• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ನೇಹದ ಕಡಲನ್ನೂ ಕದಡುವ ಸ್ವಾರ್ಥದ ದೋಣಿ !

By Staff
|
Vishweshwar Bhat ವಿಶ್ವೇಶ್ವರ ಭಟ್‌

noorentumaatu@yahoo.com

ನಾವೆಲ್ಲ ಸದಾ ಕಾತರಿಸುವ ಸ್ನೇಹ, ಸಂಬಂಧ ಇದೆಯಲ್ಲ ಅವುಗಳಿಗೆ ಏನೇನೋ, ಬಡಿವಾರ. ಅವು ಸುಖಾಸುಮ್ಮನೆ ಹುಟ್ಟಿಕೊಳ್ಳುವುದಿಲ್ಲ. ಒಂದು ಪಕ್ಷ ಹುಟ್ಟಿಕೊಂಡರೂ ಬೆಳೆಯಲು ಏನೇನನ್ನೋ ಅಪೇಕ್ಷಿಸುತ್ತವೆ. ಒಂದು ‘ಗೆಳೆತನ’ ಏನೂ ಇಲ್ಲದೇ ಹುಟ್ಟಿಕೊಳ್ಳಬಹುದು. ಆದರೆ ಅದು ಜಗ್ಗಿ ಮುನ್ನಡೆಯಲು ಜತೆಯಲ್ಲಿ ‘ಸ್ನೇಹಿತರು’ ಬೇಕು. ಹಾಗಾದರೆ ಸ್ನೇಹ, ಸಂಬಂಧಗಳು ಯಾವ ಅಂಶಗಳ ಮೇಲೆ ಕುದುರುತ್ತವೆ? ಗೆಳೆತನಕ್ಕೆ ಯಾರು ಫ್ರೆಂಡು? ದುಡ್ಡು, ಅಂತಸ್ತು, ಸ್ಥಾನಮಾನ, ಅಧಿಕಾರ? ಇವ್ಯಾವವೂ ಇಲ್ಲದಿದ್ದರೆ ಗೆಳೆತನ, ಸಂಬಂಧ ಸಾಧ್ಯ ಇಲ್ಲವಾ? ಹಾಗಾದರೆ ಒಂದು ಹಸನಾದ ಸ್ನೇಹಕ್ಕೆ ಏನು ಬೇಕು?

ಇದಕ್ಕೆ ಏನೂಂತ ಉತ್ತರ ಹೇಳೋದು ಅಂತ ಯಾರಾದರೂ ಹೇಳಬಹುದು. ಯಾಕೆಂದ್ರೆ ಗೆಳೆತನಕ್ಕೆ ಒಂದು ವ್ಯಾಪ್ತಿ, ವಿಸ್ತಾರ, ಮಿತಿಯೆಂಬುದು ಇಲ್ಲದಿರುವುದರಿಂದ ಅದಕ್ಕೊಂದು ಫ್ರೇಮು ಕಟ್ಟುವುದು ಕಷ್ಟ . ಹಾಗಂತ ಈ ಪ್ರಶ್ನೆಗಳನ್ನು ಕಟಾಕಟಿ ನಿರಾಕರಿಸಲು ಆಗುವುದಿಲ್ಲ. ಕಾರಣ ಸಂಬಂಧ, ಸ್ನೇಹ ಇಂಥ ಅಂಶಗಳನ್ನು ಹುಡುಕಿಕೊಂಡು ಹೋಗುತ್ತವೆ. ಬಿರ್ಲಾನ ಮಗ ಬೀದಿಯಲ್ಲಿರುವ ಬಡವನ ಮಗಳ ಜತೆ ಗೆಳೆತನಕ್ಕೆ ಹೆಗಲು ಚಾಚುವುದಿಲ್ಲ. ಕಲಾಸಿಪಾಳ್ಯದಲ್ಲಿ ಬೆಳೆದವನಿಗೆ ಅಂಬಾನಿ ಮಗನ ಜೊತೆ ಸ್ನೇಹಹಸ್ತ ಚಾಚಲು ಆಗುವುದಿಲ್ಲ. ಅಮಿತಾಬ್‌ ಮನೆಯಲ್ಲಿ ಕೆಲಸ ಮಾಡಲು, ಮುಸುರೆ ತಿಕ್ಕಲು ಯೋಗ್ಯತೆ ಬೇಕು. ರೋಹನ್‌ ಗವಾಸ್ಕರ್‌ಗೆ ಎಲ್ಲರೂ ಚೆಂಡು ಎಸೆಯುವಂತಿಲ್ಲ. ಐಶ್ವರ್ಯ ರೈ ಜತೆ ಗೆಳೆತನಕ್ಕೆ ಸೌಂದರ್ಯ ಬೇಕು. ಐಎಎಸ್‌, ಐಪಿಎಸ್‌ಗಳ ಸ್ನೇಹ ಸುಲಭವಾಗಿ ದಕ್ಕುವುದಿಲ್ಲ. ಮಂತ್ರಿಗಳು, ಶಾಸಕರು ಸುಲಭವಾಗಿ ಒಳಗೆ ಬಿಟ್ಟುಕೊಡುವುದಿಲ್ಲ. ಕಾಲೇಜಿನಲ್ಲಿ ಹುಟ್ಟಿಕೊಂಡ ಸ್ನೇಹ ಕಾಲಕ್ರಮೇಣ ಮಸುಕಾಗುತ್ತದೆ.

ಹಾಗಂತ ಈ ಸ್ನೇಹವೆಂಬುದು ಯಾರಿಗೂ ಸಿಗುವುದೇ ಇಲ್ಲ ಅಂತ ಭಾವಿಸಬೇಕಾಗಿಲ್ಲ. ಸ್ನೇಹವೆಂಬುದು ಯಾರಿಗೂ ಸಿಗದ ಸಂಬಂಧ ಅಂತಾನೂ ಭಾವಿಸಬೇಕಾಗಿಲ್ಲ. ಬಸ್ಸು, ರೈಲಿನಲ್ಲಿ ಪಕ್ಕದಲ್ಲಿ ಕುಳಿತವ ಜೀವನಪರ್ಯಂತ ಗೆಳೆತನಕ್ಕೆ ಸಾಥಿಯಾಗಬಹುದು. ಬಾರ್‌ನಲ್ಲಿ ಪಕ್ಕದ ಟೇಬಲ್ಲಿನಲ್ಲಿ ಕುಳಿತವ ಈ ಜೀವನಕ್ಕಾಗುವಷ್ಟು ‘ಸ್ನೇಹದ್ರವ’ ಕೊಡಬಹುದು. ಡೊಂಬಿವಲಿ ರೈಲು ನಿಲ್ದಾಣದಲ್ಲಿ ಕಾಲು ತುಳಿದು ‘ಎಕ್ಸ್‌ಕ್ಯೂಸ್‌ ಮೀ’ ಎಂದ ಹುಡುಗಿ ಜೀವನವಿಡೀ ಕಾಪಾಡುವಂಥ ಒಳ್ಳೆಯ ಸ್ನೇಹವನ್ನು ತೆರೆದಿಡಬಹುದು.

