ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಡೇಸಾತಿಯಲ್ಲಿ ಕಡ್ಡಾಯವಾಗಿ ಹೀಗೆಲ್ಲಾ ಮಾಡಬೇಡಿ

By ನಾಗನೂರಮಠ ಎಸ್.ಎಸ್.
|
Google Oneindia Kannada News

ಕೆಲವೊಬ್ಬರಿಗೆ ಸಾಡೇಸಾತಿ ಶುರುವಾಗಿರೋದು ಗೊತ್ತಾಗೋದೆ ಎಲ್ಲಾ (ಆರೋಗ್ಯ, ಸಂಪತ್ತು, ಆತ್ಮೀಯರು, ಪ್ರೀತಿ, ಆಸ್ತಿ) ಕಳಕೊಂಡ ಮೇಲೆ! ಹೌದು, ಇದು ಒಂಥರಾ ವಿಪರ್ಯಾಸನೋ ಅಥವಾ ಅವರ ದುರಾದೃಷ್ಟನೋ ಎಂದುಕೊಳ್ಳಬೇಕಷ್ಟೆ. ಏಕೆಂದರೆ ಶನಿಕಾಡಾಟದಲ್ಲಿ ಏನೂ ಆಗಿಲ್ಲ, ಆಗೋದೂ ಇಲ್ಲ ಬಿಡು. ಅಂಥಾದ್ದೇನಾಗುತ್ತದೆ ಎಂದು ಮಾಡಬಾರದ್ದನ್ನೆಲ್ಲಾ ಮಾಡುತ್ತಾ ಹೋಗಿ ಆಗಬಾರದ್ದನ್ನ ಅನುಭವಿಸಿದ್ದಾರೆ ಎಷ್ಟೋ ಜನ. ಕೆಲವರಂತೂ ಏನೇನೋ ಮಾಡಲು ಹೋಗಿ ಇಕ್ಕಿಸಿಕೊಂಡ ಮೇಲೆ ಮಹಾತ್ಮನ ಪಾದಕ್ಕೊರಗಿದ್ದಾರೆ.

ಆದ್ದರಿಂದ ವೃಶ್ಚಿಕ, ತುಲಾ ಹಾಗೂ ಕನ್ಯಾ ರಾಶಿಯವರು ಸಾಡೇಸಾತಿಗೆ ಸಂಬಂಧಪಟ್ಟಂತೆ ಎಳ್ಳಷ್ಟೂ ನಿರ್ಲಕ್ಷ್ಯ ಮಾಡಬಾರದು. ಧನಸ್ಸು ರಾಶಿಯವರಿಗೆ ಇನ್ನೊಂದಿಷ್ಟು ದಿನಗಳಲ್ಲಿ ಶನಿದೇವನ ಸಾಡೇಸಾತಿ ಪ್ರಭಾವ ಶುರುವಾಗುತ್ತದೆ. ಹೀಗಾಗಿ ಈ ರಾಶಿಗಳವರು ಸಾಡೇಸಾತಿಯಲ್ಲಿ ಮುಂಜಾಗೃತೆ ವಹಿಸಿಕೊಂಡು ಜೀವನಶೈಲಿ ಬದಲಿಸಿಕೊಳ್ಳಬೇಕು. ಈ ಕೆಳಗಿನ ವಿಷಯ ಓದಿಕೊಂಡರೆ ಒಳ್ಳೆಯದು.

* "ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ" ಎಂಬಂತೆ ಟೈಮ್ ಪ್ರಕಾರ ಊಟ ಮಾಡಬೇಕು. ಮತ್ತೊಬ್ಬರೊಂದಿಗೆ ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು. ಅದೇನ್ಮಾಡತಾರೆ ಎಂದುಕೊಂಡು ಏನೇನೋ ಮಾತನಾಡಬೇಡಿ. ಮತ್ತೊಬ್ಬರ ಬಗ್ಗೆ ಚಾಡಿ ಹೇಳುವುದನ್ನು ಬಿಡಬೇಕು. ಹೊತ್ತಿಗೆ ಸರಿಯಾಗಿ ಊಟ ಮಾಡದಿದ್ದರೆ ಡಯಾಬಿಟಿಸ್ ಮತ್ತು ರಕ್ತದೊತ್ತಡ ಕಾಯಿಲೆಗಳಿಗೆ ನೀವೆ ಆಹ್ವಾನ ಮಾಡಿಕೊಂಡಂತಾಗುತ್ತದೆ ನೆನಪಿನಲ್ಲಿರಲಿ. [ಶನಿಕಾಟ ಶುರುವಾದ್ರೆ ಆಗೋದೆ ಹೀಗೆ]

