• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದೊಂದು ಬಾಕಿ ಇತ್ತೆಂದು ಅಂದುಕೊಂಡಿದ್ದರೆ...

By Staff
|
Vishweshwar Bhat ವಿಶ್ವೇಶ್ವರ ಭಟ್‌
ಓಶೋ ಬರೆಯದ ಪುಸ್ತಕಗಳಿಲ್ಲ. ಪ್ರಸ್ತಾಪಿಸದ ವಿಷಯಗಳಿರಲಿಕ್ಕಿಲ್ಲ. ಎಲ್ಲ ವಿಷಯಗಳ ಬಗ್ಗೆ ಓಶೋ ಹೇಳಿದ್ದಾರೆ. ಸುಮಾರು 650 ಪುಸ್ತಕಗಳನ್ನು ಬರೆದಿದ್ದಾರೆ. ನಿಶ್ಚಿತವಾಗಿಯೂ ಯಾವ ಲೇಖಕನೂ ಈಪರಿ ದಂಡಿಯಾಗಿ ಪುಸ್ತಕ ಬರೆದಿಲ್ಲ. ಇದೊಂದು ದಾಖಲೆ, ಅಷ್ಟೇ ಅಲ್ಲ ಯಾರೂ ಮುರಿಯದ ದಾಖಲೆ. ಆ ಬ್ರಹ್ಮನಿಂದಲೂ ಮುರಿಯಲಾಗಲಿಕ್ಕಿಲ್ಲ. ಇದು ಸಾಧ್ಯವಾಗಿದ್ದರೆ ಆತ ಎಂದೋ ಮುರಿದಿರುತ್ತಿದ್ದ. ಕಲೆ, ಕಸೂತಿ, ಕಾಮಸೂತ್ರ, ಕವನ ಹೀಗೆ ಎಲ್ಲ ಸಂಗತಿಗಳನ್ನು ಓಶೋ ಅತ್ಯಂತ ವಿಶಿಷ್ಟವಾಗಿ ಬಣ್ಣಿಸಿದ್ದಾರೆ.

ಅದೃಷ್ಟಕ್ಕೆ ಪತ್ರಿಕೋದ್ಯಮವನ್ನು ಓಶೋ ಬಿಟ್ಟಿರಬಹುದೆಂದು ಭಾವಿಸಿದ್ದೆ. ಓಶೋ ಇಂಟರ್‌ ನ್ಯಾಷನಲ್‌ ಟೈಮ್ಸ್‌ ಪತ್ರಿಕೆ ಸಂಪಾದಕಿ ಹಾಗೂ ಆತ್ಮೀಯ ಗೆಳತಿ ಅಮೃತ್‌ ಸಾಧನಾರನ್ನು ಭೇಟಿಯಾಗುವವರೆಗೆ ನನ್ನ ಭಾವನೆ ಸುಳ್ಳಾಗಿರಲಿಲ್ಲ. ‘ನಿಮಗೊಂದು ಪುಟ್ಟ ಸೋಜಿಗದ ಕಾಣಿಕೆಯಿದು. ಏನಿರಬಹುದೆಂದು ಹೇಳಿ? ತೆರೆದು ನೋಡಿದರೆ ಖಂಡಿತವಾಗಿಯೂ ನಿಮಗೆ ಸಂತಸವಾಗುತ್ತದೆ’ ಎಂದು ಅಮೃತ್‌ ಸಾಧನಾ ಪುಟ್ಟ ಕವರ್‌ಕೊಟ್ಟರು. ಬೆಚ್ಚಗೆ ಕುಳಿತಿತ್ತು. Osho on Journalism ಎಂಬ ಮೂವತ್ತೆರಡು ಪುಟಗಳ ಪುಟ್ಟ ಪುಸ್ತಕ! ಓಶೋ ಪತ್ರಿಕೋದ್ಯಮವನ್ನೂ ಬಿಟ್ಟಿರಲಿಲ್ಲ.

