ಕೂಡಿಬಾಳುವುದಕ್ಕೆ ಹಾಲು-ಜೇನು ರೆಸಿಪಿ

ಸಾಕಾಯ್ತು ಎಷ್ಟು ಅಡ್ಜೆಸ್ಟ್ ಮಾಡಿಕೊಂಡರು ಎಲ್ಲೋ ಕೊಂಕು, ಸ್ವಲ್ಪ ಕೊಸರು ಎಂದು ಬೇಸರಿಸುವ ಗಂಡಂದಿರು. ಹೀಗೆ ಸದಾ ಸದ್ ಮಾಡುವ Somಸಾರದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ ಎಂದು ಹೇಳೋ ಸರೀಕರು ಈ ಸಮಾಜದಲ್ಲಿ ಇಲ್ಲದೆ ಇಲ್ಲ. ಜಗಳ ಇರಬೇಕ್ರಿ ದಾಂಪತ್ಯದಲ್ಲಿ ಎನ್ನುವ ಮಹನೀಯರು ಹಾಗೂ ಮಹಿಳೆಯರು ಸಹ ತಮ್ಮ ಸ್ವಂತ ವಿಷಯಕ್ಕೆ ಬಂದಾಗ ಬೇಡಪ್ಪ ಈ ಗಲಾಟೆಗದ್ದಲ ಎಂದು ತಮ್ಮ ಆಪ್ತರ ಬಳಿ ಅಲವತ್ತುಕೊಳ್ತಾನೆ ಇರುತ್ತಾರೆ.
ಇನ್ನು ಯುವತಿಯರಂತೂ ಹೇಯ್ ನನ್ನದು ರಾಶಿ ಕುಂಭ ಕಣೆ ಯಾವ ಮೀನು ಬೀಳುತ್ತೋ ಅಂತ ಕಾಯ್ತಾ ಇದ್ದೀನಿ ಎನ್ನುವ ಸಣ್ಣ ಪುಳಕದಿಂದ ಪಿಸುಗುಡುತ್ತಿರುತ್ತಾರೆ ತಮ್ಮ ವಾರಿಗೆಯವರ ಬಳಿಯಲ್ಲಿ!! ಅವನದು ವೃಷಭ ರಾಶಿ, ನನ್ನದು ತುಲಾ, ನಾವಿಬ್ರು ಪ್ರೀತಿಸಿ ಮದುವೆ ಆಗಿದ್ದೇವೆ, ಅಂದು ಮನಸ್ಸೆ ಜಾತಕ ಆಗಿತ್ತು, ಆದರೆ ಈಗ ಅನ್ನಿಸ್ತಾ ಇದೆ ಕನಿಷ್ಠ ಒಬ್ಬರ ಬಳಿಯಲ್ಲಿ ಆದರು ನಾವು ಜಾತಕ ತೋರಿಸಬೇಕಿತ್ತು ಅಂತ ಬೇಸರ ಪಟ್ಟುಕೊಳ್ಳುವ ಹೆಣ್ಣುಮಕ್ಕಳು-ಚಿಂತಿಸುವ ಗಂಡು ಮಕ್ಕಳು ಇಲ್ಲದಿಲ್ಲ. ಓಕೇ..ಓಕೆ..!
ನಿಮ್ಮ ಚಿಂತೆ ಚಡಪಡಿಕೆ ನಮಗೆ ಅರ್ಥವಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ರೋಚಕ ಗುಟ್ಟುಗಳು ನಿಮ್ಮ ಭವಿಷ್ಯದಲ್ಲಿದೆ, ನಿಮದೆ ರಾಶಿಗಳಲ್ಲಿ ಬಚ್ಚಿಟ್ಟುಕೊಂಡಿವೆ! ಇದು ಸೈಕಾಲಜಿ ಶಾಸ್ತ್ರ ಎಂದು ಕರೆದರೆ ತಪ್ಪೇನಾಗುವುದಿಲ್ಲ. ಮನಸ್ಸಿನ ಉಲ್ಲಾಸ ಹೆಚ್ಚಿಸುವ ಖುಷಿ-ಖುಷಿ ಸಂಗತಿಗಳ ಅಮೃತ ಕಲಶ ಹಾಲು ಜೇನು ಅಂಕಣವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲಿ ಸಣ್ಣ ಮಟ್ಟದಲ್ಲಿ ಇರುವ ಚಡಪಡಿಕೆ, ಚಿಂತೆಯನ್ನು ಅಲ್ಪ ಮಟ್ಟಿಗೆ ದೂರ ಮಾಡುವ ಸಂಗತಿಗಳು ಅಂಕಣದಲ್ಲಿ ಒಂದೊಂದಾಗಿ, ರಾಶಿ ಕ್ರಮಕ್ಕನುಗುಣವಾಗಿ ತೆರೆದುಕೊಳ್ಳುತ್ತ ಸಾಗುತ್ತದೆ.
