• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಆರು ರಾಶಿಯವರು ಕಡ್ಡಾಯವಾಗಿ ಓದಲೇಬೇಕಾದ ಶನಿ ಸಂಚಾರದ ಫಲ

By ಶಂಕರ್ ಭಟ್
|
   ಡಿಕೆಶಿಗೆ ಕೆಪಿಸಿಸಿ ಯೋಗ, ಹೈಕಮಾಂಡ್ ಎದುರು ಸಿದ್ದು ಹೊಸರಾಗ! | DK SHIVAKUMAR | KPCC | CONGRESS | CENTRAL

   ಕೆಲವೊಮ್ಮೆ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತದೆ. ಅಥವಾ ಯಾವುದು ಚಿನ್ನವೋ ಅದು ನಮ್ಮ ಕಣ್ಣಂದಾಜಿಗೆ ಸಿಕ್ಕಿಹೋಗುತ್ತದೆ. ಆಗ ಚಿನ್ನವನ್ನೇ ಹುಡುಕಿಕೊಂಡು ಹೋಗಿ ಮುಟ್ಟಬಹುದು. ಗ್ರಹಗತಿ ಸರಿಯಿಲ್ಲದಿದ್ದಾಗ ನಮ್ಮ ಮುಂದಿರುವವರಿಗೆ ಸಿಗಬೇಕಾದದ್ದು ದೊರೆತು, ನಾವು ಖಾಲಿ ಕೈಯಲ್ಲಿ ವಾಪಸ್ ಆಗಬೇಕಾಗುತ್ತದೆ.

   ಯಾಕೆ ಇದೆಲ್ಲ ಹೇಳಬೇಕಾಯಿತು ಅಂದರೆ ಈ ತಿಂಗಳ ಇಪ್ಪತ್ನಾಲ್ಕನೇ ತಾರೀಕು ಶನಿ ಗ್ರಹವು ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಆಗುತ್ತದೆ. ಈ ಪ್ರವೇಶದ ನಂತರ ಯಾವ ರಾಶಿಗೆ ಏನು ಫಲ ಎಂದು ಈಗಾಗಲೇ ತಿಳಿಸಿಯಾಗಿದೆ. ಆದರೆ ನಿರ್ದಿಷ್ಟವಾಗಿ ಆರು ರಾಶಿಯವರಿಗೆ ಎಚ್ಚರಿಕೆ ಮಾತುಗಳನ್ನು ಹೇಳಬೇಕಾಗಿದೆ.

   ಆದ್ದರಿಂದಲೇ ಈ ಲೇಖನವನ್ನು ಓದುತ್ತಿದ್ದೀರಿ. ಶನಿಯು ಸಾಡೇ ಸಾತ್ (ಏಳೂವರೆ ವರ್ಷದ ಹನ್ನೆರಡನೇ ಮನೆ, ಜನ್ಮ ಸ್ಥಾನ ಮತ್ತು ಎರಡನೇ ಮನೆ ಸಂಚಾರ) ವೇಳೆಯಲ್ಲಿ ಮಾತ್ರವಲ್ಲ್, ಅಷ್ಟಮ ಸ್ಥಾನ, ಪಂಚಮ ಸ್ಥಾನ ಹಾಗೂ ಅರ್ಧಾಷ್ಟಮದಲ್ಲೂ ಕೆಲವು ತೊಂದರೆ, ವಿಪತ್ತುಗಳನ್ನು ತರುತ್ತಾನೆ. ಆದ್ದರಿಂದ ಈ ಆರು ರಾಶಿಯವರು ಕನಿಷ್ಠ ಇನ್ನು ಎರಡು- ಎರಡೂವರೆ ವರ್ಷ ಎಚ್ಚರಿಕೆಯಿಂದ ಇರಬೇಕು.