ಒಮ್ಮೊಮ್ಮೆ ಪಿಳ್ಳೆ ನೆಪವನ್ನೂ ಸಹ ಅಪೇಕ್ಷಿಸದ ಈ ಸ್ನೇಹ, ಬೇಕುಬೇಡಿಕೆಗಳ ಉದ್ದಪಟ್ಟಿ ಸಲ್ಲಿಸಿ ಸ್ವಾಟೆ ತಿರುವಿ ನಿಂತುಬಿಡುತ್ತದೆ. ಸಣ್ಣ ಸಣ್ಣ ಕಾರಣಗಳಿಗೆ ಶಟಗೊಳ್ಳುವ ಈ ಸ್ನೇಹ ಎಲ್ಲ ಅವಮಾನಗಳನ್ನೂ ಸಹಿಸಿಕೊಂಡು ಗೆಳೆತನಕ್ಕೆ ಹೆಗಲು ಕೊಡುವ ಗೆಣಕಾರನಾಗುತ್ತದೆ. ಗೆಳೆತನವೆಂಬ ಸಂಬಂಧದಲ್ಲಿ ಏನು ಬೇಕಾದರೂ ಮಾಡುವ ಈ ಸ್ನೇಹ ಒಮ್ಮೊಮ್ಮೆ ತೀರ ವ್ಯಾವಹಾರಿಕವಾಗಿ ಯೋಚನೆಗೆ ಬಿದ್ದು ಅದೇ ಗೆಳೆತನವನ್ನು ಕಡಿದುಕೊಂಡು ಸುಮ್ಮನಾಗಿಬಿಡುತ್ತದೆ. ಅಧಿಕಾರವಿದ್ದಾಗ ಹುಟ್ಟಿಕೊಂಡು ಅರಳಿದ ಸ್ನೇಹ ಅದು ಹೋಗುತ್ತಿದ್ದಂತೆ ತಾನೂ ಹಿಂದಿನ ಬಾಗಿಲಿನಿಂದ ಹೇಳದೇ ಕೇಳದೇ ಹೊರಟು ಹೋಗುತ್ತದೆ!

ಹರ್ಷದ್‌ ಮೆಹ್ತಾನ ಬದುಕಿನಲ್ಲಿ ಆಗಿದ್ದು ಇದೇ. ಹರ್ಷದ್‌ ಮುಂಬೈನ ಷೇರು ಮಾರುಕಟ್ಟೆಯಲ್ಲಿ ‘ಗೆಲ್ಲುವ ಗೂಳಿ’ಯಾಗಿದ್ದಾಗ ಅವನ ಮನೆಮುಂದೆ ಫಾರಿನ್‌ ಕಾರುಗಳು ಸಾಲು ಹಚ್ಚಿ ನಿಲ್ಲುತ್ತಿದ್ದವು. ಬೆಳಗ್ಗೆಯಿಂದಲೇ ಅವನ ಭೇಟಿಗೆ ಜನ ಕಾದು ಕುಳಿತಿರುತ್ತಿದ್ದರು. ಇವರಲ್ಲಿ ಎಲ್ಲರೂ ಶ್ರೀಮಂತರೇ. ಹರ್ಷದ್‌ ನಾಲ್ಕು ದಿನ ವಿಶ್ರಾಂತಿ ಬಯಸುತ್ತಾರೆಂಬ ಸಣ್ಣ ಸುದ್ದಿ ತಿಳಿದರೆ ಸಿಂಗಾಪೂರ, ಹಾಂಗ್‌ಕಾಂಗ್‌ನಲ್ಲಿ ಹೋಟೆಲ್‌ ರೂಮು ಬುಕ್‌ ಮಾಡಲು, ವಿಮಾನ ಟಿಕೆಟ್‌ ಖರೀದಿಸಲು ಜನ ಹಾತೊರೆಯುತ್ತಿದ್ದರು. ಹತ್ತು ದಿನ ವಿಶ್ರಾಂತಿಯೆಂದರೆ ಸ್ವಿಜರ್‌ಲ್ಯಾಂಡಿನಲ್ಲಿ ಅವನಿಗಾಗಿ ಕಾಟೇಜ್‌ ಕಾದಿರುತ್ತಿತ್ತು. ಅಮೇರಿಕ ಪ್ರವಾಸಕ್ಕೆ ಹೊರಟರೆ ಎಲ್ಲ ಸೌಕರ್ಯವೂ ಮನೆಯಿಂದ ಹೊರಡುವ ಮೊದಲೇ ಸಿದ್ಧವಾಗಿರುತ್ತಿತ್ತು. ಹರ್ಷದ್‌ಗಾಗಿ ಏನು ಬೇಕಾದರೂ ಮಾಡುವ, ಆತನ ಸಕಲ ಬೇಕು-ಬೇಡಿಕೆಗಳನ್ನು ಈಡೇರಿಸುವವರ ದೊಡ್ಡ ಪಡೆಯೇ ಇರುತ್ತಿತ್ತು. ಆತ ಯಾವುದೇ ಕಾರ್‌ ಷೋ ರೂಂಗೆ ಹೋದರೆ ಬರಿಗೈಲಿ ವಾಪಸ್ಸು ಬರುತ್ತಿರಲಿಲ್ಲ. ಆತನಿಗೆ ಬರಿಗೈಲಿ ಬರಬೇಕೆನಿಸಿದರೂ ಷೋರೂಂ ಮಾಲಿಕ ಬರಿಗೈಲಿ ಬರಲು ಬಿಡುತ್ತಿರಲಿಲ್ಲ. ಒಂದು ಮರ್ಸಿಡಿಸ್‌ ಕಾರಿಟ್ಟವರು ಸಿಗಬಹುದು, ಆದರೆ ಹರ್ಷದ್‌, ಅಂಥ ನಾಲ್ಕು ಕಾರುಗಳನ್ನಿಟ್ಟಿದ್ದ.

