ಹಾವೇರಿ, ಏಪ್ರಿಲ್ 3: ಮನೆಗೇ ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡು ವಿವಾದ ಸೃಷ್ಟಿಸಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್, ಎರಡನೆಯ ಡೋಸ್ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗೆ ತೆರಳಿ ಪಡೆದುಕೊಂಡಿದ್ದಾರೆ. ಆದರೆ ಬಿಸಿ ಪಾಟೀಲ್ ಅವರ ಲಸಿಕೆ ಪ್ರಕರಣದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಯನ್ನು ಅಮಾನತುಗೊಳಿಸಿರುವುದು ಚರ್ಚೆಗೆ ಒಳಗಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಲಸಿಕೆಯನ್ನು ಬಿ.ಸಿ ಪಾಟೀಲ್ ಅವರು ಹಿರೇಕೆರೂರಿನಲ್ಲಿನ ತಮ್ಮ ಮನೆಯಲ್ಲಿಯೇ ಪಡೆದುಕೊಂಡಿದ್ದರು. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಆಸ್ಪತ್ರೆಗೇ ತೆರಳಿ ಲಸಿಕೆ ಪಡೆದುಕೊಂಡಿರುವಾಗ ಬಿ.ಸಿ ಪಾಟೀಲ್ ನಿವಾಸಕ್ಕೇ ಸಿಬ್ಬಂದಿಯನ್ನು ಕರೆಸಿ ಲಸಿಕೆ ಪಡೆದುಕೊಳ್ಳುವ ಮೂಲಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ವಿವಾದದ ಬಳಿಕ ಎಚ್ಚೆತ್ತ ಬಿ.ಸಿ. ಪಾಟೀಲ್ ಅವರು ಶುಕ್ರವಾರ ಹಿರೇಕೆರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೆಯ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. '45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೂ ಕೊರೊನಾ ಲಸಿಕೆ ಲಭ್ಯವಿದ್ದು, ದಯವಿಟ್ಟು ಅರ್ಹ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಲಸಿಕೆಯನ್ನು ಪಡೆಯಬೇಕೆಂದು ವಿನಂತಿಸಿಕೊಳ್ಳುತ್ತೇನೆ' ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.