Sade Sati : What one should not do when Shani troubles

* ಈ ಸಂದಭದಲ್ಲಿ ಹಣಕಾಸಿನ ಸ್ಥಿತಿ ಅಧೋಗತಿಗಿಳಿಯುತ್ತದೆ. ಕೆಲವರಂತೂ ಪಾಪರ್ ಆಗುತ್ತಾರೆ. ಗಳಿಸಿಟ್ಟಿದ್ದು ಮಂಗಮಾಯವಾಗುತ್ತದೆ. ಅದೆಂಗೆ ಎಂದು ಯೋಚಿಸುತ್ತ ಮಂಗನಾಗಬೇಕಾಗುತ್ತದೆ. ಆದ್ದರಿಂದ ಖರ್ಚಿನಲ್ಲಿ ಹಿಡಿತವಿಟ್ಟುಕೊಳ್ಳಬೇಕು. ದುರಾಸೆಯಿಂದ ಹಣವನ್ನು ಅಲ್ಲಿಲ್ಲಿ ಠೇವಣಿ ಇಡಬಾರದು. ಸೂಕ್ತ ದಾಖಲೆಗಳಿಲ್ಲದೇ ಯಾರಿಗೂ ಹಣ ಕೊಡಬೇಡಿ. ಕೈಗಡವಂತೂ ಕೊಡಲೇಬೇಡಿ. ಸಾಲ ಮಾಡಿದ್ದರೆ ಅದನ್ನು ತೀರಿಸಲು ಶತಪ್ರಯತ್ನ ಮಾಡಬೇಕು. ಇಲ್ಲಾಂದ್ರೆ ಮಾನ, ಮರ್ಯಾದೆ ಹರಾಜಾಗುತ್ತದೆ ಎಂಬುದು ತಲೆಯಲ್ಲಿರಲಿ. "ಮೂರು ಬಿಟ್ಟವರು ಊರಿಗೆ ದೊಡ್ಡವರು" ಎಂದು ದೊಡ್ಡವರಾಗಲು ಹೋಗಬೇಡಿ. [ಶನೈಶ್ಚರಷ್ಟೋತ್ತರ ಶತನಾಮಾವಳಿ]

* ಅಂತಿಂಥ ಸ್ನೇಹಿತರೊಂದಿಗೆ ಗೆಳೆತನವಿದ್ದರೆ ಅದನ್ನು ಬಿಡಬೇಕು. ಯಾಕೆಂದರೆ ಅವರು ಮಾಡುವ ಪಾಪಗಳಲ್ಲಿ ನೀವೂ ಭಾಗಿಯಾಗಿ ಸಿಕ್ಕಿಬಿದ್ದು ಕಂಬಿ ಎಣಿಸುವ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ನಿಮ್ಮ ಸ್ನೇಹಿತರ ಬಳಗದಲ್ಲಿ ಒಳ್ಳೆಯವರ‍್ಯಾರು, ಕೆಟ್ಟವರ‍್ಯಾರು ಎಂದು ಗುರ್ತಿಸಿಕೊಂಡು ಕೆಟ್ಟವರ ಸಹವಾಸ ಬಿಡಬೇಕು. ಇಲ್ಲವಾದರೆ ಜೈಲುವಾಸ ಅಪ್ಪಿಕೊಳ್ಳಲು ಸಿದ್ಧರಾಗಿರಬೇಕು. ಏಕೆಂದರೆ ಕೆಟ್ಟವರು ತಾವು ಮಾಡಿದ ತಪ್ಪನ್ನೂ ಸಹ ನಿಮ್ಮ ತಲೆಗೆ ಕಟ್ಟುವುದರಲ್ಲಿ ಸಂಶಯವೇ ಇಲ್ಲ. [ಒಳ್ಳೆಯದೂ ಆಗಬಹುದು, ಕೆಟ್ಟದ್ದೂ ಆಗಬಹುದು]

