ಬಿಜೆಪಿ ಐತಿಹಾಸಿಕ ಸಾಧನೆ: ಈಗ ಅಂಗ, ವಂಗ, ಕಳಿಂಗ ಪ್ರಾಂತ್ಯಗಳಲ್ಲಿ ಕಮಲ ಪಕ್ಷದ್ದೇ ಆಡಳಿತ
ಮಹಾಭಾರತವೂ ಸೇರಿದಂತೆ ಭಾರತದ ಬಹುತೇಕ ಪ್ರಾಚೀನ ಕಾವ್ಯಗಳಲ್ಲಿ, ಪುರಾಣಗಳಲ್ಲಿ'ಅಂಗ, ವಂಗ, ಕಳಿಂಗ ಪ್ರಾಂತ್ಯ'ಗಳ ಉಲ್ಲೇಖ ಬರುತ್ತಲೇ ಇರುತ್ತದೆ. ಇಂದಿಗೂ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಬಯಲಾಟಗಳಲ್ಲಿ ಸ್ವಯಂವರದ ದೃಶ್ಯವಿದ್ದರೆ 'ಅಂಗ, ವಂಗ, ಕಳಿಂಗಗಳಿಂದ ಮದುವೆ ವಯಸ್ಸಿನ ಹುಡುಗರು ಸ್ವಯಂವರಕ್ಕೆ ಬರುತ್ತಿಪ್ಪರು' ಎನ್ನುವ ಸಂಭಾಷಣೆ ಇರುತ್ತದೆ.
ಭಾರತ ದೇಶದ ಅಸ್ಮಿತೆಯ ಭಾಗವೇ ಆಗಿರುವ, ಇಡೀ ದೇಶದ ಆಗುಹೋಗುಗಳ ಮೇಲೆ ಪ್ರಭಾವ ಬೀರುವ ಈ ಮೂರೂ ಪ್ರಾಂತ್ಯಗಳಲ್ಲಿ ಅಧಿಕಾರ ಹಿಡಿಯಬೇಕೆಂಬುದು ಬಿಜೆಪಿಯ ಮಹತ್ವಾಕಾಂಕ್ಷೆಯಾಗಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರ ದಕ್ಕಿದ್ದರೂ ಬಿಜೆಪಿಗೆ ಅಂಗ (ಬಿಹಾರ), ವಂಗ (ಬಂಗಾಳ) ಮತ್ತು ಕಳಿಂಗ (ಒಡಿಶಾ) ರಾಜ್ಯಗಳಲ್ಲಿ ಅಧಿಕಾರ ಮರೀಚಿಕೆಯೇ ಆಗಿತ್ತು. ಸತತ ಪರಿಶ್ರಮ, ತ್ಯಾಗ, ತಂತ್ರಗಾರಿಕೆ, ಸಾಮ-ದಾನ-ಭೇದ-ದಂಡಗಳ ಚಾಕಚಕ್ಯತೆಯಿಂದ ಈ ಪೈಕಿ ಎರಡು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಇಂದು (ಮೇ 4) ಬಂಗಾಳದಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಮೂರನೇ ರಾಜ್ಯದಲ್ಲಿಯೂ ಗೆಲುವಿನ ನಗೆ ಬೀರಿದೆ.

ಈ ಮೂಲಕ ಭಾರತ ಇತಿಹಾಸದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಮೂರು ಮುಖ್ಯ ಪ್ರಾಂತ್ಯಗಳಲ್ಲಿ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸಿದೆ. ಅಂಗ, ವಂಗ (ಬಂಗ) ಮತ್ತು ಕಳಿಂಗಗಳ ಮಹತ್ವ, ಅದೇಕೆ ಭಾರತದ ಇತಿಹಾಸದಲ್ಲಿ ಅಷ್ಟು ಮುಖ್ಯ ಎನ್ನುವ ಪ್ರಶ್ನೆಗಳಿಗೆ ಮುಂದಿನ ಸಾಲುಗಳಲ್ಲಿ ಉತ್ತರವಿದೆ.
ಒಂದೇ ಮೂಲದ ಐದು ಕವಲು
ಮಹಾಭಾರತದಲ್ಲಿ ದೀರ್ಘತಮಸ್ ಮುನಿ ಎನ್ನುವ ಋಷಿಯ ಕಥೆ ಬರುತ್ತದೆ. ಆ ಮುನಿಗೆ ಅಂಗ, ವಂಗ (ಬಂಗ), ಕಳಿಂಗ, ಪುಂಡ್ರ ಮತ್ತು ಸುಹ್ಮ ಎನ್ನುವ ಮಕ್ಕಳಿರುತ್ತಾರೆ.
