ಬಡವರ ರಕ್ತ ಹೀರಿದ 'ಅಂಬಿಡೆಂಟ್' ಕೇಸಲ್ಲಿ ನ್ಯಾಯ ಸಿಗುವುದು ಯಾವಾಗ?
ಬೆಂಗಳೂರು, ಆ. 24: ''ಕೇವಲ ಹತ್ತು ಸಾವಿರ ಹೂಡಿಕೆ ಮಾಡಿ. ತಿಂಗಳಿಗೆ 1200 ರೂ. ಬಡ್ಡಿ ಬರುತ್ತೆ! ಒಂದು ಲಕ್ಷ ರೂ. ಹೂಡಿಕೆ ಮಾಡಿದರೆ ಸಾಕು ತಿಂಗಳಿಗೆ ಹನ್ನೆರಡು ಸಾವಿರ ರೂಪಾಯಿ ಹಲಾಲ್ ಹಣ ಬರುತ್ತೆ'' ಎಂದು ನಂಬಿಸಿ ಕರ್ನಾಟಕದಲ್ಲಿ ಒಂದು ಕೋಮಿನ ಹದಿನೈದು ಸಾವಿರ ಮಂದಿಗೆ ನಾಮ ಹಾಕಿದ್ದು ಅಂಬಿಡೆಟ್ ಎಂಬ ಬ್ಲೇಡ್ ಕಂಪನಿ.
2016 ರಲ್ಲಿ ಅಪ್ಪ ಮಗ ಸೇರಿ ಹುಟ್ಟು ಹಾಕಿದ ಅಂಬಿಡೆಂಡ್ ಮಾರ್ಕೆಂಟಿಂಗ್ ಕಂಪನಿ ಬಡ ಜನರ ರಕ್ತ ಹೀರಿ ಸಂಗ್ರಹಿಸಿದ್ದು ಸುಮಾರು 954 ಕೋಟಿ ರೂಪಾಯಿ! ಸಿಸಿಬಿ ಪೊಲೀಸರು ತನಿಖೆ ನಡೆಸಿದರು. ಇಡಿ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು. ಅಂಬಿಡೆಂಟ್ ಪ್ರಕರಣದ ಕಥೆ ಏನಾಯಿತು? ಹೂಡಿಕೆ ಮಾಡಿದವರ ಬಡವರ ಪರಿಸ್ಥಿತಿ ಏನು? ಗೃಹ ಸಚಿವರೇ ಕರ್ನಾಟಕದಲ್ಲಿ ನಡೆದ ಬಹುದೊಡ್ಡ ಅಕ್ರಮ ಅಂಬಿಡೆಂಟ್. ಒಂದು ಸಾವಿರ ಕೋಟಿ ಲೂಟಿ ಮಾಡಿದ್ದಾಯ್ತು ಬಡವರಿಗೆ ನ್ಯಾಯ ಒದಗಿಸಿಕೊಡುವರೇ?
ಅದು 2016 ನೇ ಇಸವಿ. ಸಾಮಾಜಿಕ ಜಾಲ ತಾಣದಲ್ಲಿ ಬಹುದೊಡ್ಡ ಹೂಡಿಕೆ ಸ್ಕೀಮ್ ಕರ್ನಾಟಕದಲ್ಲಿ ಸದ್ದು ಮಾಡಿತ್ತು. ತಿಂಗಳಿಗೆ ಹನ್ನೆರಡು ಪರ್ಸೆಂಟ್ ಬಡ್ಡಿ ಕೊಡಲಾಗುವುದು ಎಂದು ನಂಬಿಸಿದ್ದರು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಹೂಡಿಕೆದಾರರಿಗೆ ಜಾಲ ತಾಣವನ್ನು ಸೃಷ್ಟಿಸಿದ್ದರು. ಜನ ಸಾಲ ಗಟ್ಟಿ ಹೂಡಿಕೆ ಮಾಡಿದರು. ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮತಿ ಇಲ್ಲದೇ ದುಬೈನಲ್ಲಿ ಕಂಪನಿ ನೊಂದಣಿ ಮಾಡಿ ಬೆಂಗಳೂರಿನಲ್ಲಿ ಕಚೇರಿ ತೆರೆದಿದ್ದ ಅಪ್ಪ ಸಯ್ಯದ್ ಅಹಮದ್ ಫರೀದ್ ಹಾಗೂ ಸಯ್ಯದ್ ಅಫೀಕ್ ಅಹಮದ್ ಜನರಿಗೆ ಬಡ್ಡಿ ಆಸೆ ತೋರಿಸಿದ್ದರು.

