• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಧಾನಿಯನ್ನು ಪರಿಪರಿಆಡಿಸಿದವನು ಪರದೇಸಿಯಂತೆ ಸತ್ತ!

By Staff
|

Vishweshwar Bhatವಿಶ್ವೇಶ್ವರ ಭಟ್‌

ನಮಗೆ ನಮ್ಮ ಪ್ರಧಾನಮಂತ್ರಿಬಗ್ಗೆ ಗೊತ್ತು. ಅವರ ವರ್ಣರಂಜಿತ ವ್ಯಕ್ತಿತ್ವ, ರಾಜಕೀಯ ದೃಷ್ಟಿಕೋನ, ಒಲವು-ನಿಲುವು, ಖಾಸಗಿ ಬದುಕು, ಹವ್ಯಾಸ, ಮೋಜು ಇತ್ಯಾದಿಗಳ ಬಗ್ಗೆ ಅಲ್ಪ ಸ್ಪಲ್ಪ ಗೊತ್ತು. ಪ್ರಧಾನಿಯಾದವನಿಗೆ ಇವೆಲ್ಲವುಗಳನ್ನು ಮುಚ್ಚಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಅದರಲ್ಲೂ ಷೋಕಿತನ, ಖಾಸಗಿ ಬದುಕು, ಐಲುತನ ಬೇಡಬೇಡವೆಂದರೂ ಗೊತ್ತಾಗುತ್ತವೆ. ಮುಚ್ಚಿಡಲು ಪ್ರಯತ್ನಿಸಿದಷ್ಟೂ ಬಹಿರಂಗವಾಗುತ್ತದೆ. ಈ ಪ್ರಧಾನಿಗೆ ಹೊಂದಿಕೊಂಡಂತೆ ಅವರ ಆಪ್ತ ಕಾರ್ಯದರ್ಶಿಗಳ ವಲಯವಿರುತ್ತದೆ. ಅಸಲಿಗೆ ಪ್ರಧಾನಿಯ ಹೆಸರಿನಲ್ಲಿ ಅಧಿಕಾರ ಚಲಾಯಿಸುವವರು ಇವರೇ. ಸದಾ ತೆರೆಯ ಹಿಂದಿನಿಂದಲೇ ದರ್ಬಾರು ನಡೆಸುತ್ತಾರೆ. ಇವರ ಬಗ್ಗೆ ನಮಗೆ ಹೆಚ್ಚು ಗೊತ್ತಿಲ್ಲ. ಪ್ರತಿ ಪ್ರಧಾನಿಯ ಹಿಂದೆಯೂ ಇಂಥ ಒಬ್ಬ ವ್ಯಕ್ತಿ ನಿಂತಿರುತ್ತಾನೆ. ಆತ ಪಿ.ಎನ್‌. ಹಕ್ಸರ್‌ ಇರಬಹುದು. ಎಂ.ಒ.ಮಥಾಯ್‌ ಇರಬಹುದು,ಆರ್‌.ಕೆ.ಧಮನ್‌ ಇರಬಹುದು ಅಥವಾ ಮೊನ್ನೆ ಮೊನ್ನೆತನಕ ಅಟಲ್‌ ಬಿಹಾರಿ ವಾಜಪೇಯಿ ಜತೆಗಿದ್ದ ಬ್ರಜೇಶ್‌ ಮಿಶ್ರಾ ಇರಬಹುದು. ಪ್ರತಿಯಾಬ್ಬರದ್ದೂ ಒಂದೊಂದು ರೋಚಕ ಕತೆ. ಕೆದಕಿದಷ್ಟೂ ಆಳಕ್ಕಿಳಿಯುವ ಬೇರುಗಳು!

