ಚಿಕ್ಕಮಗಳೂರು: ಭಾರಿ ಮಳೆಗೆ ತಾತ್ಕಾಲಿಕ ಸೇತುವೆ ಕುಸಿತ
ಚಿಕ್ಕಮಗಳೂರು, ಜುಲೈ 6: ಭಾನುವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಸೇತುವೆ ಕುಸಿದಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರ ಸಮೀಪದ ಬಂಕೇನಹಳ್ಳಿಯಲ್ಲಿ ನಡೆದಿದೆ.
ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಬಂಕೇನಹಳ್ಳಿ ಕೊಚ್ಚಿ ಹೋಗಿತ್ತು. ಆ ವೇಳೆ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಆದರೆ ಭಾನುವಾರ ಸೇತುವೆ ಕುಸಿದ ಪರಿಣಾಮ ಕೂಡಳ್ಳಿ, ಬಂಕೇನಹಳ್ಳಿ, ಚೇಗು ಮುಂತಾದ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮಳೆಗಾಲದ ಪ್ರಾರಂಭದಲ್ಲೆ ಸೇತುವೆ ಕುಸಿದಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮಸ್ಥ ಬಿ.ಆರ್ ಭರತ್ ಮಾತನಾಡಿ, ಸೇತುವೆ ಕುಸಿದು ವರ್ಷ ಕಳೆದರೂ ನೂತನ ಸೇತುವೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ತಾತ್ಕಾಲಿಕವಾಗಿ ಕಟ್ಟಿದ ಸೇತುವೆಯೂ ಮಳೆಗಾಲದ ಪ್ರಾರಂಭದಲ್ಲೇ ಕುಸಿದಿರುವುದು ತುರ್ತು ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಂಪರ್ಕ ಸಾಧ್ಯವಾಗದಂತಾಗಿದೆ ಎಂದು ಹೇಳಿದರು.

ದಿನನಿತ್ಯ ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು, ಕಾರ್ಮಿಕರು ಜೀವದ ಹಂಗು ತೊರೆದು ಕುಸಿದ ಸೇತುವೆ ದಾಟಿ ಹೋಗಬೇಕಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಮೂಡಿಗೆರೆ ತಹಶೀಲ್ದಾರ್ ಅವರ ಗಮನ ಸೆಳೆದಾಗ ಶೀಘ್ರವಾಗಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದಾರೆ ಎಂದರು.












Click it and Unblock the Notifications