ವಿಳಂಬಿ ಸಂವತ್ಸರದಲ್ಲಿ ವೃಷಭ ರಾಶಿಯವರು ಹುಷಾರು, ಹುಷಾರು
Recommended Video

ವೃಷಭ ರಾಶಿಯವರಿಗೆ ಆ ದೇವರು ಒಳಿತು ಮಾಡಲಿ ಎಂದು ಹಾರೈಸುತ್ತಾ ವಿಳಂಬಿ ನಾಮ ಸಂವತ್ಸರದ ಫಲವನ್ನು ಹೇಳುವ ಲೇಖನ ಇಲ್ಲಿ ಕೊಡಲಾಗುತ್ತಿದೆ. ಕೃತ್ತಿಕಾ ನಕ್ಷತ್ರದ ಎರಡು, ಮೂರು ಹಾಗೂ ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ನಾಲ್ಕು ಪಾದ ಹಾಗೂ ಮೃಗಶಿರಾ ನಕ್ಷತ್ರದ ಒಂದು ಮತ್ತು ಎರಡನೇ ಪಾದ ಸೇರಿ ವೃಷಭ ರಾಶಿ ಆಗುತ್ತದೆ. ನಿಮ್ಮ ರಾಶ್ಯಾಧಿಪತಿ ಶುಕ್ರ.
ಈಗಾಗಲೇ ನೀವು ವರ್ಷ ಭವಿಷ್ಯವನ್ನು ಓದಿದ್ದೀರಿ ಅಂದರೂ ಮತ್ತೊಮ್ಮೆ ನೆನಪಿಸುತ್ತಿದ್ದೇನೆ. ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ಶನಿ ಇದೆ. ಆರನೇ ಮನೆಯಲ್ಲಿ ಗುರು ಇದೆ. ಈ ಸಂವತ್ಸರದ ಪೂರ್ತಿಯಾಗಿ ಶನಿ ಅದೇ ಸ್ಥಾನದಲ್ಲಿರುವುದರಿಂದ ಆ ಗ್ರಹದಿಂದ ಯಾವುದೇ ಶುಭ ಫಲ ನಿರೀಕ್ಷಿಸುವಂತಿಲ್ಲ.
ಆದರೆ, ಅಕ್ಟೋಬರ್ ನಲ್ಲಿ ಗುರು ಗ್ರಹವು ಏಳನೇ ಮನೆಯನ್ನು ಪ್ರವೇಶ ಮಾಡುತ್ತದೆ. ಆದ್ದರಿಂದ ಸ್ವಲ್ಪ ಮಟ್ಟಿಗೆ ನಿರಾಳ ಹಾಗೂ ತೀರಾ ಅಂತಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ಶುಭ ಫಲಗಳ ನಿರೀಕ್ಷೆ ಮಾಡಬಹುದು. ಇದು ಗೋಚಾರದ ವಿಚಾರ ಆಯಿತು. ಈಗ ಯುಗಾದಿಯ ಫಲಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಮುಂದೆ ಓದಿ.

ಖರ್ಚನ್ನೇ ಸೂಚಿಸುತ್ತಿವೆ ಯುಗಾದಿ ಫಲ
ಆದಾಯ 2 ಆದರೆ ವ್ಯಯ 8 ಇರುತ್ತದೆ. ಗೌರವ-ಮರ್ಯಾದೆ 6 ಇದ್ದರೆ, ಅವಮಾನ 4 ಎಂದು ಸಂಖ್ಯೆಯ ಮೂಲಕ ಸೂಚಿಸಲಾಗಿದೆ. ಇದರರ್ಥ ಗೋಚಾರದಲ್ಲಿನ ಎಂಟನೇ ಮನೆ ಶನಿ, ಆರನೇ ಮನೆಯಲ್ಲಿರುವ ಗುರು ಹಾಗೂ ಯುಗಾದಿಯಲ್ಲಿ ಸೂಚಿಸಿರುವ ಫಲ ಎಲ್ಲವೂ ಖರ್ಚನ್ನೇ ಸೂಚಿಸುತ್ತಿವೆ. ಜತೆಗೆ ಕೆಲವು ಕಡೆ ಅವಮಾನ ಎದುರಿಸಬೇಕಾಗುತ್ತದೆ.

