ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಇಬ್ಬರು ರೈತರ ಆತ್ಮಹತ್ಯೆ
ಮೈಸೂರು, ಅಕ್ಟೋಬರ್ 31 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದೆ. ಒಂದೇ ದಿನ ಇಬ್ಬರು ರೈತರು ಸಾಲಬಾಧೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತಪಟ್ಟ ರೈತರನ್ನು ಕೆ.ಆರ್.ನಗರ ತಾಲೂಕಿನ ಮುಂಜನಹಳ್ಳಿ ಗ್ರಾಮದ ಗೋವಿಂದ ನಾಯಕ (50) ಹಾಗೂ ಗುಳುವಿನ ಅತ್ತಿಗುಪ್ಪೆ ಗ್ರಾಮದ ಕೃಷ್ಣೇಗೌಡ (60) ಎಂದು ಗುರುತಿಸಲಾಗಿದೆ. [ರಾಹುಲ್ ಸಮ್ಮುಖದಲ್ಲಿ ರೈತರಿಗೆ ಪ್ಯಾಕೇಜ್ ಘೋಷಣೆ]

ಲಕ್ಷ-ಲಕ್ಷ ಸಾಲ ಮಾಡಿದ್ದರು : ರೈತ ಗೋವಿಂದನಾಯಕ ತನ್ನ 3 ಎಕರೆ ಜಮೀನಿನಲ್ಲಿ ಭತ್ತ, ರಾಗಿ ಬೆಳೆದಿದ್ದರು. ಮಳೆ ಕೈಕೊಟ್ಟು ನಾಲೆಯ ನೀರು ಸರಿಯಾಗಿ ದೊರೆಯದ ಕಾರಣ ಬೆಳೆ ಒಣಗಿ ಹೋಗಿತ್ತು. ಕಾವೇರಿ ಗ್ರಾಮೀಣ ಬ್ಯಾಂಕ್‌ನಲ್ಲಿ 1 ಲಕ್ಷ ಮತ್ತು 2 ಲಕ್ಷ ರೂಪಾಯಿ ಕೈಸಾಲ ಮಾಡಿ ಬೆಳೆ ಬೆಳೆದಿದ್ದರು. [ಹಾವೇರಿ ರೈತ ಸಮಾವೇಶದಲ್ಲಿ ರಾಹುಲ್ ಹೇಳಿದ್ದೇನು?]
ಬೆಳೆ ಒಣಗಿದ ಕಾರಣ ಸಾಲ ತೀರಿಸುವುದು ಹೇಗೆ? ಎಂಬ ಬಗ್ಗೆ ದಾರಿ ಕಾಣದ ರೈತ ಜಮೀನಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿಬಂದು, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಬ್ಬು ಬೆಳೆದಿದ್ದರು : ಮತ್ತೊಂದು ಪ್ರಕರಣದಲ್ಲಿ ರೈತ ಕೃಷ್ಣೇಗೌಡ ಅವರು ಹೇಮಾವತಿ ನಾಲೆಯ ವ್ಯಾಪ್ತಿಯಲ್ಲಿ 4 ಎಕರೆ ಜಮೀನು ಹೊಂದಿದ್ದು ಕಬ್ಬು ಬೆಳೆದಿದ್ದರು. ಕಬ್ಬಿಗಾಗಿ ಸಹಕಾರ ಸಂಘದಲ್ಲಿ 50 ಸಾವಿರ ಮತ್ತು 3 ಲಕ್ಷ ಕೈಸಾಲ ಮಾಡಿದ್ದರು.
ಒಂದಡೆ ಕಬ್ಬಿಗೆ ನೀರಿಲ್ಲವಾದರೆ ಕಟಾವಿಗೆ ಬಂದ ಕಬ್ಬಿಗೆ ಕಾರ್ಖಾನೆಯವರು ಪರ್ಮಿಟ್ ನೀಡಿರಲಿಲ್ಲ. ಇದರ ನಡುವೆಯೇ ಕೈ ಸಾಲ ನೀಡಿದವರು ಹಣ ವಾಪಸ್ ಮಾಡುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಅವರು ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಗ್ರಾಮಸ್ಥರು ಅವರನ್ನು ರಕ್ಷಿಸಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.












Click it and Unblock the Notifications