ನಿಮಗೆ ಎಂ.ಒ. ಮಥಾಯ್‌ ಬಗ್ಗೆ ಹೇಳಬೇಕು. ನೆಹರು ಪ್ರಧಾನಿಯಾಗಿದ್ದಾಗ ಅಕ್ಷರಶಃ ದೇಶವನ್ನಾಳಿದ ಭೂಪ! ಕಾಂಗ್ರೆಸ್‌ ನಾಯಕರು ಈತನ ಮುಂದೆ ಕುಳಿತುಕೊಳ್ಳುತ್ತಿರಲಿಲ್ಲ. ಸದಾ ಕೈಕಟ್ಟಿ ನಿಂತಿರುತ್ತಿದ್ದರು. ಮಥಾಯ್‌ ಆದೇಶವಿಲ್ಲದೇ ಪ್ರಧಾನಿ ಕಚೇರಿಯಲ್ಲಿ ಏನೂ ಚಲಿಸುತ್ತಿರಲಿಲ್ಲ. ಸ್ವತಃ ನೆಹರು ಹೊರಡಿಸಿದ ಆದೇಶವನ್ನು ರದ್ದುಪಡಿಸುವಷ್ಟು ದಾಢಸಿತನ, ಪೊಗರು, ಪೊಂಗು ಆತನಿಗಿತ್ತು. ನೆಹರು ಅವರನ್ನು ಯಾಮಾರಿಸುವ ಕಲೆಗಾರಿಕೆ ಮಥಾಯ್‌ಗೆ ಕರಗತವಾಗಿತ್ತು. ‘ಹೌದು ಸಾರ್‌, ನೀವು ಹೊರಡಿಸಿದ ಆದೇಶ ರದ್ದುಪಡಿಸಲು ಹೇಳಿದವನು ನಾನೇ. ಕಾರಣ ನಿಮಗೆ ಯಾರೋ ತಪ್ಪಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಅದು ಹಾಗಲ್ಲ, ಹೀಗೆ. ಇದು ಹೀಗಲ್ಲ, ಹಾಗೆ. ಆದ್ದರಿಂದ ನಾನೇ ರದ್ದುಪಡಿಸಲು ಹೇಳಿದೆ. ನನಗೆ ನಿಮ್ಮ ಹಿತ, ಘನತೆ, ಮರ್ಯಾದೆ ಮುಖ್ಯ. ಅದರಲ್ಲಿ ನನ್ನ ಆಸಕ್ತಿಯೇನೂ ಇಲ್ಲ’ ಎಂದು ಅನೇಕ ಸಂದರ್ಭಗಳಲ್ಲಿ ಮಥಾಯ್‌ ನೆಹರುಗೆ ನೇರವಾಗಿ ಹೇಳಿದ್ದುಂಟು.

ಅಷ್ಟೇ ಅಲ್ಲ. ಹೀಗೆ ಹೇಳುವುದು ಮಥಾಯ್‌ಗೆ ಮಾತ್ರ ಸಾಧ್ಯವಿತ್ತು. ನೆಹರು ಮುಂದೆ ನಿಂತು ಮಾತನಾಡುವ ಛಾತಿ ಅಂದು ಯಾರಿಗೂ ಇರಲಿಲ್ಲ. ಅಂಥದ್ದರಲ್ಲಿ ಮಥಾಯ್‌ ಪ್ರಧಾನಿಗೆ ಯಾವ ಸಂದೇಶ, ಉಪದೇಶ, ಸಲಹೆಯನ್ನಾದರೂ ನೀಡಬಲ್ಲವನಾಗಿದ್ದ. ಯಾವಾಗ ಈ ವಿಷಯ ಕಾಂಗ್ರೆಸ್‌ ವಲಯದಲ್ಲಿ ಗೊತ್ತಾಯಿತೋ ಭಾಳ ಜಲ್ದಿ ಮಥಾಯ್‌ ಪ್ರಸಿದ್ಧನಾಗಿಬಿಟ್ಟ. ಅದಕ್ಕಿಂತ ಮುಖ್ಯವಾಗಿ ಅಧಿಕಾರದ ಕೇಂದ್ರವಾದ.

