ಕಬ್ಬಿಗೆ ಲಾಭದಾಯಕ ಬೆಲೆ ನೀಡಲು ಆಗ್ರಹ: ರೈತರಿಂದ ಅ.27ಕ್ಕೆ ರಸ್ತೆ ತಡೆ
ಮೈಸೂರು, ಅಕ್ಟೋಬರ್ 23: ಪ್ರಸಕ್ತ ಸಾಲಿನಲ್ಲಿ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಅಕ್ಟೋಬರ್ 27 ರಂದು ರಾಜ್ಯಾದ್ಯಂತ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು. ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಭಾನುವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಬಾರಿ ಸಚಿವರ ಮಟ್ಟದಲ್ಲಿ ಸಭೆ ನಡೆಸಿದರೂ ಸಹ ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಎಫ್‌ಆರ್‌ಪಿ ದರವನ್ನು ಕಬ್ಬಿಗೆ ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಅಕ್ಟೋಬರ್ ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಸ್ತೆ ತಡೆ ನಡೆಸಲಿದ್ದೇವೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗೆ ರೈತರು ಮುತ್ತಿಗೆ ಹಾಕಿ ಬೇಡಿಕೆ ಈಡೇರಿಕೆ ಒತ್ತಾಯಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಒಂದು ವಾರದಲ್ಲಿ ಕಬ್ಬಿಗೆ ದರ ನಿಗದಿ, ಸಚಿವ ಮುನೇನಕೊಪ್ಪ ಭರವಸೆ
ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ರೈತರು ನಾಲ್ಕು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಚಕಾರವೆತ್ತಿಲ್ಲ. ರಾಜ್ಯ ಸರ್ಕಾರದ ನಿಲುವುಗಳ ಬಗ್ಗೆ ನಮಗೆ ಅನುಮಾನವಿದೆ ಎಂದು ಅವರು ದೂರಿದರು.
ಕರ್ನಾಟಕ ರೈತರಿಗೆ ಕಡಿಮೆ ಬೆಲೆ ನೀಡಲಾಗುತ್ತಿದೆ
ರಾಜ್ಯದ ಅಂದಾಜು 30 ಲಕ್ಷ ರೈತರ ರೂ.40,000 ಕೋಟಿ ಮೌಲ್ಯದ ಕಬ್ಬು ಬೆಳೆಯುತ್ತಿದ್ದಾರೆ. ಪಂಜಾಬ್‌ನಲ್ಲಿ ಕಬ್ಬು ಬೆಳೆಯುವ ಪ್ರತಿ ಟನ್‌ಗೆ ರೂ.3,800 ಪಡೆಯುತ್ತಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಟನ್‌ಗೆ ರೂ.3,500, ಗುಜರಾತ್ ರಾಜ್ಯದಲ್ಲಿ ರೂ.4,400 ಪಡೆಯುತ್ತಿದ್ದಾರೆ. ಆದರೆ ಕರ್ನಾಟಕದ ರೈತರು ಪ್ರತಿ ಟನ್‌ಗೆ ಕನಿಷ್ಠ ರೂ.3,500 ಪಡೆಯಬೇಕಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ವರ್ಷಗಳ ಹಿಂದೆ ಪ್ರತಿ ಟನ್ ಕಬ್ಬಿಗೆ ಎಫ್‌ಆರ್‌ಪಿ ದರವನ್ನು ಘೋಷಿಸಿದೆ. ಕಳೆದ ಋತುವಿನಲ್ಲಿ ಪ್ರತಿ ಟನ್‌ಗೆ ರೂ. 2.900 ರಷ್ಟಿದ್ದ ದರವನ್ನು ಕೇವಲ ರೂ.3,050 ಹೆಚ್ಚಿಸಿತ್ತು. ಅಲ್ಲಿಂದ ಈವರೆಗೆ ರೈತರು ಸರ್ಕಾರ ನಿರ್ಧಾರವನ್ನು ದೂರುತ್ತಲೆ ಬಂದರು ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆ ಹಾದಿ ಹಿಡಿದಿದ್ದೇವೆ ಎಂದರು.

ಸಕ್ಕರೆ ಕಾರ್ಖಾನೆಗಳಿಂದ ವಂಚನೆ
ರೈತರಿಗೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಅನ್ಯಾಯವೆಸಗುತ್ತಿವೆ. ಕಬ್ಬು ಸಾಗಣೆಗೆ ಅನುಮತಿಗಿಂತ ಹೆಚ್ಚಿನ ಮೊತ್ತವನ್ನು ಕಡಿತಗೊಳಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಸರ್ಕಾರ, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾರ್ಖಾನೆಗಳು ಕೃಷಿ ಕ್ಷೇತ್ರದಿಂದ ಕಾರ್ಖಾನೆಗೆ ಸಾಗಿಸುವ ಕಬ್ಬಿಗೆ ಅನ್ವಯವಾಗುವ ಮೊತ್ತವನ್ನು ಮಾತ್ರ ಕಿಲೋಮೀಟರ್ ಆಧಾರದ ಮೇಲೆ ಕಡಿತಗೊಳಿಸಬೇಕು. ಇದರಲ್ಲಿ ವಂಚನೆ ಮಾಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದರು.












Click it and Unblock the Notifications