   ಮಿಥುನ ರಾಶಿ- ಎರಡೂವರೆ ವರ್ಷ

   ಕನ್ಯಾ ರಾಶಿ- ಎರಡೂವರೆ ವರ್ಷ

   ತುಲಾ ರಾಶಿ- ಐದು ವರ್ಷ

   ಧನುಸ್ಸು ರಾಶಿ- ಎರಡೂವರೆ ವರ್ಷ

   ಮಕರ ರಾಶಿ- ಐದು ವರ್ಷ

   ಕುಂಭ ರಾಶಿ- ಏಳೂವರೆ ವರ್ಷ

   -ಹೀಗೆ ಮಿಥುನ, ಕನ್ಯಾ, ತುಲಾ ಧನುಸ್ಸು, ಮಕರ, ಕುಂಭ ರಾಶಿಯವರು ಬಹಳ ಎ‌ಚ್ಚರಿಕೆಯಿಂದ ಇರಬೇಕು.

   ಮಿಥುನ

   ಮಿಥುನ

   ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಅನಾರೋಗ್ಯ, ಅಪಘಾತ, ಅಪಮೃತ್ಯು (ಜಾತಕದಲ್ಲಿ ಶನಿಯ ಕ್ರೂರ ದೃಷ್ಟಿ ಇದ್ದಲ್ಲಿ), ಮರಣಕ್ಕೆ ಸಮಾನವಾದ ಅಪಮಾನ, ಉದ್ಯೋಗ ಕಳೆದುಕೊಳ್ಳುವುದು, ವ್ಯಾಪಾರದಲ್ಲಿ ನಷ್ಟ, ಸಾಲ ನೀಡಿದ್ದ ಹಣ ವಾಪಸ್ ಬಾರದಿರುವುದು, ಮತ್ತೊಬ್ಬರ ಸಲುವಾಗಿ ಜಾಮೀನು ನಿಂತು ಹಣವನ್ನು ಕಟ್ಟಿಕೊಡಬೇಕಾದ ಸನ್ನಿವೇಶ ಮೊದಲಾದವು ಉದ್ಭವಿಸುತ್ತದೆ. ಸಾಲ ಪಡೆದುಕೊಂಡಾದರೂ ಮನೆ ಕಟ್ಟಬೇಕು, ದೊಡ್ಡ ಮಟ್ಟದ ವ್ಯಾಪಾರ ಶುರು ಮಾಡಬೇಕು ಮೊದಲಾದ ಆಲೋಚನೆಗಳು ಬಂದ ತಕ್ಷಣ ಜಾರಿಗೆ ತರಲು ಹೊರಡಬೇಡಿ. ಸಾಲ ಸಿಗುತ್ತಿದೆ ಎಂಬ ಕಾರಣಕ್ಕೆ ತೆಗೆದುಕೊಳ್ಳಬೇಕು ಅಂತೇನಿಲ್ಲ. ಹಾಗೆ ಪಡೆದರೆ ಅವಮಾನದ ಪಾಲಾಗುತ್ತೀರಿ. ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡು ಅದಕ್ಕೆ ಕಾರಣ ಏನು, ಪರಿಹಾರ ಏನು ಎಂಬುದು ಗೊತ್ತೇ ಆಗದ ಸಾಧ್ಯತೆಯೂ ಇರುತ್ತದೆ. ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತವೆ. ಯಾರ ಮೇಲೂ ಮತ್ಸರ ಸಾಧಿಸಬೇಡಿ. ಎರಡೂವರೆ ವರ್ಷ ಪೂರ್ತಿಯಾಗಿ ಇದೇ ಸ್ಥಿತಿ ಇರುವುದಿಲ್ಲ. ಆದರೆ ಏರಿಳಿತಗಳು ನಿಶ್ಚಿತವಾಗಿ ಇರುತ್ತದೆ. ಈ ಮೇಲೆ ತಿಳಿಸಿದ ವಿವಿಧ ಬಗೆಯ ಸಮಸ್ಯೆಗಳು ಇರುತ್ತವೆ. ದುಡ್ಡು ಕಾಸಿನ ಸಮಸ್ಯೆ, ಅರೋಗ್ಯದ ಬಗ್ಗೆ ಎಷ್ಟು ಸಾಧ್ಯವೋ ಅಷ್ಟೂ ಎಚ್ಚರಿಕೆ ತೆಗೆದುಕೊಳ್ಳಿ.