ಹಾಗೆ ನೋಡಿದರೆ ಮಥಾಯ್‌ ಅಷ್ಟೇನೂ ಓದಿಕೊಂಡವನಲ್ಲ. ಕೇರಳದ ಕೊಚ್ಚಿಯಲ್ಲಿ ಆತ ಸಾಮಾನ್ಯ ಬಡಕುಟುಂಬದಲ್ಲಿ ಹುಟ್ಟಿದ ಕ್ಯಾಥೋಲಿಕ್‌ ಕ್ರಿಶ್ಚಿಯನ್‌. ಓದಿದ್ದು ಹತ್ತನೆ ತರಗತಿಯವರೆಗೆ. ಚರ್ಚ್‌ನಲ್ಲಿ ಪಾದ್ರಿ ಸಂಪರ್ಕ ಸಿಕ್ಕಿತು. ಆತನೇ ಮಥಾಯ್‌ಗೆ ಇಂಗ್ಲಿಷ್‌ ಕಲಿಸಿದ. ಮೊದಲಿನಿಂದಲೂ ಮಥಾಯ್‌ ಬಾಯಿಬಡುಕ. ಇಂಗ್ಲಿಷ್‌ ಗೀಳು ಬೇರೆ. ಚರ್ಚ್‌ಗೆ ಬರುತ್ತಿದ್ದ ಗಣ್ಯರ ಸಂಪರ್ಕ ಸಿಗುತ್ತಿತ್ತು. ಅದೆಂಥ ಮಹತ್ವಾಕಾಂಕ್ಷೆಯಿತ್ತೋ ಏನೋ, ಪಾದ್ರಿಯನ್ನು ಕಾಡಿಬೇಡಿ ದಿಲ್ಲಿಗೆ ಬಂದು ಸೇರಿದ. ದಿಲ್ಲಿಯಲ್ಲಿನ ಆರಂಭದ ದಿನಗಳಲ್ಲಿ ನೆಹರು ವಾಸಿಸುತ್ತಿದ್ದ ನಿವಾಸದ ಮುಂದೆ ನಿಂತು ಒಂದಲ್ಲ ಒಂದು ದಿನ ನೆಹರು ಜತೆಗಿರಬೇಕೆಂದು ಕನಸು ಕಾಣುತ್ತಿದ್ದ. ದಿಲ್ಲಿಯಲ್ಲಿ ಅಂಥ ಕೆಲಸವಿರಲಿಲ್ಲ. ಎರಡು ಹೊತ್ತಿನ ತುತ್ತಿಗೆ ಸಾಕಾಗುವಷ್ಟು ದುಡಿಮೆಯಿತ್ತು. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಸೇನೆಯ ಶಿಬಿರದಲ್ಲಿ ಕ್ಲರಿಕಲ್‌ ಕೆಲಸ ಮಾಡಿಕೊಂಡಿದ್ದ. ಇಂಗ್ಲಿಷ್‌ನಲ್ಲಿ ಚೆನ್ನಾಗಿ ಟಿಪ್ಪಣಿ ಬರೆದುಕೊಳ್ಳುತ್ತಿದ್ದ. ಅದೇ ಅವನಿಗಿದ್ದ ದೊಡ್ಡ ಅರ್ಹತೆ. ಆಗಿನ ಕಾಲದಲ್ಲಿ ಆ ಕೆಲಸಕ್ಕೆ ಯಾರೂ ಸಿಗುತ್ತಿರಲಿಲ್ಲ. ಮಹಾಯುದ್ಧ ಮುಗಿದ ನಂತರ ಸೇನಾ ಶಿಬಿರದಲ್ಲಿ ಕೆಲಸ ಹೋಯಿತು. ಅಲ್ಲಿನ ಅಧಿಕಾರಿಗಳು ತಾಯ್ನಾಡಿಗೆ ಹೋಗುವ ಮೊದಲು ನೆಹರು ಸಹಾಯಕರಿಗೆ ಮಥಾಯ್‌ನನ್ನು ಪರಿಚಯಿಸಿದರು. 1946ರಲ್ಲಿ ಮಥಾಯ್‌ ನೆಹರು ಮನೆಯ ಜಗುಲಿಯಾಳಗೆ ಕಾಲಿಟ್ಟ.

