Vani Vilasa Sagara: ವಾಣಿ ವಿಲಾಸ ಸಾಗರ ಡ್ಯಾಂನಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು
ಹಿರಿಯೂರು, ಅಕ್ಟೋಬರ್, 19: ತಾಲೂಕಿನಲ್ಲಿ ಮಳೆ ಇಲ್ಲದೆ ಆತಂಕಕ್ಕೆ ಸಿಲುಕಿದ್ದ ಅಚ್ಚುಕಟ್ಟು ಪ್ರದೇಶದ ರೈತರ ಬದುಕಿಗೆ ಒಂದಿಷ್ಟು ಜೀವ ಕಳೆ ಬಂದಂತಾಗಿದೆ. ಅಂದ ಹಾಗೆ ತಾಲೂಕಿನ ವಾಣಿವಿಲಾಸ ಜಲಾಶಯದಿಂದ ಎರಡು ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲಾಗಿದೆ. ಅಕ್ಟೋಬರ್ 17ರಿಂದ ನಾಲೆಗಳ ಮೂಲಕ ನೀರು ಬಿಡಲಾಗಿದ್ದು, ಸುಮಾರು ಒಂದು ತಿಂಗಳ ಕಾಲ ನೀರು ಹರಿಯಲಿದೆ.
ಜಲಾಶಯದಿಂದ ಪ್ರತಿ ದಿನ ಸುಮಾರು 600 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಎರಡು ನಾಲೆಗಳ ಮುಖಾಂತರ ರೈತರ ಜಮೀನುಗಳಿಗೆ ನೀರು ಹಾಯಿಸಲಾಗುತ್ತದೆ. ತಾಲೂಕಿನ ಖಾತ್ರಿಕೇನಳ್ಳಿ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಡ್ಡು ಚೆಕ್ ಡ್ಯಾಂನಿಂದ ಎರಡು ನಾಲೆಗಳು ಎಡ ಮತ್ತು ಬಲ ನಾಲೆಗಳಾಗಿ ಬೇರ್ಪಡುತ್ತವೆ.

ಎಡನಾಲೆ ಕಾಲುವೆಯು ಹಿರಿಯೂರು ನಗರದ ಅಂಬೇಡ್ಕರ್ ವೃತ್ತದಿಂದ, ಬಬ್ಬೂರು, ಹೊಸಯಳನಾಡು, ಮಲ್ಲೇಣು, ಚಿತ್ರದೇವರಹಟ್ಟಿ, ಟಿಬಿ ಗೊಲ್ಲರಟ್ಟಿ, ಐನಳ್ಳಿ ಮೂಲಕ ಬಿದರಿಕೆರೆ ತೊಟ್ಟಿ ತಲುಪುತ್ತದೆ. ಬಲನಾಲೆ ಕಾಲುವೆಯು ಕೂನ್ನಿಕೆರೆ ಸಮೀಪದಿಂದ ಹಿರಿಯೂರು ನಗರದ ಮೂಲಕ ಎಪ್ಪತ್ತು ಕಣಿವೆ ಸೇತುವೆ, ಪಟ್ರೇಹಳ್ಳಿ, ಆದಿವಾಲ, ದೊಡ್ಡಕಟ್ಟೆ, ಆರನಕಟ್ಟೆ ಮೂಲಕ ಕುಂದಲಗೂರ ತೊಟ್ಟಿ ಸೇರುತ್ತದೆ.
ಈ ಮೇಲಿನ ಎಲ್ಲಾ ಭಾಗದ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತಿದ್ದು, ಬೆಳೆಗಳಿಗೆ ಜೀವಕಳೆ ಬಂದತ್ತಾಗುತ್ತದೆ. ತೆಂಗು, ಅಡಿಕೆ, ಬಾಳೆ, ಇನ್ನಿತರ ಬೆಳೆಗಳಿಗೆ ನೀರು ಹರಿಸಬಹುದಾಗಿದೆ. ನಾಲೆಗಳ ಮೂಲಕ ನೀರು ಹರಿಸುವುದರಿಂದ ಬತ್ತಿ ಹೋಗಿದ್ದ ಬೋರ್ ವೆಲ್‌ಗಳು ಸಿಪೆಜ್ ಆಗಲಿವೆ. ಬಿಸಿಲಿನ ಬೇಗೆಗೆ ಸೊರಗುತ್ತಿದ್ದ ಬೆಳೆಗಳು ಕಂಗೊಳಿಸಲಿವೆ.
ಅಕ್ಟೋಬರ್ 17ರಿಂದ ನವೆಂಬರ್ 11ರವರೆಗೂ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ವಾಣಿ ವಿಲಾಸ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಲು ಜಿಲ್ಲಾಧಿಕಾರಿ ಆಯೋಜಿಸಲಾಗಿದ್ದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅತೀ ಕಡಿಮೆ ಮಳೆಯಾಗಿ, ತಾಲೂಕು ಬರಗಾಲ ಪೀಡಿತವಾಗಿರುವುದರಿಂದ ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ ತೋಟಗಾರಿಕೆ ಹಾಗೂ ಇತರೆ ಕೃಷಿ ಬೆಳೆಗಳಿಗೆ ನೀರು ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ನೀರು ಹರಿಸಲಾಗಿದೆ. ವಾಣಿ ವಿಲಾಸ ಜಲಾಶಯದಿಂದ ಮೊದಲ ಹಂತದ ನೀರನ್ನು 30 ದಿನಗಳ ಕಾಲ ನಾಲೆಗಳಿಗೆ ಹರಿಸುವಂತೆ ಮಾನ್ಯ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಪ್ರಸ್ತುತ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ 121.15 ಅಡಿಗಳಷ್ಟು ಮತ್ತು 22.00 ಟಿ.ಎಂ.ಸಿ. ನೀರು ಇದೆ ಎಂದು ತಿಳಿದುಬಂದಿದೆ.











Click it and Unblock the Notifications