ಒಂದು ವಾರದಲ್ಲಿ ಕಬ್ಬಿಗೆ ದರ ನಿಗದಿ, ಸಚಿವ ಮುನೇನಕೊಪ್ಪ ಭರವಸೆ
ಬೆಂಗಳೂರು, ಅಕ್ಟೋಬರ್, 21: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಿಕ್ಕಟ್ಟು ಮತ್ತಷ್ಟು ಮುಂದುವರೆದಿದೆ. ರೈತ ಸಂಘಟನೆಗಳ ಗಡುವು ಮುಗಿದಿದೆ. ಸರ್ಕಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ರಾಜ್ಯದ ಇತರೆ ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಚರ್ಚಿಸುವ ಮೂಲಕ ಪ್ರಬಲ ಹೋರಾಟ ರೂಪಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ. ಸಭೆ ನಡೆಸಿ ಒಂದು ವಾರದಲ್ಲಿಯೇ ಕಬ್ಬಿಗೆ ದರವನ್ನು ನಿಗದಿ ಮಾಡಲಾಗುವುದು ಎಂದು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಭರವಸೆ ನೀಡಿದರು.
ಒಂದು ವಾರದ ಒಳಗಾಗಿ ಬೆಲೆ ನಿಗದಿ
ವಿಕಾಸಸೌಧ ನಾಲ್ಕನೇ ಮಹಡಿಯಲ್ಲಿ ರಾಜ್ಯ ಸರ್ಕಾರದ ಕಬ್ಬು ಖರೀದಿ ನಿಯಂತ್ರಣ ಮಂಡಳಿಯಿಂದ ಸಭೆಯನ್ನು ನಡೆಸಲಾಗಿದೆ. ದರ ನಿಗದಿ ಸಮಸ್ಯೆಗಳ ಬಗ್ಗೆ ಚಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರ ನಿಗದಿ ಆದೇಶಕ್ಕೆ ಅನುಮೋದನೆ ನೀಡುವಂತೆ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಸಭೆಯಲ್ಲಿ ಮಂಡಿಸಿದರು. ಆಗ ರೈತ ಪ್ರತಿನಿಧಿಗಳು ಒಕ್ಕೂರಲಿನಿಂದ ಅನುಮೋದನೆಗೆ ವಿರೋಧ ವ್ಯಕ್ತಪಡಿಸಿದರು. ಕಬ್ಬಿನ ಉತ್ಪಾದನಾ ವೆಚ್ಚ ಏರಿಕೆ ಆಗಿರುವ ಕಾರಣ ಬೆಲೆ ಹೆಚ್ಚುವರಿಯಾಗಿ ನಿಗದಿ ಮಾಡಬೇಕು ಎಂದರು. ಆಗ ಸಕ್ಕರೆ ಸಚಿವರು ಮಾತನಾಡಿ, ಒಂದು ವಾರದ ಒಳಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಂಡಳಿ ಸಭೆ ನಡೆಸಿ ರೈತರಿಗೆ ಉತ್ತಮವಾದ ದರವನ್ನು ನೀಡೋಣ ಎಂದರು.

ರೈತರಿಗೆ ಆಗುತ್ತಿರುವ ಮೋಸದ ಬಗ್ಗೆ ಕ್ರಮ
ನಂತರ ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್, ತಾವು ಪದೇ ಪದೇ ಸಭೆ ನಡೆಸಿ ದರ ನಿಗದಿ ಮುಂದೂಡುವುದು ಸರಿಯಲ್ಲ. ನಾಳೆ ರಾಜ್ಯದ ಇತರೆ ರೈತ ಸಂಘಟನೆಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಸಂಘಟಿತ ಪ್ರಬಲ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ಆಗ ಸಚಿವರು ಮತ್ತೆ ಮಾತನಾಡಿ, ಮುಖ್ಯಮಂತ್ರಿಯವರು ಉತ್ತಮ ದರ ನಿಗದಿಗೆ ಒಪ್ಪಿದ್ದಾರೆ. ಒಂದು ವಾರದೊಳಗೆ ತೀರ್ಮಾನ ಕೈಗೊಳ್ಳಲು ಅವಕಾಶ ಕೊಡಿ. ಕಟಾವು ಸಾಗಾಣಿಕೆ ವೆಚ್ಚ, ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿ, ಸಕ್ಕರೆ ಇಳುವರಿ, ತೊಕದಲ್ಲಿ ಮೋಸವನ್ನು ತಪ್ಪಿಸುವ ಬಗ್ಗೆ ಅಯಾ ಜಿಲ್ಲಾಧಿಕಾರಿಗಳ ಸಹಯೋಗದೊಂದಿಗೆ ಕಬ್ಬು ಅಭಿವೃದ್ಧಿ ಆಯುಕ್ತರು ಸಭೆ ನಡೆಸುತ್ತಾರೆ. ಈ ಮೂಲಕ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲಕೇರಿ ಹಾಗೂ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.












Click it and Unblock the Notifications