1952ರವರೆಗೆ ನೆಹರು ಕುಟುಂಬದ ಸದಸ್ಯರ ಹೊರತಾಗಿ ಮಥಾಯ್‌ ಹೆಸರನ್ನು ಯಾರ್ಯಾರೂ ಕೇಳಿರಲಿಲ್ಲ. ನೆಹರು ಮನೆಯಲ್ಲಿ ಯಾರು ಏನೇ ಕೆಲಸ ಹೇಳಲಿ ಬಹಳ ಶ್ರದ್ಧೆ, ಭಕ್ತಿಯಿಂದ ಅದನ್ನು ಮಾಡಿರುತ್ತಿದ್ದ. ಉಳಿದ ಆಳು-ಕಾಳುಗಳಿಗೆ ಇಂಗ್ಲಿಷ್‌ ಬರುತ್ತಿರಲಿಲ್ಲವಾದ್ದರಿಂದ ಮನೆಯಲ್ಲೂ ಇಂಗ್ಲಿಷ್‌ನಲ್ಲಿಯೇ ಮಾತನಾಡಲು ಇಷ್ಟಪಡುತ್ತಿದ್ದ ನೆಹರುಗೆ ಮಥಾಯ್‌ ಹತ್ತಿರವಾದ. ಬರಬರುತ್ತ ನೆಹರುಗೆ ಎಷ್ಟು ಆಪ್ತನಾದನೆಂದರೆ ಮಥಾಯ್‌ ಪಕ್ಕದಲ್ಲಿಯೇ ನಿಂತಿರಬೇಕಾಗುತ್ತಿತ್ತು. ಮಥಾಯ್‌ ಕೂಡ ಅಷ್ಟೇ ಕಾಳಜಿಯಿಂದ ಧಣಿ ಕೆಲಸ ಪೂರೈಸಿರುತ್ತಿದ್ದ. ಕ್ರಮೇಣ ನೆಹರು ಅವರ ಖಾಸಗಿ ಬೇಡಿಕೆಗಳನ್ನು ಪೂರೈಸಲು ಮುಂದಾಗುತ್ತಿದ್ದ. ಈ ವೇಳೆಗೆ ದಿಲ್ಲಿಯ ರಾಜಕೀಯ, ನೆಹರು ಮನಸ್ಸು, ಹೊಗಳು ಭಟ್ಟಂಗಿತನವನ್ನು ಕರಗತ ಮಾಡಿಕೊಂಡ. ಮುಖ ನೋಡಿ ಮನಸ್ಸು ಅಳೆಯುವ ಹಾಗೂ ಅದಕ್ಕೆ ತಕ್ಕಂತೆ ಮಾತನಾಡುವ ಕಲೆಯಲ್ಲಿ ನಿಪುಣನಾದ. ಪ್ರಧಾನಿಯ ತೀನ್‌ ಮೂರ್ತಿಭವನಕ್ಕೆ ಬರುವವರಿಗೆಲ್ಲ ಮಥಾಯ್‌ದೇ ಆದರಾತಿಥ್ಯ.

