Tamilnadu Election Results: ತಮಿಳುನಾಡು ವಿಧಾನಸಭೆ ಚುನಾವಣೆ ಕಾವು: ವಿಜಯ್ ಎಂಟ್ರಿಯಿಂದ ರಾಜಕೀಯಕ್ಕೆ ಹೊಸ ತಿರುವು
Tamilnadu Election Results: ತಮಿಳುನಾಡು ವಿಧಾನಸಭೆ ಚುನಾವಣೆ ಈ ಬಾರಿ ಹಲವು ಕಾರಣಗಳಿಗೆ ಈ ಬಾರಿ ಕುತೂಹಲ ಮೂಡಿಸಿದೆ. ತಮಿಳುನಾಡಿನ ರಾಜಕೀಯಕ್ಕೆ ನಟ ಹಾಗೂ ರಾಜಕಾರಣಿ ವಿಜಯ್ ಅವರ ಎಂಟ್ರಿಯು ಸಂಚಲನ ಮೂಡಿಸಿದೆ. ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ ಎನ್ನುವ ಪಕ್ಷವನ್ನು ಸ್ಥಾಪಿಸಿದ ವಿಜಯ್ ಅವರು ಎರಡು ವರ್ಷದ ಅವಧಿಯಲ್ಲೇ ದೊಡ್ಡ ಮಟ್ಟದಲ್ಲಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಅದರಲ್ಲೂ ಯುವ ಮತದಾರರನ್ನು ದೊಡ್ಡ ಮಟ್ಟದಲ್ಲಿ ಸೆಳೆದಿದ್ದಾರೆ. ಇದೇ ಕಾರಣಕ್ಕೆ ಮೇ 4ರ ವಿಧಾನಸಭೆ ಚುನಾವಣೆ ಫಲಿತಾಂಶವು ಹೆಚ್ಚು ಗಮನ ಸೆಳೆಯುತ್ತಿದೆ. ಯುವಕರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಟಿವಿಕೆಗೆ ಮತ ಚಲಾಯಿಸಿರುವ ಸಾಧ್ಯತೆ ಇದೆ.

ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಹಲವು ಗಂಭೀರ ಹಾಗೂ ಹಾಸ್ಯಾಸ್ಪದ ಚರ್ಚೆಗಳು ರಾಜಕೀಯ ರಂಗದಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಚುನಾವಣಾ ಸಾಧನೆಯ ಬಗ್ಗೆ ಚರ್ಚಿಸುತ್ತಿದ್ದಾರೆ.
ಇನ್ನು ಹಲವು ವಿಷಯಗಳು ಚುನಾವಣೆ ಫಲಿತಾಂಶಕ್ಕೂ ಮುಂಚೆಯೇ ಕಾವು ಪಡೆದುಕೊಂಡಿದೆ. ಅದರಲ್ಲಿ ಕಾಂಗ್ರೆಸ್ ಇನ್ನು ಮುಂದೆ ತಟಸ್ಥವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದೆ. ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಪಕ್ಷವು ಸರ್ಕಾರದಲ್ಲಿ ಇರಬೇಕು ಅಥವಾ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರತಿಪಾದಿಸಿದ ಮೊದಲ ಡಿಎಂಕೆ ಮಿತ್ರ ಪಕ್ಷ ಇದಾಗಿದೆ.
ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವುದೇ ಗಂಭೀರ ಚರ್ಚೆ
ಇನ್ನು ಈಚೆಗೆ ಪ್ರಕಟವಾದ ಎಕ್ಸಿಟ್ ಪೋಲ್ ರಿಪೋರ್ಟ್‌ನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಕ್ಕೆ ಮ್ಯಾಜಿಕ್ ನಂಬರ್ ಬರಲಿದೆ ಎಂದು ಹೇಳಲಾಗಿದ್ದರೂ ಕೆಲವೊಂದು ವರದಿಗಳು ಟಿವಿಕೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದೂ ಹೇಳಿವೆ. ಹೀಗಾಗಿ, ಈ ಬಾರಿಯ ವಿಧಾನಸಭೆ ಚುನಾವಣೆ ಫಲಿತಾಂಶವು ಭಾರೀ ಕುತೂಹಲ ಕೆರಳಿಸಿದೆ. ತಮಿಳುನಾಡಿನಲ್ಲಿ ಉಳಿದ ರಾಜ್ಯಗಳಿಗಿಂತಲೂ ನಟ - ನಟಿಯರಿಗೆ ರಾಜಕೀಯ ಕ್ಷೇತ್ತದಲ್ಲಿ ಮನ್ನಣೆ ನೀಡುವುದು ಇದೆ. ಆದರೆ ತಮಿಳುನಾಡಿನ ಜನರು ವಿಜಯ್ ಅವರನ್ನು ಹೇಗೆ ಸ್ವಾಗತಿಸುತ್ತಾರೆ ಎನ್ನುವುದು ಸದ್ಯಕ್ಕೆ ಇರುವ ಕುತೂಹಲವಾಗಿದೆ.
ತಮಿಳುನಾಡಿನಲ್ಲಿ ಎಂಜಿಆರ್ ಮಾದರಿಯಲ್ಲೇ ವಿಜಯ್ ಅವರು ಮೊದಲ ಬಾರಿಯೇ ಅಮೋಘ ವಿಜಯ ಸಾಧಿಸಲಿದ್ದಾರೆ ಎಂದು ಅವರ ಅಭಿಮಾನಿಗಳು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಇತಿಹಾಸ ಮರುಕಳುಹಿಸಲಿದೆ ಎನ್ನುವುದು ಹಲವರ ನಂಬಿಕೆಯಾಗಿದೆ. ಆದರೆ ಎನ್‌ಡಿಎ ಕೊನೆಯ ಹಂತದಲ್ಲಿ ಮಾಡಿದ ಸಣ್ಣಪುಟ್ಟ ತಪ್ಪುಗಳು ಡಿಎಂಕೆಗೆ ವರದಾನವಾಗಿ ಪರಿಣಮಿಸಿವೆ.
ಅದರಲ್ಲಿ ಹಿಂದಿ ಹೇರಿಕೆ ಅಥವಾ ಭಾಷಾ ವಿಚಾರ, ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಈ ವಿಷಯಗಳು ಡಿಎಂಕೆಗೆ ತಮಿಳುನಾಡಿನಲ್ಲಿ ಲಾಭವನ್ನು ತಂದು ಕೊಟ್ಟಿದೆ. ಡಿಎಂಕೆ ಬಿಟ್ಟು ಬೇರೆ ಯಾವುದೇ ಪಕ್ಷ ಬಂದರೂ ಬಿಜೆಪಿ ಸುಲಭವಾಗಿ ತಮಿಳುನಾಡಿನಲ್ಲಿ ರಾಜಕೀಯಕ್ಕೆ ಬರುವ ಸಾಧ್ಯತೆ ಇದೆ ಎನ್ನುವುದು ಸಹ ಅಲ್ಲಿನ ಲೆಕ್ಕಾಚಾರವಾಗಿದೆ.












Click it and Unblock the Notifications