ತನ್ನ ಪ್ರೀತಿಯ ನಾಯಿಯನ್ನು ಸಾಯಂಕಾಲ ಚೌಪಾಟಿ ಬೀಚಿನಲ್ಲಿ ಇದೇ ಮರ್ಸಿಡಿಸ್‌ ಬೆಂಜ್‌ ಕಾರಿನಲ್ಲಿಯೇ ಸುತ್ತು ಹೊಡೆಸುತ್ತಿದ್ದ. ಆಶ್ಚರ್ಯವಾಗಬಹುದು. ಆತ ನಾಯಿಯನ್ನು ಈ ರೀತಿ ಸುತ್ತು ಹೊಡೆಸಲು ಜನ ಮುಗಿ ಬೀಳುತ್ತಿದ್ದರು. ಆ ಮೂಲಕ ಆತನ ಸಖ್ಯ, ಸಾಮೀಪ್ಯ ಗಳಿಸಲು ಹಾತೊರೆಯುತ್ತಿದ್ದರು. ಹರ್ಷದ್‌ನನ್ನು ಆಹ್ವಾನಿಸಲು, ಭೋಜನಕ್ಕೆ ಕರೆಯಲು ಜನರು ಮೂರ್ನಾಲ್ಕು ತಿಂಗಳ ಮೊದಲೇ ಮನವಿ ಸಲ್ಲಿಸಿರುತ್ತಿದ್ದರು. ಆತ ದೇಶದಲ್ಲಿ ಎಲ್ಲಿಯೇ ಹೋಗಲಿ ಅವನ ಯೋಗಕ್ಷೇಮ ನೋಡಿಕೊಳ್ಳುವ ಜನರಿದ್ದರು. ಇಂಥ ಆತಿಥ್ಯ, ರುಬಾಬನ್ನು ಆತ ಏನಿಲ್ಲವೆಂದರೂ ಎಂಟು-ಹತ್ತು ವರ್ಷಗಳ ಕಾಲ ಅನುಭವಿಸಿರಬಹುದು.

