AI ಮಾದರಿ ತರಬೇತಿಯಲ್ಲಿ ಹಕ್ಕುಸ್ವಾಮ್ಯ ರಕ್ಷಣೆಗಾಗಿ ಡಿಜಿಟಲ್ ಸುದ್ದಿ ಪ್ರಕಾಶಕರ ಒತ್ತಾಯ
ಕೃತಕ ಬುದ್ಧಿಮತ್ತೆಯ (AI) ದುರುಪಯೋಗ ಮತ್ತು ಸಂಭಾವ್ಯ ಹಕ್ಕುಸ್ವಾಮ್ಯ ಉಲ್ಲಂಘನೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್‌ಪಿಎ) AI ಮತ್ತು ಹಕ್ಕುಸ್ವಾಮ್ಯ ಕಾನೂನನ್ನು ಪರಿಶೀಲಿಸುವ ಕೇಂದ್ರ ಸರ್ಕಾರದ ಉಪಕ್ರಮವನ್ನು ಸ್ವಾಗತಿಸಿದೆ. ಡಿಜಿಟಲ್ ಸುದ್ದಿ ಪ್ರಕಾಶಕರ ವಿಷಯವನ್ನು (ಕಂಟೆಂಟ್) ಒಪ್ಪಿಗೆಯಿಲ್ಲದೆ AI ತರಬೇತಿ ಮತ್ತು ಎಐ ಅಪ್ಲಿಕೇಶನ್‌ಗಳಾದ ಸರ್ಚ್ ಹಾಗೂ ಇನ್ಫರ್ಮೇಷನ್ ಉದ್ದೇಶಗಳಿಗಾಗಿ ಬಳಸುವುದು ಹಕ್ಕುಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ಅಸೋಸಿಯೇಷನ್ ವಾದಿಸಿದೆ.
ಡಿಜಿಟಲ್ ವಿಭಾಗದಲ್ಲಿ ಅವರ ಹಕ್ಕುಗಳನ್ನು ಗುರುತಿಸುವ ವಿಷಯ ನಿರ್ಮಾಪಕರಿಗೆ ನ್ಯಾಯಯುತ ಪರಿಹಾರವನ್ನು ಖಾತ್ರಿಪಡಿಸುವ ಆಡಳಿತವನ್ನು ಈ ಸಂಘವು ಪ್ರತಿಪಾದಿಸುತ್ತದೆ ಎಂದು ಹೇಳಿದೆ. ದೇಶದಲ್ಲಿ ಡಿಜಿಟಲ್ ಸುದ್ದಿ ಮಾಧ್ಯಮದ ಬೆಳವಣಿಗೆಗೆ ನ್ಯಾಯಯುತವಾದ ನಿಲುವು ಯಾವುದೇ ಸರ್ಕಾರಿ ಉಪಕ್ರಮಕ್ಕೆ ಅತ್ಯಗತ್ಯ ಎಂದೂ ಹೇಳಿದೆ. ಈ ಕ್ರಮವು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿರುವ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ನೇತೃತ್ವದಲ್ಲಿದೆ. ಇದು ಎಐ ಅಸ್ತಿತ್ವದಲ್ಲಿರುವ ಹಕ್ಕುಸ್ವಾಮ್ಯ ಕಾನೂನುಗಳೊಂದಿಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಪಾಲುದಾರರ ಪ್ರತಿಕ್ರಿಯೆ ಪಡೆಯುತ್ತದೆ.

AI ತರಬೇತಿ ಮತ್ತು ಜನರೇಟಿವ್ ಅಪ್ಲಿಕೇಶನ್‌ಗಳಿಗೆ ಅನುಮತಿಯಿಲ್ಲದೆ ಡಿಜಿಟಲ್ ಸುದ್ದಿ ಪ್ರಕಾಶಕರ ವಿಷಯವನ್ನು ಬಳಸುವುದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ತನ್ನ ಹೇಳಿಕೆಯಲ್ಲಿ ಬಲವಾಗಿ ಸ್ಪಷ್ಟಪಡಿಸಿದೆ. ಅಭಿವೃದ್ಧಿ ಹೊಂದುತ್ತಿರುವ ಡಿಜಿಟಲ್ ಕ್ಷೇತ್ರದಲ್ಲಿ ವಿಷಯ ರಚನೆಕಾರರಿಗೆ ನ್ಯಾಯಯುತ ಪರಿಹಾರವನ್ನು ಖಾತ್ರಿಪಡಿಸುವ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಚೌಕಟ್ಟಿನ ಅಗತ್ಯವನ್ನು ಒತ್ತಿ ಹೇಳಿದೆ.