   ಪರಿಹಾರ: ದಶರಥ ರಚಿಸಿದ ಶನೈಶ್ಚರ ಸ್ತೋತ್ರವನ್ನು ಪಠಿಸಿ

   ಕನ್ಯಾ

   ಕನ್ಯಾ

   ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಗರ್ಭಿಣಿಯರು ಬಹಳ ಎಚ್ಚರಿಕೆಯಿಂದ ಇರಬೇಕು. ಸಂತಾನ ಅಪೇಕ್ಷಿತರಾಗಿ ಪ್ರಯತ್ನ ಮಾಡುತ್ತಿರುವವರು ಸೂಕ್ತ ಪೂಜೆ- ಪುನಸ್ಕಾರ ಮಾಡಿಸಿ. ನಿಮ್ಮ ಈ ಹಿಂದಿನ ಕರ್ಮದ ಫಲವನ್ನು ಈಗ ಅನುಭವಿಸುತ್ತೀರಿ. ಒಳ್ಳೆ ಕರ್ಮಗಳ ಫಲ ಅಲ್ಲ. ಈ ಹಿಂದೆ ನೀವು ಮಾಡಿದ ಪಾಪ ಕರ್ಮಗಳ ಫಲವನ್ನು ಅನುಭವಿಸಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳಿಂದ ವಿಪರೀತ ಕಿರಿಕಿರಿ ಆಗುತ್ತದೆ. ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ, ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಹಿತ ಶತ್ರುಗಳ ಕಾಟ ಇದೆ. ವ್ಯಾಪಾರ - ವ್ಯವಹಾರ ವಿಸ್ತರಣೆಗೆ ಪ್ರಯತ್ನ ಬೇಡ. ಯಾರನ್ನೂ ಸುಮ್ಮಸುಮ್ಮನೆ ನಂಬಿ, ಮೋಸ ಹೋಗಬೇಡಿ. ಹೊಟ್ಟೆ, ಅನ್ನನಾಳ, ಜೀರ್ಣಾಂಗ, ಜಠರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈಗಾಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಅನುಭವಿಸುತ್ತಿರುವವರು ಸೂಕ್ತ ಚಿಕಿತ್ಸೆ, ಔಷಧೋಪಚಾರ ಪಡೆದುಕೊಳ್ಳಿ. ಅಂದಹಾಗೆ ಔಷಧೋಪಚಾರ ಪಡೆದುಕೊಳ್ಳುವಾಗಲೂ ಮಾತ್ರೆಗಳ ಎಕ್ಸ್ ಪೈರಿ ದಿನಾಂಕಗಳ ಬಗ್ಗೆ ಗಮನ ಇರಲಿ. ಹೆಣ್ಣುಮಕ್ಕಳು ಸೌಂದರ್ಯವರ್ಧಕಗಳನ್ನು ಬಳಸುವಾಗ ಎಚ್ಚರವಾಗಿರಿ. ಈ ಅವಧಿಯಲ್ಲಿ ಆಗುವ ಅಲರ್ಜಿ ಪರಿಣಾಮವನ್ನು ಜೀವಮಾನವಿಡೀ ಅನುಭವಿಸಬೇಕಾಗುತ್ತದೆ. ಯಾರ ಮುಲಾಜಿಗೂ ಬಿದ್ದು, ಹಣಕಾಸು ವಿಚಾರಕ್ಕೆ ಶಿಫಾರಸು ಮಾಡಿ ಚೀಟಿ ಹಾಕಿಸಬೇಡಿ. ಸಾಲ ಕೊಡಿಸಬೇಡಿ. ಮುಖ್ಯವಾಗಿ ಮಗ- ಮಗಳ ಸ್ನೇಹಿತರ- ಸಂಬಂಧಿಕರು ಎಂಬ ಕಾರಣಕ್ಕೆ ಸಾಲ ಕೊಡಿಸುವುದು ಬೇಡ.