* ವಾಹನದಲ್ಲಿ ಓಡಾಡುವಾಗ, ಓಡಿಸುವಾಗ ಹುಷಾರಾಗಿರಬೇಕು. ಅಮವಾಸ್ಯೆ ಮತ್ತು ಶನಿವಾರ ಬಂದರೆ ಹೆಚ್ಚು ಜಾಗೃತರಾಗಿರಬೇಕು. ಅಪರಿಚಿತರ ವಾಹನದಲ್ಲಿ ಲಿಫ್ಟ್ ತೆಗೆದುಕೊಳ್ಳಬೇಡಿ. ಅಪರಿಚಿತರಿಗೆ ಲಿಫ್ಟ್ ಕೊಡಬೇಡಿ. ವಾಹನದ ವಿಮೆ ಮತ್ತು ಸ್ವಂತ ವಿಮೆ ಮುಗಿದಿದ್ದರೆ ಕೂಡಲೇ ರಿನ್ಯೂವಲ್ ಮಾಡಿಸಿಕೊಳ್ಳಬೇಕು. ವಾಹನವನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರಬೇಕು. ವಾಹನಗಳಲ್ಲಿ ಸಾಹಸ ಕೆಲಸಗಳನ್ನು ಮಾಡಬಾರದು. ಸೂಕ್ತವಾದ ಭದ್ರತೆ ಮಾಡಿಕೊಂಡು ಸಾಹಸ ಮಾಡಬೇಕು.

* ಸ್ವಂತ ವಸ್ತುಗಳನ್ನು ಮತ್ತು ಪ್ರೀತಿಯ ವಸ್ತುಗಳನ್ನು ತುಂಬಾ ಭದ್ರವಾಗಿಟ್ಟುಕೊಳ್ಳಬೇಕು. ಆವಾಗಾವಾಗ ಅವುಗಳನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಕಳ್ಳತನವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಎಲ್ಲೇ ಹೋದರೂ ರಕ್ಷಣೆಯಿರುವ ಸ್ಥಳದಲ್ಲೇ ವಾಸ ಮಾಡಬೇಕು.

* ವಿದ್ಯುತ್ ಉಪಕರಣಗಳನ್ನು ಉಪಯೋಗಿಸುವಾಗ, ಅಡುಗೆ ಮಾಡುವಾಗ ಮೈಮರೆಯಬಾರದು. ನಾನೇನು ಮಾಡುತ್ತಿದ್ದೇನೆ ಎಂಬುದರ ಜ್ಞಾನವಿರಬೇಕು. ಯಾಕೆಂದ್ರೆ ಯಾವುದೋ ಯೋಚನೆಯಲ್ಲಿ ಏನೇನೋ ಮಾಡಲು ಹೋಗಿ ಅವಘಡಗಳು ಸಂಭವಿಸಬಹುದು.

* ದಂಪತಿಗಳಲ್ಲಿ ಇಬ್ಬರಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೂ ಸಾಡೇಸಾತಿ ನಡೆಯುತ್ತಿದ್ದರೆ ಒಬ್ಬರಿಗೊಬ್ಬರು ಸಹಾಯಕ್ಕಿರಬೇಕು. ಇಲ್ಲಾಂದ್ರೆ ಇಬ್ಬರೂ ಕಚ್ಚಾಡುತ್ತಾ ಪರಿಸ್ಥಿತಿ ಡೈವೋರ್ಸ್‌ವರೆಗೂ ಹೋಗಬಹುದು. ಆದ್ದರಿಂದ ಗಂಡ-ಹೆಂಡತಿಯರು ಈ ಸಂದರ್ಭದಲ್ಲಿ ಅತೀವ ಪ್ರೀತಿಯಿಂದ ಇರಲು ಆರಂಭಿಸಬೇಕು. ಯಾಕೆಂದರೆ ದೇಹವೆರಡು ಜೀವ ಒಂದು ಎಂದಿರುವವರು ಜೀವ ತೆಗೆಯಲೂ ಹಿಂದೆ ಮುಂದೆ ನೋಡುವದಿಲ್ಲ. ಆ ರೀತಿ ಪರಿಸ್ಥಿತಿ ಬಂದರೂ ಬರಬಹುದು. ಆದ್ದರಿಂದ ಹೆಂಡತಿಗೆ ಗಂಡ, ಗಂಡನಿಗೆ ಹೆಂಡತಿ ನಿಷ್ಠೆಯಿಂದಿರಬೇಕು. ಸುಖದ ಬೆನ್ನ ಹಿಂದೆ ಬಿದ್ದರೆ, ಶನಿದೇವ ಬೆನ್ನತ್ತಿದ್ದಾನೆ ಎಂಬುದೂ ಕೂಡ ಮರೆತುಹೋಗುತ್ತದೆ ಎಂಬ ಎಚ್ಚರಿಕೆ ಮೈಮೇಲಿರಲಿ.

