ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರೂ ಸುಖ ಶಾಂತಿಯಿಂದ ಇದ್ದಾರೆ ಎಂದು ಪ್ರಕಟಿಸಿದರೆ -ಹೇಳಿ, ಅದೆಂಥ ಸುದ್ದಿ?

By Staff
|
Google Oneindia Kannada News
Vishweshwar Bhat ವಿಶ್ವೇಶ್ವರ ಭಟ್‌

ಪತ್ರಕರ್ತರ್ಯಾಕೆ ಹೀಂಗ?

ಯಾವತ್ತೂ ಪತ್ರಕರ್ತರು ನೆಗೆಟಿವ್‌ ಸುದ್ದಿಗೇ ಏಕೆ ಪ್ರಾಮುಖ್ಯ ಕೊಡುತ್ತಾರೆ? ಪತ್ರಿಕೆಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಸ್ಫೋಟ, ಭಯೋತ್ಪಾದಕ ಕೃತ್ಯ, ಮೋಸ, ಟೀಕೆ, ಆರೋಪ ಮುಂತಾದ ನಕಾರಾತ್ಮಕ ಸುದ್ದಿಯೇ ವಿಜೃಂಭಿಸುತ್ತವೆ? ಸಮಾಜದಲ್ಲಿ ಒಳ್ಳೆಯ ಸಂಗತಿಗಳೇನೂ ನಡೆಯುವುದಿಲ್ಲವಾ? ಪತ್ರಕರ್ತರಿಗೆ ಅವುಗಳೇಕೆ ಕಾಣಿಸುವುದಿಲ್ಲ? ದಿನಬೆಳಗಾದರೆ ಅಪಘಾತ, ರಾಜಕಾರಣಿಗಳ ಹೇಳಿಕೆ ಬಿಟ್ಟರೆ ಪತ್ರಿಕೆಗಳಿಗೆ ಬೇರ್ಯಾವವೂ ಸುದ್ದಿಯೇ ಅಲ್ಲವಾ? ಇದು ಓದುಗರಿಗೆ ಇಷ್ಟವಾಗಬಹುದು ಅಂತ ಬರೀತಾರೋ, ತಮಗೆ ಇಷ್ಟ ಅಂತ ಕೊಡ್ತಾರೋ? ನೆಗೆಟಿವ್‌ ಸಿಂಡ್ರೋಮ್‌ ಅನ್ನು ಬೆಳೆಸುವವರು ಪತ್ರಕರ್ತರು.

ಇಂಥ ಆರೋಪ ಪತ್ರಕರ್ತರ ಮೇಲೆ ಮೊದಲಿನಿಂದಲೂ ಇದೆ. ಆದರೆ ಪತ್ರಕರ್ತರು ಇಂದಿಗೂ ಆರೋಪಿ ಸ್ಥಾನದಲ್ಲೇಇದ್ದಾರೆ. ಅಂದರೆ ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿ ಪ್ರಕಟವಾಗುವುದು ನಿಂತಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಥ ಸುದ್ದಿ ಜಾಸ್ತಿಯಾಗುತ್ತಿದೆ. ಇತ್ತೀಚೆಗೆ ಈ ಕುರಿತು ‘ದಿ ಟೈಮ್ಸ್‌ ಆಫ್‌ ಇಂಡಿಯಾ ’ ಒಂದು ಇಡೀ ಪುಟದ ಲೇಖನ ಪ್ರಕಟಿಸಿತ್ತು. ಅದಕ್ಕೆ ನೀಡಿದ ಶೀರ್ಷೀಕೆ - Newspapers can be injurious to health.. (ಪತ್ರಿಕೆಗಳು ಆರೋಗ್ಯಕ್ಕೆ ಹಾನಿಕಾರಕ).