Oshoನಾನೀಗ ರಾಷ್ಟ್ರಪತಿ ಡಾ.ಕಲಾಂ ಜತೆ ರಷ್ಯಾ ಪ್ರವಾಸದಲ್ಲಿದ್ದೇನೆ. ಏನಿಲ್ಲವೆಂದರೂ ದಿನದಲ್ಲಿ 15ಗಂಟೆಗಳು ಬಿಡುವಿಲ್ಲದ ಕಾರ್ಯಕ್ರಮಗಳಿಗೇ ಮೀಸಲು. ನಂತರ ವರದಿ. ವಾರದ ಲೇಖನ ಬರೆಯುವುದಕ್ಕೂ ಕಾಲಾವಕಾಶ ಕೊರತೆ. ಆಗ ನೆನಪಾಗಿದ್ದೇ, ನಾನು ಇತ್ತೀಚೆಗೆ ಬರೆದ ‘ಪತ್ರಿಕೋದ್ಯಮದ ಕುರಿತು ಒಶೋ’ ಪುಸ್ತಕ. ಪತ್ರಿಕೋದ್ಯಮದ ನೆಲೆ, ನಿಯತ್ತು, ನಿಲುವು, ಪತ್ರಕರ್ತನ ಸಂಕಟ, ಅಸಹಾಯಕತೆ, ವೃತ್ತಿಯ ರೋಚಕ, ಧರ್ಮ, ಆಚರಣೆಯಲ್ಲಿನ ದೋಷ, ಹೆಜ್ಜೆ ತಪ್ಪಿದ ನಡಿಗೆ, ಪತ್ರಿಕೋದ್ಯಮದ ಒಳನೋಟ, ಸೂಕ್ಷ್ಮತೆ ಮುಂತಾದ ಅಂಶಗಳ ಬಗ್ಗೆ ಓಶೋ ವಿವರಿಸುವ ರೀತಿ ನಿಜಕ್ಕೂ ಅನನ್ಯ.

ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸುತ್ತಿದೆ. ನಿಮಗೂ ಇಷ್ಟವಾಗಬಹುದು.

ಪತ್ರಿಕೋದ್ಯಮ ಒಂದು ಪವಿತ್ರ ಕ್ಷೇತ್ರ. ಅಷ್ಟೇ ಅಲ್ಲ ಇದೊಂದು ಅತ್ಯಂತ ಜವಾಬ್ದಾರಿಯುತ ವೃತ್ತಿ. ಹಾಗೆ ಹೇಳುವುದಾದರೆ ಇದೊಂದು ವೃತ್ತಿಯೇ ಅಲ್ಲ. ಇದೊಂದು ಕಾಯಕ. ಇಲ್ಲಿ ವ್ಯಕ್ತಿ ಹಿತಕ್ಕಿಂತ ಲೋಕ ಹಿತವೇ ಮುಖ್ಯ. ಪತ್ರಿಕೆ ಅಗೋಚರವಾದ ಸಂಸ್ಥೆ. ಅದರ ಪ್ರಭಾವವನ್ನು ಅಳೆಯುವುದು ಕಷ್ಟ. ಈ ಜಗತ್ತು ಪ್ರಜ್ಞಾವಂತಿಕೆಯಿಂದ ವಿವೇಕಯುತವಾಗಿ ವರ್ತಿಸಬೇಕೆಂದು ಅಪೇಕ್ಷಿಸಿದರೆ ಪತ್ರಿಕೆಗಳೂ ಹಾಗೆಯೇ ವರ್ತಿಸಬೇಕು. ಪತ್ರಿಕೆಗಳು ಸ್ವಲ್ಪ ಹೆಜ್ಜೆ ತಪ್ಪಿದರೂ ಅಪಾಯ ನಿಶ್ಚಿತ. ಆದ್ದರಿಂದ ಪತ್ರಿಕೆಗಳಿಗೆ ಒಂದು ಜವಾಬ್ದಾರಿಯುತ ಸರ್ಕಾರಕ್ಕಿರುವುಷ್ಟೇ ಹೊಣೆಗಾರಿಕೆಯಿದೆ.