1952ರ ಆಗಸ್ಟ್‌ನಲ್ಲಿ ನೆಹರು ಮಥಾಯ್‌ನನ್ನು ತಮ್ಮ ವಿಶೇಷ ಕಾರ್ಯದರ್ಶಿ ಎಂದು ನೇಮಿಸಿಕೊಂಡರು. ಅಂದು ಆತನ ಜೀವನದ ಆಸೆ ಈಡೇರಿತ್ತು. ಪ್ರಧಾನಿಯ ಅದರಲ್ಲೂ ಪ್ರಧಾನಿ ಜವಾಹರಲಾಲ್‌ ನೆಹರು ಅವರ ವಿಶೇಷ ಕಾರ್ಯದರ್ಶಿ ಅಂದರೆ ಕೇಳಬೇಕೆ? ನೆಹರು ಭೇಟಿ ಮಾಡುವವರು ಈತನನ್ನು ಕಾಣಲೇಬೇಕಿತ್ತು. ಮಥಾಯ್‌ ಮಹಿಮೆಯಿದ್ದರೆ ಮಾತ್ರ ಪ್ರಧಾನಿ ಕಚೇರಿಯಲ್ಲಿ ಕೆಲಸವಾಗುತ್ತಿತ್ತು. ಇಲ್ಲದಿದ್ದರೆ ಉಹುಂ. ಕೇಂದ್ರದ ಕ್ಯಾಬಿನೆಟ್‌ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ರಾಜಭಾರಿಗಳು ಮಥಾಯ್‌ ಕೋಣೆಯಲ್ಲಿ ತಲೆತಗ್ಗಿಸಿ ನಿಂತಿರುತ್ತಿದ್ದರು. ಮಂತ್ರಿ, ಮುಖ್ಯಮಂತ್ರಿಯಾಗುವ ಹಂಬಲವುಳ್ಳವರಂತೂ ಆತನ ಮುಂದೆ ಯಕಃಶ್ಚಿತರಂತೆ ದಿನಗಟ್ಟಲೆ ಕಾಡಿರುತ್ತಿದ್ದರು. ತನ್ನ ಅಧಿಕಾರ ಬಲದ ಬಗ್ಗೆ ಮಥಾಯ್‌ ಬರೆದುಕೊಂಡಿದ್ದಾನೆ -‘ಕಡತವೆಲ್ಲ ನನ್ನ ಮೂಲಕವೇ ಹೋಗುತ್ತಿತ್ತು. ನಾನು ನೋಡದ ಯಾವ ಫೈಲೂ ಪ್ರಧಾನಿಯನ್ನು ತಲುಪುತ್ತಿರಲಿಲ್ಲ. ನನ್ನ ನೋಡದೇ ಅವರನ್ನು ನೋಡುವುದೂ ಸಾಧ್ಯವಿರಲಿಲ್ಲ. ಅಧಿಕಾರಿಗಳ ವಲಯದಲ್ಲಿ ನನ್ನನ್ನು ಡೆಪ್ಯುಟಿ ಪ್ರಧಾನಿ ಎಂದು ಕರೆಯುತ್ತಿದ್ದರು. ನಾನೇ ಅನೇಕ ರಾಯಭಾರಿ, ಹೈಕಮೀಷನರ್‌, ರಾಜ್ಯಪಾಲರನ್ನು ನೇಮಿಸಿದ್ದೇನೆ. ನೆಹರು ಕಾಲದಲ್ಲಾದ ಎಲ್ಲ ನೇಮಕಗಳ ಹಿಂದೆ ನನ್ನ ಕೈವಾಡವಿದೆ.’

ಒಂದು ಸಂದರ್ಭದಲ್ಲಿ ಇಂದಿರಾಗಾಂಧಿ ಕೂಡ ಮಥಾಯ್‌ಗೆ ವರದಿ ಮಾಡಬೇಕಾಗುತ್ತಿತ್ತು. ನೆಹರು ಅವರಿಂದ ಮಾಡಿಸಿಕೊಳ್ಳಬಹುದಾದ ಯಾವ ಕೆಲಸವನ್ನಾಗಲಿ, ಅವರ ನೆರವಿಲ್ಲದೇ ಮಥಾಯ್‌ನಿಂದ ಮಾಡಿಸಿಕೊಳ್ಳ ಬಹುದೆಂಬುದು ಎಲ್ಲರಿಗೂ ಗೊತ್ತಿತ್ತು. ಬಿರ್ಲಾ, ಟಾಟಾನಂಥ ಉದ್ಯಮಪತಿಗಳೂ ಈತನ ಮರ್ಜಿಯಿಂದಲೇ ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ರಕ್ಷಣೆ, ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲೂ ಈತ ಮೂಗು ತೂರಿಸದೇ ಬಿಡುತ್ತಿರಲಿಲ್ಲ. ಈತನ ಕಾರ್ಯವೈಖರಿ ಕುರಿತು ಲೋಕಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ನೆಹರು ಪೇಚಿಗೆ ಸಿಲುಕಿದ್ದರು. ಆದರೂ ಅವರು ಮಥಾಯ್‌ನನ್ನು ಬಿಟ್ಟುಕೊಡುತ್ತಿರಲಿಲ್ಲ. ಇದರಿಂದ ಮಥಾಯ್‌ ತನ್ನ ವರ್ತನೆ ಸರಿಪಡಿಸಿಕೊಳ್ಳುವ ಬದಲು ತಾನು ಪ್ರಧಾನಿಗೆ ಅನಿವಾರ್ಯ, ತಾನಿಲ್ಲದೇ ನೆಹರು ಇಲ್ಲ ಎಂದು ಭಾವಿಸಿದ. ನೆಹರುಗೆ ಸಹ ಮಥಾಯ್‌ ಬಗ್ಗೆ ಮಬ್ಬು ಕವಿದಿತ್ತು. ಆತನ ಕುರಿತು ಯಾರು ಏನೇ ಹೇಳಿದರೂ ನೆಹರು ದರಕರಿಸುತ್ತಿರಲಿಲ್ಲ.

