ಖಮೇನಿ ಸಾವು, ದೊಡ್ಡ ಯುದ್ಧದ ಬಗ್ಗೆ ಮೊದಲೇ ನಿಖರ ಭವಿಷ್ಯ ಹೇಳಿದ್ದ ಜ್ಯೋತಿಷಿ ನರಸಿಂಹ ರಾವ್
ಇರಾನ್ ವಿರುದ್ಧ ಅಮೆರಿಕ ಯುದ್ಧ ಮಾಡುವ ಬಗ್ಗೆ ಹಾಗೂ ಅದರಲ್ಲಿ ಇರಾನ್ ಸುಪ್ರೀಂ ನಾಯಕ ಮೃತಪಡುವ ಸಾಧ್ಯತೆ ಬಗ್ಗೆ ಭವಿಷ್ಯವನ್ನು ನುಡಿದಿದ್ದ ಖ್ಯಾತ ಜ್ಯೋತಿಷಿ ಪಿವಿಆರ್ ನರಸಿಂಹ ರಾವ್ ಅವರ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈ ವಿಚಾರವಾಗಿ ಸ್ವತಃ ಪಿವಿಆರ್ ನರಸಿಂಹ ರಾವ್ ಅವರೇ ತಮ್ಮ ಫೇಸ್ ಬುಕ್ ಪೋಸ್ಟ್ ವೊಂದನ್ನು ಫೆಬ್ರವರಿ ಇಪ್ಪತ್ತೆಂಟನೇ ತಾರೀಕಿನಂದು ಹಾಕಿದ್ದರು. ಎರಡು ತಿಂಗಳ ಹಿಂದೆಯೇ ಇರಾನ್ ಮೇಲಿನ ಅಮೆರಿಕ ದಾಳಿ ಮಾಡುವ ನಿಚ್ಚಳ ಸಂಭವ, ಅದರ ದೂರಗಾಮಿ ಪರಿಣಾಮಗಳು ಹಾಗೂ ಯಾವ ಗ್ರಹ ಸ್ಥಿತಿಯಿಂದ ಹೀಗಾಗಲಿದೆ ಎಂಬ ಬಗೆಗಿನ ಅವರ ವಿವರಣೆ ಈಗ ಆಸಕ್ತಿಕರವಾದ ಚರ್ಚೆಗೆ ನಾಂದಿ ಹಾಡಿದೆ. (ಬರಹ: ಶ್ರೀನಿವಾಸ ಮಠ)
ಇರಾನ್ ಯುದ್ಧ ಮತ್ತು ಖಮೇನಿಯ ಆಡಳಿತದ ಕುಸಿತದ ಬಗ್ಗೆ ನಾನು ಜನವರಿ-ಫೆಬ್ರವರಿ ತಿಂಗಳಲ್ಲೇ ಸಾಕಷ್ಟು ವಿಡಿಯೋಗಳಲ್ಲಿ ಹೇಳಿದ್ದೆ (ಏಪ್ರಿಲ್ 2 ರವರೆಗೆ ಅಲ್ಲಿನ ಸರ್ಕಾರಕ್ಕೆ ಅಪಾಯವಿದೆ ಎಂದು ತಿಳಿಸಿದ್ದೆ). ಈಗ ಇರಾನ್ ಯುದ್ಧ ಶುರುವಾಗಿದೆ.

ಖಮೇನಿ ಸಾವು, ಸೆರೆ ಅಥವಾ ಗಡಿಪಾರಿನ ಮೂಲಕ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ನನ್ನ ನಿರೀಕ್ಷೆ. ಇದರಲ್ಲಿ ಚೀನಾ ಮತ್ತು ರಷ್ಯಾ ನೇರವಾಗಿ ಭಾಗವಹಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಈ ಬೆಳವಣಿಗೆಯು ಜಾಗತಿಕ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದು ಮಧ್ಯಪ್ರಾಚ್ಯದಲ್ಲಿ ಒಳ್ಳೆಯ ಬದಲಾವಣೆ ತರುವುದರ ಜೊತೆಗೆ, ಚೀನಾವನ್ನು ಸಂಕಷ್ಟಕ್ಕೆ ತಳ್ಳಿ ಮುಂದಿನ ವರ್ಷಗಳಲ್ಲಿ ಅವರು ಯಾವುದಾದರೂ ದೊಡ್ಡ ಸಾಹಸಕ್ಕೆ ಕೈಹಾಕುವಂತೆ ಮಾಡುತ್ತದೆ. ಇದು 2030-2031ರ ಯುದ್ಧಕ್ಕೆ ಮುಖ್ಯ ಕಾರಣವಾಗಲಿದೆ. ಆದರೆ ಸದ್ಯಕ್ಕೆ, ಈ ಯುದ್ಧವು ಬೇಗನೆ ಮುಗಿದು ಇರಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರಲಿದೆ.