ದಿಲ್ಲಿಯ ‘ಹಿಂದೂಸ್ತಾನ್‌ ಟೈಮ್ಸ್‌’ ಪತ್ರಿಕೆ ಸಂಪಾದಕರಾಗಿದ್ದ, ಈಗ ಬೆಂಗಳೂರಿನಲ್ಲಿ ನೆಲೆಸಿರುವ ವಿ.ಎನ್‌.ನಾರಾಯಣನ್‌ ಹೇಳುತ್ತಿದ್ದರು -ನೆಗೆಟಿವಿಸಮ್‌ ಎಂಬುದು ಪತ್ರಕರ್ತರ ಅವಿಭಾಜ್ಯ ಅಂಗವೇನೋ ಎನ್ನುವಷ್ಟು ಬಲವಾಗಿ ವ್ಯಾಪಿಸಿದೆ. ಎಲ್ಲ ಘಟನೆಗಳಲ್ಲೂ ನಕಾರಾತ್ಮಕ ಸಂಗತಿಗಳನ್ನು ಗುರುತಿಸುವುದೇ ಪತ್ರಿಕೋದ್ಯಮ ಎಂದು ಭಾವಿಸಿದಂತಿದೆ. Good news is no news ಎಂಬುದು ಪತ್ರಿಕೋದ್ಯಮದ ನಿಯಮ ಹಾಗೂ ಪತ್ರಕರ್ತರ ನೀತಿ, ನಿಯತ್ತು. ಒಂದು ರಾಜ್ಯದಲ್ಲಿ ಎಲ್ಲರೂ ಸುಖ, ಸಂತಸ, ಸಮೃದ್ಧಿಯಿಂದ ಇದ್ದಾರೆ ಅಂದ್ರೆ ಅದು ಸುದ್ದಿಯೇ ಅಲ್ಲ. ಸೋಮಾಲಿಯಾದಲ್ಲಿ ಕಿತ್ತು ತಿನ್ನುವ ಬಡತನವಿದೆಯೆಂದರೆ ಪತ್ರಕರ್ತರೆಲ್ಲ ಅಲ್ಲಿಗೆ ದೌಡಾಯಿಸುತ್ತಿರಾ, ವಜ್ರದ ಗಣಿಯೇ ಬಾಯ್ತೆರೆದರೆ ಓಡುವಂತೆ. ಒಂದು ರೀತಿಯಲ್ಲಿ ಪತ್ರಿಕೋದ್ಯಮ ಅಂದ್ರೆ unreal estate.

ಒಮ್ಮೆ ಅಮೆರಿಕದ ಮಾಧ್ಯಮ ದೊರೆ ವಿಲಿಯಮ್‌ ರಾಂಡಲ್ಫ್‌ ಹರ್ಟ್ಸ್‌ ತನ್ನ ವರದಿಗಾರು ಹಾಗೂ ಫೋಟೊಗ್ರಾಫರ್‌ಗಳನ್ನು ಹವಾನಕ್ಕೆ ಕಳಿಸಿದ. ಯುದ್ಧದ ಕಾರ್ಮೋಡ ಹವಾನದ ಮೇಲೆ ಕವಿದಿತ್ತು. ಅಲ್ಲಿ ಒಂದೆರಡು ದಿನ ತಿರುಗಾಡಿದ ವರದಿಗಾರರು ಹಾಗೂ ಫೋಟೊಗ್ರಾಫರ್ಸ್‌ ತಂಡ ಕಚೇರಿಗೆ ಟೆಲಿಗ್ರಾಮ್‌ ಕಳಿಸಿದರು -‘ಹವಾನಾ ಶಾಂತವಾಗಿದೆ. ನಾವಂದುಕೊಂಡಂತೆ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯುತ್ತಿಲ್ಲ’. ಇದನ್ನು ಓದಿದ ಹಟ್ಸ್‌ಗೆ ವಿಪರೀತ ಕೋಪ ಬಂದಿತು. ವಾಪಸ್‌ ಟೆಲಿಗ್ರಾಮ್‌ ಕಳಿಸಿದ - You furnish the report and I furnish the war. (ಯುದ್ಧ ನಡೆಯುತ್ತಿದೆಯೆಂಬ ವರದಿ ಕಳಿಸಿ, ನಾನು ಯುದ್ಧ ಮಾಡಿಸುತ್ತೇನೆ.)