   ಪರಿಹಾರ: ಪ್ರತಿ ತಿಂಗಳ ಒಂದು ಮಂಗಳವಾರ ನರಸಿಂಹ ದೇವರಿಗೆ ಅಭಿಷೇಕ ಮಾಡಿಸಿ.

   ತುಲಾ

   ತುಲಾ

   ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಇದಕ್ಕೆ ಜ್ಯೋತಿಷ್ಯದಲ್ಲಿ ಅರ್ಧಾಷ್ಟಮ ಎನ್ನುತ್ತಾರೆ. ಅಂದರೆ ಎಂಟನೇ ಮನೆಯಲ್ಲಿ ಶನಿ ಸಂಚಾರ ಮಾಡುವಾಗ ನೀಡುವ ಫಲದ ಅರ್ಧದಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮಾತು ಬಿರುಸಾಗುತ್ತದೆ. ಸಿಡುಕು- ಸಿಟ್ಟು ಹೆಚ್ಚಾಗುತ್ತದೆ. ಆಪ್ತರ ಬಗ್ಗೆಯೇ ಅನುಮಾನ ಜಾಸ್ತಿ ಆಗುತ್ತದೆ. ನಿಮ್ಮ ಮೂಲ ಸ್ವಭಾವ ಹಾಗಲ್ಲ ಅಂತ ಹೇಳಿದರೂ ಅಹಂಕಾರ ತಲೆಗೆ ಏರುತ್ತದೆ. ಇದರಿಂದ ಅವಮಾನದ ಪಾಲಾಗುತ್ತೀರಿ. ಯಾರು ನಿಮ್ಮನ್ನು ಗೌರವದಿಂದ ನೋಡುತ್ತಿದ್ದರೋ ಅವರಲ್ಲಿ ನಿಮ್ಮ ಬಗ್ಗೆ ಅಸಮಾಧಾನ ಮೂಡುತ್ತದೆ. ವಿಪರೀತ ಆಲಸಿಗಳಾಗುತ್ತೀರಿ. ನಿಮ್ಮ ತಾಯಿ ಅಥವಾ ತಾಯಿಗೆ ಸಮಾನರಾದವರ ಆರೋಗ್ಯದಲ್ಲಿ ಏರುಪೇರಾಗಬಹುದು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿ ನಿಮ್ಮದಾಗುತ್ತದೆ. ಸರಿಯಾದ ಜೀವನಶೈಲಿ ಅನುಸರಿಸದೆ ಮಧುಮೇಹದಂಥ ಸಮಸ್ಯೆ ತಲೆ ಎತ್ತಬಹುದು. ಅಥವಾ ಈಗಾಗಲೇ ಡಯಾಬಿಟೀಸ್ ಇದ್ದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಸ್ಥೂಲಕಾಯ ಸಮಸ್ಯೆ ಇರುವವರು ಸಹ ಆಹಾರ ಪಥ್ಯ, ಲಘು ವ್ಯಾಯಾಮದ ಕಡೆಗೆ ಗಮನ ಹರಿಸಿ. ಅತಿಯಾದ ಸುಖವನ್ನು ಅರಸಿ ಹೋಗಬೇಡಿ. ಊಟಕ್ಕೆ ಕರೆದಲ್ಲಿಗೆಲ್ಲ ಹೋಗುವುದು ಸಹ ಸಮಸ್ಯೆಗೆ ಕಾರಣ ಆಗಬಹುದು.

   ಪರಿಹಾರ: ಆಂಜನೇಯ ದೇವಸ್ಥಾನದಲ್ಲಿ ಇಪ್ಪತ್ತೊಂದು ಪ್ರದಕ್ಷಿಣೆ ಮಾಡಿ.