ಪತ್ರಕರ್ತರ ಬಗ್ಗೆ ನನಗೆ ಯಾಕೋ ಅಂಥ ಒಳ್ಳೆಯ ಅಭಿಪ್ರಾಯವೇನಿಲ್ಲ. ಅವರೆಂಥ ಜನರೆಂದರೆ ಅವರು ರಾಜಕೀಯದಲ್ಲಿ ಯಶಸ್ಸನ್ನು ಕಾಣದವರು. ಅಷ್ಟೇ ಅಲ್ಲ ಈಗ ರಸ್ತೆಯ ಪಕ್ಕದಲ್ಲಿ ನಿಂತು ಎಲ್ಲರಿಗೂ ಕಲ್ಲನ್ನೆಸೆಯುವವರು. ಇಲ್ಲಿ ಅದು ಮುಖ್ಯ ಅಲ್ಲ. ಪತ್ರಕರ್ತರು ನನ್ನ ವಿರುದ್ಧ ಏನು ಬೇಕಾದರೂ ಬರೆಯಲು ಅನುಮತಿ ಕೊಟ್ಟಿದ್ದೆ. ಅವರು ಬಿಡಲಿಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು. ನಾನು ಸ್ವಲ್ಪ ವೂ ಸೊಪ್ಪು ಹಾಕಲಿಲ್ಲ. ಅವರಿಗೆ ನನ್ನನ್ನು ಏನೂ ಮಾಡಿಕೊಳ್ಳಲು ಆಗಲಿಲ್ಲ.

ಪತ್ರಕರ್ತರು ಅಷ್ಟೇನೂ ಶ್ರೀಮಂತರಿರುವುದಿಲ್ಲ. ತಮ್ಮದೇ ಪರಿಧಿಯಲ್ಲಿ ಜೀವಿಸುವವರು. ವ್ಯಕ್ತಿಯ ಸಾಧಾರಣ ಆಕಾಂಕ್ಷೆ ಹಾಗೂ ಸಾಮಾನ್ಯ ಕುತೂಹಲಗಳನ್ನೇ ಶೋಷಿಸುವುದರಲ್ಲಿ ಖುಷಿಪಡುವವರು. ಎಲ್ಲ ಪತ್ರಕರ್ತರೂ ಹೀಗೇ ಅಂದರೆ ಅವರಿಗೆ ಮಾತ್ರ ಅಲ್ಲ ಇಡೀ ವೃತ್ತಿಗೆ ಅಪಚಾರ ಮಾಡಿದಂತಾದೀತು. ಕೆಲವರು ಮಾತ್ರ ಹೀಗೇ. ಪತ್ರಕರ್ತರು ಜನರು ಭಾವಿಸುವಂತೆ ಅಪಾಯಕಾರಿ ವ್ಯಕ್ತಿಗಳಲ್ಲ. ಹೆಚ್ಚೆಂದರೆ ಅವರು ಮೋಜು ಮಾಡಬಹುದು. ಪತ್ರಕರ್ತರು ಅತ್ಯಾಚಾರ ಮಾಡಲಾರರು. ಅದೇ ಅತ್ಯಾಚಾರ ಸುದ್ದಿಯಲ್ಲಿ ಅತೀವ ಕುತೂಹಲ ತಾಳಬಲ್ಲರು. ಅತ್ಯಾಚಾರ ವರದಿ ಬರೆದು ಹಾಗೂ ಓದಿ ಖುಷಿಪಡಬಲ್ಲರು. ಪತ್ರಕರ್ತರಿಗೆ ಹತ್ಯೆ ಮಾಡಬೇಕೆನಿಸಿದರೂ ಹಾಗೆ ಮಾಡಲಾರರು. ಆದರೆ ಹತ್ಯೆ ಘಟನೆಯನ್ನು ನೋಡಿ ಆನಂದಿಸಬಲ್ಲರು. ಅದನ್ನೇ ರಸವತ್ತಾಗಿ ಸುದ್ದಿ ಮಾಡಬಲ್ಲರು.