ಈಗಂತೂ, ಹೇಮಂತ ಋತು ಹುಡುಗಿಯರು ಪ್ರೀತಿಯ ಬಲೆಗೆ ಸುಲಭವಾಗಿ ಬೀಳಬಹುದಾಗಿರುವುದರಿಂದ ಮನೆಯ ಹಿರಿಯರು ಅವರ ಕಾಳಜಿ ವಹಿಸಬೇಕು. ಆದ್ದರಿಂದ ಅಂತಿಂಥವರೊಂದಿಗೆ ಮಿಲನದ ಮೊದಲು ಯೋಚಿಸಿಕೊಳ್ಳಿ. ಯಾಕೆಂದರೆ ತಂದೆ-ತಾಯಿ ಪ್ರೀತಿಯಿಂದ ಬೆಳೆಸಿದ ದೇಹ ಪವಿತ್ರವಾಗಿಸಿರಿಸಿಕೊಳ್ಳುವುದು ನಮ್ಮ ಧರ್ಮ. ಇಲ್ಲಾಂದ್ರೆ ಎಷ್ಟೇ ಜಾಗೃತೆ ವಹಿಸಿಕೊಂಡಿದ್ದರೂ ರಕ್ತ ಕೆಡೋ ರೋಗ ಬರುವುದು ಗ್ಯಾರಂಟೀನೆ. ಇನ್ನಷ್ಟು ಮುಂಜಾಗೃತೆಗಳನ್ನು ಮುಂದೆ ವಿವರಿಸಲಾಗುತ್ತದೆ.

ನಿಮಗೆ ಗೊತ್ತಿರಬಹುದು, ನಮ್ಮಲ್ಲಿ ವಿವಿಧ ಗುಣಗಳಿರುತ್ತವೆ. ಹೇಗೆಂದರೆ, ನಮ್ಮ ಆರೋಗ್ಯ ಸರಿಯಿದ್ದಾಗ ಎಲ್ಲ ಕೆಲಸ ಅಚ್ಚುಕಟ್ಟಾಗಿ ಮಾಡುತ್ತ ಧೈರ್ಯ, ಆತ್ಮವಿಶ್ವಾಸದಿಂದಿರುತ್ತೇವೆ. ಎಲ್ಲೇ ಹೋದರೂ ಹುರುಪಿನಿಂದಲೇ ಇರುತ್ತೇವೆ. ಜಗಳದಲ್ಲೂ ಕೂಡ ನಾವು ಮುನ್ನುಗ್ಗಿ ತೋಳೆರಿಸಿಕೊಳ್ಳಬಹುದು. ಆದರೆ ನಮ್ಮ ಆರೋಗ್ಯ ಸ್ವಲ್ಪಾನೇ ಕೆಟ್ಟರೆ ಮುಗೀತು. ಮುದುಡಿಕೊಂಡು ಕುಳಿತುಬಿಡುತ್ತೇವೆ. ಆಗ ನಮ್ಮ ಬಳಿ ಎಷ್ಟೇ ಸುಖ, ಸಂಪತ್ತಿರಲಿ ಯಾವೂದರ ಮೇಲೂ ಆಸೆ ಬರಲ್ಲ. ಮೊದಲು ನಾನು ಹುಷಾರಾಗಬೇಕು ಎಂಬುದೊಂದೇ ಮನದಲ್ಲಿರುತ್ತದೆ. ಇದೇ ರೀತಿ ಶನಿಕಾಟ ಶುರುವಾದಾಗ ಆರೋಗ್ಯ ಕೆಟ್ಟಂತೆ ಜೀವನವೇ ಕೆಟ್ಟು ಹೋಗಿರುತ್ತದೆ. ಇದನ್ನು ತಿಳಿದುಕೊಂಡು ಸೂಕ್ತವಾದ ಪರಿಹಾರ ಮಾಡಿಕೊಂಡವನು ಪುಣ್ಯವಂತ. ಇಲ್ಲಾಂದ್ರೆ ಅವರವರ ಕರ್ಮ ಎನ್ನಬೇಕಾಗುತ್ತದೆ.