ಆಹಾರ ಪಥ್ಯ ನಿರ್ಲಕ್ಷಿಸಬೇಡಿ, ಬಾಯಿ ರುಚಿಯ ಹಿಂದೆ ಬೀಳಬೇಡಿ
ಈ ಸಂವತ್ಸರ ಮಿಶ್ರ ಫಲಗಳು ಕಾಣುತ್ತಿವೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಿ. ಬಾಯಿ ರುಚಿಯ ಹಿಂದೆ ಬೀಳಬೇಡಿ. ಆಹಾರ ಪಥ್ಯ ನಿರ್ಲಕ್ಷಿಸಬೇಡಿ. ನಾನು ಹೇಳಿದ ಒಳ್ಳೆ ಮಾತನ್ನು ಯಾರೂ ಕೇಳುತ್ತಿಲ್ಲ ಎಂಬ ಬೇಸರ ಬೇಡ. ದೊಡ್ಡ ಮೊತ್ತದ ಹೂಡಿಕೆ ಬೇಡ. ಹೆಚ್ಚಿನ ಬಡ್ಡಿ ಕೊಡ್ತಾರೆ ಎಂಬ ಆಸೆಗೆ ಯಾರಿಗೂ ಹಣ ಕೊಡಬೇಡಿ.

ಕುಟುಂಬ ಸದಸ್ಯರಿಂದಲೇ ವ್ಯತಿರಿಕ್ತ ಉತ್ತರ
ಇನ್ನು ನೀವು ದಪ್ಪ ಇದ್ದೀರಿ ಎಂದು ಯಾರೋ ಹೇಳಿದರು ಅಥವಾ ಎಲ್ಲ ಹೇಳುತ್ತಿದ್ದಾರೆ ಎಂಬ ಕಾರಣಕ್ಕೆ ಏಕ್ದಂ ಸಣ್ಣ ಆಗುವ ಪ್ರಯತ್ನ ಮಾಡಬೇಡಿ. ಸರಕಾರಿ ಕೆಲಸಗಳು ಆಗಬೇಕಿದ್ದಲ್ಲಿ ನೀವೇ ತಗ್ಗಿ ನಡೆದರೆ ಕೈಗೂಡುತ್ತದೆ. ಇನ್ನು ನಿಮ್ಮ ಪರವಾಗಿ ಮಾತನಾಡುತ್ತಿದ್ದ ಮನೆಯ ಹಿರಿಯರು ವಿರುದ್ಧವಾಗಿ ಅಥವಾ ವ್ಯತಿರಿಕ್ತ ಮಾತು ಆಡುತ್ತಾರೆ ಎಂಬ ಕಾರಣಕ್ಕೆ ನಿರಾಶರಾಗಬೇಡಿ. ವರ್ಷಾಂತ್ಯಕ್ಕೆ ಇದು ಸರಿ ಹೋಗುತ್ತದೆ.

ರಾಜೀನಾಮೆ ಕೊಟ್ಟು ಕೆಲಸ ಹುಡುಕುವ ಪ್ರಯತ್ನ ಬೇಡ
ಉದ್ಯೋಗದಲ್ಲೇನೋ ಸಮಸ್ಯೆ ಆಗ್ತಿದೆ ಅಂತ ಕೆಲಸ ಬಿಡುವ ಆಲೋಚನೆ ಬೇಡ. ಈ ಸಂವತ್ಸರದಲ್ಲಿ ಆರೋಗ್ಯ ಹೆಚ್ಚು ಕೈ ಕೊಟ್ಟು, ರಜಾ ಹಾಕಬೇಕಾದ ಸನ್ನಿವೇಶ ಎದುರಾಗುತ್ತದೆ. ಆದ್ದರಿಂದ ಅನಗತ್ಯ ಕಾರಣಗಳಿಗೆ- ಸುಖಾಸುಮ್ಮನೆ ರಜಾ ಹಾಕಬೇಡಿ. ರಾಜೀನಾಮೆ ಕೊಟ್ಟು ಕೆಲಸ ಹುಡುಕುವ ಪ್ರಯತ್ನ ಬೇಡ. ವಿದೇಶದ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಅಥವಾ ಅಗತ್ಯ ಸನ್ನಿವೇಶ ಸೃಷ್ಟಿಯಾದರೆ ತುಂಬ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.












Click it and Unblock the Notifications