ಅಧಿಕಾರದ ಪಿತ್ತ ಮಥಾಯ್‌ ನೆತ್ತಿಗೇರಿತ್ತು. ಯಾರ ಕೈಗೂ ಸಿಗದಷ್ಟು ಎತ್ತರಕ್ಕೆ ಬೆಳೆದಿದ್ದ. ಸರದಾರ್‌ ಪಟೇಲ್‌, ಕೃಪಲಾನಿ, ಸರೋಜಿನಿ ನಾಯ್ಡು, ಮೊರಾರ್ಜಿ ದೇಸಾಯಿಯಂಥ ನಾಯಕರು ಮಥಾಯ್‌ ವರ್ತನೆ ಬಗ್ಗೆ ನೆಹರೂಗೆ ದೂರಿತ್ತರೂ ಏನೂ ಪ್ರಯೋಜನವಾಗಿರಲಿಲ್ಲ.‘ಮಥಾಯ್‌ಗೆ ನೆಹರು ಅನಿವಾರ್ಯವಲ್ಲ, ನೆಹರುಗೆ ಮಥಾಯ್‌ ಅನಿವಾರ್ಯ’ ಎಂದು ಜನ ಮಾತನಾಡಿ ಕೊಳ್ಳುತ್ತಿದ್ದರು. ಈ ಮಾತುಗಳು ನೆಹರು ಕಿವಿ ಮೇಲೆ ಬೀಳುತ್ತಿದ್ದರೂ ಅವರೇನೂ ಮಾಡಲಿಲ್ಲ. ವಿಶೇಷ ಕಾರ್ಯದರ್ಶಿಯಾಗಿ 7ವರ್ಷಗಳಲ್ಲಿ ಮಥಾಯ್‌ ಪ್ರಧಾನಿಯನ್ನು ಆಡಿಸಬಲ್ಲಷ್ಟು ಚಾಣಾಕ್ಷನಾಗಿಬಿಟ್ಟ.

ನೆಹರು ಎಲ್ಲವನ್ನೂ ಸಹಿಸಿಕೊಂಡರು. ಸಹನೆಯ ಮಟ್ಟ ಮೀರಲಾರಂಭಿಸಿತ್ತು. ಒಂದು ದಿನ ಮಥಾಯ್‌ನನ್ನು ಬಾಳೆಹಣ್ಣಿನ ಸಿಪ್ಪೆಯಂತೆ ಬಿಸಾಕಿಬಿಟ್ಟರು. ಜತೆಯಲ್ಲಿಟ್ಟುಕೊಳ್ಳುವುದಕ್ಕಿಂತ ಬಿಸಾಡಿದರೆ ಇನ್ನೂ ಅಪಾಯವೆಂಬ ಎಚ್ಚರ ನೆಹರುಗಿತ್ತು. ತಮ್ಮೆಲ್ಲರ ರಹಸ್ಯಗಳ ಬೀಗದಕೈ ಮಥಾಯ್‌ ಕೈಯಲ್ಲಿದೆಯೆಂಬುದು ಅವರಿಗೆ ಗೊತ್ತಿತ್ತು. ಅದರಿಂದಾಗುವ ಅನಾಹುತದ ಬಗ್ಗೆ ಅರಿವಿತ್ತು.‘ನೋಡ್ತಾ ಇರಿ, ನನ್ನನ್ನು ಕೈ ಬಿಟ್ಟಿದ್ದರಿಂದ ನನಗೇನೂ ನಷ್ಟ ಇಲ್ಲ. ಎಂಬ ಹೇಳಿಕೆ ಕೊಟ್ಟು ಮಥಾಯ್‌ ಸುಮ್ಮನಾದ. ಯಾರ ಕೈಗೂ ಸಿಗದೇ ಒಂದು ವಾರ ತಲೆಮರೆಸಿಕೊಂಡ. ನೆಹರುಗೆ ದಿಗಿಲು ಹತ್ತಿಕೊಂಡಿತು. ಮಥಾಯ್‌ ಬಾಯಿಬಿಟ್ಟರೆ ಸರ್ವನಾಶ ಎಂದು ನೆಹರು ಹೆದರಿದರು. ಎಷ್ಟೆಂದರೂ ತನ್ನ ಜತೆ ಇದ್ದವನು, ತನಗಾಗಿ ಕೆಲಸ ಮಾಡಿದವನು, ಕ್ಷಮಿಸಿದರೆ ತಪ್ಪಿಲ್ಲ ಎಂದು ನೆಹರು ಅಂದುಕೊಂಡರು. ಈ ವಿಷಯ ಮಥಾಯ್‌ಗೆ ತಿಳಿಯಿತು.‘ಕೇವಲ ನಾಯಿ ಮಾತ್ರ ತನ್ನ ವಾಂತಿಯನ್ನು ನೆಕ್ಕೀತು’ ಎಂದು ಸೊಕ್ಕಿನಿಂದ ಹೇಳಿದ. ಮಥಾಯ್‌ನನ್ನು ವಾಪಸು ಕರೆಯಿಸುವ ನಿರ್ಧಾರ ಬಿಟ್ಟುಬಿಟ್ಟರು.