ಯಾವಾಗ ಷೇರುಪೇಟೆ ಕರ್ಮಕಾಂಡ ಹೊರ ಬಿತ್ತೋ, ಹರ್ಷದ್‌ ಮನೆಮುಂದಿನ ಚಿತ್ರಣವೇ ಬದಲಾಗಿಬಿಟ್ಟಿತು. ಅವನ ಹೆಸರು ಹೇಳಿ ಆಣೆ ಮಾಡುತ್ತಿದ್ದವರು, ಅವನ ನಾಮಸ್ಮರಣೆಯಿಂದ ದಿನವನ್ನು ಆರಂಭಿಸುತ್ತಿದ್ದವರು, ಅವನಿಗಾಗಿ ಕಾರು, ವಿಮಾನ, ಭೋಜನ, ವಿದೇಶ ಪ್ರವಾಸ ವ್ಯವಸ್ಥೆ ಮಾಡುತ್ತಿದ್ದವರೆಲ್ಲ ಕರ್ಮಕಾಂಡದ ಸುದ್ದಿ ಹೊರ ಬಿದ್ದ ದಿನದಿಂದ ಕರಗಿ ಹೋದರು. ಆತನ ಸಖ್ಯ ಬಯಸಿದವರೆಲ್ಲ ಚದುರಿ ಹೋದರು. ಹರ್ಷದ್‌ ಗೊತ್ತಾ ಎಂದು ಅವನ ಖಾಸಾಖಾಸಾ ಸ್ನೇಹಿತರನ್ನು ಕೇಳಿದರೆ ಯಾವ ಹರ್ಷದ್‌ ಎಂದು ಕೇಳಲಾರಂಭಿಸಿದರು. ಅವನ ಸ್ನೇಹಿತರನ್ನು ಪೊಲೀಸರು ತಲಾಶ್‌ ಮಾಡಲಾರಂಭಿಸಿದಾಗ, ದೇವರಾಣೆಗೂ ತಮಗೂ ಅವನಿಗೂ ಸಂಬಂಧವೇ ಇಲ್ಲ ಎಂದು ಪ್ರತಿಪಾದಿಸಿದರು. ಹರ್ಷದ್‌ ಇಂಥ ಮೋಸಗಾರ ಎಂದು ನಮಗೆ ಗೊತ್ತಿತ್ತು. ಹೀಗಾಗಿ ಅವನ ಜತೆ ಯಾವುದೇ ವ್ಯವಹಾರ ಮಾಡುತ್ತಿರಲಿಲ್ಲ ಎಂದು ಪೊಲೀಸರ ಮುಂದೆ ಹಸಿಹಸಿ ಸುಳ್ಳು ಹೇಳಿದರು . ಅವನ ಜತೆ ಕುಂತು ಊಟ ಮಾಡಿದವರು ಅವನ ವಿರುದ್ಧ ಬಾಯಿಗೆ ಬಂದಂತೆ ಮಾತನಾಡತೊಡಗಿದರು. ನೂರಾ ಹನ್ನೊಂದು ದಿನ ಹರ್ಷದ್‌ ಜೈಲಿನಲ್ಲಿದ್ದ. ಒಬ್ಬನೇ ಒಬ್ಬ ಸ್ನೇಹಿತನೂ ಅವನನ್ನು ಕಾಣಲು ಜೈಲಿಗೆ ಹೋಗಲಿಲ್ಲ. ಯಾರಾದರೂ ಬಂದೇ ಬರುತ್ತಾರೆಂದು ಹರ್ಷದ್‌ ಕಾದ. ಕೊನೆ ದಿನದ ತನಕ ಕಾದ. ಯಾರೂ ಬರಲಿಲ್ಲ. ಯಾರನ್ನು ಕೊರಳ ಗೆಳೆಯರೆಂದು ಭಾವಿಸಿದ್ದನೋ ಅವರ್ಯಾರೂ ಅವನ ಹತ್ತಿರ ಸುಳಿಯಲಿಲ್ಲ. ಗೆಳೆತನದ ಬಗ್ಗೆ ಆತ ಕಂಡಿದ್ದ ಕಲ್ಪನೆ, ಭಾವನೆ ಅವನ ಮುಂದೆ ಬಕ್ಕ ಬೋರಲಾಗಿ ಬಿದ್ದಿತ್ತು.