ಅಂದಂಗೆ, ಶನಿದೇವರ ಪ್ರಭಾವದ ಬಗ್ಗೆ ಇದೂವರೆಗೆ ಹೇಳಿರುವುದು ಕೇವಲ ನೂರಕ್ಕೆ ಹತ್ತರಷ್ಟು ಮಾತ್ರ. ಇನ್ನೂ ಹೇಳಲಾರಂಭಿಸಿದರೆ ಅಳ್ಳೆದೆಯವರು ಚಳಿಜ್ವರ ಬಂದು ವಾರ ಕಾಲ ಮಲಗಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶನಿದೇವನ ಸಾಡೇಸಾತಿಯಲ್ಲಿರುವ ರಾಶಿಗಳವರು ನಿಷ್ಕಾಳಜಿ ಮಾಡಬಾರದು. ಯಾಕೆಂದರೆ ಜೀವನದ ಗಾಲಿ ಎಲ್ಲಿಯಾದರೂ ನಿಂತರೆ ಅದರಲ್ಲಿರುವ ಸವಾರರು (ಹೆಂಡತಿ, ಮಕ್ಕಳು) ಪರಿತಪಿಸಬೇಕಾಗುತ್ತದೆ.

ಸಾಡೇಸಾತಿಯು ಒಂದು ರೀತಿಯಲ್ಲಿ ಬಂಗಾರದಂಥ ಸಮಯವೆನ್ನಬಹುದು. ಯಾಕೆಂದರೆ ಎಲ್ಲವನ್ನೂ ಕೂಲಂಕುಷವಾಗಿ ಕಲಿಯಲು ಸಮಯ ಸಿಗುತ್ತದೆ ಮತ್ತು ಅವಕಾಶಗಳು ಇರುತ್ತವೆ. ಸಾಕಷ್ಟು ಪಾಠಗಳನ್ನು ಕಲಿತು ಜೀವನದ ಯಶಸ್ಸಿನ ಮೆಟ್ಟಿಲು ಹತ್ತಿಕೊಳ್ಳಬೇಕು. ನೀವು ಕೇಳಿರಬಹುದು, ಕೆಲವರು ಹೇಳುತ್ತಿರುತ್ತಾರೆ, ನಾನು ಫುಟಪಾತ್‌ನಲ್ಲಿ ಮಲಗುತ್ತಿದ್ದೆ ಒಂದು ಕಾಲದಲ್ಲಿ, ಈಗ ಐಷಾರಾಮಿ ಕಾರಿನಲ್ಲಿ ಓಡಾಡುತ್ತಿದ್ದೇನೆ ಎಂದು. ಇದಕ್ಕೇನೆ ಸಾಡೇಸಾತಿ ಸಮಯದಲ್ಲಿನ ಗೆಲುವು ಎನ್ನುವರು. ಸಾಡೇಸಾತಿಯಿಂದಾಗಿ ಅವರು ಜೀವನದಲ್ಲಿ ಸಾಕಷ್ಟನ್ನು ಕಲಿತುಕೊಂಡು ಯಶಸ್ಸಿನ ಮೆಟ್ಟಿಲು ಹತ್ತಿರುತ್ತಾರೆ. ಆದರೆ ಅದನ್ನು ಯಾರೂ ಹೇಳುವುದಿಲ್ಲ. ಹೀಗಾಗಿ ಶನಿದೇವನ ಪ್ರಭಾವ ಬಹಳಷ್ಟು ಜನರಿಗೆ ಅರಿವಿಲ್ಲ.

