• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ವಿಶ್ವಾಸವನ್ನೇ ಕೊಲ್ಲಲು ದೇಗುಲಕ್ಕಿಂತ ಬೇರೆ ಟಾರ್ಗೆಟ್‌ ಏನಿದೆ?

By Staff
|
Vishweshwar Bhat ವಿಶ್ವೇಶ್ವರ ಭಟ್‌
ಈ ದೇವಾಲಯಗಳೆಂದರೆ ಮೊದಲಿನಿಂದಲೂ ಒಂಥರ ವಿಚಿತ್ರ ಸೋಜಿಗ. ಅವು ಪುಣ್ಯಕ್ಷೇತ್ರಗಳು ಎಂಬ ಕಾರಣಕ್ಕಿಂತ ಶ್ರದ್ಧಾಕೇಂದ್ರಗಳು ಎಂಬ ಕಾರಣಕ್ಕೆ. ನಮ್ಮ ನಂಬಿಕೆಗಳನ್ನು ಜೋಪಾನವಾಗಿಟ್ಟಿರಬಹುದೆಂಬ ಕಾರಣಕ್ಕೆ. ಅದಕ್ಕಾಗಿಯೇ ನಮ್ಮ ಪೂರ್ವಿಕರು ಎಲ್ಲೆಡೆ ದೇವಾಲಯಗಳನ್ನು ನಿರ್ಮಿಸುತ್ತಿದ್ದರು. ನೀವು ದೇಶದ ಯಾವುದೇ ಭಾಗಕ್ಕೆ ಹೋಗಿ, ಚಿಕ್ಕ ಹಳ್ಳಿಗೆ ಹೋಗಿ, ಅಲ್ಲೊಂದು ದೇವಾಲಯ ಇಲ್ಲಾಂದ್ರೆ ಕೇಳಿ. ಎಲ್ಲರ ಮನೆಗಳಲ್ಲಿ ದೇವರಮನೆ ಇದ್ದರೇನಂತೆ, ಊರಿಗೊಂದು ದೇಗುಲ ಬೇಕೇ ಬೇಕು. ದೇವಸ್ಥಾನಗಳು ಎಂದಿಗೂ ಕೇವಲ ಪೂಜಾಸ್ಥಳಗಳಷ್ಟೇ ಆಗಿರಲಿಲ್ಲ. ಅವು ಜನರೆಲ್ಲ ಕೂಡುವ ಸ್ಥಳವೂ ಆಗಿತ್ತು. ಜ್ಞಾನದ ಕೇಂದ್ರವೂ ಆಗಿತ್ತು. ಈ ಕಾರಣದಿಂದ ಸಾಂಸ್ಕೃತಿಕ ತಾಣವೂ ಆಗಿತ್ತು.

ರಾತ್ರೋ ರಾತ್ರಿ ಯಾರೋ ಬಂದು, ಲಿಂಗದಂಥ ಕಲ್ಲನ್ನು ತಂದಿಟ್ಟರೆ, ಗಣಪತಿಯನ್ನು ಹೋಲುವ ಗುಂಡಕಲ್ಲನ್ನು ತಂದಿಟ್ಟರೆ, ಅದಕ್ಕೆ ಅರಿಶಿನ-ಕುಂಕುಮವಿಟ್ಟು ಪೂಜೆ ಮಾಡುವವರು ನಾವು. ಅಷ್ಟೇ ಅಲ್ಲ, ಅದಕ್ಕೊಂದು ಗರ್ಭಗುಡಿ ಕಟ್ಟಿ, ಮುಂದೊಂದು ಗಂಟೆ ಜೋತು ಹಾಕಿ ದೇವಸ್ಥಾನವೆಂದು ಅಡ್ಡ ಬೀಳುವವರು ನಾವು. ನಮ್ಮ ನಂಬಿಕೆ ಮೂಡಲು, ಶ್ರದ್ಧೆ ಅರಳಲು ಅಷ್ಟೇ ಸಾಕು. ದೇವರೆಂದು ಯಾವುದೇ ಕಲ್ಲನ್ನಾಗಲಿ, ವಿಗ್ರಹವನ್ನಾಗಲಿ ತಂದಿಟ್ಟರೂ, ಸ್ವಲ್ಪವೂ ಹಿಂದುಮುಂದು ನೋಡದೇ, ಸ್ವಲ್ಪವೂ ಸಂಶಯಪಡದೇ ಉದ್ದಂಡ ಬೀಳುವವರು ನಾವು.

