Virat Kohli: ಆರ್‌ಸಿಬಿಯ ಇವಾನ್ ಸ್ಪೀಚ್ಲಿಗೆ ಭಾವುಕ ವಿದಾಯ ಹೇಳಿದ ವಿರಾಟ್ ಕೊಹ್ಲಿ; ಇವರು ಯಾರು? ಇಲ್ಲಿದೆ ಮಾಹಿತಿ
RCB Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಮಂದಿಯ ಶ್ರಮವಿದೆ. ಹಾಗೆಯೇ 2008 ರಿಂದ 2025ರ ವರೆಗೆ ಸತತ 18 ವರ್ಷಗಳ ಕಾಲ ಇವಾನ್ ಸ್ಪೀಚ್ಲಿ ಆರ್‌ಸಿಬಿ ತಂಡದ ಪ್ರಮುಖ ಹೆಡ್ ಫಿಸಿಯೋ ಆಗಿ ಸೇವೆ ಸಲ್ಲಿಸಿದ್ದು, ಇದೀಗ ಅವರಿಗೆ ಫ್ರಾಂಚೈಸಿಯು ವಿಶೇಷ ಗೌರವದ ಮೂಲಕ ವಿದಾಯ ಹೇಳಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಅವರು ಸ್ಪೀಚ್ಲಿ ಜೊತೆಗಿನ ಬಾಂಧವ್ಯದ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಆರ್‌ಸಿಬಿ ತಂಡದ ಏರಿಳಿತದ ಪಯಣದಲ್ಲಿ ತೆರೆಯ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಸ್ಪೀಚ್ಲಿ ಅವರಿಗಾಗಿ ಬೆಂಗಳೂರಿನಲ್ಲಿ ವಿಶೇಷ ವಿದಾಯ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಆರ್‌ಸಿಬಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಒಟ್ಟಾಗಿ ಸೇರಿ ಸ್ಪೀಚ್ಲಿ ಅವರ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಗೌರವಿಸಿದರು.

ವಿರಾಟ್ ಕೊಹ್ಲಿ- ಸ್ಪೀಚ್ಲಿ ಬಾಂಧವ್ಯ ಎಂತಹದ್ದು?
ವಿರಾಟ್ ಕೊಹ್ಲಿ ಮಾತನಾಡಿ, "ಆರ್‌ಸಿಬಿ ತಂಡದಲ್ಲಿ ನಾನು ಅತಿ ಹೆಚ್ಚು ಸಮಯ ಕಳೆದಿದ್ದು ಬಹುಶಃ ನಿಮ್ಮ ಜೊತೆಯಲ್ಲೇ ಇರಬಹುದು. ನೀವು ಈ ತಂಡದ ಏರಿಳಿತದ ಸಂದರ್ಭದಲ್ಲಿ ಜೋತೆಯಾಗಿ ನಿಂತವರಲ್ಲಿ ಒಬ್ಬರು. ಕಠಿಣ ಪರಿಶ್ರಮ ಮತ್ತು ವೃತ್ತಿಪರತೆಯನ್ನು ಹೊರತುಪಡಿಸಿ, ನಿಮ್ಮಲ್ಲಿ ಸದಾ ಎದ್ದು ಕಾಣುವ ವಿಷಯವೆಂದರೆ ದಯೆ, ಕಾಳಜಿ ಮತ್ತು ಪ್ರಾಮಾಣಿಕತೆ. ಈ ಕುಟುಂಬದ ಭಾಗವಾಗಿದ್ದೀರಿ ಮತ್ತು ಎಂದೆಂದಿಗೂ ಈ ಕುಟುಂಬದವರಾಗಿಯೇ ಇರುತ್ತೀರಿ. ನಾವು ನಿಮ್ಮನ್ನು ಯಾವಾಗಲೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇವೆ," ಎಂದು ಹೇಳಿದರು.
ಮೋ ಬೊಬಾಟ್ ಹೇಳಿದ್ದೇನು?