ವಿಷಯ ರಚನೆಕಾರರಿಗೆ (ಕಂಟೆಂಟ್ ಪ್ರೊಡ್ಯೂಸರ್ಸ್) ನ್ಯಾಯಯುತ ಪರಿಹಾರವನ್ನು ನೀಡುವ ಮೂಲಕ AI ಮಾದರಿಗಳನ್ನು ನಿರ್ಮಿಸಲು ಹಾಗೂ ಈ ಮೂಲಕ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುವ ನ್ಯಾಯಯುತ ಮತ್ತು ಸಮತೋಲಿತ ಆಡಳಿತವನ್ನು ರೂಪಿಸಲು ಕೇಂದ್ರದ ಸಚಿವಾಲಯದೊಂದಿಗೆ ಕೆಲಸ ಮಾಡಲು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ ಕಾಯುತ್ತಿದೆ ಎಂದೂ ತಮ್ಮ ನಿಲುವು ವ್ಯಕ್ತಪಡಿಸಿದೆ.
ಪ್ರಕಾಶಕರು ಹೇಳುವಂತೆ ಉತ್ಪಾದಕ AI ಪರಿಕರಗಳು ಸಾಮಾನ್ಯವಾಗಿ ಉಚಿತ ಮತ್ತು ಪೇಯ್ಡ್ ಎರಡೂ ಲೇಖನಗಳನ್ನು ಅನುಮತಿಯಿಲ್ಲದೆ ಸ್ಕ್ರ್ಯಾಪ್ ಮಾಡುತ್ತವೆ. ಇದು ಸುದ್ದಿವಾಹಿನಿಗಳ ಹಕ್ಕುಗಳು ಮತ್ತು ಆದಾಯವನ್ನು ದುರ್ಬಲಗೊಳಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿವೆ. ಪರ್ಪ್ಲೆಕ್ಸಿಟಿ AI ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಿಬಿಸಿ ಎಚ್ಚರಿಕೆಯೂ ನೀಡಿದೆ. ತನ್ನ ಕಂಟೆಂಟ್ ಸ್ಕ್ರ್ಯಾಪಿಂಗ್ ನಿಲ್ಲಿಸುವುದು, ಸಂಗ್ರಹಿಸಿದ ಡೇಟಾವನ್ನು ಅಳಿಸುವುದು ಮತ್ತು ಪರಿಹಾರವನ್ನು ಒತ್ತಾಯಿಸುತ್ತಿದೆ. ಒಟ್ಟಾರೆ AIನಲ್ಲಿ ವ್ಯಾಪಕವಾದ ಐಪಿ ವಿವಾದಗಳ ಬಗ್ಗೆ ಧ್ವನಿ ಎತ್ತಿದೆ. ಅನಧಿಕೃತ ಎಐ ಬಳಕೆಯ ಬಗ್ಗೆ ಎನ್‌ಡಿಟಿವಿ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್‌ನಂತಹ ಭಾರತೀಯ ಪ್ರಕಾಶಕರ ದೂರುಗಳನ್ನು ಅನುಸರಿಸಿ ಭಾರತವು ತನ್ನ ಹಕ್ಕುಸ್ವಾಮ್ಯ ಕಾನೂನುಗಳನ್ನು (ಕೃತಿಸ್ವಾಮ್ಯ ಕಾಯ್ದೆ, 1957) ಮರುಮೌಲ್ಯಮಾಪನ ಮಾಡಲು ಒಂದು ಸಮಿತಿಯನ್ನು ಕೂಡ ಸ್ಥಾಪಿಸಿದೆ.












Click it and Unblock the Notifications