   ಧನುಸ್ಸು

   ಧನುಸ್ಸು

   ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಶನಿ ಸಂಚಾರ ಆಗಲಿದೆ. ಈಗಾಗಲೇ ಐದು ವರ್ಷ ಶನಿಯ ಪರಿಣಾಮ- ಪ್ರಭಾವವನ್ನು ಎದುರಿಸಿದ್ದೀರಿ. ಇನ್ನು ಕೊನೆಯ ಎರಡೂವರೆ ವರ್ಷಗಳು ಸಾಡೇ ಸಾತ್ ಪ್ರಭಾವವನ್ನು ಎದುರಿಸಬೇಕಾಗಿದೆ. ಶನಿಯು ಸಾಡೇ ಸಾತ್ ಆರಂಭದಲ್ಲಿ ನಿಮಗೆ ಎಂಥ ಫಲಗಳನ್ನು ನೀಡಿದ್ದಾನೆ ಎಂಬುದು ಮುಖ್ಯವಾಗುತ್ತದೆ. ಆರಂಭದಲ್ಲಿ ಶುಭ ಫಲ ನೀಡಿದ್ದರೆ ನಿರ್ಗಮಿಸುವಾಗ ಅಶುಭ ಫಲವನ್ನೂ, ಬರುವಾಗ ಅಶುಭ ಫಲ ನೀಡಿದ್ದರೆ ನಿರ್ಗಮಿಸುವಾಗ ಶುಭ ಫಲವನ್ನೂ ನಿರೀಕ್ಷೆ ಮಾಡಬಹುದು. ಆದರೂ ಎರಡನೇ ಮನೆಯಲ್ಲಿ ಸಂಚಾರ ಮಾಡುವಾಗ ಮಾನಸಿಕ ಕ್ಲೇಶ ಆಗುತ್ತದೆ. ಯಾರನ್ನು ನಂಬಿ ಹಣ ನೀಡಿದ್ದರೋ ಅವರಿಂದ ವಂಚನೆ ಆಗುವ ಸಾಧ್ಯತೆ ಇದೆ. ವಿವಾಹೇತರ ಸಂಬಂಧದಲ್ಲಿ ಸಿಲುಕಿಕೊಳ್ಳುವ, ಮೋಹದಿಂದ ಸಮಸ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದಿನ ಪ್ರೇಮ ಪ್ರಕರಣಗಳು ಇದ್ದಲ್ಲಿ ಅದನ್ನು ಮರೆತು, ಜೀವನ ನಡೆಸಿ. ಅದು ತಾನಾಗಿಯೇ ನಿಮ್ಮ ಹತ್ತಿರಕ್ಕೆ ಬರುವಂತೆ ಇದ್ದರೂ ನೀವು ದೂರ ಸರಿದುಕೊಳ್ಳುವುದು ಉತ್ತಮ. ಅದರಲ್ಲೂ ಹೆಣ್ಣುಮಕ್ಕಳಿಗೆ ಇದರಿಂದಲೇ ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪುರುಷರು ಉದ್ಯೋಗ ಸ್ಥಳದಲ್ಲಿ ಈ ರೀತಿಯ ಸಂಬಂಧಗಳನ್ನು ಬೆಳೆಸುವ ಸಾಧ್ಯತೆ ಇದೆ. ಅವಮಾನದ ಪಾಲಾಗುತ್ತೀರಿ ಮತ್ತು ಕುಟುಂಬ ಜೀವನ ಹಾಳಾದೀತು ಎಚ್ಚರ.

   ಪರಿಹಾರ: ಬ್ರಾಹ್ಮಣರಿಗೆ ಎಳ್ಳು- ಕಪ್ಪು ವಸ್ತ್ರ, ದಕ್ಷಿಣೆ ಸಹಿತವಾಗಿ ದಾನ ಮಾಡಿ.