ಆತ್ಮಹತ್ಯೆ ಮಾಡಿಕೊಳ್ಳಲು ಹೆಚ್ಚಿನ ಧೈರ್ಯಬೇಕಿಲ್ಲ ಸ್ವಲ್ಪ ಧೈರ್ಯವಿದ್ದರೆ ಸಾಕು. ಆದರೆ ಬದುಕಲು ಭಾರಿ ಧೈರ್ಯಬೇಕು. ಗಮನಿಸಿ, ಪತ್ರಕರ್ತರು ಬದುಕಿದ್ದವರ ಬಗ್ಗೆ ಬರೆಯುವುದಿಲ್ಲ. ಧೈರ್ಯಶಾಲಿಗಳ ಬಗ್ಗೆ ಬರೆಯುವುದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಬರೆಯುತ್ತಾರೆ. ಪುಕ್ಕಲ ಮಂದಿ ಬಗ್ಗೆ ಬರೆಯುತ್ತಾರೆ.

ಇದನ್ನೇ ಪತ್ರಕರ್ತರು ದೊಡ್ಡದಾಗಿ ಬರೆದರೆ ಓದುಗರು ಓದುತ್ತಾರೆ. ಓದುಗರು ಇದನ್ನೇ ಇಷ್ಟಪಡುತ್ತಾರೆಂದು ಪತ್ರಕರ್ತರು ಭಾವಿಸುತ್ತಾರೆ. ಪತ್ರಕರ್ತರು ಬರೆದಿದ್ದೇ ಸುದ್ದಿ ಎಂದು ಓದುಗರು ತಿಳಿಯುತ್ತಾರೆ. ನಿಮಗೇನು ಬೇಕೆಂದು ಪತ್ರಕರ್ತರು ಓದುಗರನ್ನು ಕೇಳುವುದಿಲ್ಲ. ನಮಗೆ ಇಂಥದ್ದೇಬೇಕೆಂದು ಓದುಗರು ಕೇಳುವುದಿಲ್ಲ. ಪತ್ರಿಕೋದ್ಯಮ ಹೀಗೆ ಸಾಗಿದೆ. ಅಂದರೆ ನಮಗೆ ಇಷ್ಟವಿಲ್ಲದ್ದನ್ನು ಬರೆಯುತ್ತಾ, ಇಷ್ಟವಿಲ್ಲದ್ದನ್ನು ಓದುತ್ತಾ ಆದರೆ ಇದೇ ನಿಜವೆಂದು ಭಾವಿಸುತ್ತಾ ನಾವು ಸಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಯೋಚಿಸಿದರೆ, ಎಲ್ಲ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಗಳಂತೆ ಪತ್ರಿಕೋದ್ಯಮದಲ್ಲೂ ಗಣನೀಯ ಬದಲಾವಣೆ ಆಗಬೇಕೆಂದು ಅನಿಸುತ್ತದೆ.

ಪತ್ರಕರ್ತರಿಗೂ ಸೆನ್‌ಸೇಶನ್‌ಗೂ ಅನ್ಯೋನ್ಯ ಸಂಬಂಧ. ಸುದ್ದಿಯನ್ನು ಯಥಾವತ್ತು ಬರೆದರೆ ಸಮಾಧಾನವಾಗುವುದಿಲ್ಲ. ಅತಿರಂಜಕ ಸುದ್ದಿ ಮಾತ್ರ ಬೇಗನೆ ಮಾರಾಟವಾಗುತ್ತದೆಂದು ಪತ್ರಕರ್ತರು ಭಾವಿಸಿದ್ದಾರೆ. ಹೀಗಾಗಿ ಅವರು‘ಕಾರ್ಯಕ್ರಮದಲ್ಲಿ ಸುಮಾರು ಸಾವಿರ ಜನ ಸೇರಿದ್ದರು’ ಎಂದು ಬರೆಯುವುದಿಲ್ಲ. ‘ಕಾರ್ಯಕ್ರಮದಲ್ಲಿ ಭಾರಿ ಜನಜಂಗುಳಿ ಸೇರಿತ್ತು’ ಎಂದು ಬರೆಯುತ್ತಾರೆ.

