AI jobs: ಭಾರತದಲ್ಲಿ ಎಐನಿಂದಲೇ 5 ವರ್ಷಗಳಲ್ಲಿ 40 ಲಕ್ಷ ಉದ್ಯೋಗ ಸೃಷ್ಟಿ, ಹೇಗೆ?
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದಾಗಿ ಬಹುತೇಕರು ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈಗಾಗಲೇ ಕೆಲವೆಡೆ ಎಐ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಇದರ ಪರಿಣಾಮ ಮತ್ತಷ್ಟು ತೀವ್ರಗೊಳ್ಳಲಿದೆ ಎಂಬ ಭವಿಷ್ಯವಾಣಿಗಳು ಸಹ ಕೇಳಿಬರುತ್ತಿವೆ. ಇದರ ನಡುವೆ ಭಾರತದಲ್ಲಿ ಎಐನಿಂದಲೇ ಮುಂದಿನ 5 ವರ್ಷಗಳಲ್ಲಿ 40 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಭಾರತದಲ್ಲಿ ಈಗಿನ ತಂತ್ರಜ್ಞಾನ ಮತ್ತು ಇತರ ಸೇವಾ ವಲಯವು 2031ರವರವರೆಗೆ ಎಐನಿಂದಾಗಿ ಉದ್ಯೋಗ ವಜಾಗೊಳಿಸುವ ಆತಂಕವನ್ನು ಎದುರಿಸುತ್ತಿದ್ದರೂ, ಮುಂದಿನ ಐದು ವರ್ಷಗಳಲ್ಲಿ 4 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಅವಕಾಶವನ್ನು ಹೊಂದಿದೆ ಎಂದು ನೀತಿ ಆಯೋಗ ತಿಳಿಸಿದೆ. ಅಡೆತಡೆಗಳನ್ನೇ ಅವಕಾಶವನ್ನಾಗಿ ಪರಿವರ್ತಿಸಲು, ನೀತಿ ಆಯೋಗವು ರಾಷ್ಟ್ರೀಯ ಎಐ ಪ್ರತಿಭಾ ಮಿಷನ್ ಅನ್ನು ಪ್ರಾರಂಭಿಸಲು ಶಿಫಾರಸು ಕೂಡ ಮಾಡಿದೆ. ಇದು ಭಾರತವನ್ನು ವಿಶ್ವದ ಎಐ ಕಾರ್ಯಪಡೆಯ ರಾಜಧಾನಿಯಾಗಿ ಪರಿವರ್ತಿಸುವ ದಿಟ್ಟ ಪ್ರಯತ್ನ ಎಂದು ಹೇಳಿಕೊಂಡಿದೆ.

ಶಾಲೆಗಳು, ವಿಶ್ವವಿದ್ಯಾಲಯಗಳು ಮತ್ತು ವೃತ್ತಿಪರ ಕಾರ್ಯಕ್ರಮಗಳಲ್ಲಿ ಎಐ ಸಾಕ್ಷರತೆಯನ್ನು ಮೂಲಭೂತ ಕೌಶಲ್ಯವನ್ನಾಗಿ ಮಾಡಲು ಶಿಕ್ಷಣ ವ್ಯವಸ್ಥೆಯಲ್ಲಿ ಎಐ ಅನ್ನು ಅಳವಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಜಾಗತಿಕವಾಗಿ ಕೃತಕ ಬುದ್ಧಿಮತ್ತೆಯಿಂದಾಗಿ ಉದ್ಯೋಗ ಸಾಮೂಹಿಕ ವಜಾ ಸುದ್ದಿಗಳು ಕಾಡ್ಗಿಚ್ಚಿನಂತೆ ಹರಡುತ್ತಿವೆ. ಇಡೀ ಪ್ರಪಂಚವೇ ಈ ಭೀತಿ ಎದುರಿಸುತ್ತಿರುವಾಗ ಭಾರತದ ನೀತಿ ಆಯೋಗವು ಕೃತಕ ಬುದ್ಧಿಮತ್ತೆಯಿಂದಲೇ ಉದ್ಯೋಗ ನಷ್ಟವನ್ನು ಕಡಿಮೆ ಮಾಡುವ ಗುರಿ ಹೊಂದಿರುವ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದೆ.