ಆ ಹೊತ್ತಿಗೆ ಮಥಾಯ್‌ ನಿಯತ್ತು ಹೊರಟು ಹೋಗಿತ್ತು. ಅಲ್ಲಲ್ಲಿ ನೆಹರು ಕುಟುಂಬದ ಬಗ್ಗೆ ಅಪಸ್ವರಗಳು ಮಥಾಯ್‌ ಬಾಯಿಂದ ಕೇಳಿಬರುತ್ತಿದ್ದವು. ನೆಹರು ಬಗ್ಗೆ ಮಥಾಯ್‌ಗೆ ಅದೆಂಥ ಕೋಪವಿತ್ತೆಂದರೆ ತನ್ನನ್ನು ಕೆಲಸದಿಂದ ತೆಗೆದ 18ವರ್ಷಗಳ ಬಳಿಕ ವಿಷಕಾರಿದ್ದ.‘ನೆಹರು ಯುಗದ ನೆನಪುಗಳು’ ಎಂಬ ಪುಸ್ತಕ ಬರೆದ. ಆಗ ನೆಹರು ನಿಧನರಾಗಿ ಹದಿನೈದು ವರ್ಷಗಳಾಗಿದ್ದವು. ಇಂದಿರಾಗಾಂಧಿ ಅಧಿಕಾರ ಕಳೆದುಕೊಂಡಿದ್ದರು. ನೆಹರು ಒಬ್ಬ ಪತ್ನಿ ಪೀಡಕ, ಕಾಮುಕ, ಪರಪತ್ನಿ ವ್ಯಾಮೋಹಿ, ಹೆಣ್ಣುಬಾಕ ಎಂದು ಬರೆದ. ‘ಫಿರೋಜ್‌ ಗಾಂಧಿ ಹಾಗೂ ಇಂದಿರಾ ಎಂದೂ ಗಂಡ- ಹೆಂಡತಿಯಾಗಿರಲಿಲ್ಲ. ಹಾಗೆ ನಟಿಸಲು ಪ್ರಯತ್ನಿಸಿ ಸೋತರು. ಅವರಿಗೆ ಹುಟ್ಟಿದವರಿಬ್ಬರ ತಂದೆ ಫಿರೋಜ್‌ ಅಲ್ಲ’ ಎಂದ. ತಂದೆಯ ಒತ್ತಾಯಕ್ಕೆ ಮಣಿದು ಕಮಲಾರನ್ನು ಮದುವೆಯಾದ ನೆಹರು ಹೆಂಡತಿಗೆ ಹಿಂಸೆ ಕೊಡುತ್ತಿದ್ದರೆಂದು ದೂರಿದ.‘ನೆಹರುಗೆ ಶ್ರದ್ಧಾ ಮಾತಾ ಎಂಬ ಮಹಿಳೆಯಾಂದಿಗೆ ಲೈಂಗಿಕ ಲೈಂಗಿಕ ಸಂಬಂಧವಿತ್ತು. ಆಕೆಗೊಂದು ಮಗುವನ್ನು ದಯಪಾಲಿಸಿದರು. ಆ ಮಗು ಬೆಂಗಳೂರಿನಲ್ಲಿ ಅನಾಥವಾಗಿದೆ. ಯಾವುದೋ ಕಾನ್ವೆಂಟಿನಲ್ಲಿ ಓದುತ್ತಿದೆ. ಆ ಮಗುವಿಗೆ ತನ್ನ ತಂದೆ ಯಾರೆಂಬುದು ಗೊತ್ತಿಲ್ಲ. ಮಗುವನ್ನು ನಾನು ಸಾಕಬಲ್ಲೆ’

