ಈ ಪ್ರಶ್ನೆ ಕೇಳಿದ್ದು ಯಾರಿಗೋ ಅಲ್ಲ. ಸ್ವತಃ ರಾಷ್ಟ್ರಪತಿಗೆ. ಆದ್ದರಿಂದ ಅವರು ಹೇಳುವ ಉತ್ತರಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದರು.

    ನಾವೆಲ್ಲ ಊಹಿಸುತ್ತಿದ್ದೆವು, ವಿಶ್ವಕ್ಕೆ ಭಾರತದ ಅತಿದೊಡ್ಡ ಕೊಡುಗೆ ಗಣಿತ ಶಾಸ್ತ್ರದ ಸೊನ್ನೆ ಎಂದು ಡಾ.ಕಲಾಂ ಹೇಳಬಹುದು, ಸಾಫ್ಟ್‌ವೇರ್‌, ಕ್ಷಿಪಣಿ ತಂತ್ರಜ್ಞಾನ ಎಂದು ಹೇಳಬಹುದೆಂದು. ಈ ಉತ್ತರಗಳನ್ನು ಹೇಳಿದ್ದರೂ ಅವು ಸರಿಯಾಗುತ್ತಿತ್ತು. ಯಾಕೆಂದರೆ ಅವು ಭಾರತದ ಅಸಾಮಾನ್ಯ ಕೊಡುಗೆಗಳೇ ಆಗಿದ್ದವು.

    ಇದೇ ಪ್ರಶ್ನೆಯನ್ನು ವಿದೇಶಿ ಪತ್ರಕರ್ತನೊಬ್ಬ ಒಮ್ಮೆ ಓಶೋ ರಜನೀಶ್‌ಗೆ ಕೇಳಿದ್ದ. ಜತೆಯಲ್ಲಿ ಮತ್ತೊಂದು ಪ್ರಶ್ನೆಯನ್ನಿಟ್ಟಿದ್ದ. ‘ನಿಮ್ಮ ದೃಷ್ಟಿಯಲ್ಲಿ ಭಾರತ ಅಂದ್ರೆ ಏನು?’ ಈ ಎರಡೂ ಪ್ರಶ್ನೆಗಳನ್ನು ಒಟ್ಟಿಗೇ ತೆಗೆದುಕೊಂಡ ಓಶೋ ಹೇಳಿದ್ದರು -‘ಭಾರತ ಒಂದು ಭೂಗೋಳ ಅಲ್ಲ. ಇತಿಹಾಸವೂ ಅಲ್ಲ. ಭೂಮಿಯ ಬಿಡಿ ತುಂಡೂ ಅಲ್ಲ. ಅದು ಇವೆಲ್ಲಕ್ಕಿಂತ ಹೆಚ್ಚಿನದು. ಒಂದು ರೀತಿಯಲ್ಲಿ ಅದೃಶ್ಯವೆಂದಿನಿಸಿದರೂ ಸ್ಫುಟ ವಾಸ್ತವ. ಅದು ಬೇರಾವ ದೇಶಗಳೂ ಕೇಳಿಕೊಳ್ಳಲಾಗದ ಶಕ್ತಿಸ್ಥಳಗಳಿಂದ ಕೂಡಿರುವ ಅದ್ಭುತ ಅವಕಾಶ. ಸುಮಾರು ಹತ್ತು ಸಾವಿರ ವರ್ಷಗಳ ಕಾಲ ಸಹಸ್ರಾರು ಜನರ ಪ್ರಜ್ಞೆಯ ಪರಾಕಾಷ್ಠೆ ತಲುಪಿದ, ಅವರ ಕಂಪನ ಈಗಲೂ ನಮ್ಮನ್ನು ತಟ್ಟುವ, ಅವರು ಸೃಷ್ಟಿಸಿದ ಸಾಮೂಹಿಕ ಪ್ರಜ್ಞೆ. ಸಂಸ್ಕೃತಿಯಾಗಿ ಅರಳಿರುವ ಪವಿತ್ರ ತಾಣ. ಈ ಅದೃಶ್ಯ ಅಂಶಗಳನ್ನು ಸ್ವೀಕರಿಸಲು ನಮಗೆ ಗ್ರಹಿಕೆ, ಸಾಮಾರ್ಥ್ಯ ಬೇಕು. ಭಾರತ ನಿಗೂಢ. ಏಕೆಂದರೆ ಅದು ಏಕೈಕ ಶೋಧಕ್ಕಾಗಿ ಎಲ್ಲವನ್ನೂ ತ್ಯಜಿಸಿದೆ. ಅದುವೇ ಸತ್ಯದ ಶೋಧ. ನಿಮಗೆ ಅಚ್ಚರಿಯೆನಿಸಬಹುದು ಭಾರತ ಅಂಥ ಮಹಾನ್‌ ದಾರ್ಶನಿಕರನ್ನೇನೂ ರೂಪಿಸಿಲ್ಲ. ಭಾರತದಲ್ಲಿ ಪ್ಲುಟೊ ಇಲ್ಲ, ಅರಿಸ್ಟಾಟಲ್‌ ಇಲ್ಲ, ಥಾಮಸ್‌ ಆಕ್ಟಿವಸ್‌ ಇಲ್ಲ, ಕಾಂಡ್‌ ಇಲ್ಲ, ಹೆಗೆಲ್‌ ಇಲ್ಲ, ಬ್ರ್ಯಾಡ್ಲಿ ಇಲ್ಲ, ಬರ್ಟ್ರೆಂಡ್‌ ರಸ್ಸೆಲ್‌ ಇಲ್ಲ. ಭಾರತ ಒಬ್ಬೇ ಒಬ್ಬ ದಾರ್ಶನಿಕನನ್ನೂ ಕೊಟ್ಟಿಲ್ಲ. ವಿಚಿತ್ರವೆಂದರೆ ಇವರೆಲ್ಲರೂ ಸತ್ಯವನ್ನು ಶೋಧಿಸುತ್ತಿದ್ದಾರೆ. ಇಡೀ ಪ್ರಪಂಚದಲ್ಲಿ ಭಾರತವೊಂದೇ ತನ್ನೆಲ್ಲ ಪ್ರತಿಭೆಗಳಿಗೆ ಸತ್ಯವನ್ನು ಕಾಣಲು, ಸತ್ಯವೇ ಆಗಗೊಡಲು ಏಕಾಗ್ರಚಿತ್ರ ಯತ್ನಗಳಿಗಾಗಿ ಮೀಸಲಾಗಿಟ್ಟ ನೆಲ. ನೀವು ಭಾರತದ ಇತಿಹಾಸದಲ್ಲಿ ಮಹಾನ್‌ ವಿಜ್ಞಾನಿಯನ್ನು ಕಾಣಲಾರಿರಿ. ಹಾಗೆಂದ ಮಾತ್ರಕ್ಕೆ ಪ್ರತಿಭಾವಂತರೇ ಇರಲಿಲ್ಲವೆಂದರ್ಥವಲ್ಲ. ಭಾರತದಲ್ಲಿ ಗಣಿತಶಾಸ್ತ್ರ ಹುಟ್ಟಿತು. ಆದರೆ ಭಾರತವು ಆಲ್ಬರ್ಟ್‌ ಐನ್‌ಸ್ಟೈನ್‌ನನ್ನು ರೂಪಿಸಲಿಲ್ಲ. ಪವಾಡವೆಂಬಂತೆ ಇಡೀ ದೇಶ ಯಾವುದೋ ವಸ್ತುನಿಷ್ಠ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರಲಿಲ್ಲ. ಇನ್ನೊಬ್ಬನ್ನು ಅರಿಯುವುದು ಭಾರತದ ಗುರಿಯಾಗಿರಲಿಲ್ಲ. ಆದರೆ ಸ್ವಯಂನ್ನು ಅರಿಯುವುದಾಗಿತ್ತು. ಹತ್ತು ಸಾವಿರ ವರ್ಷಗಳ ಕಾಲ ಲಕ್ಷಾಂತರ ಮಂದಿ ಒಂದೇ ಯತ್ನವನ್ನು ಅವಿರತವಾಗಿ ನಡೆಸಿದರು. ಅದಕ್ಕಾಗಿ ವಿಜ್ಞಾನ, ತಾಂತ್ರಿಕ ಅಭಿವೃದ್ಧಿ, ಸಿರಿವಂತಿಕೆ, ಐಷಾರಾಮಿ ಜೀವನವನ್ನು ಬಲಿಕೊಟ್ಟರು. ಬಡತನ, ಅನಾರೋಗ್ಯ, ಅನಕ್ಷರತೆ, ಸಾವು ಎಲ್ಲವನ್ನೂ ಸ್ವೀಕರಿಸಿದರು. ಆದರೆ ಯಾವ ಕಾರಣಕ್ಕೂ ಶೋಧಕಾರ್ಯ ಕೈ ಬಿಡಲಿಲ್ಲ. ಅದಕ್ಕಾಗಿ ಭಾರತದಲ್ಲಿ ಮಾತ್ರ ಗೌತಮ ಬುದ್ಧ, ನೇಮಿನಾಥ, ಆದಿನಾಥ, ಮಹಾವೀರ, ಕಬೀರ, ತಾನಸೇನ, ಫರೀದ, ದಾದುವನ್ನು ಕಾಣಲು ಸಾಧ್ಯ. ಸ್ವಾಮಿ ವಿವೇಕಾನಂದ, ಪರಮಹಂಸರನ್ನು ಕಾಣಲು ಸಾಧ್ಯ. ಸಂತರು ಸತ್ಯಶೋಧಕರು, ಆತ್ಮಶೋಧಕರು. ಸಂತರು ಭಾರತದ ಏಕಾಧಿಪತ್ಯ. ಬೇರೆಲ್ಲೂ ಸಂತರನ್ನು ಕಾಣಲು ಸಾಧ್ಯವಿಲ್ಲ. ಇವರು ಸೃಷ್ಟಿಸಿದ, ಸೃಜಿಸಿದ ದೈವಿಕತೆ, ಆಧ್ಯಾತ್ಮಿಕತೆ, ಸಂಸ್ಕೃತಿ, ಪರಂಪರೆಯೇ ಭಾರತ. ಇದೇ ಈ ವಿಶ್ವಕ್ಕೆ ಭಾರತ ನೀಡಿದ ಮಹಾನ್‌ ಕೊಡುಗೆ.’