   ಮಕರ

   ಮಕರ

   ನಿಮ್ಮ ಜನ್ಮ ರಾಶಿಯಲ್ಲೇ ಶನಿ ಸಂಚಾರ ಮಾಡಲಿದ್ದು, ದೇವರ ಮೇಲೆ ನಂಬಿಕೆ ಕಡಿಮೆ ಆಗಲಿದೆ. ಗುರು- ಹಿರಿಯರಿಗೆ ಅವಮಾನ ಮಾಡಿ, ಅದರ ಪಾಪವು ನಿಮ್ಮನ್ನು ಕಾಡಲಿದೆ. ಹಣಕಾಸಿನ ಮುಗ್ಗಟ್ಟು ಹೆಚ್ಚಾಗಲಿದೆ. ಸಟ್ಟಾ ವ್ಯವಹಾರ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವವರು ಎಚ್ಚಕೆಯಿಂದ ಇರಬೇಕು. ಈ ಅವಧಿಯಲ್ಲಿ ದುಷ್ಟ ಜನರ ಸಹವಾಸ ಹೆಚ್ಚಾಗಲಿದೆ. ಅಮಲು ಪದಾರ್ಥಗಳ ಸೇವನೆ ಅಭ್ಯಾಸ ಆಗುವ ಸಾಧ್ಯತೆ ಇದೆ. ಈಗಾಗಲೇ ಅಭ್ಯಾಸ ಇರುವವರಿಗೆ ಅದರಿಂದಲೇ ಅವಮಾನಕ್ಕೆ, ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಗಳಿವೆ. ನಿರೀಕ್ಷೆ ಮಾಡಿದಷ್ಟು ವೇತನ ಹೆಚ್ಚಳ ಅಥವಾ ಬಡ್ತಿ ಆಗುವ ಸಾಧ್ಯತೆ ಇಲ್ಲ. ಆ ಸಿಟ್ಟಿನಲ್ಲಿ ಕೆಲಸ ಬಿಟ್ಟರೆ ಹೊಸ ಕೆಲಸ ಸಿಗುವುದು ಬಹಳ ಕಷ್ಟ ಆಗುತ್ತದೆ. ಅಥವಾ ಯಾರದೋ ಮಾತನ್ನು ನಂಬಿ, ವಿದೇಶಕ್ಕೆ ಕೆಲಸಕ್ಕೆ ವ್ಯಾಸಂಗಕ್ಕೆ ತೆರಳಿದರೆ ಆ ನಂತರ ಪರಿತಪಿಸಬೇಕಾಗುತ್ತದೆ. ಕಾನೂನು ಬಾಹಿರವಾದ ಕೃತ್ಯಗಳಲ್ಲಿ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಭಾಗವಹಿಸಿ, ಆ ನಂತರ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ. ಶಿಸ್ತು, ದೇವತಾರಾಧನೆ, ಧ್ಯಾನ- ಯೋಗ ರೂಢಿಸಿಕೊಳ್ಳಿ. ಅತಿಯಾದ ನಿರೀಕ್ಷೆ ಇಲ್ಲದೆ ಜೀವನ ನಡೆಸಿ. ಇತರರ ಬಗ್ಗೆ ಲಘುವಾದ ಮಾತನಾಡಬೇಡಿ.

