Arun Dhumal: ಕಳೆದ ಬಾರಿ ಸಿಎಸ್‌ಕೆ ಗೆದ್ದಿದ್ದರೆ ಚೆನ್ನೈನಲ್ಲಿ ಫೈನಲ್ ಆಡಿಸುತ್ತಿದ್ದೆವು: ಐಪಿಎಲ್ ಅಧ್ಯಕ್ಷ ಹೀಗೆ ಹೇಳಿದ್ಯಾಕೆ
Arun Dhumal: ಐಪಿಎಲ್ ಫೈನಲ್ ಪಂದ್ಯವನ್ನ ಬೆಂಗಳೂರಿನಿಂದ ಅಹಮದಬಾದ್‌ಗೆ ಶಿಫ್ಟ್ ಮಾಡಿದ ವಿಚಾರವಾಗಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಈ ನಡುವೆಯೇ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಮಹತ್ವದ ಹೇಳಿಕೆ ನೀಡಿದ್ದು, ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ಪಂದ್ಯವನ್ನು ಆಯೋಜಿಸುವುದು ಅಸಾಧ್ಯ ಎಂದು ತಿಳಿಸಿದ್ದಾರೆ. ಈ ನಿರ್ಧಾರ ತೆಗೆದುಕೊಂಡಿದ್ದು ಯಾಕೆ ಎನ್ನುವ ಮಾಹಿತಿಯನ್ನು ಕೂಡ ವಿವರಿಸಿದ್ದಾರೆ.
ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಯಾವ ಟೀಂ ಫೈನಲ್ ಗೆಲ್ಲುತ್ತದೆಯೋ ಮುಂದಿನ ಬಾರಿ ಆ ತಂಡದ ಹೋಂ ಗ್ರೌಂಡ್‌ನಲ್ಲೇ ಫೈನಲ್ ಪಂದ್ಯ ಆಡಿಸಲಾಗುತ್ತದೆ. ಆದರೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಸ್ಥಳಾಂತರ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಬರುವ ಉಚಿತ ಟಿಕೆಟ್‌ಗಳ ಅತಿಯಾದ ಬೇಡಿಕೆ ಮತ್ತು ಕ್ರೀಡಾಂಗಣದ ಕಡಿಮೆ ಸಾಮರ್ಥ್ಯವೇ ಇದಕ್ಕೆ ಪ್ರಮುಖ ಕಾರಣ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ತಿಳಿಸಿದ್ದಾರೆ.

ಬಿಸಿಸಿಐ ಹೇಳಿದ್ದೇನು?
ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯ ಈಗ 1.30 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಪ್ರದಾಯದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಲಿ ಚಾಂಪಿಯನ್ ಆಗಿರುವುದರಿಂದ ಫೈನಲ್ ಪಂದ್ಯವು ಬೆಂಗಳೂರಿನಲ್ಲಿ ನಡೆಯಬೇಕಿತ್ತು. "ಸ್ಥಳೀಯ ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ಬಂದ ಕೆಲವು ಬೇಡಿಕೆಗಳು ಬಿಸಿಸಿಐನ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳ ವಿರುದ್ಧ ಇವೆ. ಹೀಗಾಗಿ ಸ್ಥಳವನ್ನು ಮರುನಿಯೋಜಿಸಲಾಗಿದೆ," ಎಂದು ಬಿಸಿಸಿಐ ಬುಧವಾರ ತಿಳಿಸಿತ್ತು.
ಅರುಣ್ ಧುಮಾಲ್ ಹೇಳಿದ್ದೇನು?