    ಹಾಗೇ ಅಂದಿದ್ದರು ಓಶೋ. ಪ್ರಾಯಶಃ ಇಷ್ಟು ಸಂಕ್ಷಿಪ್ತದಲ್ಲಿ ಭಾರತ ಅಂದ್ರೆ ಏನು ಹಾಗೂ ಭಾರತದ ಕೊಡುಗೆಯೇನು ಎಂಬುದನ್ನು ಪರಿಣಾಮಕಾರಿಯಾಗಿ ವಿವರಿಸಲು ಸಾಧ್ಯವಿಲ್ಲವೇನೋ.

    ಅಂದು ಡಾ.ಕಲಾಂ ಏನು ಹೇಳಬಹುದೆಂದು ಕುತೂಹಲವಿತ್ತು. ಅವರು ಹೇಳಿದರು -‘ಭಾರತದಂಥ ವೈವಿಧ್ಯಮಯ, ಬಹುಶ್ರುತ ದೇಶಕ್ಕೆ ನಾಯಕತ್ವ ನೀಡಿರುವುದೇ ದೊಡ್ಡ ಸಾಧನೆ. ಭಾರತದಲ್ಲಿ ನೂರಾಹತ್ತು ಕೋಟಿ ಜನರಿದ್ದಾರೆ. ಈ ದೇಶದಲ್ಲಿರುವಷ್ಟು ಜಾತಿ, ಉಪಜಾತಿ, ಧರ್ಮ, ಪಂಗಡ, ಒಳಜಾತಿ ಬೇರೆ ಯಾವ ದೇಶಗಳಲ್ಲೂ ಇಲ್ಲ. ಈ ದೇಶದಲ್ಲಿರುವಷ್ಟು ಭಾಷೆ, ಉಪಸಂಸ್ಕೃತಿಗಳೂ ಬೇರೆಲ್ಲೂ ಇಲ್ಲ. ಪ್ರತಿ ನೂರು ಕಿಮಿಗೆ ಭಾಷೆ ಮತ್ತು ಉಚ್ಚಾರ ಬದಲಾಗುತ್ತವೆ. ಪ್ರತಿ 250ಕಿಮಿಗೆ ವೇಷ-ಭೂಷಣಗಳು ಬದಲಾಗುತ್ತವೆ. ನಮ್ಮಲ್ಲಿರುವಷ್ಟು ವೈರುಧ್ಯಗಳು, ವಿಪರ್ಯಾಸಗಳು ಬೇರಾವ ದೇಶಗಳಲ್ಲೂ ಸಿಗಲಿಕ್ಕಿಲ್ಲ. ನಮ್ಮಲ್ಲಿ ನಿರುದ್ಯೋಗ, ಹಸಿವು, ಅನಕ್ಷರತೆಗಳಿವೆ. ಇವೆಲ್ಲವುಗಳ ಮಧ್ಯೆಯೂ ಭಾರತ ಎಲ್ಲ ರಂಗಗಳಲ್ಲಿ ವಿಶ್ವವೇ ಬೆರಗಾಗುವಂಥ ಸಾಧನೆ ಮಾಡಿದೆ. ಇಂಥ ದೇಶ ಜಗತ್ತಿನಲ್ಲಿ ಎಲ್ಲಿದೆ ಹೇಳಿ? ಇಂಥ ದೇಶಕ್ಕೆ ನಾಯಕತ್ವ ನೀಡಿರುವುದು ಭಾರತದ ಮಹಾನ್‌ ಸಾಧನೆ.’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X