ನಮ್ಮ ವಿಶ್ವಾಸ, ನಂಬಿಕೆಗಳು ಗಟ್ಟಿಯಾಗಿ, ಶಾಶ್ವತವಾಗಿರಲಿ ಎಂದು ನಮ್ಮ ಒಳಮನಸ್ಸು ಹೇಳುತ್ತಿರುತ್ತದೆ. ಹಿಂದಿನ ಕಾಲದಲ್ಲಿ ದೇಗುಲಗಳೇ ಕಲಿಕೆಯ ಕೇಂದ್ರವೂ ಆಗಿತ್ತು. ಸಂಪತ್ತಿನ ಆಗರವೂ ಆಗಿತ್ತು. ಈ ದೇಶದ ಮೇಲೆ ದಂಡೆತ್ತಿ ಬಂದವರೆಲ್ಲರೂ ಮೊದಲು ಧ್ವಂಸ ಮಾಡಿದ್ದು, ದೋಚಿದ್ದು ದೇವಸ್ಥಾನಗಳನ್ನು. ಇಡೀ ಊರನ್ನು, ಸಮೂಹವನ್ನು ನಾಶಪಡಿಸಲು ದೇಗುಲವೊಂದನ್ನೇ ಉರುಳಿಸಿ, ಕೊಳ್ಳೆ ಹೊಡೆದರೆ ಸಾಕೆಂಬುದು ವಿದೇಶಿ ಆಕ್ರಮಣಕಾರರಿಗೆ ಗೊತ್ತಿತ್ತು.

Khajuraho temple carvingsಈಗಲೂ ಸಹ ನಮಗೆ ದೇವಾಲಯಗಳೇ ಸ್ಫೂರ್ತಿಯ ಕೇಂದ್ರ. ಕಾರ್ಫೊರೇಟ್‌ ಕಚೇರಿಯಂತೆ ಕಾಣುವ ಇಸ್ಕಾನ್‌ ಇರಬಹುದು, ದೇಗುಲಗಳಾಗಿಯೂ, ಬಿರ್ಲಾ ಕಟ್ಟಿಸಿದನೆಂಬ ಕಾರಣಕ್ಕೆ ಕರೆಯಿಸಿಕೊಳ್ಳುವ ಬಿರ್ಲಾ ಮಂದಿರಗಳಿರಬಹುದು, ಕಟ್ಟಡವೇ ಇಲ್ಲದ ಗುಡಿಗಳಿರಬಹುದು, ವಿಗ್ರಹವೊಂದಿದ್ದ ಪುರಾತನ ಕಟ್ಟಡವಿರಬಹುದು, ಅವೆಲ್ಲ ನಮ್ಮ ಪಾಡಿಗೆ ಶ್ರದ್ದಾಕೇಂದ್ರಗಳೇ, ದೇಗುಲಗಳೇ. ಕಾಶಿಯಲ್ಲಿನ ದೇವರನ್ನು ನೋಡಲು ಮೋಟಾರು ವಾಹನಗಳಿಲ್ಲದ ಕಾಲದಲ್ಲಿ ಅವೆಷ್ಟು ಮಂದಿ ಕಾಲ್ನಡಿಗೆಯಲ್ಲಿ ಹೋಗಿ ಬಂದಿಲ್ಲ? ಇಂದಿಗೂ ಅವೆಷ್ಟು ಮಂದಿ ದುರ್ಗಮ, ಅಪಾಯಕಾರಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟು ನಿಲ್ಲವುದಿಲ್ಲ? ಜನರ ಶ್ರದ್ಧೆ ನಂಬಿಕೆಗೆ ಎಣೆಯಾದರೂ ಎಲ್ಲಿ?