ಈ ಮಾತು ಬಹಳ ಚೆನ್ನಾಗಿ ಅರ್ಥವಾಗುವುದು ಆಗ ತಾನೆ ಅಧಿಕಾರ ಕಳೆದುಕೊಂಡ ರಾಜಕಾರಣಿಗಳಿಗೆ, ಮಂತ್ರಿಗಳಿಗೆ, ಶಾಸಕರಿಗೆ. ಆಗ ತಾನೆ ನಿವೃತ್ತರಾದ ಉನ್ನತ ಅಧಿಕಾರಿಗಳಿಗೆ. ಅಧಿಕಾರ ಇದ್ದಾಗ ಕೈಗೆ, ಕಾಲಿಗೆ ಅಮರಿಕೊಂಡಿರುವ ಸ್ನೇಹಿತರು, ಅದು ಹೋಗುವ ಸಣ್ಣ ಸುಳಿವು ಸಿಕ್ಕ ತಕ್ಷಣವೇ ಗುಳೇ ಹೋಗುವವರಂತೆ ಜಾಗ ಖಾಲಿ ಮಾಡಿರುತ್ತಾರೆ. ಇನ್ನು ಅಧಿಕಾರ ಹೋದ ನಂತರ ಆ ಕಡೆ ಸುಳಿಯುವುದೂ ಇಲ್ಲ.

ಇಂದಿರಾಗಾಂಧಿಯವರಿಗೆ ಈ ಸಂಗತಿ ಚೆನ್ನಾಗಿ ಅರ್ಥವಾಗುವಷ್ಟು ಬೇರೆ ಯಾರಿಗೂ ಅರ್ಥವಾಗುವುದಿಲ್ಲ. ತುರ್ತು ಸ್ಥಿತಿ ನಂತರ ನಡೆದ ಲೋಕಸಭಾ ಚುನಾವಣೆ ಸಂಧರ್ಭ. ಇಂದಿರಾಗಾಂಧಿ ಬಾಗಲಕೋಟೆ, ವಿಜಾಪುರ, ರಾಯಚೂರು ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಕೈಗೊಂಡಿದ್ದರು. ಅಂದು ಇಂದಿರಾ ಹಲವಾರು ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಇನ್ನೂರೈವತ್ತು ಮೈಲು ಕಾರಿನಲ್ಲಿ ಪ್ರಯಾಣ ಮಾಡಿ ಬೆಳಗಿನ ಜಾವ ಮೂರು ಗಂಟೆಗೆ ಬದಾಮಿ ಪ್ರವಾಸಿ ಬಂಗ್ಲೆ(ಐಬಿ)ಗೆ ಬಂದರು. ಬೆಳಗ್ಗೆ ಎಂಟು ಗಂಟೆಯಿಂದ ಭಾಷಣ, ತಿರುಗಾಟ, ಪ್ರಚಾರ ಒತ್ತಡಗಳಿಂದ ಬಳಲಿ ನಿತ್ರಾಣರಾಗಿದ್ದ ಇಂದಿರಾಗೆ ಆ ರಾತ್ರಿ ತಂಗಲು ಒಂದು ಕೋಣೆ ಬೇಕಿತ್ತು. ನಿದ್ದೆ ಎಳೆದುಕೊಂಡು ಹೋಗುತ್ತಿತ್ತು

ಅವರಿಗಾಗಿ ವಿಜಾಪುರದಲ್ಲಿ ರೂಮನ್ನು ಕಾದಿರಿಸಲಾಗಿತ್ತು. ಅಲ್ಲಿಗೆ ಹೋದರೆ ಬೆಳಗಾಗಬಹುದೆಂದು ಬದಾಮಿಗೆ ಹೋದರು. ಇಂದಿರಾಗಾಂಧಿಯ ಕಾರು ಚಾಲಕ ಕೆಳಗಿಳಿದು ಹೋಗಿ ಮೇಟಿಯನ್ನು ಎಬ್ಬಿಸಿದ. ‘ಯಾವ ರೂಮೂ ಖಾಲಿ ಇಲ್ಲ. ಈ ಹೊತ್ತಿನಲ್ಲಿ ರೂಮು ಕೊಡಲು ಆಗುವುದಿಲ್ಲ. ಒಳಗೆ ಡೆಪ್ಯುಟಿ ಕಮಿಷನರ್‌, ಚೀಫ್‌ ಎಂಜಿನಿಯರ್‌ ಮಲಗಿದ್ದಾರೆ’ ಎಂದ ಮೇಟಿ. ಕಾರಿನ ಚಾಲಕ ವಿನೀತನಾಗಿ ಮೇಟಿಯನ್ನು ಅಂಗಲಾಚಿದ. ‘ಕಾರಿನಲ್ಲಿ ಮೇಡಂ ಕುಳಿತಿದ್ದಾರೆ. ಭಾರತದ ಮಾಜಿ ಪ್ರಧಾನಿ ಇಂದಿರಮ್ಮ ಕುಳಿತಿದ್ದಾರೆ. ದಯವಿಟ್ಟು ಅವರಿಗಾಗಿ ಒಂದು ರೂಮು ಕೊಡು’ ಎಂದು ಕಾರು ಚಾಲಕ ಮೇಟಿ ಮುಂದೆ ಗೋಗರೆದ.