ಇಲ್ಲಿನ ಸೂಕ್ಷ್ಮ ಗಮನಿಸಿ. ಎಷ್ಟು ಜನ ಸೇರಿದ್ದಾರೆ ಎಂದು ತಿಳಿಯಲು ಪತ್ರಕರ್ತನಿಗೆ ವ್ಯವಧಾನವಿಲ್ಲ. ಸಂಘಟಕರನ್ನು ಸಂಪರ್ಕಿಸಿ ಓದುಗರಿಗೆ ಸರಿಯಾದ ಮಾಹಿತಿ ತಿಳಿಸಬೇಕೆನ್ನುವ ಉತ್ಸಾಹವಿಲ್ಲ. ಅದರ ಜತೆಗೆ ಸುದ್ದಿಯನ್ನು ಅತಿರಂಜಕವಾಗಿ ಹೇಳುವ ಕಾತುರ. ಹೀಗಾಗಿ ‘ಭಾರಿ ಜನಜಂಗುಳಿ ಸೇರಿತ್ತು’ ಎಂದು ಬರೆಯುತ್ತಾರೆ. ಓದುಗರಿಗೆ ಎರಡು ರೀತಿಯಲ್ಲಿ ಅನ್ಯಾಯ ಆದಂತಾಯಿತು. ಇದೊಂದು ಸಣ್ಣ ನಿದರ್ಶನವಾದರೂ ಇದರಲ್ಲಿನ ಮಹತ್ವ ಗೊತ್ತಾದೀತು.

ಪತ್ರಕರ್ತರು ಕೆಲವು ಸಲ ಓದುಗರ ಭಾವನೆಗಳನ್ನು ಶೋಷಿಸಲು ಪ್ರಯತ್ನಿಸುತ್ತಾರೆ. ಇದು ಸುಲಭ ಕೂಡ. ಓದುಗರ ದೌರ್ಬಲ್ಯವೇನು, ಅವರ ಭಾವನೆ ಯಾವುದಕ್ಕೆ ಕರಗುತ್ತದೆಂಬುದನ್ನು ಪತ್ರಕರ್ತರಿಗಿಂತ ಚೆನ್ನಾಗಿ ಬೇರೆ ಯಾರೂ ಹೇಳಲಾರರು.

ಪತ್ರಿಕೋದ್ಯಮ ಅಪೇಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ಅದಿನ್ನೂ ಪ್ರವರ್ಧಮಾನಕ್ಕೆ ಬಂದಿಲ್ಲ. ಇನ್ನೂ ಪ್ರಬುದ್ಧವಾಗಿಲ್ಲ. ಅತ್ಯಾಚಾರವಾದರೆ ಅದು ಸುದ್ದಿ. ಕೊಲೆಯಾದರೆ ಅದು ಸುದ್ದಿ. ದರೋಡೆಯಾದರೆ ಸುದ್ದಿ. ಯಾವುದು ಅಸಹ್ಯ, ಅತಿರೇಕ, ಅನೈತಿಕವೋ ಅದು ಸುದ್ದಿ. ಕುರೂಪವಾಗಿರುವುದೆಲ್ಲ ಸುದ್ದಿ. ಸೌಂದರ್ಯ, ಸೊಗಸು, ಸೊಬಗು ಸುದ್ದಿ ಅಲ್ಲವೇ ಅಲ್ಲ. ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿ ಅಲ್ಲ. ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ. ಯಾವುದು ಸುದ್ದಿ, ಯಾವುದು ಸುದ್ದಿ ಅಲ್ಲ ಎಂಬುದನ್ನು ನಿರ್ಧರಿಸುವ ರೀತಿ ಇದು.