ಈ ಕಾರಣಕ್ಕೆ ದೇವಲಾಯಗಳೆಂದರೆ ಆಸಕ್ತಿ, ಕುತೂಹಲ. ದೇವಾಲಯಗಳ ಕುರಿತು ಹತ್ತಾರು ಪುಸ್ತಕಗಳನ್ನಿಟ್ಟುಕೊಂಡು ಓದುವಾಗ, ನಮ್ಮ ದೇವಸ್ಥಾನಗಳ ಕುರಿತು ಓಶೋ ಬರೆದ ವಿಚಾರಗಳು ಇಷ್ಟವಾದವು. ನೀವೂ ಇಷ್ಟಪಡಬಹುದೆಂದು ಅದನ್ನಿಲ್ಲಿ ಕೊಡುತ್ತಿದ್ದೇನೆ.

ಅಜ್ಜಿ ಬಹಳ ಒತ್ತಾಯಿಸುತ್ತಿದ್ದ ಕಾರಣಕ್ಕಾಗಿ ನಾನು ಮೊದಲಬಾರಿಗೆ ಅವಳೊಂದಿಗೆ ಖಜುರಾಹೋಕ್ಕೆ ಹೋದೆ. ಅದಾದ ಬಳಿಕ ನಾನು ಅಲ್ಲಿಗೆ ನೂರಾರು ಸಲ ಹೋಗಿರಬಹುದು. ಜಗತ್ತಿನ ಯಾವುದೇ ಸ್ಥಳಕ್ಕೂ ನಾನು ಅಷ್ಟು ಸಲ ಹೋಗಿಲ್ಲ. ಕಾರಣವಿಷ್ಟೆ -ಅಲ್ಲಿನ ಅನುಭವದಿಂದ ಆಯಾಸವಾಗುವುದಿಲ್ಲ. ಹೆಚ್ಚು ತಿಳಿದಂತೆಲ್ಲ, ಇನ್ನೂ ಹೆಚ್ಚು ತಿಳಿಯಬೇಕೆಂಬ ತವಕ. ಖಜುರಾಹೋ ದೇವಾಲಯದ ಪ್ರತಿಯಾಂದು ವಿವರವೂ ಒಂದು ರಹಸ್ಯ. ಪ್ರತಿಯಾಂದು ದೇವಾಲಯವನ್ನು ನಿರ್ಮಿಸಲು ನೂರಾರು, ಸಾವಿರಾರು ವರ್ಷಗಳನ್ನು ತೆಗೆದುಕೊಂಡಿರಬಹುದು. ಖಜುರಾಹೋ ದೇವಾಲಯಗಳಷ್ಟು ಪರಿಪೂರ್ಣವಾಗಿರುವ ಇನ್ನೊಂದನ್ನು ನಾನು ನೋಡಿಲ್ಲ.

ಭಾರತದಲ್ಲೊಂದು ಮೂಢನಂಬಿಕೆ ಪ್ರಚಾರದಲ್ಲಿದೆ. ವಿಗ್ರಹವೊಂದು ಸ್ವಲ್ಪ ಘಾಸಿಗೊಂಡರೆ, ಮೂಗು ಅಥವಾ ಕಿವಿ ಜಖಂಗೊಂಡಿದ್ದರೆ ಅದನ್ನು ಪೂಜಿಸಬಾರದು ಮತ್ತು ಅದನ್ನು ತೆಗೆದುಹಾಕಬೇಕು ಎಂಬುದು. ಇಂಥ ಲಕ್ಷಾಂತರ ಜಖಂ ಆದ ವಿಗ್ರಹಗಳು ಅಲ್ಲಿವೆ. ಅವು ನಿಜಕ್ಕೂ ಸುಂದರವಾಗಿವೆ.