ಎಂದು ಬರೆದುಕೊಂಡ. ಈ ಕೃತಿಯಲ್ಲಿ ಇಂದಿರಾ ಗಾಂಧಿ ಬಗ್ಗೆ She ಎಂಬ ಅಧ್ಯಾಯ ಬರೆದ. ಇದು ಎಷ್ಟೊಂದು ಅಶ್ಲೀಲವಾಗಿತ್ತೆಂದರೆ ಪ್ರಕಾಶಕರು ಹಠಕ್ಕೆ ಬಿದ್ದು ಈ ಅಧ್ಯಾಯ ಕಿತ್ತುಹಾಕಿದರು. ಆದರೆ ಈ ಅಧ್ಯಾಯದ ಹಸ್ತಪತ್ರಿಕೆಯನ್ನು ಬೇಕೆಂದೇ ಪತ್ರಿಕೆಗಳಿಗೆ ಕಳಿಸಿಕೊಟ್ಟ. ಸ್ನೇಹಿತರಿಗೆ ಹಂಚಿದ. ‘ಹಾಸಿಗೆಯ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೂ ಆಕೆ ಗಂಡಸರನ್ನು ನಂಬುತ್ತಿರಲಿಲ್ಲ’ ಎಂದು ಬರೆದ. ಫಿರೋಜ್‌ ಗಾಂಧಿಗೆ ಉತ್ತರ ಪ್ರದೇಶದ ಸಚಿವನೊಬ್ಬನ ಮಗಳೊಂದಿಗೆ ಸಂಬಂಧವಿರುವುದು ಇಂದಿರಾಗೆ ಗೊತ್ತಿತ್ತು. ಗೊತ್ತಿದ್ದೂ ಸುಮ್ಮನಾದಳು. ಕಾರಣ ತನ್ನ ಬಳಿ ಸುಳಿಯದಿರಲೆಂದು’ಎಂದು ಮಥಾಯ್‌ ಹಲುಬಿದ.

ಉಪ್ಪು ತಿಂದ ಮನೆಗೆ ದ್ರೋಹ ಬಗೆದ. ಕೊನೆಕೊನೆಗೆ ಮಥಾಯ್‌ನನ್ನು ಯಾರೂ ಗಂಭೀರವಾಗಿ ತೆಗೆದು ಕೊಳ್ಳುತ್ತಿರಲಿಲ್ಲ. ಅಧಿಕಾರ ಕಳಕೊಂಡ ನೋವು ಕೊನೆತನಕ ಬಾಧಿಸುತ್ತಿತ್ತು.

ಅಂದು ಮಥಾಯ್‌ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಚಿತೆಯ ಮುಂದಿಟ್ಟಿದ್ದರೆ, ಕಣ್ಣೀರು ಹಾಕಲು, ಶೋಕ ಮಿಡಿಯಲು ನಾಲ್ಕು ಮಂದಿ ಇರಲಿಲ್ಲ.

ಪ್ರಧಾನಿಯನ್ನೇ ಆಡಿಸಿದ ವ್ಯಕ್ತಿ ಪರದೇಶಿಯಾಗಿ ಹೋದ!

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more