ನಾಯಿ ಮನುಷ್ಯನಿಗೆ ಕಚ್ಚಿದೆಯೋ, ಮನುಷ್ಯ ನಾಯಿಗೆ ಕಚ್ಚಿದ್ದಾನೋ ಎಂಬುದನ್ನು ಖಚಿತಪಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಈ ಘಟನೆಯ ಪೂರ್ಣ ವಿವರ ಬೇಕಿಲ್ಲ. ಈ ಕುರಿತು ಸಿಗುವ ಸಣ್ಣ ವಿವರವೂ ದೊಡ್ಡ ಸುದ್ದಿಯಾಗಬಲ್ಲುದು. ಕೊನೆಗೆ ವಿವರವೇ ಸಿಗಬೇಕೆಂದಿಲ್ಲ. ಅವರಿವರು ಹೇಳಿದ ಮಾಹಿತಿ ಸಿಕ್ಕರೂ ಸಾಕು. ವದಂತಿಯಾದರೂ ಆದೀತು. ಸುದ್ದಿ ವಿಷಯದಲ್ಲಿ ಈ ರೀತಿ ಅಪ್ರಾಮಾಣಿಕರಾದರೆ ಪತ್ರಕರ್ತರಿಗೂ ರಾಜಕಾರಣಿಗಳಿಗೂ ಏನು ವ್ಯತ್ಯಾಸ ? ಇವೇ ಸುದ್ದಿ ಬಿಂಬಗಳೆಂದು ಪತ್ರಕರ್ತರು ಭಾವಿಸಿದರೆ ಎಂಥ ದುರಂತವಾಗಬಹುದೆಂದು ಊಹಿಸಿ.

ಕೆಲವೊಮ್ಮೆ ಪತ್ರಕರ್ತರಿಗೆ ಸುದ್ದಿ ಮಾತ್ರ ಮುಖ್ಯವೇ ಹೊರತು ಸತ್ಯವಲ್ಲ. ಇಲ್ಲೊಂದು ಸೂಕ್ಷ್ಮವಿದೆ. ಸುದ್ದಿಯಲ್ಲಿ ಸತ್ಯವಿರಲೇಬೇಕು. ಸುದ್ದಿ ಹಾಗೂ ಸತ್ಯ ಎರಡೂ ಬೇರ್ಪಡಿಸಲಾಗದಂಥವು. ಒಮ್ಮೆ ಗಾಳಿ ಮಾತು ಆದೀತು. ಊಹಾಪೋಹವಾದೀತು. ಕಟ್ಟು ಕತೆಯಾದೀತು. ಯಾರದೋ(ಅ) ಸುಂದರ ಕಲ್ಪನೆಯಾದೀತು.

ಸುದ್ದಿಯೆಂದರೆ ಅದರಲ್ಲಿ ಸತ್ಯವಿರಲೇಬೇಕು. ಸತ್ಯಾಸತ್ಯತೆಯನ್ನು ಖಚಿತಪಡಸಿಕೊಂಡೇ ಸುದ್ದಿ ಬರೆಯಬೇಕು. ಆದರೆ ಸುದ್ದಿಯನ್ನು ಅತಿರಂಜಿಸುವ, ರೋಚಕಗೊಳಿಸುವುದರಲ್ಲಿಯೇ ಆಸಕ್ತರಾಗುವ ಪತ್ರಕರ್ತರಿಗೆ ಸತ್ಯವನ್ನು ಅರಸುವ ಮನಸ್ಥಿತಿ, ತಾಳ್ಮೆ, ಸಂಯಮ ಇರುವುದಿಲ್ಲ. ಇದರಿಂದ ಯಾವ ವ್ಯಕ್ತಿಯನ್ನು, ಘಟನೆಯನ್ನು ಉದ್ದೇಶಿಸಿ ಬರೆಯಲಾಗಿದೆಯೋ ಆತನಿಗೆ ಹಾಗೂ ಘಟನೆಗೆ ಅನ್ಯಾಯವಾದಂತಾಯಿತು. ಹಾಗೇ ಓದುಗರಿಗೂ.

