ಅಡಿಕೆ ಬೆಳೆಗೆ ಹಳದಿ ರೋಗ ಕಾಟ: ಬೇಸತ್ತು ಊರು ಬಿಡುತ್ತಿರುವ ಮಲೆನಾಡಿಗರು
ಚಿಕ್ಕಮಗಳೂರು, ಆಗಸ್ಟ್, 25: ನಿತ್ಯ ನೂರಾರು ಜನರಿಗೆ ಅನ್ನ ಹಾಕುತ್ತಿದ್ದ ಜಿಲ್ಲೆಯ ಮಲೆನಾಡ ಪುರಾತನ ಮನೆಗಳು ಪಾಳುಬಿದ್ದು ಲೂಟಿಹೊಡೆದ ಕೋಟೆಯಂತಾಗಿವೆ. ಹೀಗೆ ಜಿಲ್ಲೆಯಲ್ಲಿ ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗವನ್ನು ನಿಯಂತ್ರಿಸಲಾಗದೆ ಮಲೆನಾಡಿನ ನೂರಾರು ಜನ ಬದುಕಿ-ಬಾಳಿದ್ದ ಮನೆಗಳನ್ನು ಬಿಟ್ಟು ಊರುಗಳನ್ನೇ ಬಿಡುತ್ತಿದ್ದಾರೆ.
ನೂರಾರು ಜನ ಊರು ಬಿಟ್ಟಿದ್ದರೆ, ಮತ್ತೆ ಕೆಲವರು ತೋಟಗಳತ್ತ ಮುಖ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಅನಾದಿ ಕಾಲದಿಂದಲೂ ಬದುಕಿ ಬಾಳಿದ್ದ ಮನೆಗಳು ಈಗ ಖಾಲಿ-ಖಾಲಿ. ತುತ್ತಿನ ಚೀಲಕ್ಕಾಗಿ ಸಾಲ ಮಾಡುವುದಲ್ಲದೆ, ಗುಳೇ ಹೋಗುತ್ತಿದ್ದಾರೆ. ಇದೀಗ ದೇವರ ಫೋಟೋಗಳು, ಮಕ್ಕಳು ಓದಿದ ಪುಸ್ತಕಗಳು, ಅಡಿಗೆ ಪಾತ್ರೆಗಳು, ಪಾಳು ಬಿದ್ದ ರೈತನ ಮನೆಯ ನೆನಪಾಗಿ ಉಳಿದಿವೆ.

ಐದು ದಶಕಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಳದಿ ಎಲೆ ರೋಗ ಬೆಳೆಗಾರರಿಗೆ ಕೃಷಿ ಬಗ್ಗೆಯೇ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿದೆ. ಕಿವಿಗೆ ಬಿದ್ದ ಔಷಧಿಯನ್ನೆಲ್ಲಾ ಸಿಂಪಡಿಸಿದರೂ ರೈತರ ಜೇಬು ಬರಿದಾಗುತ್ತಿದೆಯೇ ವಿನಃ ರೋಗ ನಿಯಂತ್ರಣಕ್ಕೆ ಬಾರಲೇ ಇಲ್ಲ. ಶೃಂಗೇರಿ-ಕೊಪ್ಪ-ಎನ್.ಆರ್.ಪುರ ತಾಲೂಕಿನ ಹಲವು ಭಾಗದಲ್ಲಿ ಹಳದಿ ಎಲೆ ಹಾಗೂ ಎಲೆಚುಕ್ಕಿ ರೋಗ ಹೀಗೆ ಪಾರುಪತ್ಯ ಮರೆಯುತ್ತಿದೆ.
ಸಂಶೋಧನ ಕೇಂದ್ರಕ್ಕೆ ಔಷಧಿ ಸಂಶೋಧನೆಗೆಂದು ಬಂದ ಕೋಟಿಗಟ್ಟಲೇ ಹಣವನ್ನು ಹಳದಿ ಎಲೆ ರೋಗವೇ ತಿಂದಾಕಿದೆ. ಬ್ಯಾಂಕ್ ಸಾಲದ ಜೊತೆ ಅಡವಿಟ್ಟ ಹೆಂಡತಿ ಮಕ್ಕಳ ಓಡವೆಯನ್ನ ಬಿಡಿಸುವುದಕ್ಲೂ ಆಗದ ಸಂದಿಗ್ಧ ಪರಿಸ್ಥಿತಿಗೆ ಬೆಳೆಗಾರರು ಬಂದಿದ್ದಾರೆ. ಹಾಗಾಗಿ, ಸಾಲದ ಶೂಲಕ್ಕೆ ಸಿಕ್ಕ ಬೆಳೆಗಾರರು ಹೊರಬರಲಾಗದೆ ಬದುಕುವ ಅನಿವಾರ್ಯತೆಗೆ ಊರುಬಿಟ್ಟು ಸಿಕ್ಕ-ಸಿಕ್ಕ ಕೆಲಸವನ್ನು ಮಾಡುತ್ತಿದ್ದಾರೆ.
ಅಡುಗೆ ಭಟ್ಟ ವೃತ್ತಿ, ಅರ್ಚಕರ ವೃತ್ತಿ ಸೇರಿದಂತೆ ನಾನಾ ವೃತ್ತಿ ಮಾಡುತ್ತಿದ್ದಾರೆ. ಇನ್ನು ಅಳಿದುಳಿದಿರುವ ತೋಟಗಳನ್ನು ಉಳಿಸಿಕೊಳ್ಳುವುದಕ್ಕೆ ಬೆಳೆಗಾರರು ಇಂದಿಗೂ ಹೋರಾಡುತ್ತಿದ್ದಾರೆ.
ಒಟ್ಟಾರೆ, ಮಲೆನಾಡಲ್ಲಿ 3-5 ಹೆಕ್ಟೇರ್ ತೋಟಗಳ ಮೂಲಕ ಬದುಕು ಕಟ್ಟಿಕೊಂಡ ಸಣ್ಣ ಬೆಳೆಗಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬದುಕಿನ ಆಸರೆಯೂ ಅದೇ ಆಗಿದೆ. ವರ್ಷಕ್ಕೆ 12-15 ಕ್ವಿಂಟಲ್ ಒಣ ಅಡಿಕೆ ಕೊಡುತ್ತುದ್ದ ತೋಟಗಳು ಇಂದು ರೋಗದಿಂದ 2-3 ಕ್ವಿಂಟಾಲ್‌ಗೆ ಬಂದಿವೆ. ಇದೀಗ ಹಳದಿ ಎಲೆ ರೋಗ, ಕೊಳೆ ರೋಗ, ಎಲೆ ಚುಕ್ಕಿ ರೋಗಕ್ಕೆ ಮಲೆನಾಡಿಗರು ಬದುಕನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.
ಭಾರತೀಯ ತಂತ್ರಜ್ಞಾನ ಚಂದ್ರನ ಮೇಲೂ ಕಾಲಿಡುವ ಮಟ್ಟಕ್ಕೆ ಬೆಳೆದಿದೆ. ಆದರೆ ಸರ್ಕಾರ ಇದೊಂದು ರೋಗಕ್ಕೆ ಔಷಧಿ ಕಂಡು ಹಿಡಿಯದೆ ಅಡಿಕೆ ಬೆಳೆಗಾರರ ಬದುಕನ್ನು ಬಲಿ ಕೊಡುತ್ತಿರುವುದು ನಿಜಕ್ಕೂ ದುರಂತವಾಗಿದೆ.












Click it and Unblock the Notifications