ಹಣ ಕಟ್ಟಲು ಮುಗಿ ಬಿದ್ದ ಜನರು
ಹತ್ತು ಸಾವಿರ ಕೈ ಹಿಡಿದು ಒಂದು ಸಮುದಾಯದ ಜನ ಅಂಬಿಡೆಂಟ್ ಖಾತೆ ತುಂಬಲು ಸಾಲುಗಟ್ಟಿ ನಿಂತರು ಮೂರು ವರ್ಷದಲ್ಲಿ ಬರೋಬ್ಬರಿ 954 ಕೋಟಿ ರೂಪಾಯಿ ಹೂಡಿಕೆ ಮಾಡಿದರು. ತಿಂಗಳ ಬಡ್ಡಿ ಬಿತ್ತಾ ಅಂತ ಬ್ಯಾಂಕ್ ಖಾತೆಗಳನ್ನು ನೋಡುತ್ತಲೇ ಕೂತಿದ್ದರು. ಇದೇ ವೇಳೆ ನೀವು ಬೇರೆಯವರಿಂದ ಹೂಡಿಕೆ ಮಾಡಿಸಿದರೆ ಕಮೀಷನ್ ಕೊಡಿಸುವ ಆಸೆ ಹುಟ್ಟಿಸಿದರು. ಹೀಗಾಗಿ ಹೂಡಿಕೆ ಮಾಡಿದವರು ತಮ್ಮ ಆಪ್ತರು, ಸಂಬಂಧಿಕರಿಂದಲೂ ಹೂಡಿಕೆ ಮಾಡಿಸಿದರು. ಅಂಬಿಡೆಟ್ ಬ್ಯಾಂಕ್ ಖಾತೆ ತುಂಬುತ್ತಿದ್ದಂತೆ ಅಪ್ಪ ಮಗ ಬಡ್ಡಿಯೂ ಕೊಡಲಿಲ್ಲ, ಅಸಲು ಕೊಡದೇ ಕೈ ಎತ್ತಿದರು. ಹೀಗೆ ಬರೋಬ್ಬರಿ ಹದಿನೈದು ಸಾವಿರ ಮಂದಿ ಹೂಡಿಕೆ ಮಾಡಿದ್ದರು. ಅಂಬಿಡೆಂಟ್ ಮೋಸ ಮಾಡಿರುವ ಸಂಗತಿ ಅರಿತ ಕೆಲವರು ದೂರು ನೀಡಲು ಆರಂಭಿಸಿದರು ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಿದರು. ಸಾವಿರಾರು ಮಂದಿ ಕಂಪನಿ ಮುಂದೆ ಸೇರಿ ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದರು.

ಸಿಸಿಬಿ ತನಿಖೆ ಏನಾಯ್ತು?
ಅಂಬಿಡೆಂಟ್ ಅಕ್ರಮದ ಕುರಿತು ಸಿಸಿಬಿ ತನಿಖೆ ನಡೆಸಿದಾಗ ಸುಮಾರು ಹದಿನೈದು ಸಾವಿರ ಮಂದಿ ಮೋಸ ಹೋಗಿರುವ ಸಂಗತಿ ಬೆಳಕಿಗೆ ಬಂತು. ಅಂಬಿಡೆಂಟ್ ಅಕ್ರಮದ ಬಗ್ಗೆ ತನಿಖೆ ನಡೆಸಿದಾಗ ಬಡ್ಡಿ ಆಸೆ ತೋರಿಸಿ ಮೋಸ ಮಾಡಿರುವ ಸಂಗತಿ ಬಯಲಿಗೆ ಎಳೆದಿತ್ತು. ಈ ವೇಳೆ ಅಂಬಿಡೆಂಟ್‌ಗೆ ಸೇರಿದ ಹದಿನೈದು ಆಸ್ತಿಗಳನ್ನು ಸಿಸಿಬಿ ಪತ್ತೆ ಮಾಡಿತ್ತು. ಇದಕ್ಕಾಗಿಯೇ ನಾವು ವಿಶೇಷ ಕಾನೂನು ಪಂಡಿತರನ್ನು ನೇಮಿಸಿಕೊಂಡಿದ್ದೇವೆ. ಬಡವರಿಗೆ ಹಣ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹದಿನೈದು ಸಾವಿರ ಮಂದಿಯಿಂದ ಒಂದು ಸಾವಿರ ಕೋಟಿ ಮೋಸ ಮಾಡಿದ್ದಾರೆ ಎಂದು ಅಂದಿನ ಪೊಲೀಸ್ ಆಯುಕ್ತರಾಗಿದ್ದ ಟಿ. ಸುನೀಲ್ ಕುಮಾರ್ ಹೇಳಿಕೆ ನೀಡಿದ್ದರು.

