ಸದ್ಯ ಶನಿದೇವನ ಕೃಪಾಕಟಾಕ್ಷವಿರುವ ರಾಶಿಗಳಿವು

ಎಲ್ಲವನ್ನೂ ಕೊಟ್ಟ ಶನಿದೇವನು ಮತ್ತೆ ಇದ್ದಿದ್ದೆಲ್ಲವನ್ನೂ ಕಸಿದುಕೊಂಡು ನೀವು ಅನೀತಿಯ ದಾರಿಯಿಂದ ಗಳಿಸಿಕೊಂಡ ಮಾನ, ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕುವಂತಾಗಿಸುವ ಪರಿಸ್ಥಿತಿಗೆ ತಂದೊಡ್ಡುತ್ತಾನೆ. ಭಾರೀ ಬುದ್ಧಿವಂತ, ವಿದ್ಯಾವಂತರೆಂದು ಮೆರೆದಾಡುವವರಿಗೆ ಅವರ ಬುದ್ಧಿಯನ್ನೇ ಅವರಿಗೆ ಮುಳುವಾಗಿಸಿ ಅವರಿಂದಾನೇ ತಪ್ಪು ಮಾಡಿಸುತ್ತಾನೆ ಶನಿದೇವ!
ಅದಕ್ಕೆಂದೆ ಹೇಳುವುದು, ನಿಮ್ಮ ಉತ್ತಮ ಸಮಯದಲ್ಲಿ ಮತ್ತೊಬ್ಬರ ಬಾಳಿನಲ್ಲಿ ಆಟವಾಡಬಾರದೆನ್ನುವುದು. ನೀವೆಷ್ಟೇ ಕಿಲಾಡಿ ಆಟಗಾರರಿದ್ದರೂ ಶನಿದೇವನು ಆಟ ಶುರು ಮಾಡಿದನೆಂದರೆ ಮುಗೀತು. ನೀವು ಹನಿ ನೀರು ಕೂಡ ಕುಡಿಯಲು ಪರತಪಿಸಬೇಕಾಗುತ್ತದೆ.
ಆದಷ್ಟು ಸತ್ಯ, ನ್ಯಾಯ, ನೀತಿ, ಧರ್ಮದಿಂದ ನಿಮ್ಮ ಪುಣ್ಯದ ಫಲವನ್ನು ಕೂಡಿಟ್ಟುಕೊಳ್ಳಲು ಪ್ರಯತ್ನಿಸಿದರೆ ಶನಿದೇವನ ಕೃಪಾಕಟಾಕ್ಷವನ್ನು ಯಾರೂ ತಪ್ಪಿಸಲಾರರು. ಆದರೆ ಅನ್ಯಾಯ, ಅನೀತಿ, ಅಧರ್ಮದಿಂದ ನಡೆದುಕೊಳ್ಳುತ್ತ ಆಕ್ರಮಣಕಾರಿ ಜೀವನಶೈಲಿಯಲ್ಲಿ ಮೆರೆಯುತ್ತ ಹೋದರೆ ಶನಿದೇವನ ಕಾಟದ ಮುಂದೆ ನಿಮಗೆ ಯಾವ ದೇವರ ಕೃಪಾಕಟಾಕ್ಷವಿದ್ದರೂ ಯಾರೂ ಕಾಪಾಡುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವಾಗಿದ್ದರೂ ಪಾಪದ ಕೊಡ ತುಂಬಿದ ಮೇಲೆ ಉರುಳಲೇಬೇಕು. ಪಾಪದ ಕೊಡ ತುಂಬುವವರೆಗೂ ಕಾಯುತ್ತಾನೆ ಶನಿದೇವ!