Khajuraho templeಮಧ್ಯಪ್ರದೇಶದ ಕತ್ನಿ ಸಮೀಪವಿರುವ ಚಿಕ್ಕ ಪಟ್ಟಣಕ್ಕೆ ಹೋಗಿದ್ದೆ. ಆ ಊರಿನಲ್ಲಿ ಬರೀ ವಿಗ್ರಹಗಳೇ! ಸಾವಿರಾರು ವಿಗ್ರಹಗಳು! ಸಾವಿರಾರು ಮಂದಿ ಶಿಲ್ಪಿಗಳು ಈ ವಿಗ್ರಹಗಳನ್ನು ನಿರ್ಮಿಸಲು ಸಾವಿರಾರು ವರ್ಷಗಳನ್ನೇ ವ್ಯಯಿಸಿರಬಹುದು. ಆದರೆ ಇಂದು ಅವರಾರು ಬದುಕಿಲ್ಲ. ಅದು ಬೇರೆ ಮಾತು. ಈ ವಿಷಯದ ಬಗ್ಗೆ ವಿವರಗಳನ್ನು ಕೆದಕಲು ಪ್ರಯತ್ನಿಸಿದೆ. ಸರಕಾರಿ ಗೆಜೆಟ್‌ ಪುಸ್ತಕದಲ್ಲಿ ವಿವರ ಸಿಕ್ಕೇತೆಂದು ತಡಕಾಡಿದೆ. ಯಾವುದೋ ಹಳೇ ಕಡತದಲ್ಲಿ ಈ ಬಗ್ಗೆ ಸ್ವಲ್ಪ ವಿವರ ಸಿಕ್ಕಿತು.

ಈ ಊರು ಶಿಲ್ಪಿಗಳ ಊರು. ತಾವು ನಿರ್ಮಿಸಿದ ವಿಗ್ರಹಗಳನ್ನು ನಾಶಪಡಿಸಬಹುದೆಂಬ ಹೆದರಿಕೆಯಿಂದ, ಅವುಗಳನ್ನು ಮಣ್ಣಿನಲ್ಲಿ ಹುಗಿದು, ಪರಾರಿಯಾದರು. ಊರು ಬಿಟ್ಟು ಹೋಗುವಾಗ ತಮ್ಮ ಮನೆಗಳಿಗೆ ಬೆಂಕಿ ಹಚ್ಚಿ, ಈ ಸ್ಥಳದಲ್ಲಿ ಯಾವ ಊರು ಇತ್ತೆಂಬ ಬಗ್ಗೆ ಸುಳಿವೂ ಕೊಡದಂತೆ ಮಾಡಿ ಅವರು ಜಾಗ ಕಿತ್ತಿದ್ದರು. ಈಗ ಈ ಊರಲ್ಲಿ ದಟ್ಟ ಅರಣ್ಯ ಬೆಳೆದಿದೆ. ಮರಗಳು ಹುಲುಸಾಗಿ ಬೆಳೆದಿವೆ.

ದೇವಾಲಯದ ಪ್ರಮುಖ ನಗರಿಗಳಲ್ಲಿ ಒಂದಾಗಿರುವ ಖಜುರಾಹೋದಲ್ಲಿ ಒಂದು ನೂರು ದೇವಾಲಯಗಳಿವೆ. ಅಬ್ಬಬ್ಬ! ಒಂದು ದೇವಾಲಯ ನೋಡಿದರೇ ಸುಸ್ತು. ಅಷ್ಟೊಂದು ಅದ್ಭುತ! ಅದನ್ನು ನೋಡಲು ಒಂದು ದಿನ ಸಾಕಾಗೊಲ್ಲ. ಅಲ್ಲಿ ಎಷ್ಟೊಂದು ವಿಗ್ರಹಗಳು! ಆ ದೇವಾಲಯದ ಒಂದು ಅಂಗುಲವನ್ನೂ ಕೆತ್ತನೆಯಿಲ್ಲದೇ ಬಿಟ್ಟಿಲ್ಲ. ಅವು ಕೂಡ ಒಂದು ಕಾಲಕ್ಕೆ ಮಣ್ಣಿನಲ್ಲಿ ಮುಚ್ಚಿದ್ದವು. ಕೇವಲ ಕೆಲವೇ ದೇವಾಲಯಗಳನ್ನು ರಕ್ಷಿಸಲು ಸಾಧ್ಯವಾಗಿದೆ. ಮಹಮದೀಯರು ಸುಮಾರು ಎಪ್ಪತ್ತು ದೇವಾಲಯಗಳನ್ನು ಧ್ವಂಸ ಮಾಡಿದರು. ಈ ಜಗತ್ತಿನಲ್ಲಿದ್ದ ಹಾಗೂ ಇರುವ ಶಿಲ್ಪಗಳನ್ನು ನಾನು ನೋಡಿದ್ದೇನೆ. ಆದರೆ ಖಜುರಾಹೋ ಶಿಲ್ಪಗಳಲ್ಲಿರುವ ಸೌಂದರ್ಯ ಯಾವುದಕ್ಕೂ ಇಲ್ಲ. ಒಂದು ಶಿಲ್ಪಕ್ಕೆ ಅಂಥ ಸೌಂದರ್ಯ ಮತ್ತು ಪರಿಪೂರ್ಣತೆ ಕೊಡಲು ಸಾಧ್ಯವೇ ಎಂದು ಯಾರೂ ಊಹಿಸಲಾರರು. ಅವು ಅಷ್ಟೊಂದು ಪರಿಪೂರ್ಣ.