ಈ ಪ್ರಸಂಗ ನೆನಪುಮಾಡಿಕೊಂಡ ನಾರಾಯಣನ್‌ ತಮಾಷೆಯಿಂದ ಕೇಳಿದ್ದರು -‘ಒಂದು ವೇಳೆ ಡಾಕ್ಟರರು somebody furnish the rats, we furnish the plague ಎಂದು ಕೇಳಿದರೆ ಹೇಗಿರುತ್ತದೆ? ಹಿಂಸಾಚಾರ ಹಾಗೂ ಯುದ್ಧ ಸಂಭವಿಸುವ ತನಕ ಪತ್ರಿಕೆಗಳು ಅಪರೂಪಕ್ಕೆ ಶಾಂತವಾಗಿರುತ್ತವೆ. ಟಿ.ಎಸ್‌.ಎಲಿಯಟ್‌ ಹೇಳುವಂತೆ ‘ಈ ಸಮಾಜ ಅತಿಯಾದ ವಾಸ್ತವ, ಸಹಜತೆಯನ್ನು ಸಹಿಸುವುದಿಲ್ಲ. ಹಾಗೆಯೇ ದೀರ್ಘ ಕಾಲ ಶಾಂತಿ, ಸಮಾಧಾನ ನೆಲೆಸುವುದನ್ನು ಪತ್ರಿಕೆಗಳು ಸಹಿಸುವುದಿಲ್ಲ.’

ಯಾವುದೇ ಪತ್ರಿಕೆಯ ಸುದ್ದಿ ಸಂಪಾದಕರನ್ನು ಆ ದಿನದ ಪ್ರಮುಖ ಸುದ್ದಿಯೇನೆಂದು ಸಂಪಾದಕ ಕೇಳಿದರೆ, ‘ಇಂದು ಅಂಥ ಮಹತ್ವದ ಸುದ್ದಿಯೇನಿಲ್ಲ’ ಅಂತಾನೇ ಹೇಳುತ್ತಾರೆ. ‘ಹೌದಾ? ಅಂಥ ಪ್ರಮುಖ ಸುದ್ದಿ ಇಲ್ವಾ? ’ಎಂದು ಕೇಳಿದರೆ, ‘ಬಿಹಾರದಲ್ಲಿ ರೈಲ್ವೆ ಅಪಘಾತವಾಗಿ 20ಮಂದಿ ಸತ್ತಿದ್ದಾರೆ. ಹಾಸನ ಸಮೀಪ ವಾಹನ ಡಿಕ್ಕಿಯಾಗಿ 8ಮಂದಿ ಸತ್ತಿದ್ದಾರೆ. ಮೂರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದರ್ಭದಲ್ಲಿ 12ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಚಿಕೂನ್‌ಗುನ್ಯಾಕ್ಕೆ ದೇಶಾದ್ಯಂತ 40ಮಂದಿ ಸತ್ತಿದ್ದಾರೆ. ಬೆಂಗಳೂರಿನಲ್ಲಿ ಒಂದೇ ದಿನ ಮೂವರು ರೌಡಿಗಳನ್ನು ಮರ್ಡರ್‌ ಮಾಡಲಾಗಿದೆ, ವರದಕ್ಷಿಣೆಗೆ ನವವಧು ಸತ್ತಿದ್ದಾಳೆ. ಚೆಚನ್ಯಾದಲ್ಲಿ 130ಜನ ಸತ್ತಿದ್ದಾರೆ.. ಇವನ್ನು ಬಿಟ್ಟರೆ ಅಂಥ ಮಹತ್ವದ ಸುದ್ದಿಯೇನಿಲ್ಲ ’ಅಂತಾರೆ. ಮರುದಿನ ಈ ಸುದ್ದಿಯೇ ಪತ್ರಿಕೆಯ ಮುಖಪುಟದಲ್ಲಿ ಕಂಗೊಳಿಸುತ್ತದೆ.

ಹಾಗಾದರೆ ಸಮಾಜದಲ್ಲಿ ಒಳ್ಳೆಯ ಸಂಗತಿಗಳೇನೂ ನಡೆಯುವುದೇ ಇಲ್ಲವಾ? ನಡೆದರೂ ಪತ್ರಕರ್ತರ ಕಣ್ಣಿಗೆ ಬೀಳುವುದಿಲ್ಲವಾ? ಪತ್ರಕರ್ತರು, ಪತ್ರಿಕೆಗಳೆಂದರೆ ಯಾಕೆ ಹೀಂಗ?

