ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2015 ವರ್ಷ ಭವಿಷ್ಯ : ವೃಶ್ಚಿಕ ರಾಶಿಗೆ ಗುರುಬಲ

By ನಾಗನೂರಮಠ ಎಸ್.ಎಸ್.
|
Google Oneindia Kannada News

ವಿಶಾಖಾ 4ನೇ ಚರಣ, ಅನುರಾಧಾ ಮತ್ತು ಜ್ಯೇಷ್ಠಾ ನಕ್ಷತ್ರದಲ್ಲಿ ಜನಿಸಿದವರದು ವೃಶ್ಚಿಕ ರಾಶಿ. ತೂ, ನ, ನಿ, ನು, ನೆ, ನೊ, ಯ, ಯಿ, ಯು ಎಂಬಕ್ಷರಗಳಲ್ಲಿ ಈ ರಾಶಿಯವರಿಗೆ ಜನ್ಮನಾಮ ಇಡಬೇಕಾಗುತ್ತದೆ.

ವೃಶ್ಚಿಕ ರಾಶಿಯವರಿಗೆ 2015ನೇ ಹೊಸ ವರ್ಷದ ಮೊದಲಾರ್ಧದವರೆಗೂ ತುಂಬಾ ಶುಭಕರವಿದೆ. ಆಮೇಲೆ ಶುರುವಾಗುತ್ತದೆ ನೋಡಿ ಇತ್ತ ಕಡೆ ಶನಿಕಾಟ, ಅತ್ತಕಡೆ ಗುರುಬಲವಿಲ್ಲದೇ ಒದ್ದಾಟ. ವೃಶ್ಚಿಕ ರಾಶಿಯವರಿಗೆ ಮುಂಬರುವ ಅಶುಭ ಸಮಯ ಈಗಲೇ ಗೊತ್ತಿರುವುದರಿಂದ ಕೂಡಲೇ ಅಲರ್ಟ್ ಆಗಿಬಿಡಬೇಕು. ಇಲ್ಲಾಂದ್ರೆ, ಆಮೇಲೆ ಮಮ್ಮಲ ಮರುಗಬೇಕಾಗುತ್ತದೆ.

ಏಕೆಂದರೆ, ಶನಿ ಸಾಡೇಸಾತಿ ಗೋಚಾರದಲ್ಲಿ ಮೊದಲ ಹಂತವನ್ನು ಮುಗಿಸಿ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಈ ಎರಡನೇ ಹಂತದಲ್ಲಿರುವಾಗಲೇ ಗುರುಬಲವೂ ಕೂಡ ಜುಲೈ ನಂತರ ಹೊರಟು ಹೋಗುತ್ತದೆ. ಕಷ್ಟಗಳೆಂದರೇನು? ನೋವೆಂದರೇನು? ಎಲ್ಲವೂ ಅರಿವಾಗಲಿದೆ.

Yearly horoscope and prediction 2015 for Scorpio

ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ಫಲ : ಇನ್ನು ಜುಲೈವರೆಗೂ ಗುರುಬಲವಿರುವುದರಿಂದ, ದುಡಿಮೆಯಲ್ಲಿ ಹೆಚ್ಚಿನ ಗಳಿಕೆ ಸಿಗುತ್ತದೆ. ಆದ್ದರಿಂದ ಹೆಚ್ಚಿನ ದುಡಿತವನ್ನಾರಂಭಿಸಬೇಕು. ಕುಟುಂಬದವರೊಂದಿಗಿನ ಖುಷಿ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಮದುವೆಯ ಬಂಧನದಲ್ಲಿ ಸಿಲುಕಬೇಕೆನ್ನುವವರಿಗೆ ಬಂಧಿಯಾಗುವ ಯೋಗ ಕೂಡಿ ಬಂದಂಗೆನೆ. ಕೆಲಸಗಾರರಿಗೆ ಹೆಚ್ಚಿನ ರೀತಿಯಲ್ಲಿ ಅಂದರೆ, ಎಂದೂ ಕನಸೂ ಕೂಡ ಕಾಣದಂತಹ ಅವಕಾಶಗಳು ಒದಗಿ ಬರುತ್ತವೆ. ಶ್ರಮಕ್ಕೆ ತಕ್ಕ ಫಲವಿದ್ದೇ ಇದೆ ಎಂಬ ಮಾತು ಸತ್ಯವೆನ್ನುವುದು ಅರ್ಥವಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡುತ್ತಿರುವವರಿಗೆ ಮಾತ್ರ ಈ ಫಲ ಅನ್ವಯಿಸುತ್ತದೆ. ಮೈಗಳ್ಳರಿಗೆ ಕೆಲಸ ಹೇಗೆ ಹೋಯಿತು ಎಂದು ಯೋಚನೆ ಮಾಡಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗುತ್ತದೆ. ಮೈಗಳ್ಳತನದ ಶಿಕ್ಷೆ ಅನುಭವಿಸಲು ರೆಡಿಯಾಗಿರಿ.

ಇನ್ನು ಹಣಕಾಸಿನ ಸ್ಥಿತಿ ಉತ್ತಮವಾಗಿರುವುದರಿಂದ ಚಿಕ್ಕಪುಟ್ಟ ಆಸ್ತಿ-ಪಾಸ್ತಿ ಮಾಡಿಕೊಳ್ಳುವ ಮನಸ್ಸಾಗುತ್ತದೆ. ಇನ್ನು ಕೆಲವರಿಗೆ ವಾಹನಯೋಗ ಬೇರೆ. ಇದೇ ರೀತಿ ಹಲವಾರು ವರ್ಷಗಳಿಂದ ಅಂದುಕೊಂಡಿದ್ದನ್ನು ಸಾಧಿಸಬೇಕು ಎಂದುಕೊಂಡಿರುವವರಿಗೆ ಈ ಮುಂದಿನ ಆರು ತಿಂಗಳು ತುಂಬಾ ಶುಭಕರ. ಆ ನಂತರದ ಆರು ತಿಂಗಳಲ್ಲಿ ಕಷ್ಟ.

ಜುಲೈ ನಂತರ ಗುರುಬಲ ಹೊರಟು ಹೋಗುವುದರಿಂದ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಆದ್ದರಿಂದ ಪ್ರತಿನಿತ್ಯ ವ್ಯಾಯಾಮ ಮಿಸ್ ಮಾಡಬಾರದು. ಹಿರಿಯರ ಅಥವಾ ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ನಿಮಗೆ ಅನ್ಯಾಯವಾಗಿದ್ದರೆ ಅದನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಈಗಲೇ. ಆಮೇಲೆ ಕೋರ್ಟ್ ಗೆ ಅಲೆದಾಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿಪಿ ಏರುವಂತಹ ಯೋಚನೆಗಳನ್ನು ಕಮ್ಮಿ ಮಾಡಿಕೊಳ್ಳಲು ಈಗಿನಿಂದಲೇ ಪ್ರಯತ್ನಿಸಬೇಕು. ಪ್ರಾಣಾಯಾಮ ಮಾಡಲು ಆರಂಭಿಸಬೇಕು.

ಉದ್ಯೋಗದಲ್ಲಿ ಅರಿಯದ ಊರಿಗೆ ಎತ್ತಂಗಡಿಯಾದರೆ ಕೆಲಸ ಮಾಡಲು ರೆಡಿಯಾಗಿರಬೇಕು. ಪರ ಊರಿನಲ್ಲಿ ವಾಸ ಮಾಡಬೇಕಾದರೆ ಬೇಕಾಗುವಂತಹ ಸಾಮಗ್ರಿಗಳನ್ನು ಈಗಿನಿಂದಲೇ ನೋಟ್ ಮಾಡಿಟ್ಟುಕೊಳ್ಳಬೇಕು. ಕೆಲಸಗಾರರು ತಮ್ಮ ಬಾಸ್ ಮಾತೇ ಅಂತಿಮ ಎಂಬುದು ಅರ್ಥ ಮಾಡಿಕೊಳ್ಳಬೇಕು. ಅವರು ಕರ್ರಗಿದ್ದದ್ದನ್ನು ಕೆಂಪು ಅಂದರೆ ಹೂಂ ಎಂದರೆ ಮಾತ್ರ ನಿಮ್ಮ ಬದುಕು. ಮೊದಲೇ ಕೆಲವೊಂದು ಬಾಸ್ಗಳು ಕೋತಿಗೆ ಹೆಂಡ ಕುಡಿಸಿದಂಗೆ ಆಡ್ತಿರ್ತಾರೆ. ಹೀಗಾಗಿ ಅವರ ಪಿತ್ಥ ನೆತ್ತಿಗೇರಿಸದೇ ಜಾಣತನದಿಂದ ವರ್ತಿಸಿ.

ಸಾಧ್ಯವಾದರೆ ನಿಮಗಿಷ್ಟವಾದ ಗುರುಸ್ಥಾನಕ್ಕೆ ಭೇಟಿ ನೀಡಿ ಒಮ್ಮೆ ಅನುಕೂಲವಿದ್ದರೆ. ಗುರುಶಾಂತಿಯಾದಂತಾಗುತ್ತದೆ ಗುರುಬಲವಿಲ್ಲದಾಗ.

ಈಗ ವೃಶ್ಚಿಕ ರಾಶಿಯವರಿಗೆ ಶನಿಯು ಗೋಚಾರದಲ್ಲಿ ಹೊಟ್ಟೆಯಲ್ಲಿಯೇ ಇದ್ದಾನೆ. ಅಂದರೆ ಒಂದನೇ ಮನೆಯಲ್ಲಿ ಇರುವುದರಿಂದ ಶನಿ ಸಾಡೇಸಾತಿಯ ಎರಡನೇ ಹಂತವಿದು. ಈ ಸಮಯದಲ್ಲಿಯೇ ಶುಗರ್, ಬಿಪಿ ಬರುವ ಚಾನ್ಸ್ಸ್ ಜಾಸ್ತಿ. ಆದ್ದರಿಂದ ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ವೇಗದ ನಡಿಗೆ ರೂಢಿಸಿಕೊಳ್ಳಬೇಕು. ದಿನಚರಿ ಪ್ರಕಾರವೇ ದಿನವನ್ನು ಆರಂಭಿಸಬೇಕು. ಸರಿಯಾದ ಸಮಯಕ್ಕೆ ಊಟ, ನಿದ್ರೆ ಮಾಡಬೇಕು. ಇದರಲ್ಲಿ ಹೆಚ್ಚುಕಮ್ಮಿಯಾದರೆ ಆರೋಗ್ಯದಲ್ಲಿ ಆಗುವ ಹೆಚ್ಚುಕಮ್ಮಿಯನ್ನು ತಡೆದುಕೊಳ್ಳುವ ಮಾನಸಿಕ ಸಿದ್ಧತೆ ಮಾಡಿಕೊಳ್ಳಿ.

ದುಡ್ಡಿನ ಬೆಲೆ ತಿಳಿದಿರಲಿ : ಸಾಮಾನ್ಯವಾಗಿ ಈ ಸಮಯದಲ್ಲಿ ನಿರ್ಲಕ್ಷ್ಯತನ ಮತ್ತು ಜೀವನದಲ್ಲಿ ನಿರಾಸಕ್ತಿಯ ಭಾವ ಮೂಡಲಾರಂಭಿಸುತ್ತದೆ. ಇದನ್ನು ತಡೆಗಟ್ಟಲು ಧ್ಯಾನದ ಮೊರೆ ಹೋಗಬೇಕು. ಬೇಕಾಬಿಟ್ಟಿಯಾಗಿ ದುಡ್ಡನ್ನು ಖರ್ಚು ಮಾಡಬಾರದು. ಏಕೆಂದರೆ ಹೋಗಿದ್ದೆಲ್ಲವೂ ಮರಳಿ ಬರುವುದಿಲ್ಲ. ಎಲ್ಲರೂ ದುಡ್ಡು ಖರ್ಚು ಮಾಡುವ ದಾರಿಗಳನ್ನು ಸಾಕಷ್ಟು ಹೇಳುತ್ತಾರೆ. ಖರ್ಚು ಮಾಡಲು ಆಕರ್ಷಿಸುತ್ತಾರೆ ಕೂಡ. ಆದರೆ ದುಡ್ಡು ಬರುವ ದಾರಿಯನ್ನು ಯಾರೂ ಹೇಳೋದಿಲ್ಲ. ಮತ್ತು ದುಡ್ಡಿಲ್ಲದಾಗ ದುಡ್ಡು ಕೊಡಲೂ ಬರುವುದಿಲ್ಲ. ಆದ್ದರಿಂದ ದುಡ್ಡಿನ ಮಹತ್ವ ಅರಿಯುವ ಸಮಯ ನಿಮಗೀಗ ಬಂದಿದೆ ಎಂದೇ ಹೇಳಬಹುದು. ಬಿಡಿಗಾಸು ಕೂಡ ಎಷ್ಟು ಮಹತ್ವದ್ದು ಎಂಬುದು ಈಗ ಅರಿವಾಗುತ್ತದೆ. ಆದ್ದರಿಂದ ಹಣದ ವಿಷಯದಲ್ಲಿ ತುಂಬಾ ಜಾಗರೂಕತೆ ವಹಿಸಿಕೊಳ್ಳಬೇಕು.

ಒಂದು ರೂಪಾಯಿ ಖರ್ಚು ಮಾಡಲೂ ಕೂಡ ಯೋಚಿಸಿಯೇ ಮಾಡಬೇಕು. ಬೇಕಿದ್ದರೆ ಕೇಡು ಬುದ್ಧಿಯವರು ನಿಮ್ಮನ್ನು ಜಿಪುಣ ಶೆಟ್ಟಿ ಅಂದರೂ ಅಡ್ಡಿಯಿಲ್ಲ. ನೀವು ಮಾತ್ರ ಮುತ್ತಿನಂತ ಮಾತು ಖರ್ಚು ಮಾಡಿ ಹೊರತು ಕಾಸು ಖರ್ಚು ಮಾಡಿ ಕೈಖಾಲಿ ಮಾಡಿಕೊಳ್ಳಬೇಡಿ. ಉಳಿತಾಯ ಮಾಡುತ್ತಿದ್ದರೆ ಇನ್ನೂ ಎಷ್ಟು ಉಳಿತಾಯ ಮಾಡಬಹುದೋ ಅಷ್ಟು ಉಳಿಕೆ ಮಾಡಲಾರಂಭಿಸಿ. ಆರೋಗ್ಯದ ವಿಮೆ ಕೂಡಲೇ ಮಾಡಿಸಿಕೊಳ್ಳಿ.

ನಿಮ್ಮವರೆ ನಿಮಗೆ ಈ ಸಮಯದಲ್ಲಿ ಶಶ್ರುಗಳಾಗುವುದರಿಂದ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಿ. ಆದಷ್ಟು ಸಹನೆ, ತಾಳ್ಮೆ ಹೊಂದಿರಿ. ಎಲ್ಲ ಕೆಲಸಗಳಲ್ಲೂ ಅಡೆತಡೆಗಳು ಬರಲಾರಂಭಿಸಿದರೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಹೆಚ್ಚಿನ ಪ್ರಯತ್ನ ಮಾಡಬೇಕು. ಕೆಟ್ಟವರೊಂದಿಗೆ ಅಪ್ಪಿತಪ್ಪಿಯೂ ಕಾಣಿಸಿಕೊಳ್ಳಬೇಡಿ. ಇಲ್ಲಾಂದ್ರೆ ಅವರೊಂದಿಗೆ ನೀವೂ ಕೂಡ ಕಂಬಿ ಎಣಿಸಲು ರೆಡಿಯಾಗಿರಿ.

ದೇಹವನ್ನು ಮನಸೋಇಚ್ಛೆ ದಣಿಸಿ : ಸೋಮಾರಿತನ ಮತ್ತು ಆಲಸ್ಯತನ ಹೆಚ್ಚು ಮಜಾ ಕೊಡುತ್ತದೆ ಎಂದುಕೊಳ್ಳಬೇಡಿ. ದಿನದ ಎಲ್ಲ ಸಮಯದಲ್ಲೂ ಚಟುವಟಿಕೆಯಿಂದಲೇ ಇರಿ. ರಾತ್ರಿ ಬೆನ್ನು ನೆಲಕ್ಕೆ ಹಚ್ಚಿದರೆ ಸಾಕು ನಿದ್ರಾದೇವಿ ಕೂಡಲೇ ಸೆಳೆದುಕೊಳ್ಳಬೇಕು ಅಷ್ಟೊಂದು ಚಟುವಟಿಕೆಗಳಿಂದ ದೇಹವನ್ನು ದಣಿಸಿ.

ಸ್ವಲ್ಪ ಮನಸ್ಸು ಅತ್ತಿತ್ತ ವಾಲಿದರೂ ಅದರ ಬಗ್ಗೆ ಲಕ್ಷ್ಯ ವಹಿಸಬೇಡಿ. ದುಶ್ಚಟಗಳ ದಾಸರಾಗಿರುವ ಸ್ನೇಹಿತರನ್ನು ದೂರವಿಡಿ. ಅವರಿಂದ ಮನಸ್ಸು ಕೆಟ್ಟು ಮನೆಯವರಲ್ಲಿ ಮತ್ತು ನೆರೆಹೊರೆಯವರಲ್ಲಿ ಮಾನ, ಮರ್ಯಾದೆ ಹರಾಜಾಗುವುದನ್ನು ನೀವೇ ತಪ್ಪಿಸಿಕೊಳ್ಳಿ.

ಸಾಡೇಸಾತಿಯ ಉಗ್ರಪ್ರತಾಪ ಏರುತ್ತಲೇ ಹೋಗುತ್ತದೆ. ಅನುಕೂಲವಿದ್ದವರು ಕೂಡಲೇ ಶನಿಶಾಂತಿ ಮಾಡಿಸಿಕೊಳ್ಳಿ.

ಆದರೆ, ರಾಹು-ಕೇತುಗಳ ಗೋಚಾರ ಫಲವು ಸ್ವಲ್ಪ ಲಾಭಕರವಾಗಿದೆ. ಕೆಟ್ಟದರಲ್ಲಿ ಮಕ್ಕಳಿಗೆ ಅಲ್ಪಸ್ವಲ್ಪ ತೊಂದರೆಯಾಗಬಹುದು. ಅವರಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಬಹುದು. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಇನ್ನು ಹೊಸ ಹೊಸ ಯೋಜನೆಗಳಿಂದ ದುಡ್ಡು ಮಾಡಿಕೊಳ್ಳುವ ದಾರಿ ಗೊತ್ತಾಗುವುದರಿಂದ ಅಪರಿಮಿತ ಖುಷಿಯಾಗುತ್ತದೆ. ಕೆಲವು ರಹಸ್ಯ ವಿಚಾರಗಳಿದ್ದರೆ ನಿಮ್ಮಲ್ಲಿಯೇ ಇರಲಿ.

ನಾಲಿಗೆ ಬಿಗಿ ಹಿಡಿಯದೇ ಮಾತನಾಡುವ ಅವಲಕ್ಷಣವನ್ನು ಹೊಂದಿರುವ ಈ ರಾಶಿಯವರು ಮೊದಲು ಮಾತಿನ ಹಿಡಿತವನ್ನು ಹೊಂದಬೇಕು. ಇಲ್ಲವಾದಲ್ಲಿ ಇದರಿಂದ ನಿಮಗೇನೇ ತೊಂದರೆ. ಏನಾಗುತ್ತೋ ನೋಡಕೋಳ್ತಿನಿ ಎನ್ನುವವರಿಗೆ "ಮಾಡಿದವರ ಪಾಪ, ಆಡಿದವರಿಗೆ" ಎಂಬಂತೆ ಜೀವನ ಮಾಡಿಕೊಳ್ಳಬೇಡಿ ಎನ್ನಬೇಕಾಗುತ್ತದೆ.

ಹೊಸ ರುಚಿಯನ್ನು ನೋಡಬೇಕೆನ್ನುವ ಈ ರಾಶಿಯವರು ರೋಗ-ರುಜಿನಗಳ ಭಯವಿದೆ ಎಂಬುದನ್ನು ಅರಿತುಕೊಳ್ಳಬೇಕು. ಧೈರ್ಯವಿದೆಯೆಂದು ಅಶಕ್ತರ ಮೇಲೆ ಶಕ್ತಿ ಪ್ರಯೋಗಿಸಬಾರದು. ಇಲ್ಲಾಂದ್ರೆ ನಿಶ್ಯಕ್ತಿಯಾಗುವಂಗೆ ಶನಿದೇವ ಮಾಡುತ್ತಾನೆ ನೆನಪಿರಲಿ. ಹೆಚ್ಚಾಗಿ ಪ್ರಾಮಾಣಿಕತೆ ತುಂಬಿ ತುಳುಕುವ ಈ ರಾಶಿಯವರು ತಮ್ಮ ಸಿಟ್ಟಿನಿಂದಲೇ ಕೆಲವರಿಗೆ ಉಗ್ರವಾಗಿ ಕಾಣುತ್ತಿರುತ್ತಾರೆ. ಆದ್ದರಿಂದ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.

ಶುಭಕರ ದಿನಗಳು : ಕೆಂಪು, ಗುಲಾಬಿ, ಕೇಸರಿ ಬಣ್ಣದ ವಸ್ತು ಮತ್ತು ವಸ್ತ್ರಗಳನ್ನು ಹೆಚ್ಚಾಗಿ ಬಳಸಬಹುದು. ಮಂಗಳವಾರ ಮತ್ತು ಗುರುವಾರಗಳಂದು ನೀವು ಹೆಚ್ಚಿನ ಖುಷಿಯಲ್ಲಿರುತ್ತೀರಿ. ಈ ದಿನಗಳಲ್ಲಿ ಹೆಚ್ಚಿನ ಕೆಲಸಗಳನ್ನು ಇಟ್ಟುಕೊಳ್ಳಿ. 3, 7, 9 ಲಕ್ಕಿ ನಂಬರ್ಗಳು ಎನ್ನಬಹುದು. 9, 18, 27 ನೇ ತಾರೀಖುಗಳು ನಿಮಗೆ ಶುಭಕರ.

ಕರ್ಕ ಮತ್ತು ಮೀನ ರಾಶಿಯವರೊಂದಿಗೆ ನೀವು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತೀರಾ. ಆದರೆ ಮೇಷ, ಸಿಂಹ, ಧನು ರಾಶಿಯವರೊಂದಿಗೆ ಅಷ್ಟೊಂದು ಆತ್ಮೀಯತೆ ಇರಲ್ಲ. ಇದನ್ನು ಈ ಬಾರಿ ಪರೀಕ್ಷಿಸಿ ನೋಡಿಕೊಳ್ಳಿ ಬೇಕಾದವರು.

ಶಂಭೋಲಿಂಗ ಮತ್ತು ಹನುಮನಾರಾಧನೆ ನಿಮಗೆ ಅತ್ಯಂತ ಖುಷಿ ನೀಡುತ್ತದೆ. ಅದನ್ನೇ ಮುಂದುವರಿಸಿ ಜೀವನಪರ್ಯಂತ ತಪ್ಪಿಸದೇ.

English summary
Yearly horoscope 2015 for Libra zodiac sign. First half of the year is golden time for Scorpios. They can achieve whatever they want by hard work. But, later part is not so fruitful. They have to take all precautionary measures for a healthy life later on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X