‘ಇಂದಿರಾ ಗಾಂಧಿ ಬರಲಿ, ಮಹಾತ್ಮಾ ಗಾಂಧಿ ಬರಲಿ, ಈಗ ನಾನೇನು ಮಾಡಲು ಆಗುತ್ತದೆ. ರೂಮು ಖಾಲಿ ಇಲ್ಲ ಅಂದ್ರೆ ಖಾಲಿ ಇಲ್ಲ. ಇಂಥ ಸಮಯದಲ್ಲಿ ಬಂದರೆ ನಾನೇನು ಮಾಡಲಿ? ಮಲಗಿರುವ ಸಾಹೇಬರನ್ನು ಎಬ್ಬಿಸಲು ಸಾಧ್ಯವೇ ಇಲ್ಲ’ ಎಂದುಬಿಟ್ಟ ಮೇಟಿ.

ಕಾರಿನಲ್ಲಿ ಕುಳಿತಿದ್ದ ಇಂದಿರಾಗೆ ಮೇಟಿಯ ಭಾಷೆ ಅರ್ಥವಾಗದಿದ್ದರೂ ಭಾವನೆ ಥಟ್ಟನೆ ಅರ್ಥವಾಗಿತ್ತು. ಅಧಿಕಾರ ಇಲ್ಲದಿದ್ದಾಗ ಜನರ ನಡತೆಯೇನೆಂಬುದು ಅವರಿಗೆ ಚೆನ್ನಾಗಿ ಅರಿವಾಗಿತ್ತು. ‘ಯಾರಿಗೂ ತೊಂದರೆ ಕೊಡಬೇಡಿ. ಇನ್ನು ಎರಡು ಮೂರು ತಾಸು ಕಳೆದರೆ ಬೆಳಗಾಗುತ್ತದೆ. ಮತ್ತೆ ಹೊರಡಲೇ ಬೇಕಲ್ಲ. ಆದ್ದರಿಂದ ನಾನು ಕಾರಿನಲ್ಲಿಯೇ ಮಲಗುತ್ತೇನೆ. ದಣಿದ ದೇಹಕ್ಕೆ ಮೈತುಂಬಾ ನಿದ್ದೆ. ನನ್ನ ಬಗ್ಗೆ ಯಾರೂ ಚಿಂತಿಸಬೇಕಿಲ್ಲ’ ಎಂದ ಇಂದಿರಾ ಕಣ್ಣಿಗೆ ಸೆರಗನ್ನು ಮುಚ್ಚಿಕೊಂಡು ಕಾರಿನಲ್ಲಿಯೇ ನಿದ್ದೆಗೆ ಜಾರಿಬಿಟ್ಟರು! ಒಬ್ಬ ಕಾನ್‌ಸ್ಟೇಬಲ್‌, ತಹಶೀಲ್ದಾರ್‌, ಮುನಿಸಿಪಾಲಿಟಿ ಅಧ್ಯಕ್ಷ ಬಂದರೆ ದಿಬ್ಬಣದ ಮುಂದೆ ಥೈಥೈ ಕುಣಿಯುವವರಂತೆ ದಡಬಡಿಸುವ ಮೇಟಿ ಅಧಿಕಾರವೇ ಇಲ್ಲದ, ಅದೂ ಒಬ್ಬ ಮಾಜಿ ಪ್ರಧಾನಿಯನ್ನು ಹೊರಗೇ ನಿಲ್ಲಿಸಿದ್ದ. ಅಧಿಕಾರವಿಲ್ಲದ ಮಾಜಿ ಪ್ರಧಾನಿಗಿಂತ ಅಧಿಕಾರದಲ್ಲಿರುವ ಪೊಲೀಸು ಪೇದೆಯೇ ಹೆಚ್ಚು ಎಂಬುದು ಮೇಟಿಯ ಸಿದ್ಧಾಂತ. ಅವನ ಪಾಲಿಗೆ ಅದು ಕರ್ಮಸಿದ್ಧಾಂತವೂ ಹೌದು. ಯಾರ್ಯಾರನ್ನು ಎಲ್ಲಿಡಬೇಕೆಂಬುದು ಮೇಟಿಗಿಂತ ಇನ್ಯಾರಿಗೆ ಚೆನ್ನಾಗಿ ಗೊತ್ತಿರಲು ಸಾಧ್ಯ?