ಇಲ್ಲೊಂದು ಪ್ರಸಂಗವನ್ನು ಹೇಳಬೇಕು. ಅಮೆರಿಕದ ಅಧ್ಯಕ್ಷನಾಗಿದ್ದ ಲಿಂಡನ್‌ ಜಾನ್ಸನ್‌ಗೆ ಪತ್ರಕರ್ತರೆಂದರೆ ಅಷ್ಟಕ್ಕಷ್ಟೆ. ಪತ್ರಕರ್ತರು ಸದಾ ತನ್ನ ವಿರುದ್ಧ ಬರೆಯುವ ಸಣ್ಣ ಟೀಕೆಯನ್ನು ಸಹ ಆತ ಸಹಿಸುತ್ತಿರಲಿಲ್ಲ. ಅವನ ಸ್ವಭಾವಕ್ಕೆ ತಕ್ಕಂತೆ ಪತ್ರಕರ್ತರೂ ಅವನ ವಿರುದ್ಧ ಒಂದಿಲ್ಲೊಂದು ಟೀಕೆ, ಕಾಲೆಳೆಯುವಿಕೆಯನ್ನು ಜಾರಿಯಲ್ಲಿರಿಸುತ್ತಿದ್ದರು. ಹೀಗಾಗಿ ಜಾನ್ಸನ್‌ ಪತ್ರಕರ್ತರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ.

ಒಮ್ಮೆ ಜಾನ್ಸನ್‌ಗೆ ಅನಿಸಿತಂತೆ. ಪತ್ರಕರ್ತರ ವಿರುದ್ಧ ಕಿಡಿಕಾರಿದ್ದು ಸಾಕು, ಜಗಳವೂ ಸಾಕು. ಅವರೊಂದಿಗೆ ಖುಷಿಖುಷಿಯಾಗಿರೋಣ. ಹಾಗೆಂದುಕೊಂಡವನೇ ಪತ್ರಕರ್ತರನ್ನೆಲ್ಲ ವೈಟ್‌ಹೌಸ್‌ಗೆ ಕರೆದ. ಅವರೊಂದಿಗೆ ಸ್ನೇಹ, ಸಂತಸದಿಂದ ಕೆಲಕಾಲ ಕಳೆದ. ಪತ್ರಕರ್ತರ ಜತೆ ಮಾತನಾಡುತ್ತಾ ಜಾನ್ಸನ್‌ ಹೇಳಿದ -‘ನಾನು ನಾಳೆ ವಾಷಿಂಗ್ಟನ್‌ನಲ್ಲಿರುವ ಪೊಟೊಮ್ಯಾಕ್‌ ನದಿ ನೀರಿನ ಮೇಲೆ ನಡೆಯುತ್ತೇನೆ’.

ಅಮೆರಿಕದ ಅಧ್ಯಕ್ಷ ನದಿ ನೀರಿನಲ್ಲಿ ಈಜುವುದಿಲ್ಲ, ನಡೆಯುತ್ತಾನೆ ಅಂದ್ರೆ ಸಣ್ಣ ಮಾತೇ? ಸ್ವಾಭಾವಿಕವಾಗಿ ಇದು ದೊಡ್ಡ ಸುದ್ದಿ. ಅಂತಾರಾಷ್ಟ್ರೀಯ ಸುದ್ದಿ. ಎಂಟು ಕಾಲಂ ಲೀಡ್‌ ಸುದ್ದಿ. ಜಾನ್ಸನ್‌ ಕೂಡ ಹಾಗೇ ಭಾವಿಸಿದ. ಯಾವುದೇ ಪತ್ರಕರ್ತ, ಪತ್ರಿಕೆಗಾದರೂ ಇದು ಅದ್ಭುತ ಸುದ್ದಿಯೇ. ಮರುದಿನ ಈ ಸುದ್ದಿಯನ್ನು ಪತ್ರಕರ್ತರು ಹೇಗೆ ಬರೆಯಬಹುದು, ಪತ್ರಿಕೆಗಳು ಹೇಗೆ ಪ್ರಕಟಿಸಬಹುದು ಎಂಬ ಬಗ್ಗೆ ಅಧ್ಯಕ್ಷ ಜಾನ್ಸನ್‌ಗೆ ತೀವ್ರ ಕುತೂಹಲವಿತ್ತು.