ಇಲ್ಲಿ ಒಂದು ಸಂಗತಿಯನ್ನು ಸ್ಪಷ್ಟಪಡಿಸಬೇಕು. ಅಜಂತಾ, ಎಲ್ಲೋರಾ, ಪುರಿ, ಕೊನಾರ್ಕ್‌, ಖಜುರಾಹೋದಲ್ಲಿರುವ ಭಾರತದ ಕಲೆಗೂ, ಪಾಶ್ಚಿಮಾತ್ಯ ದೇಶಗಳ ಶೃಂಗಾರ ಅಥವಾ ಪ್ರಣಯ ಚಿತ್ರ, ಅಶ್ಲೀಲ ಚಿತ್ರ, ವರ್ಣಚಿತ್ರ, ಸಂಗೀತಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಮುಖ್ಯ ವ್ಯತ್ಯಾಸವೆಂದರೆ -ಭಾರತದಲ್ಲಿ ಈ ಎಲ್ಲ ಚಿತ್ರಗಳೂ ದೇಗುಲದಲ್ಲಿವೆ. ಅತಿ ಸುಂದರವಾದ ದೇಹಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಖಜುರಾಹೋದಲ್ಲಿ ಕಲ್ಲು ಮಾತಾಡುತ್ತದೆ, ಹಾಡುತ್ತದೆ, ನರ್ತಿಸುತ್ತದೆ. ಅದು ಸತ್ತಿಲ್ಲ. ಸತ್ತ ಕಲ್ಲನ್ನು ಜೀವಂತ ಸ್ವರೂಪವಾಗಿ ಪರಿವರ್ತಿಸಿದ ನಮ್ಮ ಶಿಲ್ಪಿಗಳ ಚಮತ್ಕಾರವನ್ನು ನೋಡಬಹುದು. ಅವು ಎಷ್ಟೊಂದು ಜೀವಂತವಾಗಿವೆಯೆಂದರೆ ಆ ವಿಗ್ರಹಗಳು ಯಾವುದೇ ಕ್ಷಣದಲ್ಲಿ ನಿಮ್ಮೆಡೆಗೆ ಧಾವಿಸಿ ‘ಹಲೋ ’ಎಂದು ಕರೆಯಬಹುದೆಂದು ಭಾಸವಾಗುತ್ತವೆ.

ಈ ವಿಗ್ರಹಗಳು ನಿಮ್ಮ ಅದುಮಿಟ್ಟ ಲೈಂಗಿಕ ಕಾಮನೆಗಳನ್ನು ಸಂತೃಪ್ತಗೊಳಿಸುವುದಿಲ್ಲ. ಅದರ ಬದಲು, ಈ ಬೆತ್ತಲೆ ವಿಗ್ರಹಗಳನ್ನು ಧ್ಯಾನಿಸುತ್ತಾ ತಂತ್ರ ವಿಧಾನದ ಮೂಲಕ ಲೈಂಗಿಕ ಕಾಮನೆಗಳನ್ನು ಬಿಡುಗಡೆ ಮಾಡುತ್ತವೆ. ಅಲ್ಲಿ ಸುಮ್ಮನೆ ಮೌನವಾಗಿ ಕುಳಿತು ಕೊಳ್ಳುವುದೇ ವಿಧಾನ. ಖಜುರಾಹೋದಂಥ ಸ್ಥಳಗಳು ಒಂದು ರೀತಿಯಲ್ಲಿ ವಿಶ್ವವಿದ್ಯಾಲಯಗಳಿದ್ದಂತೆ. ಅಲ್ಲಿಗೆ ಜನರು ಬಂದು ತಮ್ಮ ಅದುಮಿಟ್ಟ ಲೈಂಗಿಕ ಕಾಮನೆಗಳನ್ನು ಮಾನಸಿಕವಾಗಿ ಬಿಡುಗಡೆಗೊಳಿಸಿಕೊಂಡು ಭಾವಶುದ್ಧಿ ಪಡೆಯುತ್ತಾರೆ.