ಆ ರಾತ್ರಿ ಕಾರಿನಲ್ಲಿಯೇ ಅಡ್ಡಾದ ಇಂದಿರಾಗಾಂಧಿಗೆ ಹೇಗಾಗಿರಬೇಡ? ಆಕೆಯ ಜಾಗದಲ್ಲಿ ಎರಡು ಕ್ಷಣ ನಿಂತು ನೋಡಿ. ದೇಶಕ್ಕೆ ದೇಶವನ್ನೇ ಆಳಿದ ಪ್ರಧಾನಿ, ಅಧಿಕಾರ ಕಳೆದುಕೊಂಡು ಬಂದರೆ ಯಕಃಶ್ಚಿತ್‌ ವ್ಯಕ್ತಿಯಂತೆ ಮೇಟಿ ಆಕೆಯನ್ನು ನಿರ್ದಯಿಯಾಗಿ ಹೊರಗೆ ನಿಲ್ಲಿಸಿದ್ದ!

ದೇವರಾಜ ಅರಸೂ ಕೂಡ ಮುಖ್ಯಮಂತ್ರಿ ಪದವಿ ಕಳೆದುಕೊಂಡ ನಂತರ ಅವರು ಉಳಿದುಕೊಂಡ ‘ಬಾಲಬ್ರೂಯಿ’ಯಲ್ಲಿ ಅವರ ಪತ್ನಿ ಚಿಕ್ಕಮ್ಮಣ್ಣಿ ಒಂದು ದೂರವಾಣಿ ಕರೆ ಮಾಡಲು ಹರಸಾಹಸ ಮಾಡಿದ್ದೂ ಸಹ ಇಷ್ಟೇ ಕರುಣಾಜನಕ. ‘ಒಂದು ಫೋನ್‌ ಮಾಡ್ಬೇಕು. ಬೀಗ ತೆಗೀತೀಯಾ’ ಅಂತ ಚಿಕ್ಕಮ್ಮಣ್ಣಿ ಕೇಳಿದರೆ ಸದಾ ಅವರ ಸೇವೆಗೆ ನಿಂತಿರುತ್ತಿದ್ದ ಸೇವಕ ಮುಖ ತಿರುವಿಬಿಟ್ಟ. ಅವನಿಗೆ ಗೋಗರೆದಾಗ ಬೀಗ ಕೊಟ್ಟ. ರಿಸೀವರ್‌ ಎತ್ತಿ ಮಾತಾಡೋಣವೆಂದರೆ ಲೈನು ಡಿಸ್‌ಕನೆಕ್ಟ್‌ ಆಗಿತ್ತು!

ಈ ಸ್ನೇಹ, ನಿಷ್ಠೆಗಳಿಗೂ ವ್ಯವಹಾರ ಎಷ್ಟು ಚೆನ್ನಾಗಿ ಅರ್ಥವಾಗುತ್ತವೆ ನೋಡಿ.

(ಸ್ನೇಹ ಸೇತು: ವಿಜಯ ಕರ್ನಾಟಕ)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more