ಬೆಳಗು ಸರಿಯಿತು. ಎಲ್ಲ ಪತ್ರಿಕೆಗಳು ಈ ಸುದ್ದಿಯನ್ನು ಮುಖಪುಟದಲ್ಲಿ ಪ್ರಧಾನವಾಗಿ ಪ್ರಕಟಿಸಿದ್ದವು. ಆದರೆ ಒಂದು ಪತ್ರಿಕೆಯಲ್ಲಿನ ಹೆಟ್‌ಲೈನ್‌ ಕಂಡು ಜಾನ್ಸನ್‌ಗೆ ಆಶ್ಯರ್ಯವಾಯಿತು. ಪತ್ರಿಕೆ President does not know how to swim ಎಂದು ಬರೆದಿತ್ತು. ಅಮೆರಿಕ ಅಧ್ಯಕ್ಷ ನೀರಿನ ಮೇಲೆ ನಡೆಯುತ್ತೇನೆ ಎಂದು ಹೇಳಿದ್ದಾನೆ ಅಂದರೆ ಆತನಿಗೆ ಈಜಲು ಬರಲಿಕ್ಕಿಲ್ಲ ಎಂದು ಆ ಪತ್ರಿಕೆ ಭಾವಿಸಿ ಅದನ್ನೇ ದೊಡ್ಡ ಸುದ್ದಿಯಾಗಿ ಮಾಡಿತ್ತು. ಇದು ನೈಜ ಘಟನೆಯೋ, ಅಲ್ಲವೋ, ಆದರೆ ಇಂಥ ಒಂದು ಪ್ರಸಂಗ ಸುದ್ದಿಮನೆ ಹಾಗೂ ಪತ್ರಿಕೋದ್ಯಮ ಕ್ಲಾಸ್‌ಗಳಲ್ಲಿ ಚಾಲ್ತಿಯಲ್ಲಿದೆ. ಪತ್ರಕರ್ತರು ಸದಾ ನೆಗೆಟಿವ್‌ ಸಂಗತಿಗಳಲ್ಲಿ ಅಸ್ಥೆ ವಹಿಸುತ್ತಾರೆಂಬುದಕ್ಕೆ ಇದೊಂದು ನಿದರ್ಶನ.

ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿ ಕೊಡುವುದರ ಬದಲು ಸಕಾರಾತ್ಮಕ ಸುದ್ದಿಯನ್ನೇಕೆ ಕೊಡಬಾರದು ಎಂಬ ವಾದ ಇತ್ತೀಚಿನ ದಿನಗಳಲ್ಲಿ ಗಟ್ಟಿಯಾಗುತ್ತಿದೆ. ವಿಮಾನ ಅಪಘಾತ : 25 ಮಂದಿ ಸಾವು ಎಂದು ಬರೆಯುವ ಬದಲು, ವಿಮಾನ ಅಪಘಾತ : 110ಮಂದಿ ಬಚಾವು ಎಂದು ಯಾಕೆ ಬರೆಯಬಾರದು ಎಂಬುದು ವಾದ.

ಈ ನಿಟ್ಟಿನಲ್ಲಿ ಪೊಸಿಟಿವ್‌ ನ್ಯೂಸ್‌ನೆಟ್‌ವರ್ಕ್‌(ಪಿಎನ್‌ಎನ್‌) ಎಂಬ ಸಂಸ್ಥೆ ಸಹ ಹುಟ್ಟಿಕೊಂಡಿದೆ. ಕ್ಯಾಲಿಫೋರ್ನಿಯಾದ ಡೇವ್‌ ಬಾಫಾರ್ಡ್‌ ಎಂಬಾತ ಹುಟ್ಟುಹಾಕಿದ ಈ ಸುದ್ದಿಸಂಸ್ಥೆ 150ದೇಶಗಳಲ್ಲಿ ಒಂದೂವರೆ ಕೋಟಿ ‘ಸಕಾರಾತ್ಮಕ ಯೋಚನೆ’ಗಳನ್ನು ಓದುಗರ ಮನದಲ್ಲಿ ಹಂಚಿಕೊಂಡಿದೆಯಂತೆ. ಅಲ್ಲದೇ ಅಸಂಖ್ಯ ಸುದ್ದಿ, ಮೂಲಗಳನ್ನು ಬಿತ್ತರಿಸಿದೆಯಂತೆ.