ಇಡಿ ದಾಳಿಗೂ ತುತ್ತಾದ ಅಂಬಿಡೆಂಟ್
ಸಿಸಿಬಿ ತನಿಖೆ ಬೆನ್ನಲ್ಲೇ ಹಣಕಾಸಿನ ಅಕ್ರಮ ವಹಿವಾಟು ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಡಿ ದಾಳಿ ನಡೆಸಿದ್ದರು. ದುಬೈನಲ್ಲಿ ಕಂಪನಿ ನೋಂದಣಿ ಮಾಡಿ, ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸಿ ಕೋಟ್ಯಂತರ ರೂಪಾಯಿ ಬೇನಾಮಿ ವಹಿವಾಟು ನಡೆಸಿದ ಸತ್ಯವನ್ನು ಇಡಿ ಅಧಿಕಾರಿಗಳು ಹೊರ ಹಾಕಿದ್ದರು. ಅಂಬಿಡೆಂಟ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಚಾಲ್ತಿ ಸಿಕ್ಕಿತ್ತು. ಆ ಬಳಿಕ ಏನಾಯಿತು ಎಂಬುದರ ಸ್ಪಷ್ಟತೆ ಯಾರಿಗೂ ಸಿಕ್ಕಿಲ್ಲ.

ಗಾಲಿ ರೆಡ್ಡಿಯ ಹೆಸರು ತಳಕು
ಅಂಬಿಡೆಂಟ್ ಕಂಪನಿಯ ಅಕ್ರಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೆಸರು ತಳಕು ಹಾಕಿಕೊಂಡಿತ್ತು. ಜಾಮೀನು ಪಡೆಯಲು ಹದಿನೆಂಟು ಕೋಟಿ ರೂಪಾಯಿ ಹಣವನ್ನು ಅಂಬಿಡೆಂಟ್ ಮೂಲಕ ರೆಡ್ಡಿಗೆ ನೀಡಿರುವ ಬಗ್ಗೆ ಅಂಬಿಡೆಂಟ್ ಸಂಸ್ಥಾಪಕ ಹೇಳಿಕೆ ನೀಡಿದ್ದ. ಈ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ಪ್ರಕರಣದ ತನಿಖೆ ಎಲ್ಲಿ ಬಂತು ನಿಂತು? ಹದಿನೈದು ಸಾವಿರ ಮಂದಿ ಮೋಸಕ್ಕೆ ಒಳಗಾಗಿರುವ ಈ ಪ್ರಕರಣದಲ್ಲಿ ತ್ವರಿತ ನ್ಯಾಯ ದಾನ ಮಾಡಲು ಕಂದಾಯ ಅಧಿಕಾರಿಗಳು ಮುಂದಾಗಿಲ್ಲ. ಪೊಲೀಸರು ಆಸಕ್ತಿ ತೋರಿಲ್ಲ. ಹೊಸ ಅಕ್ರಮ ಬಂದರೆ ಹಳೇ ಪ್ರಕರಣಗಳನ್ನು ಮೂಲೆಗುಂಪು ಮಾಡುವ ಸರದಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮುಂದುವರೆದಿದೆ ಎಂಬುದಕ್ಕೆ ಈ ಪ್ರಕರಣಕ್ಕಿಂತಲೂ ಬೇರೆ ಸಾಕ್ಷಿಯೇ ಬೇಕಿಲ್ಲ..

ಅಂಬಿಡೆಂಟ್ ವಸ್ತುಸ್ಥಿತಿ ಜನರಿಗೆ ತಿಳಿಸಿ
ಇನ್ನು ಅಂಬಿಡೆಂಟ್ ಕಂಪನಿ ಆರಂಭವಾಗಿ ಎರಡೇ ವರ್ಷದಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ರೂಪಾಯಿ ವಸೂಲಿ ಮಾಡಿ ಹದಿನೈದು ಸಾವಿರ ಮಂದಿಗೆ ಮೋಸ ಮಾಡಿತು. ಇಡಿ ದಾಳಿ, ಸಿಸಿಬಿ ತನಿಖೆಯೂ ಮುಗಿಯಿತು. ಹಣ ಹೂಡಿಕೆ ಮಾಡಿ ಕಳೆದುಕೊಂಡ ಹದಿನೈದು ಸಾವಿರ ಮಂದಿ ಹಣ ವಾಪಸು ಬರುವ ಬಗ್ಗೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಈ ಪ್ರಕರಣ ಯಾವ ಹಂತದಲ್ಲಿದೆ? ಯಾವಾಗ ಬಡವರಿಗೆ ಹಣ ಕೈ ಸೇರುತ್ತದೆ ಎಂಬ ಉತ್ತರವನ್ನು ಜನರಿಗೆ ತಿಳಿಸುವರು ಇಲ್ಲದಂತಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಅಂಬಿಡೆಂಟ್ ಆರ್ಥಿಕ ಅಪರಾಧ ಪ್ರಕರಣದಲ್ಲಿ ಮುಗ್ಧ ಜನರು ಮೋಸ ಹೋಗಿದ್ದಾರೆ. ಎಷ್ಟೋ ಮಂದಿ ಬೀದಿ ಪಾಲಾಗಿದ್ದಾರೆ. ಈ ಪ್ರಕರಣದ ವಸ್ತು ಸ್ಥಿತಿ ವರದಿ ಪಡೆದು ಜನರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಿರಾ?












Click it and Unblock the Notifications