ಶನಿ ದೇವಸ್ಥಾನಕ್ಕೆ ಹೋಗೋಕೇಕೆ ಭಯ? : ಸಾಮಾನ್ಯವಾಗಿ ಎಷ್ಟೋ ಜನರು ಶನಿಮಹಾತ್ಮನ ದೇವಸ್ಥಾನಕ್ಕೆ ಹೋಗುವುದಕ್ಕೂ ಹೆದರುತ್ತಾರೆ. ಇದೊಂಥರಾ ವಿಚಿತ್ರವಾದ ಸತ್ಯ. ನೀವು ಸತ್ಯವಂತ, ನ್ಯಾಯವಂತರಾಗಿದ್ದರೆ ಮಹಾತ್ಮನ ದೇವಸ್ಥಾನಕ್ಕೆ ಹೋಗಿ ಅವನ ಮುಂದೆ ನಿಲ್ಲಲು ನಿಮಗ್ಯಾಕೆ ಭಯ? ನೆನಪಿರಲಿ ನಿಮ್ಮ ಕರ್ಮಫಲವನ್ನು ಮತ್ತೆ ಮರಳಿ ನಿಮಗೇನೆ ನೀಡಿ, ನೀವು ಮತ್ತೊಬ್ಬರಿಗೆ ಮಾಡಿದ ಕರ್ಮಗಳನ್ನು ನೀವೇ ಅನುಭವಿಸುವಂತೆ ಮಾಡುವುದೇ ಶನಿದೇವನ ಕೆಲಸ. ನೀವ್ಯಾರಿಗೂ ಕೆಟ್ಟದ್ದನ್ನು ಮಾಡದಿದ್ದರೆ ಶನಿದೇವನ ಬಗ್ಗೆ ಭಯ ಬಿಟ್ಟಾಕಿ. ಧೈರ್ಯವಾಗಿ ಶನಿಮಹಾತ್ಮನ ದರ್ಶನ ಮಾಡಿಕೊಂಡು ಬನ್ನಿ. ಅವನು ನಿಮ್ಮ ರಾಶಿಗೆ ಬಂದಾಗ ನಿಮ್ಮ ಕರ್ಮಾನುಸಾರ ನಿಮಗೆಷ್ಟು ಒಳ್ಳೆಯದು ಮಾಡಬೇಕು, ಎಷ್ಟು ಕೆಟ್ಟದ್ದು ಮಾಡಬೇಕು ಎಂದು ತೀರ್ಮಾನಿಸಿ ತೀರ್ಪು ನೀಡಿ ಹೋಗುತ್ತಾನೆ ಅಷ್ಟೆ. ಇದನ್ನಂತೂ ಯಾರೂ ತಪ್ಪಿಸಲಾರರು.
ಜನ್ಮರಾಶಿಗೆ ಬರುವ ಅಷ್ಟಮ ಶನಿದೇವನು ಎರಡೂವರೆ ವರ್ಷ ಮಾತ್ರ ಇರುತ್ತಾನೆ. ಆದರೆ ವಿಪರ್ಯಾಸವೆಂದರೆ ಕೆಲವೊಬ್ಬರಿಗೆ ಸಾಡೇಸಾತಿ ನಡೆಯುತ್ತಿರುವಾಗಲೇ ಅಷ್ಟಮ ಶನಿದೇವನ ಕಾಡಾಟವೂ ಆರಂಭವಾಗುತ್ತದೆ. ಇದನ್ನೆಲ್ಲ ಜಾತಕದ ಮೂಲಕ ತಿಳಿದುಕೊಳ್ಳಬಹುದು.
ಈಗ ಶನಿದೇವನು ವೃಷಭ ರಾಶಿಯವರಿಗೆ 6ನೇಯವನಾಗಿ, ಸಿಂಹ ರಾಶಿಯವರಿಗೆ 3ನೇಯವನಾಗಿ, ಧನು ರಾಶಿಯವರಿಗೆ 11ನೇಯವನಾಗಿ ಅತ್ಯುತ್ತಮ ಫಲ ನೀಡುತ್ತಿದ್ದಾನೆ. ಅಂದರೆ ಶನಿದೇವನ ಕೃಪಾಕಟಾಕ್ಷ ನಿಮ್ಮ ಮೇಲಾಗಿದೆ ಎಂದರ್ಥ. ಧನು ರಾಶಿಯವರು ನೆನಪಿಟ್ಟುಕೊಳ್ಳಬೇಕು, ಮುಂದಿನ ವರ್ಷದಿಂದ ಶನಿದೇವನು ನಿಮಗೆ ಸಾಡೇಸಾತಿಯಾಗಿ ಬರಲಿದ್ದಾನೆ. ಶನಿದೇವನ ಬಗ್ಗೆ ಇನ್ನಷ್ಟು ಕೆಲ ಮಾಹಿತಿಗಳನ್ನು ಮುಂದಿನ ಲೇಖನಗಳಲ್ಲಿ ನೋಡೋಣ.
ಶನಿದೇವನ ಕೃಪೆಗೆ : ಕಾಲು ಊನವಾಗಿರುವ ಬಡ ಕುಟುಂಬದವರಿಗೆ ನೀವೇ ಗಳಿಸಿದ ಹಣದಲ್ಲಿ ಅಲ್ಪ ದಾನ ಮಾಡಿ.
ಸಂಪಾದಕರ ಮಾತು : ಓದುಗರು, ಸಾಡೇಸಾತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರನ್ನು ನೇರವಾಗಿ ಫೋನಾಯಿಸಿ ತಿಳಿದುಕೊಳ್ಳಬಹುದು. (ಲೇಖಕರ ಮೊಬೈಲ್ : 94815 22011).












Click it and Unblock the Notifications