ನಿರುದ್ಯೋಗ ಭತ್ಯೆಗೆ ಶೇ.4.7ರಷ್ಟು ಅಮೆರಿಕನ್ನರು ಅರ್ಜಿ ಹಾಕಿದ್ದಾರೆಂದು ಸಿಎನ್‌ಎನ್‌ ವರದಿ ಮಾಡಿದರೆ, ಶೇ95.3ರಷ್ಟು ಅಮೆರಿಕನ್ನರು ಉದ್ಯೋಗದಲ್ಲಿದ್ದಾರೆಂದು ಪಿಎನ್‌ಎನ್‌ ವರದಿ ಮಾಡುತ್ತದೆ. ಪಿಎನ್‌ಎನ್‌ ವರದಿಯ ಕೆಲವು ಸ್ಯಾಂಪಲ್‌ಗಳು -ಜೈವಿಕ ಇಂಧನ ಉತ್ಪಾದನೆ ಹೆಚ್ಚಳ, ಜಪಾನ್‌ನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ, ಭಾರತ-ಪಾಕ್‌ ಮಧ್ಯೆ ಶಾಂತಿ ಮಾತುಕತೆ, ಹೆಚ್ಚುತ್ತಿರುವ ಪೆಟ್ರೋಲ್‌ ಸಂಗ್ರಹ, ನೂರು ಮರ ನೆಟ್ಟವನಿಗೆ ಪರಿಸರಪ್ರೇಮಿ ಪ್ರಶಸ್ತಿ, ಜಾರ್ಖಂಡ್‌ನಲ್ಲಿ ಐದು ಶಾಲೆಗಳ ಆರಂಭ, ಬ್ಲಡ್‌ಪ್ರೆಶರ್‌ ಪೀಡಿತರ ಸಂಖ್ಯೆ ಕುಸಿತ, ಆತ್ಮಹತ್ಯೆ, ಅತ್ಯಾಚಾರದಲ್ಲಿ ಗಣನೀಯ ಕುಸಿತ.. ಇತ್ಯಾದಿ.

ಪ್ರತಿದಿನ ನಾವು ಓದುವ ದಿನಪತ್ರಿಕೆಯ ಮುಖಪುಟದಲ್ಲಿ ಈ ಸುದ್ದಿಯೇ ಲೀಡ್‌(ಮುಖ್ಯ ಸುದ್ದಿ) ಆಗಿ ಪ್ರಕಟಗೊಂಡರೆ ಹೇಗಿರುತ್ತದೆ? ತಮಗೆ ಅಂಟಿದ ಆರೋಪದಿಂದ ಮುಕ್ತರಾಗಬೇಕೆಂದು ಪತ್ರಕರ್ತರೇನಾದರೂ ಪಿಎನ್‌ಎನ್‌ ಮಾದರಿಯನ್ನು ಅನುಸರಿಸಿದರೆ ಹೇಗಿರುತ್ತದೆ?

ಪತ್ರಿಕೆಗಳಲ್ಲಿ ನಕಾರಾತ್ಮಕ ಸುದ್ದಿಯೇ ಹೆಚ್ಚಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮಾಜದಲ್ಲಿನ ಉತ್ತಮ ಸಂಗತಿಗಳಿಗೆ ಸಿಗಬೇಕಾದ ಮಹತ್ವ ಸಿಗುತ್ತಿಲ್ಲವೆಂಬುದೂ ಸುಳ್ಳಲ್ಲ. ಸಮಾಜದ ಅಂಕು-ಡೊಂಕು, ಓರೆ-ಕೋರೆಗಳ ಪ್ರತಿಫಲನವೇ ಪತ್ರಿಕೆ ಎಂಬುದನ್ನು ಮರೆಯಬಾರದು. ಒಂದು ಊರು ಹೇಗಿದೆಯೆಂಬುದನ್ನು ಅಲ್ಲಿನ ನೀರು ಹಾಗೂ ಪತ್ರಿಕೆ ನೋಡಿದರೆ ಗೊತ್ತಾಗುತ್ತದೆ.

ನಾನು ಐಸ್‌ಲ್ಯಾಂಡ್‌ ಎಂಬ ದೇಶಕ್ಕೆ ಹೋದಾಗ, ನಾಲ್ಕು ದಿನಗಳಿದ್ದರೂ ಅಲ್ಲಿನ ಪತ್ರಿಕೆಗಳಲ್ಲಿ ಒಂದೇ ಒಂದು ಪಿಕ್‌ಪಾಕೆಟ್‌, ಕೊಲೆ-ದರೋಡೆ, ಅಪಘಾತಗಳ ಸುದ್ದಿ ಪ್ರಕಟವಾಗಿರಲಿಲ್ಲ. ತುಸು ವಿಚಾರಿಸಿದಾಗ ತಿಳಿಯಿತು, ಅಲ್ಲಿನ ಪತ್ರಿಕೆಗಳಲ್ಲಿ ಕ್ರೆೃಮ್‌ ರಿಪೋರ್ಟರ್‌ ಇಲ್ಲ ಹಾಗೂ ಪತ್ರಿಕೆಗಳಲ್ಲಿ ಕ್ರೆೃಮ್‌ ಪೇಜ್‌ ಸಹ ಇಲ್ಲ ಎಂದು. ಇನ್ನೂ ವಿಚಾರಿಸಿದಾಗ ಗೊತ್ತಾಗಿದ್ದೇನೆಂದರೆ ಅನೇಕ ವರ್ಷಗಳಿಂದ ಅಲ್ಲಿ ಮರ್ಡರ್‌ ಆಗಿಯೇ ಇಲ್ಲ ಎಂದು. ಹೀಗಿರುವಾಗ ಅಂಥ ಸುದ್ದಿ ಪ್ರಕಟಿಸುವ ಪ್ರಮೇಯವಾದರೂ ಹೇಗೆ ಬಂದೀತು?

ಅಮೆರಿಕ, ಇಂಗ್ಲೆಂಡ್‌, ಸ್ವಿಜರ್‌ ಲ್ಯಾಂಡ್‌, ದುಬೈನಂಥ ದೇಶಗಳಲ್ಲಿ ಯಾರೂ ಚರಂಡಿಯಾಳಗೆ, ಮ್ಯಾನ್‌ ಹೋಲ್‌ನೊಳಗೆ ಬಿದ್ದು ಸಾಯುವುದಿಲ್ಲ. ಪಾದಚಾರಿಗಳ ಮೇಲೆ ವಾಹನ ಹರಿಯುವುದಿಲ್ಲ. ಮರ ಮುರಿದು ಬಿದ್ದು, ವಿದ್ಯುತ್‌ ತಂತಿ ತಗುಲಿ ಸಾಯುವುದಿಲ್ಲ. ಮಂಗನ ಕಾಯಿಲೆ, ಡೆಂಗೆ, ಕಾಲರಾ, ಚಿಕೂನ್‌ ಗುನ್ಯಾ ಆ ರಾಷ್ಟ್ರಗಳಲ್ಲಿ ಇಲ್ಲದಿರುವುದರಿಂದ ಯಾರು ಸಾಯುವುದಿಲ್ಲ.

