ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅವರದ್ದು ಪಾರ್ಷಿಯಲ್ ಹ್ಯಾಂಗಿಂಗ್ !
ಬೆಂಗಳೂರು, ಡಿಸೆಂಬರ್ 22: ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅವರದ್ದು ಸಂಶಯಾಸ್ಪದ ಸಾವು ಅಲ್ಲ, ಪಾರ್ಷಿಯಲ್ ಆತ್ಮಹತ್ಯೆ !
ಸ್ನೇಹಿತನ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಅವರ ಸಾವಿನ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ವರದಿ ನೀಡಿದ್ದಾರೆ. ಜತೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದ್ದ ಮರಣೋತ್ತರ ಪರೀಕ್ಷೆಯ ವರದಿ ಸಹ ಪೊಲೀಸರಿಗೆ ಸಲ್ಲಿಕೆಯಾಗಿದೆ. ಎರಡೂ ವರದಿಯಲ್ಲಿ ಲಕ್ಷ್ಮೀ ಅವರದ್ದು ಪಾರ್ಷಿಯಲ್ ಹ್ಯಾಂಗಿಂಗ್ ಎಂದು ಉಲ್ಲೇಖಿಸಲಾಗಿದೆ. ಇನ್ನು ಲಕ್ಷ್ಮೀ ಅವರು ಆತ್ಮಹತ್ಯೆ ಮುನ್ನ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತೇ ಎಂಬ ಸಂಶಯ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಿ ವಿಜ್ಙಾನ ಪ್ರಯೋಗಾಲಯದ ಅಧಿಕಾರಿಗಳು ಪರೀಕ್ಷೆ ಮುಂದುವರೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಅಪಾಯಕಾರಿ ಪಾರ್ಷಿಯಲ್ ಹ್ಯಾಂಗಿಂಗ್ : ಸಾಮಾನ್ಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವರು ಫ್ಯಾನಿಗೆ, ಮರಕ್ಕೆ ನೇಣು ಹಾಕಿಕೊಂಡು ದೇಹ ನೇತಾಡಲು ಬಿಡುತ್ತಾರೆ. ಆದರೆ ಕಿಟಕಿಗೆ ನೇಣು ಹಾಕಿಕೊಂಡು ಒಮ್ಮೆ ಕುಸಿದು ಬಿದ್ದರೆ ಮತ್ತೆ ಏಳಲು ಸಾಧ್ಯವಿಲ್ಲ. ಒಂದು ಸಲ ಉಸಿರು ಗಟ್ಟಿದ ಬಳಿಕ ಮೇಲೆ ಏಳಲಿಕ್ಕೆ ಸಾಧ್ಯವಾಗುವುದಿಲ್ಲ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಪಾರ್ಷಿಯಲ್ ಹ್ಯಾಂಗಿಂಗ್ ಅಂತ ಕರೆಯುತ್ತೇವೆ. ಲಕ್ಷ್ಮೀ ಅವರದ್ದು ಪಾರ್ಷಿಯಲ್ ಹ್ಯಾಂಗಿಂಗ್ ಎಂದು ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರ ಮನೋಹರ್ ಅವರ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಲಕ್ಷ್ಮೀ ಕೊಠಡಿಗೆ ಹೋಗಿದ ಬಳಿಕ ಬಾಗಿಲು ತೆರೆದಿರಲಿಲ್ಲ. ಆಪ್ತರು ಹೋಗಿ ನೋಡುವಷ್ಟರಲ್ಲಿ ಕಿಟಕಿಗೆ ನೇಣು ಬಿಗಿದುಕೊಂಡಿದ್ದರು. ಈ ಕುರಿತು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಗುತ್ತಿಗೆದಾರ ಮನೋಹರ್ ಸೇರಿದಂತೆ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಲಕ್ಷ್ಮೀ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ತಂದೆ ವೆಂಕಟೇಶ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ವರದಿ ನೀಡಿದ್ದು, ಲಕ್ಷ್ಮೀ ದೇಹದ ಮೇಲೆ ಕೊಲೆಯಾಗಿರುವ ಬಗ್ಗೆ ಯಾವುದೇ ಕುರುಹುಗಳಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಈ ಪ್ರಕರಣ ಸಂಬಂಧ ವಶಕ್ಕೆ ಪಡೆದಿದ್ದ ಗುತ್ತಿಗೆದಾರ ಮನೋಹರ್ ಮತ್ತು ಇತರರನ್ನು ಬಿಟ್ಟು ಕಳಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ಬಳಿಕ ಪ್ರಕರಣದ ತನಿಖೆ ನಡೆಯಲಿದೆ. ಅಂತೂ ಲಕ್ಷ್ಮೀ ಸಾವಿನ ಬಗ್ಗೆ ಎದ್ದಿದ್ದ ಉಹಾಪೋಗಳಿಗೆ ತೆರೆ ಬಿದ್ದಿದ್ದು ಖಿನ್ನತೆಗೆ ಒಳಗಾಗಿದ್ದ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications