ಸಿಂಹ ವರ್ಷ ಭವಿಷ್ಯ : ಖರ್ಚೇ ಹೆಚ್ಚಿನ ಲೆಕ್ಕಾಚಾರ
ಈ ವರೆಗೆ ಹಣಕಾಸಿನ ಸಮಸ್ಯೆ ಅನ್ನೋದು ನಾನು ಅನುಭವಿಸಿಲ್ಲ ಎಂದು ಬೀಗುತ್ತಿದ್ದರೆ, ಹೊಸ ವರ್ಷ ನಿಮಗಂತಲೇ ಪಾಠ ಕಲಿಸಲು ಬರುತ್ತಿದೆ ಎಂಬುದನ್ನು ಮನಗಾಣಬೇಕು. ಇಷ್ಟು ಕಾಲ ನೀವು ಇದ್ದಂತೆ- ನಡೆದುಕೊಂಡಂತೆ ಇರಲು ಸಾಧ್ಯವಿಲ್ಲ. ಒಂದಿಷ್ಟು, ಇಷ್ಟೇನು ಸಾಕಷ್ಟು ತಾಳ್ಮೆಯನ್ನು ರೂಢಿ ಮಾಡಿಕೊಳ್ಳಿ.
ಈ ಹಿಂದಿನಂತೆ ಖರ್ಚು ಮಾಡುವುದನ್ನು ಮೊದಲಿಗೆ ನಿಲ್ಲಿಸಲೇ ಬೇಕು. ಮುಂಚಿನ ರೀತಿಯಲ್ಲಿ ಕೈಯಲ್ಲಿ ಹಣ ಓಡಾಡುವುದಿಲ್ಲ ಎಂಬುದನ್ನು ಅರಿತುಕೊಳ್ಳಿ. ಈ ಮಾತನ್ನು ಗೋಡೆ ಮೇಲೆ ಬರೆದಿಟ್ಟುಕೊಂಡು ಪ್ರತಿ ದಿನ ಓದಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಉಳಿತಾಯ ಮಾಡಲೇಬೇಕು. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಬೀಳಲೇ ಬೇಕು.
ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತದೆ ಎಂಬ ಧೈರ್ಯದ ಮೇಲೆ ಬೇಕೋ ಬೇಡವೋ ವಾಹನ ಖರೀದಿ ಮಾಡಿದರೆ ಅಥವಾ ಮನೆ ಕಟ್ಟಲೋ ಅಥವಾ ಖರೀದಿಗೋ ಸಾಲ ಮಾಡುವುದು ಸುತಾರಾಂ ಬೇಡ. ಇಂಥ ವಿಚಾರದಲ್ಲಿ ಯಾವ ಕಾರಣಕ್ಕೂ ಮೊಂಡಾಟ ಬೇಡ. ಸಾಲ ಮಾಡದಿದ್ದರೆ ಒಳಿತು ಎಂಬುದನ್ನು ಅರಿತುಕೊಳ್ಳಿ.

ನ್ಯಾಯಾಲಯ ಮೆಟ್ಟಿಲು ಏರದಂತೆ ಎಚ್ಚರ ವಹಿಸಿ
ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಲ್ಲಿ ಅಥವಾ ಮಾಡುವ ಆರಂಭದಲ್ಲಿ ಇದ್ದಲ್ಲಿ ಮುಂದೆ ಬಹಳ ಆರ್ಥಿಕ ಸಮಸ್ಯೆಗಳು ಖಚಿತವಾಗಿ ಬರುತ್ತವೆ, ಸಿದ್ಧರಾಗಿ. ಯಾವುದೇ ವಿಧದ ಸಾಂಸಾರಿಕ ಜಗಳ ಇದ್ದಲ್ಲಿ ಅವು ನ್ಯಾಯಾಲಯದ ಮೆಟ್ಟಿಲು ಏರದಂತೆ ಎಚ್ಚರ ವಹಿಸಿ. ಅಕಸ್ಮಾತ್ ಹಾಗಾದಲ್ಲಿ ವರ್ಷ ಪೂರ್ತಿ ನ್ಯಾಯಾಲಯದ ಸುತ್ತಾಟ ಮುಗಿಯದ ಕಥೆ ಆಗುತ್ತದೆ.

ಅಲ್ಪತೃಪ್ತಿಯೇ ಉತ್ತಮ
ಅಲ್ಪತೃಪ್ತಿ ಉತ್ತಮ ಫಲ ನೀಡುತ್ತದೆ. ಮೌನ ಹಾಗೂ ಶಾಂತ ಗುಣ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತವೆ. ಅತ್ಯಂತ ಪ್ರಮುಖ ವಿಚಾರ ಅಂದರೆ, ವ್ಯಾಪಾರಿಗಳು ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಈ ವರ್ಷ ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಹೂಡಿಕೆ ಪ್ರಮಾಣ ಕಡಿಮೆ ಮಾಡಿಬಿಡಿ ಅಥವಾ ಸಾಧ್ಯ ಆದರೆ ನಿಲ್ಲಿಸಿಬಿಡಿ. ಸಾಲ ಮಾಡಿ ಹೂಡಿಕೆ ಮಾಡುವುದು ನಿಮ್ಮ ಕುಟುಂಬಕ್ಕೆ ಮಾಡುವ ದೊಡ್ಡ ದ್ರೋಹ ಆಗಿಬಿಡುತ್ತದೆ, ನೆನಪಿರಲಿ.

ವಿವಾಹೇತರ ಸಂಬಂಧ ಇದ್ದಲ್ಲಿ ಎಚ್ಚರ
ವಿವಾಹೇತರ ಸಂಬಂಧಗಳು ಇಟ್ಟುಕೊಂಡಿದ್ದಲ್ಲಿ ಅವು ತಕ್ಷಣ ನಿಲ್ಲಿಸಿ. ಇಲ್ಲದಿದ್ದಲ್ಲಿ ಕುತ್ತಿಗೆಗೆ ಬರುತ್ತದೆ. ಇನ್ನು ಅಂಥ ವಿಚಾರಗಳಲ್ಲಿ ಸಿಲುಕಿ ಹೊರಬರಲು ಅಗದೇ ಇದ್ದಲ್ಲಿ ಸ್ತ್ರೀಯರಿಗೆ- ಪುರುಷರಿಗೆ ವಿಭಿನ್ನವಾದ ಪ್ರಾಯಶ್ಚಿತ್ತ ಪರಿಹಾರಗಳಿವೆ. ಅವುಗಳನ್ನು ಮಾಡಿಸಿಕೊಂಡು ಆ ಮನಸ್ಥಿತಿಯಿಂದ ಹೊರಬನ್ನಿ.

ಪಂಚಮ ಶನಿಯ ಪ್ರಭಾವ
ಪಂಚಮದ ಶನಿಯ ಪ್ರಭಾವವನ್ನು ಅನುಭವಿಸುತ್ತೀರಿ ಆದ್ದರಿಂದ ಪಾಪ ಕರ್ಮಗಳ ಕಡೆಗೆ ಮನಸ್ಸು ಹೋಗದಂತೆ ಎಚ್ಚರ ವಹಿಸಿ. ಇನ್ನು ಹನ್ನೆರಡನೇ ಮನೆಯಲ್ಲಿರುವ ರಾಹು ಅಪಾರವಾದ ಖರ್ಚನ್ನು ತರುತ್ತದೆ. ಜತೆಗೆ ತೃತೀಯದಲ್ಲಿರುವ ಗುರು ಕೂಡ ಸೋದರ ಸಂಬಂಧದಲ್ಲಿ ಖರ್ಚನ್ನು ತೋರಿಸುತ್ತಿದೆ.

ಮದುವೆ ಪ್ರಯತ್ನ ಸಫಲ ಆಗೋದು ಕಷ್ಟ
ಮದುವೆಗಾಗಿ ಬಾಳ ಸಂಗಾತಿಯ ಅನ್ವೇಷಣೆಯಲ್ಲಿ ಇರುವವರು ಅದರ ಸಫಲತೆ ಕಾಣುವ ಸಾಧ್ಯತೆ ಕಡಿಮೆ. ಅದರಿಂದ ಇನ್ನಷ್ಟು ಒತ್ತಡ ಹಾಗೂ ಖರ್ಚು ಆಗುತ್ತವೆ ವಿನಾ ಯಾವುದೇ ಫಲಿತಾಂಶ ಸಿಗುವುದಿಲ್ಲ. ಪ್ರೇಮಿಗಳ ಮಧ್ಯೆ ಜಗಳ ಆಗದಂತೆ ಭಿನ್ನಾಭಿಪ್ರಾಯಗಳು ತಲೆದೋರದಂತೆ ಎಚ್ಚರ ವಹಿಸಿ.

ಏಕಾಗ್ರತೆ ಕಷ್ಟ
ವಿದ್ಯಾರ್ಥಿಗಳು ಏಕಾಗ್ರತೆ ಸಾಧಿಸಲು ಶ್ರಮ ವಹಿಸಬೇಕಾಗುತ್ತದೆ. ನಿಮಗಿಂತ ಸೋದರ- ಸೋದರಿಗೆ ಪೋಷಕರು ಹೆಚ್ಚಿನ ಪ್ರಾಮುಖ್ಯ ನೀಡುತ್ತಾರೆ ಎಂದು ಕೋಪಗೊಳ್ಳುತ್ತೀರಿ. ಅಥವಾ ಅಂಥ ಅನುಮಾನದಿಂದ ತಂದೆ-ತಾಯಿಯ ಜತೆಗೆ ಜಗಳ ಮಾಡುವುದಕ್ಕೆ ಹೋಗದಿರಿ. ಯಾವುದೇ ವಿಚಾರ ಆದರೂ ಒಂದಕ್ಕೆ ಎರಡು ಸಲ ಯೋಚನೆ ಮಾಡಿ, ಮಾತನಾಡಿ.

ಶಾಂತಿ-ಪರಿಹಾರ ಏನು?
ಕೃಸರಾನ್ನ ದ್ರವ್ಯ ಹಾಗೂ ಶಮೀ ಸಮಿಧದಲ್ಲಿ ಶನಿ ಶಾಂತಿ ಹವನ ಮಾಡಿಸಬೇಕು. ಅದರ ಜೊತೆಯಲ್ಲಿ ಏಕಾದಶ ರುದ್ರ ಆರಾಧನೆ (ಆಜ್ಯ ಯುಕ್ತ ತಿಲವ್ರೀಹಿ ದ್ರವ್ಯದಲ್ಲಿ ಹವನ ಸಹಿತ) ಮಾಡಿಸಿ. ಇನ್ನು ನೀವು ಕೈಯಲ್ಲಿ ನೀಲಿ ಪುಷ್ಯ ರಾಗ ರತ್ನ ಧರಿಸಿದ್ದರೆ ಅದನ್ನು ಮೊದಲು ತೆಗೆಯಬೇಕು. ಬೆಳ್ಳಿಯಲ್ಲಿ ಬಾಧ ನಿವಾರಕ ರಕ್ಷಾ ಯಂತ್ರವನ್ನು ಶಾಸ್ತ್ರೋಕ್ತವಾಗಿ ರಚಿಸಿ, ಅಭಿಮಂತ್ರಿಸಿ, ಮನೆಯಲ್ಲಿ ಇಟ್ಟು ನಿತ್ಯ ಪೂಜಿಸಿದರೆ ಉತ್ತಮ.











Click it and Unblock the Notifications