ರಸ್ತೆಗಳೆಲ್ಲ ವಿಶಾಲವಾಗಿ, ವಾಹನ ಚಾಲಕರೆಲ್ಲ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದರಿಂದ ಅಲ್ಲಿ ರಸ್ತೆ ಅಪಘಾತಗಳು ಕಡಿಮೆ. ಹೀಗಾಗಿ ಅಲ್ಲಿನ ಪತ್ರಿಕೆಗಳಲ್ಲಿ ಈ ಸುದ್ದಿ ಕಾಣಸಿಗುವುದಿಲ್ಲ. ನಮ್ಮ ದೇಶದಲ್ಲಿ, ನಮ್ಮ ಊರಿನಲ್ಲಿ ಇವೆಲ್ಲ ಯಥೇಚ್ಛವಾಗಿರುವುದರಿಂದ, ಪತ್ರಿಕೆಗಳಲ್ಲಿ ಈ ಸುದ್ದಿ ಜಾಸ್ತಿಯಾಗಿಯೇ ಇರುತ್ತದೆ. ‘ಹೆಗ್ಗಡದೇವನಕೋಟೆಯಲ್ಲಿ ಹಸಿವಿನಿಂದ ಏಳು ಜನರ ಸಾವು’ ಎಂಬ ಸುದ್ದಿಯನ್ನು ಹಾಗೇ ಬರೆಯಬೇಕಾಗುತ್ತದೆಯೇ ಹೊರತು, ಏಳು ಮಂದಿ ಹೊರತಾಗಿ ಉಳಿದವರೆಲ್ಲ ತಿಂದುಂಡು ಸುಖವಾಗಿದ್ದಾರೆಂದು ಬರೆಯಲಾಗುವುದಿಲ್ಲ. ಅಂದರೆ ಪತ್ರಿಕೆಗಳು ಸಮಾಜದ ಕೈಗನ್ನಡಿ. ಸಮಾಜಕ್ಕೆ ಕನ್ನಡಿ ಹಿಡಿಯುವುದಷ್ಟೇ ಕೆಲಸ.

ಅನ್ಯಾಯ, ಅವ್ಯವಸ್ಥೆ, ಅನಾಚಾರಗಳು ಸಮಾಜದಲ್ಲಿ ತುಂಬಿದಾಗ ಅವುಗಳನ್ನು ಎತ್ತಿತೋರಿಸುವ ಕೆಲಸವನ್ನು ಪತ್ರಿಕೆಗಳು ಮಾಡಲೇಬೇಕಾಗುತ್ತದೆ. ಆಗ ನೆಗೆಟಿವ್‌ ಸುದ್ದಿ ವಿಜೃಂಭಿಸುತ್ತದೆ ಎಂದು ಕೆಲವೊಮ್ಮೆ ಅನಿಸಲೂ ಬಹುದು. ಅಭಿವೃದ್ಧಿ ಪತ್ರಿಕೋದ್ಯಮದ ಅಗತ್ಯ, ಮಹತ್ವ ಮನವರಿಕೆಯಾಗುವುದು ಇಲ್ಲಿಯೇ. ಅಭಿವೃದ್ಧಿ ಪತ್ರಿಕೋದ್ಯಮದ ಹರವು ವ್ಯಾಪಿಸಲಾರಂಭಿಸಿದರೆ ಸಹಜವಾಗಿ ನೆಗೆಟಿವ್‌ ಸಂಗತಿಗಳು ಕಡಿಮೆಯಾಗಲಾರಂಭಿಸುತ್ತವೆ. ಇವೆರಡರ ನಡುವೆ ಒಂದು ಹದ ಹಾಗೂ ಸಮತೋಲನವಿದ್ದರೆ ನಾವು ನಿತ್ಯ ಓದುವ ಪತ್ರಿಕೆ ಎಷ್ಟೊಂದು ಮಜಾವಾಗಿರಬಹುದು? ಈ ಕಲ್ಪನೆಯೇ ಇಷ್ಟು ಚೆಂದ. ಇನ್ನು ಸಾಕಾರಗೊಂಡರೆ ಎಷ್ಟು ಚೆಂದವಾಗಿರಬಹುದು?

ಅಂದ ಹಾಗೆ ‘ಕರ್ನಾಟಕ ಬಂದ್‌ : ಜನಜೀವನ ಅಸ್ತವ್ಯಸ್ತ’ ಶೀರ್ಷಿಕೆ ಬದಲು, ‘ರಾಜಕಾರಣಿಗಳ ಬಾಯಿ ಬಂದ್‌ : ರಾಜ್ಯ ವ್ಯವಸ್ಥ’ ಶೀರ್ಷಿಕೆ ಕೊಟ್ಟರೆ ಹೇಗೆ?


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X