ಸತ್ಯಾಂಶದ ಬಗ್ಗೆ ಹುಡುಕುತ್ತಾ ಕುಳಿತರೆ, ಸಿಕ್ಕ ಮಾಹಿತಿ ಸತ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಕುಳಿತುಕೊಂಡರೆ ಕೈಯಲ್ಲಿರುವ ಸುದ್ದಿ ಹಳತಾಗಬಹುದು, ಬೇರೆ ಪತ್ರಕರ್ತ ಬರೆದು ಬಿಡಬಹುದೆಂಬ ಆತಂಕ ಅವರಲ್ಲಿದೆ. Old news is no news ಎಂಬುದು ಪತ್ರಿಕೋದ್ಯಮದ ಓನಾಮ. ಈ ಓನಾಮದಲ್ಲಿಯೇ ಎಂಥ ದುರಂತ ಅಡಗಿದೆ ನೋಡಿ. ಅಂದರೆ ಸುದ್ದಿ ಸಿಕ್ಕ ತಕ್ಷಣ ಬರೆದು ಪ್ರಿಂಟು ಮಾಡಬೇಕು. ಇಲ್ಲದಿದ್ದರೆ ಅದು ಸುದ್ದಿ ಅಲ್ಲ. ಅಥವಾ ಹಳಸಲು, ತಂಗಳು ಸುದ್ದಿ. ಅಂದರೆ ತಂಗಳು ಸುದ್ದಿ ಸುದ್ದಿಯೇ ಅಲ್ಲ.

ನಿಜವೋ, ಸುಳ್ಳೋ ಎಂದು ವಿಮರ್ಶಿಸಲು ಪತ್ರಕರ್ತರು ಪ್ರಯತ್ನಿಸದಿರುವುದು ಈ ಕಾರಣಕ್ಕೆ. ತನಗಿಂತ ಬೇಗ ಆತ ಬರೆಯಬಹುದೆಂದು ಈತ, ಈತ ಬರೆಯಬಹುದೆಂದು ಆತ ಹಠಕ್ಕೆ ಬಿದ್ದವರಂತೆ ಬರೆಯುತ್ತಾರೆ. ಈ ರೀತಿ ಹಠಕ್ಕೆ ಬಿದ್ದರೆ ಆತ ಹಾಗೂ ಈತ ಸುಳ್ಳು, ಅಸತ್ಯವನ್ನು ಬರೆಯಬಹುದೇ ಹೊರತು ಸತ್ಯವನ್ನಲ್ಲ.

ಪತ್ರಿಕೆಗಳಲ್ಲಿ ಬರುವ ಬಹುತೇಕ ಸುದ್ದಿ ಈ ‘ಹಠ’ಮಾರಿ ಅಥವಾ ಹಠ‘ಮಾರಿ’ ಧೋರಣೆಯಿಂದ ಹುಟ್ಟಿಕೊಳ್ಳುತ್ತವೆ. ಇವನ್ನೇ ಸತ್ಯ ಎಂದು ಓದುಗರು ಭಾವಿಸುತ್ತಾರೆ. ಅಂದರೆ ಪತ್ರಕರ್ತರ ಬರಹದಲ್ಲಿ ಸತ್ಯವಿರುವುದಿಲ್ಲ. ಓದುಗರ ಗ್ರಹಿಕೆಯಲ್ಲಿ ಮಾತ್ರ ಸತ್ಯವಿರುತ್ತದೆ.