ಇದು ಸಂಪೂರ್ಣವಾದ ಭವಿಷ್ಯವಲ್ಲ, ಹಾಗಂತ ಬುರುಡೆನೂ ಅಲ್ಲ. ವೃಥಾ ಚಿಂತಿಸದೆ ಓದಿ ಸಂತಸ ಪಡುವ ದಟ್ಸ್ ಕನ್ನಡದ ಕೊಡುಗೆ. ಸಿಮ್ ಕಾರ್ಡು ಉಚಿತ, ಗಾಳಿಮಾತೂ ಉಚಿತ. ನೀವಿದನ್ನು ಓದುತ್ತಾ ಓದುತ್ತಾ ಹೋದಂತೆ 'ನಿಮ್ಮವರು ಹೀಗಾ' ಎಂದು ತಿಳಿದು ಖುಷಿ ಪಡುತ್ತೀರಿ. ನಿಮ್ಮ ಭಾವಿ ಸಂಗಾತಿ ರಾಶಿಯಲ್ಲಿ ಈ ಸಂಗತಿಗಳು ಇರುತ್ತವೆ ಎಂದು ತಿಳಿದಾಗಲಂತೂ ಅರೆ! ಹೀಗೆಲ್ಲ ಇದ್ಯಾ?!!! ನಾನು ಅವಳನ್ನು-ಅವನನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂದು ಖಂಡಿತ ನಿಮಗೆ ಅನ್ನಿಸದಿದ್ದರೆ ನವಗ್ರಹಗಳ ಮೇಲಾಣೆ. ಇಲ್ಲಿ ಹೆಚ್ಚು ಭೈರಿಗೆ ಇಲ್ಲ, ಆದರೆ ಮನದಲ್ಲಿ ಮರೆಯದೆ ಇಟ್ಟುಕೊಳ್ಳುವ ಕೆಲವು ಹಮ್ ಗಳಿವೆ... ಅದನ್ನು ಅನುಸರಿಸಿ, ಜೀವನ ಸರಿ ಮಾಡಿಕೊಂಡು, ನಾನು ಬಡವಿ, ಆತ ಬ(ಭ)ಡವ! ಎಂದು ಹಾಡಿಕೊಂಡು ಬದುಕಲ್ಲಿ ನವೋಲ್ಲಾಸ ಹೊ೦ದಬಹುದು..!
ಇದನ್ನು ಓದಿಕೊಳ್ಳುವುದು ಹೇಗೆ? ಸಿಂಪಲ್. ಒಂದು ರಾಶಿಯ ಪುರುಷ ಅಥವಾ ಸ್ತ್ರೀ ಇನ್ನೊಂದು ರಾಶಿಯ ಜತೆ ಸೇರಿದಾಗ ಅಂದರೆ ಮದುವೆಯಾದಾಗ, ಲವ್ ಮಾಡಿದಾಗ, ಲವ್ ಮಾಡಿದರೆ ಹೇಗೆ ಎಂದು ಯೋಚನಾಕ್ರಾಂತರಾಗಿರುವಾಗ ರಾಶಿಫಲಗಳು ನಿಮ್ಮ ನೆರವಿಗೆ ಹೇಗೆ ಧಾವಿಸಿ ಬರುತ್ತವೆ ಎನ್ನುವ ಸುಳಿವು ಇಲ್ಲಿ ಲಭ್ಯ. ಒಟ್ಟಾರೆ ಹೇಳುವುದಾದರೆ ಇದು ಸಂಬಂಧಗಳೆಂಬ ಈರುಳ್ಳಿ ಸಿಪ್ಪೆಯನ್ನು ಬಿಚ್ಚಿನೋಡುವ ಸರಳ ಗಣಿತ ಸೂತ್ರ. ಆಲ್ ಜಿಬ್ರಾ ಅಥವಾ ಜಾಮಿಟ್ರಿ ಅಥವಾ ಟ್ರಿಗ್ನಾಮಿಟ್ರಿ ಅಲ್ಲವೇ ಅಲ್ಲ. ಒಂದು ಕಪ್ಪು ಆಕಳ ಹಾಲು ಒಂದು ಕಪ್ಪು ಜೇನನ್ನು ಬೆರೆಸಿ ಕುಡಿದಷ್ಟೇ ಸರಳ ಮತ್ತು ಮನೋಹರ.
ಮೇಷ ರಾಶಿಯಿಂದ ಆರಂಭವಾಗುವ ಹೊಂದಾಣಿಕೆ ಜ್ಯೋತಿಷ್ಯ ಭವಿಷ್ಯ ಶಾಸ್ತ್ರವನ್ನು ಇವತ್ತಿನಿಂದ ಮೊದಲುಗೊಂಡು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ. ಇನ್ನು ನೀವುಂಟು ಮತ್ತು ಊರ ಉಸಾಬರಿಯನ್ನು ತಲೆಗೆ ಮೆತ್ತಿಕೊಳ್ಳುವ ನಮ್ಮ ಅಂಕಣಕಾರರುಂಟು.












Click it and Unblock the Notifications