ಐವರು ಸಹೋದರರು, ಒಂದು ಮೂಲ: ಮಹಾಭಾರತದ ಕಥೆಯ ಪ್ರಕಾರ, ದೀರ್ಘತಮಸ್ ಮುನಿಯ ಐವರು ಪುತ್ರರಾದ ಅಂಗ, ವಂಗ (ನಂತರ ಬಂಗ), ಕಳಿಂಗ, ಪುಂಡ್ರ ಮತ್ತು ಸುಹ್ಮ ಎಂಬುವವರು ತಮ್ಮ ಹೆಸರಿನಲ್ಲೇ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಈ ಪೈಕಿ ಅಂಗ, ವಂಗ, ಕಳಿಂಗಗಳ ಬಗ್ಗೆ ಹಿಂದೆಯೇ ಹೇಳಲಾಗಿದೆ. ಉಳಿದಂತೆ ಪುಂಡ್ರ ಮತ್ತು ಸುಹ್ಮ ರಾಜ್ಯಗಳೂ ಸಹ ಪೂರ್ವ ಭಾರತದಲ್ಲಿಯೇ ನೆಲೆಗೊಂಡಿದ್ದವು.
ಕರ್ಣ ಆಳಿದ ಅಂಗ ರಾಜ್ಯ
ಕೌರವರ ಮಹಾರಾಜ ದುರ್ಯೋಧನನ ಸಾಮ್ರಾಜ್ಯದ ಭಾಗವಾಗಿದ್ದ ಅಂಗ (ಬಿಹಾರ) ರಾಜ್ಯವು ಕರ್ಣನ ಆಧಿಪತ್ಯಕ್ಕೆ ಒಳಪಟ್ಟಿದ್ದ ಪ್ರಾಂತ್ಯ ಎನ್ನುವ ಕಾರಣಕ್ಕೆ ಜನರ ನೆನಪಿನ ಭಾಗವಾಗಿದೆ. ನಾಡು ಆಳುವ ಕುಲದಲ್ಲಿ ಹುಟ್ಟದ ಕಾರಣಕ್ಕೆ ಅರ್ಜುನನ ಜೊತೆಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿದಾಗ ದುರ್ಯೋಧನನು ಅಂಗ ರಾಜ್ಯದ ರಾಜನನ್ನಾಗಿ ಪಟ್ಟಾಭಿಷೇಕ ಮಾಡುತ್ತಾನೆ. ಈ ಋಣಕ್ಕಾಗಿ ಕೊನೆಯವರೆಗೂ ಕರ್ಣ ದುರ್ಯೋಧನನಿಗೆ ನಿಷ್ಠನಾಗಿ ಉಳಿಯುತ್ತಾನೆ.
ಸತತ 10 ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನಿತೀಶ್ ಕುಮಾರ್ ಸುಮಾರು 20 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಕಳೆದ ಏಪ್ರಿಲ್ 10 ರಂದು ದೆಹಲಿಯಲ್ಲಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಹಾರದ ಆಡಳಿತ ಹೊಣೆಯಿಂದ ಹಿಂದೆ ಸರಿದರು. ಸಾಮ್ರಾಟ್ ಚೌಧರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಅಂಗ ರಾಜ್ಯವು ಬಿಜೆಪಿಯ ತೆಕ್ಕೆಗೆ ಬಂದಿತ್ತು.
ವಂಗ ರಾಜ್ಯದಲ್ಲಿ ಅರಳಿದ ಕಮಲ
ವಂಗ (ಬಂಗ) ರಾಜ್ಯವು ಬುದ್ಧಿವಂತಿಕೆಗೆ ಹೆಸರುವಾಸಿ. ಒಂದು ಕಾಲಕ್ಕೆ ಮಸ್ಲಿನ್ ಬಟ್ಟೆಗೆ ಹೆಸರುವಾಸಿಯಾಗಿದ್ದ ಬಂಗಾಳಕ್ಕೆ ಬುದ್ಧಿಜೀವಿಗಳ ನಾಡು ಎನ್ನುವ ಮನ್ನಣೆ ಇತ್ತು. 'ಬಂಗಾಳವನ್ನು ನಿಯಂತ್ರಿಸುವವರು ದೇಶವನ್ನೇ ನಿಯಂತ್ರಿಸುತ್ತಾರೆ. ಬಂಗಾಳ ಇಂದು ಏನು ಯೋಚಿಸುತ್ತೋ ಇಡೀ ಭಾರತ ನಾಳೆ ಅದರ ಬಗ್ಗೆ ಚಿಂತನೆ ನಡೆಸುತ್ತೆ' ಎನ್ನುವ ಮಾತು ಜನಜನಿತವಾಗಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಚಿಂತನೆ ಹರಳುಗಟ್ಟುವಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸುವಲ್ಲಿ ಬಂಗಾಳಿಗಳ ಕೊಡುಗೆ ದೊಡ್ಡದು.