   ಪರಿಹಾರ: ನವಗ್ರಹ ದೇವಸ್ಥಾನದಲ್ಲಿ ಎಳ್ಳು ದೀಪ ಹಚ್ಚಿ

   ಕುಂಭ

   ಕುಂಭ

   ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಶನಿ ಸಂಚಾರ ಆಗಲಿದ್ದು, ಇದು ಸಾಡೇ ಸಾತ್ ಶನಿಯ ಆರಂಭದ ಹಂತ. ಹಣಕಾಸಿಗೆ ಅಡಚಣೆ, ಸಾಲ ಬಾಧೆ, ರೋಗ ಉಲ್ಬಣ ಇಂಥದ್ದೆಲ್ಲ ಕಾಣಿಸಿಕೊಂಡರೆ ನಿಮಗೆ ಸಾಡೇ ಸಾತ್ ಶನಿಯು ಪ್ರವೇಶ ಮಾಡುವಾಗ ಅಶುಭ ಫಲ ನೀಡುತ್ತಿದ್ದಾನೆ ಎಂಬರ್ಥ. ಅದೇ ಮನೆ ಕಟ್ಟಲು ಪೂರಕವಾದ ಸಾಲ ದೊರೆಯುವುದು, ವಿದೇಶದಲ್ಲಿ ಕೆಲಸ, ಉದ್ಯೋಗ ಸ್ಥಳದಲ್ಲಿ ಬಡ್ತಿ ಇಂಥ ಫಲಗಳು ದೊರೆತಲ್ಲಿ ಶನಿಯು ಸಾಡೇಸಾತ್ ಆರಂಭದಲ್ಲಿ ಶುಭ ಫಲಗಳನ್ನು ನೀಡುತ್ತಿದ್ದಾನೆ ಎಂದರ್ಥ. ಭವಿಷ್ಯದ ಬಗ್ಗೆ ಆಲೋಚನೆ ಮಾಡದೆ, ಸಾಲ ಮರುಪಾವತಿ ಸಾಮರ್ಥ್ಯದ ಅಳೆಯದೆ ಮುನ್ನುಗ್ಗಿದರೆ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತೀರಿ. ಆದರೆ ಲೆಕ್ಕಾಚಾರದ ಹೆಜ್ಜೆಗಳನ್ನು ಇಟ್ಟು, ವಿಪರೀತ ದುಂದು ವೆಚ್ಚ ಮಾಡದೆ, ದೇವರ ಮೇಲೆ ನಂಬಿಕೆ ಇಟ್ಟು ಮುಂದಕ್ಕೆ ಹೆಜ್ಜೆ ಇಟ್ಟಲ್ಲಿ ಭವಿಷ್ಯದ ಕಷ್ಟಗಳನ್ನು ಎದುರಿಸಲು ನಿಮ್ಮೊಳಗೆ ಚೈತನ್ಯ ಶಕ್ತಿ ಮೂಡುತ್ತದೆ. ಅಪ್ರಾಮಾಣಿಕ ವರ್ತನೆ, ನಡವಳಿಕೆ ಇದ್ದಲ್ಲಿ ಅದರಿಂದ ನಾನಾ ತೊಂದರೆ- ಸಮಸ್ಯೆಗಳನ್ನು ಶನಿ ತಂದೊಡ್ಡುತ್ತಾನೆ. ಶನಿಯು ಧರ್ಮವನ್ನು- ಪ್ರಾಮಾಣಿಕತೆಯನ್ನು, ದೈವಭಕ್ತಿಯನ್ನು ಪ್ರೋತ್ಸಾಹಿಸುತ್ತಾನೆ. ಮಕರ- ಕುಂಭ ರಾಶಿಗೇ ಶನಿಯೇ ಅಧಿಪತಿ ಹಾಗೂ ತುಲಾ ರಾಶಿಗೆ ಉಚ್ಚ ಸ್ಥಾನ ಆಗುತ್ತದೆ. ಆದ್ದರಿಂದ ಉಳಿದವರಿಗೆ ಹೋಲಿಸಿದರೆ ಇವರಿಗೆ ಕಷ್ಟಗಳು ಕಡಿಮೆ ಆಗುತ್ತವೆ.

   ಪರಿಹಾರ: ಕಬ್ಬಿಣದ ಬಾಣಲೆಯಲ್ಲಿ ಎಳ್ಳೆಣ್ಣೆ ಇಟ್ಟು, ದಕ್ಷಿಣೆ ಸಹಿತ ಬ್ರಾಹ್ಮಣರಿಗೆ ದಾನ ಮಾಡಿ

   English summary
   Saturn Transit 2020 Predictions for 6 zodiac signs. These people must be alert.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X