ಶ್ರಾವಣದಲ್ಲಿ ಸೂರ್ಯಪುತ್ರ ಶನಿಯ ಕೃಪೆ ಶತಸಿದ್ಧ

ಶ್ರಾವಣ ಮಾಸದಲ್ಲಿ ನಿಮ್ಮ ಮನಸ್ಸನ್ನು ಸ್ವಲ್ಪ ದೈವದೆಡೆಗೆ ಒಲಿಯುವಂತೆ ಮಾಡಿಕೊಳ್ಳಿ. ಏಕೆಂದರೆ ಎಷ್ಟೋ ಜನರು ದೇವರಿಗೆ ಹರಕೆ ಹೊತ್ತು, ಏನೇನೋ ಪೂಜೆ, ಪುನಸ್ಕಾರ ಮಾಡಿದರೂ ದೇವರು ಇನ್ನೂ ಕಣ್ತೆರೆದಿಲ್ಲವಲ್ಲ ಎಂದು ದೇವರನ್ನು ಮರೆತೇ ಬಿಡುತ್ತಾರೆ. ಆದರೆ ಇದೇ ನಮ್ಮ ಪರೀಕ್ಷೆ ಸಮಯವೆಂದು ಅರಿತುಕೊಂಡು ಭಕ್ತಿಯನ್ನು ಬಿಡಬಾರದು. ದೇವರು ಕೈ ಹಿಡಿದೇ ಹಿಡಿಯುತ್ತಾನೆ.
ಆದರೆ ನೀವು ಯಾವುದೇ ದುರ್ಬುದ್ಧಿ, ದುಷ್ಟತನ ಉಳ್ಳವರಿರದಿದ್ದರೆ ಮಾತ್ರ. ಇಲ್ಲವಾದರೆ ಎಷ್ಟೇನೇ ದೇವರಲ್ಲಿ ಬೇಡಿಕೊಂಡರೂ ದೇವರಂತು ಕಣ್ತೆರೆಯುವುದಿಲ್ಲ. ಶಿಕ್ಷೆ ನೀಡಲು ಶನಿದೇವನಂತು ಕಾಯುತ್ತಲೇ ಇರುತ್ತಾನೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಒಮ್ಮೆ ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ ಯಾರ‍್ಯಾರಿಗೆ ಏನೇನು ಅನ್ಯಾಯ ಮಾಡಿದ್ದೇನೆ ಎಂಬುದನ್ನು ನೆನಪಿಸಿಕೊಳ್ಳಿ. ಶನಿದೇವನು ನಿಮಗೆ ನೀಡುವ ಫಲ ನಿಮಗೇನೇ ಗೊತ್ತಾಗುತ್ತದೆ ಬೇರೆ ಯಾರೂ ಹೇಳಬೇಕಾಗಿಲ್ಲ.
ಸದ್ಯ ಶನಿದೇವನು ಮೇಷರಾಶಿಯವರಿಗೆ 7ನೇ ಭಾವದಲ್ಲಿ, ಕರ್ಕ ರಾಶಿಯವರಿಗೆ ಅರ್ಧಾಷ್ಟಮನಾಗಿ, ಮಕರ ರಾಶಿಯವರಿಗೆ 10ನೇ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಈ ರಾಶಿಯವರಿಗೆ ಅಷ್ಟೇನು ಕಷ್ಟಗಳು ಬಾರದಿದ್ದರೂ ಸಮಯಾನುಸಾರ ಮಾಡುತ್ತಿರುವ ದೈವಭಕ್ತಿ ಬಿಟ್ಟರೆ ಕೆಟ್ಟೀರೆಂದೇ ಅರ್ಥ.
ಶನಿಯು ಆಯುಷ್ಯ ನೀಡುವವನೂ ಆಗಿರುವುದರಿಂದ ಮೃತ್ಯುಂಜಯ ಜಪ ತಪ್ಪದೇ ಮಾಡಬೇಕು. ಯಾರೇನೇ ಹೇಳಿದರೂ ಮೃತ್ಯುಂಜಯ ಜಪ ಹೇಳುವುದನ್ನು ಬಿಡಬೇಡಿ. ಏಕೆಂದರೆ ಆಯುಷ್ಯ, ಆರೋಗ್ಯ ಬೇಕಾಗಿರುವುದು ನಮಗೆ. ಅದಕ್ಕೆ ನಾವೇ ಜಪ ಹೇಳಬೇಕು. ನಮ್ಮ ಆಯುಷ್ಯವನ್ನು ಹೆಚ್ಚಿಸಲು ಮತ್ತೊಬ್ಬರೇಕೆ ಜಪ ಮಾಡಬೇಕು?
ಇನ್ನು ಸಾಡೇಸಾತಿ ನಡೆಯುತ್ತಿರುವ ರಾಶಿಗಳವರು ಈ ಶ್ರಾವಣ ಮಾಸದಿಂದ ಪ್ರತಿನಿತ್ಯ ಒಂದು ಗಂಟೆಯನ್ನು ಸಾಡೇಸಾತಿ ಪರಿಹಾರಕ್ಕೆಂದೇ ಮೀಸಲಿಡಲು ಆರಂಭಿಸಬೇಕು. ನೀವು ಮೀಸಲಿಟ್ಟಿರುವ ಒಂದು ಗಂಟೆಯಲ್ಲಿ 20 ನಿಮಿಷ ದೈಹಿಕ ವ್ಯಾಯಾಮಕ್ಕಾಗಿ, ಉಳಿದ ಸಮಯವನ್ನು ದೇವರ ಪೂಜೆ ಮತ್ತು ಮಂತ್ರ ಪಠಿಸಲೆಂದು ಉಪಯೋಗಿಸಬೇಕು. ದಿನನಿತ್ಯ ಒಂದು ಗಂಟೆಯನ್ನಾದರೂ ಸಾಡೇಸಾತಿ ಪರಿಹಾರಕ್ಕಾಗಿ ಮೀಸಲಿಡಲಾಗದಿದ್ದರೆ ಜೀವನ ಪರ್ಯಂತ ಕಷ್ಟ ಅನುಭವಿಸಲು ಸಿದ್ಧರಾಗಿರಿ. ದೇಹ ರೋಗದ ಗೂಡಾಗುತ್ತದೆ ಜೇಬಿಗೆ ತೂತು ಬೀಳುತ್ತದೆ. ಯಾರಲ್ಲಿ ಕೇಳಿದರೂ ಒಂದು ನಯಾ ಪೈಸೆ ಸಿಗುವುದಿಲ್ಲ ನಿಮಗೆ.