ಅಂದರೆ ಪತ್ರಕರ್ತರು ಬರೆಯುವುದೆಲ್ಲ ಸತ್ಯ ಎಂಬ ನಿರ್ಣಯಕ್ಕೆ ಓದುಗ ಬಂದಿರುತ್ತಾನೆ. ಎಂಥ ಅಪಾಯವಲ್ಲವೇ? ತಡವಾಗಿಯಾದರೂ ಪರಾಗಿಲ್ಲ, ನಾಲ್ಕಾರು ಮಂದಿ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಎಲ್ಲ ದೃಷ್ಟಿಕೋನದಿಂದ ಪರಾಮರ್ಶಿಸಿ ಅನಂತರ ಬರೆಯುತ್ತೇನೆಂಬ ಧೋರಣೆ ಎಲ್ಲಿಯವರೆಗೆ ನಮ್ಮ ಪತ್ರಕರ್ತರು ಆಳದಲ್ಲಿ ಇಳಿಯವುದಿಲ್ಲವೋ ಅಲ್ಲಿಯವರೆಗೆ ನಾವು ಅರೆಬೆಂದ ಸುದ್ದಿಗಳನ್ನು, ಅರ್ಧಸತ್ಯಗಳನ್ನು ಓದುತ್ತೇವೆ.

ನಿಮಗೊಂದು ಸ್ವಾರಸ್ಯಕರ ದೃಷ್ಟಾಂತ ಹೇಳಬೇಕು.

ತತ್ವಜ್ಞಾನಿ(ಫಿಲಾಸಫರ್‌)ಯ ಕುರಿತು ಚಾಲ್ತಿಯಲ್ಲಿರುವ ತಮಾಷೆಯ ವ್ಯಾಖ್ಯಾನ ಗೊತ್ತಿರಬೇಕು - ಕಗ್ಗತ್ತಲು ಆವರಿಸಿರುವ ದೀಪವೇ ಇಲ್ಲದ ಮನೆಯಲ್ಲಿ ಇಲ್ಲದಿರುವ ಕಪ್ಪು ಬೆಕ್ಕನ್ನು ಹುಡುಕುವ ಕುರುಡನೇ ತತ್ವಜ್ಞಾನಿ!

ಇದು ತತ್ತ್ವಜ್ಞಾನಿಯ ಕುರಿತಾದ ವ್ಯಾಖ್ಯಾನ. ಇದಕ್ಕೆ ಒಂದಂಶ ಸೇರಿದರೆ ಅದು ಪತ್ರಕರ್ತನಿಗೆ ಸಂಬಂಧಿಸಿದ ವ್ಯಾಖ್ಯಾನವಾಗುತ್ತದೆ. ಏನದು? ಇಲ್ಲದಿರುವ ಕಪ್ಪು ಬೆಕ್ಕನ್ನು ಹುಡುಕುವವನೇ ಪತ್ರಕರ್ತ! ಹಾಗೂ ಅದೇ ಸುದ್ದಿ!!

ಪತ್ರಿಕೋದ್ಯಮದ ಕುರಿತಾಗಲಿ, ಪತ್ರಕರ್ತರ ಕುರಿತಾಗಲಿ ನನಗೆ ಯಾವ ನಂಜೂ ಇಲ್ಲ. ಈ ವೃತ್ತಿ ಹಾಗೂ ವೃತ್ತಿ ನಿರತರ ಬಗ್ಗೆ ಅತೀವ ಗೌರವವಿರುವುದರಿಂದಲೇ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪತ್ರಿಕೆ ಹಾಗೂ ಪತ್ರಕರ್ತರ ಮಹತ್ವ, ಅಗತ್ಯ ನನಗೆ ಗೊತ್ತು. ನಮಗಿಂದು ಬೇಕಿರುವುದು ಜವಾಬ್ದಾರಿಯುತ, ಆರೋಗ್ಯಕರ, ಸಂವೇದನಾಶೀಲ ಪತ್ರಿಕೋದ್ಯಮ. ನಮ್ಮ ಪತ್ರಿಕೆ ಸಮಾಜಮುಖಿಯಾಗಬೇಕು. ಜನಮುಖಿಯಾಗಬೇಕು. ಪ್ರಜಾಪ್ರಭುತ್ವದ ಯಶಸ್ಸು ಜವಾಬ್ದಾರಿಯುತ ಪತ್ರಿಕೋದ್ಯಮದಿಂದ ಮಾತ್ರ ಸಾಧ್ಯ.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more