ನನ್ನ ಜನವರಿ 29ರ ಪೋಸ್ಟ್‌ನಲ್ಲಿ, ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ (ವರ್ಷಫಲ ರಾಶಿ ಚಾರ್ಟ್‌ನಲ್ಲಿ 8ನೇ ಮನೆಯ ಚಂದ್ರನ ದೆಸೆ) ಜನವರಿ 28 ರಿಂದ ಮಾರ್ಚ್ 13ರ ಅವಧಿಯನ್ನು ಗುರುತಿಸಿದ್ದೆ. ವರ್ಷಫಲ D-10 ಚಾರ್ಟ್‌ನಲ್ಲಿ ಶನಿ ಮತ್ತು ಶುಕ್ರ ಮುಖ್ಯ ಗ್ರಹಗಳಾಗಿದ್ದರು. ನಾನು ಶುಕ್ರ ದೆಸೆಯನ್ನು (ಜನವರಿ 1-ಫೆಬ್ರವರಿ 15) ಆರಿಸಿಕೊಂಡಿದ್ದೆ, ಆದರೆ ಅದರ ನಂತರದ ಶನಿ ದೆಸೆ (ಫೆಬ್ರವರಿ 15-ಏಪ್ರಿಲ್ 1) ಕೂಡ ಸರಿಯಾಗಿಯೇ ಇತ್ತು. ಈ ಎರಡು ಅವಧಿಗಳನ್ನು ಸೇರಿಸಿದ್ದರೆ ಜನವರಿ 28 ರಿಂದ ಮಾರ್ಚ್ 13 ರವರೆಗಿನ ಸಮಯ ಹೆಚ್ಚು ನಿಖರವಾಗಿರುತ್ತಿತ್ತು. ಇದು ಸೂಕ್ಷ್ಮ-ಜ್ಯೋತಿಷ್ಯದ ಶಕ್ತಿ ಮತ್ತು ಜ್ಯೋತಿಷಿಗಳು ಎದುರಿಸುವ ಸವಾಲುಗಳನ್ನು ತೋರಿಸುತ್ತದೆ.
ಮತ್ತೊಂದು ವಿಷಯವೆಂದರೆ, ಜ್ಯೋತಿಷಿಯ ಸ್ವಂತ ಗ್ರಹಗತಿಗಳೂ ಇಲ್ಲಿ ಮುಖ್ಯವಾಗುತ್ತವೆ. ನಾನು ಈಗ ಶುಕ್ರ-ರಾಹು ಅಂತರ್ದೆಶೆಯಲ್ಲಿದ್ದೇನೆ. ರಾಹು ನನ್ನ ಜನ್ಮ ಕುಂಡಲಿ ಮತ್ತು ಸದ್ಯದ ಗ್ರಹಚಾರದಲ್ಲಿ 2ನೇ ಮನೆಯನ್ನು (ವಾಕ್ ಮತ್ತು ಭವಿಷ್ಯ ನುಡಿಯುವ ಸ್ಥಾನ) ನೋಡುತ್ತಿದ್ದಾನೆ. ಹಾಗಾಗಿ, ಈ ಅವಧಿಯಲ್ಲಿ ನನ್ನ ಭವಿಷ್ಯವಾಣಿಗಳು ಸಂಪೂರ್ಣ ನಿಖರವಾಗಿರುವುದಿಲ್ಲ. ನಾನು ಎಷ್ಟೇ ಸರಿಯಾಗಿ ವಿಶ್ಲೇಷಿಸಿದರೂ ಎಲ್ಲೋ ಒಂದು ಸಣ್ಣ ತಪ್ಪು ಉಳಿದುಬಿಡುತ್ತದೆ. ನನ್ನ ಅತ್ಯಂತ ನಿಖರವಾದ ಭವಿಷ್ಯವಾಣಿಗಳು ಅಕ್ಟೋಬರ್ 2027 ರಿಂದ ಜೂನ್ 2036 ರ ಅವಧಿಯಲ್ಲಿ ಮಾತ್ರ ಬರಲು ಸಾಧ್ಯ.