ನೀತಿ ಆಯೋಗವು ಶುಕ್ರವಾರ ಈ ಬಗ್ಗೆ ವರದಿ ನೀಡಿದ್ದು, ಎಐ ಆರ್ಥಿಕತೆಯಲ್ಲಿ ಉದ್ಯೋಗ ಸೃಷ್ಟಿಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಇದನ್ನು ಬರೆದಿದ್ದಾರೆ. ಐಬಿಎಂ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಲ್‌ಟಿಐಮೈಂಡ್‌ಟ್ರೀ, ಟೆಲಿಪರ್‌ಫಾರ್ಮೆನ್ಸ್, ಬಿಸಿಜಿ ಮತ್ತು ನಾಸ್ಕಾಮ್‌ನಂತಹ ಉದ್ಯಮ ದೈತ್ಯ ಕಂಪನಿಗಳ ತಜ್ಞರ ಮಾರ್ಗದರ್ಶನದೊಂದಿಗೆ ಈ ಮಾರ್ಗಸೂಚಿಯನ್ನು ರಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದೇಶದಲ್ಲಿ ಎಐ ಪ್ರತಿಭೆಗಳ ಕೊರತೆ
ದೇಶವು ಎಂದಿನಂತೆ ತನ್ನ ಕಾರ್ಯಾಚರಣೆ ಮುಂದುವರಿಸಿದರೆ, ಮುಂದೆ ದೊಡ್ಡ ತೊಂದರೆ ಎದುರಿಸಬೇಕಾಗುತ್ತದೆ ಎಂದೂ ಆ ವರದಿ ಉಲ್ಲೇಖಿಸಿದೆ. ಈ ಸನ್ನಿವೇಶದಲ್ಲಿ ತಂತ್ರಜ್ಞಾನ ಸೇವಾ ವಲಯದಲ್ಲಿನ ಸಿಬ್ಬಂದಿಗಳ ಸಂಖ್ಯೆ 2031ರ ವೇಳೆಗೆ 6 ಮಿಲಿಯನ್‌ಗೆ ಇಳಿಯಬಹುದು ಎಂದು ಅಂದಾಜಿಸಲಾಗಿದೆ.
ಭಾರತವು ಈ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ರಾಷ್ಟ್ರವು ತನ್ನ ಪ್ರಮುಖ ತಂತ್ರಜ್ಞಾನ ಸೇವೆಗಳಲ್ಲಿ ಬದಲಾಯಿಸಲಾಗದ ಉದ್ಯೋಗ ನಷ್ಟವನ್ನು ಅನುಭವಿಸಲಿದೆ. ಇದು ಮಾತ್ರವಲ್ಲದೆ ಆರ್ಥಿಕವಾಗಿ ಹಿಂದುಳಿಯುವಿಕೆ ಹಾಗೂ ಅದರ ಜಾಗತಿಕ ಸ್ಪರ್ಧಾತ್ಮಕತೆಯನ್ನು ದುರ್ಬಲಗೊಳಿಸುವ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದೂ ಹೇಳಿದೆ. ಭಾರತದಲ್ಲಿ ಸದ್ಯ ಹೆಚ್ಚಿನ ಉದ್ಯೋಗ ಸ್ಥಳಾಂತರದ ಅಪಾಯ, ಕಂಪ್ಯೂಟರ್ ವಿಜ್ಞಾನ ಶಿಕ್ಷಣದಲ್ಲಿನ ಅಂತರ ಮತ್ತು ದೇಶದಲ್ಲಿ ಎಐ ಪ್ರತಿಭೆಯ ಕೊರತೆ ಈ ಪ್ರಮುಖ ಮೂರು ಅಪಾಯಗಳನ್ನು ದಾಟಬೇಕಿದೆ ಎಂದು ಹೇಳಿದೆ.












Click it and Unblock the Notifications