ಗುಂಡ್ಲುಪೇಟೆ: 8 ವರ್ಷಗಳಿಂದ ಪಟಾಕಿ ಹಚ್ಚದ ಈ ಶಾಲೆ ವಿದ್ಯಾರ್ಥಿಗಳು.!, ಕಾರಣ ಏನು ಗೊತ್ತಾ?
ಚಾಮರಾಜನಗರ, ಅಕ್ಟೋಬರ್, 31: ಇದೀಗ ಇಡೀ ದೇಶವೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿದೆ. ಆದರೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಹಾಗೂ ಶಿಕ್ಷಕರು ದೀಪಾವಳಿ ಹಬ್ಬಕ್ಕೆ ಪಟಾಕಿ ಬದಲಿಗೆ ಮಣ್ಣಿನ ಹಣತೆ ಹಚ್ಚುತ್ತೇವೆಂದು ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿಯಲ್ಲಿ ನಡೆದಿದೆ.
ಹೊಂಗಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳು ಪ್ರಾರ್ಥನಾ ಸಮಯದಲ್ಲಿ, ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚದೆ, ನೆಲ ಮಾಲಿನ್ಯ, ಜಲಮಾಲಿನ್ಯ, ಶಬ್ಧ ಮಾಲಿನ್ಯ, ವಾಯುಮಾಲಿನ್ಯ ಮಾಡದೆ, ನಮ್ಮ-ನಮ್ಮ ಮನೆಗಳಲ್ಲಿ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ಹಸಿರು ದೀಪಾವಳಿ, ಪರಿಸರ ಸ್ನೇಹಿ ದೀಪಾವಳಿ, ಸ್ವಚ್ಚ ದೀಪಾವಳಿ, ಸ್ವಾಸ್ಥ್ಯ ದೀಪಾವಳಿ ಆಚರಿಸುವ ಮೂಲಕ ಮನೆ-ಮನಗಳನ್ನು ಬೆಳಗುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ಶಾಲೆಯಲ್ಲಿ 8 ವರ್ಷಗಳಿಂದಲೂ ಮಕ್ಕಳು ಪ್ರತಿ ವರ್ಷ ಇದೆ ರೀತಿ ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಿದ್ದಾರೆ. ಈ ಮೂಲಕ ಇತರರಿಗೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಣ ಖರ್ಚು ಮಾಡಿ ಪರಿಸರಕ್ಕೆ ಹಾನಿ ಮಾಡುವುದಲ್ಲದೆ, ಮಕ್ಕಳು ಅಮೂಲ್ಯವಾದ ಕಣ್ಣು, ಕಿವಿ, ಚರ್ಮ ಇತ್ಯಾದಿ ಅಂಗಹೀನರಾಗಿ ಬದುಕನ್ನೇ ಕತ್ತಲೆ ಮಾಡಿಕೊಂಡು ಅಂಧಕಾರದಲ್ಲಿ ಮುಳುಗಿ ಹೋಗುತ್ತಾರೆ.
ಇದರ ಬಗ್ಗೆ ಶಿಕ್ಷಕರು, ಪೋಷಕರು, ಗಂಭೀರವಾಗಿ ಎಚ್ಚರಿಕೆ ವಹಿಸಿ, ಪಟಾಕಿ ಬಳಸುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು. ಇದಕ್ಕೆ ಬಳಸುವ ಹಣವನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಆಗಬೇಕೆಂದು ತಿಳಿಸಿದರು.












Click it and Unblock the Notifications