ಮುಖ್ಯ ಅಂಶವೆಂದರೆ ಈ ವಿಗ್ರಹಗಳೆಲ್ಲ ದೇವಾಲಯದ ಹೊರಗಡೆಯಿವೆ. ದೇವಾಲಯದೊಳಗೆ ಯಾವುದೇ ಪ್ರಣಯ ವಿಗ್ರಹಗಳಿಲ್ಲ. ದೇವಾಲಯದ ಒಳಗಡೆ ಮೌನ, ಶಾಂತತೆ, ತಂಪು, ದಿವ್ಯತೆಯ ಹೊರತಾಗಿ ಏನೂಇಲ್ಲ. ಸಾವಿರಾರು ವರ್ಷಗಳಿಂದ ಜನ ಇಲ್ಲಿ ಧ್ಯಾನಮಾಡಿದ್ದಾರೆ. ದೇವಾಲಯದ ಹೊರಗಡೆಯಿರುವ ನಗ್ನ ವಿಗ್ರಹಗಳು ನಿಮ್ಮ ಮೇಲೆ ಪರಿಣಾಮ ಬೀರಬಾರದು, ಅದು ನಿಮ್ಮಲ್ಲಿ ಲೈಂಗಿಕ ಭಾವನೆಯನ್ನು ಕೆರಳಿಸಬಾರದು, ನಿಮ್ಮ ಅದುಮಿಟ್ಟ ಲೈಂಗಿಕ ಕಾಮನೆ ಮುಕ್ತವಾಗಿ ಭಾವಶುದ್ಧಿಯಾಗಬೇಕೆಂಬುದೇ ಇಲ್ಲಿನ ನಿಯಮ.

ಇದು ಭಾರತೀಯರು ಕಂಡುಹಿಡಿದ ಮನಶಾಸ್ತ್ರೀಯ ವಿಧಾನ. ಅವುಗಳನ್ನು ನೋಡಿದರೆ ಏನು ನಡೆಯುತ್ತಿದೆಯೆಂಬುದು ಯಾರಿಗೂ ಗೊತ್ತಿಲ್ಲ. ಅದರ ಅಗತ್ಯವೂ ಇಲ್ಲಿಯವರೆಗೆ ಕಂಡುಬಂದಿಲ್ಲ. ಇಡೀ ಗೋಡೆ ಖಾಲಿಯಾದಂತೆ. ಅವು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲವೆಂಬುದು ಮನವರಿಕೆಯಾದರೆ ಅದೇ ಸೂಚನೆ : ‘ಈಗ ಒಳಗೆ ಹೋಗಲು ಸರಿಯಾದ ಸಮಯ. ಒಳಗಡೆ ಹೋಗುವ ಬಾಗಿಲು ತೆರೆದಿದೆ’. ಖಜುರಾಹೋ ಇರಬಹುದು ಅಥವಾ ಕೊನಾರ್ಕ್‌ ಇರಬಹುದು. ಇವು ಅಶ್ಲೀಲ ಅಥವಾ ನಗ್ನವಿಗ್ರಹಗಳಿರುವ ತಾಣವಲ್ಲ. ಮನಸ್ಸಿನಲ್ಲಿನ ವಿಕಾರಗಳನ್ನು ಕಳಚಿಕೊಳ್ಳಲು ಅನುವಾಗುವ ತಾಣಗಳು. ಇವು ಧ್ಯಾನ ಸಾಧನಗಳು. ಯಾರಿಗೇ ಆಗಲಿ ಇದೆಂಥ ಅಶ್ಲೀಲತೆ ಎಂದು ಅನಿಸಬಹುದು. ಕೆಲವರು ಇದನ್ನು ಖಂಡಿಸಬಹುದು. ಕೆಲವರು ಕಣ್ಣುಗಳನ್ನು ತಗ್ಗಿಸಬಹುದು ಇನ್ನು ಕೆಲವರು ಅಲ್ಲಿಂದ ಜಾಗ ಖಾಲಿಮಾಡಬಹುದು. ಆದರೆ ಅದು ದೇವಾಲಯದ ದೋಷವಲ್ಲ. ನಿಮ್ಮೊಳಗಿರುವ ವಿಷವೇ ಕಾರಣ.

ದೇವಾಲಯದ ಒಳಗೆ ಹೋಗಿ. ಮಂದಿರದೊಳಗೆ ಹೋಗುತ್ತಿರುವಂತೆ ಚಿತ್ರಗಳು, ವಿಗ್ರಹಗಳು ಕಡಿಮೆಯಾಗುತ್ತಾ ಹೋಗುತ್ತವೆ. ಭಾವನೆಯೂ ಬದಲಾಗುತ್ತಾ ಹೋಗುತ್ತದೆ. ಹೊರಗಡೆ ಗೋಡೆ ಮೇಲೆ ಶುದ್ಧ ಲೈಂಗಿಕತೆ. ಒಮ್ಮೆ ಒಳಗಡೆ ಹೋದರೆ ಲೈಂಗಿಕತೆ ಮಾಯಾ! ದಂಪತಿಗಳು ಅಲ್ಲೇ ಇದ್ದಾರೆ ಗಾಢ ಪ್ರೀತಿಯಲ್ಲಿ, ಒಬ್ಬರೊಬ್ಬರ ಕಣ್ಣುಗಳಲ್ಲಿ ದೃಷ್ಟಿನೆಟ್ಟಿದ್ದಾರೆ, ಕೈಹಿಡಿದುಕೊಂಡಿದ್ದಾರೆ. ಬಿಸಿ ಅಪ್ಪುಗೆ ಹಿತವಾಗಿದೆ. ಆದರೆ ಅಲ್ಲಿ ಲೈಂಗಿಕತೆ ಇಲ್ಲ. ಇನ್ನೂ ಸ್ವಲ್ಪ ಒಳಗೆ ಹೋಗಿ -ಅಲ್ಲಿ ಚಿತ್ರಗಳು, ವಿಗ್ರಹಗಳು ಮತ್ತೂ ಕಡಿಮೆ. ಅಲ್ಲೂ ದಂಪತಿಗಳಿದ್ದಾರೆ. ಅವರು ಒಬ್ಬರನ್ನೊಬ್ಬರ ಕೈಗಳನ್ನು ಹಿಡುದುಕೊಂಡಿಲ್ಲ. ಮತ್ತಷ್ಟು ಒಳಗೆ ಹೋಗಿ ದಂಪತಿಗಳೇ ಇಲ್ಲ... ಅವರು ಮಾಯು... ಇನ್ನಷ್ಟು ದೂರ...

ದೇವಾಲಯದ ಕೇಂದ್ರಗಳನ್ನು ಭಾರತೀಯರು ‘ ಗರ್ಭಗೃಹ’ಎಂದು ಕರೆಯುತ್ತಾರೆ. ಅಲ್ಲಿ ಯಾವುದೇ ವಿಗ್ರಹವಾಗಲಿ, ಚಿತ್ರವಾಗಲಿ ಇಲ್ಲ. ಜನಸಂದಣಿ ಕರಗಿಹೋಗಿದೆ. ಅಲ್ಲೊಂದು ಕಿಟಕಿಯೂ ಇಲ್ಲ. ಹೊರಗಡೆಯಿಂದ ಬೆಳಕು ಬರುವುದಿಲ್ಲ. ಅಲ್ಲಿ ಬರೀ ಕತ್ತಲು, ಮೌನ, ಶಾಂತತೆ, ದಿವ್ಯತೆ. ಅಲ್ಲಿ ದೇವರ ವಿಗ್ರಹವಿಲ್ಲ. ಒಂದು ರೀತಿಯ ಶೂನ್ಯ. ದೇವಾಲಯದ ಒಳಗಿನ ಕೇಂದ್ರ ಶೂನ್ಯ. ಆದರೆ ಹೊರಗಡೆ ಲೈಂಗಿಕ ಉನ್ಮಾದ ವಿಗ್ರಹಗಳು. ಒಳಗಿನ ಕೇಂದ್ರ ಧ್ಯಾನಮಯ, ಸಮಾಧಿಸದೃಶ.