ಒಂದು ಮನೆಯಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಕಚ್ಚಾಡುತ್ತಿದ್ದಾರೆ ಎಂದರೆ ಎಲ್ಲರ ರಾಶಿಗತವಾದ ಗುಣಗಳನ್ನು ಪರೀಕ್ಷಿಸಿಕೊಳ್ಳಬೇಕು. ಯಾರೊಂದಿಗೆ ಹೇಗಿರಬೇಕು ಎಂದು ನಿರ್ಧರಿಸಿಕೊಂಡರೆ ಸಾಕು. ಎಲ್ಲರೂ ಸುಖದಿಂದ ಮನೆಯಲ್ಲಿರಬಹುದು. ಆದ್ದರಿಂದ ಹಿರಿಯರು ತಮ್ಮ ಮನೆಯ ಕುಟುಂಬ ಸದಸ್ಯರ ರಾಶಿಗಳನ್ನು ಚೆಕ್ ಮಾಡಿಟ್ಟುಕೊಳ್ಳಬೇಕು. ಎಲ್ಲರೂ ಸುಖದಿಂದಿರಬೇಕಾದರೆ ಹೀಗೆ ಮಾಡಬೇಕು.

ಇನ್ನು ಶನಿದೇವರ ಪ್ರಭಾವದ ಬಗ್ಗೆ ಹೀಯಾಳಿಸಿದವರು, ಹಂಗಿಸಿದವರು ತಾವು ಬೈಯ್ದಿರುವುದನ್ನು ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳುವುದು ಒಳ್ಳೆಯದು. ಯಾಕೆಂದರೆ ಮುಂದೆ ಶನಿದೇವನು ನೀಡುವ ಶಿಕ್ಷೆಗೆ ಯಾಕೀ ಶಿಕ್ಷೆ ಎಂದು ಅರ್ಥಮಾಡಿಕೊಳ್ಳಲು ಅವಶ್ಯವಾಗಿ ಆ ಚೀಟಿ ಬೇಕಾಗುತ್ತದೆ. ಯಾಕೆಂದರೆ ಶನಿದೇವನ ಕೈವಾಡ ಅಷ್ಟಿಷ್ಟಲ್ಲ. ಅವನ ಬಗ್ಗೆ ಹೇಳಿದ್ದನ್ನೂ ಕೇಳದಿದ್ದರೆ, "ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ" ಎನ್ನಬೇಕಾಗುತ್ತದೆ. ಆದ್ದರಿಂದ ಶನಿನಿಂದನೆಯಿಂದ ಬದುಕು ಮೂರಾಬಟ್ಟೆ ಮಾಡಿಕೊಳ್ಳಬೇಡಿ. ಶನಿಯ ಪರೀಕ್ಷೆಯಲ್ಲಿ ಪಾಸಾದರೆ ಬದುಕಿದಂತೆ, ಫೇಲಾದರೆ ಹೋದಂಗೆ ಎಂಬುದು ಮನದಲ್ಲಿಟ್ಟುಕೊಳ್ಳುವವರು ಜಾಣರು.

"ಸಾಡೇಸಾತಿ : 12 ವರ್ಷದೊಳಗಿನವರಿಗೆ ಹೀಗಿರುತ್ತೆ" ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)

ವಾಸ್ತು ಟಿಪ್ಸ್ : ಮನೆಯ ಆಗ್ನೇಯ ದಿಕ್ಕಿನಲ್ಲಿ ನೀರಿರುವ ವಸ್ತುಗಳನ್ನು ಇಡಬೇಡಿ.

ಶನಿಕೃಪೆಗೆ : ಶನಿಶಾಂತಿ, ಮೃತ್ಯುಂಜಯ ಹೋಮ ಮಾಡಿಸಲಾಗದವರು ಶನಿವಾರ ಹನುಮ ಮತ್ತು ಪರಮೇಶ್ವರನ ಸನ್ನಿಧಿಯ ದರ್ಶನ ಪಡೆದುಕೊಳ್ಳಬೇಕು.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

English summary
Sade Sati series 46 : Impact of Sade Sati on zodiac signs. One should know what they should and should not do when Lord Shani starts toubling. Never underestimate the power of Shani.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X