ಬಳಿಕ ಗುರುವಾರ ಪಿಟಿಐ ಜೊತೆ ಮಾತನಾಡಿದ ಧುಮಾಲ್ ಅವರು ಕರ್ನಾಟಕ ಸರ್ಕಾರವು ರಾಜ್ಯದ ಪ್ರತಿ ಶಾಸಕ, ವಿಧಾನ ಪರಿಷತ್ ಸದಸ್ಯ ಮತ್ತು ಸಂಸದರಿಗೆ ತಲಾ ಮೂರು ಉಚಿತ ಟಿಕೆಟ್‌ಗಳ ಕೋಟಾವನ್ನು ಹೊಂದಿದೆ. ಕೇವಲ 40,000 ಸಾಮರ್ಥ್ಯವಿರುವ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬೇಡಿಕೆಯನ್ನು ಈಡೇರಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಫೈನಲ್ ಪಂದ್ಯ ಶಿಫ್ಟ್ ಆಗಿದ್ದು ಯಾಕೆ?
"ಸಂಪ್ರದಾಯದಂತೆ ಈ ಬಾರಿಯ ಐಪಿಎಲ್ ಫೈನಲ್ ಪಂದ್ಯವು ಬೆಂಗಳೂರಿನಲ್ಲೇ ನಡೆಯಬೇಕಿತ್ತು. ನಾವು ಈ ಬಗ್ಗೆ ಕೆಎಸ್‌ಸಿಎ ಜೊತೆ ಚರ್ಚಿಸಿದೆವು. ಆದರೆ ಕಳೆದ ವರ್ಷ ನಡೆದ ಕಾಲ್ತುಳಿತ ಘಟನೆಯಿಂದ ಅವರು ಕೆಲವು ಸವಾಲುಗಳನ್ನು ಎದುರಿಸುತ್ತಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರವು ಶಾಸಕರಿಗೆ ಉಚಿತ ಟಿಕೆಟ್‌ಗಳನ್ನು ನೀಡಬೇಕೆಂದು ಕೇಳುತ್ತಿದೆ. ಜೊತೆಗೆ ಕೆಎಸ್‌ಸಿಎ ಕೂಡ ತನ್ನ ಸದಸ್ಯರಿಗೆ ಟಿಕೆಟ್ ನೀಡುವ ಬೇಡಿಕೆಗಳನ್ನು ಇಟ್ಟಿದೆ. ಈ ಎಲ್ಲಾ ಕಾರಣಗಳಿಂದಾಗಿ ಬೆಂಗಳೂರಿನಿಂದ ಪಂದ್ಯವನ್ನು ಸ್ಥಳಾಂತರಿಸುವುದು ಅನಿವಾರ್ಯವಾಯಿತು," ಎಂದು ಅವರು ಹೇಳಿದರು.
"ಕ್ರೀಡಾಂಗಣದ ಸಾಮರ್ಥ್ಯವೂ ಅಷ್ಟೊಂದು ಹೆಚ್ಚಿಲ್ಲ. ಲೀಗ್ ಪಂದ್ಯಗಳಿಗೂ ಸಹ ಅಲ್ಲಿ ಲಭ್ಯವಿದ್ದ ಟಿಕೆಟ್‌ಗಳ ಸಂಖ್ಯೆ ತುಂಬಾ ಕಡಿಮೆ ಇತ್ತು. ಐಪಿಎಲ್ ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಬರುತ್ತಾರೆ. ಆದ್ದರಿಂದ ನಾವು ಅಭಿಮಾನಿಗಳಿಗಾಗಿ ಹೆಚ್ಚಿನ ಪ್ರಮಾಣದ ಟಿಕೆಟ್‌ಗಳನ್ನು ಲಭ್ಯವಿರಿಸುವ ಅಗತ್ಯವಿದೆ. ಅಲ್ಲದೆ ಅದೇ ಸಮಯದಲ್ಲಿ ಐಸಿಸಿ ಮಂಡಳಿಯ ಸಭೆಯೂ ನಡೆಯಲಿದ್ದು, ಅದಕ್ಕಾಗಿ ಸಾಕಷ್ಟು ಸದಸ್ಯರು ಆಗಮಿಸುತ್ತಿದ್ದಾರೆ," ಎಂದು ಅವರು ಹೇಳಿದರು.
"ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ದೊಡ್ಡ ಕ್ರೀಡಾಂಗಣವೇ ಹೆಚ್ಚು ಸೂಕ್ತ ಎಂದು ನಾವೆಲ್ಲರೂ ಭಾವಿಸಿದೆವು. ಅಭಿಮಾನಿಗಳ ಅನುಕೂಲ ಹಾಗೂ ಐಸಿಸಿ ಮಂಡಳಿಯ ಸಭೆಗಾಗಿ ಬರುತ್ತಿರುವ ಅಂತಾರಾಷ್ಟ್ರೀಯ ಅತಿಥಿಗಳನ್ನು ಗಮನದಲ್ಲಿಟ್ಟುಕೊಂಡು ನಾವು ಅಹಮದಾಬಾದ್ ಅನ್ನು ಫೈನಲ್ ಪಂದ್ಯಕ್ಕಾಗಿ ಆಯ್ಕೆ ಮಾಡಿದೆವು," ಎಂದು ಧುಮಾಲ್ ಹೇಳಿದರು.
'ಸಿಎಸ್‌ಕೆ ಗೆದ್ದಿದ್ದರೆ ಚೆನ್ನೈನಲ್ಲಿ ಫೈನಲ್ ಆಡಿಸುತ್ತಿದ್ದೆವು'
ಅಹಮದಾಬಾದ್ ಕ್ರೀಡಾಂಗಣಕ್ಕೆ ಪದೇ ಪದೇ ಫೈನಲ್ ಆತಿಥ್ಯ ನೀಡುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅರುಣ್ ಧುಮಾಲ್ ಅವರು, "ಸಾಮಾನ್ಯವಾಗಿ ಹಿಂದಿನ ಬಾರಿ ಗೆದ್ದ ತಂಡದ ತವರು ನೆಲದಲ್ಲೇ ಫೈನಲ್ ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿರುತ್ತದೆ. ಆದರೆ ನಾವು ಚರ್ಚಿಸಿದ ಸಮಸ್ಯೆಗಳನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಪಂದ್ಯ ನಡೆಸುವುದು ಅಸಾಧ್ಯವಾಗಿದೆ. ಒಂದು ವೇಳೆ ಕಳೆದ ಸೀಸನ್‌ನಲ್ಲಿ ಸಿಎಸ್‌ಕೆ ಗೆದ್ದಿದ್ದರೆ ನಾವು ಖಂಡಿತವಾಗಿಯೂ ಚೆನ್ನೈನಲ್ಲಿ ಫೈನಲ್ ನಡೆಸುತ್ತಿದ್ದೆವು," ಎಂದು ಹೇಳಿದರು.
ಮತ್ತೊಂದೆಡೆ ಈ ನಿರ್ಧಾರದ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಫೈನಲ್ ಪಂದ್ಯದ ಆತಿಥ್ಯಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ನಮಗೆ ಅವಕಾಶ ನೀಡದಿರುವುದು ಬೇಸರದ ಸಂಗತಿ ಎಂದು ಸಂಸ್ಥೆಯು ಆಕ್ರೋಶ ಹೊರಹಾಕಿದೆ. ಒಟ್ಟಿನಲ್ಲಿ ಇದೀಗ ಉಚಿತ ಟಿಕೆಟ್‌ಗಳ ಬೇಡಿಕೆ ಹಾಗೂ ಹೆಚ್ಚಿನ ಸಾಮರ್ಥ್ಯದ ಆಧಾರದ ಮೇಲೆ ಪಂದ್ಯವನ್ನ ಸ್ಥಳಾಂತರ ಮಾಡಲಾಗಿದೆ ಎಂಬುದು ಬಿಸಿಸಿಐ ಹಾಗೂ ಐಪಿಎಲ್ ಅಧ್ಯಕ್ಷರ ಸ್ಪಷ್ಟನೆಯಾಗಿದೆ.












Click it and Unblock the Notifications