ಜಗತ್ತಿನಲ್ಲಿ ಆದಷ್ಟು ಬೇಗ ನ್ಯಾಯಯುತವಾದ ಮತ್ತು ಸುಸ್ಥಿರವಾದ ಶಾಂತಿ ನೆಲೆಸಲಿ! ಓಂ ಶಾಂತಿ!" ಎನ್ನುವುದು ಅವರ ಪೋಸ್ಟ್ ನ ಒಕ್ಕಣೆಯಾಗಿತ್ತು.
ಇರಾನ್ ತಾಜಕ ವರ್ಷಫಲ
ಇರಾನ್ ತಾಜಕ ವರ್ಷಫಲ (2025-26): ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ವಾರ್ಷಿಕ ಜಾತಕವು ಕುತೂಹಲಕಾರಿಯಾಗಿದೆ. ರಾಶಿ ಚಕ್ರದಲ್ಲಿ ಚಂದ್ರನು ಎಂಟನೇ ಮನೆಯಲ್ಲಿದ್ದು (ಮರಣ ಕಾರಕ ಸ್ಥಾನ), ಈ ಜಾತಕಕ್ಕೆ ಅನ್ವಯಿಸುವ 'ದ್ವಿಸಪ್ತತಿ ಸಮ ದಶೆ'ಯ ಪ್ರಕಾರ ಚಂದ್ರನ ಅವಧಿಯು ಜನವರಿ 28 ರಿಂದ ಮಾರ್ಚ್ 13 ರವರೆಗೆ ಇರುತ್ತದೆ.
ದಶಮಾಂಶ (D-10) ಚಾರ್ಟ್: ಆಡಳಿತದ ಬಗ್ಗೆ ತಿಳಿಸುವ ದಶಮಾಂಶದಲ್ಲಿ, ಲಗ್ನಾಧಿಪತಿ ಸೂರ್ಯ (ಶಕ್ತಿಯುತ ನಾಯಕರು) ಮತ್ತು ಏಳನೇ ಅಧಿಪತಿ ಶನಿ (ಸಾಮಾನ್ಯ ಜನರು) ಪರಸ್ಪರ ಶತ್ರುತ್ವದ ವಿನಿಮಯದಲ್ಲಿದ್ದಾರೆ. ಇದು ಶಕ್ತಿಶಾಲಿ ನಾಯಕರ ಪತನವನ್ನು ಸೂಚಿಸುತ್ತದೆ. ಮುಖ್ಯವಾಗಿ, 10ನೇ ಅಧಿಪತಿ ಶುಕ್ರನು 12ನೇ ಮನೆಯಲ್ಲಿದ್ದು (ನಷ್ಟ/ಪತನ), ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆಡಳಿತಗಾರರಿಗೆ ಇದು ಶುಭ ಸೂಚನೆಯಲ್ಲ ಎಂದು ನರಸಿಂಹ ರಾವ್ ಹೇಳಿದ್ದರು. ಅವರ ಬಹುತೇಕ ಸೂಚನೆಗಳು ಈಗ ನಿಜವಾಗಿರುವುದು ಜನರ ಗಮನ ಸೆಳೆದಿದೆ.
ಪಿವಿಆರ್ ನರಸಿಂಹ ಅವರ ಪರಿಚಯ
ಪಿ.ವಿ.ಆರ್. ನರಸಿಂಹ ರಾವ್ (PVR Narasimha Rao) ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಜ್ಯೋತಿಷಿಗಳು, ಸಂಶೋಧಕರು ಮತ್ತು ಸಾಫ್ಟ್‌ವೇರ್ ಎಂಜಿನಿಯರ್. ಉಚಿತ ಜ್ಯೋತಿಷ್ಯ ತಂತ್ರಾಂಶವಾದ 'ಜಗನ್ನಾಥ ಹೋರಾ' (Jagannatha Hora) ರೂಪಿಸಿದ ಇವರು, ವೈದಿಕ ಜ್ಯೋತಿಷ್ಯ ಮತ್ತು ಅಧ್ಯಾತ್ಮದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಹೋಮ ಮತ್ತು ಸಾತ್ವಿಕ ಜೀವನಶೈಲಿಯ ಪ್ರಚಾರದಲ್ಲಿ ತೊಡಗಿರುವ ಇವರು, ಸಂಕೀರ್ಣ ಜ್ಯೋತಿಷ್ಯ ತತ್ವಗಳನ್ನು ಸರಳವಾಗಿ ವಿವರಿಸುವುದರಲ್ಲಿ ಪರಿಣತರು.
ಬರಹ: ಶ್ರೀನಿವಾಸ ಮಠ
ಸಂಪಾದಕರು: ಶ್ರೀಗುರುಭ್ಯೋ ಜಾಲತಾಣ












Click it and Unblock the Notifications