ಇನ್ನೊಂದು ವಿಷಯ ನೆನಪಿಟ್ಟುಕೊಳ್ಳಬೇಕು. ನಿಮ್ಮ ಕುಟುಂಬದಲ್ಲಿ, ಸ್ನೇಹಿತರ ಬಳಗದಲ್ಲಿ, ನಿಮ್ಮ ಪ್ರೀತಿ ಪಾತ್ರರಲ್ಲಿ ಯಾರಾದರೂ ನಿಮ್ಮ ತರಹ ಸಾಡೇಸಾತಿಯಲ್ಲಿ ಕಷ್ಟ ಅನುಭವಿಸುತ್ತಿರುವುದು ನಿಮಗೆ ಕಂಡು ಬಂದರೆ ಅಂಥಹವರಿಗೆ ನೀವು ಮಾಡುತ್ತಿರುವ ಪರಿಹಾರ ಕ್ರಮ ಹೇಳಿ ಅವರ ಸಂಕಷ್ಟಗಳಿಗೆ ಬೆನ್ನೆಲುಬಾಗಿ ನಿಂತುಕೊಳ್ಳಿ. ನಿಮ್ಮ ಸಂಕಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲುವವರು ನೂರು ಜನ ಮುಂದೆ ನಿಮಗೆ ಸಿಗುತ್ತಾರೆ ಎಂಬುದನ್ನು ಅರಿತುಕೊಳ್ಳಿ.
ಅಂದಂಗೆ ಶಿವನಿರುವುದೇ ಸ್ಮಶಾನದಲ್ಲಿ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೇ. ಅದಕ್ಕೆಂದೇ ಅಕಾಲ ಮೃತ್ಯು ಬಾರದಿರಲೆಂದು ಮೃತ್ಯುಂಜಯ ಜಪ ಮಾಡಬೇಕು. ನಿಮ್ಮ ಜಾತಕ ನಿಮ್ಮ ಜೀವನದ ಬಯೋಡಾಟಾ ಇದ್ದಂಗೆ. ಎಷ್ಟೋ ಜನರಿಗೆ ತಮ್ಮ ಬಯೋಡಾಟಾದ ಅರಿವೆಯೇ ಇರುವುದಿಲ್ಲ. ಅದಕ್ಕೆಂದೇ ಅವರು ಸಾಡೇಸಾತಿಯಲ್ಲಿ ನಡೆಯುತ್ತಿರುವವರನ್ನು ಗೋಳು ಹೊಯ್ದುಕೊಳ್ಳುತ್ತಿರುತ್ತಾರೆ. ಅವರಿಗೆ ಶನಿದೇವನ ಸಾಡೇಸಾತಿ ಶುರುವಾದಾಗ ನೀವೇ ನೋಡಬಹುದು ಅವರನುಭಿಸುವ ಕಷ್ಟ. ಅವರ ಕಷ್ಟ ನೋಡಲಾರದೇ ನೀವೇ ಅನ್ನುತ್ತೀರಿ ನಮ್ಮ ಶತ್ರುಗಳಿಗೂ ಬರಬಾರದಪ್ಪಾ ಈ ತರಹ ಕಷ್ಟ ಎಂದು.
ಇನ್ನು ಹಬ್ಬಗಳ ಸಾಲಿಗೆ ಕಾಲಿಡುತ್ತಿರುವ ಈ ಶ್ರಾವಣ ಸಂಭ್ರಮದ ಮುಂದಿನ ದಿನಗಳಲ್ಲಿ ಮಹಾತ್ಮನ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.
ಶನಿದೇವನ ಕೃಪೆಗೆ : ಶಮೀವೃಕ್ಷ (ಬನ್ನಿಗಿಡ)ಕ್ಕೆ 9 ಪ್ರದಕ್ಷಿಣೆಗಳನ್ನು ಹಾಕಬೇಕು. ಕತ್ತಲಾದ ನಂತರ ಪ್ರದಕ್ಷಿಣೆ ಬೇಡ. ಪ್ರದಕ್ಷಿಣೆ ಮಾಡುವಾಗ ಈ ಕೆಳಗಿನ ಮಂತ್ರ ಪಠಣ ಮಾಡಿ.
"ಶಮೀಶಮಯತೇ ಪಾಪಂ, ಶಮೀ ಶತ್ರು ವಿನಾಶಿನಿ, ಅರ್ಜುನಸ್ಯ ಧನುರ್ಧಾರಿ, ರಾಮಸ್ಯ ಪ್ರಿಯದರ್ಶಿನಿ"
ಸಂಪಾದಕರ ಮಾತು : ಓದುಗರು, ಸಾಡೇಸಾತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರನ್ನು ನೇರವಾಗಿ ಫೋನಾಯಿಸಿ ತಿಳಿದುಕೊಳ್ಳಬಹುದು. (ಲೇಖಕರ ಮೊಬೈಲ್ : 94815 22011).












Click it and Unblock the Notifications