ಆದರೆ ಒಂದು ಅಂಶನೆನಪಿರಲಿ. ಹೊರಗಿನ ಗೋಡೆಯನ್ನು ಧ್ವಂಸ ಮಾಡಿದರೆ, ಒಳಗಿನ ಗೋಡೆಯಿಲ್ಲದೇ ಒಳಗೆ ಮೌನವೂ ಇಲ್ಲ. ಕತ್ತಲೂ ಇಲ್ಲ. ಚಂಡಮಾರುತವಿಲ್ಲದೇ ಚಂಡಮಾರುತದ ಮಧ್ಯಬಿಂದು ಇಲ್ಲ. ಪರಿಧಿ ಇಲ್ಲದೇ ಕೇಂದ್ರ ಬಿಂದುವಿರುವುದಿಲ್ಲ. ಎರಡೂ ಇದ್ದರೆ ಮಾತ್ರ ಅವುಗಳ ಅಸ್ತಿತ್ವ. ಖಜುರಾಹೋ ನಿಮ್ಮನ್ನೇ ಚಿತ್ರಿಸುತ್ತದೆ. ಅದು ಕಲ್ಲಿನಲ್ಲಿ ಕೊರೆತ ಮಾನವ ಕತೆ. ಅದು ಕಲ್ಲಿನಲ್ಲಿನ ಮಾನವ ನರ್ತನ-ಕೆಳಸ್ಥರದಿಂದ ಶಿಖರಕ್ಕೆ, ಅಸಂಖ್ಯದಿಂದ ಒಂದಕ್ಕೆ, ಪ್ರೀತಿಯಿಂದ ಧ್ಯಾನಕ್ಕೆ, ಶೂನ್ಯದೆಡೆಗೆ, ಏಕಾಂತಕ್ಕೆ ಕೊಂಡೊಯ್ಯುವ ಸಂಕೇತವಾಗಿ ಆ ದೇವಾಲಯ ಕಂಗೊಳಿಸುತ್ತದೆ. ಈ ದೇವಾಲಯವನ್ನು ನಿರ್ಮಿಸಿದವರು ನಿಜಕ್ಕೂ ಮಹಾ ಧೈರ್ಯಶಾಲಿಗಳು!

***

ಇಷ್ಟೆಲ್ಲ ಯಾಕೆ ಹೇಳಬೇಕಾಯಿತು ಅಂದ್ರೆ-ಇಂದು ನಮ್ಮ ದೇವಾಲಯಗಳು ಆಪತ್ತಿನಲ್ಲಿವೆ. ತಿರುಪತಿಯಂಥ ದೇವಾಲಯದ ಸುತ್ತ ಆತಂಕಕಾರಿ ಬೆಳವಣಿಗೆಗಳಾಗುತ್ತಿವೆ. ತಿರುಪತಿ ಕೇವಲ ದೇವಾಲಯವೊಂದೇ ಅಲ್ಲ, ಅದು ನಮ್ಮ ನಂಬಿಕೆ, ಶ್ರದ್ಧೆಯ ಕೇಂದ್ರ. ಅದನ್ನೇ ಬುಡಮೇಲು ಮಾಡುವ ಕೃತ್ಯಗಳು ಇಂದು ನಡೆಯುತ್ತಿವೆ. ಈ ಶ್ರದ್ಧಾ ಕೇಂದ್ರಗಳನ್ನು ಶಿಥಿಲಗೊಳಿಸಿ ನಮ್ಮ ನಂಬಿಕೆಗಳನ್ನು ಛಿದ್ರಗೊಳಿಸುವ, ವಿಶ್ವಾಸದ ಬುಡಕ್ಕೆ ಕೊಡಲಿಯೇಟು ಹಾಕುವ ಧೂರ್ತ ಪ್ರಯತ್ನಗಳನ್ನು ಖಂಡಿಸಲಿದ್ದರೆ ಕೈತಪ್ಪಿ ಹೋದ ನಮ್ಮ ದೇವಾಲಯಗಳ ಪಟ್ಟಿಗೆ ಇದೂ ಸೇರಬಹುದು.

ಜೋಕೆ!

(ಸ್ನೇಹ ಸೇತು : ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more