ಆರ್‌ಸಿಬಿ ತಂಡದ ನಿರ್ದೇಶಕ ಮೋ ಬೊಬಾಟ್ ಮಾತನಾಡಿ, "ಇವಾನ್ ಸ್ಪೀಚ್ಲಿ ಅವರು ಸುದೀರ್ಘ ವರ್ಷಗಳ ಕಾಲ ನಮ್ಮ ತಂಡದ ಪ್ರಮುಖ ಫಿಸಿಯೋ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಅಮೂಲ್ಯವಾದ ಕೊಡುಗೆಯನ್ನು ಗುರುತಿಸಲು, ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ಮತ್ತು ಆರ್‌ಸಿಬಿ ಪರ ಅವರು ಮಾಡಿದ ಎಲ್ಲ ಸಾಧನೆಗಳನ್ನು ಸಂಭ್ರಮಿಸಲು ನಾವು ಅವರನ್ನು ಬೆಂಗಳೂರಿಗೆ ಮರಳಿ ಕರೆಸಿಕೊಳ್ಳಲು ಬಯಸಿದ್ದೆವು, ಎಂದು ಹೇಳಿದರು. ಸ್ಪೀಚ್ಲಿ ಅವರು ತಂಡಕ್ಕೆ ನೀಡಿದ 18 ವರ್ಷಗಳ ನಿರಂತರ ಸೇವೆಯನ್ನು ಗೌರವಿಸುವುದು ಮತ್ತು ಅವರನ್ನು ಪ್ರೀತಿಯಿಂದ ಬೀಳ್ಕೊಡುವುದೇ ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂಬುದು ಬೋಬಾಟ್ ಅವರ ಮಾತಿನ ಅರ್ಥವಾಗಿದೆ.
ಆರ್‌ಸಿಬಿ ತೋರಿದ ಪ್ರೀತಿಗೆ ಭಾವುಕರಾದ ಇವಾನ್ ಸ್ಪೀಚ್ಲಿ
ಆರ್‌ಸಿಬಿ ತೋರಿದ ಈ ಪ್ರೀತಿಗೆ ಭಾವುಕರಾದ ಇವಾನ್ ಸ್ಪೀಚ್ಲಿ ಅವರು ಫ್ರಾಂಚೈಸಿಯೊಂದಿಗಿನ ತಮ್ಮ ಗಾಢವಾದ ಸಂಬಂಧ ಎಂತಹದ್ದು ಎಂದು ವಿವರಿಸಿದ್ದಾರೆ. "ನಾನು ನಿನ್ನೆ ಹೋಟೆಲ್‌ಗೆ ಭೇಟಿ ನೀಡಿದಾಗ ಯಾವುದೋ ಹೊಸ ಜಾಗಕ್ಕೆ ಬಂದಂತೆ ಅನಿಸಲಿಲ್ಲ, ಮನೆಗೆ ಮರಳಿದ ಅನುಭವವಾಯಿತು. ನಮ್ಮಲ್ಲಿ ಅನೇಕರು ದೀರ್ಘಕಾಲದಿಂದ ಇಲ್ಲಿದ್ದೇವೆ ಮತ್ತು ಆರ್‌ಸಿಬಿ ನನಗೆ ಯಾವಾಗಲೂ ಒಂದು ಕುಟುಂಬವಿದ್ದಂತೆ. ವಿಶ್ವ ಕ್ರಿಕೆಟ್‌ನಲ್ಲಿರುವ ಪ್ರತಿಯೊಬ್ಬರೂ ಇಲ್ಲಿ ಕನಿಷ್ಠ ಒಂದು ಸೀಸನ್ ಕಳೆಯಲು ಬಯಸುತ್ತಾರೆ. ಅಂತಹದ್ದರಲ್ಲಿ ಇಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಲು ನಾನು ಅದೃಷ್ಟ ಮಾಡಿದ್ದೆ. ನಾನು ಯಾವಾಗಲೂ ಆರ್‌ಸಿಬಿಯ ಒಂದು ಭಾಗವಾಗಿಯೇ ಇರುತ್ತೇನೆ," ಎಂದು ಹೇಳಿದರು.
ಒಟ್ಟಿನಲ್ಲಿ ಹೇಳುವುದಾದರೆ ಆರ್‌ಸಿಬಿ ಫ್ರಾಂಚೈಸಿ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕೇವಲ ಆಟಗಾರರಷ್ಟೇ ಅಲ್ಲದೆ, ಸಹಾಯಕ ಸಿಬ್ಬಂದಿಯ ಶ್ರಮವೂ ದೊಡ್ಡದಿದೆ ಎಂಬುದಕ್ಕೆ ಸ್ಪೀಚ್ಲಿ ಅವರ ಈ ಸುದೀರ್ಘ ಪಯಣವೇ ಸಾಕ್ಷಿ. ತಂಡದಲ್ಲಿ ಒಂದು ಉತ್ತಮ ವಾತಾವರಣ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ಇವರು ಪ್ರಮುಖ ಕೊಡುಗೆ ನೀಡಿದ್ದಾರೆ.












Click it and Unblock the Notifications