Kalita Majhi: 2,500 ರೂಪಾಯಿ ಸಂಬಳದ ಮನೆಗೆಲಸದಾಕೆ ಇಂದು ಶಾಸಕಿ: ಬಂಗಾಳದಲ್ಲಿ ಗೆದ್ದು ಬೀಗಿದ ಕಲಿತಾ ಮಾಝಿ ಯಾರು?
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಅತ್ಯಂತ ಕುತೂ:ಹಲಕಾರಿ ಮತ್ತು ಸ್ಪೂರ್ತಿದಾಯಕ ಗೆಲುವೊಂದು ದಾಖಲಾಗಿದೆ. ಔಸ್‌ಗ್ರಾಮ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನೆಗೆಲಸದ ಮಹಿಳೆ ಕಲಿತಾ ಮಾಝಿ (Kalita Majhi) ಅವರು ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ತಿಂಗಳಿಗೆ 2,500 ರೂ. ಸಂಪಾದನೆ
ಕಲಿತಾ ಮಾಝಿ ಅವರು ತಿಂಗಳಿಗೆ ಕೇವಲ 2,500 ರೂಪಾಯಿ ವೇತನಕ್ಕೆ ಮನೆಗೆಲಸ ಮಾಡುತ್ತಿದ್ದ ಸಾಮಾನ್ಯ ಮಹಿಳೆ. ಅಂತಹ ವ್ಯಕ್ತಿ ಇಂದು ಶಾಸಕಿಯಾಗಿ ಆಯ್ಕೆಯಾಗಿರುವುದು ಎಲ್ಲರ ಗಮನ ಸೆಳೆದಿದೆ. ಸಾಮಾನ್ಯ ಜನರನ್ನು ಕಣಕ್ಕಿಳಿಸುವ ಬಿಜೆಪಿಯ ತಂತ್ರಗಾರಿಕೆಯ ಭಾಗವಾಗಿ ಇವರಿಗೆ ಟಿಕೆಟ್ ನೀಡಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಬೃಹತ್ ಅಲೆಯೊಂದಿಗೆ ಇವರ ಈ ವೈಯಕ್ತಿಕ ಗೆಲುವು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಇವರ ಈ ಗೆಲುವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಬೃಹತ್ ಅಲೆಯೊಂದಿಗೆ ಸಂಭವಿಸಿದೆ. ಅತ್ಯಂತ ರೋಚಕವಾಗಿ ನಡೆದ ಚುನಾವಣಾ ಕದನದಲ್ಲಿ ಕಲಿತಾ ಮಾಝಿ ಅವರು ಒಟ್ಟು 1,07,692 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಜಯ ದಾಖಲಿಸಿದ್ದಾರೆ. ಸಾಮಾನ್ಯ ಬಡ ಕುಟುಂಬದಿಂದ ಬಂದ ಕಲಿತಾ ಅವರ ಈ ಗೆಲುವು, ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಜನರಿಗೂ ಉನ್ನತ ಸ್ಥಾನಕ್ಕೇರುವ ಅವಕಾಶವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇದೊಂದು ಅತ್ಯಂತ ಸ್ಮರಣೀಯ ವೈಯಕ್ತಿಕ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.
ಕಲಿತಾ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಅವರು, ಇಂದು ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸುತ್ತಿರುವುದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಹಿಂದೆ 2021ರ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ್ದ ಕಲಿತಾ ಅವರಿಗೆ, ಜನರೊಂದಿಗೆ ಅವರಿಗಿದ್ದ ನಿಕಟ ಸಂಪರ್ಕವನ್ನು ಗುರುತಿಸಿ ಬಿಜೆಪಿ ಎರಡನೇ ಬಾರಿಗೆ ಟಿಕೆಟ್ ನೀಡಿತ್ತು.
ತಮ್ಮ ಪ್ರಚಾರದ ಉದ್ದಕ್ಕೂ ಮಹಿಳಾ ಸಬಲೀಕರಣ, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರ ಏಳಿಗೆಗಾಗಿ ಕಲಿತಾ ಧ್ವನಿ ಎತ್ತಿದ್ದರು. "ಒಬ್ಬ ಮನೆಗೆಲಸದ ಮಹಿಳೆಯೂ ಶಾಸಕಿಯಾಗಬಹುದು ಎಂಬುದನ್ನು ನಾನು ತೋರಿಸಿಕೊಡಲು ಬಯಸುತ್ತೇನೆ ಮತ್ತು ನನ್ನಂತಹ ಜನರಿಗಾಗಿ ನಾನು ಮಾತನಾಡುತ್ತೇನೆ" ಎಂದು ಅವರು ಪ್ರಚಾರದ ವೇಳೆ ಹೇಳಿದ್ದರು. ಇಂದು ಅವರು ಶಾಸಕಿಯಾಗಿ ಆಯ್ಕೆಯಾಗಿರುವುದು ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನಮಾನ ನೀಡುವ ಪ್ರಜಾಪ್ರಭುತ್ವದ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಕಲಿತಾ ಮಾಝಿ ಅವರ ಈ ವೈಯಕ್ತಿಕ ಗೆಲುವಿನ ಜೊತೆಗೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಬಾರಿಸಿದೆ. ಒಟ್ಟು 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಸುದೀರ್ಘ ಆಡಳಿತ ಅಂತ್ಯಗೊಂಡಿದ್ದು, ಬಂಗಾಳದ ರಾಜಕೀಯ ಭೂಪಟದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದೆ. ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ ಸ್ಥಾನಮಾನ ನೀಡುವ ಬಿಜೆಪಿಯ ತಂತ್ರಗಾರಿಕೆಗೆ ಕಲಿತಾ ಮಾಝಿ ಅವರ ಗೆಲುವು ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ.












Click it and Unblock the Notifications