ಭಾರತಕ್ಕೆ ರಾಷ್ಟ್ರಗೀತೆ ಕೊಟ್ಟ ಈ ನಾಡು ಬಿಜೆಪಿಯ ಮಾತೃಪಕ್ಷ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮಭೂಮಿಯೂ ಹೌದು. ಬಂಗಾಳದಲ್ಲಿ ಅಧಿಕಾರ ಹಿಡಿಯಬೇಕೆನ್ನುವ ಬಿಜೆಪಿ ನಾಯಕರ ದಶಕಗಳ ಕನಸು ಈ ಬಾರಿ ನನಸಾಗಿದೆ.
ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಟಿಎಂಸಿ ಆಡಳಿತಕ್ಕೆ ಒಗ್ಗಿಕೊಂಡಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಕೆಂಪುಹಾಸಿನ ಸ್ವಾಗತವೇನೂ ಇರಲಿಲ್ಲ. ಹತ್ತಾರು ವರ್ಷಗಳ ನಿರಂತರ ಪರಿಶ್ರಮ ಮತ್ತು ಸಂಘಟನೆಯಿಂದ ಬಿಜೆಪಿ ಈ ರಾಜ್ಯದಲ್ಲಿ ಪ್ರವೇಶ ಪಡೆಯಿತು.
ಜಗನ್ನಾಥನ ನೆಲೆವೀಡು ಕಳಿಂಗದಲ್ಲಿ ಬಿಜೆಪಿ ಪಾರಮ್ಯ
ಪುರಿ ಜಗನ್ನಾಥ ರಥಯಾತ್ರೆ ವಿಶ್ವವಿಖ್ಯಾತ. ಒಡಿಶಾ ಮತ್ತು ಆಂಧ್ರಪ್ರದೇಶದ ಭಾಗಗಳನ್ನು ಒಳಗೊಂಡಿದ್ದ ಭಾಗಗಳನ್ನು ಐತಿಹಾಸಿಕವಾಗಿ ಕಳಿಂಗ ಎಂದೇ ಕರೆಯಲಾಗುತ್ತಿತ್ತು. ಕ್ರಿಪೂ 261 ರ ಕಳಿಂಗ ಯುದ್ಧದ ರಕ್ತಪಾತವನ್ನು ಕಂಡು ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ಕಥೆ ಜನಜನಿತವಾದುದು. ಅಶೋಕನ ಕಾಲದಲ್ಲಿ ಕಳಿಂಗದ ವ್ಯಾಪಾರಿಗಳು ಇಂಡೋನೇಷ್ಯಾ, ಜಾವಾ ಮತ್ತು ಬಾಲಿಯವರೆಗೆ ಸಮುದ್ರಯಾನ ಮಾಡಿ ಭಾರತೀಯ ಸಂಸ್ಕೃತಿಯನ್ನು ಪಸರಿಸಿದರು. ಐತಿಹಾಸಿಕ ಮಹತ್ವವಿರುವ ಕಳಿಂಗ (ಒಡಿಶಾ) ಪ್ರಾಂತ್ಯದಲ್ಲಿ ಅಧಿಕಾರ ಹಿಡಿಯಬೇಕು ಎನ್ನುವುದು ಬಿಜೆಪಿಯ ದಶಕಗಳ ಕನಸಾಗಿತ್ತು.
ಬಿಜು ಪಟ್ನಾಯಕ್, ನವೀನ್ ಪಟ್ನಾಯಕ್ ಜೋಡಿಯ ಅಧೀನದಲ್ಲಿ ಸುಭದ್ರವಾಗಿದ್ದ ಒಡಿಶಾವನ್ನು ಪಡೆದುಕೊಳ್ಳಲು ಬಿಜೆಪಿ ತಾಳ್ಮೆಯ ರಣತಂತ್ರವನ್ನೇ ಹೆಣೆದಿತ್ತು. ವಯೋ ಸಹಜ ಕಾರಣಗಳಿಂದ ನವೀನ್ ಪಟ್ನಾಯಕ್ ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳದಿರುವುದು ಮತ್ತು ಆಡಳಿತದಲ್ಲಿ ಐಎಎಸ್ ಅಧಿಕಾರಿ ವಿ.ಕೆ.ಪಾಂಡಿಯನ್ ವಹಿಸುತ್ತಿದ್ದ ಪಾತ್ರವನ್ನೇ ದೊಡ್ಡದು ಮಾಡಿ ಒಡಿಶಾ ಅಸ್ಮಿತೆಯ ಪ್ರಶ್ನೆಗಳನ್ನು ಜನರ ಮುಂದಿಟ್ಟಿತು. 2024 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದರೊಂದಿಗೆ ಕಳಿಂಗ ರಾಜ್ಯವು ಕಮಲ ಪಾಳಯದ ತೆಕ್ಕೆ ಬಂತು.














Click it and Unblock the Notifications